ಯಮನ ಹಾಡು
“ನಾಳೆ ಬೆಳಿಗ್ಗೆಯ ಹೊತ್ತಿಗೆ ಲೈಫ್ ಸಪೋರ್ಟನ್ನು ತೆಗೆದುಬಿಡುತ್ತಾರಂತೆ; ಮಧ್ಯಾಹ್ನ ನಾಲ್ಕು ಗಂಟೆಗೆ ದಹನ ಸಂಸ್ಕಾರ. ಕೊನೆಯ ಬಾರಿ ನೋಡಲು ಬರುವಂತಿದ್ದರೆ ಮೂರು-ಮೂರೂವರೆಯ ಹೊತ್ತಿಗೆ ಕ್ರಿಮೇಷನ್ ಗ್ರೌಂಡಿಗೆ ಬರಬಹುದು…….”
ಇನ್ನೂ ಕೆಲವು ವಿವರಗಳಿದ್ದುವು — ಆ ವಾಟ್ಸಾಪ್ ಮೆಸೇಜಿನಲ್ಲಿ. ಓದಿದ ಮೇಲೆ ಮನಸ್ಸಿಗೆ ಬಹಳ ಸಂಕಟವಾಯಿತು.
ಕೆಲವು ದಿನಗಳ ಹಿಂದಷ್ಟೆ, “ತುಂಬ ಹೊತ್ತಿನವರೆಗೆ ನೀರಿನಲ್ಲಿ ಮುಳುಗಿಹೋಗಿದ್ದ ಪರಿಸ್ಥಿತಿಯಲ್ಲಿ ದೊರೆತ ನಂತರ, ಆತನನ್ನು ಆಸ್ಪತ್ರೆಗೆ ಸೇರಿಸಿದ್ದರೆಂದೂ, ಆತ ಬದುಕಿ ಉಳಿಯುವ ಸಂಭವ ತೀರ ಕಡಿಮೆಯೇ” ಎಂದು ತಿಳಿದದ್ದು ಕೂಡ ವಾಟ್ಸಾಪ್ ಗ್ರೂಪೊಂದರಲ್ಲಿ ಬಂದಿದ್ದ ಒಂದು ಮೆಸೇಜಿನಿಂದ.
ನನಗೆ ಆತನ ಪರಿಚಯವಿರಲಿಲ್ಲ. ಒಂದೇ ಕಡೆ ಕೆಲಸ ಮಾಡಿದವರಾದ್ದರಿಂದ ಆಗೊಮ್ಮೆ ಈಗೊಮ್ಮೆ ನೋಡಿದ್ದೆನಷ್ಟೆ. ಒಂದೆರಡು ಸಾರಿ -ಬೇರೆ ನಿಮಿತ್ತವಾಗಿ- ಮಾತಾಡಿದ್ದುದೂ ಉಂಟು. ಆದರೆ ನನಗೆ ಆತನ ಹೆಸರು, ಪರಿಚಯ ಈ ರೀತಿ ತಿಳಿಯಬೇಕಾಗುತ್ತದೆ ಎಂದು ಎಂದೂ ಎಣಿಸಿರಲಿಲ್ಲ.
ಇದೆಲ್ಲ ನಡೆದು ಒಂದು ವಾರವೇ ಆಯಿತು. ಆದರೂ ಈ ಘಟನೆ ಅದೇಕೊ ಬಹಳ ಕಾಡುತ್ತಿದೆ.
ಹುಟ್ಟಿದ ನಾಡಿಗೆ ದೂರಾಗಿ, ದೇಶವಲ್ಲದ ದೇಶದಲ್ಲಿ ಬದುಕು ಕಾಣುವ ಬಯಕೆ ಹೊತ್ತು ಬಂದವರಿಗೆ, ಸಾವೆಂಬುದು ಈ ಬಗೆಯಲ್ಲಿ ಬಂದೊದಗಿದರೆ!
ಅವರ ಮನೆಯವರಿಗಾದ ಆಘಾತ, ದುಃಖದ ತೀವ್ರತೆಯನ್ನು ಊಹಿಸಿಕೊಳ್ಳುವ ಪ್ರಯತ್ನವೂ ಅತಿ ಕಷ್ಟವೆನಿಸುತ್ತದೆ, ನನಗೆ. ಐದು ವರ್ಷದ ಮಗನಂತೆ, ಆತನಿಗೆ!
ಪ್ರತಿಯೊಂದು ಜೀವಿಯೂ ಎದುರಿಸಲೇಬೇಕಾದ ಅಂತಿಮ ಸತ್ಯ, ಸಾವು! ಆಯಾ ಜೀವಿಗೆ ಅದು ಸಾಕ್ಷಾತ್ಕರಿಸುವ ರೀತಿ, ಸ್ವರೂಪಗಳು ಬೇರೆಬೇರೆಯಾಗಿರಬಹುದು, ಅಷ್ಟೆ; ಆದರೆ ಅದನ್ನು ಕಾಣುವುದಂತೂ ತಪ್ಪದು.
ಆಧುನಿಕ ಚಿಕಿತ್ಸೆ, ತಂತ್ರಜ್ಞಾನಗಳಿಂದ ಸಾವನ್ನು ಸ್ವಲ್ಪ ದಿನಗಳ ಮಟ್ಟಿಗೆ ವಂಚಿಸಲು ಬಹುದೇನೋ! ಆದರೆ ಅದನ್ನು ಗೆಲ್ಲಲಂತೂ ಸಾಧ್ಯವಿಲ್ಲ.
ಈಚೆಗೆ ‘ಜಾನಪದ ಕಥನ ಗೀತೆ’ಗಳ ಪುಸ್ತಕವೊಂದರಲ್ಲಿ, ಸಾವಿನ ಬಗ್ಗೆ ಇರುವ ಕೆಲವು ಪದಗಳು ಕಂಡುವು. ಇದೇನು ಕಾಕತಾಳೀಯವೊ ಏನೊ ನಾನರಿಯೆ. ಒಟ್ಟಿನಲ್ಲಿ ಆ ಗೀತೆಯಲ್ಲಿನ ಕೆಲವು ಪದ್ಯಗಳು, ಅವು ಕಟ್ಟಿಕೊಡುವ ಚಿತ್ರವು ನನ್ನ ಮನಸ್ಸನ್ನಾವರಿಸಿಬಿಟ್ಟಿವೆ.
ಈ ಕಥನ ಗೀತದಲ್ಲಿ ಅಪೂರ್ಣವಾದ ಅದೆಷ್ಟೊ ಬಿಡಿಬಿಡಿ ಚಿತ್ರಗಳು ತುಂಬಿವೆ. ಅದರಲ್ಲಿ ಬರುವ ವಿವರಗಳು ಒಂದೇ ಹರಿವಿನಲ್ಲಿ ಇಲ್ಲದಿದ್ದರೂ ಅವುಗಳಲ್ಲಿ ಧ್ವನಿಸುವ ಭಾವವು ಸುಲಭವಾಗಿ ನಮ್ಮ ಮನಸ್ಸನ್ನು ತಲುಪುತ್ತದೆ. ನನಗೆ ಈ ಕಥನಗೀತೆಯ ಆದ್ಯಂತವೂ ಅಷ್ಟೇನೂ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಆದರೂ, ‘ಜಾನಪದ ಗೀತೆಗಳು ಬಹುಮಟ್ಟಿಗೆ — ಬಿಡಿಬಿಡಿಯಾಗಿ ನೋಡಿದರೂ ಅನನ್ಯವಾದ ಅರ್ಥವನ್ನು ಬೋಧಿಸುತ್ತವೆ’ ಎಂಬ ಮಾತು ನಿಜ, ಅಲ್ಲವೆ?
ಆ ಹಿನ್ನೆಲೆಯಲ್ಲಿ, ಈ ಗೀತೆಯಲ್ಲಿನ ಕೆಲವು ಬಿಡಿ ಪದ್ಯಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ.
ಬಂದಾನು ಜವರಾಯ ನಿಂದಾನೂರ ಮುಂದೆ
ಗಂಧಾವನೊಲ್ಲ ಪುಣಗೊಲ್ಲ | ಜವರಾಯ
ಗಂಡುಕೊಡಲೀಯ ಹೆಗಲೇರಿ ||
ಗಂಡುಕೊಡಲೀಯ ಹೆಗಲೇರಿ | ಜವರಾಯ
ಫಲಬಿಡುವ ಮರವ ಕಡಿಸಾನೆ |
ಪದ್ಯದಲ್ಲಿಯ ರೂಪಕವು ಸುಲಭಗ್ರಾಹ್ಯವಾಗಿಯೆ ಇದೆ. ಅದಾಗ್ಯೂ, ನೋಡಲು ಬಹಳ ಸರಳವಾಗಿದ್ದರೂ ಈ ಪದದಲ್ಲಿಯ ಯಮರಾಯನ ಚಿತ್ರಣವು ಬಹಳ ಭೀಕರವಾಗಿದೆ:- ಊರ ಮುಂದೆ ಜವರಾಯನು ಬಂದು ನಿಂತಿದ್ದಾನೆ; ಅವನಿಗೆ ಶ್ರೀಗಂಧ, ಪುನುಗು ಮೊದಲಾದ ಸುಗಂಧದ್ರವ್ಯಗಳಿಂದ ಕೂಡಿದ ಯಾವ ಸ್ವಾಗತವೂ ಬೇಡ, ಸತ್ಕಾರವೂ ಬೇಡ. ಇಷ್ಟಕ್ಕೂ, ಸಾವು ತನ್ನ ಮನೆಯೆದುರು ಬಂದಾಗ ಅದನ್ನು ಸ್ವಾಗತಿಸಿ ಸತ್ಕರಿಸುವ ಗಟ್ಟಿತನ ಯಾರಿಗಿದ್ದೀತು. ಈ ಜವರಾಯನು ಗಂಡುಕೊಡಲಿಯೊಂದರ ಹೆಗಲೇರಿ ಬಂದುಬಿಟ್ಟಿದ್ದಾನೆ. ಅದು ಕಡಿಯುವುದಾದರೂ ಎಂತಹ ಮರಗಳನ್ನು? — ಫಲವತ್ತಾದ, ಹಣ್ಣುಗಳನ್ನು ಧರಿಸಿದ ಮರವನ್ನೇ ನೋಡಿ ಕಡಿಯುತ್ತಾನೆ, ಜವರಾಯ. ಸಾವೆಂಬ ಕೊಡಲಿಯು ಒಂದು ಮನೆಯ ಮೂಲವೃಕ್ಷವನ್ನು ಹೇಗೆ ನಿಷ್ಕರುಣೆಯಿಂದ ಕಡಿದುಹಾಕುತ್ತದೆ ಎಂಬುದಕ್ಕೆ ಇದಕ್ಕಿಂತ ಚೆಂದದ ವರ್ಣನೆ ಬೇಕೆ.
ಇನ್ನೊಂದು ಸನ್ನಿವೇಶದ ಚಿತ್ರಣ:
ಅಜ್ಜನು ಕಾಡಿಗೆ ಹೋದವನು ಇನ್ನೂ ತಿರುಗಿ ಮನೆಗೆ ಬಂದಿಲ್ಲ; ಬಹುಶಃ ಅವನು ಅಲ್ಲಿಯೆ ಸತ್ತುಹೋಗಿದ್ದಾನೆ. ಆದರೆ ಇತ್ತ, ಮನೆಯಲ್ಲಿ ಅವನ ಮೊಮ್ಮಕ್ಕಳು ತಮ್ಮ ತಾತನಿಗಾಗಿ ಕಾದಿವೆ. ಎಷ್ಟು ಹೊತ್ತಾದರೂ ತಾತ ಮನೆಗೆ ಬಾರದುದಕ್ಕೆ ಆ ಮೊಮ್ಮಕ್ಕಳಿಗೆ ಸಂಶಯ — ತಮ್ಮ ತಾತನನ್ನು ಆ ಕಾಡಿನಲ್ಲಿಯ ಗಿಡಮರಗಳು ಸೆರೆಹಿಡಿದಿಟ್ಟುಕೊಂಡಿವೆಯೊ ಏನೊ ಎಂದು.
ತಾತನಿಗೆ ಅಂಬರದ ಶೆಟ್ಟಿಗಳೂ, ದೊರೆಗಳೂ ಓಲೆಯನ್ನು ಕಳಿಸಿದ್ದಾರೆ — ಬೇಗನೆ ಅವರ ಬಳಿಗೆ ಇವನು (ತಾತನು) ಹೋಗಬೇಕೆಂದು. ಸರಿ, ತಾತನು ಆ ಕಡೆಗೆ ಹೊರಟರೆ ಈ ಮೊಮ್ಮಕ್ಕಳು ಬಿಡಬೇಕಲ್ಲ!
ಸೆರೆಯ ಹೋಗೋನ ಸೆರಗು ನಾವು ಹಿಡಿದೇವು
ಪಾಪ ಕಣಮ್ಮಿ ಬಿಡಿ ಸೆರಗ | ನಮ್ಮನಿಗೆ
ಆಕಾಶದಿಂದ ಅವರೋಲೆ ||
ಆಕಾಶದಿಂದ ಅವರೋಲೆ ಬಂದಾವೆ
ಆಸೆ ನಿನಗ್ಯಾಕೆ ಮರೆಯಮ್ಮ ||
….
ಅಂಬಾರದಿಂದ ಅವರೋಲೆ ಬಂದಾವೆ
ಹಂಬಾಲ ನಿನಗ್ಯಾಕೆ ಮರೆಯವ್ವ ||
ಇದೊಂದು ಸಂವಾದರೂಪದ ಪದ್ಯ. ತಾತನು ಆಕಾಶದ ಪಟ್ಟಣಕ್ಕೆ ಹೊರಟು ನಿಂತಿದ್ದಾನೆ, ಮೊಮ್ಮಕ್ಕಳಿಗೆ ಅವನನ್ನು ಕಳುಹಿಸುವುದು ಇಷ್ಟವಿಲ್ಲ. ಅದಕ್ಕೆ ಅವನ ಸೆರಗನ್ನು, ದಟ್ಟಿಯನ್ನು ಹಿಡಿದೆಳೆಯುತ್ತಿದ್ದಾರೆ — ಇಲ್ಲೇ ಇರು ಎಂದು. ಆದರೆ ತಾತನು ಅವರನ್ನು ಸಂತೈಸುವನು “ಹಾಗೆ ತಡೆಯುವುದು ಪಾಪ ಕಣಮ್ಮ, ಸೆರಗನ್ನು ಬಿಡಿ. ಆಕಾಶದಿಂದ ನನಗೆ ಕರೆಯೋಲೆ ಬಂದಿದೆ — ನನ್ನ ಮನೆಗೆ ಹೋಗುವುದಕ್ಕೆ. ಅಲ್ಲಿಗೆ ಹೋಗದೆ ವಿಧಿಯಿಲ್ಲ. ಇನ್ನು ನನ್ನ ಮೇಲಿನ ಆಸೆ ನಿಮಗೇಕೆ, ಬಿಡಿ ನನ್ನನ್ನು…”
ಮತ್ತೊಂದು ಕಡೆ, ಯಮರಾಜನು ಮಕ್ಕಳುಳ್ಳ ಹೆಂಗಸೊಬ್ಬಳನ್ನು ಕರೆದೊಯ್ಯಲು ಬಂದಿದ್ದಾನೆ:
ಆಚೆ ಕೇರ‍್ಯಾಗೆ ಅಜ್ಜವಳೆ ಗುಜ್ಜವಳೆ
ಕರಕೊಂಡು ಹೋಗೊ ಜವರಾಯ
ಗಂಡುಮಕ್ಳುಳ್ಳೋಳು ಬರಲರಿಯೆ ||
ಅಜ್ಜೀರು ಗುಜ್ಜೀರು ಎಂದಿದ್ರು ನಮ್ಮೋರು
ಗಂಡುಮಕ್ಳುಳ್ಳೋಳೆ ನಡೆ ಮುಂದೆ ||
ತೆಂಕಾಲ ಕೇರೀಲಿ ಮುಂಡೇರು ರಂಡೇರವರೆ
ಕರಕೊಂಡು ಹೋಗೊ ಜವರಾಯ
ಹೆಣ್ಣು ಮಕ್ಕಳುಳ್ಳೋಳು ಬರಲರಿಯೆ ||
ಮುಂಡೇರು ರಂಡೇರು ಎಂದಿದ್ರು ನಮ್ಮೋರು
ಹೆಣ್ಣುಮಕ್ಕಳುಳ್ಳೋಳೆ ನಡೆ ಮುಂದೆ ||
ಯಮರಾಜನು ಅದೆಂತಹ ನಿಷ್ಕರುಣಿ ಎಂದು ಮತ್ತೆ ಹೇಳುವ ಅಗತ್ಯವಿಲ್ಲ. ಈ ಪದ್ಯವೂ ಸಂವಾದರೂಪದಲ್ಲೆ ಇದೆ. ಸಾಯಬೇಕಾದ ಹೆಣ್ಣು ಯಮನೊಡನೆ ಚೌಕಾಸಿ ಮಾಡುತ್ತಾಳೆ — ಆಚೆ ಕೇರಿಯಲ್ಲಿ ವಯಸ್ಸಾದ ಅಜ್ಜಿಗುಜ್ಜಿಯರಿದ್ದಾರೆ; ಅವರನ್ನಾದರೂ ಕರೆದೊಯ್ಯಿ. ಗಂಡುಮಕ್ಕಳಿರುವ (ಬಹುಶಃ ಇನ್ನೂ ಚಿಕ್ಕ ವಯಸ್ಸಿನ ಮಕ್ಕಳಿರಬಹುದು) ನನ್ನನ್ನು ಕರೆದೊಯ್ಯಬೇಕೆಂಬ ಛಲವೇಕೆ, ನಿನಗೆ?
ಯಮನು ಹೇಳುತ್ತಾನೆ — ಅಜ್ಜಿಯರು ಗುಜ್ಜಿಯರು ಎಂದಿದ್ದರೂ ನನ್ನ ಬಳಿಗೆ ಬರುವವರೇ! ಆದರೆ ಅವರು ಬರಬೇಕಾದ ದಿನ ಇದಲ್ಲ. ಹಾಗಾಗಿ, ‘ಗಂಡು ಮಕ್ಕಳುಳ್ಳವಳೆ, ನನ್ನೊಡನೆ ನಡೆ’
ಹೀಗೆಯೆ ಹೆಣ್ಣುಮಕ್ಕಳಿರುವ ಹೆಂಗಸೊಬ್ಬಳು ಮೊರೆಯಿಟ್ಟರೂ ಯಮನ ಉತ್ತರವು ಅದೇ.
ಇನ್ನೊಂದು ಕಡೆ:
ಹಾಲು ಮುಖದ ಮೇಲೆ ಅದೊ ಬೆವರಸಾಲೆ
ಹಾಲಿಗೋದವರು ಬರಲಿಲ್ಲಾ | ಕಂದಯ್ಯನ
ಹಾಲು ಮುಖವೆಲ್ಲ ಗೆದ್ದಲಿಡಿದೊ ||
ಮುದ್ದು ಮುಖದ ಮೇಲೆ ಎದ್ದಾವೊ ಬೆವರಸಾಲೆ
ಮದ್ದಿಗೋದೋರು ಬರಲಿಲ್ಲಾ | ಕಂದಯ್ಯನ
ಮುದ್ದು ಮುಖವೆಲ್ಲ ಗೆದ್ದಲಿಡಿದೊ ||
ಕರುಳು ಕಿವುಚುವಂತಹ ಸನ್ನಿವೇಶವೊಂದರ ಚಿತ್ರಣವಿದೆ, ಈ ಪದಗಳಲ್ಲಿ. ಇದರ ಹಿನ್ನೆಲೆಯನ್ನೊ, ಆ ತಾಯಿಯ ದುಃಖ ದೌರ್ಭಾಗ್ಯದ ಸ್ವರೂಪವನ್ನೊ ಊಹಿಸಿಕೊಳ್ಳಲೂ ಆಗದು.
ಮಗುವಿಗೇನೊ ಅನಾರೋಗ್ಯವಾಗಿದ್ದಿರಬೇಕು. ಪಾಪ! ಆ ಮನೆಯ ಪರಿಸ್ಥಿತಿ ಹೇಗಿದೆಯೆಂದರೆ — ಆ ರೋಗಗ್ರಸ್ತ ಮಗುವಿಗೆ ಕೊಡಲು ಹಾಲು ಕೂಡ ಆ ಮನೆಯಲ್ಲಿ ಇದ್ದಂತಿಲ್ಲ. ಮದ್ದಿನ ಕತೆಯೂ ಅಷ್ಟೆ. ಬಹುಶಃ ಹಾಲನ್ನೂ ಮದ್ದನ್ನೂ ತರಲೆಂದು ಯಾರನ್ನೊ ಅಟ್ಟಿದ್ದಾಳೆ, ಆಕೆ; ತಾನು ತನ್ನ ಕಂದನ ಆರೈಕೆ ಮಾಡುವ ಪ್ರಯತ್ನದಲ್ಲಿದ್ದಾಳೆ. ಆಗೊಮ್ಮೆ ಈಗೊಮ್ಮೆ — ಹಾಲಿಗೆ, ಮದ್ದಿಗೆಂದು ಹೋದವರು ತಿರುಗಿಬಂದರೋ ಎಂದು ತವಕದಿಂದ ನಿರುಕಿಸುತ್ತಾಳೆ. ಆದರೆ, ಅವರಾರೂ ಇನ್ನೂ ಹಿಂತಿರುಗಿಲ್ಲ.
ಅಷ್ಟರಲ್ಲಿ ಮಗು ಸತ್ತೇಹೋಗಿರಬೇಕು, ಅಥವಾ ಅದರ ಸಾವು ಇನ್ನೇನು ಸನ್ನಿಹಿತವಾಗಿರಬೇಕು. ಅದನ್ನು ಕಂಡು ಅವಳು ವಿಲಪಿಸುವ ದಾರುಣ ಸನ್ನಿವೇಶದಲ್ಲಿಯ ಮಾತುಗಳಿವು: ಅದೋ, ಆ ಹಾಲು ಮುಖದ ಮೇಲೆ ಬೆವರಸಾಲು ಮೂಡುತ್ತಿವೆ (ಸಾಯುವ ಕ್ಷಣ ಹತ್ತಿರಾಯಿತು ಎಂಬ ಸಂಕೇತ), ಆದರೂ ಹಾಲಿಗೆಂದು ಹೋದವರು ಹಿಂತಿರುಗಿ ಬರಲಿಲ್ಲ. ಇಲ್ಲಿ ನೋಡಿದರೆ, ಈ ಮಗುವಿನ ಹಾಲುಮುಖಕ್ಕೆ ಗೆದ್ದಲು ಹಿಡಿಯಲು ಶುರುವಾಗಿದೆ.. ಮದ್ದಿಗೆಂದು ಹೋದವರಿನ್ನೂ ಹಿಂದಿರುಗಿ ಬರಲಿಲ್ಲ, ಮಗುವಿನ ಮುದ್ದುಮುಖಕ್ಕೆ ಗೆದ್ದಲು ಹಿಡಿದಿದೆ.!
ಇಲ್ಲೊಂದು ಕಡೆ, ತಾಯಿಯು ಸತ್ತುಹೋಗಿದ್ದಾಳೆ. ಅವಳ ಮಗಳು ಬಹುಶಃ ಆಗಷ್ಟೆ ಸುದ್ದಿ ತಿಳಿದು ತನ್ನ ತಾಯಿಯ ಮನೆಗೆ — ತಾಯಿಯ ಸಮಾಧಿಯಿರುವೆಡೆಗೆ ಹೊರಟುಬಂದಿದ್ದಾಳೆ:
ಬಿಟ್ಟಿರಲಾರೆ ಬಟ್ಟನ್ನ ಮುಖದೋಳ
ಬಟ್ಟೂಡಿ ನನ್ನ ನೆನೆಯೋಳ |
ಬಟ್ಟೂಡಿ ನನ್ನ ನೆನೆಯೊ | ತಾಯಮ್ಮನ
ಬಿಟ್ಟೊಂದರೆಘಳಿಗೆ ಇರಲಾರೆ ||
ಅಗಲಿರಲಾರೆ ಅಗಲಂದೆ ಮುಖದೋಳ
ಹಗಲೊಂದರೆಘಳಿಗೆ ನನ್ನ ನೆನೆಯೋಳ |
ಹಗಲೊಂದರೆಘಳಿಗೆ ನನ್ನ ನೆನೆಯೊ ತಾಯಮ್ಮನ
ಅಗಲೊಂದರೆಘಳಿಗೆ ಇರಲಾರೆ ||
ಆ ಹೆಣ್ಣುಮಗಳು ತನ್ನ ತವರು ಸೇರುವ ವೇಳೆಗೆ ಅವಳ ತಾಯಿಯನ್ನು ಮಣ್ಣುಮಾಡಿಯಾಗಿದ್ದಿರಬೇಕು. ಅವಳು ಅಲ್ಲಿಗೇ ಹೋಗಿ ಅಳುತ್ತಾಳೆ — ಒಮ್ಮೆಯಾದರೂ ತನ್ನ ತಾಯಿಯ ಮುಖವನ್ನು ನೋಡಬೇಕೆಂದು. ಸಮಾಧಿಯ ಬಳಿ ಬಿದ್ದು ತನಗೊಮ್ಮೆ ಮುಖ ತೋರಿಸೆಂದು ತಾಯಿಯನ್ನು ಕೇಳುತ್ತಾಳೆ, ಅವಳು:
ಆಚೆ ಹಳ್ಳಿ ಬಿಟ್ಟೆ ಈಚೆ ಕಣಿವೆ ಬಿಟ್ಟೆ
ನಮ್ಮಮ್ಮ ನಮಗೆ ಮುಖ ತೋರೆ ||
ಮುಖವೆಂಗೆ ತೋರಲೆ ಮುಸುಗ್ಹೇಗೆ ತೆಗಿಯಲಮ್ಮ
ಆಳುದ್ದ ಮಣ್ಣು ಎದೆಯ ಮೇಲೆ | ಎಳೆಕೊಂಡು
ನನ್ನ ಆಸೆ ನಿನಗ್ಯಾಕೆ ಮರೆಯಮ್ಮ ||
ಅದಕ್ಕೆ (ಸಮಾಧಿಯೊಳಗಿನ) ತಾಯಿಯ ಉತ್ತರ: ಮುಖವನ್ನು ಹೇಗೆ ತೋರಿಸಲಿ, ಮಗಳೆ? ಮುಸುಗನ್ನು ಹೇಗೆ ತೆಗೆಯಲಿ; ನನ್ನ ಎದೆಯ ಮೇಲೆ ಈಗಾಗಲೆ ಆಳುದ್ದ ಮಣ್ಣನ್ನು ಸೂಡಿಯಾಗಿದೆ; ನನ್ನ ಮುಖವನ್ನು ನಿನಗೆ ಹೇಗೆ ತೋರಿಸಲಮ್ಮ, ಹೇಳು. ಇನ್ನು ನನ್ನ ಮೇಲಿನ ಆಸೆ ನಿನಗೇಕೆ ಮಗಳೆ, ಮರೆತುಬಿಡು.
ಇದು ಕಾಲ್ಪನಿಕ ಸಂವಾದವೊಂದರ ಪದ್ಯವಾದರೂ ಅದು ನಮ್ಮ ಮನಸ್ಸಿನ ಮೇಲೆ ಬೀರುವ ಪ್ರಭಾವ ಬಹಳ ಗಾಢವಾಗಿದೆ.