ಮೌಸಲ ಪರ್ವ: ಕೃಷ್ಣನ ಅವಸಾನ — ೨
ಕೃಷ್ಣನು ಬಲರಾಮನಿದ್ದಲ್ಲಿಗೆ ಬಂದು, ತಾನು ಎಲ್ಲರನ್ನೂ ದ್ವಾರಕೆಗೆ ತಲುಪಿಸಿ, ತಂದೆ ವಸುದೇವನ ಅನುಜ್ಞೆ ಪಡೆದು ಅಲ್ಲಿ -ತಪಸ್ಸಿಗಾಗಿ- ಬಂದುದಾಗಿ ತಿಳಿಸಿದ. ಆದರೆ, ಬಲರಾಮನಿಂದ ಯಾವ ಉತ್ತರವೂ ಇಲ್ಲ!!
ಅಷ್ಟರಲ್ಲಿ, ಕೃಷ್ಣನು ನೋಡನೋಡುತ್ತಿದ್ದಂತೆ, ಬಲರಾಮನ ಮುಖದಿಂದ ಸಾವಿರ ಹೆಡೆಗಳ ಮಹಾಸರ್ಪವೊಂದು ಹೊರಬಂದು, ಸಮುದ್ರದ ಕಡೆಗೆ ಹರಿಯುತ್ತ ಸಾಗಿತು. ಅದು ಸಾಗರವನ್ನು ಪ್ರವೇಶಿಸುತ್ತಿದ್ದಂತೆಯೆ ವರುಣದೇವನು ಬಂದು ಆ ಸರ್ಪವನ್ನು ಸ್ವಾಗತಿಸಿ ಪೂಜಿಸಿದ. ವರುಣನೊಟ್ಟಿಗೆ ಕಾರ್ಕೋಟಕ ಮುಂತಾದ ಸರ್ಪಗಳೂ, ಗಂಗಾದಿ ನದಿಗಳೂ ಬಂದು ಆ ಸಾವಿರ ಹೆಡೆಯ ಸರ್ಪವನ್ನು ಪೂಜಿಸಿದರು. ಕೃಷ್ಣನು ತನ್ನ ದಿವ್ಯದೃಷ್ಟಿಯಿಂದ ಇದನ್ನೆಲ್ಲ ನೋಡುತ್ತಿರುವ ಹಾಗೆ ಆದಿಶೇಷನು ಬಂದು ಆ ಸರ್ಪವನ್ನು ತನ್ನಲ್ಲಿ ಲೀನಗೊಳಿಸಿಕೊಂಡು ಅಂತರ್ಧಾನನಾದನು. ಹೀಗೆ, ಬಲರಾಮನು ಯೋಗಸ್ಥಿತನಾಗಿ ತನ್ನ ಅವತಾರವನ್ನು ಮುಗಿಸಿದನು.
ಆನಂತರ, ಕೃಷ್ಣನು ಏಕಾಕಿಯಾಗಿ ಅಲ್ಲಿ ಇಲ್ಲಿ ತಿರುಗಾಡಿ, ಕೊನೆಗೊಮ್ಮೆ — ತಾನು ಯಾವಯಾವ ಮಹತ್ಕಾರ್ಯಗಳನ್ನು ಪೂರೈಸಲೆಂದು ಅವತಾರ ತಾಳಿದನೊ ಅದೆಲ್ಲವೂ ಈಗ ಮುಗಿದಿದೆ ಎಂದು ಬಗೆದು, ಇನ್ನು ತನ್ನ ಅವತಾರವನ್ನು ಉಪಶಮನಗೊಳಿಸಲು ಬಯಸಿದನು. ಆಗಲೆ ಅವನಿಗೆ ಮುನಿಗಳ ಶಾಪವಾಕ್ಯವೂ, ದೂರ್ವಾಸರು ಒಮ್ಮೆ ತನಗೆ “ನಿನ್ನ ಅಂಗಾಲಿನ ಕಡೆಯಿಂದಲೇ ಸಾವು ನಿನ್ನನ್ನು ಸಮೀಪಿಸುತ್ತದೆ” ಎಂದು ತಿಳಿಸಿದ್ದುದೂ ನೆನಪಾಯಿತು. ಹಾಗಾಗಿ, ಆ ಮಾತುಗಳನ್ನು ಸಾರ್ಥಕಗೊಳಿಸಲು ನಿಶ್ಚಯಿಸಿ, ಕೃಷ್ಣನು ಅಲ್ಲೆ ಒಂದು ಮರದ ಬುಡದಲ್ಲಿ ಮಲಗಿಕೊಂಡನು.
ಆ ವೇಳೆಗೆ ಜರೆಯು ಅದೇ ಕಾಡಿನಲ್ಲಿ ತಿರುಗಾಡುತ್ತಿದ್ದಳು. ಕೃಷ್ಣನ ಅವಸಾನ ಕಾಲವು ಸಮೀಪಿಸಿದುದನ್ನು ಅರಿತ ಅವಳು, ಅಲ್ಲೆ ಬಳಿಯಲ್ಲಿದ್ದ ಬೇಡನೊಬ್ಬನ ಕಣ್ಣಿಗೆ — ಕೃಷ್ಣನ ಪಾದವು ಒಂದು ಮೃಗದಂತೆ ಕಾಣುವ ಹಾಗೆ ಭ್ರಮೆಯನ್ನುಂಟು ಮಾಡಿದಳು. ಪಾಪ, ಆ ಬೇಡನು — ಮೃಗವನ್ನೇ ಕಂಡಂತೆ ಭ್ರಮಿಸಿ, ಆ ದಿಕ್ಕಿಗೊಂದು ಬಾಣವನ್ನೆಚ್ಚನು. ಆಮೇಲೆ, ಆ ಬಾಣ ಬಿದ್ದ ಕಡೆಗೆ ನಡೆದು ಬಂದನು.
ಬೇಡನು ಇತ್ತ ಬಂದು ನೋಡುತ್ತಾನೆ; ಆ ಬಾಣವು ಕೃಷ್ಣನ ಅಂಗಾಲನ್ನು ಆ ಕಡೆಯಿಂದ ಹಾದು, ಈ ಕಡೆಯಿಂದ ಹೊರಬಂದಿದೆ! ಬೇಡನು ತನ್ನಿಂದಾದ ಪ್ರಮಾದವನ್ನರಿತು, ಕೃಷ್ಣನ ಕಾಲ ಬಳಿ ಬಿದ್ದು ರೋದಿಸತೊಡಗಿದನು. ಆಗ ಕೃಷ್ಣನೇ ಅವನನ್ನು ಸಮಾಧಾನಪಡಿಸಿ, ವಿಧಿಲಿಖಿತವನ್ನು ತಪ್ಪಿಸಲಾಗದೆಂದು ಓಲೈಸಿ, ತನ್ನ ಜೀವವನ್ನು ತ್ಯಜಿಸಿ ಹೊರಟನು.
ಊರ್ಧ್ವಮುಖವಾಗಿ ಹೊರಟ ಕೃಷ್ಣನನ್ನು ಕಾಣಲು ಸಕಲ ದೇವತೆಗಳೂ ಬಂದು ನೆರೆದರು. ಇಂದ್ರನು ಕೃಷ್ಣನ ಅವತಾರದ ಕಾರಣವನ್ನೂ, ಅವನು ಕಂಸಾದಿಗಳ ನಿರ್ಮೂಲನೆ ಮಾಡಿದುದನ್ನೂ ಮತ್ತೆಮತ್ತೆ ಹೊಗಳುತ್ತ ಸ್ತುತಿಸಿದನು. ಬ್ರಹ್ಮನು ವೇದವಿದಿತ ಸ್ವರಸ್ಥಿತಿಗಳಿಗನುಸಾರವಾಗಿ ನಾರಾಯಣನನ್ನು ಸ್ತುತಿಸಿದನು. ಆಗ ಕೃಷ್ಣನು ಪ್ರಸನ್ನನಾಗಿ ಅವರನ್ನೆಲ್ಲ ಆಶೀರ್ವಾದವಚನಗಳಿಂದ ಮಾತನಾಡಿಸಿ, ತನ್ನ ಸ್ವಸ್ಥಾನಕ್ಕೆ ಹೋದನು. ದೇವತೆಗಳೂ ತಮ್ಮತಮ್ಮ ಲೋಕಗಳಿಗೆ ಮರಳಿದರು.
ಇತ್ತ, ದಾರುಕನು ಹಸ್ತಿನಾವತಿಗೆ ಬಂದು ಪಾಂಡವರನ್ನು ಕಂಡ. ಅವರಿಗೆ ಮತ್ತೊಮ್ಮೆ ಮುನಿಗಳ ಶಾಪವನ್ನು ನೆನಪಿಸಿ, ಆನಂತರ ನಡೆದ ಅನಾಹುತವನ್ನೆಲ್ಲ ವಿವರವಾಗಿ ಒಪ್ಪಿಸಿದ. ಜೊತೆಗೆ, ಬಲರಾಮ ಕೃಷ್ಣರು ತಪಸ್ಸಿಗೆ ನಿಂತುದನ್ನೂ, ಕೃಷ್ಣನು ತನ್ನನ್ನು ಹಸ್ತಿನಾವತಿಗೆ ಕಳುಹಿಸಿದ ಕಾರಣವನ್ನೂ ತಿಳಿಸಿದ. ಈ ಎಲ್ಲವನ್ನೂ ಕೇಳಿ, ಯಾದವರಿಗೆ ಒದಗಿದ ದುಃಸ್ಥಿತಿಯನ್ನು ಕಂಡು ಪಾಂಡವರೆಲ್ಲ ಕುಗ್ಗಿಹೋದರು. ಅರ್ಜುನನಂತೂ ‘ಇದನ್ನೆಲ್ಲ ಕೇಳಿಯೂ ನಾವಿನ್ನೂ ಇದ್ದೇವಲ್ಲ!’ ಎಂದು ಪರಿತಪಿಸಿದ.
ದಾರಕನು ಅರ್ಜುನನಿಗೆ ಕೃಷ್ಣನು ಅವನನ್ನು ದ್ವಾರಕೆಗೆ ಬರಹೇಳಿರುವುದನ್ನು ತಿಳಿಸಿದ. ಅರ್ಜುನನು ತಡಮಾಡದೆ, ಧರ್ಮರಾಯನ ಅನುಜ್ಞೆಯನ್ನು ಪಡೆದು ದ್ವಾರಕೆಗೆ ಹೊರಟುಬಂದ.
ಅರ್ಜುನನು ಬಂದಾಗ — ದ್ವಾರಕೆಯು ಪತಿಯನ್ನು ಕಳೆದುಕೊಂಡ ಹೆಂಡತಿಯಂತೆ, ಚಂದ್ರನಿಲ್ಲದ ರಾತ್ರಿಯಂತೆ ನಿರ್ವಿಣ್ಣವಾಗಿತ್ತು. “ಈ ದ್ವಾರಕೆಯಲ್ಲೀಗ ಕೃಷ್ಣನಿಲ್ಲ!!” ಎಂಬ ನೆನಪೇ ಅರ್ಜುನನನ್ನು ಪದೇಪದೇ ಹಿಂಸಿಸುತ್ತಿದೆ.
ಸರಿ, ರಥವು ದ್ವಾರಕೆಗೆ ಬಂದಿತು. ಇನ್ನೇನು ರಥದಿಂದಿಳಿಯಬೇಕು, ಆಗ ಅರ್ಜುನನಿಗೆ ಕೃಷ್ಣನ ಹೆಂಡತಿಯರೂ, ಉಳಿದ ಯಾದವಸ್ತ್ರೀಯರ ದುಃಖಭರಿತ ಮುಖಗಳು ಕಂಡುವು. ಅವನಿಗೆ ಆ ಶೋಕದಲ್ಲಿ ಯಾದವೀರರ ಮರಣಕ್ಕಿಂತ ಹೆಚ್ಚಾದ ಅನಾಹುತವಾವುದೋ ಕಾರಣವಿರಬಹುದೆಂಬ ಶಂಕೆ ಉದಿಸಿತು (ಕೃಷ್ಣನು ಸತ್ತುಹೋದನೆ? ಎಂದು). ಅದರಿಂದ ಅರ್ಜುನನ ಮನಸ್ಸಿನ ಬೇಗೆಯು ಮತ್ತಷ್ಟು ಹೆಚ್ಚಿ, ಅವನು ನೆಲಕ್ಕಿಳಿದು ನಿಲ್ಲಲಾಗದೆ ಅಲ್ಲೆ ಕುಸಿದುಬಿದ್ದ. ಅಷ್ಟರಲ್ಲಿ ಅಲ್ಲಿಗೆ ಬಂದ ರುಕ್ಮಿಣಿ ಸತ್ಯಭಾಮೆ ಮೊದಲಾದವರೂ ನೆಲದ ಮೇಲೆ ಬಿದ್ದು ರೋದಿಸಲು ತೊಡಗಿದರು. ಅರ್ಜುನನು ಹೇಗೊ ಸಾವರಿಸಿಕೊಂಡು ಎದ್ದು, ಅವರನ್ನೆಲ್ಲ ಸಮಾಧಾನಪಡಿಸಿ, ಆನಂತರ ವಸುದೇವನಿದ್ದಲ್ಲಿಗೆ ಬಂದನು.
ವಸುದೇವನು ತನ್ನ ಹಾಸಿಗೆಯ ಮೇಲೆ ಬಿದ್ದು ಅಳುತ್ತಿದ್ದವನು, ಅರ್ಜುನನೂ ದಾರಕನೂ ಬಂದುದನ್ನು ಕಂಡು, ಎದ್ದು ಕುಳಿತು ಅರ್ಜುನನ್ನು ತಬ್ಬಿ ಸ್ವಾಗತಿಸಿದನು. ಅರ್ಜುನನನ್ನು ತನ್ನ ಪಕ್ಕ ಕೂರಿಸಿಕೊಂಡು — ಮಡಿದ ಯಾದವ ವೀರರೊಬ್ಬೊಬ್ಬರ ಹೆಸರನ್ನೂ ನೆನೆದು, ಅತಿಯಾಗಿ ಶೋಕಿಸಿದನು.
“ನೋಡಿದೆಯಾ ಅರ್ಜುನ! ದೇವತೆಗಳಿಂದಲೂ ಪ್ರಶಂಸೆ ಪಡೆದಿದ್ದ ಯಾದವವೀರರು ಕ್ಷುಲ್ಲಕ ಜಗಳಕ್ಕೆ ಬಲಿಯಾಗಿ ಕುಪ್ಪೆಕುಪ್ಪೆಯ ಶವಗಳಾದರು. ಕೃಷ್ಣನು ಎಂತಹ ಅಸಾಧ್ಯವನ್ನಾದರೂ ಸತ್ಯವಾಗಿಸಬಲ್ಲ ಶಕ್ತಿಯಿರುವವನು. ಅವನೂ ಸಹ ಯಾದವರ ನಾಶವನ್ನು ತಡೆಯಲಾಗಲಿಲ್ಲವೆಂದರೆ!? ಇದು ಆಗಲೇಬೇಕಾದ್ದೆಂದು ಅವನೂ ಭಾವಿಸಿದನೊ ಏನೊ..”
“ಅಷ್ಟು ಜನ ಮಕ್ಕಳೂ ಮೊಮ್ಮಕ್ಕಳೂ ಬಾಂಧವರೂ ರಾಶಿರಾಶಿ ಹೆಣಗಳಾಗಿ ಬಿದ್ದರೆಂದು ಕೇಳಿದರೂ ನಾನೇನೂ ಆಗದೆ ಬದುಕಿ ಉಳಿದಿದ್ದೇನೆ. ನನಗಿಂತ ವೀರರಿನ್ನಾರಿದ್ದಾರು ಹೇಳು, ಅರ್ಜುನ?”
ಅರ್ಜುನನಿಗೆ ವಸುದೇವನ ದುಃಖದ ತೀವ್ರತೆ ಅರ್ಥವಾಗುತ್ತಿದೆ. ಆದರೆ, ಅದರ ನಡುವೆಯೂ — ವಸುದೇವನು ಕೃಷ್ಣನ ಉಪೇಕ್ಷೆಯ ಬಗ್ಗೆ ಹೇಳಿದನಷ್ಟೇ ಹೊರತು ಬೇರಾವ ಕೇಡನ್ನೂ (ಕೃಷ್ಣನ ಬಗ್ಗೆ) ಆಡದಿದ್ದುದನ್ನು ಗಮನಿಸಿ, “ಕೃಷ್ಣನಿನ್ನೂ ಜೀವಂತವಾಗಿಯೇ ಇದ್ದಾನೆ!” ಎಂದು ಅರಿತುಕೊಂಡನು. ಅದಕ್ಕೇ, “ಕೃಷ್ಣನು ಈಗ ಎಲ್ಲಿದ್ದಾನೆ?” ಎಂದು ಕೇಳುತ್ತ, ಎಲ್ಲವನ್ನೂ ತನಗೆ ವಿಶದವಾಗಿ ತಿಳಿಸುವಂತೆ ವಸುದೇವನನ್ನು ಕೇಳಿದನು.
ವಸುದೇವನು, “ಯಾದವರೆಲ್ಲ ಮುನಿಗಳ ಶಾಪಕ್ಕೆ ವಶವಾಗಿ, ಜೊಂಡುಹುಲ್ಲನ್ನೆ ಬಳಸಿ ಯುದ್ಧಮಾಡಿಕೊಂಡು ಸತ್ತರು. ಆನಂತರ, ಕೃಷ್ಣನು ಹೆಂಗಸರನ್ನೂ, ಆನೆ, ಕುದುರೆ ಮುಂತಾದವನ್ನೂ ಕರೆದುಕೊಂಡು ದ್ವಾರಕೆಗೆ ಬಂದು ನನ್ನನ್ನು ಕಂಡನು. ನಡೆದುದನ್ನು ಕೇಳಿ ದುಃಖಿಸುತ್ತಿದ್ದ ನನ್ನನ್ನು ಸಮಾಧಾನಪಡಿಸಿ, ‘ಅರ್ಜುನನಿಗೆ ಇಲ್ಲಿಗೆ ಬರಲು ಹೇಳಿದ್ದೇನೆ. ಅವನು ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಇಲ್ಲಿಗೆ ಬಂದಾನು. ಅವನಿಗೆ ನಮ್ಮೆಲ್ಲರ ಮೇಲೆ ಪ್ರೀತಿಯೂ, ನಿನ್ನ ಮೇಲೆ ಅಪಾರ ಭಕ್ತಿಯೂ ಇದೆ. ಅವನು ನೀನು ಏನು ಸೂಚಿಸಿದರೂ ಅದರಂತೆ ಮಾಡಲು ಸಮರ್ಥನು. ಅವನಲ್ಲಿ ಚರ್ಚಿಸಿ, ನಿನಗೆ ಹೇಗೆ ತೋಚುವುದೋ ಹಾಗೆ ಮಾಡು. ನನ್ನಲ್ಲೂ ಅರ್ಜುನನಲ್ಲೂ ಯಾವ ಭೇದವನ್ನೂ ಗಣಿಸದಿರು, ರಾಜನ್’ ಎಂದ.
ಜೊತೆಗೆ, ‘ಅರ್ಜುನನು ಉಳಿದಿರುವ ಹೆಂಗಸರನ್ನೂ, ಮಕ್ಕಳನ್ನೂ ವೃದ್ಧರನ್ನೂ ತಕ್ಕ ರೀತಿಯಲ್ಲಿ ಕಾಪಾಡುತ್ತಾನೆ. ಇದೊ, ಗಮನವಿಟ್ಟು ಕೇಳು; ಇನ್ನು ಕೆಲವು ದಿನಗಳಲ್ಲಿ ಈ ದ್ವಾರಕೆಯು ಸಮುದ್ರದಲ್ಲಿ ಮುಳುಗಿಹೋಗುತ್ತದೆ. ಅದಕ್ಕೂ ಮುಂಚೆಯೇ ನೀವೆಲ್ಲರೂ ಅರ್ಜುನನ ಮುಂದಾಳತ್ವದಲ್ಲಿ ಸುರಕ್ಷಿತ ಪ್ರದೇಶಕ್ಕೆ ತಲುಪಿರಿ.
ಯುದ್ಧಕ್ಕೆ ಮುಂಚೆಯೇ ಬಲರಾಮನು ತಪಸ್ಸಿಗೆಂದು ವನಕ್ಕೆ ತೆರಳಿದ. ನನಗೂ ಈಗ ಅದೇ ದಾರಿ ಸರಿಯೆನಿಸುತ್ತಿದೆ. ಹಾಗಾಗಿ ನನಗೆ ತಪ್ಪಸಿಗೆ ತೆರಳಲು ಅನುಜ್ಞೆ ಕೊಡು’ ಎಂದು ನನ್ನನ್ನು ಕೇಳಿ, ಕೃಷ್ಣನು ಹೊರಟುಹೋದ.”
“ಅಷ್ಟೇ ಅಲ್ಲ, ಹೋಗುವ ಮುಂಚೆ ‘ಕದನದಲ್ಲಿ ಮಡಿದ ಯಾದವವೀರರಿಗೆಲ್ಲ ಅರ್ಜುನನೇ ಶ್ರಾದ್ಧಕರ್ಮವನ್ನು ನೆರವೇರಿಸುತ್ತಾನೆ. ಅದಾದ ಕೆಲವು ದಿನಗಳಲ್ಲಿ ನಿನ್ನ ಶ್ರಾದ್ಧಕರ್ಮವನ್ನೂ ಅರ್ಜುನನೇ ಮಾಡಿಸುತ್ತಾನೆ’ ಎಂದು ನನಗೆ ಕೃಷ್ಣನು ಹೇಳಿದ, ಕುಮಾರ!” ಎನ್ನುತ್ತ ವಸುದೇವನು ಗದ್ಗದಿತನಾಗಿ, ಎಲ್ಲವನ್ನೂ ಅರ್ಜುನನಿಗೆ ತಿಳಿಸಿದ.
ನಂತರ ವಸುದೇವನು ಅರ್ಜುನನಿಗೆ, “ಅರ್ಜುನ! ನೀನು ಮಹಾಬಲಶಾಲಿ, ಸಮರ್ಥ. ನೀನೇ ಈ ಯಾದವಸ್ತ್ರೀಯರ, ಮಕ್ಕಳ ಹಾಗೂ ವೃದ್ಧರ ರಕ್ಷಣೆಯನ್ನೂ ಹಾಗೂ ಆನೆ, ಕುದುರೆ ಮೊದಲಾದ ವಸ್ತುಸಂಪದಗಳಷ್ಟನ್ನೂ ಪಾಲಿಸುವ ಭಾರವನ್ನು ವಹಿಸಿಕೊ; ಆ ರೀತಿ ಕೃಷ್ಣನು ನಿನಗೆ ವಹಿಸಿರುವ ಕರ್ತವ್ಯವನ್ನು ಪಾಲಿಸು, ಮಗೂ” ಎಂದ.
ಅದಕ್ಕೆ ಅರ್ಜುನನು “ಮಾವ! ಕೃಷ್ಣನಿಲ್ಲದ ದ್ವಾರಕೆಯಲ್ಲಿ ನಿಲ್ಲುವುದಂತೂ ಕಷ್ಟ. ಅದೂ ಅಲ್ಲದೆ, ದ್ವಾರಕೆಯು ಸಾಗರದಲ್ಲಿ ಮುಳುಗಿಹೋಗಲಿದೆ ಎಂದು ನೀವೇ ತಿಳಿಸಿದಿರಿ. ನಾನು ಇಲ್ಲಿಗೆ ಬರುವ ಮುನ್ನ ಯುಧಿಷ್ಠಿರನು, ಸಕಲ ಯಾದವಸ್ತ್ರೀಯರನ್ನೂ ಉಳಿದ ದ್ವಾರಕಾನಿವಾಸಿಗಳನ್ನೂ ಕರೆದುಕೊಂಡು ಇಂದ್ರಪ್ರಸ್ಥನಗರಕ್ಕೆ ಬರುವಂತೆ ಸೂಚಿಸಿದ್ದಾನೆ. ಆದಷ್ಟೂ ಬೇಗ ಇಲ್ಲಿಂದ ಹೊರಡೋಣ. ಕೃಷ್ಣನ ಮಾತನ್ನು ನಿಜಗೊಳಿಸೋಣ.”
ಅರ್ಜುನನು ಹಾಗೆಯೇ ದಾರುಕನನ್ನು ಕರೆದು, “ದಾರುಕ, ದ್ವಾರಕೆಯ ವಾಸಿಗಳೆಲ್ಲರನ್ನೂ ಒಂದು ಕಡೆ ಕೂಡುವಂತೆ ತಿಳಿಸು. ಇಲ್ಲಿಂದ ಹೊರಡಲು ಯಾವಯಾವ ವ್ಯವಸ್ಥೆ ಬೇಕೊ ಅದೆಲ್ಲವನ್ನೂ ಮಾಡಿ ಮುಗಿಸಿ, ನಾವು ಕೃಷ್ಣನನ್ನು ಹುಡುಕಲು ಹೊರಡೋಣ” ಎಂದ. ದಾರುಕನು ದ್ವಾರಕಾನಿವಾಸಿಗಳನ್ನು ಒಟ್ಟುಗೂಡಿಸಲೆಂದು ಹೊರಗೆ ಹೋದ.
ದ್ವಾರಕೆಯ ಮಂತ್ರಿಗಳೂ, ಅಧಿಕಾರಿಗಳೂ, ಕ್ಷತ್ರಿಯ ವೈಶ್ಯಾದಿ ಪುರನಿವಾಸಿಗಳೆಲ್ಲರೂ ಒಂದೆಡೆ ಸೇರಿದರು. ಅರ್ಜುನನು ಅವರನ್ನೆಲ್ಲ ಉದ್ದೇಶಿಸಿ ಮಾತನಾಡಲು ತೊಡಗಿದನು:
“ಈ ದಿನದಿಂದ ಏಳನೇ ದಿನದ ಹೊತ್ತಿಗೆ ದ್ವಾರಕೆಯು ಸಾಗರದಲ್ಲಿ ಮುಳುಗಿಹೋಗುತ್ತದೆ ಎಂಬುದಾಗಿ ದೈವವಾಕ್ಯವು ಆಕಾಶದಲ್ಲಿ ಹೇಳಿದುದನ್ನು ನಾನು ಕೇಳಿದೆ. ಎಲ್ಲರೂ ಕೇಳಿ, ಅದಕ್ಕಾಗಿಯೆ ಇಲ್ಲಿಗೆ ಬಂದಿದ್ದೇನೆ. ನಡೆದುಹೋದುದರ ಬಗ್ಗೆ ಏನನ್ನೂ ಮಾಡುವಂತಿಲ್ಲ; ಆದರೆ ಇನ್ನು ಮುಂದಿನದ್ದರ ಬಗ್ಗೆ ನಾವೀಗ ಚಿಂತಿಸಲೇಬೇಕಾಗಿದೆ
ನೀವೆಲ್ಲರೂ ಈಗಲೆ ಸಿದ್ಧತೆಯಲ್ಲಿ ತೊಡಗಿರಿ. ನಾವೆಲ್ಲ ಶೀಘ್ರದಲ್ಲೇ ಇಂದ್ರಪ್ರಸ್ಥನಗರಿಯ ಕಡೆಗೆ ಹೋಗೋಣ. ಅಲ್ಲಿ, ನಿಮ್ಮ ವಜ್ರನಿಗೆ (ಅನಿರುದ್ಧನ ಮಗ) ಪಟ್ಟ ಕಟ್ಟುತ್ತೇವೆ. ಅವನ ಆಳ್ವಿಕೆಯಲ್ಲಿ ನೀವು ದ್ವಾರಕೆಯಲ್ಲಿದ್ದಹಾಗೆಯೆ ಸುಖ ನೆಮ್ಮದಿಯಿಂದ ಜೀವಿಸುವಂತಾಗಲಿ. ನಿಮ್ಮ ಪಯಣಕ್ಕೆ ಬೇಕಾದ ವಸ್ತು ಸಾಮಗ್ರಿಗಳನ್ನೆಲ್ಲ ಹೊರಲು ಅನುವಾಗುವಂತೆ ಮೂಟೆ ಕಟ್ಟಿ ಸಿದ್ಧಪಡಿಸಿಕೊಳ್ಳಿ. ಯಾವಾಗಲೆಂದರೆ ಆಗ ಹೊರಡಲು ಸಿದ್ಧರಾಗಿರಿ. ಆದಷ್ಟೂ ಬೇಗ ಇಲ್ಲಿಂದ ಹೊರಡೋಣ.” ಎಂದು ಅಲ್ಲಿ ನೆರೆದಿದ್ದವರಿಗೆಲ್ಲ ತಿಳಿಸಿದ.
ಆನಂತರ, ಅರ್ಜುನನು ಅಧಿಕಾರಿಗಳನ್ನು ಕರೆಸಿ, ರಥ, ಕುದುರೆ ಆನೆಗಳನ್ನೆಲ್ಲ ಅಣಿಗೊಳಿಸುವಂತೆಯೂ, ವೃದ್ಧರು ಹಾಗೂ ಸ್ತ್ರೀಯರ ಪಯಣಕ್ಕೆ ಬೇಕಾದ ಪಲ್ಲಕ್ಕಿ ಹಾಗೂ ವಾಹನಗಳನ್ನೂ ಸಿದ್ಧಗೊಳಿಸಲು ಸೂಚಿಸಿದ.
ಇಷ್ಟೆಲ್ಲಾ ಆಗುವ ಹೊತ್ತಿಗೆ ಇನ್ನೇನು ಬೆಳಕಾಗುತ್ತ ಬಂದಿತ್ತು. ಅಷ್ಟರಲ್ಲಿ ಅಂತಃಪುರದಿಂದ ಗಟ್ಟಿಯಾದ ಆರ್ತನಾದಗಳು ಕೇಳಿಬಂದುವು. ಅರ್ಜುನನೂ ದಾರುಕನೂ ಕೂಡಲೆ ಅಲ್ಲಿಗೆ ಓಡಿಬಂದು ನೋಡುತ್ತಾರೆ — ವಸುದೇವ ಮಹಾರಾಜನು ತನ್ನ ದೇಹವನ್ನಗಲಿ ಎಷ್ಟೋ ಹೊತ್ತಾಗಿದೆ! ಅವನ ನಾಲ್ಕು ಜನ ಹೆಂಡತಿಯರೂ ವಸುದೇವನ ಕಳೇಬರದ ಮೇಲೆ ಬಿದ್ದು ಅಳುತ್ತಿದ್ದಾರೆ.!