ಭಾರತವೂ ಬಭ್ರುವಾಹನನೂ…

ನಮಗೆಲ್ಲ ಬಭ್ರುವಾಹನ ಎಂಬ ಹೆಸರು ಕೇಳಿದ ತಕ್ಷಣ ಡಾ. ರಾಜ್ ಕುಮಾರ್ ಅವರ ರೂಪವೇ ಕಣ್ಣೆದುರು ಮೂಡುತ್ತದೆ. ಅವರು ದ್ವಿಪಾತ್ರದಲ್ಲಿ ನಟಿಸಿರುವ ಬಭ್ರುವಾಹನ ಎಂಬ ಚಿತ್ರವು ಕನ್ನಡಿಗರ ಮನಸ್ಸಿನ ಮೇಲೆ ಮಾಡಿರುವ ಮೋಡಿ ಅಂಥದ್ದು. ಚಿತ್ರದಲ್ಲಿ ಅರ್ಜುನ-ಬಭ್ರುವಾಹನರ ಕಾಳಗದ ದೃಶ್ಯದಲ್ಲಿ ಬರುವ “ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ……..” ಎಂಬ ಪದ್ಯವೂ, ಅವರೀರ್ವರ ಯುದ್ಧದ ದೃಶ್ಯಗಳನ್ನಂತೂ ಎಂದಿಗೂ ಮರೆಯಲಾಗದು.

ನಾನಂತೂ, ಶಾಲೆಯ ದಿನಗಳಲ್ಲಿ ನನ್ನ ಸಹಪಾಠಿಗಳೆದುರು ಕೆಲವೊಮ್ಮೆ, ಆ ಪದ್ಯವನ್ನೂ ಅರ್ಜುನ ಬಭ್ರುವಾಹನರ ವಾಗ್ಯುದ್ಧವನ್ನೂ ಏಕಪಾತ್ರಾಭಿನಯ ಮಾಡಿತೋರಿಸುತ್ತಿದ್ದೆ.

ಬಭ್ರುವಾಹನನ ಕಥೆಯು ವ್ಯಾಸಭಾರತದಲ್ಲೂ, ಜೈಮಿನಿಭಾರತದಲ್ಲೂ ಸ್ವಲ್ಪ ವಿಭಿನ್ನವಾಗಿರುವಂತಿದೆ. ತೆಲುಗಿನ ತಿಕ್ಕನ ಸೋಮಯಾಜಿಯು ರಚಿಸಿರುವ ’ಆಂಧ್ರಮಹಾಭಾರತಮು’ ಹಾಗೂ ತಿಮ್ಮಣ್ಣ ಕವಿಯು ಕನ್ನಡದಲ್ಲಿ ರಚಿಸಿರುವ ’ಕೃಷ್ಣರಾಯ ಭಾರತ’ ಕೃತಿಗಳಲ್ಲಿ ಬರುವ ಬಭ್ರುವಾಹನನ ಕಥೆಯು, ಹೆಚ್ಚಿನ ಮಟ್ಟಿಗೆ ಮೂಲ ವ್ಯಾಸಭಾರತವನ್ನು ಅನುಸರಿಸಿ ರಚಿತವಾಗಿದೆ. ಕವಿ ಲಕ್ಷ್ಮೀಶನು ಕನ್ನಡದಲ್ಲಿ ರಚಿಸಿರುವ ’ಜೈಮಿನಿಭಾರತ’ವು — ತನ್ನ ಹೆಸರೇ ಸೂಚಿಸುವಂತೆ — ಮೂಲ ಜೈಮಿನಿ ಭಾರತವನ್ನು ಅನುಸರಿಸಿ ರಚಿತವಾಗಿದೆ.

ಆ ಕೃತಿಗಳಲ್ಲಿ ಬರುವ ಕತೆಯ ಹಂದರವನ್ನು ಒಂದರ ಪಕ್ಕ ಒಂದನ್ನಿಟ್ಟು ನೋಡುವ ಪ್ರಯತ್ನ, ಈ ಲೇಖನ.

ವ್ಯಾಸಭಾರತವನ್ನನುಸರಿಸಿದ ಕಥೆ: ಆಂಧ್ರಮಹಾಭಾರತಮು ಹಾಗೂ ಕೃಷ್ಣರಾಯಭಾರತದಿಂದ

ಅಶ್ವಮೇಧದ ಕುದುರೆಯು ನಾನಾ ದೇಶಗಳನ್ನು ಕ್ರಮಿಸಿ, ಮುಂದೆ ಮಣಿಪುರಕ್ಕೆ ಬರುತ್ತದೆ. ಅದರ ರಕ್ಷಣೆಗೆ ಬರುತ್ತಿದ್ದ ಅರ್ಜುನನೂ ಅವನ ಪಾಳೆಯದವರೂ ಮಣಿಪುರದ ಹೊರಪ್ರದೇಶದಲ್ಲಿ ಬಿಡಾರ ಹೂಡಿರುತ್ತಾರೆ.

ಇತ್ತ ಅಲ್ಲಿಯ ಅರಸನಾದ ಬಭ್ರುವಾಹನನು ತನ್ನ ತಂದೆ ಅರ್ಜುನನು ಮಣಿಪುರಕ್ಕೆ ಬಂದಿದ್ದಾನೆಂದು ತಿಳಿದು, ಆನಂದದಿಂದ ಅವನನ್ನು ಕಾಣಲೆಂದು -ತನ್ನ ಪರಿವಾರದೊಡನೆ- ಅರ್ಜುನನ ಬಳಿಗೆ ಹೋಗುತ್ತಾನೆ. ಬಭ್ರುವಾಹನನು ಬಂದು ನಮಿಸಿದರೂ ಅರ್ಜುನನು ತನ್ನ ಮಗನ ಬಗ್ಗೆ ಆದರ ತೋರದೆ, ’ಕ್ಷತ್ರಿಯಧರ್ಮವನ್ನು ಪಾಲಿಸಬೇಕಾದ ನೀನು ಯಾಗಾಶ್ವವನ್ನು ಕಟ್ಟಿಹಾಕಿ ನನ್ನೊಡನೆ ಯುದ್ಧಮಾಡುವ ಬದಲಿಗೆ ಶಾಂತಿಯಿಂದ ಬಂದು ನಿಂತಿದ್ದೀಯೆ, ಗುಣಹೀನ…’ ಎಂದು ಮುಂತಾಗಿ ಬೈದು ಮೂದಲಿಸುತ್ತಾನೆ.

ಅರ್ಜುನನ ಅನಾದರಣೆ ಹಾಗೂ ದೂಷಣೆಯಿಂದ ಪೆಚ್ಚಾದ ಬಭ್ರುವಾಹನನು ತನ್ನ ಅರಮನೆಯ ಕಡೆಗೆ ಹೊರಟಿರುತ್ತಾನೆ. ಅಷ್ಟರಲ್ಲಿ, ಉಲೂಪಿಯು ತನ್ನ ದಿವ್ಯದೃಷ್ಟಿಯಿಂದ ನಡೆದದ್ದೆಲ್ಲವನ್ನೂ ತಿಳಿದುಕೊಂಡು, ಬಭ್ರುವಾಹನನ ಬಳಿಗೆ ಬರುತ್ತಾಳೆ.

ಉಲೂಪಿಯು ಬಭ್ರುವಾಹನನ್ನು ಭೇಟಿಯಾಗುವುದು ಅದೇ ಮೊದಲು.! ಹಾಗಾಗಿ, ಅವಳು ತನ್ನ ಗುರುತನ್ನು ಹೇಳಿಕೊಂಡು, ಬಭ್ರುವಾಹನನಿಗೆ ಅರ್ಜುನನೊಡನೆ ಯುದ್ಧ ಮಾಡುವಂತೆ ಸೂಚಿಸುತ್ತಾಳೆ. ಬಭ್ರುವಾಹನನೂ ಅದಕ್ಕೆ ಒಪ್ಪಿಕೊಂಡು, ತನ್ನ ಮನೆಗೆ ತಲುಪುತ್ತಾನೆ. ಅವನ ಅನುಚರರು ಯಜ್ಞಾಶ್ವವನ್ನು ಕಟ್ಟಿಹಾಕುತ್ತಾರೆ. ಬಭ್ರುವಾಹನನ ಕಡೆಯವರು ಯಾಗಾಶ್ವವನ್ನು ಕಟ್ಟಿಹಾಕಿದ ಸಂಗತಿ ತಿಳಿದು ಅರ್ಜುನನೂ ಪ್ರಸನ್ನನಾಗುತ್ತಾನೆ.

ಮಾರನೆಯ ದಿನ ಅರ್ಜುನನಿಗೂ ಬಭ್ರುವಾಹನನಿಗೂ ಬಲು ಘೋರ ಯುದ್ಧವೇ ನಡೆಯುತ್ತದೆ; ದೇವತೆಗಳು ಆಕಾಶದಲ್ಲಿ ನೆರೆದು ಅವರಿಬ್ಬರ ಯುದ್ಧವನ್ನು ನೋಡುತ್ತ, “ತಂದೆಯ ಬಗ್ಗೆ ಗೌರವವೇ ಇಲ್ಲದೆ ಕಾದುತ್ತಿದ್ದಾನಲ್ಲ! ಮಗನ ಬಗ್ಗೆ ಸ್ವಲ್ಪವೂ ಕನಿಕರ, ಪ್ರೇಮವಿಲ್ಲದೆ ಕಾದುತ್ತಿದ್ದಾನಲ್ಲ!” ಎಂದು , ಬಭ್ರುವಾಹನ ಹಾಗೂ ಅರ್ಜುನನ ಬಗ್ಗೆ ಉದ್ಗರಿಸುತ್ತಿದ್ದರಂತೆ.

ಅರ್ಜುನ-ಬಭ್ರುವಾಹನರ ಕಾಳಗವು ನಿಜಕ್ಕೂ ವಿಷಮವಾಗಿಯೆ ಇತ್ತು. ಇಬ್ಬರಲ್ಲಿ ಯಾರು ಗೆಲ್ಲಬಹುದೆಂದು ಹೇಳುವುದು ಕಷ್ಟಕರವಾಗಿ ತೋರಿತು. ಮಗನ ಬಾಣಗಳು ತನ್ನನ್ನು ಘಾಸಿಗೊಳಿಸುತ್ತಿದ್ದರೂ, ಅರ್ಜುನನು ಒಂದೆರಡು ಬಾರಿ ಅವನ ಯುದ್ಧಕೌಶಲವನ್ನು ಮೆಚ್ಚಿ ನುಡಿದ.

ಒಮ್ಮೆ ಅರ್ಜುನನು ಬಭ್ರುವಾಹನನ ಮೇಲೆ ಪ್ರಚಂಡ ಬಾಣಗಳನ್ನು ಕರೆದ. ಅದರ ಘಾತಕ್ಕೆ ಸಿಲುಕಿದರೂ, ಸಾವರಿಸಿಕೊಂಡು ಬಭ್ರುವಾಹನನು ಪ್ರಬಲವಾದ ಅಸ್ತ್ರವೊಂದನ್ನು ಅರ್ಜುನನ ಮೇಲೆ ಪ್ರಯೋಗಿಸಿದ. ಅದು ಅರ್ಜುನನ ಎದೆಯನ್ನು ಸೀಳಿ ಗಾಯಗೊಳಿಸಿ, ಬೆನ್ನಿನಿಂದ ತೂರಿಕೊಂಡು ಹೋಯಿತು. ಅದರ ಏಟಿಗೆ ತತ್ತರಿಸಿದ ಅರ್ಜುನನು ಗತಪ್ರಾಣನಾಗಿ ನೆಲಕ್ಕುರುಳಿದ.

ತನ್ನ ತಂದೆಯು ಸತ್ತುದನ್ನು ತಿಳಿದ ದುಃಖದಿಂದಲೂ, ಅರ್ಜುನನ ಬಾಣಗಳಿಂದುಂಟಾದ ಗಾಯಗಳ ವೇದನೆಯಿಂದಲೂ ಬಭ್ರುವಾಹನನು ಮೂರ್ಛಿತನಾದ.

ನಂತರ, ರಣರಂಗಕ್ಕೆ ಚಿತ್ರಾಂಗದೆ ಹಾಗೂ ಉಲೂಪಿ ಓಡೋಡಿ ಬಂದರು. ಚಿತ್ರಾಂಗದೆಯಂತೂ ಅರ್ಜುನನ ಕಾಲ ಬಳಿ ಬಿದ್ದು ರೋದಿಸಿದಳು. ಆಮೇಲೆ, ಅವಳ ದುಃಖವು ಉಲೂಪಿಯ ಮೇಲೆ ಕೋಪವಾಗಿ ಮಾರ್ಪಟ್ಟು, ಉಲೂಪಿಯನ್ನು ಬೈದಳು — “ನೋಡು, ನೀನು ನನ್ನ ಮಗನಿಗೆ ಹೇಳಿದ ಬುದ್ಧಿವಾದದಿಂದ ಎಂತಹ ಅನರ್ಥವಾಗಿದೆಯೆಂದು. ನೀನು ಹಿರಿಯಳಲ್ಲವೆ, ಧರ್ಮಜ್ಞೆಯಲ್ಲವೆ, ಪತಿವ್ರತೆಯಲ್ಲವೆ? ತಂದೆಯೊಡನೆಯೆ ಕಾದು ಎಂದು ನನ್ನ ಮಗನಿಗೇಕೆ ಬೋಧಿಸಿದೆ?

ಮಗನಿಗಾದ ಸ್ಥಿತಿಯ ಬಗ್ಗೆ ನನಗೆ ಹೆಚ್ಚಿನ ನೋವಿಲ್ಲ, ಆದರೆ ನನ್ನ ಪತಿಗೆ ಉಂಟಾಗಿರುವ ಗತಿಯನ್ನು ಕಂಡು ನನ್ನ ಮನಸ್ಸು ಪರಿತಪಿಸುತ್ತಿದೆ. ನೀನು ಹೇಗಾದರೂ ಮಾಡಿ ಪಾರ್ಥನ ಪ್ರಾಣವನ್ನುಳಿಸಿಕೊಡದಿದ್ದರೆ ನಾನು ಪ್ರಾಯೋಪವೇಶ ಮಾಡುತ್ತೇನೆ” ಎಂದು ಆವೇಶದಿಂದ ನುಡಿದಳು.

ಆ ಹೊತ್ತಿಗೆ ಬಭ್ರುವಾಹನನೂ ಮೂರ್ಛೆ ತಿಳಿದೆದ್ದ. ಆದುದನ್ನು ನೆನೆದು, ಎದುರಲ್ಲಿ ತನ್ನ ತಾಯಿಯು ರೋದಿಸುತ್ತಿರುವುದನ್ನು ಕಂಡು ಅವನಿಗೂ ಅತೀವ ದುಃಖವಾಯಿತು. ಅವನು ಕೂಡ ಉಲೂಪಿಯು ಹಾಗೇಕೆ ಮಾಡಿಸಿದಳೆಂದು ಪ್ರಶ್ನಿಸಿ, ಕೊನೆಗೆ, ತಂದೆಯನ್ನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ತಾನು ಅಗ್ನಿಪ್ರವೇಶ ಮಾಡುವುದಾಗಿ ಹೇಳಿದ.

ಉಲೂಪಿಯು ಅವರಿಬ್ಬರನ್ನೂ ಶಾಂತವಾಗಿರಲು ಹೇಳಿ, ಸಂಜೀವಕ ಮಣಿಯನ್ನು ನೆನೆದಳು. ತಕ್ಷಣವೆ ಅದು ಅವಳ ಕೈಗೆ ಬಂದು ಸೇರಿತು. ಅವಳು ಅದನ್ನು ಬಭ್ರುವಾಹನನ ಕೈಗೆ ಕೊಟ್ಟು, ಅದನ್ನು ಅರ್ಜುನನ ಎದೆಯ ಮೇಲಿರಿಸುವಂತೆ ಹೇಳಿದಳು. ಅವನೂ ಅಂತೆಯೆ ಮಾಡಿದ. ಆ ಮರುಕ್ಷಣವೆ ಅರ್ಜುನನು ನಿದ್ದೆಯಿಂದ ಎಚ್ಚತ್ತವನಂತೆ ಎದ್ದು ಕುಳಿತ.

ಅರ್ಜುನನು ಬಭ್ರುವಾಹನನನ್ನು ಪ್ರೀತಿಯಿಂದ ಮಾತಾಡಿಸಿ, ನಡೆದುದ್ದೇನೆಂದು ಕೇಳಿದ. ಅವನು ಉಲೂಪಿಯೇ ಎಲ್ಲರಿಗೂ ಈ ಪ್ರಸಂಗವಷ್ಟನ್ನೂ ವಿವರಿಸುವಳೆಂದು ತಿಳಿಸಿದ.

***************

ಉಲೂಪಿಯು ತಾನೇಕೆ ಇದೆಲ್ಲವೂ ನಡೆಯುವಂತೆ ಮಾಡಬೇಕಾಯಿತೆಂದು ಹೇಳಿದಳು:

ಒಂದು ದಿನ ಉಲೂಪಿಯು ತನ್ನ ಸಖಿಯರೊಡನೆ ಗಂಗಾನದಿಯಲ್ಲಿ ಜಲವಿಹಾರ ಮಾಡುತ್ತಿದ್ದಾಗ ವಸುಗಳು ಗಂಗೆಯೊಡನೆ ಸಂಭಾಷಿಸುತ್ತಿದ್ದುದನ್ನು ಕಂಡಳು.

ವಸುಗಳು ಗಂಗೆಗೆ ಭೀಷ್ಮನ ಸಾವಿನ ಬಗ್ಗೆ ತಿಳಿಸಿ, ಕಪಟದಿಂದ ಅವನನ್ನು ಕೊಂದ ಅರ್ಜುನನಿಗೆ ತಾವೆಲ್ಲ ಶಾಪ ಕೊಡಲು ಹೊರಟಿರುವುದಾಗಿ ತಿಳಿಸಿದರು. ಗಂಗೆಯೂ ಅದಕ್ಕೆ ಅನುಮತಿಯಿತ್ತು ಅಂತರ್ಧಾನಳಾದಳು.

ಉಲೂಪಿಯು ತನ್ನ ತಂದೆಯ ಬಳಿ ಹೋಗಿ ಈ ವಿಷಯವನ್ನು ತಿಳಿಸಿ, ಹೇಗಾದರೂ ಅರ್ಜುನನನ್ನು ಕಾಪಾಡುವಂತೆ ಬೇಡಿದಳು. ಅವಳ ತಂದೆಯು ವಸುಗಳನ್ನು ಭೇಟಿಯಾಗಿ, ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದನು. ಅವರೆಲ್ಲ ಒಂದು ಕರಾರಿನ ಮೇಲೆ ಅದಕ್ಕೆ ಒಪ್ಪಿದರು: ’ಅರ್ಜುನನು ತನ್ನ ಮಗನಿಂದಲೆ ಹತನಾಗುವಂತಾದರೆ ಅರ್ಜುನನ ಪಾಪವು ಕಳೆಯುತ್ತದೆ, ಅವನಿಗಾಗಬೇಕಾದ ನರಕಪ್ರಾಪ್ತಿಯು ತಪ್ಪುತ್ತದೆ’ ಎಂದು ತಿಳಿಸಿ ಹೊರಟುಹೋದರು.

ನೆನ್ನೆಯ ದಿನ ಅರ್ಜುನನು ಬಭ್ರುವಾಹನನ ಬಗ್ಗೆ ಅನಾದರ ತೋರಿ ನಡೆದುಕೊಂಡಿದ್ದೂ, ಯುದ್ಧಕ್ಕೆ ಪ್ರೇರೇಪಿಸಿದ್ದೂ — ಆಗಬೇಕಾದ ಕೆಲಸಕ್ಕೆ ಪೂರಕವೆನಿಸಿ, ತಾನು ಅರ್ಜುನ-ಬಭ್ರುವಾಹನರ ಕಾಳಗ ನಡೆಯುವಂತೆ ಮಾಡಿದೆನೆಂದು ಉಲೂಪಿಯು ತಿಳಿಸಿದಳು.

ಅರ್ಜುನನು ಅದೆಲ್ಲವನ್ನು ಕೇಳಿ ಪ್ರಸನ್ನನಾಗಿ, ಉಲೂಪಿಗೆ “ನಿನ್ನಿಂದ ನಾನು ವಸುಗಳ ಕೋಪವನ್ನು ಜಯಿಸುವಂತಾಯಿತು, ನನ್ನ ದುಷ್ಕೃತವು ನೀಗುವಂತಾಯ್ತು..” ಎಂದು ಅಭಿನಂದಿಸಿ, ಆನಂತರ ತನ್ನ ಮಗನನ್ನೂ, ಹೆಂಡತಿಯರನ್ನೂ ಅಶ್ವಮೇಧದ ಹೊತ್ತಿಗೆ ಹಸ್ತಿನಾಪುರಕ್ಕೆ ತಲುಪಬೇಕೆಂದು ಸೂಚಿಸಿದ.

ಟಿಪ್ಪಣಿ:

೧. ಆಂಧ್ರಮಹಾಭಾರತವು ಮೂಲ ವ್ಯಾಸಭಾರತವನ್ನು ಅನುಸರಿಸಿಯೇ ಅನುವಾದಿಸಿರುವ ಕೃತಿ. ಮೂಲದಲ್ಲಿ ವಿಸ್ತಾರವಾಗಿ ಬಂದಿರುವುದೆಲ್ಲವನ್ನೂ, ಅದರ ಕಥಾಹಂದರಕ್ಕೆ ಬಾಧಕವಾಗದಂತೆ ಸಂಗ್ರಹಿಸಿ ರಚಿತವಾಗಿರುವುದು.

೨. ಕೃಷ್ಣರಾಯ ಭಾರತವು ಬಹುಮಟ್ಟಿಗೆ ಮೂಲಭಾರತವನ್ನೆ ಅನುಸರಿಸಿದ್ದರೂ ಕೆಲವು ಕಡೆ ತಿಮ್ಮಣ್ಣ ಕವಿಯ ಸ್ವೋಪಜ್ಞತೆಯನ್ನೂ, ಕಥೆಯಲ್ಲಿ ಸ್ವಲ್ಪಮಟ್ಟಿಗಿನ ಬದಲಾವಣೆ ಮಾಡಿಕೊಂಡಿರುವುದನ್ನೂ ಕಾಣಬಹುದು. ಉದಾಹರಣೆಗೆ: ಮೂಲದಲ್ಲಿ, ಬಭ್ರುವಾಹನನು ಅರ್ಜುನನನ್ನು ಭೇಟಿಯಾಗುವ ಹೊತ್ತಿಗಿನ್ನೂ ಯಾಗಾಶ್ವವನ್ನು ಕಟ್ಟಿಹಾಕಿರುವುದಿಲ್ಲ.

ಕೃಷ್ಣರಾಯಭಾರತದಲ್ಲಿ, ಆ ಮೊದಲೇ ಬಭ್ರುವಾಹನನ ಭಟರು ಕುದುರೆಯನ್ನು ತಂದು ಕಟ್ಟಿಹಾಕಿ, ಬಭ್ರುವಾಹನನಿಗೆ ಆ ಬಗ್ಗೆ ತಿಳಿಸುತ್ತಾರೆ. ಕುದುರೆಯ ಹಣೆಪಟ್ಟಿಯಲ್ಲಿರುವ ವಿವರವನ್ನೋದಿದ ಬಳಿಕ ತನ್ನ ತಂದೆ ಅರ್ಜುನನು ಮಣಿಪುರದ ಹೊರವಲಯದಲ್ಲಿದ್ದಾನೆಂದು ಅರಿತ ಬಭ್ರುವಾಹನನು, ಅವನನ್ನು ಭೇಟಿಯಾಗಲು ಬರುತ್ತಾನೆ.

ಯುದ್ಧದ ವರ್ಣನೆಯಲ್ಲೂ, ಅದರ ವಿವರ ವಿಸ್ತಾರದಲ್ಲೂ ತಿಮ್ಮಣ್ಣ ಕವಿಯ ಚಾತುರ್ಯವನ್ನು ಕಾಣಬಹುದು.

ಜೈಮಿನಿ ಭಾರತವನ್ನನುಸರಿಸಿರುವ ಕಥೆ: ಲಕ್ಷ್ಮೀಶನ ’ಜೈಮಿನಿ ಭಾರತ’ದ್ದು

ಇಲ್ಲಿ ಬಭ್ರುವಾಹನನ ಕಥೆಗೆ ಪೂರಕವಾದ, ಅರ್ಜುನ-ಬಭ್ರುವಾಹನರ ಕಾಳಗಕ್ಕೆ ಪೀಠಿಕೆಯಾಗುವಂತಹ ಕಥೆಯೊಂದಿದೆ.

ಅಶ್ವಮೇಧದ ಕುದುರೆಯ ರಕ್ಷಣೆಗೆ ಅರ್ಜುನನೂ, ಕೃತವರ್ಮ, ಪ್ರದ್ಯುಮ್ನ, ವೃಷಕೇತು ಮುಂತಾದ ವೀರರು ಹೊರಟಿದ್ದರು. ಆ ಯಾಗದ ಕುದುರೆಯು ಒಮ್ಮೆ ಮಾಹಿಷ್ಮತಿ ನಗರದ ಹೊರಗಿದ್ದ ಉದ್ಯಾನವನ್ನು ತಲುಪಿತು. ಅಲ್ಲಿಯ ಯುವರಾಜ ಪ್ರವೀರನೆಂಬುವವನು ಯಾಗಾಶ್ವವನ್ನು ಕಟ್ಟಿಹಾಕಿ, ಅರ್ಜುನನೊಡನೆ ಯುದ್ಧವನ್ನು ಪ್ರಕಟಿಸಿದನು. ಪ್ರವೀರನಿಗೆ ಬೆಂಬಲವಾಗಿ ಅವನ ತಂದೆ ನೀಲಧ್ವಜನೂ ಬಂದು ಸೇರಿಕೊಂಡ.

ಅರ್ಜುನನ ಸೈನ್ಯಕ್ಕೂ, ಮಾಹಿಷ್ಮತಿಯ ಸೈನ್ಯಕ್ಕೂ ನಡುವೆ ಯುದ್ಧವಾಯಿತು. ಯುದ್ಧದಲ್ಲಿ ಪ್ರವೀರನು ಸಾವಿಗೀಡಾದನು. ಮುಂದೆ, ನೀಲಧ್ವಜನ ಅಳಿಯನಾದ ಅಗ್ನಿದೇವನ ಸೂಚನೆಯ ಮೇರೆಗೆ, ನೀಲಧ್ವಜನು ಯಾಗದ ಕುದುರೆಯನ್ನು ಅರ್ಜುನನಿಗೆ ಮರಳಿಸಲು ಒಪ್ಪಿಕೊಂಡು, ತನ್ನ ಅರಮನೆಗೆ ಬಂದನು. ಆದರೆ, ಅವನ ಹೆಂಡತಿ ಜ್ವಾಲೆಯೆಂಬುವವಳ ದುರ್ಬೋಧೆಗೆ ಮರುಳಾಗಿ, ನೀಲಧ್ವಜನು ಮತ್ತೆ ಅರ್ಜುನನೊಡನೆ ಯುದ್ಧ ಘೋಷಿಸಿದನು. ಆದರೆ ಈ ಬಾರಿಯೂ ಅವನಿಗೆ ಸೋಲುಂಟಾಯಿತು. ಅದಕ್ಕಾಗಿ ಮರುಗಿ, ಅವನು ತನ್ನ ಹೆಂಡತಿ ಜ್ವಾಲೆಯನ್ನು “ನಿನ್ನ ದುರ್ಬುದ್ಧಿಯಿಂದ ಎಂತಹ ಅನರ್ಥವಾಯಿತು. ನೆನ್ನೆಯೇ ನಾನು ಯಾಗದ ಕುದುರೆಯನ್ನು ಅರ್ಜುನನಿಗೆ ಒಪ್ಪಿಸುವವನಿದ್ದೆ. ನಿನ್ನಿಂದ ಇದೆಲ್ಲ ಆಯ್ತು..” ಎಂದು ಬೈದು ಅವಳನ್ನು ಹೊರದೂಡಿದ.

ಅವಮಾನದಿಂದಲೂ, ಪುತ್ರಶೋಕದಿಂದಲೂ ಕುಪಿತಳಾದ ಜ್ವಾಲೆಯು ಸೇಡು ತೀರಿಸಿಕೊಳ್ಳುವ ಬಗೆಗಾಣದೆ, ಗಂಗಾನದಿಯ ಬಳಿಗೆ ಬಂದಳು. ಅಲ್ಲಿದ್ದ ಅಂಬಿಗರನ್ನು ಕುರಿತು “ದೋಷದಿಂದ ಕೂಡಿರುವ ಈ ಗಂಗೆಯ ನೀರು ತಾಗದಂತೆ ನನ್ನನ್ನು ಆಚೆ ಕಡೆಯ ದಡಕ್ಕೆ ತಲುಪಿಸಬಲ್ಲವರು ಯಾರಿದ್ದೀರಿ?” ಎಂದು ಕೇಳಿದಳು.

ಜ್ವಾಲೆಯ ಮಾತನ್ನು ಕೇಳಿದ ಗಂಗೆಯು ಅಲ್ಲಿಗೆ ಬಂದು, ಜ್ವಾಲೆಯನ್ನು ಕುರಿತು ’ಪಾಪವಿನಾಶಿನಿಯಾದ ನನ್ನಲ್ಲಿ ದೋಷವುಂಟೆ? ಅದೇನು ದೋಷ, ಹೇಳು’ ಎಂದು ಕೇಳಿದಳು. ಅದಕ್ಕೆ ಜ್ವಾಲೆಯು, ಪುತ್ರವಿಹೀನೆಯಾದ ಗಂಗೆಯನ್ನು ಸ್ಪರ್ಶಿಸಲು ತಾನು ಹಿಂಜರಿದುದಾಗಿ ತಿಳಿಸಿದಳು.

ಗಂಗೆಯು ತನಗೆ ಭೀಷ್ಮನೆಂಬ ಮಗನಿರುವುದಾಗಿ ಹೇಳಿದಾಗ, ಜ್ವಾಲೆಯು ’ಅರ್ಜುನನ ಕಪಟದಿಂದ ಭೀಷ್ಮನು ಸತ್ತುದು ನಿನಗೇನು ತಿಳಿದಿಲ್ಲವೆ?’ ಎಂದು ಗಂಗೆಯಲ್ಲಿ ರೋಷವನ್ನು ಕೆರಳಿಸಿದಳು. ಗಂಗೆಯು ಅರ್ಜುನನ ಬಗೆಗೆ ಕೋಪ ತಳೆದು, “ಇನ್ನು ಆರು ತಿಂಗಳಲ್ಲಿ ಅರ್ಜುನನು ತನ್ನ ಮಗನಿಂದಲೇ ಮೃತನಾಗಲಿ” ಎಂದು ಶಾಪವಿತ್ತು, ಅಂತರ್ಧಾನಳಾದಳು.

ಇತ್ತ, ಜ್ವಾಲೆಯು, ಅಷ್ಟಕ್ಕೇ ತೃಪ್ತಿ ಪಡದೆ, ಅಗ್ನಿಪ್ರವೇಶ ಮಾಡಿ, ತಾನೊಂದು ಪ್ರಬಲಾಸ್ತ್ರವಾಗಿ — ಬಭ್ರುವಾಹನನ ಬತ್ತಳಿಕೆಗೆ ಬಂದು ಸೇರಿದಳು.

ಮುಂದೆ, ಯಾಗಾಶ್ವವು ಮಣಿಪುರಕ್ಕೆ ಬರುತ್ತದೆ. ಬಭ್ರುವಾಹನನ ಕಡೆಯವರು ಅದನ್ನು ಕರೆದೊಯ್ದು ಬಭ್ರುವಾಹನನ ಎದುರು ನಿಲ್ಲಿಸುತ್ತಾರೆ. ಕುದುರೆಯ ಹಣೆಪಟ್ಟಿಯಲ್ಲಿದ್ದುದನ್ನು ಓದಿಸಿಕೊಂಡ ಬಭ್ರುವಾಹನನು ಪಾರ್ಥನಿಗೆದುರಾಗಿ ಸೆಣೆಸಲು ನಿರ್ಧರಿಸುತ್ತಾನೆ.

ಈ ವಿಷಯ ತಿಳಿದ ಬಭ್ರುವಾಹನನ ತಾಯಿ — ಚಿತ್ರಾಂಗದೆಯು — ಅವನ ಬಳಿಗೆ ಬಂದು, ಅರ್ಜುನನ ರಕ್ಷೆಯಲ್ಲಿದ್ದ ಯಾಗಾಶ್ವವನ್ನು ಕಟ್ಟಿಸಿದ್ದೂ, ನಾಳೆ ಅರ್ಜುನನೊಡನೆ ಯುದ್ಧ ಹೂಡುವುದೂ ನಿಜವೇ ಎಂದು ಕೇಳುತ್ತಾಳೆ. ಬಭ್ರುವಾಹನನು ಅದಕ್ಕೆ ಹೌದೆಂದಾಗ, ಅವಳು “ಒಳ್ಳೆ ಕೆಲಸ ಮಾಡಿದೆ, ಮಗನೆ. ಇಂಥಾ ಕೆಟ್ಟ ಬುದ್ಧಿಯನ್ನ ನೀನೆಲ್ಲಿ ಕಲಿತೆ? ನನ್ನ ಪತಿಯ ಆಗಮನ ನಿನಗೆ ಹಿಡಿಸದಾಯ್ತೆ? ಸಮುದ್ರಮಥನದಲ್ಲಿ ವಿಷವು ಉದಿಸಿದಂತೆ ನೀನು ನನಗೆ ಜನಿಸಿದೆ…” ಎಂದು ಮುಂತಾಗಿ ಬಯ್ಯುತ್ತಾಳೆ.

ಬಭ್ರುವಾಹನನಿಗೆ ಆಗಷ್ಟೆ ತಿಳಿಯುವುದು — ಅರ್ಜುನನು ತನ್ನ ತಂದೆ ಎಂದು. ತಾನು ಮಾಡಿದ ಅಚಾತುರ್ಯಕ್ಕೆ ನಾಚಿ, ನಾಳೆ ಮುಂಜಾನೆ ತಾನು ಅರ್ಜುನನನ್ನು ಕಾಣಲು ಹೋಗುವುದಾಗಿ ತಾಯಿಗೆ ಮಾತು ಕೊಡುತ್ತಾನೆ.

ತಾಯಿಗೆ ಕೊಟ್ಟ ಮಾತಿನಂತೆ, ತನ್ನ ಪರಿವಾರದವರೊಡನೆ ಬಭ್ರುವಾಹನನು ಅರ್ಜುನನ ಬಿಡಾರಕ್ಕೆ ಬಂದು, ಅವನ ಕಾಲಿಗೆರಗುತ್ತಾನೆ. ಅರ್ಜುನನಿಗೆ ತಿಳಿಯದು — ಬಂದವನು ಯಾರೆಂದು.

ಅದಕ್ಕೆ ಬಭ್ರುವಾಹನನು ತನ್ನನ್ನು ಪರಿಚಯಿಸಿಕೊಂಡು, ತಾನು ಅರ್ಜುನ ಹಾಗೂ ಚಿತ್ರಾಂಗದೆಯರ ಮಗ ಎಂಬುದನ್ನು ತಿಳಿಸಿದ. ಅರ್ಜುನನು ಅವನ ಮಾತನ್ನು ಮನ್ನಿಸದೆ, ಅನಾದರ ತೋರಿ, ಅವನನ್ನು ನಿಂದಿಸಿದ.

’ನಿನ್ನ ತಾಯಿ ಚಿತ್ರಾಂಗದೆಯು ಯಾರೊ ವೈಶ್ಯನಿಗೆ ನಿನ್ನನ್ನು ಹೆತ್ತಿರಬೇಕು. ನೀನು ನನ್ನ ಮಗನಾಗಿರಲು ಸಾಧ್ಯವಿಲ್ಲ. ನನ್ನ ಮಗನೇ ಆಗಿದ್ದರೆ ನನ್ನೊಡನೆ ಯುದ್ಧಕ್ಕೆ ಬರದೆ ಹೀಗೆ ಹೇಡಿಯಂತೆ ವರ್ತಿಸುತ್ತಿರಲಿಲ್ಲ…’ ಎಂದು ಮುಂತಾಗಿ ಬೈದು ಹಂಗಿಸುತ್ತಾನೆ. ಅರ್ಜುನನು ತನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ್ದನ್ನು ಸೈರಿಸದ ಬಭ್ರುವಾಹನನು, ಕೋಪದಿಂದ “ನನ್ನ ತಾಯಿಯ ಬಗ್ಗೆ ಸೀವರಿಸಿ ನುಡಿದ ನಿನ್ನ ತಲೆಯನ್ನು ನಾಳೆ ರಣರಂಗದಲ್ಲಿ ಕೆಡವದಿದ್ದರೆ ನೋಡು..” ಎಂದು ಎಚ್ಚರಿಕೆ ಕೊಟ್ಟು, ತನ್ನ ಮಂದಿರಕ್ಕೆ ಮರಳಿದನು.

ಮಾರನೆಯ ದಿನ ಅತಿಘೋರ ಯುದ್ಧವಾಗುತ್ತದೆ. ಬಭ್ರುವಾಹನನು ಅರ್ಜುನನ ಕಡೆಯ ವೀರರನೇಕರನ್ನು ಕೊಲ್ಲುತ್ತಾನೆ. ಕೊನೆಗೆ, ಅರ್ಜುನನಿಗೆ ಪ್ರಿಯನಾದ ವೃಷಕೇತುವನ್ನೂ ಕೊಲ್ಲುತ್ತಾನೆ.

ಮುಂದೆ, ಬಭ್ರುವಾಹನನು ಅರ್ಜುನನನ್ನು, “ಕರ್ಣ ದ್ರೋಣಾದಿಗಳನ್ನು ನಿನಗೆ ಜಯಿಸಿಕೊಟ್ಟವನು ಕೃಷ್ಣನೇ ಹೊರತು ನಿನ್ನಿಂದ ಅದು ಸಾಧ್ಯವಿರಲಿಲ್ಲ. ಇನ್ನಾದರೂ ಆ ಕೃಷ್ಣನನ್ನು ನೆನೆ.. ಅವನ ಸಾರಥ್ಯವಿಲ್ಲದೆ ನೀನು ಯಾರನ್ನು ಜಯಿಸಿದೆ ಹೇಳು?” ಎಂದು ಮುಂತಾಗಿ ಮೂದಲಿಸಿ, ಜ್ವಾಲೆಯ ಅಸ್ತ್ರವನ್ನು ಪ್ರಯೋಗಿಸಿದನು. ಅದು ಅರ್ಜುನನ ತಲೆಯನ್ನು ಅನಾಯಾಸವಾಗಿ ಕಡಿದುಹಾಕುತ್ತದೆ. ಅರ್ಜುನನು ಸತ್ತು ಬೀಳುತ್ತಾನೆ.

ಆನಂತರ ಬಭ್ರುವಾಹನನು ತನ್ನ ನಗರಕ್ಕೆ ಮರಳುತ್ತಾನೆ. ಅಲ್ಲಿ, ಅವನನ್ನು ಎದುರುಗೊಂಡ ಚಿತ್ರಾಂಗದೆ, ಉಲೂಪಿಯರಿಗೆ ತಾನು ಅರ್ಜುನನ ಶಿರ ಕಡಿದು ಕೊಂದುದಾಗಿ ತಿಳಿಸುತ್ತಾನೆ, ಬಭ್ರುವಾಹನ. ವಿಷಯವನ್ನು ಕೇಳಿ ಚಿತ್ರಾಂಗದೆ ಅವನನ್ನು ಚೆನ್ನಾಗಿ ಬೈದು, ಉಲೂಪಿಯೊಡನೆ ತಾನು ಅರ್ಜುನನ ಶವವಿದ್ದೆಡೆಗೆ ಬರುತ್ತಾಳೆ. ಬಭ್ರುವಾಹನನು ಕೂಡ ತನ್ನ ಕೆಲಸಕ್ಕೆ ತಾನೇ ನಾಚಿ, ಪಶ್ಚಾತ್ತಾಪದಿಂದ — ರಣರಂಗಕ್ಕೆ ಬರುತ್ತಾನೆ.

ಅರ್ಜುನನ ಶವದ ಮೇಲೆ ಕೆಡೆದು ಚಿತ್ರಾಂಗದೆ ಹಾಗೂ ಉಲೂಪಿ ಅತಿಯಾಗಿ ಶೋಕಿಸುತ್ತಾರೆ. ಚಿತ್ರಾಂಗದೆಯಾದರೆ, ಕೋಪದಿಂದ ’ನಿನ್ನ ತಂದೆಯನ್ನು ಕೊಂದಂತೆಯೇ ನಿನ್ನ ಇಬ್ಬರು ತಾಯಂದಿರನ್ನೂ ಈ ಖಡ್ಗದಿಂದ ತರಿದು ಕೊಂದುಬಿಡು’ ಎಂದು ಹೇಳುತ್ತಾಳೆ. ಅವರ ಮಾತಿಗೆ ಉತ್ತರಿಸಲಾಗದೆ, ದುಃಖದಿಂದ ಕೂಡಿದ ಬಭ್ರುವಾಹನನು — ತಂದೆಯನ್ನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ತಾನು ಅಗ್ನಿಪ್ರವೇಶ ಮಾಡುವುದಾಗಿ ಹೇಳುತ್ತಾನೆ.

ಅಷ್ಟರಲ್ಲಿ, ಉಲೂಪಿಯು ’ಪಾತಾಳಲೋಕದಿಂದ ಶೇಷರಾಜನನ್ನು ಬೇಡಿ ಸಂಜೀವಕ ಮಣಿಯನ್ನು ತಂದು ಎಲ್ಲರನ್ನೂ ಬದುಕಿಸಬೇಕೆಂದು’ ಬಭ್ರುವಾಹನನಿಗೆ ಸೂಚಿಸುತ್ತಾಳೆ. ಸಂಜೀವಕವನ್ನು ಬಭ್ರುವಾಹನನಿಗೆ ಕೊಡಲು ಶೇಷನು ಒಪ್ಪಿದರೂ, ಧೃತರಾಷ್ಟ್ರನೆಂಬ ಹೆಸರಿನ ಸರ್ಪವು ಅದನ್ನು ವಿರೋಧಿಸುತ್ತದೆ.

ಕೊನೆಗೂ ಬಭ್ರುವಾಹನನು ಸಂಜೀವಕವನ್ನು ತೆಗೆದುಕೊಂಡು ಅರ್ಜುನನ ಶವವಿದ್ದಲ್ಲಿಗೆ ಬರುತ್ತಾನೆ.

ಆದರೆ, ಆ ಧೃತರಾಷ್ಟ್ರನೆಂಬ ಸರ್ಪವು ಬೇರೆ ಕೆಲವು ಸರ್ಪಗಳೊಡನೆ ಸಂಚು ಹೂಡಿ, ಅರ್ಜುನನ ತಲೆಯನ್ನು ಕದ್ದೊಯ್ದುಬಿಟ್ಟಿರುತ್ತದೆ. ರಣರಂಗಕ್ಕೆ ಬಭ್ರುವಾಹನನು ಬರುವ ವೇಳೆಗೆ, ಅರ್ಜುನನ ತಲೆ ಕಾಣೆಯಾಗಿರುವುದನ್ನು ಅರಿತ ಚಿತ್ರಾಂಗದೆ ಉಲೂಪಿಯರು ರೋದಿಸುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಭೀಮ, ಕುಂತಿ ಮುಂತಾದವರೊಡನೆ ಶ್ರೀ ಕೃಷ್ಣನೂ ಬರುತ್ತಾನೆ.

ನಡೆದುದೆಲ್ಲವನ್ನೂ ತಿಳಿದ ಕೃಷ್ಣನು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ, ಧೃತರಾಷ್ಟ್ರಾದಿ ದುಷ್ಟಸರ್ಪಗಳನ್ನು ಹರಿಸಿ, ಅರ್ಜುನನ ತಲೆಯನ್ನು ತಾವಿದ್ದಲ್ಲಿಗೆ ತರಿಸುತ್ತಾನೆ.

ಮುಂದೆ, ಸಂಜೀವಕ ಮಣಿಯ ಮಹಿಮೆಯಿಂದ ಅರ್ಜುನ, ವೃಷಕೇತು ಮುಂತಾದ ಎಲ್ಲರಿಗೂ ಜೀವ ಬರುತ್ತದೆ. ಕಥೆ ಹೀಗೆ ಸುಖಾಂತವಾಗುತ್ತದೆ.

ಟಿಪ್ಪಣಿ:

೧. ಜೈಮಿನಿ ಭಾರತದ ಭಾಗವಾಗಿ ಬರುವ ಬಭ್ರುವಾಹನ ಕಾಳಗದ ಕಥೆಯು ಬಹಳ ರಂಜಕವಾಗಿವೆ. ಒಂದಷ್ಟು ವಿವರಗಳನ್ನು ನಾನಿಲ್ಲಿ ಕೊಡಲು ಆಗಿಲ್ಲವಾದರೂ, ಕಥೆಯಲ್ಲಿ ಬರುವ ನಾನಾ ತಿರುವುಗಳು, ಸಂಕಷ್ಟಗಳು, ಕಥೆಗೆ ಒಂದು ರೋಚಕತೆಯನ್ನೊದಗಿಸುತ್ತವೆ.

೨. ಮೂಲ ಭಾರತಕ್ಕೆ ಹೋಲಿಸಿದರೆ ಇಲ್ಲಿಯ ಕಥೆ ಬಹಳ ವಿಭಿನ್ನವಾಗಿದೆ. ಅರ್ಜುನನಿಗೆ ಬಭ್ರುವಾಹನನು ಯಾರು ಎಂದು ತಿಳಿಯದಿರುವುದಿರಬಹುದು, ಅವನು ವೃಥಾ ಚಿತ್ರಾಂಗದೆಯ ಬಗ್ಗೆ ಬಿರುನುಡಿಗಳನ್ನಾಡುವುದಿರಬಹುದು, ಸಂಜೀವಕ ಮಣಿಯನ್ನು ತರಲು ಬಭ್ರುವಾಹನನು ಎದುರಿಸುವ ಸಂಕಷ್ಟಗಳಿರಬಹುದು.. ಒಟ್ಟಿನಲ್ಲಿ ಇವೆಲ್ಲ ಸೇರಿ ಇಲ್ಲಿಯ ಕಥೆಗೆ ಹೆಚ್ಚಿನ ಸೊಬಗನ್ನೂ ಸಂಕೀರ್ಣತೆಯನ್ನೂ ನೀಡಿವೆ.

೩. ಡಾ. ರಾಜ್ ಕುಮಾರ್ ಅಭಿನಯಿಸಿರುವ ಬಭ್ರುವಾಹನ ಚಲನಚಿತ್ರದ ಬಹುಭಾಗವು ಲಕ್ಷ್ಮೀಶನ ’ಜೈಮಿನಿ ಭಾರತ’ವನ್ನೇ ಅನುಸರಿಸಿದೆ.

ಬಭ್ರುವಾಹನನು ಅರ್ಜುನನನ್ನು ’ಶ್ರೀ ಹರಿಯ ಬೆಂಬಲವಿಲ್ಲದೆ ನೀನು ಯಾರನ್ನು ಜಯಿಸಿರುವೆ ಹೇಳು…’ ಮುಂತಾಗಿ ಮೂದಲಿಸುವುದೆಲ್ಲ ಇಲ್ಲಿಂದಲೆ ತೆಗೆದುಕೊಂಡಿರುವಂತಿದೆ.

ಚಿತ್ರವು ಯಾವ ಮಟ್ಟಿಗೆ ಲಕ್ಷ್ಮೀಶನಿಂದ ಪ್ರಭಾವಿತವಾಗಿದೆ ಎಂಬುದಕ್ಕೆ ಉದಾಹರಣೆಯಾಗಿ ಇನ್ನೊಂದು ಅತಿ ಸಣ್ಣ ವಿಷಯವನ್ನು ಇಲ್ಲಿ ಪ್ರಸ್ತಾಪಿಸಬಹುದು:

ಚಿತ್ರದಲ್ಲಿ ಅರ್ಜುನನು ಉಲೂಚಿಯ (ಉಲೂಪಿ) ಮನೆಯಂಗಳದಲ್ಲಿ ದಾಳಿಂಬೆಯ ಗಿಡಗಳನ್ನು ಬೆಳೆಸಿರುವುದನ್ನು ತೋರಿಸಿದ್ದಾರೆ. ಅವು ಏಕೆ ಎಂದು ಉಲೂಚಿಯು ಕೇಳಿದಾಗ ಅರ್ಜುನನು ’ಈ ಗಿಡಗಳು ಎಂದು ಉರಿದುಹೋಗುತ್ತವೆಯೊ ಆ ದಿನ ನನ್ನ ಅವಸಾನ ಸಂಭವಿಸಿತೆಂದು ತಿಳಿ…’ ಎಂದು ಹೇಳುತ್ತಾನೆ. ಈ ಸಂಗತಿ ’ಜೈಮಿನಿ ಭಾರತ’ದಲ್ಲೂ ಇದೆ.

ಬಭ್ರುವಾಹನನು ಅರ್ಜುನನನ್ನು ಕೊಂದ ನಂತರ ಮಣಿಪುರಕ್ಕೆ ಬಂದಾಗ, ಮೊದಲು ಉಲೂಪಿ ಹಾಗೂ ಚಿತ್ರಾಂಗದೆಯರು ಅರ್ಜುನನು ಮಡಿದ ಸಂಗತಿಯನ್ನು ನಂಬುವುದಿಲ್ಲ. ಆಗ ಉಲೂಪಿಯು ಚಿತ್ರಾಂಗದೆಗೆ, “ಅರ್ಜುನನು ನನ್ನ ಮನೆಯಂಗಳದಲ್ಲಿ ೫ ದಾಳಿಂಬೆ ಗಿಡಗಳನ್ನು ಬೆಳೆಸಿದ್ದ. ಅವು ಸುಟ್ಟು ಬೂದಿಯಾದಂದು ತಾನು ಸಾವನ್ನಪ್ಪಿದ್ದು ನಿಜವಾಗುತ್ತದೆ ಎಂದು ನನಗೆ ತಿಳಿಸಿದ್ದ. ನಾನು ಈಗಲೆ ಹೋಗಿ ಅವು ಹೇಗಿವೆಯೊ ನೋಡಿಕೊಂಡು ಬರುತ್ತೇನೆ” ಎಂದು ಹೇಳುತ್ತಾಳೆ.

ಹೀಗೆ ಪ್ರತಿಯೊಂದು ಸಂಗತಿಯನ್ನೂ ಗಮನಕ್ಕೆ ತೆಗೆದುಕೊಂಡು, ಅಂತಹದ್ದೊಂದು ಅಪೂರ್ವ ಚಿತ್ರವನ್ನು ನಮಗೆ ನೀಡಿದ್ದಕ್ಕಾಗಿ ಆ ಚಿತ್ರದ ನಿರ್ದೇಶಕರನ್ನು ಅದೆಷ್ಟು ಕೊಂಡಾಡಿದರೂ ಸಾಲದು!

--

--

No responses yet