ಭಂಗಾಸ್ವನನ ಕಥೆ
“ಸ್ತ್ರೀಪುಂಸಯೋಃ ಸಮ್ಪ್ರಯೋಗೇ ಸ್ಪರ್ಶಃ ಕಸ್ಯಾಧಿಕೋ ಭವೇತ್ |
ಏತಸ್ಮಿನ್ಸಂಶಯೇ ರಾಜನ್ಯಥಾವದ್ವಕ್ತುಮರ್ಹಸಿ ||”
- ಮಹಾಭಾರತ, ಅನುಶಾಸನ ಪರ್ವ ೧೨.೧
ಭೀಷ್ಮನು ಶರಶಯ್ಯೆಯ ಮೇಲ್ಲಿದ್ದಾಗ, ಪಾಂಡವರೂ ಅವರ ಬಾಂಧವರೂ ಪ್ರತಿನಿತ್ಯವೂ ಅವನನ್ನು ಕಾಣಲು ಬರುತ್ತಿದ್ದರು. ಆಗೆಲ್ಲ ಧರ್ಮರಾಯನೂ ಇತರರೂ ಅನೇಕ ವಿಷಯಗಳ ಬಗ್ಗೆ ಭೀಷ್ಮನೊಡನೆ ಚರ್ಚಿಸಿ, ಸರಿ ಯಾವುದು ತಪ್ಪು ಯಾವುದೆಂದು ಅವನನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಮಹಾಭಾರತದ ಶಾಂತಿಪರ್ವ ಹಾಗೂ ಅನುಶಾಸನಿಕ ಪರ್ವಗಳಲ್ಲಿ ಇಂತಹ ಪ್ರಶ್ನೆಗಳನ್ನೂ, ಸಂವಾದಗಳನ್ನೂ ಹಾಗೂ ಅವಕ್ಕೆ ಹೊಂದಿಕೊಂಡಂತೆ ಬರುವ ಅನೇಕ ಉಪಾಖ್ಯಾನಗಳನ್ನೂ, ವಿವರಣೆಗಳನ್ನೂ ಕಾಣಬಹುದು.
ಯುಧಿಷ್ಠಿರನಾದರೂ ನೂರಾರು ವಿಷಯಗಳ ಬಗ್ಗೆ ಮುಕ್ತವಾಗಿ ಪ್ರಶ್ನಿಸಿ, ಭೀಷ್ಮನಿಂದ ಉಪದೇಶ ಪಡೆದುಕೊಳ್ಳುತ್ತಿದ್ದನು. ಹಾಗೊಮ್ಮೆ ಯುಧಿಷ್ಠಿರನು ಕೇಳಿದ ಪ್ರಶ್ನೆ ಇದು:
“ತಾತ! ಸ್ತ್ರೀ-ಪುರುಷರ ಸಮಾಗಮದಲ್ಲಿ ವಿಷಯಸುಖದ ಅನುಭವವು ಯಾರಿಗೆ ಹೆಚ್ಚಾಗಿ ಉಂಟಾಗುತ್ತದೆ?”
ಯುಧಿಷ್ಠಿರನ ಆ ಪ್ರಶ್ನೆಗೆ ಉತ್ತರವಾಗಿ, ಭೀಷ್ಮನು ಅವನಿಗೆ ಭಂಗಾಸ್ವನನೆಂಬ ರಾಜನೊಬ್ಬನ ಇತಿಹಾಸವನ್ನು ತಿಳಿಸುತ್ತಾನೆ:
ಬಹಳ ಹಿಂದೆ ಭಂಗಾಸ್ವನನೆಂಬ ಬಹಳ ಧಾರ್ಮಿಕನಾದ ರಾಜನೊಬ್ಬನಿದ್ದನು. ಅನೇಕ ವರ್ಷಗಳು ಕಳೆದರೂ ತನಗೆ ಮಕ್ಕಳಾಗದುದರಿಂದ ಆತನು ಒಮ್ಮೆ, ಪುತ್ರಾಪೇಕ್ಷೆಯಿಂದ ‘ಅಗ್ನಿಷ್ಟುತ’ವೆಂಬ ಯಜ್ಞವೊಂದನ್ನು ಪೂರೈಸಿ, ನೂರು ಮಕ್ಕಳನ್ನು ಪಡೆದನು. ಅಗ್ನಿಷ್ಟುತವು ಇಂದ್ರನಿಗೆ ಪ್ರಾಧಾನ್ಯವಿಲ್ಲದ ಯಜ್ಞವಾದುದರಿಂದ, ಆ ಯಾಗವನ್ನು ನೆರವೇರಿಸಿದ ಭಂಗಾಸ್ವನನ ಬಗ್ಗೆ ಇಂದ್ರನಿಗೆ ಸಿಟ್ಟು ಬಂತು. ಅದಕ್ಕೆ, ಭಂಗಾಸ್ವನನಿಗೆ ತಕ್ಕ ಪಾಠ ಕಲಿಸುವ ಸಮಯಕ್ಕಾಗಿ ಇಂದ್ರನು ಹೊಂಚಿ ನೋಡಿದನು. ಮಹಾಬಲಿಷ್ಠನೂ, ಪರಮ ಧಾರ್ಮಿಕನೂ, ರಾಜರ್ಷಿಯೂ ಆದ ಭಂಗಾಸ್ವನನ ವ್ಯಕ್ತಿತ್ವ, ನಡತೆಗಳಲ್ಲಿ ಯಾವ ನ್ಯೂನತೆಯೂ ಇರದಿದ್ದುದರಿಂದ, ಇಂದ್ರನ ಅಸಮಾಧಾನವು ಹೆಚ್ಚಾಯಿತು.
ಹೀಗೇ ಹಲವು ವರ್ಷಗಳು ಕಳೆದುವು. ಒಮ್ಮೆ ಭಂಗಾಸ್ವನನು ತನ್ನ ಪರಿವಾರದೊಡನೆ ಬೇಟೆಗೆ ಹೋದ. ಇಂದ್ರನು ತನ್ನ ಶಕ್ತಿಯಿಂದ ಭಂಗಾಸ್ವನನು ಕಾಡಿನಲ್ಲಿ ದಾರಿ ತಪ್ಪಿ, ಭ್ರಮಿತನಾದವನಂತೆ ಅತ್ತಿತ್ತ ಹುಡುಕಾಡುತ್ತ ಸಾಗುವಂತೆ ಮಾಡಿದ.
ಹೀಗೆ, ಭಂಗಾಸ್ವನನು ತನ್ನ ಪರಿವಾರದಿಂದ ದೂರಾಗಿ, ಏಕಾಕಿಯಾಗಿ -ಕುದುರೆಯ ಮೇಲೆ- ಕಾಡಿನಲ್ಲಿಸುತ್ತಾಡಿ ಬಳಲಿದ. ಕೊನೆಗೊಮ್ಮೆ ಸುಂದರವಾದೊಂದು ಸರೋವರವೊಂದನ್ನು ಸಮೀಪಿಸಿದ. ಅಲ್ಲಿ, ತಾನೇರಿ ಬಂದ ಕುದುರೆಗೆ ನೀರುಣಿಸಿ, ಹತ್ತಿರದಲ್ಲೇ ಅದನ್ನು ಕಟ್ಟಿಹಾಕಿದ. ಆನಂತರ ತಾನು ಆ ಸರೋವರದಲ್ಲಿ ಸ್ನಾನ ಮಾಡಲೆಂದು ಇಳಿದ. ಒಂದು ಮುಳುಗುಹಾಕಿದ ನಂತರ ನೋಡುತ್ತಾನೆ, ತನಗೆ ಪುರುಷರೂಪದ ಬದಲಾಗಿ ಸುಂದರವಾದ ಸುಕೋಮಲವಾದ ಸ್ತ್ರೀರೂಪವು ಪ್ರಾಪ್ತಿಯಾಗಿಬಿಟ್ಟಿದೆ!!
ಭಂಗಾಸ್ವನನಿಗೆ ಆಶ್ಚರ್ಯವೂ, ಲಜ್ಜೆಯೂ ಉಂಟಾಯಿತು. ಈ ರೂಪಿನಲ್ಲಿ ಕುದುರೆಯನ್ನೇರುವುದು ಹೇಗೆ, ತನ್ನ ಬಂಧುಬಾಂಧವರಿಗೆ ಇದನ್ನೆಲ್ಲ ವಿವರಿಸುವುದು ಹೇಗೆ, ರಾಜ್ಯದವರೆಲ್ಲ ನನ್ನ ಬಗ್ಗೆ ಏನೆಂದಾರು…..?
ಕೊನೆಗೆ, ಹೇಗೊ ಪ್ರಯತ್ನದಿಂದ ಕುದುರೆಯನ್ನೇರಿ -ಸ್ತ್ರೀರೂಪದ ಭಂಗಾಸ್ವನನು- ತನ್ನ ರಾಜಧಾನಿಗೆ ಹಿಂತಿರುಗಿದ.
ಅಲ್ಲಿ ತನ್ನ ರಾಣಿಯರನ್ನೂ, ಮಕ್ಕಳನ್ನೂ ಸಚಿವರನ್ನೂ ಕರೆದು, ತನ್ನ ಪ್ರವರಾದಿಗಳನ್ನು ಹೇಳಿ, ತಾನೇ ಭಂಗಾಸ್ವನನೆಂದು ನಿರೂಪಿಸಿ — ಅವರಿಗೆ ನಡೆದುದೆಲ್ಲವನ್ನೂ ವಿವರಿಸಿದ. ಇನ್ನು ಮುಂದೆ ತನ್ನ ಮಕ್ಕಳೇ ರಾಜ್ಯಭಾರವನ್ನು ಸಮನಾಗಿ ಹಂಚಿಕೊಂಡು ಪಾಲಿಸಿಕೊಳ್ಳಲಿ ಎಂದು ಘೋಷಿಸಿ, ತಾನು ಅರಣ್ಯವಾಸಕ್ಕೆ ತೆರಳಿದ.
ಮುಂದೆ ಆ ಹೆಣ್ಣು (ಭಂಗಾಸ್ವನ) ನಿಬಿಡಾರಣ್ಯದ ನಡುವಿದ್ದ ಮುನಿಗಳ ಆಶ್ರಮವೊಂದಕ್ಕೆ ಬಂದು ಸೇರಿದಳು. ಆಶ್ರಮವಾಸಿಯಾಗಿದ್ದಾಗ ಅವಳಿಗೂ ಅಲ್ಲಿಯ ಋಷಿಯೊಬ್ಬನಿಗೂ ಪ್ರೇಮಾಂಕುರವಾಯಿತು; ಅದರ ಫಲವಾಗಿ ಅವಳು ನೂರು ಜನ ಮಕ್ಕಳಿಗೆ ಜನ್ಮವಿತ್ತಳು. ಆ ಮಕ್ಕಳೂ ಬೆಳೆದು ದೊಡ್ಡವಾದವು. ಒಮ್ಮೆ ಅವಳು (ಭಂಗಾಸ್ವನ) ತನ್ನ ನೂರು ಮಕ್ಕಳನ್ನು ಕೂಡಿಕೊಂಡು ತನ್ನ ಪೂರ್ವಾಶ್ರಮದ ಮಕ್ಕಳ ಬಳಿಗೆ ಬಂದಳು. ತನಗೆ ಋಷಿಯಿಂದ ಜನಿಸಿದ ನೂರು ಮಕ್ಕಳನ್ನು ಅವರಿಗೆ ಪರಿಚಯಿಸಿ, ಎಲ್ಲರೂ ಸೋದರಪ್ರೇಮದಿಂದ ರಾಜ್ಯವನ್ನು ಪಾಲಿಸಿಕೊಳ್ಳುವಂತೆ ಹೇಳಿದಳು. ಅಂತೆಯೇ ಆ ಇನ್ನೂರು ಜನರೂ ಬಹಳ ಅನ್ಯೋನ್ಯತೆಯಿಂದ ಇರುತ್ತ, ರಾಜ್ಯಪಾಲನೆಯಲ್ಲಿ ನಿರತರಾಗಿದ್ದರು.
ಇದನ್ನೆಲ್ಲ ಕಂಡ ಇಂದ್ರನ ಸಿಟ್ಟು ಇನ್ನೂ ಹೆಚ್ಚಾಯಿತು; “ನಾನು ಈ ಭಂಗಾಸ್ವನನಿಗೆ ಕೆಡುಕಾಗಲಿ ಎಂದು ಇಷ್ಟೆಲ್ಲಾ ಮಾಡಿದರೆ ಅವನು ಸಂತೋಷವಾಗಿಯೆ ಇದ್ದಾನಲ್ಲ!” ಎಂದು.
ಅದಕ್ಕೇ, ತಾನು ಆ ಮಕ್ಕಳ ನಡುವೆ ಮನಸ್ತಾಪ ಮೂಡಿಸಲು ಬಗೆದ. ಒಮ್ಮೆ, ಇಂದ್ರನು ಬ್ರಾಹ್ಮಣ ವೇಷದಲ್ಲಿ — ಭಂಗಾಸ್ವನನ ಮೊದಲ ನೂರು ಮಕ್ಕಳ ಬಳಿ ಬಂದು “ಅಲ್ಲ, ಇದೆಲ್ಲ ಎಲ್ಲಾದರೂ ನಡೆಯೊ ಸಂಗತಿಯೆ? ಭಂಗಾಸ್ವನನು ಹೆಣ್ಣಾಗಿದ್ದಾಗ ಪಡೆದ ಮಕ್ಕಳಿಗೂ ನಿಮಗೂ ಎಂತಹ ಸಂಬಂಧ. ಅವರೊಟ್ಟಿಗೆ ರಾಜ್ಯವನ್ನು ಹಂಚಿಕೊಂಡು ಬಾಳುವ ಕಷ್ಟ ನಿಮಗೇಕೆ? ಇನ್ನು ಮುಂದಾದರೂ ಹೆಡ್ಡರಂತೆ — ಅವರೊಡನೆ ಪ್ರೇಮದಿಂದ ವರ್ತಿಸದೆ, ಅವರನ್ನೆಲ್ಲ ಹೊರಗಟ್ಟಿ” ಎಂದು ಬೋಧಿಸಿದ.
ಆ ನಂತರ ಇನ್ನುಳಿದ ನೂರು ಮಕ್ಕಳ ಬಳಿ ಹೋಗಿ, “ಭಂಗಾಸ್ವನನ ಗರ್ಭದಲ್ಲೆ ಜನಿಸಿದ ನೀವಿರುವಾಗ ಬೇರೆ ಹೆಂಗಸರಲ್ಲಿ ಹುಟ್ಟಿದ ಆ ಮಕ್ಕಳಿಗೇಕೆ ರಾಜ್ಯಪದವಿ? ನೀವು ಈಗಲೆ ಅವರನ್ನೆಲ್ಲ ರಾಜ್ಯದಿಂದ ಹೊರಹಾಕಿ” ಎಂದು ಚಾಡಿ ಹೇಳಿದ. ಈ ರೀತಿ ಕಪಟಬ್ರಾಹ್ಮಣನ ಮಾತಿನಿಂದ ರೊಚ್ಚಿಗೆದ್ದ ಇನ್ನೂರು ಮಕ್ಕಳೂ ಪರಸ್ಪರ ಜಗಳವಾಡಿಕೊಂಡು, ಎಲ್ಲರೂ ಹತರಾದರು.
ವಿಷಯ ತಿಳಿದು ಅಲ್ಲಿಗೆ ಓಡಿ ಬಂದ ಅವಳು (ಭಂಗಾಸ್ವನ) ಮನಕಲಕುವಂತೆ ರೋದಿಸುತ್ತಿದ್ದಳು. ಆ ಬ್ರಾಹ್ಮಣನು ಅವಳ ಬಳಿಗೆ ಹೋಗಿ ಅವಳು ಅಳಲು ಕಾರಣವೇನೆಂದು ಕೇಳಿದನು. ಭಂಗಾಸ್ವನನು ತನ್ನ ಕತೆಯನ್ನು ನಿರೂಪಿಸಿ, ‘ಅಗ್ನಿಷ್ಟುತವೆಂಬ ಯಾಗದ ಫಲವಾಗಿ ಜನಿಸಿದ ನೂರು ಮಕ್ಕಳೂ, ಋಷಿಯಿಂದ ಜನಿಸಿದ ನೂರು ಮಕ್ಕಳೂ ಒಟ್ಟಿಗೆ ಮೃತರಾದುದನ್ನು ಕಂಡು ತಡೆಯಲಾರದೆ’ ತಾನು ದುಃಖಿಸುತ್ತಿರುವುದಾಗಿ ತಿಳಿಸಿದಳು.
ಆಗ ಬ್ರಾಹ್ಮಣ ವೇಷದ ಇಂದ್ರನು ತಾನು ಯಾರೆಂದು ಅವಳಿಗೆ ತಿಳಿಸಿ, “ಇಂದ್ರ ಪ್ರಾಧಾನ್ಯವಿಲ್ಲದ ಯಾಗವನ್ನು ಮಾಡಿದ ನಿನಗೆ ಬುದ್ಧಿ ಕಲಿಸಲೆಂದು ನಾನೇ ಇದೆಲ್ಲ ನಡೆಯುವಂತೆ ಮಾಡಿದೆ.” ಎಂದು ಹೇಳಿದ. ಆಗ ಅವಳು ಇಂದ್ರನ ಕಾಲಿಗೆ ಬಿದ್ದು, ಮಕ್ಕಳಾಗಲೆಂಬ ಇಚ್ಛೆಯಿಂದ ತಾನು ಅರಿಯದೆ ಮಾಡಿದ ಅಪರಾಧವನ್ನು ಮನ್ನಿಸಬೇಕಾಗಿ ಪ್ರಾರ್ಥಿಸಿದಳು.
ಅವಳ ಪ್ರಾರ್ಥನೆಯಿಂದ ಸಂತುಷ್ಟನಾದ ಇಂದ್ರನು, “ಸರಿ, ಇವರಲ್ಲಿ ಯಾವ ನೂರು ಮಕ್ಕಳನ್ನು ಬದುಕಿಸಲಿ ಹೇಳು” ಎಂದ. ಅದಕ್ಕೆ ಅವಳು, ತಾನು ಸ್ತ್ರೀಯಾಗಿದ್ದಾಗ ಪಡೆದ ನೂರು ಜನ ಮಕ್ಕಳನ್ನು ಬದುಕಿಸಬೇಕೆಂದು ಬಿನ್ನವಿಸಿದಳು.
ಅವಳ ಕೋರಿಕೆಯಿಂದ ವಿಸ್ಮಿತನಾದ ಇಂದ್ರನು, “ನೀನು ಭಂಗಾಸ್ವನನಾಗಿದ್ದಾಗ ಹುಟ್ಟಿದವರನ್ನಲ್ಲದೆ, ಸ್ತ್ರೀಯಾಗಿದ್ದಾಗ ಪಡೆದವರನ್ನು ಬದುಕಿಸು ಎಂದು ಕೇಳಲು ಕಾರಣವೇನು?” ಎಂದು ಪ್ರಶ್ನಿಸಿದ. ಅದಕ್ಕೆ ಅವಳು “ಪುರುಷರಿಗೆ ಹೋಲಿಸಿದರೆ ಸ್ತ್ರೀಯರಿಗೆ ತಮ್ಮ ಮಕ್ಕಳ ಮೇಲೆ ಸ್ವಾಭಾವಿಕವಾಗೆ ಹೆಚ್ಚಿನ ಪ್ರೀತಿಯಿರುತ್ತದೆ. ಹಾಗಾಗಿ ನಾನು ಸ್ತ್ರೀರೂಪದಲ್ಲಿದ್ದಾಗ ನನ್ನ ಗರ್ಭದಿಂದುದಿಸಿದ ಮಕ್ಕಳನ್ನೆಲ್ಲ ಬದುಕಿಸುವಂತೆ ಕೇಳಿದೆ” ಎಂದು ತಿಳಿಸಿದಳು.
ಅವಳ ಉತ್ತರಕ್ಕೆ ಮೆಚ್ಚಿದ ಇಂದ್ರನು, ‘ನಾನು ನಿನಗೆ ಇನ್ನೊಂದು ವರವನ್ನು ಕೊಡಲು ಬಯಸುತ್ತೇನೆ; ಹೇಳು, ನಿನಗೆ ನಿನ್ನ ಮುಂಚಿನ (ಪುರುಷ) ರೂಪವನ್ನು ಕೊಡಲೊ ಅಥವಾ ಈ ಸ್ತ್ರೀರೂಪವೇ ಶಾಶ್ವತವಾಗಿರುವಂತೆ ಅನುಗ್ರಹಿಸಲೊ?’
ಅವಳು ತನಗೆ ಪುರುಷರೂಪವು ಮತ್ತೆಂದಿಗೂ ಬೇಡವೆಂದೂ, ಸ್ತ್ರೀರೂಪವನ್ನೇ ಶಾಶ್ವತವಾಗಿ ಪಡೆಯಬಯಸುವೆನೆಂದೂ ತಿಳಿಸಿದಳು. ಇಂದ್ರನಿಗೆ ಮತ್ತೆ ಅಚ್ಚರಿಯಾಯ್ತು, ಅವಳು ಹಿಗೇಕೆ ಬಯಸುತ್ತಿದ್ದಾಳೆಂದು. ಅದನ್ನೆ ಅವನು ಕೇಳಿದ : ‘ಅದೇಕೆ, ಮುಂಚಿನ ಪುರುಷರೂಪವನ್ನು ಬಯಸದೆ ಈಗಿನ ರೂಪದಲ್ಲೆ ಇರಲು ಬಯಸುತ್ತಿರುವೆ?’ ಎಂದು.
ಅದಕ್ಕೆ ಅವಳ ಉತ್ತರ:
ಸ್ತ್ರಿಯಾಃ ಪುರುಷಸಂಯೋಗೇ ಪ್ರೀತಿರಭ್ಯಧಿಕಾ ಸದಾ |
ಏತಸ್ಮಾತ್ಕಾರಣಾಚ್ಛಕ್ರ ಸ್ತ್ರೀತ್ವಮೇವ ವೃಣೋಮ್ಯಹಮ್ ||
- ಮಹಾಭಾರತ, ಅನುಶಾಸನ ಪರ್ವ ೧೨.೫೩
“ದೇವಾ! ಸ್ತ್ರೀ ಪುರುಷರ ಸಮಾಗಮವಾದಾಗ ಪುರುಷನಿಗಿಂತಲೂ ಸ್ತ್ರೀಗೇ ಹೆಚ್ಚಿನ ವಿಷಯಸುಖಪ್ರಾಪ್ತಿಯಾಗುತ್ತದೆ. ಈ ಕಾರಣದಿಂದಲೇ ನಾನು ಹೆಣ್ಣಾಗಿಯೇ ಇರಲು ಇಚ್ಛಿಸುತ್ತೇನೆ”
“ನಿಜವಾಗಿಯೂ, ನಾನು ಸ್ತ್ರೀಯಾಗಿದ್ದಾಗಲೆ ಹೆಚ್ಚಿನ ರತಿಸುಖವನ್ನು ಅನುಭವಿಸಿದ್ದೇನೆ. ಹಾಗಾಗಿ ನಾನು ಈ ರೂಪದಲ್ಲೆ ಉಳಿಯಲು ಬಯಸುತ್ತೇನೆ. ಅದನ್ನೇ ನನಗೆ ಅನುಗ್ರಹಿಸು”
ಇಂದ್ರನು ಅದಕ್ಕೆ ಒಪ್ಪಿ, ಭಂಗಾಸ್ವನನು ಮುಂದೆ ಸ್ತ್ರೀರೂಪದಲ್ಲೆ ಉಳಿಯುವಂತೆ ಅನುಗ್ರಹಿಸಿ, ತನ್ನ ಲೋಕಕ್ಕೆ ಮರಳಿದ.
ಟಿಪ್ಪಣಿ/ ಆಕರಗಳು:
೧. ಶ್ರೀಮನ್ಮಹಾಭಾರತ — ವ್ಯಾಸಭಾರತದ ಕನ್ನಡ ಸರಳಾನುವಾದ
೨. ಆಂಧ್ರಮಹಾಭಾರತಮು, ತಿಕ್ಕನ ಸೋಮಯಾಜಿ
೩. ಶ್ರೀ ಕೃಷ್ಣರಾಯ ಭಾರತ, ತಿಮ್ಮಣ ಕವಿ