ನೆನಪಿಗಿಂತ ಸಿಹಿಯುಂಟೇ?
ದೀಪಾವಳಿಗೆ ಇನ್ನೇನು ಕೆಲವು ದಿನಗಳಿರುವಂತೆಯೇ, ಹಬ್ಬಕ್ಕೆ ಬೇಕಾದ ಸರಕು ಸಾಮಗ್ರಿಗಳ ಜೋಡಣೆಯ ಕೆಲಸ ಶುರುವಾಗುತ್ತಿತ್ತು. ಇತರೆ ದಿನಸಿ ಸಾಮಾನುಗಳ ಕತೆ ಅಂತಿದ್ದರೆ, ವಿಶೇಷವಾಗಿ — ಊರಿನಲ್ಲಿ ಒಳ್ಳೆಯ ಗುಣಮಟ್ಟದ ರಾಜಮುಡಿ ಅಕ್ಕಿ ಹಾಗೂ ಬೆಲ್ಲದ ಹುಡುಕಾಟಕ್ಕೆ ಮೊದಲಾಗುತ್ತಿತ್ತು. ಹತ್ತಾರು ಅಂಗಡಿಗಳಲ್ಲಿ ನೋಡಿ ಮಾಡಿ ಈ ಎರಡೂ ವಸ್ತುಗಳನ್ನು ಮನೆಗೆ ತರಲಾಗುತ್ತಿತ್ತು. ಇನ್ನು, ಅಲ್ಲೆಲ್ಲೊ ಅಟ್ಟದ ಮೇಲೆ ವಿರಾಜಿಸುತ್ತಿದ್ದ ತಾಮ್ರ, ಹಿತ್ತಾಳೆಯ ದೊಡ್ಡದೊಡ್ಡ ತಪ್ಪಲೆ ಕೊಳಗಗಳೂ, ಒನಕೆ ಬಾಂಡ್ಲಿಗಳೂ -ಹಬ್ಬದ ಮುನ್ನಾ ದಿನವೇ- ಭೂಮಿಗೆ ಅವತರಿಸುತ್ತಿದ್ದವು.
ಹಿಂದಿನ ಸಂಜೆ: ಎಲ್ಲವನ್ನೂ ಚೊಕ್ಕ ಮಾಡಿ, ಕಲಶವನ್ನಿಟ್ಟು ಪೂಜೆ ಮಾಡುವುದರ ಜೊತೆಗೆ, ಅಕ್ಕಿಯನ್ನು ನೆನೆಹಾಕಿದ ತಪ್ಪಲೆಯೂ ಸೇರಿದಂತೆ, ಮಾರನೆಯ ದಿನದ ಮುಖ್ಯವಾದ ಅಡುಗೆಗೆ ಬೇಕಾದ ಎಲ್ಲ ಸಲಕರಣೆಗಳಿಗೂ ಅರಿಸಿನ-ಕುಂಕುಮವಿರಿಸಿ ಪೂಜಿಸಿ ಇಟ್ಟರೆ ‘ನೀರು ತುಂಬುವ’ ಹಬ್ಬ ಮುಗಿಯುತ್ತದೆ.
ಮಾರನೆಯ ದಿನ ನಸುಕಿಗೇ ಎದ್ದು, ಅಕ್ಕಿಯನ್ನು ಸೋಸಿ ಒಣಹಾಕುವರು. ಆ ವೇಳೆಗೆ ನಾವೂ ಎದ್ದು ಸ್ನಾನ ಮುಗಿಸಿ, ‘ಶಾಸ್ತ್ರ’ಕ್ಕೆಂದು ಒಂದಷ್ಟು ಪಟಾಕಿಗಳನ್ನೂ ಹಚ್ಚುತ್ತಿದ್ದೆವು.
ಅಷ್ಟರಲ್ಲಿ, ಈ ಹಿಂದೆ ಒಣಹಾಕಿ ಹರಡಿದ ಅಕ್ಕಿಯು ಗಾಳಿಗೆ ಹದವಾಗಿ ಆರಿಕೊಂಡು ಸಿದ್ಧವಾಗಿರುತ್ತಿತ್ತು. ಅತ್ತ ಪೂರ್ತಿ ಗಟ್ಟಿಯಾಗಿ ಒಣಗಿಯೂ ಇರದ, ಇತ್ತ ನೀರುನೀರಾಗಿಯೂ ಇರದ ಈ ಅಕ್ಕಿಯನ್ನು ಒರಳುಕಲ್ಲಿಗೆ ಹಾಕಿ ಒನಕೆಯಿಂದ ಕುಟ್ಟಿ ಹಿಟ್ಟನ್ನು ಮಾಡಬೇಕಿತ್ತು. ಹಾಗೆ ಕುಟ್ಟುವ ಅವಕಾಶ ನಮಗೇ ದೊರೆಯಬೇಕೆಂದು ನಾವು ಮಕ್ಕಳು ಜಗಳವಾಡುತ್ತಿದ್ದುದೂ ಉಂಟು. ಸರದಿಯಂತೆ ನಾವು ಒಬ್ಬರ ನಂತರ ಒಬ್ಬರು ಒನಕೆಯಿಂದ ಕುಟ್ಟಿ ಮಾಡಿದ ಹಿಟ್ಟನ್ನು ಜರಡಿ ಹಿಡಿದು, ನುಣುಪಾದ ಅಕ್ಕಿಹಿಟ್ಟನ್ನು -ಅಮ್ಮ- ಒಟ್ಟಿಕೊಳ್ಳುತ್ತಿದ್ದರು. ಇಲ್ಲಿಗೆ ನಮ್ಮ ಕೆಲಸ ಮುಗಿಯಿತು. ಮುಂದಿನದ್ದು ಮನೆಯಲ್ಲಿ ಪಾಕವಿಶಾರದರಾದ ನಾರಿಯರದು. ಆ ನಂತರ ನಾವೆಲ್ಲ ಅಡುಗೆಮನೆಯಿಂದಾಚೆಗೇ ಉಳಿಯಬೇಕಾಗುವುದು.
ಹಸನಾದ ಬೆಲ್ಲವನ್ನು ದೊಡ್ಡ ತಾಮ್ರದ ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ತಿರುವುತ್ತ ಪಾಕ ಮಾಡುವರು. ಪಾಕವು ಬನಿಯಾಗಿ ಬಂದ ನಂತರ, ಮುಂಚೆಯೇ ತಯಾರಿಸಿ ಇರಿಸಿಕೊಂಡಿದ್ದ ಹಿಟ್ಟನ್ನು ಬೆಲ್ಲದ ಪಾಕಕ್ಕೆ ಹಾಕಬೇಕು. ಹೀಗೆ ಮಾಡುವಾಗ, ಅಕ್ಕಿಹಿಟ್ಟು ಗಂಟುಗಂಟಾಗಿರದಂತೆ, ಹುಡಿಹುಡಿಯಾಗಿಯೇ ಹಾಕಬೇಕು. ತಿರುವುವುದು ಕೂಡ, ಗಂಟು ಮೂಡದಹಾಗೆ ಎಚ್ಚರದಿಂದ-ವೇಗದಿಂದ ತಿರುವಬೇಕು.
ಹಾಗಾಗಿ, ಒಬ್ಬರು ಸತತವಾಗಿ ಬೆಲ್ಲದ ಪಾಕವನ್ನು ತಿರುವುತ್ತಿದ್ದರೆ, ಇನ್ನೊಬ್ಬರಾರಾದರೂ ಅಕ್ಕಿಹಿಟ್ಟಿನ ಹುಡಿಯನ್ನು ಹಾಕಬೇಕು. ಹೀಗೆ, ಇರುವ ಹಿಟ್ಟಷ್ಟನ್ನೂ ಸುರಿದಮೇಲೂ ಸ್ವಲ್ಪಹೊತ್ತಿನವರೆಗೆ ಆ ಪಾಕವನ್ನು ಬೇಯಿಸಬೇಕು. ಈ ಮಧ್ಯೆ ಅದಾವಾಗಲೋ ಅರ್ಧ ಸೇರು ತುಪ್ಪವೂ ತಪ್ಪಲೆಯನ್ನು ಸೇರಿರುತ್ತಿತ್ತು. ಜೊತೆಗೆ ಏಲಕ್ಕಿ ಪುಡಿಯೂ ಇದ್ದೀತು. ಅಮ್ಮ ಹಾಗೂ ಅತ್ತೆಯೋ ದೊಡ್ಡಮ್ಮನೋ ಸೇರಿ ಈ ಕೆಲಸವನ್ನು ಪೂರೈಸುತ್ತಿದ್ದರು. ಹಾಗೆ ತಯಾರಿಸಿಕೊಂಡ ಬೆಲ್ಲ-ರಾಜಮುಡಿ ಅಕ್ಕಿಹಿಟ್ಟಿನ ಪಾಕವನ್ನು ಬೇರೊಂದು ಪಾತ್ರೆಗೆ ಹಾಕಿ ಆರಲು ಬಿಡುತ್ತಿದ್ದರು. ಇವಿಷ್ಟೂ ಆಗುವ ವೇಳೆಗೆ ಪೂರ್ವ ದಿಕ್ಕಿನಿಂದ ಸೂರ್ಯನು ಒಂದು ಇಣುಕುಹಾಕಲು ತೊಡಗುವ.
ಪಾಕವು ಚೆನ್ನಾಗಿ ಆರಿ ತಣ್ಣಗಾದಮೇಲೆ, ಅದರಿಂದ ಉಂಡೆಗಳನ್ನು ತೆಗೆದು ಅಂಗೈಯಲ್ಲಿ ಅದನ್ನು ಗುಂಡಗೆ ಒತ್ತಿಕೊಂಡು, ಬಾಣಲೆಯಲ್ಲಿ ಕಾಯುತ್ತಿರುವ ತುಪ್ಪದಲ್ಲಿ ಇಳಿಬಿಟ್ಟು, ‘ನೋಮಿ’ಗೆಂದು “ಕಜ್ಜಾಯ”ಗಳನ್ನು ತಯಾರಿಸುತ್ತಿದ್ದರು.
ಈ ವಿಶೇಷ ಖಾದ್ಯವು ತಯಾರಾಗುತ್ತಿದ್ದ ಬೆನ್ನಲ್ಲಿಯೇ ಹಬ್ಬದೂಟಕ್ಕೆ ಬೇಕಾದ ಇತರ ತಿನಿಸುಗಳೂ ರೂಪುಗೊಳ್ಳುವವು. ಈ ಸಿದ್ಧತೆಗಳೆಲ್ಲ ತೀರಿ ಪೂಜೆ ಮುಗಿಸಿ ಬರುವ ಹೊತ್ತಿಗೆ ಒಂದು ಮಧ್ಯಾಹ್ನವೇ ಆಗುತ್ತಿತ್ತು. ಆಗಷ್ಟೇ, ಊಟದೆಲೆಯಲ್ಲಿ ನಮಗೆ ಕಜ್ಜಾಯದ ದರ್ಶನವಾಗುತ್ತಿದ್ದುದು! ಬೆಳಗಿನ ಜಾವ ಮೂರೂ-ಮೂರೂವರೆಯಲ್ಲಿ ಒರಳಿನಲ್ಲಿ ನಮಗೆ ಅಕ್ಕಿಯಾಗಿ ಕಂಡದ್ದು ಮತ್ತೆ ಹೀಗೆ ಕಜ್ಜಾಯವಾಗಿ ಕಾಣಿಸುವ ಹೊತ್ತಿಗೆ ಅರ್ಧದಿನವೇ ಮುಗಿದಿರುತ್ತಿತ್ತು.
ನಮ್ಮಲ್ಲಿ ಕಜ್ಜಾಯ ಮಾಡುತ್ತಿದ್ದುದು ದೀಪಾವಳಿಯ ತಿಂಗಳಿನಲ್ಲಿಯಷ್ಟೇ. ಹಬ್ಬದ ದಿನ ಊರಿನಲ್ಲಿಯ ಪರಿಚಯದ ಮನೆಗಳಿಗೆ ಕಜ್ಜಾಯವನ್ನು ಬೀರುವುದಾದರೆ, ಆ ನಂತರದ ದಿನಗಳಲ್ಲಿ — ಬೆಂಗಳೂರಿನ ಬಂಧುಗಳ ಮನೆಗೆಲ್ಲ ಹೋಗುವಾಗ ಸೇರೆರಡು ಸೇರಿನಷ್ಟು ಕಜ್ಜಾಯವನ್ನು ಮಾಡಿಯೇ ತೆಗೆದುಕೊಂಡುಹೋಗುತ್ತಿದ್ದರು, ಅಮ್ಮ. ಆಗೆಲ್ಲ, ಬರಿಯ ಬಿಡಿಕಜ್ಜಾಯಗಳನ್ನಲ್ಲದೆ, ಸಜ್ಜಪ್ಪದಂತೆ ಕಾಣುವ “ಗೋಧಿ ಕಜ್ಜಾಯ”ವನ್ನೂ ಮಾಡುವುದಾಗುತ್ತಿತ್ತು. ಹಾಗಾಗಿ ದೀಪಾಳಿಯ ತಿಂಗಳ ಅವಧಿಯಲ್ಲಿ, ಮನೆಯಲ್ಲಿ ನಾಲ್ಕಾರು ಬಾರಿಯಾದರೂ ಕಜ್ಜಾಯದ ತಯಾರಿಯಾಗುತ್ತಿತ್ತು.
ವರ್ಷಕ್ಕೊಮ್ಮೆಯಷ್ಟೇ ಮನೆಯಲ್ಲಿ ಕಾಣಸಿಗುತ್ತಿತ್ತು ಎಂಬುದಕ್ಕೋ ಅಥವಾ ಅಷ್ಟೆಲ್ಲಾ ದೀರ್ಘ ಸಿದ್ಧತೆಯ ಅಗತ್ಯವಿದ್ದ ಖಾದ್ಯವೆಂದೋ, ನನಗೆ ಕಜ್ಜಾಯದ ಬಗ್ಗೆ ವಿಶೇಷ ಪ್ರೀತಿ. ಈಗಂತೂ ಇಲ್ಲೆಲ್ಲೋ ಹೊರದೇಶದಲ್ಲಿದ್ದೇನೆ. ಬೇಕುಬೇಕೆನಿಸಿದ ತಿನಿಸುಗಳು ಇಲ್ಲಿ ತಕ್ಷಣಕ್ಕಂತೂ ಸಿಗುವುದಿಲ್ಲ (ಸಿಗುವುದೇ ಇಲ್ಲವೆಂದೇನಲ್ಲ!); ಹಾಗಿರಲು, ಎಂದಾದರೊಮ್ಮೆ ಕಜ್ಜಾಯದ ನೆನಪಾದರೇನು ಮಾಡುವದು?
ಸುದೈವ! ನನಗೆ ಅಷ್ಟೊಇಷ್ಟೊ ಅಡುಗೆ ಮಾಡಲು ಬರುತ್ತದೆ. ಬೇಯಿಸಿದ್ದನ್ನು “ತಿನ್ನಬಹುದು, ಪರವಾಯಿಲ್ಲ” ಎನ್ನುವುದಕ್ಕಂತೂ ಏನೂ ಮೋಸವಿಲ್ಲ. ಆದ್ದರಿಂದಲೇ, ಇಲ್ಲಿಗೆ ಬಂದಮೇಲೂ ಒಂದೆರಡು ಸಾರಿ ಕಜ್ಜಾಯವನ್ನು ಮಾಡಿದ್ದಿದೆ.
ಏನಿಲ್ಲ, ಒಂದಳತೆ ನೀರನ್ನು ನಾಲ್ಕು ತಾಸು ನೆನೆಸಿ, ಅದನ್ನು ಅತ್ತ ಗಾಳಿಗೆ ಒಣಹಾಕಿ ಮಿಕ್ಸರಿನಲ್ಲೊ-ಬ್ಲೆಂಡರಿನಲ್ಲೊ ಹಾಕಿದರೆ ಅಕ್ಕಿಹಿಟ್ಟು ಸಿಗುತ್ತದೆ. ಅದನ್ನು ಜರಡಿ ಹಿಡಿದು, ಬೆಲ್ಲದ ಪಾಕಕ್ಕೆ ಹಾಕಿ ಕಲಸಿ ತಿರುವಿಕೊಂಡರೆ ಕಜ್ಜಾಯದ ಪಾಕವು ಸಿದ್ಧ. ಅದನ್ನಿಷ್ಟು ಎಣ್ಣೆಯಲ್ಲೊ ತುಪ್ಪದಲ್ಲೊ ಕರಿದರೆ ಕಜ್ಜಾಯವೂ ಪ್ರತ್ಯಕ್ಷ!
ಆಹಾ! ಇದಲ್ಲವೇ ಸರಳವಾದ ವಿಧಾನ. ಇಷ್ಟು ಸುಲಭವಾಗಿ ಮಾಡಬಹುದಾದ ತಿನಿಸಿಗಾಗಿ ಹಿಂದೆ ಅಷ್ಟೆಲ್ಲ ಸಿದ್ಧತೆ ಮಾಡುವುದೂ, ನೇಮ-ಗೀಮಗಳ ಗೋಜಲುಪಡುವುದೂ ಬೇಕಿತ್ತೇ ಎಂದು ಒಂದರೆಕ್ಷಣವಾದರೂ ನನಗೆ ಅನಿಸುವುದು. ಅದರಲ್ಲೂ “ಛೆ! ವರ್ಷಕ್ಕೆ ಒಮ್ಮೆ ಮಾತ್ರ ಮಾಡುವುದಂತೆ. ಹಾಗೇಕೆ?” ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಇದ್ದೇ ಇರುತ್ತದೆ.
“ಮನೆಯಲ್ಲಿ ನಡೆಸಿಕೊಂಡು ಬಂದ ಪರಿಪಾಠ ಹಾಗೆ” ಎಂದುಕೊಂಡರೂ, ಈಗ ಕೇವಲ ಆ ಯಾವದ್ವಿಧಾನದ ನೆನಪು ತರುವ ಮಾಧುರ್ಯವೇ ಬೇರೆ. ಎಷ್ಟೆಲ್ಲಾ ಹುಡುಕಾಟ ಕಸರತ್ತಿನ ನಂತರ, ಅಷ್ಟು ಜನರ ಶ್ರಮದಾನದಿಂದ ರೂಪುಗೊಳ್ಳುತ್ತಿದ್ದ ಅಂದಿನ ಕಜ್ಜಾಯದ ಬರಿ ‘ನೆನೆಪೇ’ ಇಂದು -ನಾನೊಬ್ಬನೇ ನಿಂತು ‘ಸುಲಭವಾಗಿ’ ತಯಾರಿಸಿದ ಕಜ್ಜಾಯಕ್ಕಿಂತ- ಹೆಚ್ಚು ಸಿಹಿಯಾದುದು, ರುಚಿಯಾದುದು ಎನಿಸುತ್ತದೆ.
ವಿ.ಸೂ: ಇಲ್ಲಿ ಸಿಗುವ ಬೆಲ್ಲವು ಬಹಳ ಕಂದು ಎಂದೋ ಅಥವಾ ನನ್ನ ಯಾವುದೊ ತಪ್ಪಿನ ಕಾರಣವಾಗಿಯೋ ಈ ಕಜ್ಜಾಯಗಳು ‘ಸೀದುಹೋಗಿವೆಯೆ?’ ಎನಿಸುವ ಬಣ್ಣಕ್ಕಿವೆ. ಆದರೆ ಅವು ಸೀದುಹೋಗಿರಲಿಲ್ಲವೆಂದು ಪ್ರಮಾಣ ಮಾಡಿ ಹೇಳುತ್ತೇನೆ. ಆದರೂ, ಈ ಬಗ್ಗೆ ಪಾಕಶಾಸ್ತ್ರ ಪರಿಣತರ ಆಕ್ಷೇಪಕ್ಕೊಳಗಾಗಬೇಕೆಂಬ ಸಂಪೂರ್ಣ ಎಚ್ಚರ ನನಗಿದೆ.