ದರ್ಶನ-ಸಂದರ್ಶನ

ಅದೆಷ್ಟೋ ವರ್ಷಗಳ ಹಿಂದೆ, ಅಂಗಡಿಯೊಂದರಲ್ಲಿ ಮೊದಲ ಬಾರಿಗೆ ಕಂಡದ್ದು; ಆಗ ಅಲ್ಲಿಯ ವಿವರವಾಗಲೀ, ಅದರ ಹಿನ್ನೆಲೆಯಾಗಲೀ ಅರ್ಥವಾಗದಿದ್ದರೂ, ಬಹಳ ಆಕರ್ಷಕವೆನಿಸಿತ್ತು. ಮುಂದೆ, ನನ್ನ ಪ್ರೌಢಶಾಲೆಯ ದಿನಗಳಲ್ಲಿ, ಗೀತಾ ಪ್ರೆಸ್ಸಿನವರು ಪ್ರಕಟಿಸಿದ್ದ -ಸಂಕ್ಷಿಪ್ತ/ಭಾವಾರ್ಥ ಸಹಿತವಾಗಿದ್ದ- ಭಗವದ್ಗೀತೆಯ ಪ್ರತಿಯಲ್ಲಿಯ ೧೦-೧೧ನೇ ಅಧ್ಯಾಯಗಳನ್ನೋದಿದಾಗಲೇ, ಭಗವಂತನ ವಿಶ್ವರೂಪ ದರ್ಶನದ ಹಿನ್ನೆಲೆಯು ತಿಳಿದದ್ದು. ಅದಲ್ಲದೆ, ಆ ಹೊತ್ತಿಗೆ ಒಂದೆರಡು ತೆಲುಗಿನ ಸಿನಿಮಾಗಳಲ್ಲಿ (ಬೇರೆ ಸಂದರ್ಭಗಳಲ್ಲಿ) ಕೂಡ ಶ್ರೀ ಕೃಷ್ಣನ ವಿರಾಡ್ರೂಪದ ಪರಿಚಯವಾಗಿತ್ತು.

ನನಗೋ ಗೀಳು — ವಿಶ್ವರೂಪದರ್ಶನದ ಚಿತ್ರವೊಂದನ್ನು ರಚಿಸಬೇಕೆಂದು. ಅದಕ್ಕಾಗಿ ಆಗಾಗ್ಗೆ ಪ್ರಯತ್ನಿಸಿ ಸೋಲುತ್ತಿದ್ದುದಂತೂ ನಡೆದೇ ಇತ್ತು. ಕೆಲವು ತಿಂಗಳ ಹಿಂದೆ ಯಾವುದೋ ವಿಷಯವಾಗಿ ಹುಡುಕುತ್ತಿದ್ದಾಗ, ೨೦೧೩ರಲ್ಲಿ ನಾನು ಬಿಡಿಸಿದ್ದ ರೇಖಾಚಿತ್ರವೊಂದೆರಡು ಕಂಡುವು.

ಅದೇ ಸಮಯಕ್ಕೊ ಏನೊ, ಟ್ವಿಟ್ಟರಿನವರೊಬ್ಬರು ‘ನೀವು ಶ್ರೀಕೃಷ್ಣನ ವಿಶ್ವರೂಪದ ಚಿತ್ರವನ್ನು ಬಿಡಿಸಿದರೆ ನೋಡಬೇಕೆಂಬ ಬಯಕೆಯಿದೆ’ ಎಂದು ಕೇಳಿದ್ದರು. ಹೀಗೆ ಅವು ಒಂದಕ್ಕೊಂದು ಪೂರಕವೂ, ಪ್ರೇರಕವೂ ಆಯಿತು. ಜೊತೆಗೆ ಆ ಪರಂಧಾಮನ ಕೃಪೆಯೂ ಸೇರಿತೇನೊ! ಅಂತೂ, ಮತ್ತೆ ಸ್ಕೆಚ್ ಮಾಡಲು ತೊಡಗಿದೆ. ಒಂದೆರಡು ವಾರಗಳವರೆಗೆ ಯಾವ ಪುಸ್ತಕದ ಯಾವ ಹಾಳೆಯಲ್ಲಿ ನೋಡಿದರೂ ಪರಮಾತ್ಮನೇ, ಅವನ ವಿಶ್ವರೂಪದ ನಾನಾ ವಿನ್ಯಾಸಗಳೇ…

ಕೆಲವು ಸ್ಕೆಚ್ಗಳು

ಅವುಗಳಲ್ಲಿ ಒಂದೆರಡು ವಿನ್ಯಾಸಗಳನ್ನು ಆಯ್ದುಕೊಂಡು, ಅಭ್ಯಾಸಕ್ಕೆಂದು ಅವಕ್ಕೆ ಬಣ್ಣ ಹಚ್ಚಿದ್ದೂ ಆಯಿತು. ಈ ಎಲ್ಲ ಕಾರುಬಾರು ನಡೆಯುವಷ್ಟರಲ್ಲಿ ಒಂದು ತಿಂಗಳೇ ಆಗುತ್ತ ಬಂದಿತ್ತು. ಸರಿ, ಅಂತೂ ಇಂತೂ ೪ ಅಡಿ ಅಗಲ ೫ ಅಡಿ ಎತ್ತರದ ಮಹಾ ಕ್ಯಾನ್ವಾಸೊಂದರ ಮೇಲೆ, ಆ ಸಚ್ಚಿದಾನಂದ ಸ್ವರೂಪನು ರೇಖಾಮಾತ್ರವಾಗಿ ಗೋಚರಿಸಿದ. ಅಲ್ಲಿಂದ ಮೊದಲಾಯಿತು, ಅವನ ಸಾಕ್ಷಾತ್ಕಾರ.

ಮೊದಲ ಹಂತದ ರೇಖಾಚಿತ್ರ

ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರಕ್ಕೆ ಬಣ್ಣ ಹಚ್ಚಲು ತೊಡಗಿದ್ದು; ಅದು ಒಂದು ಹಂತ ತಲುಪುವುದಕ್ಕೆ, ಇದೊ, ಇಷ್ಟು ದಿನಗಳಾದುವು. ಕೆಲವು ಸಣ್ಣಪುಟ್ಟ ತಿದ್ದುಪಡಿ ಮಾಡುವುದು ಇನ್ನೂ ಬಾಕಿಯಿದೆಯಾದರೂ, ಈಗಿನ ಮಟ್ಟಿಗೆ ಚಿತ್ರವು ಕೊನೆಯ ರೂಪಕ್ಕೆ ಬಂದಿದೆಯೆನ್ನಲು ಅಡ್ಡಿಯಿಲ್ಲ.

ನಾನು ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರದಲ್ಲಿ, ನನ್ನ ಕೆಲವು ಮಿತ್ರರು ಅದರ ವಿವರಗಳನ್ನೂ ಸ್ವಾರಸ್ಯವನ್ನೂ ವರ್ಣಿಸಲು ಕೇಳಿದ್ದರು. ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ತಿಳಿಸುವ ಬದಲು ಅದರ ಬಗ್ಗೆ ಸಣ್ಣದೊಂದು ಲೇಖನವನ್ನು ಬರೆದುಬಿಡೋಣವೆನಿಸಿತು. ಅದಕ್ಕಾಗಿ ಹೀಗೆ…

— — — — — — — — — — — — — — — — — — — — — — — — — — — — — — —

ಭಗವಾನ್ ಶ್ರೀ ಕೃಷ್ಣನೇನೊ ಅರ್ಜುನನಿಗೆ ಹೇಳಿದ — ‘ನಾನಾ ವಿಧವಾದ ದಿವ್ಯವಾದ ವರ್ಣಗಳ ಆಕೃತಿಗಳಿಂದ ಕೂಡಿದ, ನನ್ನ ಅಸಂಖ್ಯಾತ ರೂಪಗಳನ್ನು ನೋಡು. ಇದೊ, ಇಲ್ಲಿಯೆ ಎಲ್ಲ ಆದಿತ್ಯರನ್ನೂ, ವಸುಗಳನ್ನೂ, ರುದ್ರರನ್ನೂ ಮರುದ್ಗಣಗಳನ್ನೂ, ಅಪೂರ್ವವೂ ಹಾಗೂ ಆಶ್ಚರ್ಯಕಕರವೂ ಆದ ಮತ್ತಷ್ಟು ಸಂಗತಿಗಳನ್ನು ನೋಡು’ ಎಂದು. ಆ ದಿವ್ಯಸ್ವರೂಪವನ್ನು ಕಾಣಲಾಗುವಂತೆ ಅರ್ಜುನನಿಗೆ ದಿವ್ಯಚಕ್ಷುವನ್ನೂ ಪ್ರಸಾದಿಸಿದನು, ಪರಮಾತ್ಮ.

ಆ ಹಿನ್ನೆಲೆಯಲ್ಲಿ, ಈ ಯಾವದ್ವಿವರವನ್ನು -ನನ್ನ ಅಲ್ಪಶಕ್ತಿಗೆ, ಮತಿಗೆ ತೋರಿದಂತೆ- ಹಂತಹಂತವಾಗಿ ಕಲ್ಪಿಸಿಕೊಂಡದ್ದು ಹೀಗೆ:

ಎಲ್ಲಕ್ಕಿಂತ ಮೇಲೆ — ಮೊದಲ ಸ್ತರದಲ್ಲಿ: ನಡುವೆ ಸರ್ವಾಯುಧ [ಸುದರ್ಶನ, ಪಾಂಚಜನ್ಯ, ಕೌಮೋದಕಿ, ಶಾರ್ಙ್ಞ, ನಂದಕ] ಹಾಗೂ ಕಮಲವನ್ನು ಪಿಡಿದ ಮಹಾವಿಷ್ಣು. ಬಲಗಡೆಯಲ್ಲಿ ಕಾಣುವ ಇತರೆ ಮುಖಗಳ ಪೈಕಿ — ಶಿವ, ಆಗ್ನಿ, ಸ್ಕಂದ, ಗಣಪತಿ ಹಾಗೂ ಪ್ರಜಾಪತಿ. ಎಡ ಪಾರ್ಶ್ವದಲ್ಲಿ ಕಾಣುವುದು — ಇಂದ್ರ, ವರುಣ, ವಾಯು, ಬೃಹಸ್ಪತಿ ಹಾಗೂ ಮೃತ್ಯು/ಯಮ.

ಪ್ರಜಾಪತಿಯ ಮುಖದಿಂದ ಮಕ್ಕಳು/ಪ್ರಜಾಸೃಷ್ಟಿ ಹೊರಹೊಮ್ಮುತ್ತಿರುವಂತೆಯೂ, ಇತ್ತಕಡೆ, ಮರಣಹೊಂದಿದ ಎಲ್ಲ ಜೀವಿಗಳೂ ಯಮನ ಬಾಯನ್ನು ಹೊಗುತ್ತಿರುವಂತೆಯೂ ಚಿತ್ರಿಸಿದ್ದೇನೆ.

ಇನ್ನು, ಮಹಾವಿಷ್ಣುವಿನ ಕಂಠೀಹಾರದ ಮಣಿಯಲ್ಲಿ ಆ ಮಹಾಲಕ್ಷ್ಮಿಯ ರೂಪವು ಕಾಣುವಂತಿದೆ. ಮೊದಲಿಗೆ ನನ್ನ ಯೋಚನೆ ಬೇರೆಯಿತ್ತಾದರೂ, ಅದು ಹೇಗೊ ಕೃಷ್ಣದೇವರಾಯನ ‘ಆಮುಕ್ತಮಾಲ್ಯದ’ದ ನಾಂದೀಪದ್ಯದ ನೆನಪಾಗಿ, “ಕೌಸ್ತುಭಂಬುನಂದು ಆ ಕಮಲಾವಧೂಟಿಯುನ್ ಉದಾರಂದೋಪನ್…” ಎಂಬಂತೆ, ವಿಷ್ಣುವಿನ ವಕ್ಷಸ್ಥಲದಲ್ಲಿಯ ಮಣಿಹಾರದಲ್ಲಿ ದೇವಿಯ ಬಿಂಬ ಕಂಡಿತು.

ಇನ್ನು, ಹರಿಯ ನಾಭಿಯಿಂದ ಮೂಡಿದ ಕಮಲದಲ್ಲಿ ಜನಿಸಿದವನು, ಪದ್ಮಾಸನಸ್ಥಿತನಾದ ಬ್ರಹ್ಮ. ಅವನಿಂದ ಹೊರಹೊಮ್ಮಿದ ಚತುರ್ವೇದಗಳೂ ಮೂರ್ತಿರೂಪಿಗಳಾಗಿ ಅವನ ಹಿನ್ನೆಲೆಯಲ್ಲಿ ನಿಂತಿದ್ದಾರೆ.

ಹರಿಯ ಉದರದಲ್ಲಿ ಸಮಸ್ತಲೋಕಗಳೂ ಇವೆಯಷ್ಟೇ. ಅದರಲ್ಲಿ ಅಣುಮಾತ್ರವೆಂಬಂತೆ ಈ ಭೂಮಂಡಲವೂ ಉಂಟು. ಆ ಭೂಮಂಡಲವೇ ಹರಿಯ ಕಟೀಸೂತ್ರದ ನಡುವಿನ ಹರಳು. ಅದು ಸ್ಥಿತವಾಗಿರುವುದಾದರೂ ಮಹಾಕೂರ್ಮನ ಬೆನ್ನಿನ ಮೇಲೆ. ಕಾವ್ಯಗಳಲ್ಲಿಯಾದರೆ, ಕೂರ್ಮನ ಮೇಲೆ ಎಂಟು ದಿಗ್ಗಜಗಳೂ ಕೂಡಿ ಭೂಮಿಯನ್ನು ಎತ್ತಿಹಿಡಿದಿರುತ್ತವೆ. ಅದರ ಪ್ರತೀಕವಾಗಿ, ಅಷ್ಟದಿಗ್ಗಜಗಳೂ ಅಲ್ಲಿಯೇ ಇವೆ. [ಆವನ್ನೂ ರತ್ನಗಳನ್ನಾಗಿ ಕಲ್ಪಿಸಿಕೊಂಡರೆ, ಭೂಮಿಯೂ, ಎಂಟು ದಿಗ್ಗಜಗಳೂ ಸೇರಿ ನವರತ್ನಗಳು ಆ ಕಟೀಸೂತ್ರದ ಪದಕವನ್ನು ಅಲಂಕರಿಸಿವೆ].

ಎರಡನೆಯ ಸ್ತರದಲ್ಲಿ — ಗಾಯತ್ರೀ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಹಾಗೂ ಪಙ್ಕ್ತಿ ಎಂಬ ಏಳು ವೈದಿಕ ಛಂದಸ್ಸುಗಳ ಮೂರ್ತರೂಪೀ ದೇವಿಯರು.

ನಂತರದ ಸ್ತರದಲ್ಲಿ, ಬಲಗಡೆಗೆ — ಅಷ್ಟವಸುಗಳು ಹಾಗೂ ದ್ವಾದಶಾದಿತ್ಯರು; ಎಡಗಡೆಗೆ ಏಕಾದಶ ರುದ್ರರು ಹಾಗೂ ಅಶ್ವಿನೀ ದೇವತೆಗಳು [ಒಟ್ಟು ಮೂವತ್ಮೂರು ವೈದಿಕ ದೇವತೆಗಳು]

ಮುಂದೆ …

ಎತ್ತೆತ್ತೆಲೂ ಕಾಣಿಸುತ್ತಿರುವ ಭಗವಂತನ ವಿಶ್ವರೂಪದಲ್ಲಿಯ ಅನೇಕಾನೇಕ ವರ್ಣಾಕೃತಿಗಳನ್ನೂ, ಅವುಗಳ ಉಗ್ರತ್ವವನ್ನೂ ಕಂಡ ಅರ್ಜುನನು ಭಯಭ್ರಾಂತನಾದನು* [*ಮಾನ್ಯ ಡಿ.ವಿ.ಜಿ’ಯವರು ಹೇಳುವಂತೆ ‘ಭಗವಂತನು ತಾತ್ಕಾಲಿಕವಾಗಿ ಅರ್ಜುನನ ಕಣ್ಣಿನ ತೇಜಸ್ಸನ್ನು ಹೆಚ್ಚಿಸಿದ್ದರೂ ಅರ್ಜುನನ ಮನುಷ್ಯತ್ವ ಹಿಂದಿನಂತೆಯೇ ಇತ್ತು. ಮನಸ್ಸಿನ ಬಲವೇನೂ ಹೆಚ್ಚಿರಲಿಲ್ಲ. ಆದದ್ದರಿಂದ ಭಯ]. ಆದ್ದರಿಂದ ಅರ್ಜುನನು ಭಗವಂತನಲ್ಲಿ ಪ್ರಾರ್ಥಿಸಿದ — ‘ಸ್ವಾಮಿ, ನೀನು ಗದಾ-ಶಂಖ-ಚಕ್ರ-ಪದ್ಮಧಾರಿಯಾಗಿ ಕಾಣಿಸು’ ಎಂದು. ಹಾಗಾಗಿ, ಪರಮಾತ್ಮನು ಚತುರ್ಭುಜನಾಗಿ ಅರ್ಜುನನೆದುರು ಕಂಡ. ಮುಂದೆ, ತಾನು ಮೊದಲಿನಿಂದ ಕಂಡಿದ್ದ ಶ್ರೀಕೃಷ್ಣನ ರೂಪವನ್ನೇ ಅರ್ಜುನನು ಕಾಣುವಂತಾಯಿತು.

ಚಿತ್ರದ ಕೆಳಭಾಗದ ಹಿನ್ನೆಲೆಯಲ್ಲಿ, ಪಂಚಭೂತಗಳಿಗೆ ಸಂಬಂಧಿಸಿದ ಬಣ್ಣಗಳನ್ನು ಬಳಸಿದ್ದೇನೆ [ಈ ಬಗ್ಗೆ ಹುಡುಕುತ್ತಿದ್ದಾಗ, ದೇವುಡು ನರಸಿಂಹಶಾಸ್ತ್ರಿಗಳ ‘ಮಹಾದರ್ಶನ’ ಕಾದಂಬರಿಯಲ್ಲಿ ಸ್ವಲ್ಪಸ್ವಲ್ಪವಾಗಿ ಇದರ ವಿವರಗಳು ಗೋಚರಿಸಿದುವು].

ಟಿಪ್ಪಣಿ:

ಚಿತ್ರದ ರಚನೆಯಲ್ಲಿ ಸಹಾಯಕವಾದ ಕೃತಿಗಳು:

೧) ಶ್ರೀಮದ್ಭಗವದ್ಗೀತೆ

೨) ಜೀವನಧರ್ಮಯೋಗ

೩) Elements of Hindu Iconography — T.A.Gopinatha Rao

೪) ಮಹಾದರ್ಶನ — ದೇವುಡು

೫) ಅಮರಕೋಶ [ಅಷ್ಟದಿಗ್ಗಜಗಳ ಹೆಸರುಗಳಿಗಾಗಿ ನಾನು ಹುಡುಕುತ್ತಿದ್ದಾಗ, ಆ ವಿವರವನ್ನು ಒದಗಿಸಿದ ಮಿತ್ರ ಪ್ರತಾಪ ಸಿಂಹರಿಗೆ ಋಣಿ]

--

--

No responses yet