ಕಂಬದ ಮ್ಯಾಲಿನ ಗೊಂಬಿಯೇ..
ರಾಣಿ ಆಗಿನ್ನೂ ಹೊಸತಾಗಿ ಮದುವೆಯಾಗಿ ಆ ಮನೆಗೆ ಬಂದವಳು. ಆದರೆ, ಅವಳ ದುರದೃಷ್ಟ; ಗಂಡ ಅವಳನ್ನು ಸರಿಯಾಗಿ ಆದರಿಸದೆ, ಪ್ರತಿದಿನವೂ ಅಷ್ಟು ದೊಡ್ಡ ಮನೆಯಲ್ಲಿ ಅವಳೊಬ್ಬಳನ್ನೇ ಕೂಡಿಹಾಕಿ, ಹೊರಗೆ ಹೋಗುತ್ತಾನೆ. ಅವನು ತಿರುಗಿಬರುವವರೆಗೂ ಇವಳು ಮನೆಯಲ್ಲೇ ಬಂಧಿ! ತನ್ನ ನೋವು, ದುಃಖಗಳನ್ನು ಇವಳು ಯಾರಲ್ಲಿ ಹೇಳಿಕೊಂಡಾಳು?
ಇವಳ ಪುಣ್ಯಕ್ಕೆ, ಆ ಕುರುಡವ್ವ ತನ್ನ ಮಗನೊಟ್ಟಿಗೆ ಬಂದು, ಮನೆಯ ಕಂಡಿಯೊಂದರ ಬಳಿ ನಿಂತು ಇವಳೊಡನೆ ಒಂದಿಷ್ಟು ಕುಶಲಸಂಭಾಷಣೆ ನಡೆಸಿಹೋಗುತ್ತಾಳೆ, ಅಷ್ಟೆ. ಮುಂದೊಮ್ಮೆ, ಗಂಡನನ್ನು ಒಲಿಸಿಕೊಳ್ಳಲು ನೆರವಾಗುವ ಬೇರೊಂದನ್ನು ರಾಣಿಗೆ ಕೊಟ್ಟು, ಅದನ್ನು ಹಾಲಿನೊಡನೆ ಬೆರೆಸಿ — ಅಪ್ಪಣ್ಣನಿಗೆ ಕೊಡುವಂತೆ ಸೂಚಿಸಿ ಹೊರಟುಹೋಗುತ್ತಾಳೆ, ಕುರುಡವ್ವ.
ಇವಳಿಗೆ ಕುರುಡವ್ವನ ಮಾತಿನಲ್ಲಿ ಅಪಾರ ನಂಬಿಕೆ! ಇದರಿಂದಾದರೂ ತನ್ನ ಬಾಳು ಸರಿದಾರಿಗೆ ಬರಲಿ ಎಂದು ಬಯಸುವಳು, ಆಕೆ. ಅದಕ್ಕೇ, ಆ ದಿನ ಹಾಲಿನೊಡನೆ ಬೇರನ್ನು ಬೆರೆಸಿ, ಅಪ್ಪಣ್ಣನಿಗೆ ಕೊಡುವ ಸಂಕಲ್ಪ ಮಾಡಿದಳು.
ತನ್ನ ಕಷ್ಟಗಳು ಕಳೆದು, ಗಂಡನು ತನ್ನನ್ನು ಸ್ವೀಕರಿಸುತ್ತಾನೆಂದೂ ಆದರಿಸುತ್ತಾನೆಂದೂ ಊಹಿಸಿಯೇ ಹಿಗ್ಗುತ್ತಾಳೆ, ರಾಣಿ. ಆದರೂ, ಸಹಜವಾದ ನಾಚಿಕೆಯ ಜೊತೆಗೇ ಸ್ವಲ್ಪ ಹಿಂಜರಿಕೆ, ಶಂಕೆ — “ಮುಂದೆ ಏನಾಗುವುದೋ!” ಎಂಬ ಭಾವನೆ ಮೂಡುತ್ತಿವೆ — ಅವಳಲ್ಲಿ. ಇತ್ತ ನೋಡಿದರೆ ಇನ್ನೂ ಹೊತ್ತು ಹೋಗಿಲ್ಲ. ಅಪ್ಪಣ್ಣನು ಮನೆಗೆ ಬರುವುದು ಇನ್ನೂ ಎಷ್ಟೊತ್ತಿಗೋ ಏನೊ!
ತನ್ನ ಮನಸ್ಸಿನ್ನಲ್ಲೇಳುವ ಕಳವಳ ಕಾತರವನ್ನು ರಾಣಿಯಾದರೂ ಇನ್ನಾರ ಬಳಿ ಹೇಳಿಕೊಂಡಾಳು. ಮನೆಯ ಕಂಬಗಳ ಮೇಲಿನ ಬೊಂಬೆಗಳೂ, ಗೋಡೆಯ ಮೇಲಿನ ಚಿತ್ತಾರಗಳೇ ಅವಳ ಗೆಳತಿಯರು, ಹಿತೈಷಿಗಳು. ಅವರೊಟ್ಟಿಗಲ್ಲದೆ ಇನ್ನಾರಲ್ಲಿ ಹೇಳಿಯಾಳು?
ಇಂದು ಆ ಕಂಬದ ಮೇಲಿನ ಬೊಂಬೆಗಳ ಮೊಗದಲ್ಲಿನ ನಗೆಯೂ ರಾಣಿಗೆ ಹೊಸತಾಗಿಯೆ ಕಾಣಿಸುತ್ತಿದೆ. ಅವೆಲ್ಲ ‘ಇವಳ ಮನೋಭಿಲಾಷೆ ಫಲಿಸುವುದೆಂದು’ ಸೂಚಿಸುತ್ತ, ಇವಳನ್ನು ಸರಸದಿಂದ ಅಣಕಿಸುತ್ತ ನಿಂತಿರುವಂತೆ ತೋರುತ್ತಿದೆ. “ಈ ದಿನ ವಿಶೇಷವಾದುದೇನೋ ನಡೆಯುತ್ತದೆ” ಎಂಬ ಭಾವವನ್ನು ಬೀರುತ್ತ, ಇವಳೊಡನೆ ಏನೊ ಹೇಳುತ್ತಿರುವಂತೆ ನೋಡುತ್ತಿವೆ — ಆ ಬೊಂಬೆಗಳು. ಆದರೂ, ಅವುಗಳ ನಗೆಯನ್ನೂ, ಅದು ಧ್ವನಿಸುವ ಭಾವವನ್ನೂ ನಂಬಬಹುದೊ ಬಾರದೊ ಎಂಬ ಶಂಕೆಯಿವಳದು.
ಅದಕ್ಕೇ ಅವನ್ನೇ ಕೇಳುವಳು — “ಕಂಬದ ಮೇಲಿನ ಗೊಂಬೆಗಳೇ, ನಿಜವಾಗಿಯೂ ನಾನು ನಿಮ್ಮ ನಗೆಯನ್ನು (ಆ ಮೂಲಕ, ಅದು ಸ್ಫುರಿಸವ ಭಾವವನ್ನು) ನಂಬಬಹುದೆ?” ಎಂದು. ಅಂತೆಯೇ ಗೋಡೆಯ ಮೇಲಿನ ಚಿತ್ರಗಳನ್ನೂ ಕೇಳುವಳು, “ಇದೆಲ್ಲ ಸರಿಹೋಗುತ್ತದೆಯೇ, ಗಮನವಿಟ್ಟು ಉತ್ತರಿಸು” ಎಂದು. ಒಂಟಿಯೆನಿಸುವ ತನ್ನ ಬಾಳಿನಲ್ಲಿ ಕವಿದಿರುವ ಮಬ್ಬು ಇನ್ನಾದರೂ ಕರಗುವುದೋ, ಇನ್ನಾದರೂ ಒಳ್ಳೆಯ ದಿನಗಳು ಬಂದು, ತನ್ನ ಜೀವನವೊಂದು ಹಬ್ಬವಾಗುವುದೋ ಎಂಬ ಜಿಜ್ಞಾಸೆ, ಅವಳದು.
ಬೊಂಬೆಗಳೊಟ್ಟಿಗೆ, ವರ್ಣಚಿತ್ರಗಳೊಟ್ಟಿಗೆ ಸಂಭಾಷಿಸುವುದು ವಿಚಿತ್ರವೆನಿಸಬಹುದು. ಆದರೆ, ಅದೇನು ಚಿತ್ತವಿಕಾರವಲ್ಲ. ಪ್ರೇಮಿಗಳು ತಮ್ಮ ನಲ್ಲನಲ್ಲೆಯರಿಗಾಗಿ ಕಾದಿರುವ ಹೊತ್ತಿನಲ್ಲಿ ಅನುಭವಿಸುತ್ತಿದ್ದ ವಿಚಿತ್ರಾವಸ್ಥೆ, ಅದು. ಕಾವ್ಯಗಳಲ್ಲಿಯೂ ಕೇಳಿಲ್ಲವೆ — ತನ್ನ ಪ್ರಿಯನಿಗಾಗಿಯೊ ಪ್ರಿಯತಮೆಗಾಗಿಯೊ ಕಾದಿರುವ ಪ್ರೇಮಿಯು ಚಂದ್ರ ತಾರಕೆ, ಗಿಡಮರಗಳೆನ್ನದೆ ಎಲ್ಲ ಚರಾಚರ ವಸ್ತುವಿನೊಂದಿಗೂ ತನ್ನ ದುಗುಡ, ಕಳವಳ ಕಷ್ಟನಷ್ಟಗಳನ್ನು ಹೇಳಿಕೊಳ್ಳುವ ಬಗ್ಗೆ? ಅಲ್ಲಿ ಯಾರೊ ಒಬ್ಬರು (ಒಂದು ಕಾವ್ಯದಲ್ಲಿ) ಮಾತಾಡುವುದಿಲ್ಲವೆ — “ಎಲೆ ಕನ್ನಡಿ ಕಳಸಮೆ ಕಥೆಯಂ ಕೇಳ್ದಿರೆ..?” ಎಂದು. ಪಾಪ, ನಮ್ಮ ರಾಣಿಯ ಪಾಡೂ ಅಷ್ಟೇ.
ಹುಡುಗಿ, ಮನೆಗೆ ಬರಲಿರುವ ತನ್ನ ಗಂಡನಿಗಾಗಿ ಸಿದ್ಧಳಾಗುತ್ತಿದ್ದಾಳೆ; ತಾನು ಸಿಂಗರಿಸಿಕೊಳ್ಳುವ ಒಂದೊಂದು ಹಂತದಲ್ಲೂ -ಇನ್ನು ಮೇಲೆ ಪ್ರತಿನಿತ್ಯವೂ ಹೀಗೆಯೆ ಇರಬಾರದೆ ಎಂಬ ಬಯಕೆ ಮೂಡುತ್ತಿದೆ, ಅವಳಲ್ಲಿ.
ಅಗ್ನಿಯು ಸತ್ಯಸ್ವರೂಪಿಯಲ್ಲವೆ.? ಈ ಹುಡುಗಿ ಅತ್ತ ನೇರವಾಗಿ ಅಗ್ನಿಯನ್ನೇ (ಕೆಂಡ) ಕೇಳುತ್ತಿದ್ದಾಳೆ — ಇಂದಿನ ಈ ಅಭ್ಯಂಜನವು ನಿತ್ಯವೂ ನಡೆಯುವಂತಾದೀತೇ ಎಂದು. ಸೀಗೇಕಾಯಿಯ ಘಮಘಮವೂ ನಿತ್ಯವೂ ಹೀಗೆಯೇ ಹರಡಿರಲಿ, ತನ್ನ ನಲ್ಲನ ಪ್ರೇಮವನ್ನು ಆಗಿಂದಾಗ್ಗೆ ಉದ್ದೀಪಿಸುತ್ತಿರಲಿ ಎಂದು ಕೇಳುವಳು, ಅವಳು.
ತಮ್ಮ ಬಾಳಿನಲ್ಲಿ ನಗುವು ಸದಾ ಇರುವಂತೆ ಹರಸೆಂದು, ಆ ದೇವರಿಗೆ ಹೂವು ಹಣ್ಣನ್ನು ಅರ್ಪಿಸಿ ಬೇಡುವಳು. ಜೊತೆಗೆ, ತನ್ನ ಗಂಡ ಬರಿ ಇಂದಷ್ಟೇ ಅಲ್ಲ, ಪ್ರತಿದಿನವೂ ತಪ್ಪದೇ ತನ್ನ ಮನೆಗೇ ಬರಲೆಂದು ಹರಸಲು ಬೇಡಿ, ದೀಪವನ್ನು ಬೆಳಗುವಳು, ರಾಣಿ.
ಪಾಪ! ಇನ್ನೇನು ಮಾಡಿಯಾಳು; ಅಪ್ಪಣ್ಣನು ಅವಳಾರೊ ಕಾಸಿನ ಹೆಂಗಸಿನ ಜೊತೆಸೇರಿ ಹಾಳಾಗಿದ್ದಾನೆ. ಇನ್ನುಮುಂದಾದರೂ ಕೈಹಿಡಿದ ಹೆಂಡತಿಯೊಡನೆ ಕಲೆತು ನೆಟ್ಟಗೆ ಬಾಳುವೆ ನಡೆಸಬೇಡವೇ?
ಇವಳೇನೊ ಚೆನ್ನಾಗಿ ಸಿಂಗರಿಸಿಕೊಂಡು ತಯಾರಾದಳು. ಆದರೆ ಆದದ್ದೇ ಬೇರೆ! ಆದರೆ, ಕೊನೆಗೆ ಎಲ್ಲವೂ ಸುಖಾಂತವಾಯಿತೆಂಬುದೇ ಸಮಾಧಾನ ಪಡಬೇಕಾದ ಸಂಗತಿ.
ಕಾರ್ನಾಡರ ನಾಟಕ “ನಾಗಮಂಡಲ”ವನ್ನು ಆಧರಿಸಿ ತಯಾರಿಸಿದ ಚಿತ್ರದ ಎಲ್ಲ ಹಾಡುಗಳೂ ಬಹಳ ಚೆನ್ನಾಗಿವೆ. ಅದರಲ್ಲಿಯೂ ಇದು ಮತ್ತು “ಈ ಹಸಿರು ಸಿರಿಯಲಿ…” ಹಾಡುಗಳು ನನಗೆ ಅತ್ಯಂತ ಪ್ರಿಯವಾದ ಗೀತೆಗಳು. ಇತ್ತೀಚೆಗೊಮ್ಮೆ ಟ್ವಿಟ್ಟರಿನಲ್ಲಿ ಈ ಹಾಡಿನ ಅರ್ಥದ ಬಗ್ಗೆ ಯಾರೊ ಚರ್ಚಿಸುತ್ತಿದ್ದರು. ಆ ಹಿನ್ನೆಲೆಯಲ್ಲಿ ಈ ಸಣ್ಣ ಲೇಖನ.
ಹಾಡಿನ ಸಾಹಿತ್ಯ
ಕಂಬದs ಮ್ಯಾಲಿನs ಗೊಂಬಿಯೇ
ನಂಬಲೇನs ನಿನ್ನ ನಗೆಯನ್ನ
ಭಿತ್ತಿಯs ಮ್ಯಾಲಿನ ಚಿತ್ತಾರವೇ
ಚಿತ್ತಗೊಟ್ಟು ಹೇಳೆ ಉತ್ತsರವ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ -
ಮಬ್ಬು ಹರಿಯುವುದೇನs, ಹಬ್ಬವಾಗುವುದೇನs?
||ಕಂಬದ||
ನೀರೊಲೆಯಾ ನಿಗಿಕೆಂಡ ಸತ್ಯವೇ
ಈ ಅಭ್ಯಂಜನವಿನ್ನೂ ನಿತ್ಯವೇ?
ಒಳ್ಳೇ ಘಮಗುಡುತಿಯಲ್ಲೇ ಸೀಗೆಯೇ
ನಿನ್ನ ವಾಸನೀ ಹರಡಿರಲಿ ಹೀಗೆಯೇ
||ಒಬ್ಬಳೇ ನಾನಿಲ್ಲಿ||
ಒಪ್ಪಿಸುವೆ ಹೂಹಣ್ಣು ಭಗವಂತ
ನೆಪ್ಪೀಲೆ ಹರಸು ನಗೀ ಇರಲೆಂತ
ಕಪ್ಪುರವಾ ಬೆಳಗುವೆ ದೇವನೇ
ತಪ್ಪದೇ ಬರಲೆನ್ನ ಗುಣವಂತ
||ಒಬ್ಬಳೇ ನಾನಿಲ್ಲಿ||
ಕಂಬದs ಮ್ಯಾಲಿನs ಗೊಂಬಿಯೇ
ನಂಬಲೇನs ನಿನ್ನ ನಗೆಯನ್ನ
ಭಿತ್ತಿಯs ಮ್ಯಾಲಿನ ಚಿತ್ತಾರವೇ
ಚಿತ್ತಗೊಟ್ಟು ಹೇಳೆ ಉತ್ತsರವ