ಒಂದು ಮೊಟ್ಟೆಯ ಕಥೆ
ನೆನ್ನೆ ಮಲಗುವ ಮುನ್ನ, ಆ ಸಂಜೆಯಷ್ಟೆ ತೆಗೆದ ನನ್ನ ಚಿತ್ರವೊಂದನ್ನು ವಾಟ್ಸಾಪಿನ ಪ್ರೊಫೈಲ್ ಫೋಟೊವನ್ನಾಗಿರಿಸಿ ಮಲಗಿದ್ದೆ. ಬೆಳಿಗ್ಗೆ ಎದ್ದವನಿಗೆ, ಬಂದಿದ್ದ ನೂರಾರು ಮೆಸೇಜುಗಳ ಪೈಕಿ, ಗೆಳೆಯರೊಬ್ಬರು ಕಳಿಸಿದ್ದ "ಕಟಿಂಗ್ ಮಾಡಿಸಿಕೊಳ್ಳಿ" ಎಂಬ ಸಂದೇಶವು ಗಮನ ಸೆಳೆಯಿತು.
ಮೆಸೇಜನ್ನೋದಿದ ನಂತರ ನನ್ನ ಅವತಾರವನ್ನೊಮ್ಮೆ ನೋಡಿಕೊಂಡೆ. ತಲೆಯ ಮೇಲೊಂದು ಗೊಂಡಾರಣ್ಯವೇ ಕಂಡಿತು. "ನಿಜ. ಕಟಿಂಗ್ ಮಾಡ್ಸಿದ್ದಿದ್ರೆ ಚೆನ್ನಾಗಿರ್ತಿತ್ತು" ಅನಿಸಿತು.
ಆದರೇನು ಮಾಡುವುದು! ಈ ಹಾಳಾದ ಕೊರೊನಾ ದೆಸೆಯಿಂದ, ಮನೆಯಿಂದ ಹೊರಗೆ ಅಡಿಯಿಟ್ಟು ಒಂದೂಕಾಲು ಯುಗವೇ ಆಗಿಹೋಗಿದೆ.
ಅವಕಾಶವಿದ್ದಾಗಲೇ ಸಾಕಷ್ಟು ದಿನಸಿ ಗಿನಸಿಯ ಶೇಖರಣೆ ಮಾಡಿದ್ದರಿಂದ ಆಗಿಂದಾಗ್ಗೆ ಹೊರಗೆ ಹೋಗಬೇಕಾದ ಅಗತ್ಯವಿಲ್ಲ. ಇನ್ನು, ಹಾಲು ಹಣ್ಣು ತರಕಾರಿಯಂತಹ ವಸ್ತುಗಳನ್ನು ಆನ್ಲೈನಿನಲ್ಲಿ ಆರ್ಡರ್ ಮಾಡಿದರೆ ಮನೆಮುಂದೆಯೇ ಬಂದೊದಗುತ್ತದೆ. ಹಾಗಾಗಿ, ಇಲ್ಲಿಯವರೆಗೆ ಮನೆಯಿಂದ ಆಚೆಗೆ ಹೋಗುವ ಪ್ರಮೇಯವೇ ಬಂದಿರಲಿಲ್ಲ. ಹೀಗಿರಲು, ಯಃಕಶ್ಚಿತ್ ಕಟಿಂಗಿಗಾಗಿ ಹೊರಗಡೆಗೆ ಹೋಗುವುದೇ? ಒಂದ್ವೇಳೆ ನಾನು ಹೋದರೂ ಕಟಿಂಗ್ ಶಾಪ್ಗಳಾದರೂ ತೆಗೆದಿದ್ದಾವೇ…? ಇರಲಿಕ್ಕಿಲ್ಲ. ಇಲ್ಲ! ಅದಾಗದು! ಮತ್ತೆ ಮುಂದಿನ ದಾರಿ ಯಾವುದು!?
ಈ ಕ್ವಾರೆಂಟೈನ್/ಲಾಕ್ ಡೌನ್’ಗಳ ಅವಧಿಯಲ್ಲಿ ಒಬ್ಬೊಬ್ಬರೂ ತಮ್ಮನ್ನು ತಾವು ಹೊಸಹೊಸ ಹವ್ಯಾಸ ಅಭ್ಯಾಸಗಳಲ್ಲಿ ತೊಡಗಿಸಿಕೊಂಡಿರುವ ವಿಷಯ ಬಹುಶಃ ಗೊತ್ತಿರುವಂಥದ್ದೇ…
ಎಂದೂ ಅಡುಗೆಯನ್ನೇ ಮಾಡಿ ಅರಿಯದ ಮಹಾಶಯರೂ ಭೀಮಸೇನ ನಳಮಹಾರಾಜರ ವೇಷ ಧರಿಸಿ ಮೆರೆದಿದ್ದಾರೆ. ಇನ್ನೊಂದಷ್ಟು ಸ್ನೇಹಿತರು ಲಲಿತಕಲೆಗಳಲ್ಲಿ, ಓದುಬರೆಹಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಹತ್ತಾರು ಮಾದರಿಗಳಿದ್ದಾಗಿಯೂ, ಇತ್ತ ನಾನು ಮಾತ್ರ ಮೊದ್ದುರಾಮನಂತೆ ಸಮಯ ಸಿಕ್ಕಾಗೆಲ್ಲ ಕುಂಭಕರ್ಣ ಮಂತ್ರವನ್ನು ಜಪಿಸಿ ನಿದಿರಾದೇವಿಯ ಕಾಲುಹಿಡಿಯುತ್ತಿದ್ದೇನೆ.
ಛೇ! ಎಂಥಾ ಅವಮಾನ. ನಾನು ಈಗಲಾದರೂ ಎಚ್ಚತ್ತುಕೊಳ್ಳಬೇಕು. ಹೊಸದಾಗಿ ಏನನ್ನಾದರೂ ಪ್ರಯತ್ನಿಸಬೇಕು.
ನನ್ನ ಸ್ನೇಹಿತರು ಕಳಿಸಿದ್ದ ಆ ಒಂದೇ ಒಂದು ಸಂದೇಶವು ನನ್ನಲ್ಲಿ ಈ ಎಲ್ಲ ಆಲೋಚನೆ, ಜಿಜ್ಞಾಸೆಗಳನ್ನೂ ಪ್ರಚೋದಿಸಿತು. ಆ ಒಂದು ಕಿಡಿ ತಾಗಿ ನನ್ನಲ್ಲಿ ಸ್ಫೂರ್ತಿಯ ಜ್ವಾಲೆ ಉರಿದೆದ್ದಿತು.
ಸರಿ, ಮನಸ್ಸು ಎಂದೋ "ಆ ಹಾಳು ಕಟಿಂಗನ್ನು ನಾನೇ ಮಾಡಿಕೊಳ್ಳಬಾರದೇಕೆ" ಎಂಬ ಭಾರೀ ತೀರ್ಮಾನಕ್ಕೆ ಬಂದಾಗಿತ್ತು.
ಏನಿಲ್ಲ, ನನ್ನ ಸ್ನೇಹಿತರ ಗುಂಪಿನಲ್ಲೇ ಒಂದಿಬ್ಬರು (ವಿವಾಹಿತರು) ಮನೆಯವರ ಸಹಾಯದಿಂದ ಹೇಗೊ ತಮ್ಮ ಅವತಾರಗಳನ್ನು ಬದಲಾಯಿಸಿಕೊಂಡು, ಆ "Before-After" ಚಿತ್ರಗಳನ್ನು ಹಾಕಿದ್ದರಲ್ಲ; ಅದಕ್ಕಿಂತ ಉತ್ತೇಜನ, ಪ್ರೇರಣೆ ಇನ್ನೇನು ಬೇಕು. ಇದರಲ್ಲಿ ನನಗೆ ಕಂಡ ಒಂದೇ ಒಂದು ಕೊರತೆ ಎಂದರೆ, ನಾನಿನ್ನೂ ಅವಿವಾಹಿತನೆಂಬುದು. ಅರೆ, ಅದೇನಂಥಾ ಕಷ್ಟವಲ್ಲ ಬಿಡು. ಯೂಟ್ಯೂಬಿನಲ್ಲಿ ಹುಡುಕಿದರೆ "self haircut" ಬಗ್ಗೆ ಒಂದ್ಸಾವಿರದಷ್ಟು ವೀಡಿಯೊಗಳು ಸಿಕ್ಕಾವು. ಅವನ್ನ ಚಾಚೂ ತಪ್ಪದೆ ಅನುಸರಿಸಿದರೆ ಆಯಿತು - ಎಂದು ಸಮಾಧಾನಪಟ್ಟುಕೊಂಡು, ಅಂತೂ ಹೊಸ ಸಾಧನೆಯೊಂದಕ್ಕೆ ಸಂಕಲ್ಪ ಮಾಡಿದೆ.
ಬೇಕಿದ್ದ ಸಲಕರಣೆಗಳಾದರೂ ಸುಲಭಸಾಧ್ಯವೇ ಆದುದರಿಂದ ಹೆಚ್ಚು ವಿಳಂಬವಾಗಲಿಲ್ಲ. ಒಳ್ಳೆ ಸಮಯ ನೋಡಿ ರಂಗಕ್ಕೆ ಧುಮುಕಿದೆ.
ಮೊದಮೊದಲಿಗೆ ಎಲ್ಲವೂ ಬಹಳ ಸರಾಗವೆನಿಸಿತು. "ಅರೆ, ಈ ಕೆಲ್ಸ ಇಷ್ಟ್ ಸುಲ್ಭ ಅಂತ ಅಂದ್ಕೊಂಡಿರ‌್ಲಿಲ್ಲ. ಈ ಸಂಗ್ತಿ ಮೊದ್ಲೇ ಹೊಳೆದಿದ್ರೆ ಪ್ರತಿ ಸಾರಿ ಆ ಸಲೂನಿನವರಿಗೆ ಮೂವತ್ತು ಡಾಲರ್* ಕೊಡೋದು ತಪ್ತಿತ್ತು (ಟಿಪ್ಪನ್ನೂ ಸೇರಿಸಿ ೩೦). ಅದೂ ಅಲ್ದೇ, ಅಲ್ಲಿಗೆ ಹೋದಾಗ್ಲೆಲ್ಲ ಪೇಚಾಟ. ನಾನು ಹೇಳೋದು ಅವಳಿಗೆ ಅರ್ಥವಾಗಲ್ಲ, ಅವಳು ಹೇಳೋದು ನನಗೆ ಆಗಲ್ಲ. ಯಾವಾಗ್ಲೂ ಗೋಳಿನ ಕಥೆ; ಇನ್ಮುಂದೆ ಆ ತೊಂದ್ರೆ ಇರಲ್ಲ…" ಅಂತೆಲ್ಲ ಮನಸ್ಸಿನಲ್ಲೇ ವಾದಿಸಿದ್ದೂ, ನನ್ನನ್ನು ನಾನೇ ಬಹುವಾಗಿ ಮೆಚ್ಚಿಕೊಂಡಿದ್ದೂ ಆಗಿತ್ತು.
ಇನ್ನೇನು ಎಲ್ಲ ಮುಗಿಯುವ ಹಂತಕ್ಕೆ ಬಂದಾಗ, ಮೊಬೈಲಿನಲ್ಲಿ ಬೇರೆಬೇರೆ ಕೋನಗಳಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡು ಪರಿಶೀಲಿಸಲಾಯ್ತು. ಆಗ ಒಂದಿಷ್ಟು ಸಣ್ಣಪುಟ್ಟ ಓರೆಕೋರೆಗಳು ಕಾಣಿಸಲಾಗಿ, "ಮೊದಲ ಪ್ರಯತ್ನ; ಎಲ್ಲವೂ ಚೊಕ್ಕವಾಗಿ ಆದ್ರೆ ಮನಸ್ಸಿಗೂ ಒಂದ್ರೀತಿ ಸಮಾಧಾನ. ಹೇಗೂ ಸಾಕಷ್ಟ್ ಸಮಯ ಇದೆ. ಮುಗಿಸೇಬಿಡುವಾ" ಅಂತಂದುಕೊಂಡು, ಮತ್ತೆ ಕೇಶವಿನ್ಯಾಸಕ್ಕೆ ತೊಡಗಿದ್ದಾಯ್ತು.
ಆದರೆ, ಯಾವುದೊ ವಿಷಘಳಿಗೆಯೊಂದರಲ್ಲಿ ಒಂದು ಅಚಾತುರ್ಯವಾಯ್ತು. ಸಾಧನೆಯ ತುತ್ತತುದಿಗೇರಿದ್ದವನಿಗೆ ಕಾಲು ಎಡವಿತು. ಕರ್ಮ! ಒಂದು ಕಡೆಯ ಕೂದಲಿನ ಸ್ಥಿತಿ ಅಸ್ತವ್ಯಸ್ತವಾಯಿತು (ನಿಜ ಹೇಳಬೇಕಂದ್ರೆ, ಅತ್ತಕಡೆಗೆ ಕೂದಲೇ ಇಲ್ಲದಂತಾಯ್ತು). ನಾನು ಯಾವುದು ಆಗಬಾರದು ಎಂದು ಬಹುವಾಗಿ ಹೆದರಿದ್ದೆನೊ ಅದೇ ಆಯ್ತು.
ಇನ್ನು ಬೇರೆ ವಿಧಿಯಿಲ್ಲ. ಆದ ಪ್ರಮಾದವನ್ನು ಸರಿಪಡಿಸುವ ದಾರಿಯಂತೂ ಮೊದಲೇ ಇಲ್ಲ. ಕೊನೆಗೆ ಉಳಿದದ್ದು ಒಂದೇ ಮಂತ್ರ; ಆದಷ್ಟು ಬೇಗ ಪೂರ್ತಿಯಾಗಿ ತಿರುಪತಿ ಗುಂಡನ್ನು ಆವಾಹಿಸಬೇಕು. ಹಾಗಾಗಿ ಕ್ಲಿಪ್ಪರನ್ನು ಸೊನ್ನೆಯ ನಂಬರಿಗೆ ಹಾಕಿ ತಲೆಯನ್ನು ಬೋಳಿಸಿಕೊಳ್ಳಬೇಕಾಯಿತು.
ಆಮೇಲಿನ ಕಾರ್ಯಕಲಾಪಗಳನ್ನು ಶೋಕತಪ್ತನಾಗಿ ಮುಗಿಸಿ, ಈಗಿನ ಚಿತ್ರವನ್ನು ನನ್ನ ಆ ಗೆಳೆಯನಿಗೆ ಕಳುಹಿಸಿದೆ. ಅವರಂತೂ ನನ್ನ ಕೆಲಸವನ್ನು ಮೆಚ್ಚಿಕೊಂಡರು (ಬೇರೆ ದಾರಿಯಿರಲಿಲ್ಲವೇನೊ!). ಇನ್ನೊಬ್ಬ ಸ್ನೇಹಿತ ನನ್ನ ಚಿತ್ರವನ್ನು ಕಂಡು "You look like freshly cooked egg" ಎಂದು ಪ್ರಶಂಸಿಸಿದರು.
ಹೀಗೆ ಶುರುವಾಯ್ತು, ಒಂದು ಮೊಟ್ಟೆಯ ಕಥೆ!