ಐದು ಮಾತುಗಳು — ೯
೧. ಆಲ್ಫಾ ಒಮೇಗಾ
“I am Alpha and Omega, the beginning and the ending, saith the Lord, which is, and which was, and which is to come, the Almighty.” ~Revelations 1.8, The Holy Bible
ಈ ಆಲ್ಫಾ ಬೀಟಾ ಗಾಮಾಗಳನ್ನು ನಮ್ಮ ಶಾಲೆ, ಡಿಪ್ಲೊಮಾ ದಿನಗಳಲ್ಲಿ ಕೇಳಿದ್ದೆನಾದರೂ, ಎಪ್ಸಿಲಾನ್ ಈಟಾ ಝೀಟಾ ಅಪ್ಸಲಾನ್/ಊಪ್ಸಲಾನ್ ಮುಂತಾದ ಸಂಕೇತಗಳನ್ನು ಕೇಳಿದ್ದು ಇಂಜಿನಿಯರಿಂಗಿಗೆ ಸೇರಿದ ಮೇಲೆಯೇ.
ಅದೂ, ನಾನು ಇಂಜಿನಿಯರಿಂಗಿಗೆ (ಮೂರನೇ ಸೆಮಿಸ್ಟರ್) ಸೇರಿದ ಮೊದಲ ದಿನ “Field Theory” ತರಗತಿಯಲ್ಲಿ, ಅಧ್ಯಾಪಕರು ಯಾವುದೊ ವಿಷಯವನ್ನು ಹೇಳುತ್ತ ಪದೇಪದೇ ಎಪ್ಸಿಲಾನ್ ಎಂಬ ಪದವನ್ನುಚ್ಚರಿಸುತ್ತಿದ್ದರೆ, ಅದೇನೆಂದು ತಿಳಿಯದೆ ಗೊಂದಲಕ್ಕೊಳಗಾಗಿದ್ದೆ. ಮುಂದೆ, ಎಪ್ಸಿಲಾನಿಗೂ ಅಪ್ಸಲಾನಿಗೂ ಇರುವ ವ್ಯತ್ಯಾಸ ತಿಳಿಯದೆ ಪೇಚಾಡಿದ್ದೂ ಇದೆ.
ವಿಷಯ ಏನಪ್ಪಾ ಅಂದ್ರೆ, (ಬಹುಶಃ ಎಲ್ಲರಿಗೂ ತಿಳಿದಿರುವಂತೆ) ನಾವು ವಿವಿಧ ಕ್ಷೇತ್ರಗಳಲ್ಲಿ ಬಳಸುವ ಈ ಸಂಕೇತಗಳೆಲ್ಲ ಗ್ರೀಕ್ ಭಾಷೆಯ ವರ್ಣಮಾಲೆಯಲ್ಲಿನ ಅಕ್ಷರಗಳು. ಗ್ರೀಕ್ ವರ್ಣಮಾಲೆಯಲ್ಲಿನ ೨೪ ವರ್ಣಗಳು ಆಲ್ಫಾದಿಂದ ಮೊದಲಾಗಿ ಒಮೇಗಾದಲ್ಲಿ ಕೊನೆಯಾಗುತ್ತದೆ.
ಮೊನ್ನೆ ನನ್ನ ಸ್ನೇಹಿತರೊಬ್ಬರು ನನ್ನನ್ನು, ನಮ್ಮ ಕೌಂಟಿಯಲ್ಲಿಯ ಗ್ರಂಥಾಲಯಕ್ಕೆ ಕರೆದೊಯ್ದರು. ಅಲ್ಲಿ ಲೈಬ್ರೆರಿ ಕಾರ್ಡನ್ನು ಮಾಡಿಸಿಕೊಂಡು, ಯಾವುದಾದರೂ ಆಸಕ್ತಿಕರ ಪುಸ್ತಕಕ್ಕಾಗಿ ಹುಡುಕುವಾಗ “New Testament Greek” ಎಂಬ ಪುಸ್ತಕವು ಕಣ್ಣಿಗೆ ಬಿತ್ತು. ನಾವು ಗ್ರೀಕನ್ನು ಓದಲು ಬರೆಯಲು ಕಲಿಯಲು ಅನುವಾಗುವ (‘Teach Yourself’) ಕೈಪಿಡಿಯಂತಹ ಪುಸ್ತಕವದು. ಕೂಡಲೆ ಅದನ್ನೆ ಎರವಲು ಪಡೆದು ತಂದೆ.
ಆಗಿನಿಂದ, ಮನೆಯಲ್ಲಿ ಅಲ್ಪಸ್ವಲ್ಪ ಸಮಯ ಸಿಕ್ಕಾಗೆಲ್ಲ, ನನ್ನ ಗ್ರೀಕ್ ಅಕ್ಷರಾಭ್ಯಾಸ ಸಾಗುತ್ತಿದೆ. ಯಾವುದೇ ಭಾಷೆಯನ್ನು ಓದಲು ಬರೆಯಲು ಕಲಿಯುವುದು ನಮಗೆ ಒಂದು ಬಗೆಯ ಸಂತಸವನ್ನು ತರುತ್ತದೆ, ಅಲ್ಲವೇ?
ನನಗೆ ಗ್ರೀಕ್ ಅಕ್ಷರಗಳನ್ನು ಅಭ್ಯಾಸ ಮಾಡುವ ಮೊದಮೊದಲಿನಲ್ಲಿ, ಅದೇಕೊ ತಮಿಳಿನ ನೆನಪಾಯಿತು. ಒಂದೇ ವರ್ಣವು ಬೇರೆಬೇರೆ ಸ್ಥಾನ, ಸನ್ನಿವೇಶಗಳಲ್ಲಿ — ಬೇರೆಬೇರೆ ರೀತಿಯಲ್ಲಿ ಉಚ್ಚರಿಸಲ್ಪಡುವ ಪರಿಪಾಠ ತಮಿಳಿನಲ್ಲಿದೆ. ಗ್ರೀಕಿನ ಗಾಮಾ ವರ್ಣವೂ ಸ್ವಲ್ಪ ಹೀಗೆಯೇ ಅನಿಸಿತು.
ಏನೇ ಇರಲಿ, ಸದ್ಯಕ್ಕೆ ಸಿಕ್ಕಸಿಕ್ಕ ಪದ, ಹೆಸರುಗಳನ್ನೆಲ್ಲ ಗ್ರೀಕಿನ ಲಿಪಿಯಲ್ಲಿ -ತಪ್ಪುತಪ್ಪಾಗಿ ಬರೆದು, ಆನಂತರ ತಿದ್ದಿಕೊಳ್ಳುವ ಮೋಜನ್ನು ಅನುಭವಿಸುತ್ತಿದ್ದೇನೆ.!
೨. ಅಗೋರಾ
ಕಳೆದ ಸಾರಿ, ಕ್ಯಾಥರಿನ್ ನಿಕ್ಸಿ ಎಂಬಾಕೆಯು ಬರೆದಿರುವ “ದಿ ಡಾರ್ಕನಿಂಗ್ ಏಜ್” ಎಂಬ ಪುಸ್ತಕವನ್ನು ಓದುತ್ತಿದ್ದುದಾಗಿ ಬರೆದಿದ್ದೆ. ಇತ್ತೀಚೆಗೆ ಅದನ್ನು ಓದಿ ಮುಗಿಸಿದ್ದಾಯ್ತು.
ಕ್ರೈಸ್ತಮತವು ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ, ಆ ಹಿಂದೆ ಇದ್ದ ಧರ್ಮ-ದೇವತೆಗಳನ್ನು ಕೆಡವಿ ಕೊಂದದ್ದು ಒಂದೆಡೆಯಾದರೆ, ಆ ಕಾಲಕ್ಕೆ, ಅದಕ್ಕೆ ಮುಂಚೆ ಜೀವಿಸಿದ್ದ ಅನೇಕ ಶಾಸ್ತ್ರಜ್ಞರ ಅಮೂಲ್ಯ ಕೃತಿರಾಶಿಗಳನ್ನು ಸುಟ್ಟು ಬೂದಿಮಾಡಿದ್ದು ಮತ್ತೊಂದು ಕಡೆ. ಆ ಎರಡೂ ಕೃತ್ಯಗಳು ಎಂತಹ ನಷ್ಟ, ಅನಾಹುತಗಳಿಗೆ ಕಾರಣವಾಗಿದೆಯೆಂದು ಹೇಳುವುದು ಕಷ್ಟ.
ಹೈಪೇಶಿಯಾ ನಾಲ್ಕು-ಐದನೇ ಶತಮಾನದಲ್ಲಿ, ಅಲೆಕ್ಸಾಂಡ್ರಿಯಾದಲ್ಲಿ ಜೀವಿಸಿದ್ದಾಕೆ. ಆಕೆ ಆ ಕಾಲಕ್ಕೆ ಅಲೆಕ್ಸಾಂಡ್ರಿಯಾದಲ್ಲಿ ಗಣಿತ ಹಾಗೂ ತತ್ತ್ವಶಾಸ್ತ್ರವನ್ನು ಬೋಧಿಸುತ್ತಿದ್ದಳಂತೆ; ಅವಳ ವಿದ್ವತ್ತು ಎಂಥದ್ದಿರಬಹುದೆಂದು ಅಷ್ಟರಿಂದಲೆ ಊಹಿಸಬಹುದಲ್ಲ.
ಕ್ರೈಸ್ತರು ಅಲೆಕ್ಸಾಂಡ್ರಿಯಾದಲ್ಲಿಯ ಸೆರಾಪಿಸ್ ದೇವನ ಆಲಯವನ್ನೂ ಮೂರ್ತಿಯನ್ನೂ ಕೆಡವಿಹಾಕಿದ್ದನ್ನು ಆಕೆ ಕಣ್ಣಾರೆ ಕಂಡಿದ್ದಳೋ ಏನೊ! ಆ ಘಟನೆಯ ಕಹಿಯೆಲ್ಲ ಮಾಸಿಹೋದ ಮೇಲೂ ಆಕೆ ಅಲೆಕ್ಸಾಂಡ್ರಿಯಾದ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿದ್ದವಳು. ಅಲ್ಲಿಯ ಜನರ ಮನ್ನಣೆಗೆ ಪಾತ್ರಳಾಗಿದ್ದವಳು. ಆದರೆ, ಆಕೆಯು ಮಾಡಿದ್ದ ಒಂದೇಒಂದು ಅಪರಾಧವೆಂದರೆ, ಆ ಹೊತ್ತಿಗೆ -ತನ್ನ ಪ್ರಚಂಡ ಬಲದಿಂದ ಹಬ್ಬಿ ಹರಡಿದ್ದ- ಕ್ರೈಸ್ತಮತವನ್ನು ಅಂಗೀಕರಿಸದಿದ್ದುದು. ಆ ಒಂದು ಅಪರಾಧವೇ ಅವಳ ಪಾಲಿಗೆ ಮುಳುವಾಯಿತು.
ಒಂದು ದಿನ ಕ್ರೈಸ್ತಧರ್ಮಯೋಧರು ಕೆಲವರು ಅವಳನ್ನು ಮುತ್ತಿಗೆಹಾಕಿ, ಅಲ್ಲಿಯ ಚರ್ಚೊಂದಕ್ಕೆ ಎಳೆದೊಯ್ದರು. ಅಲ್ಲಿ ಅವಳ ಬಟ್ಟೆಗಳನ್ನು ಹರಿದು, ವಿವಸ್ತ್ರಳನ್ನಾಗಿ ಮಾಡಿ, ಅತ್ಯಂತ ಕ್ರೂರವಾಗಿ ಅವಳನ್ನು ಕೊಂದರು. ಅವಳ ಜೀವವಿನ್ನೂ ಇರುವಾಗಲೇ ಅವಳ ಕಣ್ಣುಗುಡ್ಡೆಗಳನ್ನು ಕಿತ್ತುಹಾಕಿ, ಚರ್ಮವನ್ನು ಸುಲಿದರಂತೆ. ಆ ನಂತರ ಅವಳ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಚೆಲ್ಲಿದರಂತೆ.
ಪುಸ್ತಕದಲ್ಲಿ ಈ ಭಾಗವನ್ನು ಓದಿದಾಗ ನನ್ನ ಮನಸ್ಸಿಗಾದ ಸಂಕಟ, ದುಃಖಗಳು ಅಷ್ಟಿಷ್ಟಲ್ಲ. ಧರ್ಮಾಂಧತೆಯು ಕಾಲಕಾಲಕ್ಕು ಎಂತೆಂತಹ ದುಷ್ಕೃತ್ಯಗಳಿಗೆ ಕಾರಣವಾಗಿದೆಯಲ್ಲ ಎಂದು ನೆನೆದು ತುಂಬಾ ವ್ಯಥೆಯಾಯಿತು; ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಮನಸ್ಸೆಲ್ಲ ಭಾರವಾಗಿತ್ತು.
೨೦೦೯ರಲ್ಲಿ ತೆರೆಕಂಡ ’ಅಗೋರಾ’ ಎಂಬ ಸಿನಿಮಾ ಹೈಪೇಶಿಯಾಳ ಕಥೆಯನ್ನು ಚಿತ್ರಿಸುತ್ತದೆ. ಪುಸ್ತಕವನ್ನೋದುವಾಗೊಮ್ಮೆ ಆ ಚಿತ್ರವನ್ನೂ ನೋಡಿದೆ.
೩. ಪ್ರೇಮಪಾಠವೊ ಕಾವ್ಯದೂಟವೊ!
ಬಹುಶಃ ಪುಸ್ತಕವನ್ನೋದುವ ಗೀಳಿರುವ ಎಲ್ಲರೂ ಅನುಭವಿಸುವ ಗೊಂದಲವೆಂದರೆ — ಒಂದು ಪುಸ್ತಕವನ್ನು ಓದಿ ಮುಗಿಸಿದ ನಂತರ, “ಮುಂದೆ ಇನ್ನಾವ ಪುಸ್ತವನ್ನು ಓದುವುದು?” ಎಂಬುದು.
ನಾನು, ’ದಿ ಡಾರ್ಕನಿಂಗ್ ಏಜ್’ ಅನ್ನು ಓದುವಾಗಲೇ, ಅದರಲ್ಲಿ ಉಲ್ಲೇಖಿಸಿದ್ದ ಕೆಲವು ಪುಸ್ತಕಗಳನ್ನು ತರಿಸಿಕೊಂಡಿದ್ದೆ. ಓವಿಡ್’ನ “ದಿ ಆರ್ಟ್ ಆಫ್ ಲವ್”, “ಮೆಟಾಮಾರ್ಫೊಸಿಸ್”, ಕ್ಯಾಟಲಸ್’ನ ಕವನಗಳ ಸಂಕಲನ, ಸೆಲ್ಸಸ್ಸನ “ಆನ್ ದಿ ಟ್ರೂ ಡಾಕ್ಟ್ರೆನ್”, ಲುಕ್ರೇಷಿಯಸ್ಸನ “ಆನ್ ದಿ ನೇಚರ್ ಆಫ್ ಥಿಂಗ್ಸ್” — ಹೀಗೆ.
ಇವಲ್ಲದೆ, ನಾನು ಬಹುಕಾಲದಿಂದ ಕಾತರಿಸಿ ಕಾಯುತ್ತಿದ್ದ “ಮಾನಸೋಲ್ಲಾಸ”ವೂ ಸಹ ಈ ವಾರವಷ್ಟೆ ಭಾರತದಿಂದ ಬಂದು ನನ್ನ ಕೈಸೇರಿದೆ.
ಗೊಂದಲದ ಸಂಗತಿ ಹಾಗಿರಲಿ; ನನ್ನ ದುರಾಸೆಗೆ ಏನೆನ್ನುವುದು! ಇದನ್ನೆಲ್ಲ ಕಂಡು “ಇಷ್ಟೂ ಪುಸ್ತಕಗಳನ್ನು ತಂದುಕೊಂಡು ಮಾಡುವುದೇನು” — ಎಂಬ ಪ್ರಶ್ನೆ ಏಳದಿರುತ್ತದೆಯೇ? ಅದರಲ್ಲೂ, ಈಗಾಗಲೇ “ಓದಬೇಕಾಗಿರುವ ಪುಸ್ತಕಗಳು” ಪಟ್ಟಿಯಲ್ಲಿ ನೂರಾರು ಹೆಸರುಗಳಿವೆಯಲ್ಲ. ಮತ್ತೆ ಇವೇಕೆ? ಉತ್ತರಿಸುವುದು ಬಹಳ ಕಷ್ಟ.
ನಿಜ, ಇದು ಒಂದು ಬಗೆಯಲ್ಲಿ ದುರಾಸೆಯಂತೆಯೇ ತೋರುತ್ತದೆ. ಆದರೆ, ಹಿಂದೆಯೂ ಇಂತಹ ಪರಿಸ್ಥಿತಿ ಎದುರಾದಾಗ, ನಾನು, “ಇವನ್ನೆಲ್ಲ ಈಗಿಂದೀಗಲೇ ಓದಲಾಗದಿದ್ದರೂ ಏನು? ಮುಂದೊಮ್ಮೆ ನನಗೆ ವಯಸ್ಸಾಗಿ, ಸಾಕಷ್ಟು ಸಮಯ ಸಿಕ್ಕಾಗಲಾದರೂ ಓದಬಹುದಲ್ಲ. ಅಲ್ಲಿಯವರೆಗೂ ಇವು ನನ್ನಲ್ಲಿಯೇ ಇರಲಿ. ಒಂದು ವೇಳೆ ನಾನು ಇಲ್ಲದಿದ್ದರೂ, ನನ್ನ ಮಕ್ಕಳೊ ಮೊಮ್ಮಕ್ಕಳೊ ಯಾರಾದರೂ ಇಚ್ಛೆಪಟ್ಟು ಇವುಗಳಲ್ಲಿ ಯಾವೊಂದು ಪುಸ್ತಕವನ್ನೋದಿದರೂ ಆದೀತಲ್ಲ. ಅಲ್ಲಿಗೆ ನಾನು ಇವನ್ನು ಸಂಗ್ರಹಿಸಿದ್ದೂ ಸಾರ್ಥಕವಾಗುವುದು” ಎಂದು ಅಂದುಕೊಂಡದ್ದಿದೆ.
ನಮ್ಮ ಮನೆಯಲ್ಲಿ “ಜ್ಞಾನಗಂಗೋತ್ರಿ” ಎಂಬ ಒಂದು ದೊಡ್ಡ ಗ್ರಂಥವಿತ್ತು. ನಾನು ಜೀವನದಲ್ಲಿ ಕಂಡ ಅಗಾಧ ಗಾತ್ರದ/ ತೂಕದ ಪುಸ್ತಕಗಳ ಪೈಕಿ ಅದರ ಹೆಸರೇ ಮೊದಲನೆಯದು. ಆ ಪುಸ್ತಕ ನಮ್ಮ ಮನೆಗೆ ಹೇಗೆ ಬಂತೊ, ತಂದಿಟ್ಟವರು ಯಾರೊ, ಯಾವ ಕಾಲಕ್ಕೊ — ಏನೊಂದೂ ನನಗೆ ತಿಳಿಯದು. ಆದರೆ, “ವಿಶ್ವಕೋಶ” ಸದೃಶವಾದ ಆ ಪುಸ್ತಕದಲ್ಲಿಯ ಹಲವಾರು ವಿಷಯಗಳನ್ನು ಓದುವ ಅವಕಾಶ ನಮಗೆ ದೊರಕಿತ್ತು.
ನಾನಂತೂ, ಚಿಕ್ಕಂದಿನಲ್ಲಿ — ಗಣೇಶನ ನಾನಾ ರೂಪಗಳ ಬಗ್ಗೆ, ಸರಸ್ವತಿಯ ಬಗ್ಗೆ, ಅರ್ಕಾವತಿ, ಚಿತ್ರಾವತಿ ನದಿಗಳ ಬಗ್ಗೆ — ಹೀಗೆ ನಾನಾ ಸಂಗತಿಗಳ ಬಗ್ಗೆ ಓದಿ ತಿಳಿದುಕೊಂಡದ್ದು ಆ ಪುಸ್ತಕದಿಂದಲೇ. ಅದರಲ್ಲಿದ್ದ ಕೆಲವು ರೇಖಾಚಿತ್ರಗಳನ್ನೂ, ರವಿವರ್ಮನ ಶಾಕುಂತಲೆಯ ಚಿತ್ರವನ್ನೂ ನೋಡುವುದೇ ನಮಗೊಂದು ಆನಂದ, ಆಗೆಲ್ಲ!
ಹೀಗೆ, ಯಾರು ತಂದ ಪುಸ್ತಕವನ್ನು ಯಾರು ಓದಬೇಕೆಂಬ ಯೋಗವಿರುತ್ತದೆಯೋ ಏನೊ, ಯಾರಿಗೆ ಗೊತ್ತು?
ಹಾಗೂ ಹೀಗೂ ಮಾಡಿ, ಸದ್ಯಕ್ಕೆ ಓವಿಡ್ಡನ “ದಿ ಆರ್ಟ್ ಆಫ್ ಲವ್” ಪುಸ್ತಕವನ್ನು ಓದುತ್ತಿದ್ದೇನೆ. ಈ ಪುಸ್ತಕದ ವೈಶಿಷ್ಟ್ಯತೆ ತುಂಬಾ ಹಿರಿದು. ಅದರ ಬಗ್ಗೆ ಎಂದಾದರೂ ಹೇಳುತ್ತೇನೆ.
೪. ಕುರುಕ್ಷೇತ್ರ
ಮಹಾಭಾರತದ ಕಥೆಯನ್ನಾಧರಿಸಿ ಈಗಾಗಲೇ ನೂರಾರು ಚಿತ್ರಗಳು ಬಂದಿವೆ. ವಿಶೇಷವಾಗಿ, ಇತ್ತೀಚೆಗೆ “ಮುನಿರತ್ನ ಕುರುಕ್ಷೇತ್ರ”ವೆಂಬ ಚಿತ್ರವೂ ಆ ಪಟ್ಟಿಗೆ ಸೇರಿತು. ಈ ಚಿತ್ರದ ಶೀರ್ಷಿಕೆಯ ಬಗ್ಗೆಯೇ ಹಲವಾರು ಟೀಕೆಗಳು ಬಂದಿದ್ದುದು ನಮಗೆಲ್ಲ ತಿಳಿದದ್ದೇ.
ನಾವು ಒಂದಷ್ಟು ಜನ ಸ್ನೇಹಿತರು, ಅಂತೂ ಇಂತೂ ಧೈರ್ಯ ಮಾಡಿ ಆ ಚಿತ್ರವನ್ನು ನೋಡಿಯೇಬಿಟ್ಟೆವು. ನಿಜ ಹೇಳಬೇಕೆಂದರೆ, ಚಿತ್ರವು ನಾವೆಣಿಸಿದಷ್ಟು ಕೀಳಾಗೇನೂ ಇರಲಿಲ್ಲ. ಅದು ಎಲ್ಲರ ಸುದೈವವೇ ಸರಿ!
ತೆಲುಗಿನ “ಶ್ರೀ ಕೃಷ್ಣ ಪಾಂಡವೀಯಂ” ಹಾಗೂ “ದಾನವೀರ ಶೂರ ಕರ್ಣ” ಚಿತ್ರಗಳಲ್ಲಿಯ ಕೆಲವು ಸನ್ನಿವೇಶ, ಸಂಭಾಷಣೆಗಳ ಛಾಯೆಯನ್ನು ಈ ಚಿತ್ರದಲ್ಲಿ ಕಾಣಬಹುದು. ಎಷ್ಟರ ಮಟ್ಟಿಗೆಂದರೆ, ದುರ್ಯೋಧನನ ಕಿರೀಟ, ಭೂಷಣಗಳ ವಿನ್ಯಾಸವು ಈ ಮೂರೂ ಚಿತ್ರಗಳಲ್ಲಿ ಒಂದೇ ತೆರನಾಗಿವೆ.
ವೇಷಭೂಷಣದ ಸಂಗತಿ ಹಾಗಿರಲಿ. ಆದರೆ, ಆಯಾ ಸಂಭಾಷಣೆಗಳನ್ನೂ ಸನ್ನಿವೇಶವನ್ನೂ ನಿಭಾಯಿಸುವ ಹಂತದಲ್ಲಿ ಈ ಚಿತ್ರವು ಹಾದಿತಪ್ಪಿದಂತಿದೆ. ಮಾತುಗಳನ್ನು ಯಥಾವತ್ತಾಗಿ ತೆಲುಗಿನಿಂದ ಕನ್ನಡಕ್ಕಿಳಿಸಿಬಿಟ್ಟರೂ ಸಾಕಿತ್ತು. ಅದು ಬಿಟ್ಟು, ಈ ಚಿತ್ರದಲ್ಲಿಯ ಸಂಭಾಷಣೆಯು ಅತಿರೇಕವೆನಿಸುವಷ್ಟರ ಮಟ್ಟಿಗೆ ಕೆಟ್ಟದಾಗಿದೆ. ದುರಂತವೆಂದರೆ, ದುರ್ಯೋಧನನ ಪಾತ್ರಧಾರಿಯ ದನಿಯಲ್ಲಿ ಆ ಮಾತುಗಳು ಯಾವ ಏರಿಳಿತವೂ ಇಲ್ಲದೆ, ತಪ್ಪು ಉಚ್ಚಾರಣೆಗಳಿಂದ ಕೂಡಿದ್ದು, ಕೇಳಿದವರಿಗೆ ಕಿವಿನೋವು ತರಿಸುತ್ತದೆ. ಆ ಹಿಂಸೆಯನ್ನು ಕಡೆಗಣಿಸಿ ನೋಡಿದರೆ, ದರ್ಶನ್ ಅವರ ನಟನೆಯು ಒಪ್ಪಬಹುದಾಗಿದೆ.
ಚಿತ್ರದಲ್ಲಿ ದುರ್ಯೋಧನನನ್ನು ನಾಯಕನನ್ನಾಗಿ ಬಿಂಬಿಸಲು ತುಂಬಾ ಹೆಣಗಿದ್ದಾರೆ. ಇರಲಿ, ದುರ್ಯೋಧನನನ್ನು ವೈಭವೀಕರಿಸಿ ತೋರಿಸುವುದು ತಪ್ಪೇನಲ್ಲ. ಆದರೆ, ಅದನ್ನು ಸಾಧಿಸಿ, ಸರಿತೂಗಿಸುವುದರಲ್ಲಿ ನಿರ್ದೇಶಕನ ಚಾಣಾಕ್ಷತೆ ಇರಬೇಕಿದೆ. ಅಲ್ಲಿಯೂ ಸೋತಿದ್ದಾರೆ. ದುರ್ಯೋಧನನನ್ನು ಅಟ್ಟಕ್ಕೇರಿಸುವ ಭರದಲ್ಲಿ ಪಾಂಡವರನ್ನು ಸಂಪೂರ್ಣವಾಗಿ ಕಡೆಗಣಿಸಿಬಿಟ್ಟಿದ್ದಾರೆ.
ಪಾತ್ರಗಳಿಗೆ ನಟರ ಆಯ್ಕೆಯೋ, ದೇವರಿಗೇ ಪ್ರೀತಿ.! ಆಯಾ ಪಾತ್ರಗಳಿಗೆ ಇಂತಿಂಥ ನಟರನ್ನು ಹಾಕಬೇಕೆಂದು ಅದಾವ ಮಹಾನುಭಾವನಿಗೆ ಹೊಳೆಯಿತೊ ಏನೊ.
ಶ್ರೀನಿವಾಸ ಮೂರ್ತಿ, ಅಂಬರೀಷ್, ಸ್ನೇಹಾ, ಅರ್ಜುನ್ ಸರ್ಜಾ, ದರ್ಶನ್ ಹಾಗೂ ಇನ್ನೊಂದಿಬ್ಬರ ಹೊರತಾಗಿ, ಉಳಿದ ಪ್ರಮುಖ ಪಾತ್ರಗಳ ಆಯ್ಕೆಯು ಕಳಪೆಯಾಗಿದೆ. ಅದರಲ್ಲೂ, ಪಾಂಡವರ ಆಯ್ಕೆ! ಭೀಮನ ಪಾತ್ರವಹಿಸಿರುವ ನಟನಿಗಂತೂ, ತನ್ನ — ಪಾತ್ರದ ಮಹತ್ವವೇನೆಂದೂ ತಿಳಿದಿರುವಂತಿಲ್ಲ. ಆತನ ಮುಖದಲ್ಲಿ ಭಾವವನ್ನೂ, ಮಾತಿನಲ್ಲಿ ಓಜಸ್ಸನ್ನೂ ಕಾಣುವುದು ಅಸಾಧ್ಯ. ಭೀಮನ ಪಾತ್ರಕ್ಕೆ ಬರೀ ಮೈಕಟ್ಟಿದ್ದರೆ ಮಾತ್ರ ಸಾಲದು.!
ಹಾಡುಗಳ ಬಗ್ಗೆಯಂತೂ ಹೇಳುವುದೇ ಬೇಡ. ಇನ್ನು, ಚಿತ್ರದಲ್ಲಿ ಹುಡುಕಿ ನೋಡಿದರೆ ನೂರಾದರೂ ತಪ್ಪುಗಳು ಕಂಡಾವು. ಮುಖ್ಯವಾಗಿ, ಚಿತ್ರ ನಿರ್ದೇಶಕರಿಗಾಗಲೀ ಮತ್ತೊಬ್ಬರಿಗಾಗಲೀ ಮಹಾಭಾರತದ ಕುರಿತು ಕೆಲವು ಮುಖ್ಯವಿಷಯಗಳೇ ತಿಳಿದಂತಿಲ್ಲ. ಪಾಂಡವರ ಹೆಸರನ್ನು ಹೇಳುವಾಗ, ಒಂದೆರಡು ಕಡೆ ಯುಧಿಷ್ಠಿರನ ನಂತರ ಅರ್ಜುನನ ಹೆಸರನ್ನು ಹೇಳಿ ಆ ನಂತರ ಭೀಮನ ಹೆಸರನ್ನು ಹೇಳುತ್ತಾರೆ.
ಅತಿಯೆನಿಸುವ ಮಾತುಗಳನ್ನು ಹೊರತುಪಡಿಸಿದರೆ, ನಿಖಿಲ್ ಕುಮಾರಸ್ವಾಮಿಯ ನಟನೆಯನ್ನು ಒಪ್ಪಬಹುದು. ಆದರೆ, ಮತ್ತೆ — ಅಭಿಮನ್ಯುವಿನ ಪಾತ್ರದ ಆಯ್ಕೆಯೇ ತಪ್ಪಾಗಿದೆ. ಆತ ಅಭಿಮನ್ಯುವಿನ ಪಾತ್ರಕ್ಕೆ ಅಷ್ಟೇನೂ ಹೊಂದುವುದಿಲ್ಲ.
ದುಡ್ಡಿನ ವಿಷಯವಾಗಿ, ಚಿತ್ರವು ಗೆಲ್ಲಬಹುದೆಂಬ ಮಾತು ಕೇಳಿಬರುತ್ತಿದೆ. ಆಗಬಹುದೇನೊ, ಯಾರು ಬಲ್ಲವರು! ಆದರೆ, ಒಟ್ಟಾರೆಯಾಗಿ ನೋಡಿದರೆ, ಚಿತ್ರವು ಹತ್ತು ಹಲವು ಕಾರಣಗಳಿಂದ ಈಗಾಗಲೇ ಸೋತುಹೋಗಿದೆ.
೫. ರಂಗನಾಯಕಿ
ಇಲ್ಲಿಯವರೆಗೆ ನಾನು ಈ ಚಿತ್ರವನ್ನು ಪೂರ್ತಿಯಾಗಿ ನೋಡಿರಲಿಲ್ಲ. ಈ ಮುಂಚೆ ನೋಡಿದಾಗೆಲ್ಲ ಬರೀ ಮೊದಲರ್ಧ ಭಾಗದಷ್ಟನ್ನು ಮಾತ್ರ ನೋಡಿದ್ದೆ.
ಮೊನ್ನೆ ಟ್ವಿಟ್ಟರಿನಲ್ಲಿ ಒಂದಿಬ್ಬರು ಗೆಳೆಯರು ಈ ಚಿತ್ರದ ಬಗ್ಗೆ ಉಲ್ಲೇಖಿಸಿದ್ದುದರಿಂದ, ಕೊನೆಗೂ “ರಂಗನಾಯಕಿ”ಯನ್ನು ನೋಡಿದೆ.
ಪುಟ್ಟಣ್ಣನವರ ಸಿನಿಮಾ ಎಂದರೆ ಹೆಚ್ಚಿಗೆ ಹೇಳುವುದೇ ಬೇಡ; ಅವರ ಪ್ರತಿಯೊಂದು ಚಿತ್ರವೂ ಅಮೋಘವೆನಿಸುವಂಥದ್ದು. ತಮ್ಮ ಚಿತ್ರಗಳ ಮೂಲಕ ಪುಟ್ಟಣ್ಣನವರು ಕೈಗೆತ್ತಿಕೊಳ್ಳುತ್ತಿದ್ದ ಪ್ರತಿ ವಸ್ತುವೂ ವಿಶೇಷವಾದದ್ದೇ. ರಂಗನಾಯಕಿ ಕೂಡ ಅದಕ್ಕೆ ಹೊರತಲ್ಲ.
ಪುಟ್ಟಣ್ಣನವರ ಬಹುತೇಕ ಚಿತ್ರಗಳು ದುರಂತಮಯವಾಗಿರುತ್ತವೆ. ಚಿತ್ರ ಮುಗಿಯುವ ಹೊತ್ತಿಗೆ ಮನಸ್ಸು ಆ ಕಥೆಯಲ್ಲಿಯೇ ಲೀನವಾಗಿಬಿಟ್ಟಿರುತ್ತದೆ. “ಇದು ಹೀಗೇಕಾಯಿತು? ಅವರ ಕಥೆ ಮುಂದೇನಾಯಿತು? ಒಂದು ವೇಳೆ ಇದೆಲ್ಲ ಸರಿಹೋಗಬಹುದಾದ ಸಾಧ್ಯತೆಯಿತ್ತೆ, ಹಾಗೇಕಾಗಲಿಲ್ಲ?..” ಎಂಬಿವೇ ಮುಂತಾದ ಪ್ರಶ್ನೆಗಳು ಮನಸ್ಸನ್ನು ತುಂಬಿ ಕಾಡಲು ಶುರು ಮಾಡುತ್ತವೆ. ಪ್ರೇಕ್ಷಕನು ಕಥೆಯ ಮುಕ್ತಾಯವು ತರುವ ಕಹಿಯನ್ನು ಆಸ್ವಾದಿಸುತ್ತ, ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕೂರುವಂತಾಗುತ್ತದೆ.
ಈ ಚಿತ್ರದ ಕೊನೆಯೂ ಕೂಡ ದುರಂತಮಯ. ಅತ್ತ ರಂಗನಾಯಕಿಯು ಕೊನೆಗೂ ತನ್ನ ಮಗನನ್ನು ಕಾಣಲಾಗಲಿಲ್ಲವೆಂಬ ನೋವಿನಿಂದ ಸಾವಿಗೆ ಶರಣಾದರೆ, ಇತ್ತ ಶೇಖರನಿಗೆ — ತಾನು ಇಷ್ಟು ದಿನವೂ ಮೋಹಿಸಿದ್ದು ತನ್ನನ್ನು ಹೆತ್ತ ತಾಯಿಯನ್ನೇ ಎಂಬ ಕಠೋರ ಸತ್ಯವು ತಿಳಿಯುತ್ತದೆ. ತನ್ನ ತಪ್ಪುಗಳೆಲ್ಲಕ್ಕೂ ಕ್ಷಮೆಯಾಚಿಸಲೆಂದು ಅವನು ಓಡಿಬರುವ ವೇಳೆಗೆ ರಂಗನಾಯಕಿಯು ಗತಿಸಿಹೋಗಿರುತ್ತಾಳೆ.
ಅಸಲಿಗೆ ಇಂತಹ ಗಂಭೀರವಾದೊಂದು ವಸ್ತುವನ್ನು ಕನ್ನಡದಲ್ಲಿ ನಿರೂಪಿಸುವ ಸಾಹಸ ಮಾಡುವುದು ಕೇವಲ ಪುಟ್ಟಣ್ಣನವರಿಗಷ್ಟೇ ಸಾಧ್ಯ. ಅದನ್ನು ಅವರು ನಿಭಾಯಿಸಿರುವ ಪರಿಯೂ ಅದ್ಭುತವಾಗಿದೆ.