ಐದು ಮಾತುಗಳು — ೮
ಕಗ್ಗತ್ತಲ ಕಾಲದ ಕಥೆ
ಅದು ಅಲೆಕ್ಸಾಂಡ್ರಿಯಾದ ಖ್ಯಾತಿಯ ಶಿಖರವೆಂಬಂತೆ ಕಂಗೊಳಿಸುತ್ತಿದ್ದ ಕಟ್ಟಡ. ಭವ್ಯವಾದ ಆ ಆಲಯದ ಹೃದಯ ಭಾಗದಲ್ಲಿ, ಅಗಾಧ ಗಾತ್ರದ, ಸೆರಾಪಿಸ್ ದೇವನ ಸುಂದರ ಮೂರ್ತಿ!
ಮರಮುಟ್ಟನ್ನು ಬಳಸಿ ತಯಾರಿಸಿದ ಆ ಮೂರ್ತಿಯ ಹೊರಮೈಗೆ ಬಗೆಬಗೆಯ ಲೋಹ-ವಸ್ತುಗಳನ್ನು ಬಳಸಿ ಅಲಂಕರಿಸಲಾಗಿತ್ತು. ಸೆರಾಪಿಸ್ ದೇವನ ಅಂಗ ಭಾಗಗಳನ್ನು ದಂತದಿಂದ ಹೊಂದಿಸಲಾಗಿತ್ತು; ಆತನು ಧರಿಸಿದ್ದ ವಸ್ತ್ರಕ್ಕೆ ಚಿನ್ನದ ಲೇಪವಿತ್ತು. ನೂರಾರು ಮೆಟ್ಟಿಲುಗಳನ್ನು ಹತ್ತಿ ಆಲಯವನ್ನು ಪ್ರವೇಶಿಸಿದ ಯಾರನ್ನೇ ಆದರೂ ಮಂತ್ರಮುಗ್ಧಗೊಳಿಸುವಂತ್ತಿತ್ತು, ಆತನ ನಿಲುವು.
ಶಕ ವರ್ಷ ೩೯೨ರ ಒಂದು ದಿನ, ಕ್ರೈಸ್ತ ಮತದವರ ದೊಡ್ಡ ಗುಂಪೊಂದು -ಥಿಯೋಫಿಲಸ್ ಎಂಬ ಪೋಪ್’ನ ಮುಂದಾಳತ್ವದಲ್ಲಿ- ಆ ಸೆರಾಪಿಸ್ ದೇವಾಲಯದ ಎದುರಲ್ಲಿ ‘ಧರ್ಮಸಭೆ’ಗೆಂದು ಸೇರಿತು. ಹಾಗೆ ಕ್ರೈಸ್ತರೆಲ್ಲ ಒಟ್ಟುಗೂಡಿದ ಸ್ವಲ್ಪ ಹೊತ್ತಿಗೆ ಆ ಗುಂಪು ಸೆರಾಪಿಸ್ ದೇವಾಲಯದ ಅಂಗಳಕ್ಕೆ ಪ್ರವೇಶಿಸಿತು.
ಅಲೆಕ್ಸಾಂಡ್ರಿಯಾದ ಮಂದಿ ಅಚ್ಚರಿಯಿಂದ, ಆಘಾತದಿಂದ ನೋಡನೋಡುತ್ತಿರುವಂತೆಯೇ, ಅವರೆಲ್ಲ ಆಲಯವನ್ನು ಧ್ವಂಸಗೊಳಿಸಲು ತೊಡಗಿದರು. ಗೋಡೆಗಳ ಮೇಲಿದ್ದ ಕಲಾಕೃತಿಗಳನ್ನೂ, ಬಂಗಾರದ ಲೇಪವಿದ್ದ ಭಿತ್ತಿಗಳನ್ನೂ ಕೆಡವಿಹಾಕಲಾರಂಭಿಸಿದರು.
ಅಲೆಕ್ಸಾಂಡ್ರಿಯಾದ ಜನರಲ್ಲಿ, “ಸೆರಾಪಿಸ್’ನ ಮೂರ್ತಿಯು ಭಿನ್ನವಾದಂದು ಆಕಾಶವೇ ಕಳಚಿಬೀಳುವುದೆಂಬ” ನಂಬಿಕೆಯೊಂದಿತ್ತಂತೆ. ಈಗ ಆಲಯದೊಳಕ್ಕೆ ನುಗ್ಗಿದ್ದವರಿಗೆ ಅದರಿಂದೇನಾಗಬೇಕು?
ಆಲಯದ ಗರ್ಭಭಾಗಕ್ಕೆ ಸೇರಿದ ಸ್ವಲ್ಪಹೊತ್ತಿಗೇ, ಥಿಯೋಫಿಲಸ್’ನ ಸೂಚನೆಯಂತೆ, ಕ್ರೈಸ್ತಧರ್ಮಯೋಧನೊಬ್ಬನು ಕೊಡಲಿಯೊಂದನ್ನು ಬೀಸಿ ಸೆರಾಪಿಸ್’ನ ಮುಖವನ್ನು ವಿರೂಪಗೊಳಿಸಿದನು. ಅದರಿಂದ ಉತ್ತೇಜಿತರಾದ ಉಳಿದವರೂ ಆ ಕೆಲಸಕ್ಕೆ ಕೈಜೋಡಿಸಿದರು. ದೇವರ ಮೂರ್ತಿಯ ಕೈಕಾಲುಗಳನ್ನು ಕಡಿದುಹಾಕಿದರು. ಮುಂದೆ, ಹಗ್ಗಗಳನ್ನು ಕಟ್ಟಿ ಆ ಅಗಾಧ ಮೂರ್ತಿಯ ಛಿದ್ರಭಾಗಗಳನ್ನು ಹೊರಕ್ಕೆಳೆದು ತಂದು ಬೆಂಕಿ ಹಚ್ಚಿದರು. ಸಾವಿರಾರು ವರ್ಷಗಳಿಂದ ಅಲ್ಲಿಯ ಜನರ ಆರಾಧ್ಯದೈವವಾಗಿದ್ದ ಸೆರಾಪಿಸ್ ದೇವನನ್ನು, ಅವನನ್ನು ಪೂಜಿಸಿ ಆರಾಧಿಸಿದ್ದ ಜನರೆದುರೇ ಬೂದಿ ಮಾಡಿದರು.
ಅಲ್ಲಿಗೆ, ಆ ಸರಿಹದ್ದಿನಲ್ಲಿ “ಕ್ರೈಸ್ತಧರ್ಮದ ವಿಜಯ”ವು ಕೈಗೂಡಿತೆಂದು, ಆ ಮತದ ಅನುಯಾಯಿಗಳು ಸಂಭ್ರಮಿಸಿದರು. ಮುಂದೆ, ಅದೇ ಆಲಯದ ಕಟ್ಟಡವನ್ನು ಬಳಸಿಕೊಂಡು, ಅದನ್ನೊಂದು ಚರ್ಚನ್ನಾಗಿ ಮಾರ್ಪಡಿಸಿದರು.
ಸದ್ಯಕ್ಕೆ, ಕ್ಯಾಥರಿನ್ ನಿಕ್ಸಿ ಎಂಬಾಕೆಯು ರಚಿಸಿರುವ “ದಿ ಡಾರ್ಕನಿಂಗ್ ಏಜ್” ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಅದರಲ್ಲಿಯ ಒಂದು ಘಟನೆಯ ವಿವರದ (ಸಂಕ್ಷಿಪ್ತ) ಸಾರಾಂಶವಿದು.
ಕ್ರೈಸ್ತಧರ್ಮದ ಉಗಮವಾದ ನಂತರದ ಶತಮಾನಗಳಲ್ಲಿ, ಹೇಗೆ ಅದು ರಕ್ತಪಾತ ಹಾಗೂ ವಿಧ್ವಂಸಕಾರಿ ಮಾರ್ಗಗಳನ್ನು ಬಳಸಿಕೊಂಡು ತನ್ನ ವ್ಯಾಪ್ತಿಯನ್ನು ಬೆಳೆಸಿಕೊಂಡಿತು, ಹೇಗೆ ರಾಜಕೀಯದ ಬಲದಿಂದ — ಅದು ಆಯಾ ಪ್ರಾಂತದ ಹೆಚ್ಚುಹೆಚ್ಚು ಜನರನ್ನು ಮತಾಂತರಗೊಳಿಸಿತು ಎಂಬ ಸತ್ಯವನ್ನು ಲೇಖಕಿಯು ಈ ಪುಸ್ತಕದಲ್ಲಿ -ಆಧಾರಪೂರ್ವಕವಾಗಿ- ನಿರೂಪಿಸಿದ್ದಾರೆ.
ಹಿಂದೊಂದು ಕಾಲವಿತ್ತು. ಅಲ್ಲಿ, ಸ್ಯೂಸ್, ವೀನಸ್, ಬಚುಸ್, ಸೆರಾಪಿಸ್, ಐಸಿಸ್ — ಹೀಗೆ ನಾನಾ ದೇವತೆಗಳನ್ನು ಆರಾಧಿಸುವ ಮಂದಿಯಿದ್ದರು. ಯಾವ ದೇವತೆಗಳನ್ನೂ ಆರಾಧಿಸದವರೂ ಇದ್ದರು. ಅದಾಗಿಯೂ, ಅವರ ಸೌಹಾರ್ದ ಸಹಬಾಳ್ವೆಗೇನೂ ಕುಂದು ಸಂಭವಿಸಿರಲಿಲ್ಲ.
ಎಷ್ಟೊ ಜನ ದೊಡ್ಡದೊಡ್ಡ ತತ್ತ್ವಜ್ಞಾನಿಗಳು, ಗಣಿತಜ್ಞರು, ಖಗೋಳಶಾಸ್ತ್ರ ಪರಿಣತರು, ಇತರ ಶಾಸ್ತ್ರವೇತ್ತರು — ನೂರಾರು ಬಗೆಯ ವಿದ್ವಾಂಸರು ಗ್ರೀಕ್ ಹಾಗೂ ರೋಮನ್ ಜನರ ನಡುವೆ ಬದುಕಿ ಹೋಗಿದ್ದರು; ಆ ಹೊತ್ತಿಗೂ ಬದುಕಿದ್ದರು. ಆದರೆ, ಕ್ರೈಸ್ತಮತವು ಪ್ರವರ್ಧಮಾನಕ್ಕೆ (ಹಿಂದೆ ತಿಳಿಸಿದ ರೀತಿ) ಬರುತ್ತಿದ್ದಂತೆಯೇ, ಎಲ್ಲಕ್ಕೂ ಗ್ರಹಣ ಹಿಡಿದಂತಾಯಿತು. ಅಂಥವರೆಲ್ಲರ ಪರಿಸ್ಥಿತಿಯೂ ವಿಷಮಿಸಿತು.
ಕ್ರೈಸ್ತಮತವು ತನ್ನ ತತ್ತ್ವಕ್ಕೆ, ನಂಬಿಕೆಗೆ ವಿರುದ್ಧವಾದ ಯಾವುದರ ಅಸ್ತಿತ್ವವನ್ನೂ ಉಳಿಸದಂತೆ, ಶಪಥ ತೊಟ್ಟಾಗಿತ್ತು. ಆ ಶಪಥಕ್ಕೆ ಧರ್ಮಗ್ರಂಥದ ವಾಣಿಯ ಬೆಂಬಲವೂ ಇತ್ತು (Deuteronomy, The Holy Bible). ಅದರ ಪರಿಣಾಮವಾಗಿಯೆ, ರೋಮನ್ನರ ಈಜಿಪ್ಟಿಯನ್ನರ ನೂರಾರು ಆಲಯಗಳು ನೆಲಕ್ಕುರುಳಿದುವು. ಎಷ್ಟೊ ಆಲಯಗಳು ಚರ್ಚುಗಳಾದವು. ಹಿಂದಿನ ದೇವತೆಗಳನ್ನು ಪೂಜಿಸಿದವರು — ನಾನಾ ಬಗೆಯ ಒತ್ತಡ, ಆಮಿಷ, ಹೆದರಿಕೆಗಳಿಗೆ ಮಣಿದು, ಏಕದೇವೋಪಾಸನೆಗೆ ತೊಡಗಬೇಕಾಯಿತು.
ಜ್ಞಾನದ ಭಂಡಾರಗಳಾಗಿದ್ದ ಅದೆಷ್ಟೊ ಗ್ರಂಥಾಲಯಗಳು ಸುಟ್ಟು ಬೂದಿಯಾದುವು. ಎಷ್ಟೋ ವಿಷಯ, ವಿಚಾರಗಳ ಬಗೆಗಿನ ಗ್ರಂಥಗಳು ಆ ನಂತರದ ಯಾವ ತಲೆಮಾರಿಗೂ ಸಿಗದಂತೆ, ಧೂಳಲ್ಲಿ ಧೂಳಾದವು.
ಧರ್ಮವನ್ನು ಬೋಧಿಸಬೇಕಾದ ಗ್ರಂಥಗಳು, ಅದರ ಹೆಸರಿನಲ್ಲಿ ಅನ್ಯಮತ-ಅನ್ಯಧರ್ಮಗಳ ಬಗ್ಗೆ ದ್ವೇಷವನ್ನೂ ಅಸಹನೆಯನ್ನೂ ಬೆಳೆಸಿಕೊಂಡು, ಪೋಷಿಸುವುದನ್ನು ಬೋಧಿಸಿದರೆ ಆಗುವ ಅನಾಹುತಗಳು ಹೇಗಿರುತ್ತವೆ ಎಂಬುದಕ್ಕೆ ಇಂತಹ ಉದಾಹರಣೆಗಳೇ ಸಾಕ್ಷಿ. ವ್ಯಥೆಯ ಸಂಗತಿಯೆಂದರೆ, ಏಕದೇವೋಪಾಸನೆಯನ್ನು ಬೋಧಿಸುವ ಪ್ರಮುಖ ಧರ್ಮಗ್ರಂಥಗಳಲ್ಲಿ ಈ ಬಗೆಯ ವಿಚಾರಗಳು ಹಲವು ಕಡೆ ಕಾಣಿಸುತ್ತವೆ. ಬಹುಶಃ ಅದರ ಕಾರಣವಾಗಿಯೆ ಇಂದಿಗೂ ಸಹ, ಜಗತ್ತಿನಲ್ಲಿ ಅದೆಷ್ಟೋ ಕೆಟ್ಟ ಘಟನೆಗಳು ನಡೆಯುತ್ತಿವೆ.
ಇಂದಿನ ದಿನಗಳಲ್ಲಿ, ಭಾರತದ ಹಲವಾರು ಬುದ್ಧಿಜೀವಿಗಳು, ಹೋದಲ್ಲೆಲ್ಲ ಹಿಂದೂ ಧರ್ಮದ ಅಸಹಿಷ್ಣುತೆಯ ಬಗ್ಗೆ ಏರುದನಿಯಲ್ಲಿ ಮಾತಾಡುವುದನ್ನೂ, ಪುಟಗಟ್ಟಲೆ ಪುಸ್ತಕಗಳನ್ನು ಬರೆಯುವುದನ್ನೂ ಕಂಡು ಅಭ್ಯಾಸವಾಗಿಹೋಗಿದೆ. ಅದರ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು, ಆಯಾ ಧರ್ಮಗ್ರಂಥಗಳನ್ನೂ ಕಂಡಾಗ, ಅಂಥವರ ಉದ್ದೇಶಪೂರ್ವಕ ಅಂಧತ್ವವನ್ನು ಕಂಡು ಮರುಕವುಂಟಾಗುತ್ತದೆ.
ದಿ ಟಾಕ್ ಆಫ್ ದಿ ಟೌನ್
ಸಂಜಯ್ ನಾಗರಾಜ್ ಅವರ ನಿರ್ದೇಶನದಲ್ಲಿ, ಟಾಕ್ ಆಫ್ ದಿ ಟೌನ್ ಬಳಗವು ಬಗೆಬಗೆಯ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು, ಅಷ್ಟೇ ಸಮರ್ಥವಾಗಿ -ಒಳ್ಳೆಯ ವಿಷಯ, ವಿಚಾರಗಳನ್ನು ಆಯಾ ಸರಣಿಯ ಮೂಲಕ, ಜನರೆದುರು ತೆರೆದಿಡುತ್ತಿದೆ.
ಕಗ್ಗಾನುಭವ, ಚರಿತ ಪಯಣ, ದಿ ಅರುಣ್ ಮೇಷ್ಟ್ರು ಶೋ, ಶರೀಫ ಪದ, ಸುನಾದವಿನೋದಿನಿ — ಹೀಗೆ ಇನ್ನೂ ಹಲವು ಸುಂದರವಾದ, ಅದ್ಭುತವಾದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮೂಡಿಬರುತ್ತಿವೆ. ಇವಲ್ಲದೆ, ಪದ್ಯಪ್ರವಾದ, ಮರೆಯಾಗುತ್ತಿರುವ ಕನ್ನಡ ಪದಗಳು — ಮುಂತಾದ ಸರಣಿಗಳೂ ಇವೆ. ಜೊತೆಗೆ, ಆಗಾಗ ತಂಡದವರೂ, ಕೇಳುಗರೂ/ಓದುಗರೂ ಭೆಟ್ಟಿಯಾಗಿ — ಕುವೆಂಪು, ಬೇಂದ್ರೆ ಕಾರಂತ ಮುಂತಾದ ಮಹನೀಯರ ವಿಚಾರಧಾರೆಗಳ ಬಗ್ಗೆ ವರ್ಚೆ ನಡೆಸುತ್ತಾರೆ.
ಇಡೀ ತಂಡದ ಉತ್ಸಾಹವನ್ನೂ, ಅಚ್ಚುಕಟ್ಟುತನವನ್ನೂ ಕಂಡು ಶ್ಲಾಘಿಸದೆ ಇರಲಾಗದು. ತಂಡದಲ್ಲಿರುವವರೆಲ್ಲ ನಮಗೆ ನೇರವಾಗಿ ಅಥವಾ ಟ್ವಿಟ್ಟರ್ ಪ್ರಪಂಚದಲ್ಲಿ ಪರಿಚಿತರೇ ಆಗಿರುವುದರಿಂದ, ಎಲ್ಲವೂ ನಮಗೆ ಮತ್ತಷ್ಟು ಹತ್ತಿರೆನಿಸುತ್ತವೆ.
ಇವತ್ತು ಸಂಜೆ ಮಜ್ಜಿಗೆಹುಳಿ ತಯಾರಿಸುವಾಗ “ದಿ ಅರುಣ್ ಮೇಷ್ಟ್ರು ಶೋ”ನ ಎರಡನೇ ಸಂಚಿಕೆಯನ್ನು ಕೇಳುತ್ತಿದ್ದೆ. ಅದು ಮುಗಿಯುವ ಹೊತ್ತಿಗೆ “ಅರೆ, ನಾನು ಕೂಡ ಇಂಥದ್ದನ್ನೇ ಮಾಡುತ್ತಿದ್ದೆನಲ್ಲ!” ಎನಿಸಿತು. ನಿಜ, ಈ ಸರಣಿಯಲ್ಲಿ ಬರುವ ವಿಷಯಗಳನ್ನು ನಮ್ಮ ಬಾಲ್ಯ-ಬದುಕಿನ ಜೊತೆಗೆ ಹೋಲಿಸಿಕೊಂಡು ನೋಡಬಹುದು. ನಮ್ಮ ಮನಸ್ಸಿನಲ್ಲಿಯ ಮಾತುಗಳನ್ನೇ ಅರುಣ್ ಅವರು ಅಲ್ಲಿ ಕುಳಿತು ಹೇಳುತ್ತಿದ್ದಾರೇನೊ ಎನಿಸುತ್ತದೆ.
ನಾನು ನನ್ನ ಇಂಜಿನಿಯರಿಂಗ್ ಹಾಗೂ ಎಂ.ಎ ಪರೀಕ್ಷೆಗಳಿಗೆ ಓದುವ ಕಾಲಕ್ಕೂ — ಹೇಗಾದರೂ ಮಾಡಿ ಒಂದಿಷ್ಟು ಸಮಯ ಹೊಂಚಿಕೊಂಡು ತೇಜಸ್ವಿಯವರ ಪುಸ್ತಕಗಳನ್ನೋದುತ್ತಿದ್ದೆ. ಪರೀಕ್ಷೆಯ ತಯಾರಿಯಲ್ಲಿ ಸಾಗಿ ಸಾಗಿ ಹೈರಾಣಾದ ಮನಸ್ಸಿಗೆ ಅದೊಂದು ವಿಶ್ರಾಂತಿಧಾಮ.!
ಓದುವುದನ್ನಲ್ಲದೆ, ಆಗಾಗ ಏನನ್ನಾದರೂ ಚಿತ್ರಗಳನ್ನು ಗೀಚುತ್ತ ಕೂರುವುದೂ ಆಗುತ್ತಿತ್ತು. ಅದಕ್ಕೆ ಇಂಥದ್ದೆ ವಿಷಯವೆಂದೇನಿರುತ್ತಿರಲಿಲ್ಲ. ಯಾವುದಾದರೂ ದೇವರದ್ದೊ, ಇನಾವುದೊ ಕಥೆಯ ಪಾತ್ರದ್ದೊ ಆದರೂ ಆಯಿತು. ಅವಾವೂ ಅಲ್ಲವಾದರೆ, ಕಣ್ಣೆದುರಿಗಿದ್ದ ಪುಸ್ತಕ, ಪೆನ್ನು, ಬಾಕ್ಸು, ಗಡಿಯಾರ ಮುಂತಾದ ವಸ್ತುಗಳನ್ನೇ ಚಿತ್ರಿಸುತ್ತಿದ್ದೆ.
ನಾನು ಇವುಗಳಲ್ಲಿ ಪರಿಣತನಲ್ಲ, ನಿಜ. ಆದರೆ, ಓದು ಹಾಗೂ ಚಿತ್ರರಚನೆ — ಈ ಎರಡೂ ಸಂಗತಿಗಳು, ಬದುಕಿನಲ್ಲಿ ನನಗೆ ಒದಗಿಸಿದ/ ಒದಗಿಸುವ ಶಾಂತಿ ಸಮಾಧಾನಗಳ ಕುರಿತು ಮಾತಿನಲ್ಲಿ ವಿವರಿಸುವುದು ಕಷ್ಟ. ಹಿಂದೆಲ್ಲ ನನಗೆ ಆಪ್ತರಾದವರೊಡನೆ ಜಗಳವೊ ಮತ್ತೊಂದೊ ಆಗಿ, ನನಗೆ ಕೋಪ ಬಂದರೆ, ಆ ಕೋಪದಲ್ಲಿ ಯಾವುದಾದರೊಂದು ಚಿತ್ರವನ್ನು ರಚಿಸಿ, ಆಮೇಲೆ ಅವರಿಗೆ ಅದನ್ನು ಉಡುಗೊರೆಯಾಗಿ ಕೊಟ್ಟುಬಿಡುತ್ತಿದ್ದೆ. ನಮ್ಮ ಮನಸ್ಸಿನ ಭಾವಾವೇಶಗಳನ್ನೂ, ಅನಗತ್ಯ ಗೊಂದಲಗಳನ್ನೂ ಹೊಡೆದೋಡಿಸಲು ಇವು ಸಶಕ್ತ ಸಾಧನಗಳೆಂಬುದು (ನನ್ನ ಮಟ್ಟಿಗೆ) ಹಲವಾರು ಸಾರಿ ಸಾಬೀತಾಗಿದೆ.
ಸರಿ, ಇತ್ತೀಚೆಗೆ ಈ ವಾಹಿನಿಯವರು “ದಿ ಅರುಣ್ ಮೇಷ್ಟ್ರು ಶೋ” ಹಾಗೂ “ಸುನಾದವಿನೋದಿನಿ” ಎಂಬ ಸರಣಿಗಳನ್ನು ಶುರು ಮಾಡಿದ್ದಾರೆ. ಇನ್ನೂ ಕೇಳಿಲ್ಲವಾದರೆ ಇಂದೊಮ್ಮೆ ಈ ಕಾರ್ಯಕ್ರಮಗಳೆರಡನ್ನೂ ಕೇಳಿ ಆನಂದಿಸಿ:
ಸೂರ್ಯಕಲಾ ಹಾಗೂ ಸಕ್ಕರೆಬುರುಡೆ
ಮಂಗರಸನು ತನ್ನ ಕೃತಿ ಸೂಪಶಾಸ್ತ್ರದಲ್ಲಿ ಹಲವಾರು ತಿಂಡಿತಿನಿಸುಗಳನ್ನು ತಯಾರಿಸುವ ವಿಧಾನವನ್ನು ನಿರೂಪಿಸಿದ್ದಾನೆ. ಅದರಲ್ಲಿ ಕೆಲವು ಇಂದಿನ ದಿನಕ್ಕೂ ಬಳಕೆಯಲ್ಲಿರುವುದನ್ನು ಗಮನಿಸಬಹುದು. ಹಿಂದೊಮ್ಮೆ ನಾನು, ಸೂಪಶಾಸ್ತ್ರದಲ್ಲಿಯ “ಅಮೃತವಲ್ಲರಿ”ಯ ಬಗ್ಗೆ ತಿಳಿಸಿದ್ದೆ.
ಮಂಗರಸನು, ನಮಗೆಲ್ಲ ಇಷ್ಟವಾದ ‘ಕರಜೀಕಾಯಿ’ಯ ತಯಾರಿಯ ವಿಧಾನವನ್ನೂ ನಿರೂಪಿಸಿದ್ದಾನೆ. ಕರಜಿಕಾಯಿಯು ಅರ್ಧಚಂದ್ರಾಕಾರದಲ್ಲಿರುತ್ತದೆ. ಅದಲ್ಲದೆ, ಪೂರ್ತಿ ವೃತ್ತಾಕಾರದಲ್ಲಿರುವಂತೆ ರಚಿಸಿದ ತಿಂಡಿಯನ್ನು ಆತ ‘ಸಕ್ಕರೆಬುರುಡೆ’ ಎಂದು ಕರೆದಿದ್ದಾನೆ.
ಮಿದಿದ ಗೋಧಿಹಿಟ್ಟನ್ನು ಹಪ್ಪಳದಂತೆ ಒತ್ತಿಕೊಂಡು, ಅದರಲ್ಲಿ -ಹುರಿದೆಳ್ಳು ಸಕ್ಕರೆಯನ್ನು ಬೆರೆಸಿದ- ಸೂಸಲನ್ನು ಇಟ್ಟು, ಮಡಚಿ ಮುರಿವಿಟ್ಟು ತುಪ್ಪದಲ್ಲಿ ಕರಿದರೆ “ಕರಂಜಿಗೆ” ಸಿದ್ಧವಾಗುತ್ತದೆಯೆನ್ನುತ್ತಾನೆ. ಹಾಗೆ ಹಪ್ಪಳದಂತೆ ಲಟ್ಟಿಸಿದ ಎರಡು ಪದರಗಳ ನಡುವೆ ಸಕ್ಕರೆಯನ್ನಿಟ್ಟು, ಗುಂಡಗೆ ಮುರಿವಿಟ್ಟು ತುಪ್ಪದಲ್ಲಿ ಕರಿದರೆ “ಸಕ್ಕರೆಬುರುಡೆ” ತಯಾರಾಗುತ್ತದೆ.
ಕರ್ನಾಟಕದಲ್ಲಿ ಇವೆರಡನ್ನೂ ಸಹ, ಸಾಧಾರಣವಾಗಿ ಹಬ್ಬಹರಿದಿನಗಳಂದು ತಯಾರಿಸುತ್ತಾರೆ. ಕರಜೀಕಾಯಿಗೆ ಬೇಕಾದ ಸೂಸಲಿಗೆ ಬೆಲ್ಲ, ಕಡಲೆ, ಒಣಕೊಬ್ಬರಿ, ದ್ರಾಕ್ಷಿಗೋಡಂಬಿ ಮುಂತಾದವನ್ನು ಬಳಸುವುದು ರೂಢಿ.
ನೋಡಲು ಇದೇ ರೂಪದಲ್ಲಿರುವ, ಸ್ವಲ್ಪ ಭಿನ್ನವಾದ ರುಚಿಯಿರುವ ಸಿಹಿತಿನಿಸನ್ನು ಉತ್ತರಭಾರತದ ಕಡೆ ತಯಾರಿಸುತ್ತಾರೆ. ಅವಕ್ಕೆ ಗುಜಿಯಾ ಎಂಬ ಸಾಮಾನ್ಯ ಹೆಸರು ಬಳಕೆಯಾಗುತ್ತದೆಯಾದರೂ, ಆಕಾರಕ್ಕೆ ತಕ್ಕಂತೆ “ಸೂರ್ಯಕಲಾ” ಹಾಗೂ “ಚಂದ್ರಕಲಾ” ಎಂಬ ಹೆಸರುಗಳಿವೆ. ಪೂರ್ತಿ ಗುಂಡಗಿರುವುದು ಸೂರ್ಯಕಲಾ ಎಂದೂ, ಕರಜೀಕಾಯಿಯ ರೂಪದಲ್ಲಿರುವುದು ಚಂದ್ರಕಲಾ ಎಂದೂ ಕರೆಯಲ್ಪಡುತ್ತದೆ.
ಇವನ್ನು ಮಾಡುವ ವಿಧಾನ ಹೀಗೆ:
ಚಿರೋಟಿ ರವೆ ಹಾಗೂ ಸ್ವಲ್ಪವೇ ಮೈದಾ, ತುಪ್ಪ ಹಾಗೂ ಒಂದರ್ಧ ಚಿಟಿಕೆ ಉಪ್ಪನ್ನು ಬೆರೆಸಿಕೊಂಡು ಹಿಟ್ಟನ್ನು ನಾದಿ, ನೆನೆಯಲು ಬಿಡಬೇಕು.
ಹೂರಣವಾಗಿ ಖೋವಾ, ಸಕ್ಕರೆಪುಡಿ, ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿಯ ಚೂರು, ಏಲಕ್ಕಿ ಪುಡಿ — ಇವನ್ನು ಬೆರೆಸಿಕೊಳ್ಳಬೇಕು.
ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ, ಸ್ವಲ್ಪ ದಪ್ಪನಾಗಿ ಲಟ್ಟಿಸಿಕೊಂಡು — ನಮಗೆ ಬೇಕಾದ ಆಕಾರಕ್ಕೆ (ಸೂರ್ಯಕಲಾ ಅಥವಾ ಚಂದ್ರಕಲಾ) ವಿನ್ಯಾಸಗೊಳಿಸಿಕೊಂಡು, ಎಣ್ಣೆ ಅಥವಾ ತುಪ್ಪದಲ್ಲಿ ಕರಿದುಕೊಳ್ಳಬೇಕು.
ಹೀಗೆ ಕರಿದದ್ದನ್ನು ಒಂದೆಳೆ ಸಕ್ಕರೆಪಾಕದಲ್ಲಿ ಅದ್ದಿ ತೆಗೆದಿರಿಸಿದರೆ ಸೂರ್ಯಕಲಾ ಅಥವಾ ಚಂದ್ರಕಲಾ ತಯಾರಾಗುತ್ತದೆ.
ಕ್ರಿಯೇಟಿವ್ ಇನ್ಸ್ಪಿರೇಷನ್
ಇತ್ತೀಚೆಗೆ ಯೂರೋಪಿಗೆ ಪ್ರವಾಸಕ್ಕೆ ಹೋಗಿದ್ದ ನನ್ನ ಸ್ನೇಹಿತ -ನಿತೀಶ್- ನನಗೊಂದು ಅಪರೂಪದ ಉಡುಗೊರೆಯೊಂದನ್ನು ತಂದುಕೊಟ್ಟಿದ್ದಾರೆ.
Vincent Van Goghನ ಹೆಸರನ್ನು ಕೇಳಿರದವರ ಸಂಖ್ಯೆ ತೀರ ಕಡಿಮೆಯೆ. ನಾನು ಕಾಲೇಜಿನ ದಿನಗಳಲ್ಲಿ, ಆಗಾಗ ಚಿತ್ರಕಲಾ ಪರಿಷತ್ತಿಗೆ ಹೋಗುತ್ತಿದ್ದೆ. ಕೆಲವೊಮ್ಮೆ, ಅಲ್ಲಿ ನಡೆಯುತ್ತಿದ್ದ ನಾನಾ ತೆರದ ಚಿತ್ರ ಪ್ರದರ್ಶನಗಳನ್ನು ನೋಡಿ, ಆಯಾ ಚಿತ್ರಕಾರರೊಡನೆ ಒಂದೆರಡು ಮಾತು-ಪ್ರಶ್ನೆ-ಚರ್ಚೆ ಮಾಡುವ ಅವಕಾಶವೂ ಸಿಗುತ್ತಿತ್ತು. ಬಹುಶಃ ಅಲ್ಲಿಯೇ ಮೊದಲ ಬಾರಿ ನನಗೆ ಅವನ ಬಗ್ಗೆ ತಿಳಿದಿದ್ದು ಎನಿಸುತ್ತದೆ.
ಆತನ ಕೆಲವು ವರ್ಣಚಿತ್ರಗಳು ಪ್ರಪಂಚದಾದ್ಯಂತ ಚರ್ಚೆ, ವಿಮರ್ಶೆ ಪ್ರಶಂಸೆಗಳಿಗೆ ಪಾತ್ರವಾಗಿವೆ. ಅಂತಹಾ ವಿನ್ಸೆಂಟಿನ ಕೆಲವು ಪತ್ರಗಳಲ್ಲಿಯ ಸ್ಫೂರ್ತಿದಾಯಕ ಮಾತುಗಳನ್ನೂ, ಒಂದಷ್ಟು ರೇಖಾಚಿತ್ರಗಳನ್ನೂ ಹೊಂದಿಸಿ ಈ ಪುಸ್ತಕವನ್ನು ಮುದ್ರಿಸಿದ್ದಾರೆ. ನಾನು ಆಗೊಮ್ಮೆ ಈಗೊಮ್ಮೆ ಈ ಪುಸ್ತಕದಲ್ಲಿಯ ಯಾವುದಾದರೊಂದು ಪುಟದೆಡೆಗೆ ಕಣ್ಣಾಡಿಸುತ್ತ, ಅವನ ಮನಸ್ಸನ್ನೂ, ಅವನ ಗೀಚು-ರೇಖೆಗಳನ್ನೂ ಅರಿಯುವ ಪ್ರಯತ್ನವನ್ನೂ ಮಾಡುತ್ತಿರುತ್ತೇನೆ.
ಕಗ್ಗದ ಪಾಠ
ಎತ್ತಲೋ ಕಾಡುಮಬ್ಬಿನ ಬಳ್ಳಿ ಮೊಗ್ಗಿನಲಿ
ಚಿತ್ರರಚನೆಗದೇಕೆ ತೊಡಗುವಳ್ ಪ್ರಕೃತಿ?
ಕೃತ್ಯಕ್ಕೆ ತಾಂ ತರುವ ಶಕ್ತಿ ಗುಣ ಪೂರ್ಣತೆಯೆ
ಸಾರ್ಥಕವೊ ಜೀವಿತಕೆ — ಮಂಕುತಿಮ್ಮ
ನಾವು ಮಾಡುವ ಕೆಲಸವನ್ನು ಹೇಗಿದ್ದರೂ ಜನರು ಗಮನಿಸುವುದಿಲ್ಲವೆಂದೊ, ಅಥವಾ ಅದಕ್ಕೆ ಅಷ್ಟೇನೂ ಮನ್ನಣೆ ದೊರೆಯುವುದಿಲ್ಲವೇನೊ ಎಂಬ ಹಿಂಜರಿಕೆಯಿಂದಲೊ — ಎಷ್ಟೊ ಸಾರಿ, ನಾವು ಮಾಡಬೇಕಾದ ಕೆಲಸದ ಬಗ್ಗೆ ಉದಾಸೀನ ತೋರುತ್ತೇವೆ. ಆಯಾ ಕೆಲಸದ ಬಗ್ಗೆ ಏನೇನೂ ಶ್ರದ್ಧೆಯಿಲ್ಲದೆ, ಹೇಗೊ ಹಾಗೆ — ‘ನಾಮ್ ಕೆ ವಾಸ್ತೆ’ ಎನ್ನುವಂತೆ ಮಾಡಿ ಕೈತೊಳೆದುಕೊಳ್ಳುವ ಸಂಭವವೇ ಹೆಚ್ಚು. ಅದಕ್ಕೆಲ್ಲ, ಬಹುಶಃ “ಹೇಗಿದ್ದರೂ ಇದು ಯಾರ ಗಮನಕ್ಕೂ ಪ್ರಶಂಸೆಗೂ ಪಾತ್ರವಾಗೊಲ್ಲ ಬಿಡು” ಎಂಬ ಭಾವನೆಯೆ ಕಾರಣವಾಗಬಹುದು. ನಾನು ಕೂಡ ಆಗಾಗ ಈ ಬಗೆಯ ಯೋಚನೆಗಳ ಗುಂಡಿಗೆ ಬೀಳುತ್ತಿರುತ್ತೇನೆ. ಆಗೆಲ್ಲ ಈ ಕಗ್ಗವೇ ನನ್ನನ್ನು ಸರಿದಾರಿಗೆ ತರುತ್ತದೆ.
ಅಲ್ಲೆಲ್ಲೊ ಕಗ್ಗಾಡೊಂದರ ಮಬ್ಬು ಬೆಳಕಿನ ನಡುವೆಯೂ ಪ್ರಕೃತಿಮಾತೆಯು ಸುಂದರವಾದ ಹೂಚಿತ್ರಗಳನ್ನು ರಚಿಸಿ ಇರಿಸುತ್ತಾಳಲ್ಲ, ಏಕೆ? ಯಾವ ಮಹಾನುಭಾವ ಅಷ್ಟು ದೂರ ಹೋಗಿ, ಆ ಹೂವನ್ನು ಕಂಡು ಮೆಚ್ಚಿ ಬಂದಾನು. ಅದೆಲ್ಲದರ ಬಗ್ಗೆ ಪ್ರಕೃತಿಯು ತಲೆ ಕೆಡಿಸಿಕೊಳ್ಳುತ್ತಾಳೇನು? ತನ್ನ ಪಾಡಿಗೆ ತಾನು, ಆ ಹೂವನ್ನು ರಚಿಸುತ್ತಾಳೆ. ನಮ್ಮ ಕರ್ತವ್ಯ, ಕೆಲಸದ ಬಗ್ಗೆ ನಮ್ಮ ಶ್ರದ್ಧೆ ಕಾಳಜಿಯೂ ಹಾಗೆಯೆ ಇರಬಾರದೆ? ನಾವು ಮಾಡುವ ಯಾವುದೆ ಕೆಲಸವು ಗುಣಪೂರ್ಣವಾಗಿದ್ದರೆ, ಅದೇ ನಮ್ಮಲ್ಲಿ ಸಾರ್ಥಕತೆಯ ಭಾವನೆಯನ್ನು ಮೂಡಿಸಲು ಶಕ್ತವಾಗುತ್ತದೆ. ಆ ಸಾರ್ಥಕತೆಯ ಭಾವವೆ ಸಾಕು, ನಮ್ಮ ಜೀವನಕ್ಕೆ.