ಐದು ಮಾತುಗಳು — ೭
ಬಾರ‍್ಲಿಯ ಪರಿಚಯ, ಮತ್ತೊಮ್ಮೆ!
ನಿಜ ಹೇಳ್ಬೇಕಂದ್ರೆ, ನಾನು ಬಾರ‍್ಲಿಯಿಂದ ತಯಾರಿಸಿದ ತಿನಿಸನ್ನು ರುಚಿ ನೋಡಿದ್ದು ಇಲ್ಲಿಗೆ (ಅಟ್ಲಾಂಟಾ) ಬಂದ ನಂತರವೇ. ಭಾರತದಲ್ಲಿದ್ದಾಗ, ಮನೆಯಲ್ಲಿ ಅದರ ಉಪಯೋಗ ತೀರಾ ಅಪರೂಪವಾಗಿತ್ತು. ಯಾರಿಗಾದರೂ ಹುಷಾರಿಲ್ಲದಾಗ ರವೆ ಗಂಜಿಯನ್ನೊ, ರಾಗಿ ಗಂಜಿಯನ್ನೊ, ಇಲ್ಲವಾದರೆ ಬಾರ‍್ಲಿ ಗಂಜಿಯನ್ನೋ ಕೊಡುವ ರೂಢಿಯಿತ್ತು ಅಷ್ಟೆ.
ಅದಲ್ಲದೆ, ಕೆಲವು ಕಡೆ — ಇಸ್ತ್ರಿ ಮಾಡುವ ಮುನ್ನ, ಬಟ್ಟೆಯನ್ನು ತಿಳಿಯಾದ ಗಂಜಿಯಲ್ಲಿ ನೆನೆಸಿ, ಒಣಗಿಸಿ ಇಸ್ತ್ರಿ ಮಾಡುತ್ತಾರೆ. ಆ ವಿಧಾನದಲ್ಲಿ ಬಾರ‍್ಲಿ ಗಂಜಿಯನ್ನೂ ಬಳಸುತ್ತಾರೆ ಎಂದು ಕೇಳಿದ್ದೆ. ಇವಿಷ್ಟರ ಹೊರತಾಗಿ ನನಗೆ ಬಾರ‍್ಲಿಯೊಡನೆ ಅಷ್ಟೇನೂ ಹೆಚ್ಚಿನ ಪರಿಚಯವಿದ್ದಿರಲಿಲ್ಲ.
ಈಗ, ಡಯೆಟ್ಟೂ ಗಿಯೆಟ್ಟೂ ಅಂತ, ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನವನ್ನು ದೂರವಿಡಬೇಕಾದ ಪರಿಸ್ಥಿತಿ! ಆದರೆ, ದಕ್ಷಿಣಭಾರತದ ಬಹುತೇಕ ಮಂದಿಗೆ (ನನ್ನಂಥವರಿಗೆ) ಅನ್ನವಿಲ್ಲದಿದ್ದರೆ ಊಟ ಮಾಡಿದಂತೆಯೇ ಅನಿಸದು. ಅದಕ್ಕೇ, ಆಗೊಮ್ಮೆ ಈಗೊಮ್ಮೆ -ನಾನು ಅಕ್ಕಿಗೆ ಬದಲಾಗಿ ಬಾರ‍್ಲಿಯ ಮೊರೆಹೋಗಬೇಕಾಗಿದೆ. ಬಾರ‍್ಲಿಯೊಡನೆ ನನ್ನ ಪರಿಚಯ ಬಲಗೊಳ್ಳಲು ಇದು ಕಾರಣವಾಯ್ತು.
ಬಾರ‍್ಲಿಯನ್ನು ಸಂಸ್ಕೃತದಲ್ಲಿ ಯವಧಾನ್ಯವೆನ್ನುತ್ತಾರೆ. ಹಾಗೆ ನೋಡಿದರೆ, ಭರತಖಂಡದ ಜನರಿಗೆ ಬಾರ‍್ಲಿಯು ಬಹುಕಾಲದಿಂದ ಪರಿಚಿತವಾದ ಧಾನ್ಯ. ಹಿಂದೆಂದೊ ಒಂದು ಕಾಲದಲ್ಲಿ, ಈ ಧಾನ್ಯವೇ ದಿನನಿತ್ಯದ ಆಹಾರಕ್ರಮದಲ್ಲಿ, ಯಾಗಾದಿ ಕಾರ್ಯಗಳಿಗೆ ಬಳಕೆಯಾಗುತ್ತಿತ್ತಂತೆ. ಚಮಕಪ್ರಶ್ನದಲ್ಲಿ (ಯಜುರ್ವೇದ), ಇಂದ್ರ ಹಾಗೂ ಅಶ್ವಿನೀ ದೇವತೆಗಳಿಗೆ ಮೀಸಲಾದ ಕೆಲವು ಸೂಕ್ತಗಳಲ್ಲಿ (ಋಗ್ವೇದ) ಬಾರ‍್ಲಿಯ ಉಲ್ಲೇಖವಿದೆ. ಅಲ್ಲದೆ, ಪ್ರತ್ಯೇಕವಾಗಿ ಆಹಾರದ ಬಗ್ಗೆಯೇ ಇರುವ ಸೂಕ್ತವೊಂದರಲ್ಲಿ (ಋ: ೧-೦೧-೧೮೭) ಬಾರ‍್ಲಿಯ ಹೆಸರಿದೆ. ಇವೆಲ್ಲವನ್ನೂ ಗಮನಿಸಿದರೆ ವೇದಗಳ ಕಾಲದಲ್ಲಿಯೂ ಯವಧಾನ್ಯಕ್ಕೆ (ಬಾರ‍್ಲಿ) ಇದ್ದ ಮಹತ್ವವು ಎಂಥದ್ದೆಂದು ಮನದಟ್ಟಾಗುತ್ತದೆ.
ಹೋಮರನ ಗ್ರೀಕ್ ಕಾವ್ಯಗಳಲ್ಲಿ, ಆ ನಂತರದ ಕವಿಗಳ ನಾಟಕಗಳಲ್ಲಿ ಬಾರ‍್ಲಿಯಿಂದ ತಯಾರಿಸಿದ ತಿನಿಸುಗಳ ಉಲ್ಲೇಖಗಳು ದೊರೆಯುತ್ತವೆ. ಕ್ರೈಸ್ತರ ಧರ್ಮಗ್ರಂಥ ಬೈಬಲ್ಲಿನಲ್ಲಿಯೂ ಒಂದೆರಡು ಕಡೆ ಬಾರ‍್ಲಿಯಿಂದ ಮಾಡಿದ ಬ್ರೆಡ್ಡಿನ ಬಗ್ಗೆಯಿದೆ. ಇನ್ನು, ಬೇರೆ ಬೇರೆ ಶತಮಾನಗಳಿಗೆ ಸೇರಿದ -ನಾನಾ ಭಾಷೆಗಳ- ಅಡುಗೆ ಪುಸ್ತಕಗಳಲ್ಲಿ ಬಾರ‍್ಲಿಯ ಹೆಸರನ್ನು ಕಾಣಬಹುದು.
ಕನ್ನಡದಲ್ಲಿ ಪದಕೋಶ ಕೃತಿ “ಅಭಿಧಾನವಸ್ತುಕೋಶ”ವನ್ನು ರಚಿಸಿದ ನಾಗವರ್ಮನು ಬಾರ‍್ಲಿಯ ಬಗ್ಗೆ ಹೇಳುವಾಗ, “ಯವ” ಹಾಗೂ “ಪೀತಕ”ವೆಂಬ ಹೆಸರುಗಳನ್ನು ಸೂಚಿಸುತ್ತಾನೆ. ಅದಲ್ಲದೆ, ಮಂಗರಸನ ‘ಸೂಪಶಾಸ್ತ್ರ’ ಕೃತಿಯಲ್ಲಿ, “ಯವ” ಪದದ ತದ್ಭವ ‘ಜವೆ’ಯ ಬಳಕೆಯಿದೆ. ಹೀಗೆ, ಬಾರ‍್ಲಿಗೆ (ಪ್ರಪಂಚದ ನಾನಾ ಭಾಗಗಳಲ್ಲಿ) ಸಾವಿರಾರು ವರ್ಷಗಳ ಇತಿಹಾಸವೇ ಇದೆ.
ಇದನ್ನು ಅಡುಗೆಗಷ್ಟೆ ಅಲ್ಲದೆ ಮದ್ಯ ತಯಾರಿಕೆಗೂ ಬಳಸುತ್ತಾರಂತೆ. ಅದರಲ್ಲಿಯ ಗ್ಲೂಟನ್ (Gluten) ಅಂಶ ಹೆಚ್ಚಿರುವುದರಿಂದ, ಬ್ರೆಡ್ಡು ಮೊದಲಾದ ಬೇಕರಿ ತಿನಿಸುಗಳ ತಯಾರಿಕೆಯಲ್ಲೂ ಬಾರ‍್ಲಿಯನ್ನು ಬಳಸುತ್ತಾರೆ.
ನಾನು ಸಾಮಾನ್ಯವಾಗಿ ಬಾರ‍್ಲಿ ಗಂಜಿಯನ್ನೊ ಸೂಪ್ ಅನ್ನೋ ತಯಾರಿಸುತ್ತೇನೆ. ಅದಲ್ಲದೆ, ಕೆಲವೊಮ್ಮೆ ಅದನ್ನು ಬಳಸಿ ಪೊಂಗಲನ್ನು ಸಹಾ ಮಾಡುತ್ತೇನೆ. ಬೇರೆಯವಕ್ಕೆ ಹೋಲಿಸಿದರೆ, ಬಾರ‍್ಲಿ ಪೊಂಗಲ್ ಬಹಳ ರುಚಿಯಾಗಿರುತ್ತದೆ.
ಮೊನ್ನೆ ಒಮ್ಮೆ, ಮೊದಲ ಸಾರಿ ಬಾರ‍್ಲಿ ದೋಸೆಯನ್ನು ಮಾಡಿದ್ದೆ. ಎರಡಳತೆ ಬಾರ‍್ಲಿಯನ್ನೂ, ಒಂದಳತೆ ಉದ್ದಿನಬೇಳೆಯನ್ನೂ ೪-೫ ಗಂಟೆ ನೆನೆಸಿ, ಅದನ್ನು ರುಬ್ಬಿಕೊಂಡು, ಹುದುಗಲು ಬಿಡಬೇಕು. ಹಿಟ್ಟನ್ನು ರುಬ್ಬುವಾಗ — ಅದಕ್ಕೆ ನೆನೆಸಿದ ಮೆಂತ್ಯ (ಅರ್ಧ ಚಮಚದಷ್ಟಾದರೆ ಆಯಿತು) ಹಾಗೂ ಅವಲಕ್ಕಿಯನ್ನೂ ಸೇರಿಸಿಬಹುದು. ಹೀಗೆ ರುಬ್ಬಿಕೊಂಡ ಹಿಟ್ಟು ಚೆನ್ನಾಗಿ ಒದಗಿದ ಮೇಲೆ, ಅದಕ್ಕೆ ತಕ್ಕಷ್ಟು ಉಪ್ಪನ್ನೂ, ಹದಕ್ಕೆ ತಕ್ಕಷ್ಟು ನೀರನ್ನೂ ಹಾಕಿ ಬೆರೆಸಿ ದೋಸೆ ಹಾಕಿದರೆ ಬಾರ‍್ಲಿ ದೋಸೆ ತಯಾರಾಗುತ್ತದೆ.
ಹದಿನೈದು ವರ್ಷಗಳ ನಂತರ ಕಂಡಳು, ಕಿಸಾಗೋತಮಿ
ಇತ್ತೀಚೆಗೊಮ್ಮೆ www.archive.org ನಲ್ಲಿ ಏನನ್ನೋ ಹುಡುಕುವಾಗ, ಶಿವರಾಮ ಕಾರಂತರ “ಗೀತನಾಟಕಗಳು” ಪುಸ್ತಕ ದೊರೆಯಿತು. ಸಮಯ ಸಿಕ್ಕಾಗ ಓದೋಣವೆಂದು ಅದನ್ನು ಡೌನ್ಲೋಡ್ ಮಾಡಿಕೊಂಡೆ. ನೋಡಿದರೆ, ಒಂಬತ್ತು ನಾಟಕಗಳ ಆ ನಾಟಕ-ಸಂಕಲನದಲ್ಲಿ ಮೊದಲಿಗೇ ಕಂಡವಳು “ಕಿಸಾಗೋತಮಿ”!
ತನ್ನ ಮುದ್ದುಮಗುವನ್ನು ಕಳೆದುಕೊಂಡು, ಅದನ್ನು ಉಳಿಸಿಕೊಡಿ ಎಂದು ಗೋಳಾಡುತ್ತ ಕಿಸಾಗೋತಮಿಯು ಬುದ್ಧನ ಬಳಿಗೆ ಬರುತ್ತಾಳೆ. ಅವಳನ್ನು ಸಮಾಧಾನಗೊಳಿಸಿ, ಬುದ್ಧನು “ಸಾವಿಲ್ಲದ ಮನೆಯ ಸಾಸಿವೆಯ ತಾರವ್ವ” ಎಂದು ಸೂಚಿಸುವ ಪ್ರಸಂಗವೇ ಈ ನಾಟಕದ ಕಥಾವಸ್ತು.
ಕಿಸಾಗೋತಮಿಯು ‘ಸಾವಿಲ್ಲದ ಮನೆಯ ಸಾಸಿವೆ’ಗಾಗಿ ಹುಡುಕುತ್ತ ನಾನಾ ಕಡೆ ತಿರುಗಾಡುತ್ತಾಳೆ. ಆದರೆ, ಎಲ್ಲಿಯೂ ಅವಳಿಗೆ ಸಾವು ಕಾಣದ ಮನೆಯು ಸಿಗುವುದಿಲ್ಲ. ಮತ್ತೆ ಬುದ್ಧನ ಬಳಿಗೆ ಬರುತ್ತಾಳೆ.
ಬುದ್ಧನು ಸಾಸಿವೆಯನ್ನು ತಂದೆಯಾ ಎಂದು ಕೇಳುತ್ತಾನೆ. ಆಕೆ ಇಲ್ಲವೆನ್ನುತ್ತಾಳೆ. ಬುದ್ದನು ‘ಸಾಸಿವೆ ಕಾಳಿಲ್ಲವೆ?’ ಎಂದಾಗ, ಸಾಸಿವೆಯುಂಟು, ಆದರೆ ಸಾವಿಲ್ಲದೆಡೆಯಿಲ್ಲವೆನ್ನುತ್ತಾಳೆ.
ಕೊನೆಗೆ ಬುದ್ಧನು, “ಸಾವಿಲ್ಲದೆಡೆಯಿಲ್ಲ — ನೋವಿಲ್ಲದೆಡೆಯಿಲ್ಲ; ಸಾವು ಜೀವಕೆ ನಂಟು, ಅದನು ತಪ್ಪಿಸ ಸಲ್ಲ. ಸಾವಿನೊಳು ಮರುಗದಿರು, ಜೀವದೊಳು ಹಿಗ್ಗದಿರು…” ಎಂದು ಬೋಧಿಸಿ, ಅವಳ ಕಣ್ತೆರೆಸುತ್ತಾನೆ. ಕಿಸಾಗೋತಮಿಯು ಸತ್ಯಸ್ಥಿತಿಯನ್ನರಿತು, ಅಲ್ಲಿಂದ ತಿಳಿವಿನೆಡೆಗೆ ಸರಿಯುತ್ತಾಳೆ.
ಈ ಗೀತನಾಟಕವು ನಮ್ಮ ಹತ್ತನೇ ತರಗತಿಯ ಪಠ್ಯಕ್ರಮದಲ್ಲಿತ್ತು. ಆಗೊಮ್ಮೆ, ಶಾಲೆಯ ವಾರ್ಷಿಕೋತ್ಸವಕ್ಕೆಂದು ನಾನೂ ನನ್ನ ಸಹಪಾಠಿಗಳೂ ಸೇರಿ ಈ ನಾಟಕವನ್ನು ಅಭಿನಯಿಸಿದ್ದೆವು. ಇಷ್ಟು ವರ್ಷಗಳ ನಂತರ ಆ ನಾಟಕವನ್ನು ಹೀಗೆ ಸಂಧಿಸಿದ್ದು ಸಂತೋಷ ತಂದ ಸಂಗತಿ.
ಅಂದಹಾಗೆ, ಈ ಸಂಕಲನದಲ್ಲಿಯ ಬೇರೆ ನಾಟಕಗಳೂ ಚೆನ್ನಾಗಿವೆ. ಓದಲು ಬಯಸುವವರು ಅದನ್ನು ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು:
ಆವೆಯಮಣ್ಣಿನ ಆಟದ ಬಂಡಿ
ಈ ಹುಚ್ಚು ನನಗೆ ಚಿಕ್ಕಂದಿನಿಂದಲೂ ಇದೆ; ಶಾಲೆಯ ದಿನಗಳಲ್ಲಿ, ಮನೆಯ ಹತ್ತಿರದ ಕೆಮ್ಮಣ್ಣನ್ನೇ ನೀರಿನಲ್ಲಿ ಕಲಸಿ, ಶಿವಲಿಂಗ, ಗಣೇಶ ಮೊದಲಾದುವನ್ನು ಮಾಡಿ ಆಟವಾಡಿಕೊಳ್ತಿದ್ದೆ. ಆಮೇಲಿನ ವರ್ಷಗಳಲ್ಲಿ, ನಮ್ಮೂರಿನ ಕೆರೆಯಿಂದ ಜೇಡಿಮಣ್ಣನ್ನು ಮೂಟೆಗಟ್ಟಲೆ ತಂದಿಟ್ಟುಕೊಂಡು ಏನಾದರೂ ಬೊಂಬೆಗಳನ್ನೊ ಮೂರ್ತಿಗಳನ್ನೋ ಮಾಡುತ್ತಿದ್ದೆ. ಆಗ ಒಂದ್ನಾಲ್ಕೈದು ವರ್ಷ ಶಾಲಾ ಮಟ್ಟದ, ತಾಲೂಕು ಮಟ್ಟದ “ಪ್ರತಿಭಾಕಾರಂಜಿ”ಯಲ್ಲೂ ಭಾಗವಹಿಸಿದ್ದಿದೆ.
ಕಾಲೇಜಿಗೆ ಹೋದಮೇಲೂ, ಕೆಲಸಕ್ಕೆ ಸೇರಿದ ಮೇಲೂ ನನಗೆ ಈ ಮಣ್ಣಿನ ಹುಚ್ಚು ಕಡಿಮೆಯೇನಾಗಲಿಲ್ಲ. ನವರಾತ್ರಿಯ ಹೊತ್ತಿಗೆ ಚಿತ್ರವಿಚಿತ್ರವಾದ ಬೊಂಬೆಗಳನ್ನು ಮಾಡಿ ಅಮ್ಮನಿಗೆ ಕೊಡುತ್ತಿದ್ದೆ. ದಸರಾ ಹಬ್ಬ ಮುಗಿಯುವವರೆಗೆ ಆ ಬೊಂಬೆಗಳಿಗೂ ಅಮ್ಮನಿಂದ ಪೂಜೆ ಪಡೆವ ಭಾಗ್ಯ! ಎಲ್ಲ ಮುಗಿದ ಮೇಲೆ, ಅ ಬೊಂಬೆಗಳೆಲ್ಲ ತಮ್ಮ ಸ್ವಸ್ಥಾನವಾದ ಕೆರೆಗೇ ಸೇರುತ್ತಿದ್ದವು. ಅಲ್ಲಿಗೆ ನಾನೇನೊ ಮಹಾ ಕಲಾಕಾರನೆಂದಲ್ಲ. ಆದರೆ, ಅವನ್ನು ತಯಾರು ಮಾಡಿದಾಗ ಒಂದು ರೀತಿಯ ಖುಶಿ ಸಿಗುತ್ತದೆ; ಅದಷ್ಟೇ ಲಾಭ, ನನಗೆ.
ಶೂದ್ರಕನ “ಮೃಚ್ಛಕಟಿಕ” ನಾಟಕದ ಕನ್ನಡ ಅನುವಾದದ ಹೆಸರು “ಆವೆಯ ಮಣ್ಣಿನ ಆಟದ ಬಂಡಿ” ಎಂದು. ಕೆಲವು ತಿಂಗಳುಗಳ ಹಿಂದೆ ಆ ನಾಟಕವನ್ನೋದಿದಾಗಿಂದ ನನಗೆ, ಈ ‘ಮಣ್ಣಿನ ಬಂಡಿ’ ಮಾಡಬೇಕೆಂಬ ಹಂಬಲ ಶುರುವಾಗಿತ್ತು. ಈ ವಾರ ಆ ಆಶಯವು ಪೂರ್ತಿಯೂ ಆಯಿತು.
ಇಲ್ಲಿನ ಅಂಗಡಿಗಳಲ್ಲಿ ಬೇರೆಬೇರೆ ಬಗೆಯ ಮಣ್ಣು (clay) ಸಿಗುತ್ತದೆ. ಅವುಗಳಲ್ಲಿ ಕೆಲವನ್ನು ಮನೆಯಲ್ಲಿಯ ಮಾಮೂಲಿನ ಅವೆನ್ನಿನಲ್ಲೇ ಇಟ್ಟು ಬೇಯಿಸಬಹುದು (kilnನ ಅಗತ್ಯವಿರುವುದಿಲ್ಲ). ಎಷ್ಟು ಚೆಂದ, ಅಲ್ಲವೆ? ಮಣ್ಣಿನಿಂದ ಸಣ್ಣಪುಟ್ಟ ಬಟ್ಟಲನ್ನೊ, ತಟ್ಟೆಯನ್ನೊ ಮಾಡಿಕೊಂಡು, ಅವನ್ನು ದಿನನಿತ್ಯ ಬಳಸಬಹುದು.
ನಾನು, ಮೊದಲಿಗೆ ಪಾಲಿಮರ್ ಮಣ್ಣಿನಿಂದ ಒಂದು ಬಂಡಿಯನ್ನು ತಯಾರಿಸಿದೆ. ಅದೇಕೊ ಅಷ್ಟಕ್ಕೇ ತೃಪ್ತಿಯಾಗದೆ, Air-dry clayಯನ್ನೂ ಬಳಸಿ ಮತ್ತೊಂದು ಬಂಡಿಯನ್ನು ತಯಾರಿಸಿದೆ [ಇದನ್ನು ೨೦೦೦ ವರ್ಷಗಳ ಹಿಂದಿನ ಮಣ್ಣಿನ ಬಂಡಿಯ ಮಾದರಿಯೊಂದನ್ನು ನೋಡಿ ತಯಾರಿಸಿದ್ದು]
ಶಾಲೆಯ ದಿನಗಳ ಮೆಲುಕು
ಹೋದ ವಾರ ಯಾವುದೊ ಶಾಲೆಯೊಂದರಲ್ಲಿ ಮಕ್ಕಳು ಪೊರಕೆ ಹಿಡಿದು ಶಾಲೆಯನ್ನು ಶುಚಿಗೊಳಿಸುತ್ತಿದ್ದ ಬಗ್ಗೆ ಒಂದು ವರದಿಯನ್ನು ನೋಡಿದೆ; ಮಕ್ಕಳ ಕೈಲಿ ಹಾಗೆ ಶಾಲೆಯನ್ನು ಚೊಕ್ಕಗೊಳಿಸಿದ್ದು ತಪ್ಪು ಎಂಬ ಭಾವನೆ ವ್ಯಕ್ತವಾಗಿತ್ತು, ಆ ಸುದ್ದಿಯಲ್ಲಿ. ಪ್ರತ್ಯೇಕವಾಗಿ ಆ ಶಾಲೆಯ/ ಸುದ್ದಿಯ ಬಗ್ಗೆ ಹೆಚ್ಚಿನ ವಿವರಗಳು ನನಗೆ ತಿಳಿಯವು; ಆದರೆ, ಹಾಗೆ ಮಕ್ಕಳ ಕೈಲಿ ಶಾಲೆಯನ್ನು ಸ್ವಚ್ಛಗೊಳಿಸುವುದು ಮಹಾ ಅಪರಾಧವೆಂದೇನೂ ತೋರಲಿಲ್ಲ, ನನಗೆ.
ನಾನು ಹೈಸ್ಕೂಲಿನಲ್ಲಿದ್ದಾಗ, ೮-೯-೧೦ ನೇ ತರಗತಿಯ ಮಕ್ಕಳೆಲ್ಲ ಸೇರಿ (ಇದ್ದ ಎಲ್ಲ ವಿಭಾಗಗಳವರೂ ಕೂಡಿ) ಒಂದು ಸಂಘಟನೆಯನ್ನು ಮಾಡಿಕೊಂಡಿದ್ದೆವು [ಇದು ನಮ್ಮ ಶಾಲೆಯ ದೈಹಿಕ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ರಚಿತವಾಗಿದ್ದುದು]. ಆ ಸಂಘಟನೆಯ ನಿಯಮದ ಪ್ರಕಾರ, ಪ್ರತಿದಿನದ ಪ್ರಾರ್ಥನೆಯ ವ್ಯವಸ್ಥೆಯನ್ನೂ, ವಾರಕ್ಕೊಮ್ಮೆ ಶಾಲೆಯನ್ನು ಶುಚಿಗೊಳಿಸುವ ಕೆಲಸವನ್ನೂ — ಸರದಿ ಪ್ರಕಾರ ಒಂದೊಂದು ತರಗತಿ/ವಿಭಾಗದ ಮಕ್ಕಳು ನೋಡಿಕೊಳ್ಳಬೇಕಾಗುತ್ತಿತ್ತು. ಹಾಗೆ, ಪ್ರತಿಯೊಂದು ತರಗತಿಯ ಮಕ್ಕಳಿಗೂ ತಮ್ಮ ಸರದಿ ಹಾಗೂ ಜವಾಬ್ದಾರಿಯ ಅರಿವಿದ್ದುದರಿಂದ, ನಾವೆಲ್ಲ ನಮ್ಮನಮ್ಮ ಸರದಿಯಂತೆ ಮಾಡಬೇಕಾದ ಕೆಲಸವನ್ನು ಬಹಳ ಉತ್ಸಾಹದಿಂದಲೆ ಮಾಡುತ್ತಿದ್ದೆವು.
ಶಾಲೆಯನ್ನು ಚೊಕ್ಕವಾಗಿಸಲು ನಮ್ಮ ಸರದಿಯು ಪುನರಾವರ್ತನೆಯಾಗುತ್ತಿದ್ದುದು ಮತ್ತೆ ಒಂದೊ ಎರಡೊ ತಿಂಗಳ ನಂತರವಷ್ಟೆ. ಹಾಗಾಗಿ ನಮಗೆ ಅದೇನು ದೊಡ್ಡ ಕಷ್ಟವೆಂದೂ ಶೋಷಣೆಯೆಂದೂ ಅನಿಸುತ್ತಿರಲಿಲ್ಲ.
ನಾನು ಒಂದು ಸರ್ಕಾರೀ ಶಾಲೆಯೂ ಸೇರಿದಂತೆ ನಾಲ್ಕು ಬೇರೆಬೇರೆ ಶಾಲೆಗಳಲ್ಲಿ ಓದಿದವನು. ನಮ್ಮೂರಿನಲ್ಲಿ ಆ ಕಾಲಕ್ಕೆ ಇದ್ದ ಕಾನ್ವೆಂಟ್ ಶಾಲೆಗಳೂ ಇಂದಿನ ಬಹುತೇಕ (ಕಾನ್ವೆಂಟ್) ಶಾಲೆಗಳಂತೆ ಘನವಾದ ಕಟ್ಟಡವಿರುವ, ರಾಶಿರಾಶಿ ದುಡ್ಡು ಸುಲಿಯುವ ಶಾಲೆಗಳಂತಿರಲಿಲ್ಲ; ಅಲ್ಲಿ ರೂಢಿಯಲ್ಲಿದ್ದ ಕ್ರಮವೂ ಮುಂಚೆ ತಿಳಿಸಿದ್ದಕ್ಕಿಂತ ಹೆಚ್ಚು ಭಿನ್ನವಾಗಿರಲಿಲ್ಲ.
ಇವಿಷ್ಟಲ್ಲದೆ, ಪ್ರತ್ಯೇಕವಾಗಿ ಆಯಾ ತರಗತಿಯ ಮಟ್ಟಿಗೆ — ಪ್ರತಿನಿತ್ಯವೂ ಬೋರ್ಡನ್ನು ಸ್ವಚ್ಛಗೊಳಿಸುವುದು, ಬೋರ್ಡಿನ ಮೇಲೆ ತಾರೀಖು ದಿನಗಳನ್ನೂ, ಸುಭಾಷಿತವನ್ನೇನಾದರೂ ಬರೆಯುವ ಪರಿಪಾಠವೂ ಸರದಿ/attendance ಪ್ರಕಾರವೇ ನಡೆಯುತ್ತಿತ್ತು. ಈ ಕೆಲಸಗಳೆಲ್ಲ ನಮಗೆ ಎಂದೂ ಘಾಸಿ ಎನಿಸಿರಲಿಲ್ಲ. ಬದಲಿಗೆ, ಅದು ಇಷ್ಟವೇ ಆಗುತ್ತಿತ್ತು. ನಾವು ಯಾರೂ ಅದರ ಬಗ್ಗೆ ಹೇವರಿಸಿಕೊಂಡಿದ್ದಾಗಲೀ, ಹಳಿದುಕೊಂಡಿದ್ದಾಗಲೀ ನನಗೆ ನೆನಪಿಲ್ಲ.
ಆದರೆ ಇಂದಿನ ಸ್ಥಿತಿ ಹೇಗಿದೆಯೊ ಕಾಣೆ! ಮಕ್ಕಳು ತಮ್ಮದೇ ಶಾಲೆಯನ್ನು ಶುಚಿಗೊಳಿಸಿದ್ದು ದೊಡ್ಡಮಟ್ಟದ ‘ಕೆಟ್ಟ’ ಸುದ್ದಿಯಾಗುತ್ತದೆ ಎಂಬುದನ್ನು ಕಂಡು ಅಚ್ಚರಿಯೂ ಖೇದವೂ ಆಯಿತು, ನನಗೆ.
ಎಂದೆಂದಿಗೂ ಕಾಡುವ ಗೀತೆ
“ಸೀತೆ ಲೋಕಮಾತೆಯಾದರೂ, ಅವಳಿಗೂ ಕಣ್ಣೀರು ತಪ್ಪಲಿಲ್ಲ, ಕಷ್ಟ ಕೊನೆಗಾಣಲಿಲ್ಲ; ಇನ್ನು ನಮ್ಮದ್ಯಾವ್ ಲೆಕ್ಕ”
ಶರಪಂಜರ ಚಿತ್ರದಲ್ಲಿ, ದುರಂತ ನಾಯಕಿ ಕಾವೇರಿಯು ಹೇಳುವ ಮಾತಿದು.
ಶರಪಂಜರದ ಕಥೆಯೇ ಅಷ್ಟು ದಾರುಣವಾಗಿದೆ; ಇನ್ನು ಅದರಲ್ಲಿ ಕರುಣಾರಸವುಕ್ಕಿಸುವಂತಹ — ಸೀತೆಯ ಕಥೆಯನ್ನು, ಈ ಹಾಡಿನಲ್ಲಿ ಹೊಂದಿಸಿ, ಚಿತ್ರದ ಸಂದರ್ಭಕ್ಕೆ ತಕ್ಕಹಾಗೆ ಅಳವಡಿಸಿದ್ದಾರೆ.
ಅತ್ತ ಕಾವೇರಿಯ ಮನಸ್ಸಿನ ನೋವೆಲ್ಲ ಸೀತೆಯ ಬಗೆಗಿನ ಹಾಡಾಗಿ ಹರಿದರೆ, ಇತ್ತ ಕೇಳುವ/ನೋಡುವವರ ಮನಸ್ಸು — ಸೀತೆಯ ನೋವು ತಮ್ಮದೇ ಎನಿಸುವಷ್ಟು ತಾದಾತ್ಮ್ಯ ಹೊಂದುತ್ತದೆ. ಕಣ್ಣುಗಳು ನಮಗರಿವಿಲ್ಲದೇ ತೇವಗೊಂಡು, ದುಃಖದಿಂದ ನಮ್ಮ ಕೊರಳು ಉಬ್ಬುತ್ತದೆ.
ಸೀತೆಯು ವನವಾಸದ ಕಾಲದಲ್ಲಿ ಯಾವ ನೋವನ್ನನುಭಸಿದಳೊ ಅದಕ್ಕಿಂತ ನೂರಾರು ಪಟ್ಟು ಹೆಚ್ಚಿನ ನೋವು ದುಃಖಗಳನ್ನು — ಆ ನಂತರದ ದಿನಗಳಲ್ಲಿ ಅನುಭವಿಸಬೇಕಾಯಿತು. ವನವಾಸದ ನಂತರದ ಕಥೆ ಕೇಳಿದಾಗ, ಸೀತೆಯನ್ನು ನೆನೆದು ಯಾರೇ ಆದರೂ ಮರುಗದಿರಲಾರರು. ಆಗೆಲ್ಲ, ಎಂತಹ ರಾಮಭಕ್ತನ ಮನಸ್ಸಿನಲ್ಲಾದರೂ, ಒಂದು ಕ್ಷಣದ ಮಟ್ಟಿಗಾದರೂ — “ಲೋಕಮಾತೆಗೆ ಶೋಕಸಾಗರವೆ, ನಿರ್ದಯಿ ರಾಮ!”, “ಮತ್ತೆ ಸೀತೆಯ ಕಾಡಿಗಟ್ಟಿದ — ನ್ಯಾಯವಾದಿ ರಾಮ” ಎಂಬ ಭಾವನೆ ಮೂಡದಿರದು.
ಈ ಹಾಡಿನ ಸಾಹಿತ್ಯವೂ, ಕಲ್ಪನಾ ಅವರ ನಟನೆಯೂ ಒಂದಕ್ಕೊಂದು ಸ್ಪರ್ಧಿಸುವಂತೆ — ನಮ್ಮ ಮನಸ್ಸನ್ನು ಹೊಕ್ಕು ಕಾಡುತ್ತವೆ.