ಐದು ಮಾತುಗಳು — ೫
ಜಂಗಮಕ್ಕಳಿವಿಲ್ಲ
ಇದ್ದಕ್ಕಿದ್ದಂತೆ ಟ್ವಿಟ್ಟರಿನ ಸ್ನೇಹಿತರೊಬ್ಬರು ಒಂದು ಪ್ರಶ್ನೆಯನ್ನು ಕಳುಹಿಸಿದ್ದರು — “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ -ಎಂಬ ಸಾಲಿನ ಅರ್ಥವೇನು?” ಎಂದು.
ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ? ಬಡವನಯ್ಯಾ
ಎನ್ನ ಕಾಲೇ ಕಂಭ, ದೇಹವೇ ದೇಗುಲ,
ಶಿರವೇ ಹೊನ್ನ ಕಳಸವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ -
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಾ!
ಇದು ಮೂಲ ವಚನ; ಬಹುಶಃ ಇದನ್ನು ಎಲ್ಲರೂ ಕೇಳಿಯೇ ಇರುತ್ತಾರೆ.
‘ಉಳ್ಳವರು ಶಿವಾಲಯಗಳನ್ನು ಕಟ್ಟಿಸುತ್ತಾರೆ; ನಾನೇನು ಮಾಡಲಿ, ಬಡವ (ನಾನು ಯಾವ ಆಲಯವನ್ನೂ ಕಟ್ಟಿಸಲಾರೆ); ನನ್ನ ಕಾಲೇ ಕಂಭ, ದೇಹವೇ ಆಲಯ; ಆ ಆಲಯಕ್ಕೆ ನನ್ನ ಶಿರವೇ ಬಂಗಾರದ ಕಳಸ’ — ಇಲ್ಲಿಯವರೆಗೂ ಬಹಳ ಸರಳವಾಗಿಯೇ ಇದೆ. ಆದರೆ ಆ ಕೊನೆಯ ಸಾಲಿದೆಯಲ್ಲ, ಅದರ ಅರ್ಥವು ಬಹಳ ಆಳವಾದುದು. ಅದನ್ನು ಗ್ರಹಿಸುವುದು ತುಸು ಕಷ್ಟವೆನಿಸುವುದು.
ಅದನ್ನು ನಾನಾ ರೀತಿಯಲ್ಲಿ ವ್ಯಾಖಾನಿಸಲು, ಅರ್ಥಮಾಡಿಕೊಳ್ಳಲು ಅವಕಾಶವಿದೆ. ಅದಕ್ಕೆ, ನನ್ನ ಅರಿವಿನ ಪರಿಧಿಯಲ್ಲಿ ಆ ಸಾಲನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ಇದರಲ್ಲಿ ಯಾವುದಾದರೂ ದೋಷ ಅಪಚಾರವಾಗಿದ್ದರೆ ಅದರ ಹೊಣೆ ನನ್ನದು:
ಅಳಿವು (ಅೞಿವು) ಎಂಬ ಪದಕ್ಕೆ — ನಿಘಂಟುಗಳ ಪ್ರಕಾರ ನಾಶ, ಸಾವು, ಶೈಥಿಲ್ಯ, ಶಿಥಿಲತೆ ಎಂಬ ಅರ್ಥಗಳಿವೆ. ಸ್ಥೂಲವಾಗಿ, ಆ ಪದಕ್ಕೆ ‘ನಾಶ’ ಅಥವಾ ‘ಸಾವು’ ಎಂಬ ಅರ್ಥವೇ ಹೆಚ್ಚು ಸೂಕ್ತವೆನಿಸುತ್ತದೆ.
ಈ ವಚನದಲ್ಲಿ ಬಸವಣ್ಣನವರು ತಮ್ಮ ದೇಹವನ್ನೇ ಆಲಯವನ್ನಾಗಿ ಕಂಡು, ಅದನ್ನು ‘ಉಳ್ಳವರು’ ಕಲ್ಲು-ಮಣ್ಣುಗಳನ್ನು ಬಳಸಿ ಕಟ್ಟಿಸುವ ಶಿವಾಲಯದ ಸ್ವರೂಪಕ್ಕೆ ಹೋಲಿಸಿ ನೋಡಿದ್ದಾರೆ. ಬಸವಣ್ಣನವರು ಕಲ್ಪಿಸುವ ದೇವಾಲಯಕ್ಕೆ ಅವರ ಕಾಲುಗಳೇ ಕಂಭಗಳು, ಶಿರವೇ ಹೊನ್ನಿನ ಕಳಸ; ಇಡೀ ದೇಹವೇ ದೇಗುಲ. ಅದೂ ಯಾರ ದೇಗುಲ? ಸಾಕ್ಷಾತ್ ಶಿವನ, ಕೂಡಲ ಸಂಗಯ್ಯನು ನೆಲೆನಿಂತ ದೇವಾಲಯ ಅದು.
ಅದಾಗ್ಯೂ, ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬುದರ ಅರ್ಥವೇನು? ಇಲ್ಲಿ ಸ್ಥಾವರ ಎಂದರೆ ಯಾವುದು ಜಂಗಮ ಎಂದರೆ ಯಾವುದು/ಯಾರು?
ಸ್ಥಾವರವೆಂದರೆ — ಚಲನೆಯಿಲ್ಲದ ಜಡವಸ್ತು, ಅಚೇತನವಾದುದು. ಇದ್ದಲ್ಲಿಯೆ ಇರುವ ಬೆಟ್ಟ ಗುಡ್ಡ, ಕಟ್ಟಡ, ಕಂಬ ಮೊದಲಾದುವು.
ಜಂಗಮವೆಂದರೆ — ಚಲನಶೀಲವಾದದ್ದು. ಒಂದೆಡೆಯಿಂದ ಇನ್ನೊಂದೆಡೆಗೆ, ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಸಾಗುವಂಥದ್ದು. ವೀರಶೈವದ ಪರಿಭಾಷೆಯಲ್ಲಿ ಜಂಗಮ ಎಂದರೆ ವಿರಕ್ತನಾದವನು, ಲೋಕಸಂಚಾರಿಯಾದ ಶಿವಭಕ್ತನೆಂಬ ಅರ್ಥವೂ ಇದೆ.
ವಚನದಲ್ಲಿ ಶಿವಾಲಯವನ್ನ ‘ಸ್ಥಾವರ’ವೆಂದು ಅರ್ಥೈಸುವುದಾದರೆ — ಕಲ್ಲುಮಣ್ಣುಗಳಿಂದ ಕಟ್ಟಿದ ಆಲಯ/ಕಟ್ಟಡವು ನಾಶವಾಗಬಹುದು, ಆದರೆ -‘ಜಂಗಮ’ಸ್ವರೂಪವಾದ- ದೇಹವೆಂಬ ಆಲಯಕ್ಕೆ ಅಳಿವೆಂಬುದು ಇಲ್ಲ ಎಂದಾಗುತ್ತದೆ. ಆದರೆ, ಆ ಅರ್ಥವು ಇಲ್ಲಿ ನಿಜಕ್ಕೂ ಹೊಂದುತ್ತದೆಯೇ? ಅದಲ್ಲದೆ, ಇಲ್ಲಿ ‘ಜಂಗಮ’ವೆಂಬ ಮಾತು ಬರಿ ಬಸವಣ್ಣನಿಗಷ್ಟೆ ಅನ್ವಯಿಸಬೇಕೊ ಅಥವಾ ಎಲ್ಲಾ ಜಂಗಮರಿಗೂ ಅನ್ವಯಿಸಬೇಕೋ?
ಹಾಗೊಮ್ಮೆ ಅನ್ವಯಿಸಿ ನೋಡಿದರೂ, ಎಲ್ಲರೂ ಕಾಲಾಂತರದಲ್ಲಿ ಮಡಿದವರೇ, ಮಡಿಯಬೇಕಾದವರೇ. ಹಾಗಾದಾಗ, “ಜಂಗಮಕ್ಕಳಿವಿಲ್ಲ” ಎಂಬ ಉಕ್ತಿ ಹೊಂದುವುದಿಲ್ಲ.
ಇನ್ನೊಂದು ಆಯಾಮದಿಂದ ನೋಡಿದಾಗ:
ಮುಂಚೆ ಗಮನಿಸಿದ ಹಾಗೆ, ಸ್ಥಾವರವೆಂದರೆ — ಕಲ್ಲು-ಮಣ್ಣು ಬೆಟ್ಟ-ಗುಡ್ಡ ಮುಂತಾದ ಚಲನೆಯಿಲ್ಲದ, ಜಡವಸ್ತುಗಳು; ಕಟ್ಟಡದಲ್ಲಿಯ ಕಂಭಗಳೂ, ಕಳಸವೂ, ಇಡೀ ಕಟ್ಟಡದ ಸ್ವರೂಪವೇ ಜಡವಾದುದು, ಚಲನೆಯಿಲ್ಲದ್ದು. ಒಂದರ್ಥದಲ್ಲಿ, ನಮ್ಮ ದೇಹವೂ ಕೂಡ ಜಡವೇ, ಅಲ್ಲವೆ? ಆತ್ಮ/ಪ್ರಾಣವೆಂಬ ಚೇತನವಿಲ್ಲದಿದ್ದರೆ ಈ ದೇಹವೂ ಕೂಡ ಚಲಿಸಲಾರದು, ಮಾತಾಡಲಾರದು, ನೋಡಲಾರದು.
ಇನ್ನು, ಜಂಗಮವೊ — ಅದು ಚಲನಶೀಲ ತತ್ತ್ವ, ಗುಣ. ಯಾವ ಚೈತನ್ಯದ ಕಾರಣದಿಂದ ದೇಹವು ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಗುವುದೊ, ಆ ಚೈತನ್ಯವೇ ಆತ್ಮ. ಈ ಆತ್ಮವು ನಾಶವಿಲ್ಲದ್ದು, ಶಾಶ್ವತವಾದುದು. ಕಾಲಾಂತರಗಳಲ್ಲಿ ಆತ್ಮವು ಅನೇಕಾನೇಕ ದೇಹಗಳನ್ನು ಧರಿಸಿ, ಆ ದೇಹವು ಜೀರ್ಣಾವಸ್ಥೆಗೆ ಸಂದಾಗ ಅದನ್ನು ತ್ಯಜಿಸಬಹುದು. ಆದರೆ ಅದಕ್ಕೆ (ಆತ್ಮಕ್ಕೆ) ಯಾವ ಕೇಡೂ ಬಾರದು.
ಭಗವದ್ಗೀತೆಯ ಒಂದು ಶ್ಲೋಕವನ್ನು ಇಲ್ಲಿ ಅನುಸಂಧಾನ ಮಾಡಬಹುದು:
ನೈನಂ ಛಿನ್ದನ್ತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನ ಚೈನಂ ಕ್ಲೇದಯನ್ತ್ಯಾಪೋ ನ ಶೋಷಯತಿ ಮಾರುತಃ ||
(ಆತ್ಮವನ್ನು) ಶಸ್ತ್ರಗಳು ಖಂಡಿಸಲಾರವು, ಬೆಂಕಿಯು ದಹಿಸಲಾರದು, ನೀರು ನೆನೆಸಲಾರದು, ಗಾಳಿಯು ಆರಿಸಲಾರದು. ಒಟ್ಟಾರೆ, ಈ ಆತ್ಮವು ಅವಿನಾಶಿಯಾದುದು.
ಈ ಅವಿನಾಶಿಯಾದ ಆತ್ಮವನ್ನು ದೃಷ್ಟಿಯಲ್ಲಿಟ್ಟುಕೊಂಡೇ “ಸ್ಥಾವರಕ್ಕಳಿವುಂಟು (ದೇಹ) ಜಂಗಮಕ್ಕಳಿವಿಲ್ಲ (ಆತ್ಮ)” ಎಂದಿರಬಹುದೆ?
ಪಸಂದೆನಿಸುವ ಖಾದ್ಯ — ದಿಲ್ ಪಸಂದ್
ಬೇಕರಿಯೆಂದರೆ ನನಗೆ ಮೊದಲು ನೆನಪಾಗುವುದು ವೆಜ್ ಪಫ್ಸ್ ಹಾಗೂ ದಿಲ್ ಪಸಂದ್. ನಾನು ಇಲ್ಲಿಗೆ (ಅಟ್ಲಾಂಟಾ) ಬಂದ ನಂತರ ಈ ತಿನಿಸುಗಳ ಬಗ್ಗೆ ಬಹಳ ಧೇನಿಸುತ್ತಿದ್ದೆ. ಈಗ್ಗೆ ಎರಡು ವರ್ಷಗಳ ಹಿಂದೆ ನಾನೇ ಮನೆಯಲ್ಲಿ — ನನಗೆ ಬೇಕೆನಿಸಿದ ತಿಂಡಿಗಳನ್ನು ‘ಬೇಕ್’ ಮಾಡಲು ಶುರು ಮಾಡಿದೆ. ಆ ಮೊದಲ ದಿನಗಳಲ್ಲಿ, ಈ ದಿಲ್ ಪಸಂದನ್ನೂ ಮನೆಯಲ್ಲೊಮ್ಮೆ ಮಾಡಬಾರದೇಕೆ ಎಂಬ ಯೋಚನೆಗಿಟ್ಟುಕೊಂಡಿತು.
ಮುಖ್ಯ ಈ ವೆಜ್ ಪಫ್ಸ್, ದಿಲ್ ಪಸಂದ್’ನಂತಹ ಖಾದ್ಯವನ್ನು ತಯಾರಿಸಲು ಬಳಸುವ ಪೇಸ್ಟ್ರಿ ಶೀಟ್ ಅನ್ನು ತಯಾರಿಸುವುದು ಬಲು ಪ್ರಯಾಸದ ಕೆಲಸವೆಂದು ಆಗಷ್ಟೆ ಕಂಡುಕೊಂಡಿದ್ದೆ. ಹಾಗಿದ್ದರೆ, ಅವನ್ನು ಮಾಡಲು ಸುಲಭದ ದಾರಿಯೇ ಇಲ್ಲವೇ ಎಂಬ ಪ್ರಶ್ನೆ ತಲೆದೋರಿತ್ತು. ಬರಿ ಒಂದೆರಡು ವಾರಗಳಲ್ಲೆ ಅದಕ್ಕೆ ಉತ್ತರವೂ ದೊರೆಯಿತು.
ಇಲ್ಲಿ ಚಪಾತಿ, ಪರೋಟ ತೆರದ ತಿಂಡಿಗಳು ಫ್ರೋಝನ್ ರೂಪದಲ್ಲಿ ಸಿಗುತ್ತವೆ. ಅವನ್ನು ಬೇಕೆನಿಸಿದಾಗ ಬಿಸಿ ಮಾಡಿಕೊಂಡರೆ ಚಪಾತಿ, ಪರೋಟ ಸವಿಯಲು ಸಿದ್ಧ.! ಪದರಪದರವಾಗಿರುವ ಕೇರಳ ಪರೋಟವೂ ಸಿಗುತ್ತದೆಯಲ್ಲ; ಅದು ಇಂಚುಮಿಂಚು ಆ ಪಫ್ ಪೇಸ್ಟ್ರಿಯನ್ನೇ ಹೋಲುತ್ತದೆಯೆಂಬ ವಿಚಾರವು ನನಗೊಮ್ಮೆ ಹೊಳೆಯಿತು. ಸರಿ, ಆ ಸಾರಿ ಕೇರಳ ಪರೋಟ ತಂದು, ಜೊತೆಗೆ ಕಾಯಿತುರಿ, ಟೂಟಿಫ್ರೂಟಿ, ಕೊಕೊನಟ್ ಪೌಡರ್ ಮುಂತಾದವನ್ನು ತಂದುಕೊಂಡೆ. ಇವೆಲ್ಲವನ್ನೂ ಬಳಸಿ ಅತಿ ಸುಲಭವಾಗಿ ಸವಿಯಾದ ದಿಲ್ ಪಸಂದ್ ಅನ್ನು ಮಾಡುವ ವಿಧಾನವನ್ನು ಕಂಡುಕೊಂಡೆ. (ಕೆಲವೊಮ್ಮೆ ಇದೇ ವಿಧಾನವನ್ನು ಬಳಸಿ ವೆಜ್ ಪಫ್ ಮಾಡಿದ್ದೂ ಉಂಟು)
ಸ್ವಲ್ಪ ಜಾಮಿಗೆ ಒಂದೆರಡು ಚಮಚ ನೀರನ್ನು ಬೆರೆಸಿ, ಒಲೆಯಮೇಲಿಟ್ಟುಕೊಳ್ಳಬೇಕು. ಅದು ಚೆನ್ನಾಗಿ ಕರಗಿ, ಕುದಿಯಲು ಶುರುವಾದಾಗ ಒಂದಿಷ್ಟು ಸಕ್ಕರೆಯನ್ನು ಸೇರಿಸಿ ತಿರುಗಿಸಿಕೊಳ್ಳಬೇಕು. ಇದಕ್ಕೆ ಕಾಯಿತುರಿ (ಅಥವಾ ಡ್ರೈ ಕೊಕೊನಟ್ ಪೌಡರ್), ಟೂಟಿಫ್ರೂಟಿಯನ್ನೂ ಸೇರಿಸಿ ಕಲಸಿಕೊಳ್ಳಬೇಕು. ಈ ಮಿಶ್ರಣಕ್ಕೆ — ಹುರಿದ ದ್ರಾಕ್ಷಿ ಗೋಡಂಬಿ, ತುಸು ಏಲಕ್ಕಿಪುಡಿಯನ್ನು ಸೇರಿಸಿ ಬೆರೆಸಿಕೊಂಡರೆ ದಿಲ್ ಪಸಂದ್ ಒಳಗಿನ ಹೂರಣ ಸಿದ್ಧವಾಗುತ್ತದೆ.
ಇನ್ನು, ಫ್ರೋಝನ್ ಪರೋಟ ಒಂದನ್ನು ತೆಗೆದುಕೊಂಡು ಅದನ್ನು ೨೦ ಸೆಕೆಂಡಿನಷ್ಟು ಕಾಲ ಮೈಕ್ರೊವೇವ್ ಮಾಡಿದರೆ ಅದು ಸ್ವಲ್ಪ ಮೆತ್ತಗಾಗುತ್ತದೆ. ಅದನ್ನು ಬಟರ್ ಶೀಟ್ ಹರಡಿರುವ ಅಗಲವಾದ ತಟ್ಟೆಯೊಂದರ ಮೇಲೆ ಹಾಕಿ (ಈ ತಟ್ಟೆ/ಟ್ರೇ ಅವೆನ್ನಿನ್ನಲ್ಲಿಡಬಹುದಾದದ್ದಾಗಿರಬೇಕು). ಈಗ ಅದರ ಮೇಲೆ, ಮುಂಚೆ ಸಿದ್ಧಪಡಿಸಿಕೊಂಡ ಮಿಶ್ರಣವನ್ನು ಹರಡಿ. ಅಂಚಿನಲ್ಲಿ ಸ್ವಲ್ಪ ಜಾಗವಿರಲಿ. ಈಗ, ಮತ್ತೊಂದು ಪರೋಟವನ್ನು ೨೦ ಸೆಕೆಂಡ್ ಮೈಕ್ರೊವೇವ್ ಮಾಡಿಕೊಂಡು, ಅದನ್ನು ಈ ಮೊದಲು ತೆಗೆದು, ಮಿಶ್ರಣವನ್ನು ಹರಡಿಕೊಂಡಿದ್ದ ಪರೋಟದ ಮೇಲೆ ಹಾಕಿ. ಎರಡೂ ಪರೋಟಗಳ ಅಂಚುಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಒತ್ತಿದ ನಂತರ, ಸುತ್ತಲೂ ಮುರುವಿಡಿ. ಹೀಗೆ ಮಾಡಿದ ಮೇಲೆ, ಹಾಲು ಅಥವಾ ಬೆಣ್ಣೆಯನ್ನು ಆ ಮೇಲಿನ ಪದರಕ್ಕೆ ಸವರಿ. ಇಷ್ಟಾದ ಬಳಿಕ, ಇದನ್ನು ೨೦೦ ಡಿಗ್ರಿ ಸೆಂಟಿಗ್ರೇಡ್’ಗೆ ಮೊದಲೇ ಬಿಸಿಮಾಡಿದ್ದ ಅವೆನ್ನಿನಲ್ಲಿಟ್ಟು ೨೫-೩೦ ನಿಮಿಷಗಳವರೆಗೆ ಬೇಕ್ ಮಾಡಿ. ಅಷ್ಟೆ, ಪಸಂದೆನಿಸುವ ದಿಲ್ ಪಸಂದ್ ತಯಾರಾಗುತ್ತದೆ.
ಇತ್ತೀಚೆಗೆ ಓದಿದ್ದು : ಶ್ರೀ ನೃಸಿಂಹಪುರಾಣಮು
ತೆಲುಗಿನ ಮಹಾಭಾರತವನ್ನು ರಚಿಸಿದ ಕವಿತ್ರಯರ ಪೈಕಿ ಎರ್ರಾಪ್ರಗ್ಗಡನು ಕೊನೆಯವ; ಈತ ಮಹಾಭಾರತಲ್ಲಿಯ ‘ಅರಣ್ಯಪರ್ವ’ದ ಉತ್ತರಾರ್ಧವನ್ನು ತೆಲುಗಿಗೆ ಅನುವಾದಿಸಿದ್ದಾನೆ.
ಎರ್ರಾಪ್ರಗ್ಗಡನು ಶಿವಭಕ್ತನಾದರೂ (ತನ್ನನ್ನು ‘ಶಂಕರದಾಸ’ ಎಂದು ಕರೆದುಕೊಂಡಿದ್ದಾನೆ. ನಂತರದ ಕವಿ ಶ್ರೀನಾಥನೂ ಎರ್ರಾಪ್ರಗ್ಗಡನನ್ನು ಶಂಭುದಾಸ ಎಂದು ಸ್ಮರಿಸಿದ್ದಾನೆ), ಆಂಧ್ರದ ಅಹೋಬಿಲದ ನರಸಿಂಹಸ್ವಾಮಿಯ ಮಹಿಮೆಯನ್ನು ಸಾರುವಂತಹ ‘ಶ್ರೀ ನೃಸಿಂಹಪುರಾಣಮು’ ಎಂಬ ಕೃತಿಯನ್ನು ರಚಿಸಿದ್ದಾನೆ. ಇತ್ತೀಚೆಗೆ ಆ ಕೃತಿಯನ್ನು ಓದುವುದಾಯಿತು.
ವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಸನಕಾದಿ ಋಷಿಗಳ ಶಾಪದಿಂದ ಭೂಲೋಕದಲ್ಲಿ (ಅಸುರರಾಗಿ) ಜನಿಸಬೇಕಾಗುತ್ತದೆ. ಹಾಗೆ, ಜಯ ವಿಜಯರು ಒಮ್ಮೆ ಹಿರಣ್ಯಕಶಿಪು, ಹಿರಣ್ಯಾಕ್ಷ ಎಂಬ ರಾಕ್ಷಸರಾಗಿ ಜನಿಸುತ್ತಾರೆ.
ಹಿರಣ್ಯಕಶಿಪುವು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ, ತನಗೆ — ದೇವತೆಗಳಿಂದಲೂ, ಪಿತೃಗಳಿಂದಲೂ, ಮಾನವರಿಂದ ಅಥವಾ ಯಾವುದೇ ಪ್ರಾಣಿಪಕ್ಷಿಗಳಿಂದಲೂ, ಯಾವ ಆಯುಧದಿಂದಲೂ, ಬೆಳಗಿನ ಹೊತ್ತಿನಲ್ಲೂ ರಾತ್ರಿಯ ಹೊತ್ತಲ್ಲೂ, ಭೂಮಿಯ ಮೇಲೂ ಆಕಾಶದಲ್ಲೂ — ತನಗೆ ಯಾವ ಅಪಾಯವೂ, ಸಾವೂ ಸಂಭವಿಸದಿರಲಿ ಎಂಬ ವರವನ್ನು ಪಡೆದ.
ಆನಂತರದ ಕಥೆ ಬಹುಶಃ ಎಲ್ಲರಿಗೂ ತಿಳಿದದ್ದೇ. ತನ್ನ ಮಗ ಪ್ರಹ್ಲಾದನ ವಿಷ್ಣುಭಕ್ತಿಯಿಂದ ಕುಪಿತನಾದ ಹಿರಣ್ಯಕಶಿಪುವು ‘ಹರಿಯು ಎಲ್ಲಿದ್ದಾನೆ?’ ಎಂದು ಪ್ರಶ್ನಿಸಿದಾಗ, ಪ್ರಹ್ಲಾದನು “ಹರಿಯು ಎಲ್ಲೆಲ್ಲಿಯೂ ಇದ್ದಾನೆ” ಎಂದುತ್ತರಿಸಿದ. ಆಗ, ಹಿರಣ್ಯಕಶಿಪುವು ತನ್ನ ಆಯುಧವೊಂದರಿಂದ ಆ ಸಭೆಯಲ್ಲಿಯ ಕಂಭಕ್ಕೆ ಹೊಡೆದಾಗ, ಅಲ್ಲಿಂದ ಶ್ರೀಹರಿಯು ನರಸಿಂಹಸ್ವರೂಪನಾಗಿ ಪ್ರಕಟಗೊಂಡ. ತನ್ನ ಮೇಲೆ ದಾಳಿ ಮಾಡಲು ಬಂದ ಸಮಸ್ತ ರಾಕ್ಷಸಸೇನೆಯನ್ನೂ ನೃಸಿಂಹನು ನಿವಾರಿಸಿ, ಹಿರಣ್ಯಕಶಿಪುವನ್ನು ಹೊತ್ತುಕೊಂಡು ಹಾರಿ, ಒಂದು ಬೆಟ್ಟದ ಮೇಲೆ ಕುಳಿತು, ಅಲ್ಲಿ ಆ ರಾಕ್ಷಸಾಧಮನನ್ನು ಸಂಹರಿಸಿದ.
ರೌದ್ರರೂಪದ ನರಸಿಂಹನನ್ನು ಶಾಂತಗೊಳಿಸುವಂತೆ ದೇವತೆಗಳು ಪ್ರಹ್ಲಾದನನ್ನು ಪ್ರಾರ್ಥಿಸಲು, ಅವನು ಅಂತೆಯೆ ಮಾಡಿದ. ಪ್ರಹ್ಲಾದನ ಸ್ತೋತ್ರಗಳಿಂದ ಶಾಂತನಾದ ನರಸಿಂಹನು, ಅವನಿಗೆ ನಾನಾ ವರಗಳನ್ನಿತ್ತು, ತಾನು ಇನ್ನುಮೇಲೆ ಆ ಬೆಟ್ಟದ ಮೇಲೆಯೇ ನೆಲೆಸುವುದಾಗಿ ತಿಳಿಸಿದ. ನರಸಿಂಹನ ಉಗ್ರರೂಪವನ್ನು ಕಂಡು ದೇವತೆಗಳು ‘ಅಹೋಬಲ!’ ಎಂದು ಉದ್ಗರಿಸಿದ್ದರಿಂದ, ಇನ್ನು ಮುಂದೆ ಈ ಕ್ಷೇತ್ರವು ಅಹೋಬಲವೆಂಬ ಹೆಸರಿನಿಂದಲೇ ಪ್ರಖ್ಯಾತವಾಗುವುದೆಂದೂ, ಅಲ್ಲಿ ದೇವಗಂಗೆಯು ಭವನಾಶಿನಿ ಎಂಬ ಹೆಸರಿನ ನದಿಯಾಗಿ ಹರಿಯುವಳು ಎಂದೂ ನರಸಿಂಹಸ್ವಾಮಿಯು ತಿಳಿಸುತ್ತಾನೆ. ಆ ವೇಳೆಗೆ ಶ್ರೀಮಹಾಲಕ್ಷ್ಮಿಯೂ ಅಲ್ಲಿಗೆ ಬಂದು ಸೇರುತ್ತಾಳೆ. ನರಸಿಂಹನು ಮಹಾಲಕ್ಷ್ಮೀ ಸಮೇತನಾಗಿ ಲಕ್ಷ್ಮೀನೃಸಿಂಹ ರೂಪದಲ್ಲಿ ಕಾಣಿಸಿಕೊಂಡು, ಅಲ್ಲಿದ್ದವರನ್ನೆಲ್ಲ ಹರಸುತ್ತಾನೆ. ಇದಿಷ್ಟು ಕಥಾಹಂದರ.
ಮೂಲ ಕಥೆಯಲ್ಲಿ, ನರಸಿಂಹನು ರಾಕ್ಷಸನನ್ನು ಹೊಸ್ತಿಲಮೇಲೆ ಕುಳಿತುಕೊಂಡು ಸಂಹರಿಸುತ್ತಾನೆ ಎಂದಿದೆ (ಭಾಗವತ ಮುಂತಾದ ಪುರಾಣಗಳಲ್ಲಿ ನೃಸಿಂಹಾವತಾರದ ಕಥೆಯಿದೆ). ಆದರೆ ಈ ಕೃತಿಯ ಉದ್ದೇಶ ಅಹೋಬಲಕ್ಷೇತ್ರದ ಮಹಿಮೆಯನ್ನು ಸಾರುವುದಾದ್ದರಿಂದ, ಇಲ್ಲಿ ಹಿರಣ್ಯಕಶಿಪುವಿನ ಸಂಹಾರವಾಗುವುದು ಆ ‘ಅಹೋಬಲ’ಗಿರಿಯ ಮೇಲೆ.
ಎರ್ರಾಪ್ರಗ್ಗಡನ ಕೃತಿಯಲ್ಲಿ ಬರುವ ಕೆಲವು ಪದ್ಯಗಳು ಆ ನಂತರದ ಕಾಲದ ಕವಿ, ವಾಗ್ಗೇಯಕಾರರ ಮೇಲೆ ಪ್ರಭಾವ ಬೀರಿರಬಹುದೆಂದು ವಿದ್ವಾಂಸರು ಗುರುತಿಸಿದ್ದಾರೆ.
ಮುಗಿಲಿಂದ ನೆಗೆದಾಗ
ನಾನು ನನ್ನ ಜೀವನದಲ್ಲಿ ಇಂಥದ್ದೊಂದನ್ನು ಮಾಡಬಹುದೆಂದು ಎಂದೂ ಎಣಿಸಿರಲಿಲ್ಲ. ಅಸಲಿಗೆ, ಏರೊಪ್ಲೇನಿನಲ್ಲಿ ಪ್ರಯಾಣ ಮಾಡಿದುದೇ ಹೆಚ್ಚಿನ ಸಂಗತಿಯೆನಿಸಿತ್ತು, ಒಮ್ಮೆ. ಇನ್ನು, ಅಷ್ಟು ಎತ್ತರದಲ್ಲಿರುವ ವಿಮಾನದಿಂದ ಭೂಮಿಗೆ ನೆಗೆಯಬೇಕಾಗುತ್ತದೆ ಎಂದು ಯಾವ ಕಾಲಕ್ಕೆ ಕನಸು ಕಾಣಬೇಕು, ನಾನು!
ಆದರೇನು, ಮೊನ್ನೆ ಒಮ್ಮೆ ಸ್ಕೈ ಡೈವಿಂಗ್ ಮಾಡುವ ಅವಕಾಶ ಸಿಕ್ಕಿತು. ಯಾವುದೊ ಹಳೆಕಾಲದ ವಿಮಾನದಲ್ಲಿ ೧೪೦೦೦ ಅಡಿಗಳಷ್ಟು ಎತ್ತರಕ್ಕೆ ಹಾರಿ, ಅಲ್ಲಿಂದ ನೆಲದೆಡೆಗೆ ಜಿಗಿದೆವು. ಸ್ಕೈ ಡೈವ್ ಮಾಡುವ ಪ್ರತಿಯೊಬ್ಬರೊಟ್ಟಿಗೂ ಅದರಲ್ಲಿ ಪಳಗಿದ ಇನ್ಸ್ಟ್ರಕ್ಟರ್ (ಬೋಧಕ) ಇರುತ್ತಾನೆ/ಇರುತ್ತಾಳೆ. ಅವರೊಟ್ಟಿಗೆ ನಾವೂ ಹಾರಬೇಕು.
ಮೊನ್ನೆ ನಾವು ಹಾರಿದಾಗ ವಿಮಾನದ ಕೆಳಗೆ ಮುಗಿಲುಗಳ ಸಾಲು. ಒಂದಷ್ಟು ಹೊತ್ತು ಬಿಳಿ ಹತ್ತಿಯ ಮೊತ್ತದೊಳಕ್ಕೆ ಧುಮುಕಿದೆವೇನೊ ಎಂಬಂತೆ ಭಾಸವಾಯಿತು — ಆ ಮುಗಿಲುಗಳ ಮಡಿಲಿನಿಂದ ಜಾರುತ್ತ ಸಾಗಿದಾಗ. ಒಂದೆರಡು ಕ್ಷಣಗಳಲ್ಲೆ ಅದರಿಂದ ಹೊರಬಂದು — ಹಸಿರು ತುಂಬಿದ ನೆಲವನ್ನೂ, ಅಲ್ಲೆ ಅನತಿ ದೂರದಲ್ಲಿ ಹರಿಯುವ ನದಿಯನ್ನೂ, ಸೇತುವೆ, ಗಗನಚುಂಬಿ ಕಟ್ಟಡ ಮೊದಲಾದುವನ್ನೂ ಕಾಣುವುದಾಯಿತು. ಅದೊಂದು ರೋಚಕವಾದ, ವಿಭಿನ್ನ ಅನುಭವ! ಎಷ್ಟೆ ಪ್ರಯತ್ನಿಸಿದರೂ, ನನ್ನಿಂದ ಅದನ್ನು ಮಾತುಗಳಲ್ಲಿ, ಪದಗಳಲ್ಲಿ ವಿವರಿಸುವುದು ಸಾಧ್ಯವಾಗದೇನೊ ಅನಿಸುತ್ತದೆ. ಒಟ್ಟಾರೆ, “ಅದು ರೋಮಾಂಚಕಾರಿಯಾಗಿ, ಚೆನ್ನಾಗಿತ್ತು” ಎನ್ನಬಲ್ಲೆ, ಅಷ್ಟೆ.!
ಗೊಂದಲಗಳು
ನಾವು ಯಾರಿಗಾದರೂ ನಮ್ಮ ಬಗ್ಗೆ ಹೇಳುವಾಗ ನಮ್ಮ ಯಶಸ್ಸಿನ ಬಗ್ಗೆ, ನಮ್ಮ ಸಾಧನೆಗಳ ಬಗ್ಗೆಯಷ್ಟೇ ಹೇಳುತ್ತೇವೆ. ಹಾಗೇಕಾಗಬೇಕು? ನಮ್ಮ ನಮ್ಮ ಸೋಲು, ನಾವು ಎದುರಿಸುತ್ತಿರುವ ದ್ವಂದ್ವ, ಗೊಂದಲಗಳ ಬಗ್ಗೆಯೂ ಹೇಳಿಕೊಂಡರೆ ಸ್ವಲ್ಪವಾದರೂ ನಿರಾಳವೆನಿಸಬಹುದಲ್ಲ. ಅಥವಾ, ಹಾಗೆ ಹೇಳುವಾಗಲೆ ನಮ್ಮ ಪ್ರಶ್ನೆಗಳಿಗೆ ತಕ್ಕ ಉತ್ತರವೂ ನಮ್ಮ ಕಣ್ಮುಂದೆ ಸುಳಿದೀತು. ಯಾರಿಗೆ ಗೊತ್ತು!
ಚಿತ್ರ ಬಿಡಿಸುವುದು, ಅದಕ್ಕೆ ಬಣ್ಣ ಹಚ್ಚುವುದು ನನಗೆ ಚಿಕ್ಕಂದಿನಿಂದ ಪ್ರಿಯವೆನಿಸಿದ್ದ ಕೆಲಸ, ಹವ್ಯಾಸ. ಹಾಗೆಂದು ನಾನೇನು ಅದನ್ನು ಯಾರಲ್ಲಿಯೂ ಅಭ್ಯಾಸ ಅಧ್ಯಯನ ಮಾಡಿದವನಲ್ಲ. ನನ್ನ ಪಾಡಿಗೆ ನಾನು, ನಾನು ಕಂಡದ್ದನ್ನೂ ನನಗೆ ಇಷ್ಟವಾದುದನ್ನೂ ಚಿತ್ರಿಸಿ ಕಾಣಲು ಪ್ರಯತ್ನಿಸಿದ್ದೇನೆ. ಅದು ಕ್ಯಾನ್ವಾಸಿನ ಮೇಲೆ ಮೂಡಿದ್ದನ್ನು ಕಂಡು ಆನಂದಿಸಿದ್ದೇನೆ. ಅದುಹೇಗೊ, ನನಗೆ ನೆನಪಿರುವಷ್ಟು ಹಿಂದಿನ ವರ್ಷಗಳಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಈ ಹವ್ಯಾಸವು ನನ್ನ ಸಂಗಾತಿಯಾಗಿತ್ತು. ಈಗಲೂ ಅಷ್ಟೆ.!
ಆದರೆ, ನನಗೆ ಈಚಿನ ವರ್ಷಗಳಲ್ಲಿ ಎಂಥದ್ದೊ ತಳಮಳ, ಗೊಂದಲ, ಪ್ರಶ್ನೆಗಳು….
ಎಂಟು ಹತ್ತು ವರ್ಷಗಳ ಹಿಂದೆ ನಾನು ರಚಿಸಿದ್ದ ಚಿತ್ರಗಳನ್ನು ಕಂಡಾಗ (ಅವುಗಳಲ್ಲಿ ಅದೆಷ್ಟೇ ತಪ್ಪುಗಳಿದ್ದಾಗಿಯೂ), ನನಗೆ ಅವುಗಳಲ್ಲಿ ಒಂದು ಬಗೆಯ ಆನಂದ ಕಾಣಿಸುತ್ತದೆ; ಸ್ಪಷ್ಟತೆ ಕಾಣಿಸುತ್ತದೆ. ಈಗ “ಅದು ಹೀಗಿರಬೇಕಿತ್ತು, ಇದು ಹಾಗಿರಬೇಕಿತ್ತು..” ಎಂಬ ಕೊಂಕು ಮೂಡಿದರೂ, ಅದರಾಳದಲ್ಲಿ ನನಗೆ — “ಅದು ಹೇಗಿದೆಯೊ ಹಾಗೆಯೆ ಅಂದವಾಗಿದೆ, ಪೂರ್ಣವಾಗಿದೆ” ಎನಿಸುತ್ತದೆ.
ಆದರೆ, ಅದೇಕೊ ಈಚಿನ ಚಿತ್ರಗಳನ್ನು ಕಂಡಾಗ ಆ ಬಗೆಯ ಭಾವನೆ ಮೂಡುವುದಿಲ್ಲ. ಈಗ ನಾನು ಚೆಂದವಾದ ಚಿತ್ರಗಳನ್ನು ರಚಿಸುವುದೇ ಇಲ್ಲವೆಂದಲ್ಲ. ಹತ್ತರಲ್ಲಿ ಒಂದಾದರೂ ಚಿತ್ರ ಚೆನ್ನಾಗಿಯೇ ಮೂಡುತ್ತದೆ. ನಿಜ ಹೇಳಬೇಕೆಂದರೆ, ಹೊರದೃಷ್ಟಿಗೆ — ನನ್ನ ಮುಂಚಿನ ಚಿತ್ರಗಳಿಗಿಂತ ಈಚಿನ ಚಿತ್ರಗಳೆ ಎಷ್ಟೋ ವಾಸಿಯಾಗಿ ಕಾಣುತ್ತವೆ. ಆದರೆ, ಚಿತ್ರಗಳ ಒಳಗನ್ನು, ಅದರ ಆತ್ಮವನ್ನು ಅವಲೋಕಿಸಿದಾಗ ನನಗೆ, ಅಲ್ಲಿ ಯಾವುದೊ ಸಂಘರ್ಷ ತೊಳಲಾಟಗಳು ಕಾಣುತ್ತವೆ. ಅದೇ ನನ್ನನ್ನು ಅಧೀರನನ್ನಾಗಿಸುತ್ತಿವೆ.
ಮೊದಲಿಗೆ, ಬಣ್ಣ ಹಚ್ಚಲು ಕುಳಿತಾಗಲೆ ಯಾವಯಾವುದೊ ದ್ವಂದ್ವಗಳೂ, ಪ್ರಶ್ನೆಗಳೂ ಏಳುತ್ತವೆ. ಪ್ರತಿ ಹೆಜ್ಜೆಗೂ ಅವುಗಳ ಆಕಾರ ಹಿರಿದಾಗುತ್ತ ಸಾಗುತ್ತದೆ. ಅವುಗಳ ಕರಾಳಛಾಯೆಯಡಿಯಲ್ಲಿ ಸಿಲುಕಿ — ಚಿತ್ರಿಸುವಾಗ ನನ್ನಲ್ಲಿ ಮೂಡಬೇಕಾದ ಆನಂದಾನುಭವವು ಕುಂಠಿತವಾಗಿದೆಯೊ ಎಂದು ನನಗೆ ಭಯವಾಗುತ್ತದೆ. ಆದರೆ ಹೀಗೇಕಾಗುತ್ತಿದೆ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವು ಮಾತ್ರ ಸಿಗದಾಗಿದೆ. ಬಹುಶಃ ನನ್ನ ಏಕಾಗ್ರತೆ ಹಾಗೂ ಸಂಕಲ್ಪಗಳಿಗೆ ಯಾವುದೊ ಅಗೋಚರವಾದ ತೊಡಕು ಹತ್ತಿಕೊಂಡು, ಆಗಿಂದಾಗ್ಗೆ ಅದು ನನ್ನ ಮನಸ್ಸನ್ನು ಮಲಿನಗೊಳಿಸುತ್ತಿರಬೇಕು.
ಅಲ್ಲಿಗೆ ನಾನೇನೊ ಮಹಾ ಚಿತ್ರಕಾರನೆಂದಲ್ಲ. ಹಾಗೆ ಆಗುವುದೂ ಬೇಕಿಲ್ಲ. ಜನ್ಮತಃ ಎಲ್ಲರಲ್ಲಿಯೂ ಒಂದಲ್ಲ ಒಂದು ಬಗೆಯ ಕಲಾಪ್ರತಿಭೆಯು ಸುಪ್ತವಾಗಿ ಇದ್ದೇ ಇರುತ್ತದೆ; ಅದನ್ನು ಅವರವರು ತಮ್ಮ ಶಕ್ತಿಯ ಪರಿಧಿಯಲ್ಲಿ ಉದ್ದೀಪಿಸಿಕೊಂಡು, ಅದನ್ನು ಬೆಳೆಸಿ ತಾವೂ ಬೆಳೆಯಬೇಕಾಗುತ್ತದೆ. ನನಗೇಕೊ ಭಯ — ಈ ಪ್ರಕ್ರಿಯೆಯಲ್ಲಿ ನಾನು ಎಲ್ಲಾದರೂ ಎಡವಿದ್ದೇನೊ ಎಂದು; ಯಾವುದೊ ಹಂತದಲ್ಲಿ ನಾನು, ನನ್ನ ಕಲೆ — ಇಬ್ಬರೂ ನಮ್ಮ ಬೆಳವಣಿಗೆಯನ್ನು ಮರೆತು, ಇದ್ದ ದೆಸೆಯಲ್ಲೆ ಉಳಿದುಬಿಟ್ಟೆವೇನೊ ಎಂದು.
ಇಲ್ಲಿಗೆ ಬಂದ ನಂತರ ಒಂದೆರಡು ಕಡೆ ಪೆಯಿಂಟಿಂಗ್ ಕ್ಲಾಸುಗಳಿಗೂ ಹೋಗಿದ್ದೆ, ಅದರಿಂದಲಾದರೂ ಏನಾದರೂ ಸುಧಾರಿಸಬಹುದೊ ಎಂದು. ಆದರೆ ನನಗೇಕೊ ಇಲ್ಲಿ (ನಾನು ಹೋಗಿದ್ದ ಕಡೆಗಳಲ್ಲಿ!) ಬೋಧಿಸುವ ಪರಿ ಅಷ್ಟಾಗಿ ಹಿಡಿಸಲಿಲ್ಲ.
ನನ್ನ ಅಭಿಪ್ರಾಯದಲ್ಲಿ — ಪ್ರತಿಯೊಂದು ಕಲಾಪ್ರಕಾರವೂ ಒಂದು ತಪಸ್ಸಿದ್ದಂತೆ, ಧ್ಯಾನವಿದ್ದಂತೆ; ಅಲ್ಲಿ ನಮ್ಮ ಸಂಕಲ್ಪಶಕ್ತಿ, ಶ್ರದ್ಧೆ ಹಾಗೂ ಸಾಧನೆಗಳ ಫಲವಾಗಿ ಆಯಾ ಕಲೆಯು ಸಿದ್ದಿಸುತ್ತದೆ. ಸ್ವಂತ ಪ್ರಯತ್ನದ ಜೊತೆಗೆ ಬೋಧನೆಯೂ ಇದ್ದರೆ ಸಹಕಾರಿಯೇ; ಆದರೆ ಅದು ಬರಿಯ ಬಾಹ್ಯ ಮಟ್ಟದ ಬೋಧನೆಯಾಗಿ ಉಳಿಯದೆ, ನಮ್ಮ ಅಣುಅಣುವನ್ನೂ ಚೇತನಯುಕ್ತವಾಗಿ ಮಾಡಬಲ್ಲಂತಾದಾಗ ಮಾತ್ರ ಆ ವಿದ್ಯೆಯು ನಮಗೆ ಆತ್ಮಗತವಾಗುತ್ತದೆ ಎಂದು ನನ್ನ ಅನಿಸಿಕೆ.
ಸರಿ, ಎಲ್ಲಿ ನನ್ನ ಪ್ರಶ್ನೆಗಳೂ, ಗೊಂದಲಗಳೂ ಕೊನೆಯಾಗುವವೊ ಎಂಬ ನನ್ನ ಹುಡುಕಾಟವನ್ನಂತೂ ಮುಂದುವರೆಸಬೇಕಿದೆ. ಆದಷ್ಟು ಬೇಗ ಅಂತಹ ಘಳಿಗೆ ಬರಲಿ ಎಂದು ಆಶಿಸುತ್ತೇನೆ.