ಐದು ಮಾತುಗಳು-೧೪

೧. ವಿಭೂತಿ-ವಿಹಾರ

ನಾನು ಮೈಸೂರಿನಲ್ಲಿದ್ದಾಗ, ಆಗೊಮ್ಮೆ ಈಗೊಮ್ಮೆ ಹತ್ತಿರದ ಸೋಮನಾಥಪುರಕ್ಕೋ, ಹೊಸಹೊಳಲಿಗೋ ಅಥವಾ ಬೇಲೂರು-ಹಳೆಬೀಡಿನ ಕಡೆಗೋ ಹೋಗುವ ಪರಿಪಾಠವಿತ್ತು. ಆಗೆಲ್ಲ ತಾಸೆರಡುತಾಸಿನವರೆಗೂ ಆಲಯದ ಸುತ್ತ ಸುತ್ತುತ್ತ, ಭಿತ್ತಿಯ ಮೇಲಿನ ಒಂದೊಂದು ಶಿಲ್ಪದ ವಿವರವನ್ನೂ ಏಕಾಗ್ರತೆಯಿಂದ ನೋಡುವ ರೂಢಿ!

ಆದರೂ, ನಾನು ಪ್ರತಿಸಾರಿ ಹೋದಾಗಲೂ ಅವೆಲ್ಲವೂ ಮತ್ತಷ್ಟು ಹೊಸತಾಗಿ ಕಾಣುತ್ತಿದ್ದುವು. ಹಾಗೂ, ಪ್ರತಿ ಭೇಟಿಯಲ್ಲೂ ಏನಾದರೂ ವಿಶೇಷತೆಯೊಂದು ನನ್ನ ಕಣ್ಣಿಗೆ ಬೀಳುತ್ತಿತ್ತು.

ಅದಾರೊ ಬಾಲಿಕೆಯ ಏರು ಹುಬ್ಬಿನ ಬಳುಕು, ಇನ್ನಾರೊ ಸುಂದರಿಯ ಮಂದಹಾಸ, ಯಾರೊ ವೀರನೊಬ್ಬನ ಕತ್ತಿಯ ಹಿಡಿತ, ಸಿಂಹವೊಂದರ ಚೂಪಾದ ಉಗುರಿನ ಬೆಡಗು, ಬೇಟೆಯ ದೃಶ್ಯದ ಸೂಕ್ಷ್ಮ ವಿವರಗಳು, ಇತಿಹಾಸ-ಕಾವ್ಯ-ಪುರಾಣಗಳಲ್ಲಿಯ ಬೇರೆಬೇರೆ ಕಥೆಗಳ ಸನ್ನಿವೇಶಗಳು — ಹೀಗೇ; ನಾನು ಯಾವಾಗ ಹೋದರೂ ಏನಾದರೊಂದು ಹೊಸ ಸಂಗತಿಯು ಗೋಚರಿಸಿ, ಸೋಜಿಗ ಮೂಡಿಸುತ್ತಿತ್ತು. ವಿಭೂತಿಸದೃಶವಾದ ಯಾವುದೇ ಮಹದ್ವಸ್ತುವಿನ ಲಕ್ಷಣವು ಹೀಗೆಯೇ ಅಲ್ಲವೇ… ಅವನ್ನು ಮತ್ತೆಮತ್ತೆ ನೋಡಿದಷ್ಟೂ ನೂತನವಾಗಿ ತೋರುತ್ತವೆ.

ಈಗ್ಗೆ ಸುಮಾರು ದಿನಗಳಿಂದ, ಶತಾವಧಾನಿಗಳು ನಡೆಸಿಕೊಟ್ಟಿರುವ “ಮಹಾಭಾರತ ವಿಹಾರ” ಪ್ರವಚನಮಾಲಿಕೆಯನ್ನು ಕೇಳುತ್ತಿದ್ದೇನೆ.

ನನಗೆ, ಮೂಲಭಾರತವನ್ನು ಓದುವ (ಅನುವಾದದೊಂದಿಗೆ!) ಯೋಗವಂತೂ ಈವರೆಗೆ ಬಂದಿಲ್ಲ. ಆದರೆ ಸುದೈವದಿಂದ, ತೆಲುಗಿನ ಕವಿತ್ರಯರು ಮೂಲದಿಂದ ಸಂಗ್ರಹಿಸಿ ಅನುವಾದಿಸಿ ರಚಿಸಿರುವ “ಆಂಧ್ರಮಹಾಭಾರತ”ವನ್ನು ಓದುವುದು ಹೇಗೊ ಸಾಧ್ಯವಾಗಿತ್ತು. ಮತ್ತು, ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯಲ್ಲಿ ಆಗಾಗ ಸುತ್ತು ಹಾಕಿದ್ದಂತೂ ಇದ್ದೇ ಇದೆ. ಪಂಪಭಾರತ, ಜೈಮಿನಿಭಾರತವಾದರೂ ಅಷ್ಟೇ. ಅದುವೇ ನನ್ನ ಪುಣ್ಯವೆಂದುಕೊಳ್ಳುತ್ತೇನೆ.

ಒಟ್ಟಿನಲ್ಲಿ, ಭಾರತದ ಕುರಿತಾದ ಹಲಕೆಲವು ಸಣ್ಣ ಪುಸ್ತಕಗಳ, ಬೃಹತ್ಕೃತಿಗಳ ಪರಿಚಯವು -ನನಗೆ- ಅಷ್ಟಿಷ್ಟಾದರೂ ಇರುವುದರಿಂದ, ಎಲ್ಲಕ್ಕಿಂತ ಮುಖ್ಯವಾಗಿ ಮಹಾಭಾರತದ ಕಥೆಯೇ ಅಷ್ಟು ವಿಸ್ತಾರವಾದ್ದರಿಂದ, ಗಣೇಶರ ಉಪನ್ಯಾಸ ಮಾಲಿಕೆಯ ಪ್ರತಿ ಸಂಚಿಕೆಯನ್ನು ಕೇಳಿದಾಗಲೂ ಪ್ರತಿಯೊಂದು ಸಂಗತಿಯೂ ಹೆಚ್ಚುಹೆಚ್ಚು ಸ್ವಾರಸ್ಯಮಯವೆನಿಸುತ್ತದೆ. “ಅರೆ, ಈ ವಿಷಯವನ್ನು ಮುಂಚೆ ನಾನು ಗಮನಿಸಿಯೇ ಇರಲಿಲ್ಲವಲ್ಲ!” “ಓ, ಈ ಸನ್ನಿವೇಶವು ನಮ್ಮ ಕುಮಾರವ್ಯಾಸನಲ್ಲೂ ಎಷ್ಟು ಚೆನ್ನಾಗಿದೆ”, “ಇದನ್ನು ತಿಕ್ಕನ ಸೋಮಯಾಜಿಯೂ ಬಹಳ ಸೊಗಸಾಗಿ ವರ್ಣಿಸಿದ್ದಾನೆ” ಎಂಬ ಆಶ್ಚರ್ಯೋದ್ಗಾರಗಳು ಪದೇಪದೇ ಮೂಡುತ್ತಲೇ ಇರುತ್ತವೆ. ಅದರ ಜೊತೆಜೊತೆಗೇ, ‘ಮತ್ತೊಮ್ಮೆ ಈ ಕೃತಿಗಳನ್ನೆಲ್ಲ ಇನ್ನಷ್ಟು ವಿಶದವಾಗಿ ಓದಬೇಕು’ ಎಂಬ ಆಶಯವೂ ಮೂಡುತ್ತದೆ.

ಇರಲಿ; ಮೂಲ ಮಹಾಭಾರತದ ಬಗ್ಗೆ ತಿಳಿಯಲ್ಲಿಚ್ಛಿಸುವವರು ಈ ಪ್ರವಚನಮಾಲಿಕೆಯನ್ನು ಕೇಳಬಹುದು.

೨. ಈವರೆಗೆ ತಿಳಿಯದಿದ್ದ ಸಂಗತಿ

ನಾನು “ಆಂಧ್ರ ಮಹಾಭಾಗವತ”ವನ್ನು ಓದಲು ತೊಡಗಿ ಸುಮಾರು ಒಂದು ವರ್ಷವೇ ಆಯಿತೇನೊ! (ಅದರ ಓದು ಕೂರ್ಮಗತಿಯಲ್ಲಿ ಸಾಗುತ್ತಿರುವುದೂ ಇದೆ. ಆ ವಿಷಯ ಹಾಗಿರಲಿ ಬಿಡಿ).

ನಾನು ಈವರೆಗೆ, ಮಹಾಭಾಗವತವನ್ನು ಕವಿ ಪೋತನನೊಬ್ಬನೇ ರಚಿಸಿದ್ದೆಂದು ಭಾವಿಸಿದ್ದೆ. ಆದರೆ, ಮೊನ್ನೆ ಐದನೇ ಸ್ಕಂದದ ಮೊದಲನೇ ಆಶ್ವಾಸಾಂತದಲ್ಲಿ, “ಇಂತು ಗಂಗನಾರ್ಯ ಪ್ರಣೀತವಾದ ಮಹಾಭಾಗವತದಲ್ಲಿ….” ಎಂಬ ಅರ್ಥವಿರುವ ಸಮಾಪ್ತಿವಾಕ್ಯವನ್ನು ಕಂಡಾಗ ಆಶ್ಚರ್ಯವಾಯಿತು. “ಇದಾರಪ್ಪಾ ಈ ಗಂಗನಾರ್ಯ?” ಅಂತ ಹುಡುಕಿಹೊರಟವನಿಗೆ ಹೊಸ ಸಂಗತಿಯೊಂದು ತಿಳಿಯಿತು:

ಆಂಧ್ರಮಹಾಭಾಗವತವನ್ನು ಪೋತನಾಮಾತ್ಯನು ಮಾತ್ರವಲ್ಲದೆ, ವೆಲಿಗೊಂದಲ ನಾರಯ, ಗಂಗನಾರ್ಯ ಹಾಗೂ ಏಲ್ಪೂರಿ ಸಿಂಗನ ಎಂಬ ಮತ್ತೂ ಮೂವರು ಬೇರೆಬೇರೆ ಕವಿಗಳೂ ಕೂಡಿ ರಚಿಸಿದ್ದಾರಂತೆ/ಪೂರಿಸಿದ್ದಾರಂತೆ. ಈ ಮೂರೂ ಜನರು ಪೋತನನ ಶಿಷ್ಯರಾಗಿದ್ದರೆಂದೂ ಹೇಳುವುದುಂಟು. ಅದಲ್ಲದೆ, ಪೋತನನು ಸಮಗ್ರ ಭಾಗವತವನ್ನು ಆಂಧ್ರ‍ೀಕರಿಸಿದನೆಂದೂ, ಅದರಲ್ಲಿ ಕೆಲವು ಸ್ಕಂದಗಳು ಅದಾವ ಕಾರಣಕ್ಕೋ ಲುಪ್ತವಾದುದರಿಂದ, ಆತನ ಶಿಷ್ಯರಾದ ಈ ಮೂರ್ವರೂ ಕವಿಗಳು, ಕಳೆದುಹೋದ ಸ್ಕಂದಗಳನ್ನು ಬರೆದರೆಂದೂ ಪ್ರತೀತಿಯಿದೆಯಂತೆ. ಈ ಯಾವತ್ತೂ ವಿವರಗಳು ನನಗೆ ಬಹಳ ಹೊಸತು. ಏನೇ ಇರಲಿ, ಸಮಯ ಮಾಡಿಕೊಂಡು ಈ ಬಗ್ಗೆ ಹೆಚ್ಚು ಓದಬೇಕಿದೆ.

೩. ಹದಿಹರಯದ ಹರನು ನಡೆತಂದಾಗ

ನಾನು ಕೆಲವು ತಿಂಗಳ ಹಿಂದೆ -ಯಾವುದೊ ಶಿಲ್ಪವೊಂದನ್ನು ಆಧರಿಸಿ- ಶಿವನ ವರ್ಣಚಿತ್ರವೊಂದನ್ನು ರಚಿಸಿದ್ದೆ. ಚಿತ್ರವು ನಾನೆಣಿಸಿದ್ದಕ್ಕಿಂತಲೂ ಸ್ವಲ್ಪ ಸುಂದರವಾಗಿಯೇ ಮೂಡಿಬಂದಿತ್ತು ಕೂಡ. ಸಂಪ್ರದಾಯದಂತೆ ಆ ಚಿತ್ರವನ್ನು ಟ್ವಿಟ್ಟರ್, ಫೇಸ್ಬುಕ್ಕುಗಳಲ್ಲಿ ಹಂಚಿಕೊಂಡಿದ್ದೂ ಆಯಿತು. ಆ ಚಿತ್ರವನ್ನು ಕಂಡು ಮೆಚ್ಚಿದ ನನ್ನ ಸಹೃದಯ ಮಿತ್ರರೊಬ್ಬರು ವಾಟ್ಸಾಪಿನಲ್ಲಿ ಒಂದು ಸಂದೇಶವನ್ನು ಕಳಿಸಿದ್ದರು. ನಾನು ಆ ಚಿತ್ರವನ್ನು ಹಂಚಿಕೊಂಡಿದ್ದ ಸಮಯದಲ್ಲೆ, ಕಾಕತಾಳೀಯವೆಂಬಂತೆ, ಅವರು ಹರಿಹರನ “ಬಸವರಾಜದೇವರ ರಗಳೆ”ಯನ್ನೋದುತ್ತಿದ್ದರಂತೆ.

ಆ ಕಥೆಯಲ್ಲಿ ಒಮ್ಮೆ, ಶಿವನಿಗೆ ಬಸವಣ್ಣನನ್ನು ಪರೀಕ್ಷಿಸುವ ಮನಸ್ಸಾಗಿ, ತನ್ನ ಸ್ವಸ್ವರೂಪವನ್ನು ಮರೆಮಾಡಿ ಹದಿಹರಯದ ವಿಟಜಂಗಮನ ವೇಷದಲ್ಲಿ ಬರುವ ಸುಂದರ ವರ್ಣನೆಯಿದೆ. ಆ ಭಾಗವನ್ನೋದಿದಾಗ ನಿಮ್ಮ ಶಿವನೇ ಕಣ್ಣ ಮುಂದೆ ಬಂದಂತಾಯಿತು ಎಂದಿದ್ದರು.

“…ಮುಕ್ತಿಯ ಬಿತ್ತನೋಯಾರಿಸಿದಂತಿರ್ದ ದಂತಪಙ್ತಿಗಳನೊಳಗುಮಾಡಿಕೊಂಡು ಗರ್ಬದಿಂ ರಾಗಿಸುವಂತೆಳೆವೆಳುದಿಂಗಳೊಳು ಚಂದ್ರಮಂಡಲದೊಳೋಲೈಸಿಕೊಳುತಿರ್ಪ ಮಧುರಾಧರಪಲ್ಲವದ, ಅದಲ್ಲದೆಯುಂ, ಸತ್ಯಾಮೃತ ಸಾಮರ್ಥ್ಯಕೃಪಾರತ್ನಭರಿತಮಾದ ಪುಣ್ಯದ ಕರಂಡಗೆಯಂತಿರ್ದ ಬಾಯ್ದೆರೆಯಿಂ ಮೆರೆವ ಮುಖಮಂಡಲದ, ಅದಲ್ಲದೆಯುಂ, ಸುಕುಮಾರ ಸೌಂದರ್ಯವಿರಚಿತ ಸುಕುಮಾರತೆಗಳಿರ್ದೆಸೆಯನೊತ್ತುಗೊಂಡು ವೃತ್ತಮಾಗಿ ಗಳಗಳನಿಳಿದು ನಳನಳಿಸಿ ಬೆಳೆದಂತೆಸೆವ ನಳಿತೋಳ್ಗಳ, ಮತ್ತಂ, ಕಲ್ಪಕುಜದ ಶಾಖಾಂತರದಂತೆ ಮೆರೆವ ಧವಳ ದುಕೂಲದ, ಮತ್ತಂ ಎರಡರಿಯದೆರಗುವ ಲೋಕಪಾಲರ ಮಕುಟದ ಮಾಣಿಕದ ತಂಬೆಳಗನುಂಡು ಬೆಳೆದಂತಲಕ್ತಕದ ಹಂಗಿಲ್ಲದೆ ನಿಜರಾಗದಿಂ ರಂಜನೆವಡೆದ ನುಣ್ಬೆಳಗನುಗುಳ್ವ ಪದತಳದ ಸೌಂದರಿಯದಿಂ ದೇಸೆವಡೆದ ಹದಿನಾರರ ಹರೆಯದ ಹರಂ ಕರುಣಿಸಿ ನಡೆತಂದು……..”

ಆಹಾ! ಭಕ್ತರನ್ನು ಪರೀಕ್ಷಿಸಲು ಮಾಯಾವೇಷದಲ್ಲಿ ಬರುವ ಶಿವನ ಸೌಂದರ್ಯವನ್ನು ವಿವರಿಸುವುದರಲ್ಲಿ ಹರಿಹರನಿಗಿರುವ ಉತ್ಸಾಹ ಅಪಾರ. ಅದರ ಸವಿಯನ್ನು ನಂಬಿಯಣ್ಣನ ರಗಳೆಯೇ ಮೊದಲಾದ ರಗಳೆಗಳಲ್ಲಿಯೂ ಕಾಣಬಹುದು.

೪. ಲಕ್ಷ್ಮೀರಮಣ

ತೆಲುಗಿನ ತಾಳ್ಲಪಾಕ ಅನ್ನಮಾಚಾರ್ಯರ ಅನೇಕ ಕೀರ್ತನೆಗಳು ನನಗೆ ಪ್ರಿಯವೇ ಆದರೂ, ಅವರ ಕೀರ್ತನೆಯೊಂದರಲ್ಲಿ ಬರುವ ಕೆಲವು ಸಾಲುಗಳು ನನ್ನ ಮನಸ್ಸನ್ನು ಹಲವಾರು ವರ್ಷಗಳಿಂದ ಬಹುವಾಗಿ ಆವರಿಸಿದ್ದುವು. ಹೇಗಾದರೂ ಮಾಡಿ ಆ ಸಾಲುಗಳಿಗೆ ಹೋಲುವ ಚಿತ್ರವನ್ನು ರಚಿಸಬೇಕೆಂಬ ಬಯಕೆ ಅದೆಂದಿನಿಂದಲೋ ಇತ್ತು. ೨೦೧೩-೧೪ರ ಹೊತ್ತಿನಲ್ಲಿ, ಅದಕ್ಕೆ ತಕ್ಕಂತೆ ಒಂದು ವರ್ಣಚಿತ್ರವನ್ನು ರಚಿಸಲು ತೊಡಗಿ, ಅದು ಅರ್ಧಕ್ಕೇ ನಿಂತುಹೋಗಿದ್ದುದೂ ಉಂಟು. ಆದರೂ ಅದರ ಬಗ್ಗೆ ಮನಸ್ಸು ಆಗಾಗ ಧ್ಯಾನಿಸುತ್ತಲೇ ಇತ್ತು.

ಕಳೆದೆರಡು ತಿಂಗಳಿನಲ್ಲಿ ಆ ಬಯಕೆ ಅದುಹೇಗೊ ಮತ್ತೆ ಚಿಗುರೊಡೆದಿತ್ತು. ಆ ವಿಷಯವಾಗಿ, ಸಿಕ್ಕಸಿಕ್ಕ ಪುಸ್ತಕ, ಕಾಗದಗಳ ಮೇಲೆಲ್ಲ ರೇಖಾಚಿತ್ರಗಳನ್ನು ಗೀಚುವುದಾಗಿತ್ತು. ಹೀಗಿರಲು ಒಮ್ಮೆ ನಡುರಾತ್ರಿಯಲ್ಲಿ ಎಚ್ಚರಾದವನೇ ಕ್ಯಾನ್ವಾಸೊಂದನ್ನು ತೆಗೆದುಕೊಂಡು ಚಿತ್ರ ರಚಿಸಲು ತೊಡಗಿಯೇಬಿಟ್ಟೆ. ಪುಣ್ಯಕ್ಕೆ, ಸ್ಕೆಚ್ಚು ಅಲ್ಪಸ್ವಲ್ಪ ಚೆನ್ನಾಗೇ ಮೂಡಿಬಂದಿತ್ತು. ಇನ್ನು ತಡಮಾಡಲಿಚ್ಛಿಸದೆ, ಆ ಸರಿಹೊತ್ತಿನಲ್ಲೇ ಅದಕ್ಕೆ ಮೊದಲ ಹಂತದ ಬಣ್ಣ ಹಚ್ಚಿದ್ದೂ ಆಯಿತು. ಮೊದಲ ಪಡಿ ಅಷ್ಟಾಗಿ ಮನಸ್ಸಿಗೆ ಸೇರಲಿಲ್ಲವಾದರೂ, ಸ್ವಲ್ಪ ತಿದ್ದುಪಡಿಗಳನ್ನು ಮಾಡಿ ಮಲಗುವ ಹೊತ್ತಿಗೆ ಮೂರು ತಾಸಾದರೂ ಆಗಿತ್ತು.

ಆ ನಂತರದ ದಿನಗಳಲ್ಲಿ ಮನಸ್ಸು ಆ ಚಿತ್ರವನ್ನು ಇನ್ನೂ ಚೆನ್ನಾಗಿ ರೂಪಿಸುವುದು ಹೇಗೆ ಎಂಬ ಯೋಚನೆಯಲ್ಲಿಯೇ ಹೆಚ್ಚಾಗಿ ಮಗ್ನವಾಗಿತ್ತು. ಆಗಿಂದಾಗ್ಗೆ ಅಲ್ಪಸ್ವಲ್ಪ ಮಾರ್ಪಾಡುಗಳೂ ಆಗುತ್ತಿದ್ದವು.

ಈ ಮಧ್ಯೆ ನಾನಾ ಕಾರಣಗಳಿಂದ ಆ ಚಿತ್ರದ ಕೆಲಸವನ್ನು ಮುಂದುವರೆಸಲು ಆಗಿರಲಿಲ್ಲ. ಆದರೆ ಕ್ರಿಸ್ಮಸ್-ಹೊಸವರ್ಷದ ಹೊತ್ತಿನ ರಜೆಯ ದಿನಗಳಲ್ಲಿ ಸಾಧ್ಯವಾದಷ್ಟೂ ಸಮಯವನ್ನು ಆ ಚಿತ್ರದ ರಚನೆಗೆಂದೇ ಮೀಸಲಿಡುವ ಸಂಕಲ್ಪ ತೊಟ್ಟೆ. ಇನ್ನು ದಿನ-ರಾತ್ರಿ ಅದೇ ಮಾತು ಮನಸ್ಸಿನಲ್ಲಿ ಮೊಳಗುತ್ತಿತ್ತು. ಸುದೈವಕ್ಕೆ, ದಿನದಿನಕ್ಕೂ ಆ ಚಿತ್ರವೂ ಚೆನ್ನಾಗಿ ರೂಪುಗೊಳ್ಳಲು ತೊಡಗಿತು. ಸಮಯ ಸಿಕ್ಕಾಗಲೆಲ್ಲ ಆ ಚಿತ್ರವನ್ನೇ ನೋಡುತ್ತ ಕೂರುತ್ತಿದ್ದೆ. “ಅಯ್ಯೊ! ಇಂಥಾ ದಿವ್ಯರೂಪನನ್ನು ನನ್ನಿಂದ ಚಿತ್ರಿಸಲಾದೀತೆ” ಎಂಬ ಅಳುಕೂ ಮೂಡುತ್ತಿತ್ತು. “ನಾರಾಯಣಾ! ನೀನೇ ದಯೆಯಿಟ್ಟು ಮುನ್ನಡೆಸು” ಅಂತ ಪ್ರಾರ್ಥಿಸುತ್ತಿದ್ದುದೂ ಇತ್ತು.

ಅಂತೂ ಇಂತೂ ಒಂದು ಹಂತಕ್ಕೆ ಚಿತ್ರವು ಮುಗಿಯಿತು ಎನಿಸುವ ಹೊತ್ತಿಗೆ ನನ್ನ ಎದೆಯಂತೂ ಆನಂದದಿಂದ ಬಿರಿದೇಹೋಗುವಂತಾಗಿತ್ತು. ನಿಜ, ಚಿತ್ರದ ಈಗಿರುವ ರೂಪದಲ್ಲೂ ಹಲವಾರು ದೋಷಗಳಿವೆ. ಸ್ವಲ್ಪ ಹೆಚ್ಚಿನ ತಾಳ್ಮೆ, ಪ್ರಯತ್ನಗಳಿದಿದ್ದಿದ್ದರೆ ಅದಕ್ಕೆ ಇನ್ನಷ್ಟು ಸೊಗಸು ಬರುತ್ತಿತ್ತೇನೊ. ಆದರೂ, ನಾನು ಈವರೆಗೆ ರಚಿಸಿದ ಚಿತ್ರಗಳಲ್ಲಿ ಇದು ಬಹಳ ವಿಭಿನ್ನವಾಗಿದೆಯೆಂಬ ಭಾವನೆಯಾದರೂ ನನಗೆ ತಾತ್ಕಾಲಿಕ ಸಮಾಧಾನವನ್ನು ನೀಡಿದೆ. ಈಗಿನ ಮಟ್ಟಿಗೆ ಆ ಸಮಾಧಾನವೇ ಸಾಕು.

ಅಂದಹಾಗೆ, ಅನ್ನಮಾಚಾರ್ಯರ ಕೀರ್ತನೆಯಲ್ಲಿ ನನಗೆ ಇಷ್ಟವೆನಿಸಿದ್ದ ಸಾಲುಗಳಿವು:

“ಕಮಲಾಸತೀಮುಖಕಮಲಕಮಲಹಿತ

ಕಮಲಪ್ರಿಯ ಕಮಲೇಕ್ಷಣ

ಕಮಲಾಸನಹಿತ ಗರುಡಗಮನ ಶ್ರೀ

ಕಮಲನಾಭ ನೀ ಪದಕಮಲಮೇ ಶರಣು”

“(ಕಮಲಾಸತಿ) ಲಕ್ಷ್ಮೀದೇವಿಯ ಮುಖಕಮಲದ ಪಾಲಿನ ಸೂರ್ಯನೇ (ಕಮಲಹಿತ), ಕಮಲಪ್ರಿಯನೇ, ಕಮಲದಂತಹ ಕಣ್ಣುಳ್ಳವನೇ, ಕಮಲಾಸನನಿಗೆ ಹಿತನಾದವನೇ, ಗರುಡಗಮನನಾದ ಶ್ರೀ ಕಮಲನಾಭನೇ, ನಿನ್ನ ಪದಕಮಲವೇ ನನಗೆ ಆಶ್ರಯ/ಶರಣು…”

ಮೊದಮೊದಲು, ಚಿತ್ರದಲ್ಲಿ ಗರುಡನನ್ನೂ ತರಲು ಯತ್ನಿಸಿದ್ದೆನಾದರೂ ಅದು ಕೂಡುವಂತಿರಲಿಲ್ಲ. ಹಾಗಾಗಿ, ಶ್ರೀಮನ್ನಾರಾಯಣನು ತೊಟ್ಟಿರುವ ಪೀತಾಂಬರದ ಜರಿಯಂಚಿನಲ್ಲಿ ಗರುಡಪಕ್ಷಿಯ ಚಿತ್ರವಿನ್ಯಾಸವನ್ನು ಇರಿಸುವುದಾಯ್ತು.

ಇನ್ನು, ಚಿತ್ರವು ಮುಗಿಯುವ ವೇಳೆಗೆ ನಮ್ಮ ಕನ್ನಡದ ಕವಿ ಲಕ್ಷ್ಮೀಶನ ಜೈಮಿನಿಭಾರತದ ನಾಂದೀಪದ್ಯವೂ ಕೂಡ ಮನಸ್ಸಿಗೆ ಹೊಳೆಯುತ್ತಿತ್ತು:

ಶ್ರೀವಧುವಿನಂಬಕ ಚಕೋರಕಂ ಪೂರೆಯೆ ಭ

ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ

ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ

ಆವಗಂ ಸರಸ ಕರುಣಾಮೃತದ ಕಲೆಗಳಿಂ

ತೀವಿದೆಳನಗೆಯ ಬೆಳುದಿಂಗಳಂ ಪಸರಿಸುವ

ದೇವಪುರ ಲಕ್ಷ್ಮೀರಮಣನಾಸ್ಯಚಂದ್ರನಾನಂದಮಂ ನಮಗೀಯಲಿ

ಈ ಚಿತ್ರವು ನಡೆದುಬಂದ ಹಾದಿಯ ಕೆಲವು ಹಂತಗಳ ಕೊಲಾಜ಼್

೫. ಐದಲ್ಲ!

ಕಳೆದ ಒಂದು ವರ್ಷದಲ್ಲಿ — ಹೇಳುವುದಕ್ಕೆ ಬರಿ ಐದಲ್ಲ, ಐನೂರು ಮಾತುಗಳಿದ್ದುವು. ಆದರೆ ಅದೇಕೊ ಏನನ್ನೂ ಹೇಳಲಾಗಲಿಲ್ಲ, ಬರೆಯಲಾಗಲಿಲ್ಲ. ಓವಿಡ್’ನ ಮೆಟಾಮಾರ್ಫೊಸಸ್ ಕೃತಿಯಲ್ಲಿಯ ಅದೆಷ್ಟೊ ರಮ್ಯ, ಭೀಷಣ, ವಿಷಾದದ ಕತೆಗಳ ಬಗ್ಗೆ ಬರೆಯಬೇಕೆಂದು ಅದೆಷ್ಟು ಸಾರಿ ಅನಿಸಿತ್ತೋ! ಇನ್ನೂ ಸುಮಾರು ವಿಷಯಗಳ ಬಗ್ಗೆ, ವಿಚಾರಗಳ ಬಗ್ಗೆ ಬರೆಯಲೆಂದು ಮನಸ್ಸಿನಲ್ಲೇ ಮಥಿಸಿದ್ದೂ ಆಗಿತ್ತಾದರೂ ಅವಾವುವೂ ಲೇಖನಕ್ಕಿಳಿಯಲಿಲ್ಲ. ಈ ಸಾರಿಯಾದರೂ ಆಗಾಗ್ಗೆ ಬರೆಯುವ ಪ್ರಯತ್ನ ಮಾಡಬೇಕಿದೆ. ನೋಡುವಾ…

--

--

No responses yet