ಐದು ಮಾತುಗಳು — ೧೩
೧. ಎರಡು ಕಥೆಗಳು
ಆಗಷ್ಟೆ ಕಿಟಕಿ ಪರದೆಗಳನ್ನು ಮುಚ್ಚಿ, ರೂಮಿನಲ್ಲಿ ಒಬ್ಬನೇ ಕುಳಿತಿದ್ದೆ. ಹೊರಗೆ ಬಾಗಿಲು ಬಡಿದ ಸದ್ದಾಯ್ತು. “ಯಾರಪ್ಪಾ ಅದು!” ಎಂದುಕೊಳ್ಳುತ್ತ ರೂಮಿನಿಂದ ಹೊರನಡೆದೆ. ಇನ್ನೇನು, ಮುಖಬಾಗಿಲಿನಲ್ಲಿದ್ದ ಸಣ್ಣ ಕಿಂಡಿಯಿಂದ ಹೊರಗಿಣುಕಿ ನೋಡೋಣವೆಂದುಕೊಳ್ಳುತ್ತಿದ್ದೆ; ಅಷ್ಟರಲ್ಲಿ, ಹಠಾತ್ತಾಗಿ, ಅದೇ ಬಾಗಿಲ ಬಳಿ ಯಾರೊ ಹೆಂಗಸೊಬ್ಬಳು ನಿಂತಿರುವುದು ಕಂಡಿತು.
“ನಾನು ಬಾಗಿಲನ್ನೆ ತೆರೆಯಲಿಲ್ಲವಲ್ಲ. ಇವಳು ಒಳಕ್ಕೆ ಹೇಗೆ ಬಂದಳು?” ಎಂದು ನನಗೆ ಗಾಬರಿಯಾಯಿತು. ನಾನು, ಸ್ವಲ್ಪ ಹೆದರಿಕೆಯೂ ದಿಗ್ಭ್ರಮೆಯೂ ಬೆರೆತ ದನಿಯಲ್ಲಿ “Hey, who are you? who are you?” ಎಂದು ಕೇಳತೊಡಗಿದೆ.
ಅಷ್ಟರಲ್ಲಿ ನನಗೆ ಅರೆಬರೆ ಎಚ್ಚರವಾಗಿದ್ದಿರಬೇಕು. ಮಂಚದ ಮೇಲೆ ಮಲಗಿದ್ದವನ ಕಣ್ಣೆದುರಿಗೆ ಮನುಷ್ಯ ಗಾತ್ರದ ಕಪ್ಪು ಆಕೃತಿಯೊಂದು ಕಂಡಿತು. ಆ ಕ್ಷಣಕ್ಕೆ, ನನಗದು ಕನಸೊ ನನಸೊ ಒಂದೂ ತಿಳಿಯಲಿಲ್ಲವೆನಿಸುತ್ತೆ; ಮತ್ತೆ ಗಟ್ಟಿಯಾಗಿ “Hey… Hey… who are you?” ಎಂದು ಕೇಳುತ್ತಿದ್ದೆ. ಜೊತೆಗೆ, ನನ್ನ ಬಲವನ್ನೆಲ್ಲ ಒಗ್ಗೂಡಿಸಿಕೊಂಡು “Help Help!!” ಅಂತ ಅರಚಾಡಿದೆ.
ಪೂರ್ತಿ ಎಚ್ಚರಾದಾಗ, ನನ್ನ ಕೂಗು ನನಗೇ ಕೇಳಿಸುವಂತಿತ್ತು. ಕಣ್ಣುಜ್ಜಿಕೊಂಡು ದಿಟ್ಟಿಸಿದವನಿಗೆ, ನನಗೆ ಮನುಷ್ಯಾಕೃತಿಯಾಗಿ ಕಂಡದ್ದು ನನ್ನದೇ ಬುಕ್ ರ‍್ಯಾಕ್ ಎಂಬುದು ಅರಿವಿಗೆ ಬಂತು. ಆಗ ಸಮಯ ಬೆಳಗಿನ ಜಾವ ಎರಡೂ ಐವತ್ತಾಗಿತ್ತು!! “ಸದ್ಯ, ಮನೆಯಲ್ಲಿದ್ದ ಇನ್ನಾರಿಗೂ ನನ್ನ ಗೋಳಾಟ ಕೇಳಿಸಿರದಿದ್ದರೆ ಸಾಕಪ್ಪಾ!” ಎಂದುಕೊಂಡು, ಮತ್ತೆ ಮಲಗಿದೆ.
ಅದರ ಮಾರನೆ ದಿನ, ಬೆಳಿಗ್ಗೆ ಆರೂ ಕಾಲಿಗೆ ನಮ್ಮ ಕಮ್ಯೂನಿಟಿಯಲ್ಲಿದ್ದ ಜಿಮ್ಮಿಗೆ ಹೋದೆ. ಹಾಗೇ, ಅಲ್ಲೆ ಪಕ್ಕದಲ್ಲಿದ್ದ ಸ್ಪೋರ್ಟ್ಸ್ ರೂಮಿನ ಕಡೆಗೆ ಒಮ್ಮೆ ಕಣ್ಣು ಹಾಯಿಸಿದಾಗ, ಅಲ್ಲಿ ಸೋಫಾ ಮೇಲೆ ಯಾರೊ ಹೆಂಗಸೊಬ್ಬಳು ಮಲಗಿದ್ದುದು ಕಂಡಿತು. ಒಂದು ಕ್ಷಣ ನನಗೆ ನೆನ್ನೆಯ ಕನಸು ನೆನಪಾಯಿತು. ಆದರೂ, ನಂತರ “ಇಷ್ಟು ಬೆಳಿಗ್ಗೆಯೇ ಕ್ಲಬ್ ರೂಮಿಗೆ ಯಾರು ಬಂದಾರು? ಅಥವಾ ಈಕೆ ರಾತ್ರಿಯೆಲ್ಲ ಇಲ್ಲಿಯೆ ಮಲಗಿದ್ದಳೊ ಹೇಗೆ? ಇಷ್ಟಕ್ಕೂ, ಈಕೆ ಈ ಕಮ್ಯೂನಿಟಿಯ ನಿವಾಸಿಯೇ ಹೌದೊ ಅಲ್ಲವೊ?” ಎಂಬೆಲ್ಲಾ ಪ್ರಶ್ನೆಗಳು ಮೂಡಿದುವು.
ಕೊನೆಗೆ, ಏನಾದರಾಗಲಿ ಎಂದು — ನಾನು ಕಂಡದ್ದರ ಬಗ್ಗೆಯೂ, ಆ ಹೆಂಗಸು ನಮ್ಮ ಕಮ್ಯೂನಿಟಿಯ ನಿವಾಸಿಯೆ ಹೌದೊ ಅಲ್ಲವೊ ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಲೂ — ಲೀಸಿಂಗ್ ಆಫೀಸರಿಗೆ ಒಂದು ಈಮೇಲನ್ನು ಕಳಿಸಿದೆ. ಆಮೇಲೆ, ಹಾಗೂಹೀಗೂ ಜಿಮ್ಮಿನ ಕಸರತ್ತು ಮುಗಿಸಿ ಮನೆಗೆ ಹೊರಟೆ. ಹಿಂತಿರುಗುವಾಗ — ಆ ಕ್ಲಬ್ ರೂಮಿನಲ್ಲಿ ಹೆಂಗಸಿನ ಬದಲಿಗೆ ಇನ್ನಾರೊ ವ್ಯಕ್ತಿ ಅದೇ ಸೋಫಾದ ಮೇಲೆ ಕುಳಿತಿದ್ದುದು ಕಂಡಿತು. ಅವರಿಬ್ಬರನ್ನೂ ಕಂಡಿದ್ದರೆ ಯಾರಿಗಾದರೂ ಅನುಮಾನ ಬರುವಂತೆಯೇ ಇತ್ತು, ಬಿಡಿ.
ಸರಿ, ಈ ವಿಷಯದ ಬಗ್ಗೆ ನಮ್ಮ ನೆರೆಹೊರೆಯವರೆಲ್ಲ ಇರುವ ವಾಟ್ಸಾಪ್ ಗುಂಪಿನಲ್ಲಿ ಒಂದು ಸಂದೇಶವನ್ನು ಕಳಿಸಿ ಮನೆಗೆ ಬಂದೆ. ಒಂದು ಹತ್ತು ನಿಮಿಷದ ನಂತರ ಯಾರಿಂದಲೊ ಉತ್ತರ ಬಂತು — “ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೆ ಲೀಸಿಂಗ್ ಆಫೀಸಿನ ಬಳಿ, ಪೋಲಿಸರು ಯಾರೊ ಇಬ್ಬರನ್ನು ಬಂಧಿಸಿದ್ದುದನ್ನು ಕಂಡೆ” ಎಂದು.
ಸ್ವಲ್ಪಹೊತ್ತಿಗೇ, ಲೀಸಿಂಗ್ ಆಫೀಸರಿನಿಂದಲೂ ನನ್ನ ಈಮೇಲಿಗೆ ಪ್ರತಿಕ್ರಿಯೆ ಬಂದಿತ್ತು “ಈಚೆಗೆ ಸುತ್ತಮುತ್ತ ನಡೆದ ಕೆಲವು ಕಳ್ಳತನಗಳ ಹಿನ್ನೆಲೆಯಲ್ಲಿ, ಹಾಗೂ ಅತಿಕ್ರಮವಾಗಿ ನಮ್ಮ ಕಮ್ಯೂನಿಟಿಯನ್ನು ಪ್ರವೇಶಿಸಿ, ಯಾರಿಗೂ ತಿಳಿಯದಂತೆ — ಒಂದೆರಡು ರಾತ್ರಿಗಳಿಂದ ಅವರಿಬ್ಬರೂ ನಮ್ಮ ಕ್ಲಬ್ ರೂಮಿನಲ್ಲೆ ತಂಗಿದ್ದುದರಿಂದ ಪೋಲಿಸರು ಅವರಿಬ್ಬರನ್ನೂ ಬಂಧಿಸಿದ್ದಾರೆ” ಎಂದು.
ಅಬ್ಬ! ಆ ಹಿಂದಿನ ದಿನ ನಾನು ಕಂಡ ಕನಸಿಗೂ, ಈ ಇಡೀ ಘಟನೆಯನ್ನೂ ನೆನೆದು ನನ್ನ ಮೈಯೆಲ್ಲ ಬೆವೆತುಹೋಯಿತು.
೨. ಪಾಶ್ಚಾತ್ಯ ಪಂಚ ಮಹಾಕಾವ್ಯಗಳು
ಇಲಿಯಡ್ ಹಾಗೂ ಒಡಿಸ್ಸಿ — ಈ ಕಾವ್ಯಗಳ ಹೆಸರನ್ನು ಶಾಲೆಯ ದಿನಗಳಲ್ಲಿ ಕೇಳಿದ್ದ ನೆನಪು. ಆನಂತರದ ವ್ಯಾಸಂಗ ಅಧ್ಯಯನಗಳ ನಡುವೆ ಆಗೊಮ್ಮೆ ಈಗೊಮ್ಮೆ “The Paradise Lost”ನ ಹೆಸರೂ ಪರಿಚಿತವಾಗಿತ್ತು.
ನಾನು ಮೈಸೂರಿನಲ್ಲಿದ್ದಾಗಲೆ ಒಂದೆರಡು ಬಾರಿ ಪ್ಯಾರಡೈಸ್ ಲಾಸ್ಟ್’ಅನ್ನು ಓದಲು ಪ್ರಯತ್ನಿಸಿ, ಮುಗ್ಗರಿಸಿದ್ದುದುಂಟು. ಅದಾಗ್ಯೂ, ಯಾವುದೊ ಧೈರ್ಯದಿಂದ ಅದನ್ನು ಇಲ್ಲಿಗೂ ಹೊತ್ತು ತಂದಿದ್ದೆ. ಇಲ್ಲಿಗೆ ಬಂದ ಹೊಸತರಲ್ಲಿ ಇಲಿಯಡ್ ಒಡ್ಡಿಸ್ಸಿಗಳು (ಅನುವಾದ ರೂಪದಲ್ಲಿ) ನನ್ನ ಕೈ ಸೇರಿ, ಕೆಲವೇ ತಿಂಗಳುಗಳಲ್ಲಿ ಅವುಗಳ ಕಾವ್ಯಪ್ರಪಂಚದಲ್ಲಿ ನಾನು ವಿಹರಿಸಿದ್ದೂ ಆಗಿತ್ತು. ಆ ಹೊತ್ತಿಗೆ ವರ್ಜಿಲ್ ಕವಿಯ ಈನಿಯಡ್ ಹಾಗೂ ದಾಂತೆಯ “ಡಿವೈನ್ ಕಾಮಿಡಿ”ಯ ಅನುವಾದಗಳೂ ಮನೆಗೆ ಬಂದಿದ್ದುವು.
ಈ ಪಂಚ ಮಹಾಕಾವ್ಯಗಳ ಪೈಕಿ, “ಪ್ಯಾರಡೈಸ್ ಲಾಸ್ಟ್” ಹಾಗೂ “ಡಿವೈನ್ ಕಾಮಿಡಿ”ಯನ್ನು ಹೊರತುಪಡಿಸಿ (ಇವನ್ನೂ ಅಲ್ಪಸ್ವಲ್ಪ ಓದಿದ್ದೆ), ಇನ್ನುಳಿದವನ್ನು ಬೇಗನೇ ಓದಿ ಮುಗಿಸುವ ಭಾಗ್ಯವೊದಗಿತ್ತು. ಇವೆರಡನ್ನೂ ಎಂದಿಗಾದರೂ ಓದಲೇಬೇಕೆಂಬ ಹಂಬಲ, ನನ್ನದು.
ಸುದೈವವೊ ಎಂಬಂತೆ — ಇವೇ ಐದು ಮಹಾಕಾವ್ಯಗಳ ಬಗ್ಗೆ ಶತಾವಧಾನಿ ರಾ. ಗಣೇಶ್ ಅವರ ಉಪನ್ಯಾಸ ಮಾಲೆಯ ಬಗ್ಗೆ, ನನ್ನ ಮಿತ್ರರಾದ ಹರೀಶ್ ಅವರು ತಿಳಿಸಿದ್ದರು. ಈಗೊಂದು ವಾರ-ಹತ್ತು ದಿನಗಳಿಂದ, ಸಮಯ ಸಿಕ್ಕಾಗಲೆಲ್ಲ ಆ ಉಪನ್ಯಾಸ ಮಾಲಿಕೆಯನ್ನು ಕೇಳುತ್ತಿದ್ದೇನೆ. ಪಾಶ್ಚಾತ್ಯ ಸಾಹಿತ್ಯಿಕ ಹಿನ್ನೆಲೆಯನ್ನೂ, ಆಯಾ ಕವಿ-ಕಾವ್ಯಗಳ ಕುರಿತಾದ ಅನೇಕ ಸ್ವಾರಸ್ಯಕರ ಅಂಶಗಳನ್ನು ಗಣೇಶ್ ಅವರು ಬಹಳ ಹೃದ್ಯವಾಗಿ ವಿವರಿಸಿದ್ದಾರೆ. ಸಾಧ್ಯವಾದರೆ, ಸಮಯ ಮಾಡಿಕೊಂಡು — ನೀವೂ ಈ ಸರಣಿಯನ್ನು ಕೇಳಿ ಆಸ್ವಾದಿಸಿ:
೩. ರಾಘವಾಂಕನ ದೆಸೆಯಿಂದ
ಕಳೆದ ತಿಂಗಳು, ಸಾಮಾಜಿಕ ತಾಣಗಳಲ್ಲಿ — ಕನ್ನಡ ಪದ್ಯಗಳನ್ನು ವಾಚಿಸುವ ಪೋಟಿ ಜನಪ್ರಿಯವಾಗಿತ್ತು. ಆ ಹಿನ್ನೆಲೆಯಲ್ಲಿ, ಮಿತ್ರರಿಬ್ಬರ ಮಾತಿನಂತೆ — ನಾನೂ ಕೂಡ, ರಾಘವಾಂಕನ “ಹರಿಶ್ಚಂದ್ರ ಕಾವ್ಯ”ದಲ್ಲಿ ನನಗೆ ಬಹಳ ಇಷ್ಟವಾದ ಪದ್ಯವೊಂದನ್ನು ವಾಚಿಸಿದ್ದೆ.
ಇದನ್ನು ಪ್ರಕಟಿಸಿದ ನಂತರದಲ್ಲಿ, ಟ್ವಿಟ್ಟರ್’ನ ಕೆಲವು ಗೆಳೆಯರು, “ಇದೇ ರೀತಿ, ಬೇರೆ ಪದ್ಯಗಳ ಬಗ್ಗೆ, ಬೇರೆಬೇರೆ ವಿಷಯಗಳ ಬಗ್ಗೆ ಆಡಿಯೊ ರೆಕಾರ್ಡ್ ಮಾಡಿ” ಎಂದೆಲ್ಲ ಸಲಹೆ ಕೊಟ್ಟಿದ್ದರು.
ಬಹಳ ಹಿಂದೆ, ನನಗೂ ಕನ್ನಡದ ಕವಿಗಳ ಬಗ್ಗೆ, ಅವರ ಕಾವ್ಯಗಳ ಬಗ್ಗೆ ಪರಿಚಯಿಸುವಂತಹ ಪಾಡ್ಕಾಸ್ಟ್ ಮಾಡಬೇಕೆಂಬ ಯೋಜನೆಯಿತ್ತು. ಆದರೆ ಹತ್ತಾರು ಕಾರಣಗಳಿಂದ ಅದು ಸಫಲವಾಗಲಿಲ್ಲ. ನೋಡೋಣ, ಇನ್ನು ಮುಂದಾದರೂ -ಸಾಧ್ಯವಾದರೆ- ಆ ನಿಟ್ಟಿನಲ್ಲಿ ಏನನ್ನಾದರೂ ಮಾಡಬೇಕು.
೪. ಹಳೆಯ ಹಂಬಲವೊಂದು ಕೈಗೂಡಿದಾಗ
ನಮ್ಮ ಮನೆಯಿಂದ ಐದಾರು ಮೈಲಿಯಷ್ಟು ದೂರದಲ್ಲೇ ಚಟ್ಟಾಹೂಚೀ ನದಿ ಹರಿಯುತ್ತದೆ. ಈಗ್ಗೆ ಮೂರು ವರ್ಷಗಳ ಹಿಂದೆ, ನನ್ನ ಸ್ನೇಹಿತನೊಡನೆ ಅಲ್ಲಿಗೆ ಮೊದಲ ಸಾರಿ ಹೋದಾಗ — “ಅಬ್ಬ! ಈ ಜಾಗವೆಷ್ಟು ಅಂದವಾಗಿದೆ. ನನಗೂ ಕಾರು ನಡೆಸಲು ಬರುವಂತಿದ್ದರೆ — ಬೆಳ್ಳಂಬೆಳಗ್ಗೆ ಕಾರಿನಲ್ಲಿ ಇಲ್ಲಿಗೆ ಬಂದು, ಸೂರ್ಯೋದಯವನ್ನು ನೋಡುತ್ತಲೊ ಅಥವಾ ಇಲ್ಲೆಲ್ಲಾದರೊಂದು ಕಡೆ ಪೆಯಿಂಟಿಂಗ್ ಮಾಡುತ್ತಲೊ ಕುಳಿತುಬಿಡುತ್ತಿದ್ದೆ” ಎಂದುಕೊಂಡಿದ್ದೆ.
ಆನಂತರವೂ ಹಲವು ಸಾರಿ ನಾನು ಅಲ್ಲಿಗೆ -ಬೇರೆಬೇರೆ ಸಂದರ್ಭಗಳಲ್ಲಿ- ಹೋದದ್ದಿದೆ. ಆದರೆ, ಅಂದು ನಾನು ಬಯಸಿ ಕಂಡಿದ್ದ ಕನಸು ನನಸಾಗಲು ಇಲ್ಲಿಯವರೆಗೆ ಕಾಯಬೇಕಾಯಿತು.
ಈ ಕ್ರಿಸ್ಮಸ್ ದಿನ ಬೆಳಿಗ್ಗೆ ಎದ್ದು ತಯಾರಾದವನೆ ಕಾರಿನಲ್ಲಿ ಆ ನದಿಯ ಪಾತ್ರದ ಕಡೆಗೆ ನಡೆಸಿ, ಅಲ್ಲೇ ಒಂದೂ-ಒಂದೂವರೆ ತಾಸಿನಷ್ಟು ಕಾಲವಿದ್ದು ಬಂದೆ. (ಅಲ್ಲಿ ಕುಳಿತು ಪೆಯಿಂಟಿಂಗ್ ಮಾಡುವ ಕಾಲವೂ ಎಂದಾದರೂ ಬಂದೀತು. ಇಷ್ಟೇ ಆದಮೇಲೆ ಇನ್ನು ಅದರದ್ದಿನ್ನೇನು!)
ಚಿಕ್ಕಂದಿನಲ್ಲಿ, ಮನೆಯವರೆಲ್ಲರ ಅವ್ಯಾಹತ ಪ್ರಯತ್ನ-ಪ್ರೋತ್ಸಾಹ-ಒತ್ತಾಯಗಳಿದ್ದಾಗಿಯೂ ನಾನು ಸೈಕಲ್ ತುಳಿಯುವುದನ್ನು ಕಲಿಯಲು ಬಹಳ ಹಿಂದೇಟು ಹಾಕುತ್ತಿದ್ದೆ (ಅಥವಾ ಹೆದರುತ್ತಿದ್ದೆ!). ಇವೆಲ್ಲದರಿಂದ ರೋಸಿಹೋಗಿ, ಒಂದು ದಿನ ಮನೆಯವರು ನನ್ನನ್ನು ಹೊರಗೆ ಹಾಕಿ “ಈವತ್ತು ನೀನು ಸೈಕಲ್ ತುಳಿಯೋದನ್ನ ಕಲೀಲಿಲ್ಲ ಅಂದ್ರೆ ಮನೆಗೆ ಸೇರಿಸಲ್ಲ” ಅಂತ ಖಂಡತುಂಡವಾಗಿ ತಾಕೀತು ಮಾಡಿದಮೇಲಷ್ಟೆ, ನೆರೆಮನೆಯ ಹಿರಿಯಣ್ಣನೊಬ್ಬನ ಸಹಾಯ-ಸಾರಥ್ಯದಿಂದ ಅಂತೂ ನಾನೂ ಸೈಕಲ್ ತುಳಿಯುವುದನ್ನು -ಅದೇ ದಿನವೇ- ಕಲಿತೆ.
ಬೈಕಿನ ವಿಷಯದಲ್ಲೂ ಅದೇ ಬಗೆಯ ಕಥೆಯೆ; ಅಪ್ಪನ ಹಳೆ ಬೈಕಿನಲ್ಲಿ ಕಲಿಯಲಾಗದೆ, “ನನಗೆ ಬೈಕ್ ಕಲಿಯಲೇಬೇಕೆನಿಸಿದರೆ, ಯಾವಾಗಲಾದರೂ ನಾನೇ ಬೈಕೊಂದನ್ನ ಕೊಂಡು ಆಮೇಲೇ ಬೈಕ್ ಓಡ್ಸೋದ್ ಕಲೀತೀನಿ” ಅಂತ ಶಪಥ ಮಾಡಿ, ಎಷ್ಟೊ ವರ್ಷಗಳ ನಂತರ ಆ ಶಪಥವನ್ನೂ ಪೂರೈಸಿದ್ದೆ.
ಇನ್ನು ಕಾರಿನ ವಿಷಯವನ್ನಂತೂ ಹೇಳುವುದೇ ಬೇಡ; ನನಗೆ, ಜೀವನದಲ್ಲಿ ಎಂದಾದರೂ ನಾನು ಕಾರನ್ನು ಕೊಳ್ಳಬೇಕೆಂದು, ನಾನೂ ಕಾರನ್ನು ನಡೆಸಬೇಕಾಗುತ್ತದೆ ಎಂಬಂತಹ ಊಹೆ ಕಲ್ಪನೆಗಳೂ ಎಂದೂ ಸುಳಿದಿದ್ದಿರಲಿಲ್ಲ. ಇಲ್ಲಿಗೆ ಬಂದ ಹೊಸತರಲ್ಲಿ, ನನ್ನ ಹಿರಿಯ ಮಿತ್ರರೊಬ್ಬರು — ಇಲ್ಲಿ ಕಾರನ್ನು ಹೊಂದಿರಲೇಬೇಕಾದ ಅನಿವಾರ್ಯತೆಯೆಷ್ಟು ಎಂಬುದರ ಬಗ್ಗೆ ಹಲವಾರು ಸಾರಿ ಹೇಳಿದ್ದರು. ಅದು ಬಹಳ ಸಾರಿ ನನ್ನ ಅನುಭವಕ್ಕೂ ಬಂದದ್ದೂ ಇದೆ. ಅದಾಗ್ಯೂ, ಎಂದಿನಂತೆ, ನನ್ನ ಸೋಮಾರಿತನದಿಂದಲೂ ಹೆದರಿಕೆ-ಹಿಂಜರಿಕೆಯಿಂದಲೂ — ಡ್ರೈವಿಂಗ್ ಕಲಿಯುವುದನ್ನೂ, ಕಾರ್ ಕೊಳ್ಳುವುದನ್ನೂ ಸಾಕಷ್ಟು ಮುಂದೂಡಿದ್ದೆ. ಅದುಹೇಗೊ ಈ ವರ್ಷ ಆ ಎಲ್ಲವನ್ನೂ ಮೀರಿ, ಹಾಗೂಹೀಗೂ ಡ್ರೈವಿಂಗ್ ಕಲಿತು, ಕಾರೊಂದನ್ನು ಕೊಂಡೇಬಿಟ್ಟೆ.
೫. ಸದ್ಯದ ಓದು
ಅತ್ತ ರಾಮಲಕ್ಷ್ಮಣರು ವಿಶ್ವಾಮಿತ್ರನೊಡಗೂಡಿ ಮಿಥಿಲಾನಗರಕ್ಕೆ ಬಂದಿದ್ದಾರೆ; ಅಲ್ಲಿ, ಜನಕಮಹಾರಾಜನು ನಡೆಸುತ್ತಿದ್ದ ಯಜ್ಞದ ಯಾಗಶಾಲೆಯ ಅಲಂಕಾರಗಳನ್ನು ಗಮನಿಸುತ್ತಿದ್ದಾರೆ.
ಇತ್ತ, ಪರ್ಸ್ಯೂಸನು ತನ್ನ ಸಾಹಸವನ್ನು ಮೆರೆದು ಆಂಡ್ರೊಮಿಡಾಳನ್ನು ರಕ್ಷಿಸಿದ್ದಾನೆ. ಅವನ ಕತೆ ಮತ್ತೆ ಮುಂದುವರೆಯಲಿದೆ.
ಇನ್ನು ಈ ಕಡೆ, ಶುಕಮಹರ್ಷಿಗಳು ಪರೀಕ್ಷಿತನ ಪ್ರಶ್ನೆಗಳನ್ನು ಉತ್ತರಿಸುತ್ತ, ಪಾರಮಾರ್ಥಿಕ ತತ್ತ್ವ ವಿಚಾರಗಳನ್ನು ವಿವರಿಸುತ್ತಿದ್ದಾರೆ.
ಒಟ್ಟಾರೆ, ಪ್ರತಿದಿನವೂ ಮೂರು ಬೇರೆಬೇರೆ ದೇಶ-ಕಾಲಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಕಾಣುವ ಯೋಗ, ನನಗೆ.
ದಿನದ ಭಾಗದಲ್ಲಿ ಓವಿಡ್ಡನ “ಮೆಟಾಮಾರ್ಫೊಸಸ್” ಕೃತಿಯ ಅನುವಾದವನ್ನೂ, ಸಂಜೆಯ ಹೊತ್ತು ಶ್ರೀಮದ್ವಾಲ್ಮೀಕಿ ರಾಮಾಯಣವನ್ನೂ, ರಾತ್ರಿ — ಮಲಗುವ ಮುಂಚೆ (ಅಥವಾ ನಡುರಾತ್ರಿ ಎಚ್ಚರಾದಾಗಲೆಲ್ಲ) ಪೋತನ ಮಹಾಕವಿಯ “ಆಂಧ್ರ ಭಾಗವತಮು” ಕೃತಿಯನ್ನೂ ಓದಲು ತೊಡಗಿದ್ದೇನೆ. ಇವುಗಳ ಪೈಕಿ ಒಂದೊಂದೂ ಸಾಗರಸದೃಶವಾದ ಕೃತಿಗಳೇ! ಹೇಗೊ, ಧೈರ್ಯ ಮಾಡಿ ಈಜಿಗೆ ಬಿದ್ದಿದ್ದೇನೆ. ಆ ತೆರೆಗಳಬ್ಬರಕ್ಕೆ ಸಿಲುಕಿ ಕೊಚ್ಚಿಹೋದರೂ ಚೆಂದವೇ; ಅಥವಾ ಮುಳುಗಿ ನೀರಿನಾಳ ಸೇರಿದರೂ ಚೆಂದವೇ. ದಿನದ ಕೊನೆಗೆ ಸಿಗುವ ಧನ್ಯತೆಯೊಂದೇ ಸಾಕು.