ಐದು ಮಾತುಗಳು — ೧೨

೧. ಶೃಂಗಾರ ನೈಷಧವು

ಕೃತಿಯ ಹೆಸರೇ ಶೃಂಗಾರ ನೈಷಧವೆಂದು. ಅದನ್ನು ಬರೆದವನೊ, (ತೆಲುಗಿನ) ಶ್ರೀನಾಥ ಕವಿಸಾರ್ವಭೌಮ; ಇನ್ನು ಹೇಳುವುದೇನು. ಶ್ರೀನಾಥನ ಚಾಟುಪದ್ಯಗಳನ್ನು ಓದಿ/ಕೇಳಿದವರಿಗೆ ಅವನ ರಸಿಕತೆ, ಕಾವ್ಯರಸಿಕತೆ ಎಂಥದ್ದೆಂಬ ಅರಿವಿದ್ದಿರುತ್ತದೆ.

ಕವಿಯು ಈ ಕೃತಿಯಲ್ಲಿ, ನಳ-ದಮಯಂತಿಯರ ಪ್ರೇಮಕಥೆಯನ್ನು ಅತ್ಯಂತ ರಸಮಯವಾಗಿ ಚಿತ್ರಿಸಿದ್ದಾನೆ. ಕೃತಿಯ ಆದ್ಯಂತ ಬರುವ ಶೃಂಗಾರವರ್ಣನೆಗಳು ಕೆಲವೊಮ್ಮೆ ಪ್ರಖರವಾಗಿ ತೋರಿದರೆ, ಇನ್ನು ಕೆಲವೆಡೆಗಳಲ್ಲಿ ಬಹಳ ನವುರಾಗಿ, ಓದುಗರ ಮನಸ್ಸಿಗೆ ತಂಪನ್ನೀಯುವಂತಿವೆ.

ಅಂತೂ ನಲ-ದಮಯಂತಿಯರ ವಿವಾಹ ಕಾರ್ಯಕಲಾಪಗಳೆಲ್ಲ ಮುಗಿದುವು. ಇನ್ನೇನು ಅವರ ಪ್ರಥಮರಾತ್ರಿಯ ವರ್ಣನೆಗೆ ತೊಡಗಬೇಕು. ಅಲ್ಲಿ, ಶ್ರೀನಾಥನು ಎಷ್ಟು ಸಾವಕಾಶವಾಗಿ, ಮೃದುಮಧುರವಾದ ಸನ್ನಿವೇಶಗಳನ್ನು ತಂದು ವಿವರಿಸುತ್ತಾನೆಂದರೆ…

ಸೆಜ್ಜೆಯ ಮನೆಯಲ್ಲಿ ನಲ ದಮಯಂತಿ — ಇಬ್ಬರೇ ಇದ್ದಾರೆ; ಕೋಣೆಯನ್ನೆಲ್ಲ ಆಸ್ತೆಯಿಂದ ಸಿಂಗರಿಸಲಾಗಿದೆ. ಬಗೆಬಗೆಯ ತಿಂಡಿತಿನಿಸುಗಳೊಂದು ಕಡೆ; ಹೂವಿನ ಚಿತ್ತಾರಗಳೊಂದು ಕಡೆ. ದೀಪಗಳ ಸಾಲುಸಾಲುಗಳೊಂದು ಕಡೆ, ಹೀಗೆ.

ಎಷ್ಟೇ ಪ್ರೇಮಿಸಿ ಮದುವೆಯಾದರೂ ಮದುಮಕ್ಕಳಿಗೆ (ಅದರಲ್ಲೂ, ಮದುಮಗಳಿಗೆ) — ಮೊದಲ ರಾತ್ರಿಯಲ್ಲಿ ಸ್ವಲ್ಪ ಸಂಕೋಚ, ಲಜ್ಜಾಭಾವವು ಇದ್ದೇ ಇರುತ್ತದೆಯಲ್ಲವೆ? ಆ ಸಂಕೋಚವನ್ನು ಹೋಗಲಾಡಿಸಲೆಂದೊ ಏನೊ, ನಲನು ದಮಯಂತಿಯೆದುರು ಒಂದಷ್ಟು ವಿನೋದಗಳನ್ನು ತೋರಿಸುತ್ತಾನೆ:

ನಲನು ಅಲ್ಲಿದ್ದ ದೀಪಗಳಲ್ಲಿ ಒಂದನ್ನು ಆರಿಸುವಂತೆ ಊದಿದ; ಆಗ ಅಲ್ಲಿದ್ದ ಎಲ್ಲ ದೀಪಗಳೂ ಆರಿಹೋದಂತೆ ತೋರಿತು. ಮರುಕ್ಷಣದಲ್ಲೆ -ಬೀಸಣಿಗೆಯ ದೆಸೆಯಿಂದ- ಆರಿದ್ದ ದೀಪಗಳೆಲ್ಲ ಮತ್ತೆ ಉರಿಯಲು ತೊಡಗಿದವು. (ಈ ಇಂದ್ರಜಾಲವನ್ನು ಮಾಡಲು ನಲನು ಬೀಸಣಿಗೆಯನ್ನೆ ಬಳಸಿದ್ದಿರಬೇಕು)

ಇವನು ಮತ್ತೊಮ್ಮೆ ದೀಪಗಳನ್ನು ಆರಿಸಿದಂತೆಯೂ, ಅವು ಮತ್ತೆ ತಮಗೆ ತಾವೆ ಹೊತ್ತಿಕೊಳ್ಳುವಂತೆಯೂ ಮಾಡಿ ತೋರಿಸಿದ. ಹೀಗೆ, ದೀಪಗಳೆಲ್ಲ ಆರುವುದೂ, ಮತ್ತೆ ಹೊತ್ತಿಕೊಳ್ಳುವುದೂ ಆಗಿ, ಕೋಣೆಯ ತುಂಬೆಲ್ಲ ಕತ್ತಲೆ ಬೆಳಕುಗಳನ್ನು ಮೂಡಿಸುತ್ತ — ನಲನು ತನ್ನ ಇಂದ್ರಜಾಲವನ್ನು ದಮಯಂತಿಗೆ ತೋರಿಸಿದ. ಅವಳಿಗೆ ಇಂತಹ ಅದ್ಭುತವನ್ನು ಕಂಡು ಕುತೂಹಲವೂ, ಆತಂಕವೂ, ಲಜ್ಜೆಯೂ ನಗುವೂ ಮೂಡಿತು.

ಹೀಗೆ, ನಲನು ದಮಯಂತಿಯ ಮನಸ್ಸನ್ನು ಉಲ್ಲಾಸಗೊಳಿಸಲೂ, ತಿಳಿಗೊಳಿಸಲೂ ಪ್ರಯತ್ನಿಸಿದ. ತಾನು ಬಯಸಿ, ಪ್ರೇಮಿಸಿ ಪಡೆದ ಹೆಣ್ಣಿನ ಮನರಂಜನೆಗಾಗಿ ಇಷ್ಟೂ ಮಾಡದಿದ್ದರೆ ಹೇಗೆ?

೨. ಪಿಕ್ಚರ್ಡ್ ರಾಕ್ಸ್

ಅಗಾಧವಾದ ಸಾಗರದೆದುರು ನಿಂತಾಗ, ಎತ್ತರೆತ್ತರದ ಶಿಖರದ ತಲೆಯನ್ನೇರಿ — ದೂರದೂರದವರೆಗೂ ಕಾಣಿಸುವ ಹಸುರರಾಶಿಯನ್ನು ಕಂಡಾಗ, ಕಗ್ಗತ್ತಲ ರಾತ್ರಿಯಲ್ಲಿ ಬಾನಿನ ಪರದೆ ಮೇಲೆ ಮೆರೆಯುವ ನಕ್ಷತ್ರರಾಶಿಯನ್ನು ಕಂಡಾಗ — ಮನಸ್ಸು ಆಶ್ಚರ್ಯ ಹಾಗೂ ಆನಂದಾತಿರೇಕದಿಂದ ಮೂಕವಾಗುವುದಿಲ್ಲವೆ?

ವಿಭೂತಿವಸ್ತುಗಳ ಸಾನ್ನಿಧ್ಯದಲ್ಲಿ ನಮ್ಮ ಹೃದಯವು ಮೃದುವಾಗುತ್ತದೆ; ಆ ತತ್ತ್ವಗಳ ಬೃಹತ್ತು, ಮಹತ್ತುಗಳೆದುರಿನಲ್ಲಿ, ನಮ್ಮ ಅಸ್ತಿತ್ವವೂ ಸಾಮರ್ಥ್ಯವೂ ಎಷ್ಟೆಷ್ಟು ಕ್ಷುಲ್ಲಕವಾದದ್ದು ಎಂಬ ಭಾವವು ನಮ್ಮಲ್ಲಿ ಸ್ಫುರಿಸುತ್ತದೆ. ಅವುಗಳನ್ನು ಕಾಣುತ್ತಿದ್ದಷ್ಟೂ ಹೊತ್ತು ಮನಸ್ಸೆಲ್ಲ ಬೆರಗು, ಭಕ್ತಿಗಳಿಂದಲೆ ತುಂಬಿಹೋಗುತ್ತದೆ.

ಕಳೆದ ತಿಂಗಳು ನನ್ನ ಕೆಲವು ಸ್ನೇಹಿತರೊಡನೆ, ಡೆಟ್ರಾಯ್ಟಿನಲ್ಲಿರುವ “ಪಿಕ್ಚರ್ಡ್ ರಾಕ್ಸ್” ಎಂಬಲ್ಲಿಗೆ ಹೋಗಿದ್ದೆ. ಅಲ್ಲೊಂದು ದೊಡ್ಡ ಸರೋವರ; ಅದೆಷ್ಟು ಯೋಜನಗಳಷ್ಟು ವ್ಯಾಪಿಸಿದೆಯೊ, ಅದು! ಆ ಸರೋವರದ ಮೇಲೆ — ಎರಡು ಗಂಟೆಗಳಷ್ಟು ಹೊತ್ತು ನಮ್ಮ ದೋಣಿಯ ಪಯಣ.

ಸರೋವರದ ಎರಡೂ ಅಂಚಿಗೆ, ಹತ್ತಾರು ಕಿಲೊಮೀಟರುಗಳುದ್ದದವರೆಗೆ — ಶಿಲಾಪದರಗಳ/ಬೆಟ್ಟಗಳ ಸಾಲು. ಆ ಶಿಲಾಪದರಗಳೆಲ್ಲ ಒಂದೊಂದೂ ಬೇರೆಬೇರೆ ಬಣ್ಣಗಳಿಂದ ಕೂಡಿಕೊಂಡಿದ್ದು, ನೋಡಲು ಅದ್ಭುತವಾದ ಚಿತ್ರದಂತೆ ಕಾಣಿಸುವುದರಿಂದ ಆ ಬೆಟ್ಟಸಾಲಿಗೆ “ಪಿಕ್ಚರ್ಡ್ ರಾಕ್ಸ್” ಎಂಬ ಅನ್ವರ್ಥನಾಮ!

ಅಲ್ಲಿಯ ಕಲ್ಲಿನಲ್ಲಿ ಬಗೆಬಗೆಯ ಲೋಹಗಳ, ನಾನಾ ಖನಿಜಗಳ ಅಂಶಗಳಿರುವುದರಿಂದ, ಒಂದೊಂದು ಶಿಲಾಪದರವೂ ಬೇರೆಬೇರೆ ಬಣ್ಣಗಳನ್ನು ಹೊಂದಿವೆ. ಅದಲ್ಲದೆ, ಸತತವಾಗಿ ನೀರಿನಲೆಗಳ ಹೊಡೆತಕ್ಕೆ ಸಿಕ್ಕಿ, ಆ ಬೆಟ್ಟದ ರಚನೆಯು ವಿಶಿಷ್ಟವಾಗಿ, ಒಂದು ರೀತಿ ಕಲಾತ್ಮಕವಾಗಿ ಕಾಣಿಸುತ್ತದೆ. ಅಲ್ಲಿಯ ಬಂಡೆಗಳೂ ಗುಡ್ಡಗಳೂ — ಒಂದೆಡೆಯಿಂದ ನೋಡಿದರೆ ಯಾರದೊ ಮುಖದಂತೆ, ಇನ್ನೆಲ್ಲೊ ನೋಡಿದರೆ ಸುಂದರವಾದ ಮಂಟಪದಂತೆ, ಮತ್ತೊಂದೆಡೆ ಇನ್ನಾವುದೊ ಸೊಗಸಾದ ವಿನ್ಯಾಸದಂತೆ ಕಾಣಿಸುತ್ತವೆ. ಅದೆಷ್ಟು ಲಕ್ಷಾಂತರ ವರ್ಷಗಳ ಕಥೆಯೆಲ್ಲ ಅಲ್ಲಿ ಪ್ರದರ್ಶನಕ್ಕಿದೆಯೊ ಎಂಬುದನ್ನು ನೆನೆದಾಗ ನಮಗೆ ರೋಮಾಂಚನವಾಗುತ್ತದೆ.

ಮತ್ತೆ, ಅಲ್ಲಲ್ಲಿ ಕಾಣಿಸುವ ಜಲಪಾತಗಳು ಬಹಳ ಮನೋಹರವಾಗಿವೆ.

೩. ನಡುಬೀದಿಯ ಶಾಸನ

ಇತ್ತೀಚೆಗೆ, ನನ್ನ ಸ್ನೇಹಿತನೊಬ್ಬನ ಮದುವೆಗೆಂದು ಆಂಧ್ರದ ಹಳ್ಳಿಯೊಂದಕ್ಕೆ ಹೋಗಿದ್ದೆ. ಅಲ್ಲಿ, ಯಾವುದೊ ಕಲಾಪದ ನಡುವೆ ನನಗೆ ಅಪರೂಪವಾದ ಶಾಸನವೊಂದು ಕಂಡಿತು.

ಸಾಮಾನ್ಯವಾಗಿ, ಎಷ್ಟೊ ಹಳ್ಳಿಗಳಲ್ಲಿ — ಅಲ್ಲಿ ಕಂಡ ಯಾವುದೇ ಶಾಸನಕ್ಕಾದರೂ ಪೂಜೆ ಪುನಸ್ಕಾರ ಮಾಡಿ, ಅವುಗಳ ಮೈಯನ್ನೆಲ್ಲ ಅರಿಸಿನ ಕುಂಕುಮದಿಂದ ತುಂಬಿಬಿಟ್ಟಿರುತ್ತಾರೆ. ಕೆಲವೊಮ್ಮೆ ಶಾಸನಪಾಠವನ್ನೋದುವುದಕ್ಕೆ ಇದರಿಂದ ತೊಡಕಾಗುವುದೂ ಇದೆ.

ಊರಿನ ನಡುವಿನ ಮರವೊಂದರ ಬುಡದಲ್ಲಿದ್ದ ಈ ಶಾಸನಕ್ಕೂ ಬಹುಕಾಲದಿಂದ ಪೂಜಾದಿಗಳು ನಡೆಯುತ್ತಿದ್ದೆಂಬುದು ಅದನ್ನು ನೋಡಿದರೇ ಸ್ಪಷ್ಟವಾಗುತ್ತಿತ್ತು. ಅರಿಸಿನ-ಕುಂಕುಮಗಳ ತೆಳುವಾದ ಲೇಪವಿದ್ದರೂ, ಈ ಶಾಸನವು ನನಗೆ ಬಹಳ ವಿಶಿಷ್ಟವಾಗಿ ತೋರಿತು. ಶಾಸನೋಕ್ತ ವಿಷಯದ ಹಿನ್ನೆಲೆಯಲ್ಲಿ — ತ್ರಿಶೂಲಗಳಿಂದ ಕೂಡಿದ matrix ರೀತಿಯ ರಚನೆಯಿದ್ದು, ಈ ಬಗೆಯ ಶಾಸನವನ್ನು ನಾನು ಈ ಹಿಂದೆ ಎಲ್ಲೂ ಕಂಡಿರಲಿಲ್ಲ. ಹಾಗಾಗಿ, ಟ್ವಿಟ್ಟರಿನಲ್ಲಿಯ ಕೆಲವು ಮಿತ್ರರೊಂದಿಗೆ ಈ ಶಾಸನದ ಚಿತ್ರವನ್ನು ಹಂಚಿಕೊಂಡು, ಆ ಬಗ್ಗೆ ಪ್ರಶ್ನಿಸಿದ್ದೆ. ಅಲ್ಲಿಯ ಕೆಲವು ಮಿತ್ರರಿಂದ ತಿಳಿದ ಸಂಗತಿ:

ಈ ಬಗೆಯ ಶಾಸನಗಳನ್ನು ತೆಲುಗಿನಲ್ಲಿ ‘ಬೊಡ್ಡುರಾಯಿ’ ಎನ್ನುತ್ತಾರಂತೆ. ಆಯಾ ಪ್ರಾಂತದ ಜನರಿಗೂ ಪ್ರಾಣಿಪಕ್ಷಿಗಳಿಗೂ ಯಾವ ಕೇಡೂ ಒದಗದಿರಲಿ ಎಂಬ ಆಶಯದಿಂದ ಹೀಗೆ — ಶೂಲಗಳ matrixನ ಜೊತೆಗೆ, ಬೀಜಾಕ್ಷರಗಳನ್ನೂ ಕೆತ್ತಿರುವ ಶಾಸನವನ್ನು ಊರಿನ ಮಧ್ಯಭಾಗದಲ್ಲಿ ಹಾಕಿಸುತ್ತಿದ್ದರಂತೆ.

ಈ ಊರಿನವರಲ್ಲಿ ಇದರ ಬಗ್ಗೆ ವಿಚಾರಿಸಿದಾಗ, ಇದನ್ನು ‘ನಡಿವೀದಮ್ಮ’ (ನಡುಬೀದಿಯಮ್ಮ) ಕರೆಯುತ್ತಾರೆಂದೂ, ಊರಿನಲ್ಲಿ ಶುಭಕಾರ್ಯಗಳು ನಡೆದಾಗ ಆಯಾ ಮನೆಯವರು ತಪ್ಪದೆ ಇಲ್ಲಿಗೆ ಬಂದು ಪೂಜೆ ಸಲ್ಲಿಸುವುದಾಗಿಯೂ ತಿಳಿಸಿದರು.

ತೆಲುಗಿನಲ್ಲಿ ಹೊಕ್ಕಳನ್ನು ಬೊಡ್ಡು ಎನ್ನುತ್ತಾರೆ. ಈ ಬಗೆಯ ಶಾಸನವನ್ನು ಬೊಡ್ಡುರಾಯಿ ಎನ್ನುವುದಕ್ಕೂ, ಅದನ್ನು ಊರಿನ ನಡುಮಧ್ಯದಲ್ಲಿ ಹಾಕಿಸುತ್ತಿದ್ದುದಕ್ಕೂ ಏನಾದರೂ ಸಂಬಂಧವಿದೆಯೊ ಸ್ಪಷ್ಟವಿಲ್ಲ.

ಕರ್ನಾಟಕದಲ್ಲಿ ಈ ರೀತಿಯ ಶಾಸನಗಳಿವೆಯೊ ಏನೊ ತಿಳಿಯದು. ಆದರೆ ಇದಕ್ಕೆ ಹತ್ತಿರೆನಿಸುವ ಯಂತ್ರಕಲ್ಲು ಶಾಸನಗಳ ಬಗ್ಗೆ ಕೇಳಿದ್ದೆ (ಅವನ್ನೂ ಎಂದೂ ಕಂಡದ್ದಿಲ್ಲ).

೪. ಎರಡು ಕಥೆಗಳು

ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಟ್ವಿಟ್ಟರ್ ಮಿತ್ರರೊಬ್ಬರು, ರವೀಂದ್ರನಾಥ ಠಾಗೂರರ ಕಥೆಗಳ ಸಂಕಲನವೊಂದನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದರು. ಅದರಲ್ಲೊಂದು ಕಥೆ.

ಪುಟ್ಟ ಹುಡುಗಿ ಉಮಾ ಅದುಹೇಗೊ ಬರೆಯಲು ಕಲಿತಳು. ತನಗೆ ಸಿಕ್ಕಿದ ಕಾಗದಗಳಲ್ಲಿ, ಪುಸ್ತಕಗಳಲ್ಲಿ, ಗೋಡೆಯ ಮೇಲೆ — ಎಲ್ಲೆಲ್ಲೂ, ತನಗೆ ತೋರಿದ ಸಂಗತಿಯನ್ನೆಲ್ಲ ಬರೆಯಲು ತೊಡಗಿದಳು. ಅವಳ ಕಾಟವನ್ನು ತಡೆಯಲಾರದೆ, ಮನೆಯವರು ಅವಳಿಗೊಂದು ನೋಟ್ ಪುಸ್ತಕವನ್ನು ತಂದುಕೊಟ್ಟರು. ಇವಳ ಸಾಹಿತ್ಯ ರಚನೆ ಹಾಗೆ ಮುಂದುವರೆಯಿತು‌.

ಮುಂದೆ, ಅವಳಿಗೆ ಮದುವೆಯಾಯ್ತು. ಗಂಡನ ಮನೆಗೆ ಬರುವಾಗ — ಯಾರಿಗೂ ತಿಳಿಯದಂತೆ ಆ ನೋಟ್ ಬುಕ್ ಕೂಡ ಅವಳ ಅತ್ತೆಯ ಮನೆ ಸೇರಿತು. ಅಲ್ಲಿ ಕೂಡ, ಉಮಾ ಸಮಯ ದೊರೆತಾಗೆಲ್ಲ -ಯಾರ ಕಣ್ಣಿಗೂ ಬೀಳದಂತೆ- ಪುಸ್ತಕದಲ್ಲಿ ಬರೆಯುವಳು.

ಆದರೂ, ಒಮ್ಮೆ ಉಮಾಳ ನಾದಿನಿಯರಿಗೆ ಅವಳ ಬರವಣಿಗೆಯ ವಿಷಯ ತಿಳಿದು, ತಮ್ಮ ಅಣ್ಣನವರೆಗೂ ದೂರು ಹೋಗಿ, ಉಮಾ ತನ್ನ ಗಂಡನಿಂದ ಬೈಸಿಕೊಳ್ಳುವುದೂ ಆಯಿತು.

ಒಂದು ದಿನ, ಯಾರೊ ಭಿಕ್ಷುಕಿಯೊಬ್ಬಳು ಹಾಡುತ್ತ ಹೋಗುತ್ತಿದ್ದ ಗೀತೆಯೊಂದನ್ನು (ತವರಿನ ಬಗೆಗಿನ ಪದ) ಉಮಾ ಬರೆದುಕೊಳ್ಳಲು ಯತ್ನಿಸಿದಳು‌. ಈ ವಿಷಯ ನಾದಿನಿಯರಿಗೆ ತಿಳಿಯಿತು‌; ಅವರು, ಘಟನೆಯ ವಿಚಾರಣೆಗೆಂದು ತಮ್ಮ ಅಣ್ಣನನ್ನು ಕರೆತಂದರು.

ಉಮಾ ಈ ಬಾರಿ ಕಳ್ಳತನದ ಮಾಲಿನೊಡನೆ ಸಿಕ್ಕುಬಿದ್ದಳು. ಗಂಡನು ನಿರ್ದಾಕ್ಷಿಣ್ಯವಾಗಿ ಅವಳ ನೋಟ್ ಬುಕ್ಕನ್ನು ಕಸಿದುಕೊಂಡ. ಇನ್ನು ಮುಂದೆಂದಿಗೂ ಉಮಾ ಬರೆಯುವುದು ಇನ್ನು ಸಾಧ್ಯವಿಲ್ಲದಂತಾಯಿತು.

ಆನಂದಿಬಾಯಿ ಗೋಪಾಲ ಜೋಶಿಯ ಕಥೆ ಉಮಾಳ ಕತೆಗಿಂತ ಸ್ವಲ್ಪ ಭಿನ್ನ. ಆಕೆ, ತನ್ನ ಗಂಡನ ಅನುಮೋದನೆಯ ಮೇರೆಗೆ — ದೇಶವಲ್ಲದ ದೇಶದವರೆಗೂ ಹೋಗಿ, ವೈದ್ಯಕೀಯ ಶಾಸ್ತ್ರವನ್ನು ವ್ಯಾಸಂಗ ಮಾಡಿದಳು. ಭಾರತದ ಮೊತ್ತಮೊದಲ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು‌.

ಆ ಹಾದಿಯುದ್ದಕ್ಕೂ ಆಕೆ ಎದುರಿಸಬೇಕಾದ ನೋವು, ಕಷ್ಟಗಳು ಆನಂದಿಯ ಧೈರ್ಯ ಸ್ಥೈರ್ಯಗಳನ್ನು ಕುಗ್ಗಿಸಲಾಗಲಿಲ್ಲ. ಸಮಾಜದ ತೀವ್ರ ವಿರೋಧದ ನಡುವೆಯೂ ಆಕೆ ತಾನೆಂದುಕೊಂಡ ಗುರಿಯನ್ನು ಯಶಸ್ವಿಯಾಗಿ ತಲುಪಿದುದೆ ಅದಕ್ಕೆ ಸಾಕ್ಷಿ.

ದುರ್ದೈವ! ಆನಂದಿ ಬಹಳ ಚಿಕ್ಕವಯಸ್ಸಿನಲ್ಲೇ ಸಾವಿಗೆ ಶರಣಾಗಬೇಕಾಯಿತು‌. ಆದರೂ, ಆಕೆಯ ಬದುಕಿನ ಕಥೆ ಅದೆಷ್ಟು ಜನರಿಗೆ ಸ್ಫೂರ್ತಿಯಾಯಿತೊ…

ಮೊನ್ನೆ ಭಾರತದಿಂದ ಮರಳಿ ಬರುವಾಗ ವಿಮಾನದಲ್ಲಿ ಉಮಾಳ ಕತೆಯನ್ನು ಓದುವುದೂ, ಆನಂದಿಯ ಕುರಿತಾದ ಮರಾಠಿ ಸಿನಿಮಾ ಒಂದನ್ನು ನೋಡುವುದೂ ಆಯಿತು.

೫. ಸುಳ್ಳುಸುದ್ದಿಗಳ ಜಾತ್ರೆ

ಮಾಧ್ಯಮಪ್ರಪಂಚದಲ್ಲಿ ಇತ್ತೀಚೆಗೆ ಒಂದು ಸಂಚಲನಾತ್ಮಕ ಬೆಳವಣಿಗೆ ಶುರುವಾಗಿದೆ. ವಿಶ್ವದಲ್ಲಿನ ಯಾವತ್ತೂ ಸಂಗತಿಗಳಿಗೆ ಮೊಘಲರೇ ಕಾರಣರು, ಅವರಿಂದಲೇ ಭೂಮಿಯು ತನ್ನ ಕಕ್ಷೆಯಲ್ಲಿ ತಿರುಗಲು ಸಾಧ್ಯವಾಗುತ್ತಿರುವುದು, ಮೊಘಲರು ಬಂದಮೇಲಷ್ಟೆ ಜೀವಕೋಟಿಯು ಉಸಿರಾಡಲು ಸಾಧ್ಯವಾಯಿತು ಎಂಬ ಸತ್ಯ ಸಂಗತಿಯನ್ನು ಎಲ್ಲ ಬಗೆಯ ಮಾಧ್ಯಮಗಳೂ ಸಾರಿಸಾರಿ ಹೇಳುತ್ತಿವೆ.

ಈ ಹಿನ್ನೆಲೆಯಲ್ಲಿ, “ಮೊಘಲರೇ ಇಲ್ಲದಿದ್ದರೆ ನಾವು ದೀಪಾವಳಿಯಂತಹ ಹಬ್ಬಗಳನ್ನು ಆಚರಿಸಲಾದರೂ ಸಾಧ್ಯವಿತ್ತೆ?” ಎಂಬ ಪ್ರಶ್ನೆಯನ್ನು ನಾವೆಲ್ಲ ಒಮ್ಮೆಯಾದರೂ ಕೇಳಿಕೊಳ್ಳಬೇಕಿದೆ.

ವಿಷಯ ಇಂತಿರಲಾಗಿ, ಮಾಧ್ಯಮದವರಿಗೆ, ಕೆಲವು ಪ್ರಖಾಂಡ ಪಂಡಿತರಿಗೆ — ಈ ಸಮೂಹ ಸನ್ನಿಯು ಯಾವ ಕಾರಣಕ್ಕಾಗಿ ಮೆತ್ತಿಕೊಂಡಿದೆಯೊ ಎಂಬುದು ಯಾರಿಗೂ ಊಹಿಸಲು ಸಾಧ್ಯವಿಲ್ಲದಂತಾಗಿದೆ.

ಏನಿಲ್ಲವೆಂದರೂ, ಚಿಕ್ಕಂದಿನಲ್ಲಾದರೂ ನಾವೆಲ್ಲ, ಮಾಧ್ಯಮದಲ್ಲಿ ಬರುವ ಸುದ್ದಿ/ ವರದಿಗಳನ್ನು ಸತ್ಯಸ್ಯ ಸತ್ಯವೆಂದೇ ನಂಬುತ್ತಿದ್ದೆವು. ಯಾವುದು ನಿಜ ಯಾವುದು ಸುಳ್ಳು ಎಂದು ಹುಡುಕಿನೋಡುವುದು ಅಂದಿನ ಮಟ್ಟಿಗೆ ಸುಲಭವಿರಲಿಲ್ಲ. ಈಗಲಾದರೆ ಎಲ್ಲ ವಿಷಯಗಳ ಬಗೆಗಿನ ಮಾಹಿತಿಯೂ ಜನಕ್ಕೆ ಅತ್ಯಂತ ಸಲೀಸಾಗಿ ದೊರೆಯುವಂತಾಗಿದೆ. ಆದ್ದರಿಂದ, ಮಾಧ್ಯಮಗಳು ಬಿತ್ತರಿಸುವ ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚುವುದು ಅಷ್ಟೇನೂ ಕಷ್ಟವಾಗುವುದಿಲ್ಲ. ಇಷ್ಟಾದರೂ ತಪ್ಪುತಪ್ಪು ಮಾಹಿತಿಯಿರುವ ಸುದ್ದಿಗಳು ಪುಂಖಾನುಪುಂಖವಾಗಿ ಬರುತ್ತಲೇ ಇರುತ್ತವೆ.

ಅಂತಹ ಕೆಲವು ಸುಳ್ಳು ವರದಿಗಳ ಬಂಡವಾಳ ಬಯಲು ಮಾಡುವಂತಹ ಲೇಖನವೊಂದು ಇಲ್ಲಿದೆ ನೋಡಿ. ದಯವಿಟ್ಟು ಓದಿ:

--

--

No responses yet