ಐದು ಮಾತುಗಳು — ೧೧

ಪ್ರಿಯದರ್ಶಿಕಾ ದೆಸೆಯಿಂದ..

ವಧೂವರರಿಬ್ಬರೂ ಹೋಮಕುಂಡದ ಎದುರು ನಿಂತಿದ್ದಾರೆ. ಇವಳೊ, ಸುಕುಮಾರಿ; ಹೋಮಕುಂಡದಿಂದೇಳುವ ಧೂಮವು ಅವಳ ಕಣ್ಣಿಗೆ ಉರಿಯನ್ನುಂಟುಮಾಡದಿದ್ದೀತೆ? ಆದರೂ, ಚಂದ್ರಕಿರಣಗಳ ಕಾಂತಿಯು -ಆ ಉರಿಯನ್ನು ಉಪಶಮನಗೊಳಿಸುವಂತೆ- ತಂಪಾಗಿ, ಹಿತವಾಗಿತ್ತು. ಇವಳಿಗೊ, ವರನನ್ನೊಮ್ಮೆ ಕಾಣಬೇಕೆಂಬ ಉತ್ಕಟವಾದ ಹಂಬಲ. ಸರಿ, ನೋಡೋಣವೆಂದುಕೊಂಡರೆ — ಬ್ರಹ್ಮದೇವನೂ ಅಲ್ಲೇ ಹತ್ತಿರದಲ್ಲಿ, ಮಂತ್ರ ಹೇಳ್ತಾ ಕೂತಿದ್ದಾನಲ್ಲ! ಅದಕ್ಕೇ, ಅವಳು ನಾಚುತ್ತ ತಲೆತಗ್ಗಿಸಿದಳು.

ಆಗ, ಕನ್ನಡಿಯಂತಹ ಅವಳ ಉಗುರಿನ ಮೇಲೆ ಹರನ ಬಿಂಬವು ತೋರಿತಂತೆ. ಅರೆರೆ, ಗಂಗೆಯು ಹರನ ತಲೆಯನ್ನೇರಿ ಕುಳಿತುಬಿಟ್ಟಿದ್ದಾಳಲ್ಲ! ಅದನ್ನು ಕಂಡು ಈಕೆಗೆ ಅಸೂಯೆಯೂ ಕೋಪವೂ… ಆದರೇನು, ಪಾಣಿಗ್ರಹಣದ ಕಾಲಕ್ಕೆ ಹರನ ಕೈಯ ಸೋಂಕಿಗೇ ಇವಳು ಆನಂದದಿಂದ ಮೈಮರೆತಳಂತೆ.‌ ಅಂತಹ ಉಮೆಯು ನಮ್ಮನ್ನು ಆಶೀರ್ವದಿಸಲಿ.

ರಾವಣನು ಕೈಲಾಸಪರ್ವತವನ್ನೇ ಎತ್ತಲು ಪ್ರಯಾಸ ಪಡ್ತಿದ್ದನಲ್ಲ; ಆಗ — ಆ ಪರ್ವತವೆಲ್ಲ ಅಲುಗಾಡಿತಂತೆ. ಪಾಪ, ಮಗು ಕಾರ್ತಿಕೇಯನಿಗೆ ಗಾಬರಿಯಾಗಿ, ಅಮ್ಮನ ಕೊರಳಿಗೆ ಗಟ್ಟಿಯಾಗಿ ಜೋತುಬಿದ್ದ. ಇತ್ತ, ಶಿವನ ಕೊರಳಲ್ಲಿಯ ನಾಗನೂ ರೋಷದಿಂದ ಭುಸುಗುಟ್ಟಿದ. ಆದರೆ, ಮಹಾದೇವನಿಗೆ ಇದು ಯಾವ ಲೆಕ್ಕ?

ಶಿವನು ಸುಮ್ಮನೆ ತನ್ನ ಚರಣವನ್ನೂರಿದ; ಅಷ್ಟೇ ಸಾಕಾಯಿತು, ರಾವಣನು ರಸಾತಳಕ್ಕೆ ಸೇರಿಹೋದ. ಇಲ್ಲಿ, ಈ ಎಲ್ಲ ಗಲಿಬಿಲಿಯಿಂದ ಕಂಗಾಲಾದ ಗೌರಿಯು -ಆಸರೆಗೆಂದು- ಗಂಡನನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಅಂತಹ ಸನ್ನಿವೇಶದಲ್ಲೂ, ಗೌರಿಯ ಅಪ್ಪುಗೆಯಿಂದುಂಟಾದ ನಿರ್ಭರ ಸೌಖ್ಯಸಾಗರದಲ್ಲಿ ತೇಲಾಡುವವನಾದ ಶಂಕರನು ನಮ್ಮನ್ನೆಲ್ಲ ರಕ್ಷಿಸಲಿ.

ತೆಲುಗಿನ ಕವಿ ಚೆನ್ನಾಪ್ರಗಡ ಭಾನುಮೂರ್ತಿಯವರು (ಸಂಸ್ಕೃತದಿಂದ) ಅನುವಾದಿಸಿರುವ “ಪ್ರಿಯದರ್ಶಿಕಾ” ನಾಟಕದ ನಾಂದಿಪದ್ಯಗಳ ಭಾವಾರ್ಥವಿದು.

ಅರಸ ಶ್ರೀ ಹರ್ಷವರ್ಧನನು ಸಂಸ್ಕೃತದಲ್ಲಿ ರಚಿಸಿರುವ ಪ್ರಿಯದರ್ಶಿಕಾ ನಾಟಕದ ಬಗ್ಗೆ, ಶತಾವಧಾನಿಗಳು ತಮ್ಮ ಪ್ರವಚನ ಸರಣಿಯಲ್ಲಿ ಉಲ್ಲೇಖಿಸಿದ್ದರು. ಅದನ್ನು ಹುಡುಕಿ ಹೊರಟ ನನಗೆ, ಅದರ ತೆಲುಗು ಅವತರಣಿಕೆ ಸಿಕ್ಕಿತು. ಅದನ್ನು ಈ ವಾರ ಓದಿ ಮುಗಿಸಿದೆ.

ಮೊದಲಲ್ಲಿರುವ ಈ ಎರಡು ಪದ್ಯಗಳೇ ಎಷ್ಟು ಸೊಗಸಾಗಿವೆ! (ಇವುಗಳ ಸಂಸ್ಕೃತ ಮೂಲವನ್ನೂ ಓದುವುದಾಯ್ತು). ನಾಟಕವೂ ಅದ್ಭುತವಾಗಿದೆ.

ಈ ನಾಂದಿಪದ್ಯವನ್ನೋದುತ್ತ, ಒಂದು ಕ್ಷಣಕ್ಕೆ ನಮ್ಮ ಹರಿಹರನ “ಗಿರಿಜಾ ಕಲ್ಯಾಣ” ದ ಮದುವೆ ಮಂಟಪಕ್ಕೂ ಹೋಗಿಬರುವಂತಾಯ್ತು. ಅಲ್ಲೂ ಹಾಗೇ. ಗೌರಿಯು, ಶಿವನ ತಲೆಮೇಲಿನ ಗಂಗೆಯನ್ನು ಕಂಡು, “ನನ್ನ ಕಣ್ಣೆದಿರಿಗೇ ಇವಳ್ಯಾರೊ ಹರನ ತಲೆಯನ್ನೇರಿ ಕೂತುಬಿಟ್ಟಿದ್ದಾಳಲ್ಲ!!” ಅಂತ, ಕೋಪದಿಂದ ಇಟ್ಟಳೋ ಎಂಬಂತೆ, ಜೀರಿಗೆ-ಬೆಲ್ಲವನ್ನು ಶಿವನ ಶಿರದ ಮೇಲಿಟ್ಟಳಂತೆ. ಆಹಾ!

ವಾಲ್ಮೀಕಿ ರಾಮಾಯಣ

ಇತ್ತೀಚೆಗೆ ಟ್ವಿಟ್ಟರಿನ ಸ್ನೇಹಿತರೊಬ್ಬರು, ಶ್ರೀಮದ್ವಾಲ್ಮೀಕಿ ರಾಮಾಯಣದ ಬಗೆಗೆ ಯಾವುದಾದರೂ ಉಪನ್ಯಾಸದ ವೀಡಿಯೋ ಇದ್ದರೆ ತಿಳಿಸಿ ಎಂದು ಕೇಳಿದ್ದರು. ಅದಕ್ಕಾಗಿ ಹುಡುಕುವಾಗ ನನಗೆ ಶತಾವಧಾನಿ ರಾ. ಗಣೇಶ್ ಅವರ ಪ್ರವಚನ ಮಾಲಿಕೆಯೊಂದು ಕಂಡಿತ್ತು. ಅದರ ಲಿಂಕನ್ನೇ ಆ ಮಿತ್ರರಿಗೆ ಕಳುಹಿಸಿದ್ದೆ. ಜೊತೆಗೆ, ನಾನೂ ಆ ಉಪನ್ಯಾಸವನ್ನು ಕೇಳಲು ತೊಡಗಿದೆ.

ನಾನು ಈ ಹಿಂದೆ — ರಾಮಾಯಣದಲ್ಲಿಯ ಸುಂದರಕಾಂಡದ ಹೆಚ್ಚಿನ ಭಾಗವನ್ನೂ, ಉಳಿದ ಕಾಂಡಗಳಲ್ಲಿಯ ಕೆಲವು ಪ್ರಮುಖ ಸರ್ಗಗಳನ್ನೂ ಸಂಸ್ಕೃತ-ಕನ್ನಡ ಅನುವಾದದೊಡನೆ ಓದಿದ್ದೆನಷ್ಟೇ; ಸಂಪೂರ್ಣ (ವಾಲ್ಮೀಕಿ) ರಾಮಾಯಣವನ್ನು ಓದುವ ಯೋಗವಂತೂ ಬಂದಿದ್ದಿರಲಿಲ್ಲ. ಆದರೆ, ಈಗ — ಈ ಸರಣಿಯ ಮೂಲಕ, ಆದಿಕಾವ್ಯದಲ್ಲಿಯ ಅತಿ ಮುಖ್ಯ ಘಟನೆಗಳನ್ನೂ, ಅವುಗಳ ಹಿಂದಿನ ಸಾರ-ಸ್ವಾರಸ್ಯವನ್ನೂ ಕೇಳುವ ಭಾಗ್ಯ ದೊರೆಯಿತು.

ಒಟ್ಟು ಹತ್ತು ಸಂಚಿಕೆಗಳಲ್ಲಿ, ಶತಾವಧಾನಿಗಳು — ವಾಲ್ಮೀಕಿ ರಾಮಾಯಣದ ಸೌಂದರ್ಯವನ್ನೂ, ಅದರ ಔನ್ನತ್ಯವನ್ನೂ ವಿಸ್ತಾರವಾಗಿ ವಿವರಿಸಿದ್ದಾರೆ. ಜೊತೆಗೆ, ಪ್ರಾಸಂಗಿಕವಾಗಿ — ಭೋಜರಾಜನ ‘ಚಂಪೂ ರಾಮಾಯಣ’, ಭಾಸನ ‘ಪ್ರತಿಮಾ’ ನಾಟಕ, ಕಾಳಿದಾಸನ ‘ರಘುವಂಶ’ ಮೊದಲಾದ ಕೃತಿಗಳಲ್ಲಿಯ ರಾಮಾಯಣದ ಚಿತ್ರಣಗಳ ಬಗೆಗೂ ಉಲ್ಲೇಖಿಸುತ್ತಾರೆ. ರಾಮಾಯಣದ ನಾನಾ ಪಾತ್ರಗಳ ವ್ಯಕ್ತಿತ್ವದ ದರ್ಶನ ಹೇಗಿದೆ, ಅವುಗಳ ವರ್ತನೆಯ ಹಿಂದಿನ ಸೂಕ್ಷ್ಮತೆ ಎಂಥದ್ದು, ಮಹರ್ಷಿ ವಾಲ್ಮೀಕಿಯ ಕಾಣ್ಕೆಯ ವೈಶಾಲ್ಯವೆಂಥದ್ದು ಎಂಬ ಹತ್ತು ಹಲವು ಸಂಗತಿಗಳನ್ನು ಬಹಳ ಸೊಗಸಾಗಿ ವಿಶ್ಲೇಷಿದ್ದಾರೆ. ಹೇಳಿ ಕೇಳಿ ಇದು ಕರುಣರಸ ಪ್ರಧಾನವಾದ ಕಾವ್ಯ. ಅದಾಗ್ಯೂ, ಶತಾವಧಾನಿಗಳು — ರಾಮಾಯಣದಲ್ಲಿ ಎದುರಾಗುವ ಎಲ್ಲ ಬಗೆಯ ರಸವದ್ಸನ್ನಿವೇಶಗಳೆಡೆಗೂ ಕೇಳುಗರ ಗಮನ ಸೆಳೆಯುತ್ತಾರೆ.

ಒಟ್ಟಾರೆ, “ರಾಮಾಯಣವನ್ನು ಓದಲು ನಮಗೆ ಸಾಧ್ಯವಾಗಲಿಲ್ಲ/ಸಾಧ್ಯವಾಗದಲ್ಲ” ಎಂಬ ಕೊರಗನ್ನು ನೀಗಿಸಲು ಈ ಸರಣಿಯು ಒಂದು ವರದಾನವೇ ಆಗಿದೆ. ಒಂದುವೇಳೆ ನಾವೇ ಓದಿದರೂ ಇಷ್ಟು ಆಳವಾದ ಒಳನೋಟ ನಮಗೆ ಸಾಧ್ಯವಾಗುವುದಿಲ್ಲವೆನ್ನುವುದು ಸತ್ಯದ ಮಾತೇ ಸರಿ.

ನಿಮಗೆ ಸಾಧ್ಯವಿದ್ದಲ್ಲಿ, ಹೇಗಾದರೂ ಸಮಯ ಹೊಂದಿಸಿಕೊಂಡು ಈ ಸರಣಿಯನ್ನು ಕೇಳಿ.

ಎರಡು ಕತೆಗಳು

ಒಂದು ರ‍್ಯಾಕಿನಲ್ಲಿ ಬಗೆಬಗೆಯ ಪುಸ್ತಕಗಳನ್ನೂ, ಪತ್ರಿಕೆಗಳನ್ನೂ ಪೇರಿಸಿಟ್ಟಿರುತ್ತಾರೆ, ಅವರು. ಅವರ ಕಡೆಯಿಂದ ಹಾದುಹೋಗುವರನ್ನೂ, ಅಕಸ್ಮಾತ್ತಾಗಿ ಅವರೆಡೆಗೆ ದೃಷ್ಟಿ ಹೊರಳಿಸಿದವರನ್ನೂ ಕಂಡು, ಒಂದು ತೆಳ್ಳನೆಯ ಮಂದಹಾಸ ಬೀರಿ, “ಗುಡ್ ಮಾರ್ನಿಂಗ್” ಎಂದೊ “ಗುಡ್ ನೈಟ್” ಎಂದೊ ಹೇಳುತ್ತ — ಸಂಜೆಯವರೆಗೂ ಅಲ್ಲಿ ನಿಂತೇ ಇರುತ್ತಾರೆ.

ಇಲ್ಲಿಯ ರೈಲ್ವೇ ನಿಲ್ದಾಣಗಳ ಹೊರಗೆ ಪ್ರತಿನಿತ್ಯವೂ ಕಾಣುವ ದೃಶ್ಯವಿದು. ನಾನು ಆಫೀಸಿಗೆ ಹೋಗುವಾಗ, ಅಲ್ಲಿಂದ ಮನೆಗೆ ಬರುವಾಗ ಕೆಲವೊಮ್ಮೆ — ಇವರ ನಗೆ/ಸ್ವಾಗತಗಳಿಗೆ ಭಾಜನನಾಗಬೇಕಾಗುತ್ತದೆ.

ನಾನು ಇಲ್ಲಿಗೆ ಬಂದ ಹೊಸತರಲ್ಲಿ, ಇವರ ಬಳಿಯಿದ್ದ ಪುಸ್ತಕಗಳು ಯಾವುವೆಂದು ನೋಡುವ ಕುತೂಹಲದಿಂದ ಇವರ ಬಳಿಸಾರಿದಾಗ — ಬೈಬಲ್ಲಿನ ಬೋಧನೆಯ ಬಗೆಗಿನ ಯಾವುದೊ ಪುಸ್ತಕವನ್ನು ನನಗೆ -ಉಚಿತವಾಗಿ- ಕೊಟ್ಟಿದ್ದರು. ನನಗೆ ಸಹಜವಾಗಿ ಸ್ವಲ್ಪ ಕಸಿವಿಸಿಯೂ, ಬೇಸರವೂ ಆಯಿತು. ಭಾರತವೂ ಸೇರಿದಂತೆ ನಾನಾ ದೇಶಗಳಲ್ಲಿ ಅವ್ಯಾಹತವಾಗಿ ನಡೆಯುವ ಈ ಬಗೆಯ “ಧರ್ಮಪ್ರಚಾರ”, ತನ್ಮೂಲಕ -ನಾನಾ ಆಮಿಷಗಳನ್ನೊಡ್ಡಿ ಮಾಡುವ ಮತಾಂತರಗಳು — ಇವನ್ನು ನೆನೆದರೇ ಅಸಹ್ಯ ಭಾವನೆ ಮೂಡುತ್ತದೆ. ಇದೇ ’ಜೆಹೋವಾ ವಿಟ್ನೆಸ್’ನ ಮಂದಿ, ಮೈಸೂರಿನಲ್ಲಿ ಅಂಗಡಿಯಿಂದ ಅಂಗಡಿಗೆ ತೆರಳಿ, ಯಾವುಯಾವುದೊ ಕರಪತ್ರಗಳನ್ನು ಹಂಚುತ್ತಿರುವುದರ ಬಗ್ಗೆ ನಾಲ್ಕೈದು ವರ್ಷಗಳ ಹಿಂದೆ ಟ್ವೀಟ್ ಮಾಡಿದ್ದೆ.

ಮೊನ್ನೆ ಒಮ್ಮೆ, ಹೀಗೇ ಆಫೀಸಿಗೆ ಹೊರಟಿದ್ದವನಿಗೆ ಅಕಸ್ಮಾತ್ತಾಗಿ ಇವರ ದರ್ಶನವಾಯಿತು. ಆದರೆ, ಅಚ್ಚರಿ ತಂದ ಸಂಗತಿಯೆಂದರೆ — ಅವರು ಈಗ ಪ್ರದರ್ಶನಕ್ಕಿಟ್ಟಿದ್ದ ಪುಸ್ತಕಗಳು ತೆಲುಗಿನಲ್ಲಿದ್ದುವು. “ಒಹ್! ಎಲಾ ಇವರ (ದುಷ್ಟ) ಚಾತುರ್ಯವೇ” ಎಂದುಕೊಂಡೆ. ಸರಿ, ಕಂಡದ್ದಾಯಿತು; ಅವರ ಬಳಿಗೆ ಹೋದಾಗ, ಅವರಿಂದ ಮತ್ತದೇ ’ಪುಸ್ತಕ ಪ್ರದಾನ’ ಕಾರ್ಯಕ್ರಮವೂ ಆಯಿತು. ಬದುಕಿನಲ್ಲಿ ನಾವು ಹೊಂದಿರುವ ನಾನಾ ಪ್ರಶ್ನೆಗಳಿಗೆ ಅವರ ದೇವರು ಈಗಾಗಲೇ ಉತ್ತರಿಸಿದ್ದಾನಂತೆ. ನಾವು ಅವನ ಕಡೆಗೆ ದಿಟ್ಟಿ ಹೊರಳಿಸಿದರೆ ಸಾಕು, ನಮಗೆ ಸ್ವರ್ಗದಲ್ಲೊಂದು ಡಬಲ್ ಬೆಡ್ರೂಮ್ ಫ್ಲಾಟ್ ಖಾಯಮ್ಮಾಗುತ್ತದೆಯಂತೆ.

ಅವರವರ ನಂಬಿಕೆ, ಧರ್ಮ, ಆಚಾರಗಳು — ಅವರವರ ವಿವೇಕ, ವಿಶ್ಲೇಷಣೆಗೆ ಬಿಟ್ಟಿದ್ದು. ಆದರೆ, ಅದು ಬೇರೆ ಧರ್ಮಗಳನ್ನು, ನಂಬಿಕೆಗಳನ್ನು ತುಳಿದೂ ತಿವಿದೂ ತನ್ನನ್ನು ತಾನು ವಿಸ್ತರಿಸಿಕೊಳ್ಳಲು ತವಕಿಸುವುದು ಖಂಡನೀಯ. ಭಾರತದಲ್ಲಿ ನಡೆಯುವಂತೆ (ಬಹುಶಃ ಬೇರೆ ದೇಶಗಳ ಕಥೆಯೂ ಹೀಗೆಯೆ ಇರಬಹುದು) ಯಾವುದೇ ಎಗ್ಗಿಲ್ಲದೆ ಸಾಗುವ ಮತಾಂತರ ಕೃತ್ಯಗಳು, ಅದಕ್ಕಾಗಿ ಇಂಥವರು ಮಾಡುವ “ಧರ್ಮ ಪ್ರಚಾರ”ವು ಹೇಯವೆನಿಸುತ್ತದೆ.

ಇಲ್ಲಿಗೆ ಹತ್ತಿರದ ಕಮ್ಯೂನಿಟಿಗಳಲ್ಲಿ ವಾಸಿಸುವ ಹೆಚ್ಚಿನ ಮಂದಿ ತೆಲುಗಿನವರು. ಅವರನ್ನು ತಮ್ಮತ್ತ ಸೆಳೆಯಲು, ಈಗ ಹೀಗೆ ತೆಲುಗು ಪುಸ್ತಕಗಳನ್ನಿಟ್ಟುಕೊಂಡು ಕಾಯಲು ಶುರು ಮಾಡಿದ್ದಾರೆ — ಇವರು. ಎಂತಹ ಅದ್ಭುತವಾದ ಪ್ರಯತ್ನ, ಅಲ್ಲವೇ? ಕ್ರೈಸ್ತ ಮಿಷನರಿಗಳು ಭಾರತಕ್ಕೆ ಬಂದ ಹೊಸತರಲ್ಲಿ, ಬೇರೆಬೇರೆ ಪ್ರಾಂತಗಳಲ್ಲಿದ್ದ ಭಾಷೆಗಳನ್ನು ಕಲಿತು, ಆಯಾ ಭಾಷೆಗಳಲ್ಲಿಯೇ “ದೇವಬೋಧೆ”ಯನ್ನು ಅಲ್ಲಿಯ ಜನರಿಗೆ ತಲುಪಿಸಲು ತೊಡಗಿದರಂತೆ. ಆ ಪದ್ಧತಿ ಇಂದಿಗೂ ಉಳಿದುಬಂದಿರುವುದು ವಿಶೇಷ!

ಮೊನ್ನೆ ನಾನು ಜಿಮ್ಮಿನಲ್ಲಿ ಕಾಲು ಉಳುಕಿಸಿಕೊಂಡ ಒಂದೆರಡು ದಿನಗಳ, ಅದರ ಚಿಕಿತ್ಸೆಗೆಂದು ಡಾಕ್ಟರ ಬಳಿಗೆ -ಕ್ಯಾಬಿನಲ್ಲಿ- ಹೊರಟಿದ್ದೆ. ಕ್ಯಾಬಿನವ ಬಂದ; ನಾನು ಒಳಗೆ ಕುಳಿತೆ. ನನ್ನನ್ನು ಕಂಡೊ, ನನ್ನ ಹೆಸರನ್ನು ಕಂಡೊ — ಅವನಿಗೆ ನಾನು ಭಾರತೀಯನೆಂದು ತಿಳಿದಿದ್ದಿರಬೇಕು. ನನ್ನನ್ನು ಕಂಡವನೇ “ನಮಸ್ತೇ” ಎಂದ. ನಾನೂ ಖುಶಿಯಿಂದ “ನಮಸ್ತೇ” ಎಂದೆ.

ಆಮೇಲೆ, ತನ್ನ ಸೀಟಿನ ಪಕ್ಕದಲ್ಲಿದ್ದ ಬುಟ್ಟಿಯೊಂದನ್ನು ತೋರಿಸಿ, “ಇದರಲ್ಲಿ ಒಂದೆರಡು ತೆರದ ಹಣ್ಣುಗಳು, ಚಾಕೊಲೆಟ್ಸ್, ಚಿಪ್ಸ್, ನೀರಿನ ಬಾಟಲಿ ಮುಂತಾದವು ಇವೆ. ನಿನಗೆ ಯಾವುದು ಇಷ್ಟವಾಗುತ್ತೊ ಅವನ್ನು ತಗೊ” ಎಂದು ಹೇಳಿದ. ನಾನು ಮೊದಲಿಗೆ ಬೇಡವೆಂದರೂ, ಅವನ ಒತ್ತಾಯಕ್ಕೆ, ಒಂದು ಬಾಳೆಹಣ್ಣನ್ನು ತೆಗೆದುಕೊಂಡೆ.

ನಂತರ, ಹಾಗೇ ಕುಶಾಲಿನ ಮಾತುಗಳನ್ನಾಡುತ್ತ, ನಾನು ಭಾರತದ ಯಾವ ಭಾಗದವನು ಎಂಬುದನ್ನು ಕೇಳಿ ತಿಳಿದುಕೊಂಡ. ಹಾಗೇ, ತಾನು ಕೇಳಿದ್ದ ಚೆನ್ನೈ, ಮುಂಬೈಯಂತಹ ನಗರಗಳ ಹೆಸರನ್ನೂ ಹೇಳಿದ. ತನ್ನ ಹುಟ್ಟೂರಿನಲ್ಲಿ ಕೆಲವರು ಭಾರತೀಯ ಮೂಲದ ಸ್ನೇಹಿತರಿದ್ದಾರೆಂದೂ, ಅವರ ಮನೆಯಲ್ಲಿ ತಾನು ಸವಿದ ಭಾರತೀಯ ತಿನಿಸುಗಳ ಬಗ್ಗೆಯೂ — ಬಹಳ ಪ್ರೀತಿಯಿಂದ ತಿಳಿಸಿದ.

ಸ್ಸ್ವಲ್ಪ ಹೊತ್ತಿನ ನಂತರ, “ದೇಸಿ ರೇಡಿಯೋ”ವನ್ನು ನನಗೆ ತೋರಿಸಿ, “ಇವುಗಳಲ್ಲಿ ನಿನಗೆ ಯಾವ ಭಾಷೆಯ ಹಾಡನ್ನು ಕೇಳಬೇಕೊ ಹೇಳು” ಎಂದ. ನಾನು, ಯಾವುದಾದರೂ ಸರಿ ಎಂದೆ. ಹಿಂದಿ ಹಾಡಿನ ಸ್ಟೇಶನ್ ಒಂದನ್ನು ಹಚ್ಚಿ, ಅದರಲ್ಲಿ ಬರುತ್ತಿದ್ದ (ಸ್ವಲ್ಪ ಹಳೆಯ) ಹಾಡೊಂದನ್ನು ಪ್ರಶಂಸಿಸಿದ. ಆತನೊಡನೆ, ಆಸಕ್ತಿಕರವಾದ ಒಂದಷ್ಟು ವಿಷಯಗಳನ್ನು ಚರ್ಚಿಸುತ್ತಿರುವಂತೆಯೇ ನಾನು ಇಳಿಯಬೇಕಾದ ಕಡೆಗೆ ಬಂದು ತಲುಪಿದ್ದೆವು. ಅವನು ಮತ್ತೊಮ್ಮೆ ನನ್ನನ್ನು ಹಾರೈಸಿ ಅಲ್ಲಿಂದ ಬೀಳ್ಕೊಂಡ.

ಈ ಎರಡೂ ಘಟನೆಗಳು ಬರೀ ಮೂರ್ನಾಲ್ಕು ದಿನಗಳ ಅಂತರದಲ್ಲಿ ನಡೆದದ್ದು. ಎರಡನ್ನೂ ಹೋಲಿಸಿ ನೋಡಿದಾಗ, ಮೊದಲ ಸನ್ನಿವೇಶಕ್ಕೂ ಇದಕ್ಕೂ ಎಂತಹ ವೈರುಧ್ಯವಿದೆಯಲ್ಲವೇ ಎನಿಸಿತು, ನನಗೆ.

ತಮ್ಮ ಕ್ಯಾಬಿನಲ್ಲಿ ಬರುವವರನ್ನು ಸ್ನೇಹದಿಂದ ಮಾತಾಡಿಸುವುದು, ಅವರಿಗೆ ಇಷ್ಟವಿರಬಹುದಾದ ಸಂಗತಿಗಳ ಬಗ್ಗೆ ಚರ್ಚಿಸುವುದು — ತಿಳಿಯದ್ದನ್ನು ಕೇಳಿ ತಿಳಿದುಕೊಳ್ಳುವುದು, ಹೀಗೆ ಹತ್ತು ಹಲವು ಬಗೆಯ ಸದ್ವರ್ತನೆಯುಳ್ಳ ಕ್ಯಾಬ್ ಡ್ರೈವರ್’ಗಳನ್ನು ಸಾಕಷ್ಟು ಸಾರಿ ಕಂಡಿದ್ದೇನೆ, ನಾನು. ಹಾಗಾಗಿ, ಅಂದು ನಾನು ಭೇಟಿಯಾದ ಕ್ಯಾಬ್ ಡ್ರೈವರಿನ ವರ್ತನೆಯಲ್ಲಿ, ಅವನು ತೋರಿದ ಆತ್ಮೀಯತೆಯಲ್ಲಿ — ಕೃತ್ರಿಮತೆಯೇನೂ ಕಾಣಿಸಲಿಲ್ಲ, ನನಗೆ.

ಶತಮಾನಗಳಾಚೆಯಿಂದ!

ಇಲ್ಲಿಯ ಮಾಲ್ ಒಂದರಲ್ಲಿ, ಮೊನ್ನೆ ಹಳೆಯ ಪುಸ್ತಕಗಳನ್ನು ಮಾರುತ್ತಿದ್ದರು. ನಾನು ನನ್ನ ಸ್ನೇಹಿತನೊಬ್ಬನೊಡನೆ ಅಲ್ಲಿಗೆ ಹೋಗಿದ್ದೆ. ನಾನಾ ವಿಷಯಗಳ ಬಗೆಗಿನ ನೂರಾರು ಪುಸ್ತಕಗಳು, ಬಹಳ ಕಡಿಮೆ ಬೆಲೆಗೇ ಲಭ್ಯವಿದ್ದವು — ಅಲ್ಲಿ. ಸರಿ, ನಾನು ಒಂದರ ನಂತರ ಒಂದು ಪುಸ್ತಕವನ್ನು ಎತ್ತಿಕೊಂಡು ಬುಟ್ಟಿಯೊಂದರಲ್ಲಿ ಹಾಕಿಕೊಳ್ಳುತ್ತ ಸಾಗಿದ್ದೆ. ಹಾಗೆ ಹುಡುಕುತ್ತಿದ್ದವನಿಗೆ ಮಾಸಲುಮಾಸಲಾದ ಹಳೇ ಪುಸ್ತಕವೊಂದು ಸಿಕ್ಕಿತು. ಯಾವ ಪ್ರೇರಣೆಯಿಂದಲೊ ಏನೊ, ಅದನ್ನೆತ್ತಿಕೊಂಡು, ಸುಮ್ಮನೆ ತೆಗೆದು ನೋಡಿದೆ.

ಅಬ್ಬ! ೧೮೯೫ನೇ ಇಸವಿಯಲ್ಲಿ ಮುದ್ರಿಸಲಾದ ಪುಸ್ತಕವದು. ಅದೂ ಯಾವುದೆನ್ನುತ್ತೀರಿ? ಖ್ಯಾತ ನಾಟಕಕಾರ ಷೇಕ್ಸ್ಪಿಯರ್’ನ ಸಮಗ್ರ ಕೃತಿಗಳ ಸಂಕಲನ. ಒಂದು ಕ್ಷಣ ನನಗೆ ಅದನ್ನು ನಂಬಲೇ ಆಗಲಿಲ್ಲ. ಮತ್ತೆ ಪುಸ್ತಕ ಮಳಿಗೆಯವರೊಬ್ಬರ ಬಳಿಗೆ ಹೋಗಿ, ಅದು ನಿಜವಾಗಿಯೂ ೧೮೯೫ರಲ್ಲಿ ಮುದ್ರಣಗೊಂಡ ಪುಸ್ತಕವೇ ಹೌದೆ ಎಂದು ಕೇಳಿ, ಖಚಿತಪಡಿಸಿಕೊಂಡೆ. ನಾನು — ಅಂತಹ ಅದ್ಭುತವಾದ, ಅಷ್ಟು ಹಳೆಯದೂ ಅಮೂಲ್ಯವೂ ಆದ ಪುಸ್ತವು ದೊರೆತ ಆನಂದದಲ್ಲಿರುವಂತೆಯೇ, ಅಪೂರ್ವ ಚಿತ್ರ ಕಲಾವಿದ ಸಾರ್ಜೆಂಟನ ಬಗೆಗೆ ಇದ್ದ ದೊಡ್ಡದೊಂದು ಪುಸ್ತಕವು ಕಂಡಿತು. ಸಾರ್ಜೆಂಟನ ಜೀವನದ ಬಗ್ಗೆ, ಅವನ ಚಿತ್ರ ಕೌಶಲದ ಬಗ್ಗೆ ವಿವರಗಳೂ, ಅವನು ರಚಿಸಿದ ನಾನಾ ರೇಖಾಚಿತ್ರಗಳೂ ವರ್ಣಚಿತ್ರಗಳೂ ಇವೆ — ಆ ಪುಸ್ತಕದಲ್ಲಿ. ಆಮೇಲೆ, ಇವೆರಡೂ ಪುಸ್ತಕಗಳು ದೊರೆತವೆಂಬ ಸಂತಸದಲ್ಲಿ (ಇನ್ನೊಂದು ಹತ್ತು ಪುಸ್ತಕಗಳನ್ನೂ ಕೊಂಡು) ಮನೆಗೆ ಮರಳಿದೆ.

ಹಬ್ಬವೆಂದರೆ…

ನವರಾತ್ರಿ! ಬೊಂಬೆಗಳ ಹಬ್ಬ! ದುಷ್ಟತನದ ಸಂಹಾರವನ್ನೂ, ಒಳಿತಿನ ವಿಜಯವನ್ನೂ ನೆನೆದು ಸಂಭ್ರಮಿಸಬೇಕಾದ ಹಬ್ಬ!

ಹಬ್ಬಗಳೆಂದರೆ, ಅದರಲ್ಲಿಯೂ ದಸರೆಯೆಂದರೆ — ನನಗೆ ನನ್ನ ಚಿಕ್ಕಂದಿನ ನೆನಪಾಗುತ್ತದೆ. ಮನೆಯಲ್ಲಿಯ ಎರಡು ಮರದ ಪೆಟ್ಟಿಗೆಗಳಲ್ಲಿ ಜೋಪಾನವಾಗಿ ಎತ್ತಿಟ್ಟಿದ್ದ ನಾನಾ ಬಗೆಯ ಬೊಂಬೆಗಳು ಹೊರಗೆ ಬರುತ್ತಿದ್ದುವು, ಆಗ. ಶೋಕೇಸುಗಳಲ್ಲಿದ್ದ ಬೊಂಬೆಗಳಿಗಿಂತ ಇವಕ್ಕೆ ಹೆಚ್ಚಿನ ಮಾನ್ಯತೆ. ಅವುಗಳ ಗಾಂಭೀರ್ಯವೂ ಅಂಥದ್ದೇ ಇತ್ತು ಬಿಡಿ. ಒಂದೆರಡಕ್ಕಾದರೆ, ಹೆಚ್ಚಿನ ವರ್ಷಗಳ ಇತಿಹಾಸವೂ ಇತ್ತು. ನಾನು, ಅಣ್ಣ ಹಾಗೂ ಅಕ್ಕ — ಮೂವರೂ ಪೈಪೋಟಿಗೆ ಬಿದ್ದವರಂತೆ, ಆ ಬೊಂಬೆಗಳನ್ನು ಬೇರೆಬೇರೆ ಗುಂಪುಗಳಾಗಿ ವಿಂಗಡಿಸಿ, ಒರೆಸಿ ಶುಚಿ ಮಾಡಿ, ಹಬ್ಬದ ಹೊತ್ತಿಗೆ ಅವನ್ನೆಲ್ಲ ಒಪ್ಪವಾಗಿ ಜೋಡಿಸುತ್ತಿದ್ದೆವು.

ನವರಾತ್ರಿ ಮುಗಿಯುವವರೆಗೂ ಮನೆಯಲ್ಲಿ ಆ ಬೊಂಬೆಗಳದ್ದೇ ದರ್ಬಾರು. ಅಮ್ಮ — ಪ್ರತಿನಿತ್ಯದ ಪೂಜೆಗೆ ಹತ್ತಾರು ಮಕ್ಕಳನ್ನು ಮನೆಗೆ ಕರೆದು, ಏನನ್ನಾದರೂ ಸಿಹಿಯನ್ನು ಅವರಿಗೆ ಪ್ರಸಾದವಾಗಿ ಕೊಡುತ್ತಿದ್ದರು. ಸರಸ್ವತಿ ಪೂಜೆಯ ದಿನ ಪುಸ್ತಕ, ಪೆನ್ನುಗಳ ಸಮಾರಾಧನೆಯೂ ಆಗುತ್ತಿತ್ತು.

ಮರದಿಂದ ಮಾಡಿದ — ಕಪ್ಪಾಗಿ ಕಾಣುವ ಗಂಡು ಹೆಣ್ಣಿನ ಬೊಂಬೆಗಳು ಈ ಕಾರುಬಾರಿನ ಕೇಂದ್ರಬಿಂದು. ಇನ್ನು, ಶಿವ ಪಾರ್ವತಿ, ಗಣೇಶ ಸುಬ್ರಹ್ಮಣ್ಯ, ಲಕ್ಷ್ಮಿ ಸರಸ್ವತಿ ಮೊದಲಾದ ದೇವಾನುದೇವತೆಗಳೆಲ್ಲ ನಮ್ಮ ಮನೆಯಲ್ಲಿ ನೆಲೆಗೊಳ್ಳುತ್ತಿದ್ದರು, ಆಗ. ಇನ್ನೊಂದು ಕಡೆ ನಾನಾ ಪ್ರಾಣಿ ಪಕ್ಷಿಗಳೂ, ಮಕ್ಕಳೂ, ಬೇಡ ಬೇಡತಿಯರ ದಂಡೂ, ಸೈನಿಕರ ಗುಂಪೂ ಇರುತ್ತಿತ್ತು. ಅಲ್ಲಿ ಒಂದಿಬ್ಬರು ನರ್ತಕಿಯರು ತಮ್ಮ ಲಾಸ್ಯವನ್ನು ತೋರುತ್ತ ಮೆರೆಯುತ್ತಿದ್ದರೆ, ಇಲ್ಲಿ, ಯಾವ ಲೌಕಿಕ ವಿಷಯದ ಬಗೆಗೂ ತಲೆಕೆಡಿಸಿಕೊಳ್ಳದೆ, ಮೀರಾಬಾಯಿ ಹರಿ ಸಂಕೀರ್ತನೆಯಲ್ಲಿ ಮೈಮರೆತಿರುತ್ತಿದ್ದಳು. ಅತ್ತ ಆನೆಗಳಂತೂ ಅಂಬಾರಿಯನ್ನು ಹೊರುವ ಕಾರ್ಯದಲ್ಲಿ ನಿರವಾಗಿರುತ್ತಿದ್ದವು.

ನನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾಗುತ್ತಿದ್ದ ಬೊಂಬೆಗಳೆಂದರೆ — ಸುಮ್ಮನೆ ತಲೆಯಲ್ಲಾಡಿಸುತ್ತ ಕುಳಿತಿರುತ್ತಿದ್ದ ಅಜ್ಜ ಅಜ್ಜಿಯರದ್ದು. ಆ ದಂಪತಿಯನ್ನು ಶೆಟ್ಟಪ್ಪ-ಶೆಟ್ಟಮ್ಮ ಎಂದೇ ಕರೆಯುತ್ತಿದ್ದೆವು, ನಾವು. ವೇದಿಕೆಯಲ್ಲೊಂದು ಕಡೆ ಅವರನ್ನು ಕೂರಿಸಿ, ಅವರ ಎದುರಿಗೆ ಮರದ ಸಣ್ಣಸಣ್ಣ ಬಟ್ಟಲು/ಪಾತ್ರೆಗಳಲ್ಲಿ ಬೇರೆಬೇರೆ ಧಾನ್ಯಗಳನ್ನು ತುಂಬಿಸಿಟ್ಟು, ಅವರ ಅಂಗಡಿಯ ವಹಿವಾಟನ್ನು ನಾವೇ ನೋಡಿಕೊಳ್ಳುತ್ತಿದ್ದೆವು.

ನವರಾತ್ರಿ ಮುಗಿಯುವ ದಿನ ಪಟ್ಟದ ಬೊಂಬೆಗಳ (ಮರದ ಗಂಡು-ಹೆಣ್ಣು ಬೊಂಬೆಗಳು) ಮದುವೆ, ಆರತಕ್ಷತೆಯ ಕಾರ್ಯಕ್ರಮ. ಎಲ್ಲವೂ ಮುಗಿದ ಮೇಲೆ, ಆ ಹೆಣ್ಣಿಗೆ ಮಡಿಲಕ್ಕಿ ತುಂಬಿ ಹೂವು ಹಣ್ಣನ್ನು ಬೀರುತ್ತಿದ್ದರು.

ಆಗೆಲ್ಲ ಈ ಬೊಂಬೆಗಳನ್ನು ಕೂರಿಸುವುದೆಂದರೆ ಎಲ್ಲಿಲ್ಲದ ಉತ್ಸಾಹ, ನಮಗೆ. ನಾನಂತೂ, ನಮ್ಮೂರ ಕೆರೆಯಿಂದ ನಾನು ತಂದಿದ್ದ ಜೇಡಿಮಣ್ಣಿನಿಂದ ಯಾವುದಾದರೂ ಬೊಂಬೆಗಳನ್ನು ಮಾಡಿ, ಅವಕ್ಕೆ ಬಣ್ಣವನ್ನೂ ಬಳಿದು — ಅವನ್ನೂ ಈ ವೇದಿಕೆಯಲ್ಲೇ ಸೇರಿಸಿಬಿಡುತ್ತಿದ್ದೆ. ನಮ್ಮ ಮನೆಗೆ ಬಂದ ನೆರೆಹೊರೆಯವರೊ, ಬಂಧುಗಳೊ — ನಾನು ಮಾಡಿದ ಬೊಂಬೆಗಳನ್ನು ಗುರುತಿಸಿ, ಪ್ರಶಂಸೆ ಮಾಡಿದರೆ, ಅಲ್ಲೆಲ್ಲೊ ಮೋಡದ ಮೇಲೆ ಹಾರಾಡುತ್ತಿದ್ದೆ — ನಾನು.

ದಿನಗಳು ಬದಲಾದವು. ನಾವು ’ದೊಡ್ಡ’ವರಾದೆವು. ಆ ಹೊತ್ತಿಗೆ ನಮ್ಮ ಪಾಲಿಗೆ ಬೊಂಬೆ ಹಬ್ಬ ಅಷ್ಟೇನೂ ಸ್ವಾರಸ್ಯಕರವಾಗಿ ಉಳಿದಿರಲಿಲ್ಲವೆನಿಸುತ್ತದೆ. ನಾನು ಮೈಸೂರಿನಿಂದ, ತಿರುಪತಿ-ಕಾಳಹಸ್ತಿಗಳಿಂದ ಹಲವು ತೆರದ ಬೊಂಬೆಗಳನ್ನು ಅಮ್ಮನಿಗೆ ತಂದುಕೊಟ್ಟಿದ್ದೆನಾದರೂ, “ಅಯ್ಯೋ! ಎಲ್ಲಾ ಬೊಂಬೆಗಳನ್ನೂ ಯಾಕಿಡ್ತೀರಿ; ಏನೊ, ಶಾಸ್ತ್ರಕ್ಕೆ ಒಂದ್ನಾಲ್ಕು ಮೆಟ್ಲಿಗಾಗುವಷ್ಟು ಇಟ್ಟರೆ ಆಯ್ತು.” “ಹಳೇ ಬೊಂಬೆಗಳು, ಮುಕ್ಕಾದವನ್ನು ಎಸೆದುಬಿಡ್ರಿ… ಇಲ್ಲಾ ಯಾರಿಗಾದ್ರೂ ಕೊಟ್ಬಿಡ್ರಿ” — ಹೀಗೆ ನಾನೂ ಉಪದೇಶಿಸಿದ್ದುದುಂಟು.

ನಮ್ಮ ಉತ್ಸಾಹ, ಸಹಕಾರಗಳು ಕಡಿಮೆಯಾದರೂ — ಅಮ್ಮ ಮಾತ್ರ, ರೂಢಿ ತಪ್ಪದಂತೆ, ಇದ್ದಬದ್ದ ಬೊಂಬೆಗಳನ್ನೆಲ್ಲ ಜೋಡಿಸಿ ನವರಾತ್ರಿ ಪೂಜೆಯನ್ನು ನೆರವೇರಿಸುತ್ತಿದ್ದರು.

ಈಗ ದಿನಗಳು ಮತ್ತೂ ಬದಲಾಗಿವೆ. ನನಗೆ ಯಾವುದೇ ಹಬ್ಬವೆಂದರೆ ಅಮ್ಮನ ನೆನಪಾಗುತ್ತದೆ. ತಮ್ಮ ಅನಾರೋಗ್ಯದ ತೊಂದರೆಯ ನಡುವೆಯೂ ಅವರು, ಬಂದ ಹಬ್ಬಗಳನ್ನೆಲ್ಲ ಚಾಚೂ ತಪ್ಪದೆ ಆಚರಿಸುವುದರಲ್ಲಿ ತೋರುತ್ತಿದ್ದ ಶ್ರದ್ಧೆಯನ್ನು ನೆನೆದರೆ — ಈಗ ಅಚ್ಚರಿಯೂ, ಅತೀವ ವೇದನೆಯೂ ಆಗುತ್ತದೆ. ಎಲ್ಲ ಹಬ್ಬಗಳೂ, ಅಂದೆಂದೊ ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಮನಸ್ಸಿಗೆ ತರುತ್ತಿದ್ದಷ್ಟು ಸಂತೋಷವನ್ನು ಮತ್ತೊಮ್ಮೆ ತರಬಾರದೇ ಎನಿಸುತ್ತದೆ!

ಏನನ್ನೊ ಬರೆಯಬೇಕೆಂದು ಹೊರಟವನು ಭಾವಾವೇಶಕ್ಕೆ ಸಿಲುಕಿ ದಾರಿ ತಪ್ಪಿದೆ. ಸರಿ, ಈ ಬಾರಿಯ ದಸರೆಯ ದಿನಗಳಲ್ಲಿ — ತಾಯಿ ಚಾಮುಂಡಿಯ ಚಿತ್ರವೊಂದನ್ನು ರಚಿಸಬೇಕೆಂಬ ಸಂಕಲ್ಪವನ್ನು ಮಾಡಿದ್ದೆ. ನನಗೆ ಅತ್ಯಂತ ಪ್ರಿಯವಾದ ಜಾನಪದ ಗೀತೆ “ನೋಡವಳಂದವ ಮೊಗ್ಗಿನ ಮಾಲೆ ಚಂದವ…” ಎಂಬ ಪದದಲ್ಲಿ ಬರುವಂತೆ ಆಕೆಯ ಸೊಬಗನ್ನು ಕಲ್ಪಿಸಿಕೊಂಡು, ಈ ಚಿತ್ರವನ್ನು ರಚಿಸಿದೆ. ಹುಲಿಚರ್ಮದುಡುಗೆಯನ್ನು ತೊಟ್ಟು, ಮಲ್ಲಿಗೆ ಮೊಗ್ಗುಗಳ ಮಾಲೆಯನ್ನು ಧರಿಸಿ ಆಯಮ್ಮ ನಡೆದುಬರ‍್ತಿದ್ರೆ, ಆ ಚೆಂದವನ್ನು ವರ್ಣಿಸುವುದಾದರೂ ಹೇಗೆ!

--

--

No responses yet