ಇನ್ನೈದು ಮಾತುಗಳು

ಮನಸನ್ನಾವರಿಸಿದ ಕಥೆ:

ಕೆಲವೊಮ್ಮೆ, ನಮಗೆ ಪರಿಚಿತರಾದವರನ್ನು ಅಥವಾ ನಾವು ಇಷ್ಟಪಡುವವರನನ್ನು ಯಾವುದಾದರೂ ದೊಡ್ಡಮಟ್ಟದ ವೇದಿಕೆಯಲ್ಲಿ ಕಂಡಾಗ ಮನಸ್ಸು ಮುದಗೊಳ್ಳುತ್ತದೆ. ‘ಓಹ್! ಇವರು ನಮ್ಮವರು. ನನಗೆ ಬಹಳ ಹತ್ತಿರದವರು’ ಅಂತ ನಮ್ಮೊಡನಿರುವ ಎಲ್ಲರಿಗೂ ಹೇಳಬೇಕೆನಿಸುತ್ತದೆ. ಇತ್ತೀಚೆಗೆ ಆದದ್ದೂ ಅದೇ.

ಆಂಧ್ರಭಾರತದ ‘ಅಶ್ವಮೇಧ ಪರ್ವ’ದಲ್ಲಿಯ ಕುದುರೆಯು ಮಣಿಪುರವನ್ನು ತಲುಪಿದಾಗ, ಮನಸ್ಸು, ‘ಭಲೆ! ಇನ್ನು ನಮ್ಮ ಬಭ್ರುವಾಹನನ ಕತೆ ಶುರುವಾಯಿತು.’ ಎಂದುಕೊಂಡೆ. ಡಾ.ರಾಜ್ ಅವರನ್ನು ಬಭ್ರುವಾಹನನ್ನಾಗಿ ಕಂಡ ನಮಗೆಲ್ಲ ಅವನ ಕಥೆ ಪರಿಚಿತವೇ. ಆದರೆ, ನಾನು ಕಂಡುಕೊಂಡ ವಿಷಯವೇನೆಂದರೆ — ಮೂಲ ವ್ಯಾಸ ಭಾರತದಲ್ಲಿರುವ ಬಭ್ರುವಾಹನನ ಕಥೆಯು ನಾವು ತಿಳಿದಿರುವ ಕಥೆಗಿಂತ (ಆ ಹೆಸರಿನ ಸಿನಿಮಾದಲ್ಲಿಯ ಕಥೆ) ಬಹಳ ವಿಭಿನ್ನವಾಗಿದೆ; ಜೈಮಿನಿ ಭಾರತದಲ್ಲಿ ಬರುವ ಕಥೆಯೇ ಬೇರೆ ರೀತಿ ಇದೆ (ಸಿನಿಮಾದಲ್ಲಿದ್ದಂತೆ).

ಆಗ್ಗೆ ಎರಡು ಮೂರು ದಿನಗಳ ಮಟ್ಟಿಗೆ ಇದೇ ವಿಷಯ ಮನಸನ್ನೆಲ್ಲ ಆವರಿಸಿ ಕೊರೆಯುತ್ತಿತ್ತು. ಹಾಗಾಗಿ, ಮತ್ತೊಮ್ಮೆ ಲಕ್ಷ್ಮೀಶನ ಜೈಮಿನಿ ಭಾರತವನ್ನೂ, ತಿಮ್ಮಣ್ಣನ ಕೃಷ್ಣರಾಯಭಾರತವನ್ನೂ ಹುಡುಕಿ ತೆಗೆದು, ಮೂರೂ ಕೃತಿಗಳಲ್ಲಿರುವ ‘ಬಭ್ರುವಾಹನನ ಕತೆ’ಯನ್ನು ತಾಳೆನೋಡಬೇಕಾಯ್ತು.

ನೋಡಬೇಕಾದ ಸಿನಿಮಾ:

ಕವಲುದಾರಿ — ಹೆಸರೇ ಒಂದು ಬಗೆಯ ಕುತೂಹಲವನ್ನು ಮೂಡಿಸುತ್ತದೆ.!

ಯಾರೊ ಕಟ್ಟಿದ ಸುಳ್ಳುಗಳ ಜಾಲದ ನಡುವೆ ಸತ್ಯವನ್ನು ಹುಡುಕಿಹೊರಡುವ (ಪ್ರಮುಖ) ಪಾತ್ರಗಳು. ಇದ್ದಕ್ಕಿದ್ದಂತೆ ಎಲ್ಲಿಂದಲೊ ಮೂಡಿ ಎದುರಾಗುವ ಪ್ರಶ್ನೆಯೊಂದಕ್ಕೆ ಉತ್ತರವನ್ನು ಹುಡುಕಿ, ಲೆಕ್ಕಗಳನ್ನು ಚುಕ್ತಾ ಮಾಡುವಂತಹ ಕಥನವಿರುವ ಸಿನಿಮಾ. ಅದನ್ನು ಕಳೆದವಾರ ‘ನೋಡಬೇಕಾಯ್ತು’.

ಅನಂತ್ ನಾಗ್, ಅಚ್ಯುತ ರಾವ್ ಅವರ ನಟನೆ ಮತ್ತೊಮ್ಮೆ ಇಷ್ಟವಾಗುತ್ತದೆ. ನಾಯಕ ರಿಷಿಯ ನಟನೆಯೂ ಮೆಚ್ಚುಗೆಯಾಗುತ್ತದೆ.

ಅದಾಗ್ಯೂ, ಕಥೆಯ ನಿರೂಪಣೆಯಲ್ಲಿ ಬಹಳ ನಿಧಾನಗತಿಯಿದೆ. ನೋಡುವಾಗ ನನ್ನಂಥವರು ಒಂದರೆಘಳಿಗೆ ನಿದ್ದೆಗೆ ಜಾರಿದರೂ ಜಾರಿಯಾರು. ಮಿಕ್ಕಂತೆ, ಚಿತ್ರದ ಕ್ಲೈಮಾಕ್ಸ್ ಅಷ್ಟೇನೂ ಗಾಢವಾದ ಪ್ರಭಾವ ಬೀರುವುದಿಲ್ಲವೇನೊ ಎನಿಸಿತು. ಒಟ್ಟಾರೆ, ನೋಡಬಹುದಾದ ಸಿನಿಮಾ.

ಉಪ್ಪಿಟ್ಟೂ ರವೆ ಉಂಡೆಯೂ

ಒಮ್ಮೊಮ್ಮೆ ಯಾವುದೊ ಮಾತು ಇನ್ನಾವುದೊ ಚರ್ಚೆಗೆ, ಹೊಸದನ್ನು ತಿಳಿಯುವುದಕ್ಕೆ ಅಥವಾ ಮೆಲುಕುಹಾಕುವುದಕ್ಕೆ ದಾರಿಯಾಗುತ್ತದೆ. ಹೀಗೇ ಉಪ್ಪಿಟ್ಟಿನ ಬಗ್ಗೆ ತಮಾಷೆಯಾಗಿ ಚರ್ಚಿಸುತ್ತಿರುವಾಗ ಕಂಡುಕೊಂಡದ್ದು:

ನಮಗೆಲ್ಲ ಗೊತ್ತಿರುವಂತೆ, ಉಪ್ಪಿಟ್ಟು — ರವೆಗೆ ಖಾರ ಅಥವಾ ಒಗ್ಗರಣೆಯನ್ನೂ, ಒಂದೆರಡು ತರಕಾರಿಗಳನ್ನೂ ಸೇರಿಸಿ ತಯಾರಿಸುವ ಉಪಾಹಾರ. ಇದನ್ನು ಸಾಮಾನ್ಯವಾಗಿ ದಕ್ಷಿಣಭಾರತದಲ್ಲಿ ಎಲ್ಲೆಡೆಯೂ ಮಾಡುತ್ತಾರಾದರೂ ಇದರ ಹೆಸರು ಅಲ್ಲಿಂದಲ್ಲಿಗೆ ಬದಲಾಗುತ್ತದೆ. ಕನ್ನಡದಲ್ಲಿ ಉಪ್ಪಿಟ್ಟು, ತೆಲುಗಿನಲ್ಲಿ ಉಪ್ಪಿಂಡಿ, ತಮಿಳಿನಲ್ಲಿ ಉಪ್ಮಾವು — ಹೀಗೆ.

ಬೆಂಗಳೂರಿನ ಹೋಟೆಲುಗಳಲ್ಲಿ ಖಾರ (ವಾಂಗಿಭಾತ್ ಪುಡಿ) ಹಾಕಿ ತಯಾರಿಸುವ ಬಗೆಯ ಉಪ್ಪಿಟ್ಟಿಗೆ ‘ಖಾರಾಭಾತ್’ ಎಂಬ ಅನ್ವರ್ಥವೂ ಇದೆ. ಇನ್ನು, ಹೆಚ್ಚಿನ ಮಟ್ಟಿಗೆ ಎಲ್ಲ ಕಡೆಯೂ ಉಪಯೋಗಿಸುವ ‘ಉಪ್ಮಾ’ ಎಂಬ ಹೆಸರು ತಮಿಳಿನ ‘ಉಪ್ಮಾವು’ ಇಂದ ಬಂದಂತಿದೆ.

ಕನ್ನಡ, ತೆಲುಗು, ತಮಿಳು — ಈ ಮೂರೂ ಭಾಷೆಯಲ್ಲಿಯ ಹೆಸರುಗಳಿಂದ ತಿಳಿದುಬರುವ ಸಂಗತಿಯೆಂದರೆ, ಉಪ್ಪಿಟ್ಟು = ಉಪ್ಪು + ಹಿಟ್ಟು (ಪಿಂಡಿ ಹಾಗೂ ಮಾವು ಎಂದರೂ ಹಿಟ್ಟು ಎಂದೇ ಅರ್ಥ, ಆಯಾ ಭಾಷೆಗಳಲ್ಲಿ). ಅಚ್ಚರಿಯ ವಿಷಯವೆಂದರೆ ಈ ತಿನಿಸನ್ನು ಹಿಟ್ಟಿನಿಂದಲ್ಲದೆ, ಹೆಚ್ಚಾಗಿ ತರಿತರಿಯಾಗಿರುವ ವಸ್ತುವಿನಿಂದಲೇ (ರವೆ, ನುಚ್ಚು) ತಯಾರಿಸುತ್ತಾರೆ. ಆದರೂ ಅದರ ಹೆಸರಿನಲ್ಲಿರುವ ‘ಹಿಟ್ಟಿಗೆ’ ಯಾವ ಬಾಧಕವೂ ಆದಂತಿಲ್ಲ.

ನಮ್ಮ ಕಡೆ ಅಪರೂಪಕ್ಕೊಮ್ಮೆ, ಹೊಸ ರಾಗಿಹಿಟ್ಟಿನಿಂದ ಕೂಡ ಉಪ್ಪಿಟ್ಟು ಮಾಡುವುದನ್ನು ನೋಡಿದ್ದೆ. ಉತ್ತರಕರ್ನಾಟಕದ ಗೆಳೆಯರೊಬ್ಬರು ಇತ್ತೀಚೆಗೆ ಗೋಧಿಹಿಟ್ಟಿನ ಉಪ್ಪಿಟ್ಟಿನ ಚಿತ್ರವೊಂದನ್ನು ಹಂಚಿಕೊಂಡಿದ್ದರು.

ಇನ್ನು, ಉಪ್ಪಿಟ್ಟು ಎಂದರೆ ಉಪ್ಪು ಹಾಗೂ ಮೆಣಸಿನಕಾಯನ್ನು ಅರೆದು ಹಾಕಿ ತಯಾರಿಸಿದ ಹಿಟ್ಟು/ ಮುದ್ದೆ — ಎಂದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ’ನಮ್ಮ ಊರಿನ ರಸಿಕರು’ ಪುಸ್ತಕದಲ್ಲಿದೆ — ಎಂದು ಇನ್ನೊಬ್ಬ ಮಿತ್ರರೊಬ್ಬರು ತಿಳಿಸಿದ್ದರು. ಹೀಗೆ, ಉಪ್ಪಿಟ್ಟಿನ ವಿಸ್ತಾರ ಹಾಗೂ ವೈವಿಧ್ಯತೆ ಅಪಾರವಾಗಿರುವಂತೆ ತೋರುತ್ತದೆ.

ಉಪ್ಪಿಟ್ಟಿನ ಮೂಲ ಯಾವುದೋ, ಅದರ ಬಗೆಗಿನ ಪ್ರಪ್ರಥಮ ಉಲ್ಲೇಖ ಎಲ್ಲಿದೆಯೋ ಎಂಬ ಪ್ರಶ್ನೆಯೊಂದು ಮನಸ್ಸನ್ನು ಹೊಕ್ಕಿದೆ. ಅದಕ್ಕೇನು ತಕ್ಷಣಕ್ಕೆ ಉತ್ತರ ದೊರಕುವಂತೇನೂ ಕಾಣುತ್ತಿಲ್ಲ. ಆದರೆ, ಎಂದಾದರೊಮ್ಮೆ ಉತ್ತರ ದೊರಕೀತೆಂಬ ಆಶಾವಾದವಿದ್ದರೆ ನಷ್ಟವೇನಿಲ್ಲ ಬಿಡಿ.

ಇನ್ನು, ರವೆಯ ಉಪಯೋಗ ಉಲ್ಲೇಖ ನಮಗೇನೂ ಹೊಸತಲ್ಲವೆನಿಸುತ್ತದೆ. ಹನ್ನೆರಡು ಹದಿಮೂರನೆ ಶತಮಾನದ ಹಳಗನ್ನಡ ಕೃತಿಗಳಲ್ಲಿ ಆಗೊಮ್ಮೆ ಈಗೊಮ್ಮೆ ಸಜ್ಜಿಗೆ/ಸೊಜ್ಜಿಗೆಯ ಪ್ರಸ್ತಾಪ ಬರುತ್ತದೆ (ಸಜ್ಜಿಗೆ ಎಂಬುದು ರವೆಗಿರುವ ಇನ್ನೊಂದು ಹೆಸರು). ಅಡುಗೆಯ ವಿಷಯವಾಗಿ ‘ಸೂಪಶಾಸ್ತ್ರ’ವೆಂಬ ಕೃತಿಯನ್ನು ರಚಿಸಿದ ಮಂಗರಸನು, ಸೊಜ್ಜಿಗೆಯನ್ನು ಬಳಸಿ ರೊಟ್ಟಿ ಹಾಗೂ ಹಲವು ಬಗೆಯ ಸಿಹಿತಿನಿಸುಗಳನ್ನು ಮಾಡುವ ವಿಧಾನವನ್ನು ವಿವರಿಸಿದ್ದಾನೆ.

ನಮ್ಮ ಕಡೆಯಂತೂ, ರವೆಯನ್ನು ತುಪ್ಪದೊಡನೆ ಘಮ್ಮನೆ ಹುರಿದು, ಅದಕ್ಕೆ ದ್ರಾಕ್ಷಿ ಗೋಡಂಬಿ, (ಒಣಗಿದ) ಕೊಬ್ಬರಿತುರಿ, ಏಲಕ್ಕಿ ಸಕ್ಕರೆ ಹಾಗೂ ಸ್ವಲ್ಪ ಹಾಲು ಹಾಕಿ ತಯಾರಿಸಿದ ರವೆ ಉಂಡೆಯು ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಅದನ್ನು ಮಾಡುವುದೂ ಸುಲಭವಾದ್ದರಿಂದ ಆಗಾಗ್ಗೆ ಮನೆಯಲ್ಲಿ ತಯಾರಾಗುವ ಸಿಹಿತಿನಿಸುಗಳ ಪೈಕಿ ಅದು ವಿಶಿಷ್ಟ ಸ್ಥಾನವೊಂದನ್ನು ಪಡೆದುಕೊಂಡಿದೆ.

rave undae

ವರ್ಣಮಯ ವಾರಾಂತ್ಯಗಳು

ವರ್ಣಚಿತ್ರಗಳ — ಇತ್ತೀಚಿನ ಶತಮಾನಗಳ — ಇತಿಹಾಸದಲ್ಲಿ ಇಂಪ್ರೆಷನಿಸ್ಟ್, ಎಕ್ಸ್ಪ್ರೆಷನಿಸ್ಟ್, ಕ್ಯೂಬಿಸ್ಟ್ ಮುಂತಾದ ಬೇರೆಬೇರೆ ಕಲಾಶೈಲಿಗಳನ್ನು ಗುರುತಿಸಬಹುದು. ಆ ಕಲಾಪ್ರಕಾರಗಳ ಪೈಕಿ, Vincent Van Gogh, Pablo Picasso, Claude Monet, Edgar Degas, Henri Matisse — ಮುಂತಾದ ಕಲಾವಿದರದ್ದೆಲ್ಲ ಪ್ರಖ್ಯಾತ ಹೆಸರುಗಳು. ಈ ಯೂರೋಪಿಯನ್ ಕಲಾಕಾರರ ವರ್ಣಚಿತ್ರ ಹಾಗೂ (ಕೆಲವು) ರೇಖಾಚಿತ್ರಗಳ ಪ್ರದರ್ಶನವು, ಅಟ್ಲಾಂಟಾದಲ್ಲಿರುವ ‘ಹೈ ಮ್ಯೂಸಿಯಂ ಆಫ್ ಆರ್ಟ್’ನಲ್ಲಿ ನಡೆಯುತ್ತಿದೆ. ಕಳೆದ ಶನಿವಾರ ಅಲ್ಲಿಗೆ ಹೋಗುವುದಾಯ್ತು.

ತಾನು ಕಂಡ ದೃಶ್ಯವನ್ನೂ, ಅದರ ಸೌಂದರ್ಯ, ಸತ್ವವನ್ನೂ — ಕಲಾವಿದನು ತನ್ನದೇ ಶೈಲಿಯಲ್ಲಿ ಸೆರೆಹಿಡಿದು ತೋರಿಸುವ ತಂತ್ರಗಾರಿಕೆಯನ್ನೂ, ಅವನ ಪ್ರತಿಭೆಯನ್ನೂ ಮೆಚ್ಚದಿರಲಾದೀತೆ.? ಕೆಲವು ಚಿತ್ರಗಳಂತೂ, ನಮ್ಮನ್ನು ಆ ದೃಶ್ಯದಲ್ಲಿನ ತಾಣಕ್ಕೇ ಸೆಳೆದೊಯ್ಯುತ್ತವೆ.

Replica of “Dancers at the Barre” — Edgar Degas
A collage of some of the paintings, by European artists

“ಪೋರ್ಟ್ರೈಟ್ ಸೊಸೈಟಿ ಆಫ್ ಅಮೇರಿಕ” ವತಿಯಿಂದ ನಡೆಯುವ ವಾರ್ಷಿಕ ಪೋರ್ಟ್ರೈಟ್ ಸಮ್ಮೇಳನವು ಈ ಬಾರಿ ಅಟ್ಲಾಂಟಾದಲ್ಲಿ ನಡೆಯುತ್ತಿದೆ (ಏಪ್ರಿಲ್ ೨೫ರಿಂದ ೨೮ರ ವರೆಗೆ). ನಾನಾ ಭಾಗಗಳಿಂದ ಬಂದಿರುವ ಕಲಾವಿದರು ನಡೆಸಿಕೊಡುವ ವಿವಿಧ ಕಾರ್ಯಾಗಾರಗಳೂ, ಅವರ ವರ್ಣಚಿತ್ರಗಳ ಪ್ರದರ್ಶನವೂ ನಡೆಯುತ್ತದೆ, ಈ ಸಂದರ್ಭದಲ್ಲಿ.

A few paintings from the exhibition

ಹಾಗೆಯೆ, ಚಿತ್ರಕಾರರಿಗೆ ಬೇಕಾಗುವ ಸಾಮಗ್ರಿ, ಪರಿಕರಗಳೂ ದೊರೆಯುತ್ತವೆ, ಇಲ್ಲಿ. ಕೆಲವಂತೂ ಬಲು ಅಪರೂಪದ, ಹೊಸ ವಿನ್ಯಾಸ ವಿಶಿಷ್ಟತೆಗಳಿಂದ ಕೂಡಿದವು (ಈಸಲ್, ಪೈಂಟ್ ಹೋಲ್ಡರ್, ಪ್ಯಾಲೆಟ್ ಮುಂತಾದವು). ಈ ದಿನ ಅಲ್ಲಿಗೆ ಹೋಗಿದ್ದೆ.

apparatus for a colorful day!

ಖಾಲಿಯಿರುವ ಕ್ಯಾನ್ವಾಸಿನ ಮೇಲೆ ಬೇರೆಬೇರೆ ಬಣ್ಣಗಳು ಬೆರೆತು ನಮ್ಮ ಕಣ್ಣೆದುರಿಗಿನ ದೃಶ್ಯದ/ ವ್ಯಕ್ತಿಯ ಚಿತ್ರವು ಮೂಡುವುದನ್ನು ಕಂಡಾಗ ಮನಸ್ಸು ರೋಮಾಂಚಿತವಾಗುತ್ತದೆ.

Artists at work

ಏಕೆ ತಡವಾಯ್ತು?

ವಾರಕ್ಕೊಮ್ಮೆ ಬರೆಯಬೇಕೆಂಬ ಶರತ್ತಲ್ಲವೆ ಇದ್ದಿದ್ದು; ಕಳೆದ ವಾರ ಇದನ್ನು ಬರೆಯಲಿಲ್ಲವೇಕೆ?

ಹಟ ತೊಟ್ಟವರಂತೆ ಹುಡುಕಿ ನೋಡದ ಹೊರತು -ಒಮ್ಮೊಮ್ಮೆ- ನಮ್ಮ ಬದುಕಿನಲ್ಲಿಯ ಏಕತಾನತೆಯ ಅರಿವು ನಮಗಾಗುವುದಿಲ್ಲವೆನಿಸುತ್ತದೆ.! ನನ್ನ ಸಂಗತಿ ಹೀಗೇ ಆಯ್ತು. ‘ಬರೀ ಆ ಪುಸ್ತಕ ಓದು ಈ ಪುಸ್ತಕ ಓದು, ಆ ಅಡುಗೆ ಮಾಡು, ಈ ವೀಡಿಯೊ ನೋಡು — ಇಷ್ಟೆಯೆ ಜೀವನ’ ಎನಿಸಿಬಿಟ್ಟಿತು. ಅವುಗಳ ಬಗ್ಗೆಯೇ ಎಷ್ಟೆಂದು ಹೇಳುವುದು? ಏನಾದರೂ ಹೊಸತನ್ನು, ವಿಶೇಷವನ್ನು ಕಾಣುವ ಪ್ರಯತ್ನ ಮಾಡಬಾರದೆ ಎನಿಸಿತು. ಅಲ್ಲಿಗೇನೊ ನಾವು ದಿನಕ್ಕೊಂದು ಕೆಲಸ ಮುಂದಿಟ್ಟುಕೊಂಡು, ಕೊನೆಗೆ ಅವುಗಳಲ್ಲಿ ಯಾವುದನ್ನೂ ಪೂರೈಸದೆ ಕಳೆದುಹೋಗಿ ಕಂಗಾಲಾಗಬೇಕಿಲ್ಲ; ಆದರೆ ಸ್ವಲ್ಪ ಮಟ್ಟಿಗಾದರೂ ವೈವಿಧ್ಯತೆಯನ್ನು ಅರಸಿಕೊಂಡು, ಅಳವಡಿಸಿಕೊಂಡರೆ ಚೆನ್ನಾಗಿರುತ್ತದೆ ಎಂಬ ಆಲೋಚನೆ ಮೂಡಿದೆ.

--

--

No responses yet