‘ಆಂಧ್ರಮಹಾಭಾರತ’ವೆಂಬ ಅಚ್ಚರಿ
ಶ್ರೀಮದ್ವಾಲ್ಮೀಕಿ ರಾಮಾಯಣ ಹಾಗೂ ಶ್ರೀ ವೇದವ್ಯಾಸ ಪ್ರಣೀತ ‘ಜಯ’ (ಮಹಾಭಾರತ) ಮಹಾಕಾವ್ಯಗಳು ಭಾರತೀಯರ ಪಾಲಿಗೆ ಅತಿ ಪೂಜ್ಯ ಕೃತಿಗಳಾಗಿವೆ. ಅವುಗಳ ಪೈಕಿ ರಾಮಾಯಣವನ್ನು ಆದಿಕಾವ್ಯವೆಂದೂ, ಮಹಾಭಾರತವನ್ನು ಇತಿಹಾಸವೆಂದೂ ಕರೆಯುವುದು ಪ್ರತೀತಿ.
ವಾಲ್ಮೀಕಿ, ವ್ಯಾಸರ ನಂತರದಲ್ಲಿ, ಭಾರತದ ಅನೇಕ ಕವಿಗಳೂ ನಾಟಕಕಾರರೂ ಆ ಮಹಾಕಾವ್ಯಗಳನ್ನೊ, ಅಥವಾ ಅವುಗಳಲ್ಲಿನ ಯಾವುದಾದರೊಂದು ಪ್ರಸಂಗವನ್ನೊ — ತಮ್ಮದೇ ರೀತಿಯಲ್ಲಿ ವರ್ಣಿಸಿ ವಿವರಿಸಿದ್ದಾರೆ. ಅಂತಹ ಮಹಾನುಭಾವರ ಪ್ರಯತ್ನದ ಫಲವಾಗಿಯೆ, ಆಗಿಂದಾಗ್ಗೆ ಅವುಗಳಲ್ಲಿಯ ಕಥೆಯನ್ನೂ, ಕಥೆಯ ಪಾತ್ರಗಳನ್ನೂ ಹೊಸ ಬೆಳಕಿನಲ್ಲಿ, ಹೊಸ ದೃಷ್ಟಿಯಿಂದ ಕಾಣುವುದು ಸಾಧ್ಯವಾಗಿದೆ. ಹೀಗಾಗಿ, ರಾಮಾಯಣ ಹಾಗೂ ಮಹಾಭಾರತದ ಕಥನದಲ್ಲಿ ಹಾಗೂ ಕಥೆಯ ಹಂದರದಲ್ಲಿ — ಕೃತಿಯಿಂದ ಕೃತಿಯಲ್ಲಿ ವೈವಿಧ್ಯವಿರುವುದನ್ನು ಗುರುತಿಸಬಹುದು. ಅದರಲ್ಲೂ, ಜೈನ ಹಾಗೂ ಬೌದ್ಧ ಪರಂಪರೆಯ ಕಥನಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳನ್ನು ನಾವು ಕಾಣಬಹುದು. ಒಟ್ಟಿನಲ್ಲಿ, ಅಂದಿನಿಂದ ಇಂದಿನವರೆಗೂ ಈ ಮಹಾಕೃತಿಗಳು ಅದೆಷ್ಟೊ ಕವಿಗಳಿಗೆ, ಕಲಾವಿದರಿಗೆ ಸ್ಫೂರ್ತಿ ನೀಡಿವೆ.
ಮೂಲಕೃತಿಗಳು ಸಂಸ್ಕೃತದಲ್ಲಿದ್ದುದರಿಂದ, ಕಾಲಕಾಲಕ್ಕೆ ಅವನ್ನು ಭಾರತದ ಬೇರೆಬೇರೆ ಭಾಷೆಗಳಲ್ಲಿ — ಹೊಸದಾಗಿ ಹೇಳುವ, ಅನುವಾದಿಸಿ/ಸಂಗ್ರಹಿಸಿ ಹೇಳುವ ಪ್ರಯತ್ನಗಳೂ ನಡೆದಿವೆ.
ಮಹಾಭಾರತದ ಕುರಿತಾಗಿ ಹೇಳುವುದಾದರೆ, ಕನ್ನಡದ ಆದಿಕವಿ ಪಂಪನು ವ್ಯಾಸಭಾರತದ ಸ್ಫೂರ್ತಿಯಿಂದ — ಅರ್ಜುನನನ್ನೇ ಮುಖ್ಯ ನಾಯಕನನ್ನಾಗಿ ಚಿತ್ರಿಸಿ ‘ವಿಕ್ರಮಾರ್ಜುನ ವಿಜಯ’ವೆಂಬ ಕೃತಿಯನ್ನು ರಚಿಸಿದ. ಆನಂತರ ರನ್ನನು, ಭೀಮನನ್ನು ಕಥಾನಾಯಕನನ್ನಾಗಿಸಿ ‘ಸಾಹಸಭೀಮವಿಜಯ’ವನ್ನು ರಚಿಸಿದ.
ಚಾವುಂಡರಾಯಪುರಾಣದಲ್ಲಿ (ತ್ರಿಷಷ್ಠಿಶಲಾಕಾಪುರುಷಪುರಾಣ) ಬರುವ ನೇಮಿನಾಥನ ಕಥೆಯಲ್ಲಿಯೂ — ಪ್ರಾಸಂಗಿಕವಾಗಿ — ಜೈನ ಪರಂಪರೆಯ ಮಹಾಭಾರತವನ್ನು ಕಾಣಬಹುದು. ಆ ನಂತರದ ಒಂದೆರಡು ಜೈನಕೃತಿಗಳಲ್ಲಿಯೂ (ಉದಾ: ಬಂಧುವರ್ಮನ ‘ಹರಿವಂಶಾಭ್ಯುದಯಂ’, ಮಂಗರಸನ ‘ನೇಮಿಜಿನೇಶ ಸಂಗತಿ’..) ಮಹಾಭಾರತದ ಕಥೆಯನ್ನೋ, ಉಲ್ಲೇಖವನ್ನೋ ಕಾಣಬಹುದು.
ಮುಂದೆ, ಕನ್ನಡ ಸಾಹಿತ್ಯಲೋಕದ ‘ರೂಪಕಸಾಮ್ರಾಜ್ಯ ಚಕ್ರವರ್ತಿ’ಯೆನಿಸಿದ ಕುಮಾರವ್ಯಾಸನು, ಬಹುತೇಕ ವ್ಯಾಸಭಾರತವನ್ನನುಸರಿಸಿ, ಅದರಲ್ಲಿಯ ಮೊದಲ ಹತ್ತುಪರ್ವಗಳ ಕಥೆಯನ್ನು ‘ಕರ್ಣಾಟ ಭಾರತ ಕಥಾಮಂಜರಿ’ಯಲ್ಲಿ ಸಂಗ್ರಹಿಸಿದ. ಮುಂದೆ, ಉಳಿದ ಎಂಟು ಪರ್ವಗಳನ್ನು ತಿಮ್ಮಣ್ಣ ಕವಿಯು ‘ಕೃಷ್ಣರಾಯಭಾರತ’ವೆಂಬ ಕೃತಿಯಲ್ಲಿ ಪೂರೈಸಿದ. ಲಕ್ಷ್ಮೀಶನು ‘ಜೈಮಿನಿ ಭಾರತ’ದಲ್ಲಿ ಅಶ್ವಮೇಧ ಯಾಗದ ಕಥೆಯನ್ನು ಸಂಗ್ರಹಿಸಿ ಹೇಳಿದ. ಆ ನಂತರದಲ್ಲಿ ಮುಂದಿನ ಅದೆಷ್ಟೊ ಕವಿಗಳು ಮಹಾಭಾರತವನ್ನಾಧರಿಸಿದ ಪುಸ್ತಕಗಳನ್ನು ರಚಿಸಿದ್ದಾರೆ.
ಹೀಗೆ, ಮಹಾಭಾರತದ ಕತೆಯು ಒಂದಲ್ಲ ಒಂದು ರೀತಿ ಎಲ್ಲ ಭಾಷೆಗಳಲ್ಲೂ ಅನುವಾದಕ್ಕೆ, ಸಂಗ್ರಹಕ್ಕೆ ಒಳಪಟ್ಟಿದೆ.
‘ಆಂಧ್ರಮಹಾಭಾರತ’ದ ರಚನೆಯಾದ ಕಥೆ
ತೆಲುಗಿನಲ್ಲಿಯೂ ಮಹಾಭಾರತವನ್ನು ಆಧರಿಸಿ ರಚಿಸಲಾದ ಕೃತಿಗಳ ಪಟ್ಟಿಯೇ ಇದೆ. ಆದರೆ, ಮೂಲಭಾರತವನ್ನು ನೇರವಾಗಿ ಅನುವಾದಿಸಿ ರಚಿಸಲಾಗಿರುವ ‘ಆಂಧ್ರಮಹಾಭಾರತಮು’ ಕೃತಿಯು ಅವುಗಳ ಪೈಕಿ ಅಗ್ರಸ್ಥಾನದಲ್ಲಿದೆ. ಇದರ ರಚನೆಯಾದ ಕಥೆಯೇ ಅಚ್ಚರಿಗೊಳಿಸುವಂತಿದೆ:
ನನ್ನಯ್ಯ ಭಟ್ಟಾರಕನು ತೆಲುಗಿನ ಆದಿಕವಿಯೆಂಬ ಗೌರವಕ್ಕೆ ಪಾತ್ರನಾದವನು. ಪಂಪನ ಸಮಕಾಲೀನನೊ೧ ಅಥವಾ ಅವನಿಗಿಂತ ಕೆಲವು ದಶಕಗಳ ನಂತರದವನೊ ಆದ ಇವನು, ವೇದವ್ಯಾಸ ಪ್ರಣೀತ ಮಹಾಭಾರತವನ್ನು ತೆಲುಗಿಗೆ ಅನುವಾದಿಸುವೆನೆಂಬ ಮಹಾ ಸಂಕಲ್ಪವನ್ನು ತೊಟ್ಟು, ಅದರ ಕೆಲಸದಲ್ಲಿ ತೊಡಗಿದ. ಆದಿಪರ್ವವನ್ನೂ, ಸಭಾಪರ್ವವನ್ನೂ ಸಂಪೂರ್ಣಗೊಳಿಸಿದ. ಆದರೆ, ಆ ನಂತರದ ಅರಣ್ಯಪರ್ವವು ನಾಲ್ಕನೇ ಆಶ್ವಾಸದ ೧೪೨ನೇ ಪದ್ಯಕ್ಕೆ ನಿಂತುಹೋಯಿತು. ಅದೇನು ಆತ ಅದರ ನಂತರ ಮೃತನಾದನೊ ಏನೊ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾದಂತಿದೆ. ಆ ೧೪೨ ಪದ್ಯವನ್ನು ಬೇರೆಬೇರೆ ದೃಷ್ಟಿಕೋನದಿಂದ ವ್ಯಾಖ್ಯಾನಿಸಿರುವ ಕೆಲವು ವಿದ್ವಾಂಸರು, ‘ಅದರಲ್ಲಿ, ಮುಂದೆ ಯಾರಾದರೂ ಈ ಮಹತ್ಕಾರ್ಯವನ್ನು ಪೂರ್ಣಗೊಳಿಸಿ, ಎಂಬ ಸೂಚನೆಯಿದೆ’ ಎಂದು ವಾದಿಸುತ್ತಾರೆ. ಒಟ್ಟಿನಲ್ಲಿ, ೧೧ನೇ ಶತಮಾನದಲ್ಲಿ, ನನ್ನಯ್ಯ ಭಟ್ಟಾರಕನು ಮೊದಲು ಮಾಡಿದ ಕಾರ್ಯವು ಮಧ್ಯದಲ್ಲೆ ನಿಂತುಹೋದಂತಾಯಿತು.
ಮುಂದೆ, ೧೩ನೇ ಶತಮಾನದಲ್ಲಿ ಜೀವಿಸಿದ್ದ ಕವಿ ತಿಕ್ಕನ ಸೋಮಯಾಜಿಯು, ವಿರಾಟಪರ್ವದಿಂದ ಸ್ವರ್ಗಾರೋಹಣಪರ್ವದವರೆಗಿನ ೧೫ ಪರ್ವಗಳನ್ನೂ ತೆಲುಗಿನಲ್ಲಿ ಅನುವಾದಿಸಿದ್ದಾನೆ.
ತಿಕ್ಕನನು ಭಾಗವತ ಸಂಪ್ರದಾಯದವನು; ಹರಿ ಹರರ ಅಭೇದ ಸ್ವರೂಪವನ್ನು ನಂಬಿ, ‘ಹರಿಹರನಾಥ’ನನ್ನು ಆರಾಧಿಸಿದ ಮಹಾಭಕ್ತ, ತಿಕ್ಕನ.
ಒಂದು ದಿನ ಅವನು ‘ನನ್ನಯ್ಯ ಭಟಾರಕರು ಮೂರು ಪರ್ವಗಳಿಗೇ ನಿಲ್ಲಿಸಿದ ಮಹಾಭಾರತದ ಉಳಿದ ಪರ್ವಗಳನ್ನು ನಾನು ಅನುವಾದಿಸಲೇ…?’ ಎಂದು ಯೋಚಿಸುತ್ತ ಸ್ವಲ್ಪ ಹೊತ್ತು ಮಲಗಿದ್ದನಂತೆ. ಆಗ ಅವನ ತಂದೆ ಕೊಮ್ಮನನು ತಿಕ್ಕನನ ಕನಸಿನಲ್ಲಿ ಬಂದು, ಮಾತಾಡಿಸಿದನಂತೆ:
“ತಿಕ್ಕನ, ಹರಿಹರನಾಥನನ್ನು ಸ್ತುತಿಸಿ ಸಂಸ್ಕೃತದಲ್ಲಿ ನೀನೊಂದು ಶ್ಲೋಕ ರಚಿಸಿದ್ದೆಯಲ್ಲ — ‘ಸ್ವಾಮಿ, ನಿನ್ನ ಅಲಂಕರಣಗಳಲ್ಲಿ ಕೌಸ್ತುಭಮಣಿಯೂ ಇದೆ, ಎಲುಬಿನ ಹಾರವೂ ಇದೆ; ಅದರಲ್ಲಿ ನಿನಗೆ ಪ್ರಿಯವಾದುದು ಯಾವುದು? ನೀನು ಯಶೋದೆಯ ಎದೆಹಾಲನ್ನೂ ಸವಿದಿರುವೆ, ಹಾಲಾಹಲವೆಂಬ ವಿಷವನ್ನೂ ರುಚಿ ನೋಡಿರುವೆ; ಅವುಗಳಲ್ಲಿ ಯಾವುದು ನಿನಗೆ ಹಿಡಿಸಿತು?’ ಎಂದು. ಆ ಶ್ಲೋಕವು ಹರಿಹರನಾಥನಿಗೆ ಬಹಳ ಇಷ್ಟವಾಯಿತಂತೆ. ಅದಕ್ಕೇ ನಿನ್ನ ಮೇಲೆ ಕೃಪೆ ಮಾಡಿ ಅವನೇ ಇಲ್ಲಿಗೆ ಬರುತ್ತಿದ್ದಾನೆ. ಇದೋ……”
ಅಷ್ಟರಲ್ಲಿ (ಕನಸಿನಲ್ಲಿ), ಹರಿಹರನಾಥನು ತಿಕ್ಕನನ ಎದುರು ಸಾಕ್ಷಾತ್ಕರಿಸಿದನಂತೆ. ಹಾಗೆ ಬಂದವನನ್ನು ತಿಕ್ಕನನು ಭಕ್ತಿಪೂರ್ವಕ ಸ್ತೋತ್ರಗಳಿಂದ ಸ್ತುತಿಸಿದನು. ಆನಂತರ, ಹರಿಹರನಾಥನು — “ತಿಕ್ಕನ! ವ್ಯಾಸರು ರಚಿಸಿದ ಮಹಾಭಾರತವನ್ನು ತೆಲುಗಿನಲ್ಲಿ ಬರೆಯುವ ಸಂಕಲ್ಪ ಮಾಡಿದ್ದೀಯೆ; ಅದು ಬಹಳ ಒಳ್ಳೆಯದು. ಆದರೆ, ಆ ಕೃತಿಯ ಕೃತಿಪತಿತ್ವವನ್ನು ನನಗೆ ಕೊಡು ಎಂದು ನಿನ್ನನ್ನು ಕೇಳಲು ಬಂದೆ ಕಣಪ್ಪಾ..” ಎಂದನಂತೆ.
ತಿಕ್ಕನನಿಗೆ ಅದಕ್ಕಿಂದ ಮಹದಾನಂದವಿನ್ನೇನಿದ್ದೀತು? ಸಂತೋಷದಿಂದ ಒಪ್ಪಿಕೊಂಡ. ಹೇಳಿದ ಮಾತಿನಂತೆ, ೧೫ ಪರ್ವಗಳನ್ನು ತೆಲುಗಿಗೆ ಅನುವಾದಿಸಿದ.
ಅದೂ, ಕಥೆಯ ಆರಂಭದಲ್ಲಿ, ‘ನಾನು ನೇರವಾಗಿ ಹರಿಹರನಾಥನಿಗೇ ಕತೆ ಹೇಳುತ್ತಿರುವುದಾಗಿ, ಅವನ ದಿವ್ಯಸಾನ್ನಿಧ್ಯವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು — ಅವನಿಗೇ ಅರ್ಪಿಸಿ ಈ ಕೃತಿಯನ್ನು ರಚಿಸುತ್ತಿದ್ದೇನೆ’ ಎಂದು, ಕಥೆ ಹೇಳಲು ತೊಡಗುತ್ತಾನೆ.
ಹೀಗೆ, ನನ್ನಯ್ಯನು ಎರಡೂವರೆ ಪರ್ವಗಳನ್ನೂ, ತಿಕ್ಕನನು ೧೫ ಪರ್ವಗಳನ್ನೂ ತೆಲುಗಿಗೆ ಅನುವಾದಿಸಿದರು. ಆದರೆ, ಅರಣ್ಯಪರ್ವದ ಉತ್ತರಾರ್ಧವು ಹಾಗೇ ಉಳಿದುಹೋಯಿತಲ್ಲ!!
೧೪ನೇ ಶತಮಾನದ ಕವಿ ಎರ‍್ರಾಪ್ರಗ್ಗಡ ಎಂಬುವವನು, ನನ್ನಯನು ಅನುವಾದಿಸದೆ ಉಳಿಸಿದ್ದ ಅರಣ್ಯಪರ್ವದ ಉಳಿದರ್ಧ ಭಾಗವನ್ನು ತೆಲುಗಿಗೆ ಅನುವಾದಿಸಿದ. ಹೀಗೆ, ಮೂಲದಲ್ಲಿ ಒಂದು ಲಕ್ಷದಷ್ಟು ಶ್ಲೋಕಗಳಿಂದ ಕೂಡಿದ ಮಹಾಭಾರತವನ್ನು ಆಂಧ್ರದ ಈ ಕವಿತ್ರಯರು ತೆಲುಗಿಗೆ ಅನುವಾದಿಸಿದರು. ಈ ಕಾರ್ಯ ಪೂರ್ಣವಾಗಲು ಮೂರು ಶತಮಾನಗಳಷ್ಟು ಕಾಲವೇ ಬೇಕಾಯಿತು.!
ಇಲ್ಲಿ, ಎರ‍್ರಾಪ್ರಗ್ಗಡನ ಬಗ್ಗೆ ಒಂದು ಮಾತನ್ನು ನೆನೆಯಬೇಕು; ಅವನು ಅರಣ್ಯಪರ್ವದ ಉಳಿದ ೪.೫ ಆಶ್ವಾಸಗಳನ್ನು ತೆಲುಗಿಗೆ ತಂದ, ಸರಿ. ಆ ರಚನೆ, ಆ ಶೈಲಿಯನ್ನು ಅವನು ನಿರ್ವಹಿಸಿರುವ ಪರಿ ಹೇಗಿದೆಯೆಂದರೆ — ಓದುಗರಿಗೆ ‘ಇದನ್ನು ಬರೆದವನು ನನ್ನಯ್ಯನಲ್ಲ’ ಎಂಬ ಭಾವನೆಯೆ ಬರಲಾರದು. ಅಷ್ಟು ಅಚ್ಚುಕಟ್ಟಾಗಿ ನನ್ನಯ್ಯನ ಶೈಲಿಯನ್ನೇ ಅನುಸರಿಸಿ, ರಚಿಸಿದ್ದಾನೆ. ಅದಷ್ಟೆ ಅಲ್ಲ, ಪ್ರತಿ ಆಶ್ವಾಸವನ್ನೂ ‘ನನ್ನಯ್ಯ ಪ್ರಣೀತವಾದ….’ ಎಂದೇ ಹೇಳಿ ಮುಗಿಸಿದ್ದಾನೆ. ಕೊನೆಯ ಆಶ್ವಾಸದಲ್ಲೆಲ್ಲೊ ಒಂದೆರಡು ಪದ್ಯಗಳಲ್ಲಿ ತನ್ನ ಹೆಸರನ್ನೂ, ಸ್ವಲ್ಪವೇ ವಿವರವನ್ನು ಹೇಳಿಕೊಂಡಿದ್ದಾನೆ ಅಷ್ಟೆ. ಈ ಪರಿಯ ನಿಸ್ಪೃಹತೆ ಎಷ್ಟು ಜನರಿಗೆ ಸಾಧ್ಯವಾದೀತು!
“ನನ್ನಯಭಟ್ಟನ ಕವಿತಾರೀತಿಯು ಸ್ವಲ್ಪವಾದರೂ ಪ್ರತಿಫಲಿಸಿ ತೋರುವಂತೆ, ಅರಣ್ಯಪರ್ವದ ಉಳಿದ ಭಾಗವನ್ನು ಪೂರೈಸಿದ್ದೇನೆ” ಎಂದು ವಿನಯದಿಂದ ಹೇಳಿಕೊಂಡಿದ್ದಾನೆ.
__________________________________________________________
ಕಳೆದ ವರ್ಷ ಜೂನ್-ಜುಲೈ ಹೊತ್ತಿಗೆ ಅದುಹೇಗೊ ನನಗೆ ‘ಏನಿಲ್ಲವೆಂದರೂ, ನನ್ನಯ ಬರೆದಿರುವಷ್ಟು ಪರ್ವಗಳನ್ನಾದರೂ ನಾನು -ತೆಲುಗಿನಲ್ಲಿ- ಓದಬೇಕು’ ಎನಿಸಿತು. ಹಾಗೆ ಈ “ಆಂಧ್ರ ಮಹಾಭಾರತಮು” ಕೃತಿಯನ್ನು ಓದಲು ತೊಡಗಿದೆ. ಒಮ್ಮೆ ಆ ಸುಧೆಯಲ್ಲಿ ಮಿಂದೆದ್ದೆನೊ ಇಲ್ಲವೊ, ‘ಏನಾದರೂ ಆಗಲಿ, ಇರುವ ಅಷ್ಟೂ ಪರ್ವಗಳನ್ನೂ ಓದಲೇಬೇಕಲ್ಲ’ ಎಂಬ ಹಂಬಲವು ದಿನೇದಿನೇ ಬೆಳೆಯಿತು. ಅದರ ಫಲವಾಗಿ, ಇಂದಿಗೆ ‘ಆಂಧ್ರಮಹಾಭಾರತ’ದ ಹದಿನೆಂಟೂ ಪರ್ವಗಳನ್ನು ಓದುವುದು ಸಾಧ್ಯವಾಯಿತು.
ನಾಲ್ಕೈದು ವರ್ಷಗಳ ಹಿಂದೆ ಒಮ್ಮೆ ತಿರುಪತಿಯಲ್ಲಿ, ಅನ್ನಮಾಚಾರ್ಯರ ಕೀರ್ತನೆಗಳಿರುವ ಪುಸ್ತಕವನ್ನು ಕೊಳ್ಳುವಾಗ, ಈ ಆಂಧ್ರಭಾರತದ ಸಂಪುಟಗಳನ್ನು ನೋಡಿದ್ದೆ. ಒಟ್ಟು ಹದಿನೈದು ಪುಸ್ತಕಗಳು; ಒಂದೊಂದೂ ೬೦೦-೮೦೦ ಪುಟಗಳಷ್ಟರದ್ದು.! ಅವುಗಳ ಗಾತ್ರವನ್ನು ಕಂಡು ಹೆದರಿ, ಅವನ್ನು ಮೈಸೂರಿಗೆ ಹೊತ್ತು ತರುವ ಬಗೆಯೂ ಕಾಣದೆ ಹಾಗೇ ಬಂದಿದ್ದೆ. ಈಗ ಆ ಪುಸ್ತಕಗಳ ಡಿಜಿಟಲ್ ಕಾಪಿಗಳು ‘ತಿರುಮಲ ತಿರುಪತಿ ದೇವಸ್ಥಾನ’ದ ವೆಬ್ಸೈಟಿನಲ್ಲಿ ಸಿಗುತ್ತವೆ. ತೆಲುಗು ಓದಲು ಬರುವವರು, ಓದುವ ಆಸಕ್ತಿಯಿರುವವರು ಪ್ರಯತ್ನಿಸಬಹುದು: http://ebooks.tirumala.org/
ಪ್ರತಿ ಪದ್ಯಕ್ಕೂ ಪ್ರತಿಪದಾರ್ಥದ ಜೊತೆಗೆ ವಿವರಣೆಯೂ ಇದೆ. ಹಳೆಯ ತೆಲುಗು ಓದಲು ಕಷ್ಟವೆನಿಸಿದವರು ವಿವರಣೆಯನ್ನಾದರೂ ಓದಿ ತಣಿಯಬಹುದು.
ಟಿಪ್ಪಣಿ:
೧) ನನ್ನಯ್ಯನು ಆದಿಕವಿ ಪಂಪನ ಸಮಕಾಲೀನನೆ ಹೌದೊ ಅಲ್ಲವೊ ಎಂಬ ಬಗ್ಗೆಯೂ ಕೆಲವು ವಿರೋಧಾಭಿಪ್ರಾಯಗಳಿವೆಯಂತೆ. ಆದರೆ ಆಂಧ್ರಭಾರತದ ರಚನೆಯ ಕಾಲ ೧೧ನೇ ಶತಮಾನವೇ ಎಂದು ಒಪ್ಪಲು ಅಡ್ಡಿಯಿದ್ದಂತಿಲ್ಲ.
೨) ತೆಲುಗಿನ ಅನೇಕ ಪೌರಾಣಿಕ ಚಲನಚಿತ್ರಗಳಲ್ಲಿ ಆಂಧ್ರಭಾರತದ ಛಾಯೆಯನ್ನು ಕಾಣಬಹುದು. ನರ್ತನ ಶಾಲ, ಪಾಂಡವ ವನವಾಸಂ ಮುಂತಾದ ಕೆಲವು ಚಿತ್ರಗಳಲ್ಲಿ ಆಂಧ್ರಭಾರತದ ಪದ್ಯಗಳನ್ನೂ ಯಥೋಚಿತವಾಗಿ ಅಳವಡಿಸಿದ್ದಾರೆ.
· https://www.youtube.com/watch?v=yyBUQalTQCA&t=19s