ಅಮೃತವಲ್ಲರಿಯ ಕಥೆ
ಎಲ್ಲಾ ಶುರುವಾದದ್ದು — ಮೊನ್ನೆ ಸ್ನೇಹಿತರೊಬ್ಬರು ಯಾವುದೊ ಪೋಸ್ಟರಿನಲ್ಲಿದ್ದ ಸಾಲ್ಮನ್ ಮೀನಿನ ತಿನಿಸನ್ನು ಕಂಡು, ಜಿಲೇಬಿಯನ್ನು ನೆನಪಿಸಿಕೊಂಡದ್ದರಿಂದ!
ತಿಳಿಕೇಸರಿ ಬಣ್ಣದ ಸಾಲ್ಮನ್ ಮಾಂಸದ ತೆಳುವಾದ ಸುರುಳಿಗಳಿದ್ದ ಪೋಸ್ಟರನ್ನು ನೋಡಿದ ಸ್ನೇಹಿತರೊಬ್ಬರು, ಅದನ್ನು ಯಾವುದೊ ಸಿಹಿತಿನಿಸು ಎಂದುಕೊಂಡರಂತೆ. ನಿಜ ಸಂಗತಿ ತಿಳಿದ ಮೇಲೆ, ‘ಅಯ್ಯೊ! ಅದೊಳ್ಳೆ ಜಿಲೇಬಿ ಥರ ಕಾಣಿಸ್ತು’ ಅಂದರು. ಹಾಗೆ, ಮಾತು ಜಿಲೇಬಿ ಹಾಗೂ ಜಾಂಗೀರಿನ ಕಡೆಗೆ ಹೊರಳಿತು.
ಮೊದಲಿಗೆ, ಜಿಲೇಬಿಗೂ ಜಾಂಗೀರಿಗೂ ಇರುವ ವ್ಯತ್ಯಾಸವೇನು ಎಂಬುದು ಹಲವರಿಗೆ ತಿಳಿದಿರಲಾರದು. ತಮಿಳುನಾಡಿನ ಕೆಲವು ಕಡೆ ಜಿಲೇಬಿಯನ್ನು ಜಾಂಗ್ರಿಯೆಂದೂ, ಜಾಂಗೀರನ್ನು ಜಿಲೇಬಿಯೆಂದೂ ಕರೆಯುತ್ತಾರಂತೆ (ನನ್ನ ಮಿತ್ರರೊಬ್ಬರು ತಿಳಿಸಿದ್ದು). ನನಗಾದರೂ, ಜಿಲೇಬಿ ತಯಾರಿಸುವುದು ಹೇಗೆಂದು ಗೊತ್ತಿತ್ತಾದರೂ, ಜಾಂಗೀರಿನ ಬಗ್ಗೆ ಅಂದಾಜಿರಲಿಲ್ಲ. ಅದನ್ನು ಬರಿ ಮದುವೆ ಊಟದಲ್ಲೊ, ಸ್ವೀಟ್ ಸ್ಟಾಲಿನಲ್ಲೊ ಅಷ್ಟೆ ಕಂಡಿದ್ದುದು. ಅದನ್ನು ಮನೆಯಲ್ಲೂ ತಯಾರಿಸಬಹುದು ಎಂಬ ಊಹೆಯೆ ಸುಳಿದಿರಲಿಲ್ಲ, ನನಗೆ.
ಜಿಲೇಬಿಯನ್ನು ತಯಾರಿಸಲು ಮೈದಾಹಿಟ್ಟನ್ನು ಬಳಸಬೇಕು. ಮೈದಾಹಿಟ್ಟಿಗೆ ಹುಳಿಮೊಸರನ್ನು -ತೆಳುವಾದ ಹದಕ್ಕೆ- ಬೆರೆಸಿ, ಎಂಟು-ಹತ್ತು ಗಂಟೆಗಳವರೆಗೆ ಒದಗಲು ಬಿಡಬೇಕು. ಈ ಹಿಟ್ಟಿಗೆ, ಬೇಕಿದ್ದರೆ ಹಳದಿ ಅಥವಾ ಕೇಸರಿ ಬಣ್ಣವನ್ನು ಬೆರೆಸಬಹುದು.
ಆ ನಂತರ ಅದನ್ನು, ಒಂಟಿ ತೂತಿರುವ ಬಟ್ಟೆಯ ಪೊಟ್ಟಣದಲ್ಲೊ ಅಥವಾ ಕೆಚಪ್ ಟ್ಯೂಬಿನಲ್ಲೊ ತುಂಬಿ, ಗುಂಡಾದ ಆಕಾರಕ್ಕೆ ಬರುವಂತೆ — ಎಣ್ಣೆಯಲ್ಲಿ ಕರಿಯಬೇಕು. ಹಾಗೆ ಕರಿದ ಜಿಲೇಬಿಯನ್ನು ಸಕ್ಕರೆಪಾಕದಲ್ಲಿ ನೆನೆಹಾಕಬೇಕು.
ಜಾಂಗೀರನ್ನು ಮಾಡುವುದಕ್ಕೆ — ಸ್ವಲ್ಪವೇ ಅಕ್ಕಿ (ಒಂದೆರಡು ಚಮಚದಷ್ಟಾದರೆ ಆಯಿತು), ಹೆಚ್ಚಿನ ಅಳತೆಯ ಉದ್ದಿನ ಬೇಳೆಯನ್ನು ೩-೪ ಗಂಟೆಗಳಷ್ಟು ಕಾಲ ನೆನೆಸಿ, ಅದನ್ನು ಗಟ್ಟಿಯಾದ ಹದಕ್ಕೆ — ನುಣ್ಣಗೆ- ರುಬ್ಬಿಕೊಳ್ಳಬೇಕು. ಅದಕ್ಕೆ ಬೇಕಿದ್ದರೆ ಕೇಸರಿ ಬಣ್ಣವನ್ನು ಬೆರೆಸಿ, ಚೆನ್ನಾಗಿ ಕಲೆಸಬೇಕು. ಇದನ್ನು ಕೂಡ ಬಟ್ಟೆಯ ಪೊಟ್ಟಣದಲ್ಲೊ ಅಥವಾ ಕೆಚಪ್ ಟ್ಯೂಬಿನಲ್ಲೊ ತುಂಬಿಕೊಂಡು — ಮೊದಲಿಗೆ ಗುಂಡನೆಯ ಆಕಾರ ಬರುವಂತೆಯೂ, ಆನಂತರ ಆ ವೃತ್ತದ ಸುತ್ತ ಬಳ್ಳಿಬಳ್ಳಿಯ ವಿನ್ಯಾಸ ಬರುವಂತೆ ಹಿಟ್ಟನ್ನು ಹಿಂಡಿಕೊಳ್ಳಬೇಕು. ಇದನ್ನೂ ಎಣ್ಣೆಯಲ್ಲಿ (ಅಥವಾ ತುಪ್ಪದಲ್ಲಿ) ಕರಿದ ಬಳಿಕ ಸಕ್ಕರೆ ಪಾಕಕ್ಕೆ ಹಾಕಿ ತೆಗೆಯಬೇಕು. ಇದನ್ನು ಮಾಡುವ ಹಿಟ್ಟನ್ನು ಒದಗಲು ಬಿಡಬೇಕಾದ ಅಗತ್ಯವಿಲ್ಲ.
ಜಿಲೇಬಿ ಹಾಗೂ ಜಾಂಗೀರಿನ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಅನುವಾಗುವ ಲಕ್ಷಣಗಳೆಂದರೆ:- ಜಿಲೇಬಿಯು (ಜಾಂಗೀರಿಗೆ ಹೋಲಿಸಿದರೆ) ಸ್ವಲ್ಪ ತೆಳ್ಳಗೂ, ಹೆಚ್ಚಿನ ಸಂದರ್ಭಗಳಲ್ಲಿ ಅಸ್ತವ್ಯಸ್ತವಾದ ಆಕಾರಗಳಲ್ಲೆಲ್ಲ ಇರುತ್ತೆ. ಬಹುಶಃ ಅದು ಜಿಲೇಬಿಯನ್ನು ತಯಾರಿಸುವವರ ನಿರ್ಲಕ್ಷ್ಯದ ಫಲವೇ ಇರಬೇಕೆನಿಸುತ್ತದೆ. ಇಲ್ಲವಾದರೆ ಅದೂ ಸಹ ನೋಡಲು ಅಚ್ಚುಕಟ್ಟಾಗಿ, ಗುಂಡನೆ ಆಕಾರದಲ್ಲಿರುತ್ತದೆ. ಅದರ ಇನ್ನೊಂದು ಲಕ್ಷಣವೆಂದರೆ — ಹಿಂಡಿದರೆ ಸಿಡಿಯುವಷ್ಟರ ಮಟ್ಟಿಗೆ ಸಕ್ಕರೆಪಾಕದಿಂದ ತುಂಬಿರುತ್ತದೆ.
ಬೆಂಗಳೂರು ಮುಂತಾದ ನಗರಗಳಲ್ಲಿ ಎಷ್ಟೊ ಕಡೆ ರಸ್ತೆಬದಿಯಲ್ಲಿ ಸಣಸಣ್ಣ ಅಂಗಡಿಗಳಲ್ಲಿ ಜಿಲೇಬಿ ಮಾಡಿ ಮಾರುವವರನ್ನು ಕಾಣಬಹುದು! ಆದರೆ, ಜಾಂಗೀರು ಬೇಕೆಂದರೆ ಯಾವುದಾದರೂ ಸ್ವೀಟ್ ಸ್ಟಾಲಿಗೇ ಹೋಗಬೇಕು.
ಇನ್ನು ಜಾಂಗೀರ್ ಅಥವಾ ಜಾಂಗ್ರಿ!
ಅಪ್ಪಟ ಕಲಾವಿದನೊಬ್ಬನು ಅತಿ ಜಾಗರೂಕತೆಯಿಂದ ರಚಿಸಿದ ಅಲಂಕಾರಿಕ ಚಕ್ರದಂತೆ, ಹವಳದಲ್ಲಿ ಕಡೆದ ಕಡಗದಂತೆ ಬಹಳ ಸುಂದರವಾಗಿರುತ್ತೆ, ಇದರ ರೂಪ. ಅದನ್ನು ಕಂಡಾಗೆಲ್ಲ, ‘ಅಷ್ಟು ಸೂಕ್ಷ್ಮವಾಗಿ ಅದುಹೇಗೆ ತಯಾರಿಸುತ್ತಾರಪ್ಪ, ಇದನ್ನು!’ ಎಂದು ಅಚ್ಚರಿ ಪಡಬೇಕು, ಹಾಗಿರುತ್ತೆ ಅದರ ಆಕಾರ.
ಇನ್ನು, ಅದು ತೀರ ಅಂಟಂಟಾಗಿ, ಜಿನುಗುವಷ್ಟರ ಮಟ್ಟಿಗೆ ಸಕ್ಕರೆಪಾಕಯುಕ್ತವಾಗಿರುವುದಿಲ್ಲ. ತಿಂದರೆ ಎಗಟೆನಿಸುವಷ್ಟು (ಅತಿ)ಸಿಹಿಯಾಗಿಯೂ ಇರುವುದಿಲ್ಲ. ಅದರದ್ದು ಮಿತಿಮೀರದ, ಅಚ್ಚುಕಟ್ಟಿನ ಸ್ವಾದ, ಸೌಂದರ್ಯ. ಜಿಲೇಬಿಗೆ ಅದರ ಗತ್ತು ಗಾಂಭೀರ್ಯ ಎಂದಿಗೆ ಬರಬೇಕು!
ಅಸಲಿಗೆ ಅಷ್ಟು ಚೆಂದದ ತಿನಿಸಿಗೆ ಅವನಾರದೊ ಹೆಸರು ಹೇಗೆ ಬಂತು ಎಂದು ನಾನು ಹಲವಾರು ಸಾರಿ ಯೋಚಿಸಿದ್ದಿದೆ. ಕೆಲವು ತಿನಿಸುಗಳಿಗೆ ಅದುಹೇಗೊ ಯಾರೊ ರಾಜನದೊ ರಾಣಿಯದೊ ಅಥವಾ ಇನ್ನಾರದ್ದೊ ಹೆಸರುಗಳು ಅಂಟಿಕೊಂಡುಬಿಟ್ಟಿರುತ್ತವೆ. ಆನಂತರದ ಕಾಲದುದ್ದಕ್ಕೂ ಆ ತಿನಿಸಿಗೆ ಅದೇ ಹೆಸರು ಉಳಿದುಬಿಡುತ್ತದೆ. ಈ ಜಾಂಗೀರಿನ ವಿಷಯವೂ ಹಾಗೇ ಆಗಿರುವಂತಿದೆ.
“ಆತ ಇದ್ದಿದ್ದಾದರೂ ಹದಿನಾರು-ಹದಿನೇಳನೇ ಶತಮಾನದಲ್ಲಿ. ಅದಕ್ಕೂ ಮುಂಚೆ ಈ ತಿನಿಸೇ ಇರಲಿಲ್ಲವೆ?” ಎಂಬ ಪ್ರಶ್ನೆಗೆ, ಮೂರನೇ ಮಂಗರಸನು ರಚಿಸಿರುವ ‘ಸೂಪಶಾಸ್ತ್ರ’ವೆಂಬ ಪುಸ್ತಕದಲ್ಲಿ ಉತ್ತರ ದೊರೆಯಿತು. ಅದರಲ್ಲಿ ಬರುವ ಪದ್ಯವೊಂದರಲ್ಲಿ ಒಂದು ವಿಶಿಷ್ಟವಾದ ಸಿಹಿತಿನಿಸನ್ನು ಮಾಡುವ ವಿಧಾನವನ್ನು ತಿಳಿಸಿದ್ದಾನೆ, ಆತ.
“ಅರೆದಕ್ಕಿಯುದ್ದಿಟ್ಟ ಸಂಪಳೆಯನೊಕ್ಕಣ್ಣ
ಕರಟದೊಳ್ ತುಂಬಿ ಕೆಲವಂ ತುಪ್ಪದೊಳ
ಗುರುಳಿಯಪ್ಪಂತು ಬಿಡೆ ಪೀಯೂಷಪಿಂಡಮಾದುದು, ಕೆಲವ ಲತೆಯಂತಿರೆ
ಹರಿದುಬಿಡಲಮೃತವಲ್ಲರಿಯೆಂಬ ಹೆಸರಾಯ್ತು
ಕರತಳದಲಪ್ಪದೊಲ್ ಬಿಡೆ ಜೇನುಕೊಡವೆಸರ
ಧರಿಯಿಸಿಯೊಳಗೋಗುವಡೆದುವು ಮತ್ತದಕೆ ಸಕ್ಕರೆಯ ಪಾಕವನಿಡುವುದು.”
ಅಕ್ಕಿ ಹಾಗೂ ಉದ್ದನ್ನು ರುಬ್ಬಿ ತಯಾರಿಸಿಕೊಂಡ ಸಂಪಳೆಯನ್ನು (ಹಿಟ್ಟನ್ನು) ಒಂಟಿಕಣ್ಣಿನ ಕರಟದಲ್ಲಿ ತುಂಬಿಕೊಂಡು ತಯಾರಿಸುವ ಮೂರು ಬಗೆಯ ತಿನಿಸುಗಳನ್ನು ಹೆಸರಿಸುತ್ತದೆ, ಈ ಪದ್ಯ : (ಕರಟದಿಂದ ಸುರಿಯುವ ಮೂಲಕ) ದುಂಡಾಗಿ ಕರಿದು ತಯಾರಿಸಿದ ತಿಂಡಿಯ ಹೆಸರು ‘ಪೀಯೂಷಪಿಂಡ’ ಎಂದು. ಕೈಯಿಂದ, ಬೋಂಡ ಅಥವಾ ಅಪ್ಪವನ್ನು ತಯಾರಿಸಿದ ಹಾಗೆ ಬಿಟ್ಟು ಕರಿದರೆ, ಅದರ ಹೆಸರು ‘ಜೇನುಗೊಡ’ವೆಂದು. ಹಾಗಲ್ಲದೆ, ಆ ಕರಟದ ಸಹಾಯದಿಂದ ಬಳ್ಳಿಬಳ್ಳಿಯ ಹಾಗೆ ಆಕಾರವನ್ನು ರಚಿಸಿ ಕರಿದರೆ, ಅದರ ಹೆಸರು ‘ಅಮೃತವಲ್ಲರಿ’ ಎಂದು. ಹಾಗೆ ಕರಿದವನ್ನು ಸಕ್ಕರೆಪಾಕದಲ್ಲಿ ಹಾಕಬೇಕೆಂದೂ ಸೂಚಿಸಿದ್ದಾನೆ, ಕವಿ.
ಅಮೃತವಲ್ಲರಿ! ಆ ಹೆಸರೇ ಎಷ್ಟು ಆಹ್ಲಾದಕರವಾಗಿದೆ. ಅಂದರೆ, ಈಗ ಜಾಂಗೀರ್ ಎಂದು ಚಲಾವಣೆಯಲ್ಲಿರುವ ಸಿಹಿತಿನಿಸಿನ ನಿಜವಾದ ಹೆಸರು “ಅಮೃತವಲ್ಲರಿ” ಎಂದು ಸ್ಪಷ್ಟವಾಯ್ತು.
ಉತ್ತರ ಭಾರತದ ಕೆಲವು ಭಾಷೆಗಳಲ್ಲಿ ಈ ತಿನಿಸನ್ನು ಇಮರ್ತಿ, ಅಮರ್ತಿ ಎಂದೆಲ್ಲ ಕರೆಯುತ್ತಾರಂತೆ. ಆ ಹೆಸರುಗಳೂ ಕೂಡ ‘ಅಮೃತವಲ್ಲರಿ’ಯಲ್ಲಿನ “ಅಮೃತ”ದ ಅಪಭ್ರಂಶಪ್ರಯೋಗದಿಂದ ಮೂಡಿರುವಂತೆ ತೋರುತ್ತದೆ.
ಅಲ್ಲಿಗೆ ಜಾಂಗೀರಿನ ನಿಜನಾಮದ ಅನ್ವೇಷಣೆಯೇನೊ ಆಯಿತು. ಜಿಲೇಬಿಯ ಕಥೆಯ ಜಾಡನ್ನೂ ಹುಡುಕಬೇಡವೆ?
ಕನ್ನಡದಲ್ಲಿ ‘ಸೌಂದರವಿಳಾಸ’ವೆಂಬ ಸಣ್ಣ ಷಟ್ಪದಿ ಕೃತಿಯನ್ನು ರಚಿಸಿದ ಅಣ್ಣಾಜಿಯೆಂಬುವವನು, ಆ ಕೃತಿಯಲ್ಲಿಯ ವರ್ಣನೆಯೊಂದರಲ್ಲಿ — ಅಂಗಡಿಗಳಲ್ಲಿ ಕರಜಿಕಾಯಿ, ಅತಿರಸ(ಕಜ್ಜಾಯ), ಉದ್ದಿನವಡೆ, ಇಡ್ಡಲಿಗೆ, ಎಳ್ಳುಂಡೆ, ಒಬ್ಬಟ್ಟು, ಗಾರಿಗೆ, ಚಕ್ಕುಲಿ, ಶಾವಿಗೆ ಮೊದಲಾದ ವಸ್ತುಗಳನ್ನು ಮಾರುತ್ತಿದ್ದರೆಂದು ತಿಳಿಸುತ್ತ, “ಅಮೃತಸರಳಿನಿಂ ನಿರ್ಮಿಸಿದ ಲತೆಯಂತೆ ಜಿಲ್ಲೇಬಿಯಂಗಡಿಗಳೆಸೆದಿರ್ದುವು” ಎಂದಿದ್ದಾನೆ.
ಈ ಉಲ್ಲೇಖದಿಂದ ಮತ್ತೊಂದು ಪ್ರಶ್ನೆಯೂ ತೊಡಕೂ ಕಾಣಿಸುತ್ತದೆ. ಈತ ಹೆಸರಿಸಿದ ‘ಜಿಲ್ಲೇಬಿ’ಯು ಇಂದಿನ ಜಿಲೇಬಿಯೊ ಅಥವಾ, ಒಂದುವೇಳೆ ಅಮೃತವಲ್ಲರಿಯನ್ನೇ ಇವನು ಜಿಲ್ಲೇಬಿ ಎನ್ನುತ್ತಿದ್ದಾನೊ! ಎಂದು. ಈ ಎರಡೂ ತಿನಿಸುಗಳ ಆಕಾರ ಹಾಗೂ ಬಣ್ಣಗಳಲ್ಲಿಯ ಸಾಮ್ಯತೆ ಆ ಕವಿಯನ್ನೂ ಗೊಂದಲಕ್ಕೆ ದೂಡಿತೊ ಏನೊ ತಿಳಿಯದು. ಇರಲಿ..
ಜಿಲೇಬಿಯು ಭಾರತೀಯ ಮೂಲದ ತಿನಿಸಲ್ಲವೆಂದು ತೋರುತ್ತದೆ. ನಾನು ಅದರ ಮೂಲವನ್ನು ಹುಡುಕಿಹೊರಟಾಗ, ಅರಬ್ ಮೂಲದ ‘ಕಿತಾಬ್-ಅಲ್-ತಬೀಖ್’ ಎಂಬ ಪುಸ್ತಕದ ಬಗ್ಗೆ ತಿಳಿಯಿತು. ಅದರಲ್ಲಿ ಝಲೇಬಿಯ್ಯ ಎಂಬ ತಿನಿಸಿನ ಬಗ್ಗೆ ವಿವರಣೆಗಳಿವೆಯಂತೆ! ಕಾಕತಾಳೀಯವೆಂಬಂತೆ, ಆ ಹೆಸರಿನ ಪುಸ್ತಕದ ಇಂಗ್ಲಿಷ್ ಅನುವಾದವನ್ನು ಈ ಮಧ್ಯೆಯಷ್ಟೆ ಖರೀದಿಸಿದ್ದೆ. ಅದರಲ್ಲಿ ಈ ಜಿಲೇಬಿಯ ಮೂಲವನ್ನು ಹುಡುಕಾಡಿದೆ. ದೊರೆಯಲಿಲ್ಲ. ಒಂದಷ್ಟು ಸಿಹಿತಿನಿಸುಗಳ ಬಗ್ಗೆ (ನಮಗೆ ಪ್ರಿಯವಾದ ಗುಲಾಬ್ ಜಾಮೂನಿನ ಬಗ್ಗೆಯೂ ಇದೆ!) ವಿವರಗಳಿವೆಯಾದರೂ ಜಿಲೇಬಿಯ ಸುಳಿವು ಸಿಗಲಿಲ್ಲ. ಆ ಪುಸ್ತಕದಲ್ಲಿಯ ಬೇರೆ ಅಡುಗೆಗಳೆಲ್ಲ ಮಾಂಸಾಹಾರದ ತಿನಿಸುಗಳಾಗಿದ್ದುದರಿಂದ, ಹೆಚ್ಚಿಗೆ ಹುಡುಕುವ ಉತ್ಸಾಹ ನನಗೆ ಮೂಡಲಿಲ್ಲ.
ಅದಲ್ಲದೆ, ಈ ‘ಕಿತಾಬ್-ಅಲ್-ತಬೀಖ್’ ಹೆಸರಿನಲ್ಲಿ ಎರಡು ಪುಸ್ತಕಗಳಿವೆಯಂತೆ. ಅವುಗಳಲ್ಲಿ ಯಾವ ಪುಸ್ತಕದಲ್ಲಿ ‘ಜಿಲೇಬಿ’ಯು ಕಂಡೀತೊ ನಾನರಿಯೆ! ಈಗಿನ ಮಟ್ಟಿಗೆ, ‘ಅಮೃತವಲ್ಲರಿ’ಯನ್ನು ಕಂಡದ್ದಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಷ್ಟೆ.
ಬರೀ ಕಾಣುವುದೇನು, ಈ ದಿನ ಅದನ್ನು ತಯಾರಿಸಿದ್ದೂ ಆಯಿತು. ಈಗ ಅದರ ರುಚಿಯನ್ನು ಸವಿಯುತ್ತಲೂ ಆನಂದಿಸಬಹುದಲ್ಲ.