ರಾಗಿ ಮುದ್ದೆಯ ಕಥೆ
ಮನೆಯಲ್ಲಿ ಪ್ರತಿದಿನ ಸಂಜೆ ಊಟಕ್ಕೆಂದು ರಾಗಿಮುದ್ದೆ ತೊಳಸುವಾಗ, ನನ್ನ ತಾಯಿ — ಮೊದಲು ಪಿಡಿಚೆ ಗಾತ್ರದ್ದೊಂದು ಸಣ್ಣ ಮುದ್ದೆಯನ್ನು ಮಾಡಿ, ಅದನ್ನು ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಪಕ್ಕದಲ್ಲಿಡುತ್ತಿದ್ದರು; ಆ ನಂತರವಷ್ಟೆ ಮನೆಮಂದಿಗೆ ಮುದ್ದೆ ತಯಾರಿಸುತ್ತಿದ್ದುದು. ನಾನು ಆಗಿನ್ನೂ ಚಿಕ್ಕವನು; ಆ ಚಿಕ್ಕ ಮುದ್ದೆಯ ಮೇಲೇ ನನ್ನ ಕಣ್ಣು! ಅದನ್ನು ನನಗೇ ಕೊಡಬೇಕೆಂದು ಅವರನ್ನು ಕೇಳುತ್ತಿದ್ದೆ. ಆದರೆ ಅವರು ನನಗೆ ಎಂದೂ ಅದನ್ನು ಕೊಟ್ಟವರಲ್ಲ. ಬೇಕಿದ್ದರೆ ಬೇರೆಯ ಮುದ್ದೆಯಿಂದೊಂದು ಸಣ್ಣ ಭಾಗವನ್ನು ತೆಗೆದುಕೊಟ್ಟಾರು ಅಥವಾ ನನಗೆಂದೇ ಅಷ್ಟೇ ಸಣ್ಣ ಗಾತ್ರದ ಇನ್ನೊಂದು ಮುದ್ದೆಯನ್ನು ತೊಳಸಿಕೊಟ್ಟಾರು; ಆದರೆ ಆ ಮೊದಲ ಮುದ್ದೆಯಂತೂ ನನಗೆ ಸಿಗುತ್ತಿರಲಿಲ್ಲ. ಒಮ್ಮೆ ಆ ವಿಷಯವಾಗಿ ಹಟ ಮಾಡಿ ಕೇಳಿದಾಗ, ಅದು ಕೃಷ್ಣನಿಗಾಗಿ ಮೀಸಲಿಟ್ಟಿದ್ದು ಎಂದೇನೊ ಹೇಳಿದ್ದರು.
ಎಂದಾದರೊಮ್ಮೆ ರಾತ್ರೋರಾತ್ರಿ, ಆ ಪರಮಾತ್ಮನು ನಮ್ಮ ಮನೆಯ ರಾಗಿಮುದ್ದೆ ತಿನ್ನುವ ಮನಸ್ಸು ಮಾಡಿ, ಬಾಗಿಲು ಬಡಿದರೆ? ಆಗ ಅವನಿಗೆ ಕೊಡಲೆಂದು ಆ ಸಣ್ಣ ಮುದ್ದೆಯನ್ನು ಮೀಸಲಿಟ್ಟಿರಬೇಕಲ್ಲ.!
ಪಾಂಡವರು ವನವಾಸದಲ್ಲಿದ್ದಾಗ, ತಮ್ಮ ಮನೆಗೆ ಬಂದ ದೂರ್ವಾಸರ ಆತಿಥ್ಯಕ್ಕೆ ಅಡಚಣೆಯಾಯಿತಲ್ಲ ಎಂದು ಅವರೆಲ್ಲ ದುಃಖಿಸುತ್ತಿದ್ದಾಗ — ಶ್ರೀಕೃಷ್ಣನು ಬಂದು, ಅಕ್ಷಯಪಾತ್ರೆಯಲ್ಲಿ ಉಳಿದಿದ್ದ ಒಂದೇ ಒಂದಗುಳನ್ನು ಸ್ವೀಕರಿಸಿದನಂತೆ; ಅವನು ಹಾಗೆ ಮಾಡಿದ್ದೆ ತಡ, ದೂರದಲ್ಲಿದ್ದ ದೂರ್ವಾಸರಿಗೂ, ಅವರ ಹತ್ತು ಸಾವಿರ ಶಿಷ್ಯಂದಿರಿಗೂ ಹೊಟ್ಟೆತುಂಬಿತಂತೆ. ಅಂಥದ್ದೇ ಸಂದರ್ಭವು ಕಲಿಯುಗದಲ್ಲಿ, ಅದೂ ನಮ್ಮ ಮನೆಯಲ್ಲಿ ಮರುಕಳಿಸಿಬಿಟ್ಟರೆ!!
ಸದ್ಯ, ನಮ್ಮ ಮನೆಗೆ ಅದಾವ ದೂರ್ವಾಸರು ಬಂದಾರು. ಇನ್ನು ಕೃಷ್ಣನು ಬರುವುದೆಂದೋ, ಅವನ ಪವಾಡವನ್ನು ನಾವು ಕಾಣುವುದೆಂದೋ! ಅಂತೂ ಆ ಸಣ್ಣ ಮುದ್ದೆಯಂತೂ ಪ್ರತಿರಾತ್ರಿಯೂ ಆ ಕೃಷ್ಣನಿಗೆಂದು ಕಾದು ಕುಳಿತಿದ್ದು, ಮಾರನೆಯ ದಿನ ಹಸುವಿನ ಹೊಟ್ಟೆ ಸೇರುತ್ತಿತ್ತು.
ಗೀತೆಯಲ್ಲಿ ಸ್ವತಃ ಶ್ರೀ ಕೃಷ್ಣನೇ ಹೇಳಿಲ್ಲವೆ — ತಾನು ಸರ್ವಜೀವಿಗಳಲ್ಲಿಯೂ (ವೈಶ್ವಾನರನೆಂಬ) ಜಠರಾಗ್ನಿಯ ರೂಪದಲ್ಲಿದ್ದು*, ಅವರು ಸೇವಿಸುವ ಆಹಾರವನ್ನು ಪಚನ ಮಾಡುತ್ತಾನೆಂದು. ಹಾಗೆ, ಕೊನೆಗೆ ಎಲ್ಲವೂ ಕೇಶವಾರ್ಪಣವೇ!
(* ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ| ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ || — ಗೀತೆ ೧೫.೧೪)
ನೀರಾವರಿಯ ಸೌಕರ್ಯ ಅಷ್ಟೇನೂ ಅನುಕೂಲವಿಲ್ಲದ ಕಡೆಯೂ -ಎಂದೊ ಸುರಿಯುವ ಮಳೆಯೊಂದನ್ನೇ ನಂಬಿ- ಬೆಳೆಯಬಹುದಾದ ಜೀವದ್ರವ್ಯ, ರಾಗಿ. ಹಾಗಾಗಿ, ನಮ್ಮೂರ ಕಡೆ ಸುಮಾರು ಜನ, ವರ್ಷಕ್ಕೆ ಒಮ್ಮೆಯಾದರೂ ರಾಗಿಯ ಬೆಳೆಯನ್ನು ತೆಗೆಯುತ್ತಿದ್ದರು. ಇನ್ನು, ಬೇರೆಯವಕ್ಕೆ ಹೋಲಿಸಿದರೆ, ರಾಗಿಯು ಬಹುಕಾಲದವರೆಗೂ ಇಟ್ಟರೂ ಮುಗ್ಗಿಹೋಗದೆ, ಹುಳಬಿದ್ದು ಕೆಡದೆ ಉಳಿಯಬಲ್ಲ ಧಾನ್ಯ. ಅದೂ ಒಂದು ವರದಾನವೇ ಅಲ್ಲವೆ! ಕನಕದಾಸರು ತಮ್ಮ ಕೃತಿಯಲ್ಲಿ ರಾಗಿಯೆಂಬ ‘ರಾಮಧಾನ್ಯ’ದ ಇದೇ ಶಕ್ತಿಯನ್ನು ಕೊಂಡಾಡಿದ್ದಾರೆ.
ನೆರೆಮನೆಯವರೊಬ್ಬರ ಮನೆಯಲ್ಲಿಯ ಅಗಾಧ ಗಾತ್ರದ ಪೀಪಾಯಿ ಹಾಗೂ ಕಣಜಗಳಲ್ಲಿ ತುಂಬಿದ್ದ ರಾಗಿಯನ್ನು — ಆಗಾಗ, ಅವರು ಹೊರತೆಗೆಯುವುದನ್ನು ನೋಡುವುದೇ ನಮಗೊಂದು ಅಚ್ಚರಿ, ಆಗೆಲ್ಲ!
ನಮ್ಮ ತೋಟದಲ್ಲಿ ಆಗೊಮ್ಮೆ ಈಗೊಮ್ಮೆ ರಾಗಿಯನ್ನೂ ಬೆಳೆಸುವುದಿತ್ತು; ತೋಟದವನು ತಂದುಕೊಟ್ಟುದರಲ್ಲಿ ಪಲ್ಲವೊ ಎರಡು ಪಲ್ಲವೊ ಆಗುವಷ್ಟು ರಾಗಿಗಂತೂ ಬಾಧಕವೇನಿರಲಿಲ್ಲ. ನಮ್ಮ ಮನೆಯಲ್ಲಿ ರಾಗಿಯ ಬಳಕೆಯೂ ಹೆಚ್ಚೇನೂ ಇರದಿದ್ದುದರಿಂದ, ಅವರಿವರಿಗೆ ಹಂಚಿ ಉಳಿದರೂ ಅದೇ ಬೇಕಾದಷ್ಟಾಗುತ್ತಿತ್ತು.
ರಾಗಿ ಬೆಳೆಯುವ ಕಾಲದಲ್ಲಿ, ಯಾರದಾದರೂ ಮನೆಗೆ ಹೋದಾಗ — ಹಸಿರಾದ ಹಾಲುತೆನೆಗಳಿಂದ ರಾಗಿಕಾಳನ್ನುದುರಿಸಿ (ಕೆಲವೊಮ್ಮೆ, ಅದನ್ನು ಹುರಿದು), ಅದಕ್ಕೆ ಒಣಕೊಬ್ಬರಿ, ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿ ತಯಾರಿಸಿದ ಮಿಶ್ರಣವನ್ನು ತಿನ್ನಲು ಕೊಡುತ್ತಿದ್ದರು. ಅದಂತೂ ತಿನ್ನಲು ಬಹಳ ರುಚಿಯಾಗಿರುತ್ತಿತ್ತು.
ಇನ್ನು, ಹೊಸ ರಾಗಿಹಿಟ್ಟಿನಿಂದ ಅದೊಂದು ಬಗೆಯ ಉಪ್ಪಿಟ್ಟನ್ನು ಮಾಡುವುದನ್ನೂ ನೋಡಿದ್ದೆ. ಮಿಕ್ಕಂತೆ, ಮೆಣಸಿನಕಾಯಿ, ಈರುಳ್ಳಿ ಹಾಗೂ ಮಜ್ಜಿಗೆಯನ್ನು ಬಳಸಿ ತಯಾರಿಸಿದ ರಾಗಿಯ ಅಂಬಲಿ, ಹಾಲೂ ಸಕ್ಕರೆ ಹಾಕಿ ಮಾಡಿದ ರಾಗಿಯ ಸಿಹಿಗಂಜಿ, ದೋಸೆ, ರೊಟ್ಟಿ, ರಾಗಿ ಉಂಡೆ (ರಾಗಿಯ ಹುರಿಯಿಟ್ಟು, ಬೆಲ್ಲ, ಹಾಲು ಮುಂತಾದವನ್ನು ಬಳಸಿ ತಯಾರಿಸಿದ್ದು) ಎಂದು ಎಷ್ಟೆಲ್ಲಾ ಇದ್ದರೂ, ರಾಗಿಯೆಂದರೆ ಥಟ್ಟನೆ ನಮಗೆ ನೆನಪಾಗುವ ತಿನಿಸುಗಳೆಂದರೆ — ರಾಗಿಮುದ್ದೆ ಹಾಗೂ ರಾಗಿರೊಟ್ಟಿಗಳೇ.
ನಮ್ಮೂರಿನ ಸುತ್ತಮುತ್ತ, ಅದರಲ್ಲೂ ಕೃಷಿಕರ ಮನೆಗಳಲ್ಲಿ — ಜನರು ರಾಗಿಮುದ್ದೆಗೆ, ಅನ್ನಕ್ಕಿಂತ ಒಂದು ಪಟ್ಟು ಹೆಚ್ಚಿಗಿನ ಭಕ್ತಿ ಮರ್ಯಾದೆಯನ್ನೆ ತೋರಿಸುವುದನ್ನು ನೋಡಿದ್ದೇನೆ.
ಸಂಕ್ರಾಂತಿಯ ದಿನಗಳಲ್ಲಿ ಹಾಗೂ ಶ್ರಾವಣ ಶನಿವಾರಗಳಲ್ಲಿ ಕೆಲವೊಮ್ಮೆ ನಮ್ಮೂರ ಸುತ್ತಮುತ್ತಲಿನ ಹೊಲ, ತೋಟಗಳಲ್ಲಿ ಹಾಗೂ ದೇವಸ್ಥಾನಗಳ ಬಳಿ, ಕೆಲವರು ‘ಪರುವು’ (ಪರ್ವು/ಪರ್ವ) ನಡೆಸುತ್ತಿದ್ದರು. ನೆಲವನ್ನು ಸಾಫು ಮಾಡಿ, ಸಾರಿಸಿ, ಅದರ ಮೇಲೆ ಸಾಲುಸಾಲಾಗಿ ಚಾಪೆಯನ್ನೊ ಹೊಂಗೆಸೊಪ್ಪನ್ನೊ ಹಾಸಿ, ಬಂದ ಜನರನ್ನು ಅದರ ಮೇಲೆ ಕೂರಿಸಿ, ರಾಗಿಮುದ್ದೆ, ಕಾಳುಸಾರು, ಪಲ್ಯ, ಪಾಯಸ ಮುಂತಾದ ಭಕ್ಷ್ಯಗಳಿರುವ ಪುಷ್ಕಳಭೋಜನವನ್ನು ಬಡಿಸುತ್ತಿದ್ದರು. ನಾವು ಮಕ್ಕಳೆಲ್ಲ ಸೇರಿ ನೆರೆಯವರೊಬ್ಬರ ತೋಟಕ್ಕೆ ಹೋಗಿದ್ದಾಗ ಒಂದೆರಡು ಸಾರಿ ಅಂತಹ ಪರುವಿನಲ್ಲಿ ರಾಗಿಮುದ್ದೆಯೂಟವನ್ನು ಸವಿದಿದ್ದೆ.
ಏನೆಂದರೂ, ಈ ರಾಗಿಮುದ್ದೆಯನ್ನು ತಿನ್ನುವುದೂ ಒಂದು ಕಲೆಯೇ. ಪಾಪ! ಮೊದಲ ಬಾರಿಗೆ ರಾಗಿಮುದ್ದೆಯನ್ನು ಕಂಡವರು, ಅದನ್ನು ತಿನ್ನುವ ಬಗೆ ತಿಳಿಯದೆ ಗೊಂದಲ ಪಡುವುದು ಸಾಮಾನ್ಯ.
ಆಂಧ್ರದ ಗಡಿಭಾಗದ ಮೂಲದ ನನ್ನ ಸ್ನೇಹಿತನೊಬ್ಬನು, ಓದಿಗೆಂದು ಬೆಂಗಳೂರಿಗೆ ಬಂದ ಹೊಸತರಲ್ಲಿ, ಅವರ ಹಾಸ್ಟೆಲಿನಲ್ಲಿ ಕೊಡುತ್ತಿದ್ದ ರಾಗಿಮುದ್ದೆಯನ್ನು ತಿನ್ನಲು ಬಾರದೆ ತಾನು ಪಟ್ಟ ಪಾಡಿನ ಬಗ್ಗೆ, ಆಗಾಗ ನಮಗೆಲ್ಲ ತಿಳಿಸುತ್ತಿದ್ದ.
ಇಲ್ಲಿ (ಅಟ್ಲಾಂಟಾ) ಉತ್ತರಪ್ರದೇಶದ ಕಡೆಯ ರೂಮ್ ಮೇಟ್ ಒಬ್ಬನಿಗೆ, “ರಾಗಿ ಮುದ್ದೆಯನ್ನು ಅಗಿಯದೆ, ನುಂಗಿ ತಿನ್ನಬೇಕೆಂದು” ಹೇಳಿದರೆ — “ಅಷ್ಟು ದೊಡ್ಡ ಮುದ್ದೆಯನ್ನು ಒಂದೇ ಸಾರಿಗೆ ನುಂಗುವುದು ಹೇಗೆ?” ಎಂದು ಮುಗ್ಧವಾಗಿ ಕೇಳಿದ್ದ. ಆದರೆ, ಕಾಲ ಕಳೆದಂತೆ ಅವನಿಗೂ ನಮ್ಮಂತೆ ರಾಗಿಮುದ್ದೆ, ಬಸ್ಸಾರುಗಳು ಪ್ರಿಯವೆನಿಸಿದುವು.
ಹಾಗೆ ನೋಡಿದರೆ, ರಾಗಿಮುದ್ದೆಯನ್ನು ತಯಾರಿಸುವುದು ಅತ್ಯಂತ ಸುಲಭ:
ಅಷ್ಟು ನೀರನ್ನು ಕಾಯಲಿಟ್ಟು, ಅದಕ್ಕೆ ಒಂದೊ ಎರಡೊ ಚಮಚದಷ್ಟು ರಾಗಿಹಿಟ್ಟನ್ನು ಹಾಕಿ, ಕುದಿಯಲಿಡಬೇಕು. ಇದಕ್ಕೆ ಒಂದು ಚಿಟಿಕೆ ಉಪ್ಪನ್ನೂ ಸೇರಿಸಬಹುದು; ಇದನ್ನು ನಮ್ಮಕಡೆ ಹಿಟ್ಟಿನೆಸರು ಎನ್ನುತ್ತಾರೆ. ರಾಗಿಮುದ್ದೆಯನ್ನು ಕಟ್ಟಲು ಬನಿಯಾಗುವಂತೆ ಮಾಡುವುದು ಇದೇ.
ಕೆಲವೊಮ್ಮೆ — ಹಿಟ್ಟಿನೆಸರನ್ನು ಇಡುವಾಗ, ಅದಕ್ಕೆ ಸ್ವಲ್ಪ ಉದುರಾದ ಅನ್ನವನ್ನೂ ಸೇರಿಸುವುದುಂಟು. ಬರಿಯ ರಾಗಿಮುದ್ದೆಗಿಂತ, ಹೀಗೆ ಅನ್ನದ ಅಗುಳುಗಳೂ ಇರುವ ಮುದ್ದೆ ಸ್ವಲ್ಪ ವಿಭಿನ್ನವಾಗಿರುತ್ತೆ ಎಂದಿರಬಹುದು!
ಹಿಟ್ಟಿನೆಸರು ಕುದಿ ಬಂದಾಗ, ಸ್ವಲ್ಪ ತುಪ್ಪವನ್ನೂ, ಸಾಕಾಗುವಷ್ಟು ರಾಗಿಹಿಟ್ಟನ್ನೂ ಹಾಕಬೇಕು; ಆ ಕುದಿಯು ಒಂದೆರಡು ಕ್ಷಣದಷ್ಟರಲ್ಲಿ, ಹಾಕಿದ ಹಿಟ್ಟನ್ನಿಷ್ಟು ತೋಯಿಸುತ್ತದೆ. ಆಗೊಮ್ಮೆ ಬಲವಾದ ಸಟ್ಟುಗದಿಂದ ಚೆನ್ನಾಗಿ ಬೆರೆಸಿ/ತೊಳಸಿ, ಪಾತ್ರೆಯ ಮೇಲೆ ಮುಚ್ಚಳವಿಟ್ಟು ಒಂದೆರಡು ನಿಮಿಷ -ಹಬೆಯಲ್ಲೆ- ಬೇಯಲು ಬಿಡಬೇಕು. ಬೇಕೆನಿಸಿದರೆ, ಈ ಮಧ್ಯದಲ್ಲಿ ಮತ್ತೊಮ್ಮೆ ಹಿಟ್ಟನ್ನು ಚೆನ್ನಾಗಿ ತೊಳಸಬಹುದು.
ಹೀಗೆ, ಹಬೆಯಲ್ಲಿಯೆ ಒಂದಷ್ಟು ಹೊತ್ತು ಹಿಟ್ಟು ಬೆಂದನಂತರ, ಅಗಲವಾದ ಹರಿವಾಣದ ಮೇಲೊ ಅಥವಾ ಚೆನ್ನಾಗಿ ತೊಳೆದ ಮಣೆಯ ಮೇಲೊ ಅದನ್ನು ಸುರುವಿಕೊಂಡು, ಹಿಟ್ಟನ್ನು ಚೆನ್ನಾಗಿ ನಾದಬೇಕು. ಕೈಗೆ ಬಿಸಿ ತಾಕದಂತಿರಲು, ಕೈಯನ್ನು ನೀರಿನಲ್ಲದ್ದಿಕೊಂಡು, ಹಿಟ್ಟನ್ನು ನಾದಬಹುದು. ಹಿಟ್ಟನ್ನು ಚೆನ್ನಾಗಿ ನಾದಿದ ನಂತರ, ನಮಗೆ ಬೇಕೆನಿಸಿದ ಗಾತ್ರದ ಮುದ್ದೆಯನ್ನು ಕಟ್ಟಿಕೊಳ್ಳಬಹುದು.
ಈಗೇನು — ಮೂರೊ ನಾಲ್ಕೊ ಮುದ್ದೆ ತಯಾರಿಸಲು, ಯಾವ ಪಾತ್ರೆ ಬಳಸಿದರೂ ಆದೀತು. ಯಾವ ಸೌಟನ್ನು ಬಳಸಿದರೂ ಆದೀತು. ಆದರೆ, ಚಿಕ್ಕಂದಿನಿಂದ ನಾನು ಕಂಡಿದ್ದ, ಕೇಳಿದ್ದ ಸಂಗತಿ ಬೇರೆಯದಿತ್ತು. ನಾನು ಹುಟ್ಟುವುದಕ್ಕೂ ಮುಂಚಿನ ಕಾಲಕ್ಕೆ, ನಮ್ಮ ಮನೆಯಲ್ಲೆ ಹನ್ನೆರಡು ಜನರಿದ್ದರಂತೆ. ಅಷ್ಟು ಜನರಿಗಾಗುವಷ್ಟು ಮುದ್ದೆ ತಯಾರಿಸುವುದು ಅಷ್ಟೇನೂ ಸಲೀಸಾದ ಕೆಲಸವಲ್ಲೆಂದು ಕೇಳಿಯೆ ಅಂದುಕೊಂಡಿದ್ದೆ, ನಾನು.
ಆಗೆಲ್ಲ — ಸಾಮಾನ್ಯವಾಗಿ, ಪ್ರತಿ ಮನೆಯಲ್ಲೂ ರಾಗಿಮುದ್ದೆಯನ್ನು ತಯಾರಿಸಲೆಂದೇ ಮೀಸಲಾದ ತಪ್ಪಲೆಯೊ ಮಡಕೆಯೊ ಇರುತ್ತಿತ್ತು. ಅದನ್ನು ‘ಹಿಟ್ಟಿನ ತಪ್ಪಲೆ’ ಎಂದೇ ಕರೆಯುತ್ತಿದ್ದರು. ಇನ್ನು, ಹಿಟ್ಟನ್ನು ತೊಳಸಲು, ಬಡಗಿಯ ಕೈಯಲ್ಲಿ ನುಣುಪಾಗಿ ತಯಾರು ಮಾಡಿಸಿದ, ಗಟ್ಟಿಯಾದ ಕೋಲೊಂದನ್ನು ಬಳಸಲಾಗುತ್ತಿತ್ತು. ಇದನ್ನು ‘ಹಿಟ್ಟಿನ ದೊಣ್ಣೆ’ ಎನ್ನುತ್ತಿದ್ದರು.
ಹಿಟ್ಟನ್ನು ತಯಾರಿಸುತ್ತಿದ್ದ ಪಾತ್ರೆ ದೊಡ್ಡದಿರುತ್ತಿತ್ತೆಂದೊ, ಅಥವಾ ಹೆಚ್ಚು ಮುದ್ದೆಗಳನ್ನು ತಯಾರಿಸುತ್ತಿದ್ದರೆಂದೊ — ಹಿಟ್ಟನ್ನು ತೊಳಸುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಅನುಕೂಲವಾಗುವಂತೆ ‘ಕವೆಗೋಲು’ ಎಂಬ ಬೇರೊಂದು ಪರಿಕರವನ್ನು ಬಳಸುತ್ತಿದ್ದರು. ತುದಿಯಲ್ಲಿ ಕವಲಿರುವ ಈ ಕೋಲು, ತಪ್ಪಲೆಯ ಕಂಠಕ್ಕೆ ಹೊಂದುವಂತೆ, ಇಂಗ್ಲಿಷಿನ ‘ವೈ’ (Y) ಆಕಾರದಲ್ಲಿರುತ್ತಿತ್ತು.
ಹಿಟ್ಟನ್ನು ತಯಾರಿಸುವ ಪಾತ್ರೆಯನ್ನು ಯಾವುದಾದರೂ ಗೋಡೆಯೊಂದಕ್ಕೆ ಆನುವಂತಿಟ್ಟು, ಕವೆಗೋಲಿನಿಂದ ಅದನ್ನು ಗಟ್ಟಿಯಾಗಿ -ತಪ್ಪಲೆಯು ಕದಲದ ಹಾಗೆ- ಒತ್ತಿಹಿಡಿಯುತ್ತಿದ್ದರು. ಆಮೇಲೆ, ಹಿಟ್ಟಿನದೊಣ್ಣೆಯನ್ನು ಬಳಸಿ ಹಿಟ್ಟನ್ನು ತೊಳಸುತ್ತಿದ್ದರು. ಮತ್ತೆ, ಹಿಟ್ಟನ್ನು ಮತ್ತೆ ಹಬೆಯಲ್ಲಿ ಬೇಯಿಸಿದ್ದಾದ ನಂತರ, ಅಗಲವಾದ ‘ಹಿಟ್ಟಿನ ಕಲ್ಲು’ ಅಥವಾ ಮಣೆಯ ಮೇಲೆ ಅದನ್ನು ಸುರಿದು, ಚೆನ್ನಾಗಿ ನಾದಿ ಹಿಟ್ಟನ್ನು(ಮುದ್ದೆ) ಕಟ್ಟುತ್ತಿದ್ದರು. ಇವೆಲ್ಲದರ ಜೊತೆಗೆ, ಹಿಟ್ಟಿನ ದೊಣ್ಣೆಗೆ ಅಂಟಿದ ಹಿಟ್ಟನ್ನೂ ಗೀರಿ ತೆಗೆಯಲು — ಅನ್ನದ ಕೈಯಂತೆ ಅಗಲವಾಗಿ, ಸಪಾಟಾಗಿರುವ ಲೋಹದ ಚಮಚವನ್ನು (ಅದನ್ನು ಏನೆಂದು ಕರೆಯುತ್ತಾರೊ ತಿಳಿಯದು!) ಬಳಸುತ್ತಿದ್ದರು. ಹಿಟ್ಟನ್ನೆಲ್ಲ ಕಟ್ಟಿಯಾದ ಮೇಲೆ, ಅವನ್ನು ಹಿಟ್ಟಿನ ತಪ್ಪಲೆಯಲ್ಲಿಟ್ಟು, ಸಿಂಬೆಯೊಂದರ ಮೇಲೆ ಆ ತಪ್ಪಲೆಯನ್ನಿಡುತ್ತಿದ್ದರು.
ಅಂದಹಾಗೆ, ಕೆಲವು ಕಡೆ ಬರಿ ರಾಗಿಯಹಿಟ್ಟಿನಿಂದಲ್ಲದೆ, ಗೋಧಿಹಿಟ್ಟು, ಜೋಳದಹಿಟ್ಟಿನಿಂದಲೂ ಮುದ್ದೆಯನ್ನು ತಯಾರಿಸುವ ಪರಿಪಾಠವಿದೆ. ಆದರೆ, ಅವು ರಾಗಿಮುದ್ದೆಯಂತೆ, ದಿನನಿತ್ಯದ ಆಹಾರವಲ್ಲ. ಎಂದೊ ಅಪರೂಪಕ್ಕೊಮ್ಮೆ ಮಾಡುವ ವಿಶೇಷವಷ್ಟೆ.
ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ — ದೊಡ್ಡದಾದ ಮಡಕೆಯೊಂದನ್ನು ಒಲೆಯ ಮೇಲಿಟ್ಟು, ಅದರಲ್ಲಿ ರಾಗಿ ಮುದ್ದೆಯನ್ನು ತಯಾರಿಸುತ್ತಿದ್ದರು. ಕೌಗೋಲಿನಿಂದ ಆ ಮಣ್ಣಿನ ಮಡಕೆಯನ್ನು ಗೋಡೆಗೆ ಒತ್ತಿಹಿಡಿದು, ಅವರು ಮುದ್ದೆ ತೊಳಸುತ್ತಿದ್ದುದನ್ನು ಕಂಡಾಗಲೆಲ್ಲ ನನಗೆ ಅಚ್ಚರಿಯೋ ಅಚ್ಚರಿ — ಅದು ಹೇಗೆ ಅಷ್ಟೆಲ್ಲ ಬಲಪ್ರಯೋಗ ಮಾಡಿದರೂ ಆ ಮಡಕೆ ಒಡೆದುಹೋಗದಲ್ಲಾ ಎಂದು!