ಮೌಸಲ ಪರ್ವ: ಕೃಷ್ಣನ ಅವಸಾನ — ೩
ಅರ್ಜುನನು ವಸುದೇವನ ಅಂತ್ಯಸಂಸ್ಕಾರಕ್ಕೆ ಏರ್ಪಾಟು ಮಾಡಿದನು. ವಸುದೇವನ ಶವವನ್ನು -ವಿವಿಧ ಹೂಗಳಿಂದ ಸಿಂಗರಿಸಿ, ಬಾಳೆಕಂದುಗಳನ್ನು ಕಟ್ಟಿ ಅಲಂಕರಿಸಿದ ಪಲ್ಲಕ್ಕಿಯೊಂದರಲ್ಲಿರಿಸಿ- ಅಲ್ಲಿಯ ಉದ್ಯಾನವನವೊಂದಕ್ಕೆ ಹೊತ್ತು ತಂದರು. ಅರ್ಜುನನೂ, ಪುರೋಹಿತರೂ ಚಿತೆಗೆ ಬೇಕಾದ ಅಗ್ನಿಗಳನ್ನು ಹಿಡಿದು ಬಂದರು. ಅವರೆಲ್ಲರ ಹಿಂದೆ, ವಸುದೇವನ ಹೆಂಡತಿಯರಾದ ದೇವಕಿ, ರೋಹಿಣಿ, ಭದ್ರಾ ಹಾಗೂ ಮದಿರೆಯರು ಬಂದರು. ಅರ್ಜುನನು ತನ್ನ ಕೈಯಾರೆ ವಸುದೇವನ ಚಿತೆಗೆ ಬೆಂಕಿಯಿಟ್ಟು, ಪಿತೃಕಾರ್ಯವನ್ನು ನೆರವೇರಿಸಿದನು. ಆನಂತರದಲ್ಲಿ ವಸುದೇವನ ಹೆಂಡತಿಯರೆಲ್ಲ ಸಹಗಮನ ಮಾಡಿದರು. ನಂತರದಲ್ಲಿ, ವಜ್ರನೇ ಮುಂತಾದವರಿಂದ ತರ್ಪಣವನ್ನು ಬಿಡಿಸಲಾಯಿತು.
ವಸುದೇವನ ಅಪರಕರ್ಮಕ್ರಿಯೆಗಳು ಮುಗಿಯುತ್ತಿದ್ದಹಾಗೆ, ಅರ್ಜುನನು ಒಂದಷ್ಟು ಜನ ದ್ವಾರಕೆಯ ಪ್ರಜೆಗಳನ್ನೂ, ವಿಪ್ರರನ್ನೂ ಜೊತೆಯಲ್ಲಿಟ್ಟುಕೊಂಡು — ಯಾದವರು ಜಗಳವಾಡಿ ಮಡಿದ ಕಡೆಗೆ ಬಂದನು. ಎಲ್ಲಿ ನೋಡಿದರೂ ಹೆಣಗಳು! ಸ್ತ್ರೀಯರೂ, ಯಾದವ ಪ್ರಮುಖರೂ, ಮಕ್ಕಳೂ ವೃದ್ಧರೂ ಎಂಬ ಭೇದವಿಲ್ಲದೆ ನಾನಾ ಜನ ಅಲ್ಲಿ ಸತ್ತುಬಿದ್ದಿದ್ದಾರೆ. ಅರ್ಜುನನೊಡನೆ ಬಂದವರಲ್ಲಿ ಕೆಲವರು, ಸತ್ತುಬಿದ್ದಿದ್ದ ತಮ್ಮ ಬಂಧುಗಳ ಶವವನ್ನು ಗುರುತಿಸಿ, ಅಳುತ್ತಾ ನೆಲದ ಮೇಲೆ ಕುಸಿದುಬಿದ್ದರು. ಹೀಗೆ, ತಮ್ಮ ಬಂಧುಬಾಂಧವರ ಹೆಣಗಳ ಮೇಲೆ ಬಿದ್ದು ಅಳುತ್ತಿದ್ದವರನ್ನು ಸಮಾಧಾನ ಪಡಿಸಿ, ಅರ್ಜುನನು, ಮಡಿದ ಯಾದವರೆಲ್ಲರ ಅಗ್ನಿಕಾರ್ಯವನ್ನೂ ನೆರವೇರಿಸಿದನು.
ನಂತರ, ಅರ್ಜುನನು ಅಲ್ಲಿದ್ದ ಯಾದವಸ್ತ್ರೀಯರನ್ನೂ ಇತರ ಪೌರರನ್ನೂ ಸಾಂತ್ವನಗೊಳಿಸಿ, ಅವರೆಲ್ಲರನ್ನೂ ದ್ವಾರಕೆಗೆ ತೆರಳಲು ಸೂಚಿಸಿದನು. ಅಲ್ಲಿಯವರೆಲ್ಲರನ್ನೂ ದ್ವಾರಕೆಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ದಾರುಕನಿಗೆ ವಿಧಿಸಿದನು. ಅದಲ್ಲದೆ, ತಾನೂ ಒಂದಷ್ಟು ಜನ ವಿಪ್ರರೂ ಕೂಡಿ — ಕೃಷ್ಣ ಬಲರಾಮರು ತಪಸ್ಸು ಮಾಡುತ್ತಿರುವಲ್ಲಿಗೆ ಹೋಗಿ, ಅವರನ್ನು ಕಂಡು ಬರುವುದಾಗಿ ತಿಳಿಸಿದನು.
ಅವರೆಲ್ಲ ದ್ವಾರಕೆಗೆ ಹೊರಟ ನಂತರ ಅರ್ಜುನನು, ಇತ್ತ, ಕಾಡಿನಲ್ಲಿ ಕೃಷ್ಣಬಲರಾಮರನ್ನು ಹುಡುಕುತ್ತ ನಡೆಯುತ್ತಿದ್ದಾನೆ; ಅವನಿಗೆ ನಾನಾ ಪ್ರಶ್ನೆಗಳೂ ಗೊಂದಲಗಳೂ ತಲೆದೋರುತ್ತಿವೆ. ಕೃಷ್ಣನನ್ನು ಕಂಡಾಗ ಅವನೊಡನೆ ಏನು ಮಾತನಾಡುವುದು? ವಸುದೇವನು ಮಡಿದ ಸಂಗತಿಯನ್ನು ಅವರಿಬ್ಬರಿಗೂ ಹೇಗೆ ತಿಳಿಸುವುದು? ಎಂದು ಮುಂತಾಗಿ ಮನಸ್ಸಿನಲ್ಲೆ ಯೋಚಿಸುತ್ತಿರುವಾಗ, ಅರ್ಜುನನಿಗೆ ಗಾಂಧಾರಿಯ ಮಾತು ನೆನಪಿಗೆ ಬಂತು. “ಯಾರೂ ಇಲ್ಲದ ಕಡೆ ನೀನು ದಿಕ್ಕಿಲ್ಲದವನಂತೆ ಸಾಯುತ್ತೀಯೆ, ಕೃಷ್ಣ!” ಎಂದು ಅವಳು ಶಪಿಸಿದ ದಿನ ತಾನೂ ಹತ್ತಿರದಲ್ಲೆ ಇದ್ದು ಅದನ್ನು ಕೇಳಿದ್ದನಲ್ಲವೆ?
ಅರ್ಜುನನಿಗೆ ಈ ಮಾತು ನೆನಪಾದದ್ದೇ ತಡ, ಎದೆಯೆಲ್ಲ ದುಃಖದಿಂದ, ಮೊಗವೆಲ್ಲ ಕಣ್ಣೀರಿನಿಂದ ತುಂಬಿಹೋಯಿತು. ಹುಚ್ಚು ಹತ್ತಿದವನ ಹಾಗೆ ಎಲ್ಲೆಂದರಲ್ಲಿ ನಡೆಯುತ್ತ ಸಾಗಿದ. ಅರ್ಜುನನ ಈ ವಿಹ್ವಲಸ್ಥಿತಿಯನ್ನು ಕಂಡ ಬ್ರಾಹ್ಮಣರಿಗೆ “ಹೋಗಬೇಕಾದ ದಾರಿ ಆ ಕಡೆಯಲ್ಲ, ಈ ಕಡೆ!” ಎಂದು ಅವನಿಗೆ ತಿಳಿಸಲೂ ಹೆದರಿದರು. ಹೀಗೆ, ಒಂದೆರಡು ದಿನಗಳವರೆಗೆ ದಿಕ್ಕಲ್ಲದ ದಿಕ್ಕಿನಲ್ಲಿ ನಡೆದಾಡುತ್ತ ಬರುವಾಗ, ಅವರೆಲ್ಲ ಒಬ್ಬ ಬೇಡನನ್ನು ಕಂಡರು. ಅವನು ಇವರನ್ನು ತಡೆದು, ಎಲ್ಲಿಗೆ ಹೋಗುತ್ತಿದ್ದಾರೆಂದೆಲ್ಲ ವಿಚಾರಿಸಿ ತಿಳಿದುಕೊಂಡು, “ಮೊನ್ನೆ ಒಮ್ಮೆ ಕಾಡಿನ ನಡುವೆ ಒಬ್ಬನನ್ನು ಕಂಡಿದ್ದೆ. ಬೇಕಿದ್ದರೆ ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವೆ. ಆದರೆ, ಆತ ಇನ್ನೂ ಅಲ್ಲೇ ಇರುತ್ತಾನೊ ಏನೊ ನನಗೆ ತಿಳಿಯದು” ಎಂದ.
ಅವರೆಲ್ಲ ಬೇಡನು ತೋರಿದ ದಾರಿಯಲ್ಲೆ ನಡೆದು ಬಂದರು; ಅಲ್ಲಿ ಹತ್ತಿರದಲ್ಲೆ ಮರವೊಂದರ ಬುಡದಲ್ಲಿ, ಕೃಷ್ಣನನ್ನು ಕಂಡರು. ಕೃಷ್ಣನು ಗತಿಸಿ ಎಷ್ಟೊ ದಿನಗಳೆ ಕಳೆದಿದ್ದರೂ, ಅವನ ದೇಹದ ಯಾವ ಅಂಗಕ್ಕೂ ಯಾವುದೇ ರೀತಿಯ ಚ್ಯುತಿಯೂ ವಿಕಾರತೆಯೂ ಬಂದಿರಲಿಲ್ಲ. ಶಾಂತ ಶುಭ್ರವಾಗಿ — ಆಗಷ್ಟೇ ಮಲಗಿದ್ದಾನೊ ಏನೊ ಎಂಬಂತೆ ಕಾಣುತ್ತಿದೆ, ಅವನ ದೇಹ. ಕೃಷ್ಣನ ದೇಹವನ್ನು ಕಂಡದ್ದೇ ತಡ, ಅರ್ಜುನನ ಶಕ್ತಿಯೆಲ್ಲ ಉಡುಗಿಹೋಗಿ, ಅವನು ಮೂರ್ಛಿತನಾಗಿ ಕುಸಿದುಬಿದ್ದ.
ಸ್ವಲ್ಪ ಸಮಯದ ನಂತರ — ನೆರೆಯವರ ಉಪಚಾರದಿಂದ ಚೇತರಿಸಿಕೊಂಡು ಎದ್ದ ಅರ್ಜುನನು, ಕೃಷ್ಣನ ದೇಹವನ್ನು ಅಪ್ಪಿ, ತನ್ನ ತೊಡೆಯ ಮೇಲಿಟ್ಟುಕೊಂಡು ಮೌನವಾಗಿ — ಆಗೊಮ್ಮೆ ಈಗೊಮ್ಮೆ ನಿಟ್ಟುಸಿರು ಬಿಡುತ್ತ, ಕಂಬನಿಗರೆಯುತ್ತ ಕುಳಿತುಬಿಟ್ಟ. ಅರ್ಜುನನ ಮನಸ್ಸಿನಲ್ಲಿ ನೂರಾರು ಯೋಚನೆಗಳು, ಕಣ್ಣ ಮುಂದೆಲ್ಲ ಗತಕಾಲದ ಅನಂತ ಚಿತ್ರಗಳು. ಅವನ ಚಿತ್ತವು ಮತ್ತೆಮತ್ತೆ “ಹೀಗೇಕಾಯಿತು ಹೀಗೇಕಾಯಿತು…” ಎಂದು ಪರಿತಪಿಸುತ್ತಿದೆ.
ಅರ್ಜುನನೊಡನೆ ಬಂದಿದ್ದವರಿಗೂ ಅತೀವ ದುಃಖ; ಆದರೆ ಮುಂದೆ ನಡೆಸಬೇಕಾದ ಕಾರ್ಯಗಳನ್ನು ನಡೆಸಲೇಬೇಕಲ್ಲ. ಅವರೆಲ್ಲ ಎಷ್ಟೊ ಪ್ರಯತ್ನದಿಂದ ಅರ್ಜುನನ್ನು ಸಂತೈಸಿದರು. ಆಮೇಲೆ, “ಅರ್ಜುನ, ಮುಂದೇನು ಮಾಡುವುದು? ಕೃಷ್ಣನ ಪರಿವಾರದವರನ್ನೆಲ್ಲ ಇಲ್ಲಿಗೇ ಕರೆಸಿ ಸಂಸ್ಕಾರ ಮಾಡುವುದೋ ಅಥವಾ ಕೃಷ್ಣನನ್ನು ದ್ವಾರಕೆಗೇ ಕೊಂಡೊಯ್ಯುವುದೋ?” ಎಂದು ಕೇಳಿದರು.
ಅರ್ಜುನನಿಗೆ ಈಗ ನೆನಪಾಯಿತು — ದ್ವಾರಕೆಯು ಮುಳುಗಿಹೋಗಲಿಕ್ಕೆ ಇನ್ನು ಹೆಚ್ಚಿನ ಸಮಯವೇನಿಲ್ಲವೆಂದು. ವಸುದೇವನಿಂದ ಕೇಳಿ ತಿಳಿದಿದ್ದ ಪ್ರಕಾರ, ಲೆಕ್ಕ ಹಾಕಿದರೆ ನಾಳೆ ಮುಂಜಾನೆಯಷ್ಟರಲ್ಲಿ ದ್ವಾರಕೆಯು ನೀರಿನಲ್ಲಿ ಮುಳುಗಿಹೋಗಲಿದೆ! ಇನ್ನು ಈಗ ಇಂತಹ ಸಮಾಚಾರವನ್ನು ತಿಳಿಸಿದರೆ ದ್ವಾರಕಾನಗರದ ನಿವಾಸಿಗಳಾರೂ (ಇಂದ್ರಪ್ರಸ್ಥಕ್ಕೆ) ಹೊರಡಲಾರರು. ರುಕ್ಮಿಣಿ, ಸತ್ಯಭಾಮೆ ಮುಂತಾದವರಿಗೆ ಸಂಗತಿ ತಿಳಿದರೆ ಪರಿಸ್ಥಿತಿ ಇನ್ನೂ ವಿಷಮಿಸುತ್ತದೆ. ಜೊತೆಗೆ, “ತಿಳಿದೂತಿಳಿದೂ ಅರ್ಜುನನು ದ್ವಾರಕೆಯ ಜನರನ್ನು ರಕ್ಷಿಸಲಿಲ್ಲ”ವೆಂಬ ಅಪವಾದವುಳಿಯುತ್ತದೆ. ಹಾಗೂ, ಕೃಷ್ಣನು ತನಗೆ ಒಪ್ಪಿಸಿದ ಕೊನೆಯ ಕೆಲಸವನ್ನೂ ನೆರವೇರಿಸಲಿಲ್ಲವೆಂಬ ಕೊರಗು ತನ್ನನ್ನಿನ್ನು ಸದಾ ಕಾಡುತ್ತದೆ. ಅದಕ್ಕೆ, ಅರ್ಜುನನು ಅಲ್ಲಿದ್ದ ವಿಪ್ರರಿಗೆ ಹೀಗೆಂದು ಹೇಳಿದ:
“ಬ್ರಾಹ್ಮಣೋತ್ತಮರೆ! ಇರುವ ಸಂಗತಿ ನಿಮಗೆಲ್ಲ ತಿಳಿದೇ ಇದೆ; ನಾವು ಇಲ್ಲಿಯೇ ಕೃಷ್ಣನ ಅಂತ್ಯಸಂಸ್ಕಾರವನ್ನು ನೆರವೇರಿಸಿ ದ್ವಾರಕೆಗೆ ಹೋಗೋಣ. ಅಲ್ಲಿಯವರಿಗೆ — ನಾವು ಕೃಷ್ಣ-ಬಲರಾಮರನ್ನು ಭೇಟಿಯಾಗಿದ್ದಾಗಿಯೂ, ಅವರು ‘ದ್ವಾರಕೆಯವರೆಲ್ಲರೂ ಕೂಡಲೇ ಇಂದ್ರಪ್ರಸ್ಥಕ್ಕೆ ಹೊರಡಬೇಕೆಂದು’ ಪದೇಪದೇ ಸೂಚಿಸಿದರೆಂದೂ ತಿಳಿಸಿ, ಈ ರಾತ್ರಿಯೇ ದ್ವಾರಕೆಯಿಂದ ಹೊರಟುಬಿಡೋಣ. ಮುಂದೆ ಎಲ್ಲರೂ ಸುರಕ್ಷಿತವಾಗಿ ಊರನ್ನು(ಇಂದ್ರಪ್ರಸ್ಥ) ಸೇರಿದ ನಂತರ ನಾನೇ ಎಲ್ಲರಿಗೂ ನಡೆದ ಸಂಗತಿಯನ್ನು ತಿಳಿಸುತ್ತೇನೆ. ಅಲ್ಲಿಯವರೆಗೂ ಕೃಷ್ಣನ ಮರಣದ ವಾರ್ತೆಯು ಬೇರೆ ಯಾರಿಗೂ ತಿಳಿಯುವುದು ಬೇಡ”.
ಅತ್ತ, ಅಷ್ಟರಲ್ಲಿ ಸೂರ್ಯಾಸ್ತವಾಗುವ ಸಮಯ ಹತ್ತಿರಾಗಿತ್ತು. ಆದ್ದರಿಂದ, ಕೂಡಲೇ ಎಲ್ಲರೂ ಕಾರ್ಯಪ್ರವೃತ್ತರಾಗಿ, ಸೌದೆಗಳನ್ನು ಸೇರಿಸಿ, ಪಿತೃಯಜ್ಞವನ್ನು ನೆರವೇರಿಸಿ — ಕೃಷ್ಣನ ದೇಹವನ್ನು ಅಗ್ನಿಗರ್ಪಿಸಿದರು. ಮುಂದೆ, ಅವರು ಬಲರಾಮನ ದೇಹವನ್ನೂ ಹುಡುಕಿ, ಅವನ ದೇಹಕ್ಕೂ ಯುಕ್ತ ರೀತಿಯಲ್ಲಿ ಸಂಸ್ಕಾರವನ್ನು ನೆರವೇರಿಸಿ, ದ್ವಾರಕೆಗೆ ಮರಳಿದರು.
ತಾವಂದುಕೊಂಡಿದ್ದಹಾಗೆಯೆ, ದ್ವಾರಕಾನಿವಾಸಿಗಳೆಲ್ಲರಿಗೂ ಕೂಡಲೆ ಹೊರಡುವಂತೆ ತಿಳಿಸಿ, ಬೆಳಗಿನ ಜಾವಕ್ಕೂ ಮುಂಚೆಯೆ ಅವರೆಲ್ಲ ಹೊರಟು ಇಂದ್ರಪ್ರಸ್ಥದ ಕಡೆಗೆ ಸಾಗಿದರು. ರುಕ್ಮಿಣಿ, ಸತ್ಯಭಾಮೆ ಮೊದಲಾದ ಕೃಷ್ಣನ (೮)ಪಟ್ಟಮಹಿಷಿಯರೂ, ೧೬೦೦೦ ಹೆಂಡತಿಯರೂ, ಬಲರಾಮನ ನಾಲ್ಕೂ ಜನ ಹೆಂಡತಿಯರೂ, ಇತರ ಯಾದವ ಸ್ತ್ರೀಯರೂ, ವಜ್ರ ಮೊದಲಾದ ಮಕ್ಕಳೂ, ವೃದ್ಧರೂ, ಆಳುಕಾಳುಗಳ ಸಮೇತ ವಿವಿಧ ವಾಹನಾದಿಗಳಲ್ಲಿ ಕುಳಿತು ಸಾಗಿದರು. ಇವರೆಲ್ಲ ದ್ವಾರಕೆಯನ್ನು ದಾಟುವ ಹೊತ್ತಿಗೆ ಸೂರ್ಯೋದಯದ ಹೊತ್ತು ಸಮೀಪಿಸಿತ್ತು. ಅತ್ತ ಸೂರ್ಯನು ಉದಯಗಿರಿಗೆ ಬರುತ್ತಿದ್ದಂತೆಯೇ ಇಡೀ ದ್ವಾರಕೆಯು ನೀರಿಗೆ ಆಹುತಿಯಾಯಿತು. ತಮ್ಮ ನಗರವು ಹಾಗೆ ಸಮುದ್ರದ ಪಾಲಾದುದನ್ನು ದ್ವಾರಕೆಯ ಜನರೆಲ್ಲ ಒಂದು ಎತ್ತರದ ಪರ್ವತದ ಮೇಲೆ ನಿಂತು ನೋಡಿದರು. ನಡೆದುದ್ದನ್ನು ಕಂಡಾಗಿನ ಜನರ ಆಕ್ರಂದನವು ಆ ಸಮುದ್ರದ ಮೊರೆತವನ್ನೂ ಮೀರುವಂತೆ ಕೇಳಿಸುತ್ತಿತ್ತು.
ತನ್ನ ಕೃಷ್ಣನು ಜೀವಿಸಿದ್ದ ನಗರವು ಒಂದಿನಿತೂ ಉಳಿಯದಂತೆ ಸಾಗರದ ಗರ್ಭಕ್ಕೆ ಸೇರಿಹೋದುದನ್ನು ಕಂಡು ಅರ್ಜುನನ ದುಃಖಕ್ಕೆ ಪಾರವೇ ಇಲ್ಲದಾಯಿತು.
ಎಲ್ಲರೂ ಪಂಚವಟವೆಂಬಲ್ಲಿಗೆ ಬಂದು ಬೀಡು ಬಿಟ್ಟರು. ದುರ್ದೈವ! ಅಲ್ಲಿ ಇವರ ಪರಿವಾರವನ್ನು ಕಂಡ ಡಕಾಯಿತ ದಸ್ಯುಗಳ ಗುಂಪೊಂದು — ಇವರಲ್ಲಿದ್ದ ಹಣವನ್ನೂ, ಹೆಣ್ಣುಮಕ್ಕಳನ್ನೂ ದೋಚಲು ಸಂಚು ಹೂಡಿದರು.
“ಹೇಗಿದ್ದರೂ ಬರೀ ವಯಸ್ಸಾಗಿರುವವರು, ಮಕ್ಕಳು, ಹೆಂಗಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ; ಅವರನ್ನು ಕಾಯಲು ಸೈನಿಕರಾರೂ ಇಲ್ಲ. ಇರುವವರೂ ಕೆಲವೇ ಮಂದಿ, ಅದರಲ್ಲಿ ಅವನೊಬ್ಬನನ್ನು (ಅರ್ಜುನ) ನಿಭಾಯಿಸಿದರೆ ಸಾಕು, ಉಳಿದ ಕೆಲಸ ಸುಲಭವಾಗಿ ಸಾಧಿಸಬಹುದು” ಎಂದು ಬಗೆದ ಡಕಾಯಿತರ ಗುಂಪು ಅವರ ಮೇಲೆ ದಾಳಿ ಮಾಡಿ, ಯಾದವ ಸ್ತ್ರೀಯರನ್ನು ಕಾಡುತ್ತ, ಅವರ ಬಳಿಯಿದ್ದ ಹಣ ಒಡವೆಗಳನ್ನೆಲ್ಲ ದೋಚಲು ಶುರುಮಾಡಿದರು.
ಅರ್ಜುನನು ಅವರನ್ನು ಹೆದರಿಸಿ ಓಡಿಸಲು ಪ್ರಯತ್ನಿಸುತ್ತ, ತನ್ನ ಗಾಂಡೀವದಿಂದ ನಾನಾ ಬಗೆಯ ಬಾಣಗಳ ಮಳೆಗರೆದ. ಆದರೆ, ವಿಧಿಯ ಬಲವು ಕ್ರೂರವಾಗಿತ್ತು; ಆದ್ದರಿಂದ, ಅರ್ಜುನನು ಪ್ರಯೋಗಿಸಿದ ಬಾಣಗಳು ದಸ್ಯುಗಳಿಗೆ ಏನೂ ಮಾಡಲಿಲ್ಲ. ತನ್ನ ಬಾಣಗಳು ಹಾಗೆ ವ್ಯರ್ಥವಾದುದನ್ನು ಕಂಡು, ಅರ್ಜುನನು ಅಚ್ಚರಿಪಟ್ಟು, ಮಂತ್ರಾಸ್ತ್ರಗಳನ್ನು ಪ್ರಯೋಗಿಸಲು ಪ್ರಯತ್ನಿಸಿದನು. ಆದರೆ, ಅವನಿಗೆ ಆ ಕ್ಷಣಕ್ಕೆ ಯಾವ ಮಂತ್ರಗಳೂ ನೆನಪಾಗಲಿಲ್ಲ. ಕೊನೆಗೆ, ಬರಿಯ ಬಾಣಗಳನ್ನೇ ಪ್ರಯೋಗಿಸಿ, ದಸ್ಯುಗಳನ್ನೆದುರಿಸಿದನು. ಆ ಬಾಣಗಳ ರಾಶಿಯೂ ಬಹಳ ಬೇಗ ಮುಗಿದುಹೋದುವು. ಆದರೆ, ಕಳ್ಳರ ಗುಂಪಿಗೆ ಯಾವ ನೋವೂ ಉಂಟಾಗಲಿಲ್ಲ. ಅವರೆಲ್ಲ ಸಾಕುಬೇಕಾದಷ್ಟು ಹಣವನ್ನೂ, ಹೆಂಗಸರನ್ನೂ ಕದ್ದೊಯ್ದರು.
ಅರ್ಜುನನು ರುಕ್ಮಿಣಿ ಮೊದಲಾದ ಯಾದವಸ್ತ್ರೀಯರು ಕೆಲವರನ್ನು ಮಾತ್ರ ಕಾಪಾಡಲು ಶಕ್ತನಾದನು. ಉಳಿದ ಹೆಂಗಸರನ್ನೂ, ಮಕ್ಕಳನ್ನೂ ವೃದ್ಧರನ್ನೂ ಕರೆದುಕೊಂಡು ಹೇಗೊ ಬಂದು ಕುರುಕ್ಷೇತ್ರವನ್ನು ತಲುಪಿದನು.
ಅಲ್ಲಿ, ಕೃತವರ್ಮನ ಮಗನಿಗೆ ಮೃತ್ತಿಕಾವತಿ ರಾಜ್ಯಕ್ಕೆ ರಾಜನನ್ನಾಗಿ ಪಟ್ಟ ಕಟ್ಟಿ, ಕೃತವರ್ಮನ ಮಕ್ಕಳೂ ಬಂಧುಗಳೂ ಆ ನಗರಕ್ಕೆ ಹೋಗಿ ಜೀವಿಸಬಹುದೆಂದು ಅವರನ್ನು ಕಳುಹಿಸಿದನು. ಆನಂತರ ಸಾತ್ಯಕಿಯ ಮಗನಿಗೆ ಸರಸ್ವತಿಯೆಂಬ ರಾಜ್ಯದ ಅಧಿಕಾರವನ್ನು ವಹಿಸಿ, ಅವರನ್ನೂ ಅವರ ಬಂಧುಗಳನ್ನೂ ಅಲ್ಲಿಗೆ ಕಳುಹಿಸಿದನು. ಅರ್ಜುನನು ಮಿಕ್ಕವರೊಡನೆ ಇಂದ್ರಪ್ರಸ್ಥಕ್ಕೆ ಬಂದು, ಅಲ್ಲಿ ವಜ್ರನಿಗೆ (ಅನಿರುದ್ಧನ ಮಗ) ಇಂದ್ರಪ್ರಸ್ಥದ ರಾಜ್ಯಭಾರವನ್ನು ವಹಿಸಿಕೊಟ್ಟನು.
ಕೆಲವು ದಿನಗಳು ಕಳೆದುವು. ಅರ್ಜುನನು ತನ್ನೊಡನಿದ್ದ ಕೆಲವರನ್ನು ಕರೆದುಕೊಂಡು ಯಾದವಸ್ತ್ರೀಯರ ಬಳಿಗೆ ಹೋಗಿ, ಅಂದು ತಾವೆಲ್ಲ ರಾಮ-ಕೃಷ್ಣರನ್ನು ಹುಡುಕುತ್ತ ಕೆಲವು ದಿನಗಳು ಕಳೆದುದನ್ನೂ, ಆನಂತರ, ಬೇಡನ ಜೊತೆಗೆ — ಅವನು ತೋರಿದ ಸ್ಥಳಕ್ಕೆ ಹೋದುದರ ಬಗ್ಗೆಯೂ ಹೇಳಿದ. ಅಷ್ಟರಲ್ಲಿ ಅರ್ಜುನನು ಗದ್ಗದಿತನಾಗಿ, ಏನನ್ನೂ ಹೇಳಲಾಗದೆ ತಲೆತಗ್ಗಿಸಿ ನಿಂತ.
ಅರ್ಜುನನ ಚರ್ಯೆಯನ್ನು ಕಂಡು, ಕೃಷ್ಣನು ಗತಿಸಿದನೆಂಬ ವಿಷಯವು ಯಾದವಸ್ತ್ರೀಯರಿಗೆ ಹೊಳೆಯಿತು. ಅವರೆಲ್ಲರ ಎದೆಯು ದುಃಖದಿಂದ ತುಂಬಿಹೋಯಿತು. ಆದರೂ ಸಾವರಿಸಿಕೊಂಡು, “ಮಗೂ ಅರ್ಜುನ! ಹೀಗೇಕೆ ಮೂಕನಾದೆ? ಕಾಲವೈಪರೀತ್ಯದಿಂದಾಗುವ ಘಟನೆಯನ್ನು ಯಾರು ತಪ್ಪಿಸಬಲ್ಲರಪ್ಪಾ. ಮುಂದೆ ಏನಾಯಿತೆಂದು ಹೇಳು.” ಎಂದು ಕೇಳಿಕೊಂಡರು.
ಅರ್ಜುನನು ಅವರಿಗೆ ನಡೆದುದೆಲ್ಲವನ್ನೂ ನಿವೇದಿಸಿ, ತನ್ನ ತಪ್ಪನ್ನು ಕ್ಷಮಿಸಬೇಕೆಂದು ಕೇಳುತ್ತ — ಅವರಿಗೆ ಸಾಷ್ಟಾಂಗವೆರಗಿದ. ರುಕ್ಮಿಣಿ ಮೊದಲಾದವರು ಅರ್ಜುನನ್ನೆತ್ತಿ ಸಂತೈಸಿ, “ನಡೆದುದಕ್ಕಾಗಿ ಚಿಂತಿಸಬೇಡ; ಇನ್ನು ಮುಂದೆ ನಡೆಸಬೇಕಾಗಿರುವ ಕೆಲಸದ ಬಗೆಗಷ್ಟೇ ನಾವು ಯೋಚಿಸೋಣ” ಎಂದು ಸಮಾಧಾನ ಪಡಿಸಿದರು.
ಮುಂದೆ, ರುಕ್ಮಿಣಿ ಜಾಂಬವತಿ ಮೊದಲಾದ ಕೃಷ್ಣನ ಭಾರ್ಯೆಯರು ತಾವು ಸಹಗಮನವನ್ನು (ಅನುಗಮನ) ಆಚರಿಸುವುದಾಗಿ ನಿರ್ಧರಿಸಿದರು. ಅರ್ಜುನನು ಅದಕ್ಕೆ ಬೇಕಾದ ವಸ್ತು-ವಸ್ತ್ರಗಳನ್ನೂ, ಗಂಧದ ಚಕ್ಕೆ ಮೊದಲಾದ ಇಂಧನಗಳನ್ನೂ ತರಿಸಿಕೊಟ್ಟನು. ಸತ್ಯಭಾಮೆ ಮೊದಲಾದ ಕೆಲವರು ಯಾದವಸ್ತ್ರೀಯರು ತಪಸ್ಸನ್ನಾಚರಿಸಲು ವನಕ್ಕೆ ತೆರಳಿದರು.