ಮೌಸಲ ಪರ್ವ: ಕೃಷ್ಣನ ಅವಸಾನ — ೧
ಒಮ್ಮೆ ನಾರದ, ಕಣ್ವಮಹರ್ಷಿ ಹಾಗೂ ವಿಶ್ವಾಮಿತ್ರರು, ಕೃಷ್ಣನನ್ನು ಕಾಣಲೆಂದು ದ್ವಾರಕೆಗೆ ಬಂದರು. ಅವರನ್ನು ಕಂಡ ಕೆಲವು ಯಾದವ ಯುವಕರು, ಅವರನ್ನು ಕೀಟಲೆ ಮಾಡಲು ಬಯಸಿ, ಸಾಂಬನಿಗೆ (ಕೃಷ್ಣನ ಮಗ) ಹೆಣ್ಣಿನ ವೇಷ ತೊಡಿಸಿ, ಅವನನ್ನು ಆ ಮಹರ್ಷಿಗಳ ಬಳಿಗೆ ಕರೆತಂದರು.
ಅವರು, ಹೆಣ್ಣಿನ ವೇಷದಲ್ಲಿದ್ದ ಸಾಂಬನನ್ನು ಋಷಿಗಳಿಗೆ ತೋರಿಸಿ, “ಇವಳು ನಮ್ಮ ಬಭ್ರುವಿನ ಹೆಂಡತಿ; ಇವಳಿಗೆ ಮಕ್ಕಳಾಗುವ ಯೋಗ ಇದೆಯೊ ಇಲ್ಲವೊ ಸ್ವಲ್ಪ ನೋಡಿ ಹೇಳಿ” ಎಂದು ಕೇಳಿಕೊಂಡರು. ಆ ಪುಂಡುಹುಡುಗರ ಕೃತ್ರಿಮವನ್ನರಿತ ಕಣ್ವರು “ಹೆಣ್ಣಿನ ವೇಷದಲ್ಲಿರುವ ಈ ಸಾಂಬನು, ಯಾದವಕುಲಕ್ಷಯಕ್ಕೆ ಕಾರಣವಾಗುವಂತಹ ಒನಕೆಯೊಂದಕ್ಕೆ ಜನ್ಮ ನೀಡುತ್ತಾನೆ. ಅದರ ಬಲದಿಂದ — ಕೃಷ್ಣ ಬಲರಾಮನನ್ನುಳಿದು, ಮಿಕ್ಕ ಯಾದವರೆಲ್ಲ ಸಾವನ್ನಪ್ಪುತ್ತಾರೆ. ಬಲರಾಮನು ಸರ್ವವನ್ನೂ ತ್ಯಜಿಸಿ ಸಾಗರವನ್ನು ಪ್ರವೇಶಿಸಿ ಸಾಯುತ್ತಾನೆ. ಕೃಷ್ಣನು ನೆಲದ ಮೇಲೆ ಮಲಗಿರುವಾಗ ಜರೆಯೆಂಬ ರಕ್ಕಸಿಯು ಅವನನ್ನು ಆಕ್ರಮಿಸಿ, ಅವನ ಸಾವಿಗೆ ಕಾರಣಳಾಗುತ್ತಾಳೆ; ಇದು ಸತ್ಯ” ಎಂದು ಶಪಿಸಿದರು. ಮುಂದೆ, ಆ ಮೂವರೂ ಕೃಷ್ಣನನ್ನು ಭೇಟಿಯಾಗಲೂ ಮನಸ್ಸಿಲ್ಲದೆ ಅಲ್ಲಿಂದ ನಿರ್ಗಮಿಸಿದರು.
ಆ ಯುವಕರೆಲ್ಲ ಭಯಭೀತರಾಗಿ ವಸುದೇವನಿಗೂ ಕೃಷ್ಣನಿಗೂ ನಡೆದ ಸಂಗತಿಯಷ್ಟನ್ನೂ ತಿಳಿಸಿದರು. ಜೊತೆಗೆ, ತಮ್ಮಿಂದಾದ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಟ್ಟು ಗೋಳಾಡಿದರು.
ಕೃಷ್ಣನಿಗೆ ಇದು ತಿಳಿಯದ ಸಂಗತಿಯೇನಲ್ಲ; ಯಾದವ ಕುಲವು ವಿನಾಶಹೊಂದುವುದೆಂದು ಆತ ಹೇಗೂ ಬಲ್ಲ. ಅದಕ್ಕೇ ಅವನು ಈ ವಿಷಯವಾಗಿ ವಿಚಲಿತನಾಗದೆ “ವಿಧಿಯ ಇಚ್ಛೆಯಿಂದ ಇದು ಹೀಗೆಯೇ ಸಂಭವಿಸಲಿದೆ; ಅದರಲ್ಲಿ ನೀವು ಮಾಡಿದ ತಪ್ಪೇನೂ ಇಲ್ಲ. ಋಷಿಗಳ ಶಾಪ ಸುಳ್ಳಾಗುವುದಿಲ್ಲ” ಎಂದು ಹೇಳಿ ಅವರನ್ನು ಸಮಾಧಾನಪಡಿಸಿದನು.
ಮಾರನೆಯ ದಿನ, ಯಮನ ಮೂರ್ತಿಯೊ ಎಂಬಂತೆ ಕಾಣುವ ಒನಕೆಯೊಂದು ಸಾಂಬನ ಹೊಟ್ಟೆಯಿಂದ ಉದಿಸಿತು. ಯಾದವರೆಲ್ಲ ಈ ವಿಷಯವನ್ನು ವಸುದೇವನಿಗೆ ಬಂದು ತಿಳಿಸಿದರು. ವಸುದೇವನು, ಆ ಒನಕೆಯನ್ನು ಕುಟ್ಟಿ ಪುಡಿ ಮಾಡಿ, ಅದನ್ನು ಸಮುದ್ರಕ್ಕೆಸೆಯುವಂತೆ ಸೂಚಿಸಿದನು. ಅವರೂ ಹಾಗೆಯೆ ಮಾಡಿದರು. ಹಾಗೆ ಮಾಡಿ, ಅವರೆಲ್ಲ ‘ಋಷಿಗಳ ಶಾಪವನ್ನು ಮಾನವಪ್ರಯತ್ನದಿಂದ ಸುಳ್ಳಾಗಿಸಿಬಿಟ್ಟೆ’ವೆಂಬ ಭ್ರಮೆಯಿಂದ ನಿರಾಳವಾಗಿದ್ದರು.
ಪಾಂಡವರು, ಕೌರವರೊಡನೆ ಸಂಧಿ ಮಾಡಿಸಲೆಂದು ಕೃಷ್ಣನನ್ನು ರಾಯಭಾರಿಯಾಗಿ ಕಳುಹಿಸಿದ್ದೂ ಆಯಿತು; ಆ ಸಂಧಿಯ ಪ್ರಯತ್ನವು ಕೈಗೂಡದೆ, ೧೮ ದಿನಗಳ ಕಾಲ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಕಡೆಯವರೆಲ್ಲ ಮಡಿದದ್ದೂ ಆಯಿತು. ಅಶ್ವತ್ಥಾಮ, ಕೃಪ ಹಾಗೂ ಕೃತವರ್ಮರು — ಮಲಗಿದ್ದ (ಪಾಂಡವರ ಕಡೆಯ) ವೀರರನ್ನು ಕೊಂದದ್ದೂ ಆಯಿತು.
ಆ ದಿನ ರಾತ್ರಿ, ಕೃಷ್ಣನು ಗಾಂಧಾರಿಯ ಕೋರಿಕೆಯಂತೆ, ಅವಳ ಕೈಯನ್ನು ಹಿಡಿದು — ಸಮರಾಂಗಣದಲ್ಲಿ ಮಡಿದ ಕೌರವ-ಪಾಂಡವರ ಕಡೆಯ ವೀರರ ಶವಗಳಿದ್ದ ಕಡೆಗೆ ಆಕೆಯನ್ನು ಕರೆತಂದಿದ್ದ. ತಮ್ಮ ಕಡೆಯವರೂ, ಪಾಂಡವರ ಕಡೆಯವರೂ ಅಷ್ಟು ಜನ ಈ ರೀತಿ ದುರ್ಮರಣ ಹೊಂದಲು ದುರ್ಯೋಧನನ ಹಟವೂ, ತಮ್ಮ ಪುತ್ರಪ್ರೇಮವೂ ಹೇಗೆ ಕಾರಣವಾಯಿತೆಂದು ಯೋಚಿಸುತ್ತ ಗಾಂಧಾರಿಯು ಮನಸಾರೆ ರೋದಿಸಿದಳು. ಭೀಷ್ಮ ವಿದುರಾದಿಗಳು ಬುದ್ಧಿಹೇಳಿದರೂ, ತಾವಿಬ್ಬರೂ ಮಗನ ಮೇಲಿನ ಮೋಹದಿಂದ, ಯುದ್ಧವಾಗಲು ಬಿಟ್ಟೆವಲ್ಲ ಎಂದು ಪರಿತಪಿಸಿದಳು.
ಆದರೂ, ಅವಳ ಆ ಶೋಕವೆಲ್ಲ ಅದುಹೇಗೊ ಶ್ರೀ ಕೃಷ್ಣನ ಮೇಲಿನ ಕೋಪವಾಗಿ ಪರಿಣಮಿಸಿ, “ನೀನು ತಿಳಿದೂ ತಿಳಿದೂ ಈ ದಾಯಾದಿಗಳು ಒಬ್ಬರೊಡನೊಬ್ಬರು ಕಾದಾಡಿಕೊಂಡು ಸಾಯುವಂತೆ ಮಾಡಿದೆ. ಸಂಧಿ ಮಾಡಿಸುವ ಅವಕಾಶವಿದ್ದರೂ ನೀನು ಅದನ್ನು ಕೈಗೂಡಲು ಬಿಡಲಿಲ್ಲ. ಇಷ್ಟೆಲ್ಲಾ ಸಾವಿಗೆ ಕಾರಣನಾದ ನೀನು ನನ್ನ ಶಾಪಾಗ್ನಿಗೆ ಗುರಿಯಾಗಬೇಕಾದ ಕಾಲ ಬಂದಿದೆ ನೋಡು..” ಎನ್ನುತ್ತಾ,
“ಯಾವ ರೀತಿ ಕೌರವರೂ ಪಾಂಡವರೂ ತಮ್ಮತಮ್ಮಲ್ಲೇ ಕಾದಾಡಿಕೊಂಡರೊ, ಇಂದಿನಿಂದ ೩೬ ವರ್ಷಗಳ ನಂತರ, ಯಾದವ ವಂಶಸ್ಥರೂ ಕೂಡ ಅದೇ ರೀತಿ ತಮ್ಮತಮ್ಮಲ್ಲೇ ಬಡಿದಾಡಿಕೊಂಡು ಸಾಯಲಿ. ನೀನು, ಯಾರೂ ಇಲ್ಲದ ಕಡೆ ದಿಕ್ಕಿಲ್ಲದವನಂತೆ ಬಿದ್ದು ಸಾಯಿ. ನಾನು ಪತಿವ್ರತೆಯೇ ಆದರೆ ನನ್ನ ಈ ಶಾಪವು ಫಲಿಸಲಿ” ಎಂದು, ಗಾಂಧಾರಿಯು ಇಡೀ ಯಾದವಕುಲವೇ ನಾಶವಾಗುವಂತೆ ಶಾಪವಿತ್ತಳು.
ಗಾಂಧಾರಿಯ ಮಾತು ಕೇಳಿ ಕೃಷ್ಣನು ನಕ್ಕ. “ಅಲ್ಲ ಅತ್ತೆ, ಯಾದವ ವಂಶವು ಹೇಗಿದ್ದರೂ ನಾಶವಾಗಬೇಕಾದ್ದೇ; ಅದಕ್ಕೆ ಈಗಾಗಲೆ ಮುನಿಗಳ ಶಾಪವೂ ಇದೆಯೆಂದು ನಿನಗೆ ತಿಳಿಯದೆ? ಸುಮ್ಮನೆ ಚರ್ವಿತಚರ್ವಣದಂತಹ ಶಾಪವನ್ನಿತ್ತೆಯಲ್ಲ. ಇದರಿಂದ ನೀನು ಹೊಸದಾಗಿ ಏನನ್ನು ಸಾಧಿಸಿದಂತಾಯ್ತು, ಹೇಳು?” ಎಂದು ಪರಿಹಾಸ ಮಾಡಿ, ಆಮೇಲೆ ಅವಳನ್ನು ಸಮಾಧಾನಗೊಳಿಸಿ, ಮನೆಗೆ ಕರೆದೊಯ್ದ.
ಇದೆಲ್ಲ ನಡೆದು ೩೫ ವರ್ಷಗಳು ಮುಗಿಯುತ್ತ ಬಂದು, ೩೬ನೇ ವರ್ಷವೂ ಸಮೀಪಿಸಿತು. ಆಗ ದ್ವಾರಕೆಯಲ್ಲಿ ದಿನದಿನವೂ ಒಂದಲ್ಲ ಒಂದು ಉತ್ಪಾತಗಳು ಕಾಣಲು ಮೊದಲಾದವು. ಹಗಲುಹೊತ್ತಿನಲ್ಲೇ ಕಾಲನು ಕರಾಳರೂಪವನ್ನು ತಾಳಿ ದ್ವಾರಕೆಯಲ್ಲಿ ಸಂಚರಿಸುತ್ತಿದ್ದನು. ರಾತ್ರಿಹೊತ್ತು ಗಿಣಿಗಳು ಗೂಬೆಗಳ ಹಾಗೆ ವಿಕಾರವಾಗಿ ಕೂಗುವವು, ಮೇಕೆಗಳು ನರಿಗಳ ಹಾಗೆ ಊಳಿಡುವವು. ಆಕಾಶದಲ್ಲಿ ಸಿಡಿಲು, ಉಲ್ಕೆಗಳು… ಹೀಗೆ ನಾನಾ ತೆರದ ಉತ್ಪಾತಗಳೂ ಅಪಶಕುನಗಳೂ ಪ್ರತಿನಿತ್ಯವೂ ಕಾಣಿಸುವವು.
ಇವನ್ನೆಲ್ಲ ಕಂಡು, “ಇನ್ನೇನು ಯಾದವಕುಲವು ನಾಶವಾಗುವ ಕಾಲವು ಸಮೀಪಿಸಿದೆ” ಎಂದರಿತ ಕೃಷ್ಣನು, ಆ ವಿನಾಶವು ಯಾವುದಾದರೂ ತೀರ್ಥಸ್ಥಳದಲ್ಲೇ ಆದರೆ ಒಳಿತೆಂದು ಬಗೆದು, ಒಮ್ಮೆ ಆಸ್ಥಾನದಲ್ಲಿ ನೆರೆದಿದ್ದವರಿಗೆಲ್ಲ ಕೇಳಿಸುವಂತೆ, “ಈಚೆಗೆ ಕಾಣಿಸುತ್ತಿರುವ ಉತ್ಪಾತಗಳ ಉಪಶಮನಕ್ಕಾಗಿ, ನಾವೆಲ್ಲ ಭಕ್ತಿಯಿಂದ ಕೂಡಿ ಸಮುದ್ರರಾಜನಿಗೆ ಒಂದು ಉತ್ಸವವನ್ನು ನಡೆಸಬೇಕಾಗಿದೆ” ಎಂದು ಘೋಷಿಸಿದನು. ನೆರೆದ ಜನವೆಲ್ಲ ಅದಕ್ಕೆ ಒಪ್ಪಿಗೆ ಸೂಚಿಸಿದರು. ಸರಿ, ಮಾರನೇ ದಿನ ಸಮುದ್ರತೀರಕ್ಕೆ ಹೊರಡಲು ಸಿದ್ಧವಾಗಲೆಂದು ಎಲ್ಲರಿಗೂ ತಿಳಿಸಲಾಯಿತು.
ಆ ರಾತ್ರಿ, ದ್ವಾರಕೆಯಲ್ಲಿ ಮತ್ತೊಂದು ಅನಾಹುತವಾಯಿತು. ಕಪ್ಪನೆಯ ದೇಹ, ಕೋರೆದಾಡೆಗಳಿರುವ ಹೆಣ್ಣಿನ ಆಕೃತಿಯೊಂದು — ಮನೆಮನೆಗೂ ನುಗ್ಗಿ, ದ್ವಾರಕೆಯ ಕೆಲವು ಹೆಂಗಸರನ್ನು ಕದ್ದೊಯ್ದಿತು. ಅದಲ್ಲದೆ, ರಾಕ್ಷಸರು ಯಾದವರ ಶಸ್ತ್ರಾಸ್ತ್ರಗಳನ್ನು ಕದ್ದೊಯ್ದರು. ಎಲ್ಲರೂ ನೋಡನೋಡುತ್ತಿದ್ದಂತೆ ಕೃಷ್ಣನ ಸುದರ್ಶನ ಚಕ್ರವೂ, ಗರುಡಕೇತನವೂ, ದೈವದತ್ತವಾದ (ಕೃಷ್ಣನ) ರಥವೂ ಆಕಾಶಕ್ಕೆ ಹಾರಿ ಮಾಯವಾದುವು. ಇತ್ತ, ಬಲರಾಮನ ಆಯುಧವೂ, ತಾಳಕೇತನವೂ ಹಾಗೆಯೆ ಮಾಯವಾದವು.
ದ್ವಾರಕೆಯ ಜನರೆಲ್ಲ ಈ ಎಲ್ಲವನ್ನೂ ದಿಗ್ಭ್ರಮೆಯಿಂದ ನೋಡುತ್ತಿರುವಾಗ, ಆಕಾಶದಿಂದ ದೇವತೆಗಳ ಧ್ವನಿಯು “ಇನ್ನು ತಡ ಮಾಡದೆ ಕೂಡಲೆ ಸಾಗರತೀರಕ್ಕೆ ಹೊರಡಿ… ಸಾಗರ ತೀರಕ್ಕೆ ಹೊರಡಿ..” ಎಂದು ಆಗ್ರಹಿಸಿತು. ಅಷ್ಟೆಲ್ಲ ಆದರೂ, ದ್ವಾರಕೆಯ ಜನರು ಉದಾಸೀನರಂತೆ, ನಿಧಾನವಾಗಿ ಯಾತ್ರೆಗೆ ಸಿದ್ಧವಾದರು. ಅಲ್ಲಿಗೆ ಕೊಂಡೊಯ್ಯಲು ಬೇಕಾದ ಬಗೆಬಗೆಯ ಮದ್ಯವನ್ನೂ, ಮಾಂಸವನ್ನೂ, ಅನ್ನ ಪಾನೀಯಗಳನ್ನೂ, ಸುಗಂಧದ್ರವ್ಯಗಳನ್ನೂ, ಬಟ್ಟೆಬರೆ, ಒಡವೆವಸ್ತುಗಳನ್ನೂ ಅಣಿಮಾಡಿಕೊಂಡು ಯಾತ್ರೆಗೆ ಹೊರಟರು.
ಕೃಷ್ಣನು, ತನ್ನ ರಥವು ಮಾಯವಾದುದರಿಂದ, ತನ್ನ ಸಾರಥಿಯಾದ ದಾರುಕನು ತಂದ ಇನ್ನೊಂದು ರಥವನ್ನೇರಿ ಹೊರಟನು. ಬಲರಾಮನು, ಇದಾವುದರೆಡೆಗೂ ಆಸಕ್ತಿಯಿಲ್ಲದವನಂತೆ, ಬಟ್ಟೆಯನ್ನೂ ಬದಲಾಯಿಸದೆ, ಯಾವುದೇ ಒಡವೆಯನ್ನೂ ಧರಿಸದೆ, ಬರಿಗಾಲಿನಲ್ಲಿ ನಡೆದೇ ಹೊರಟನು.
ಹೀಗೆ, ಅವರೆಲ್ಲ ಸಮುದ್ರತೀರಕ್ಕೆ ಹೊರಟುಬಂದು, ಆ ಮುಂಚೆಯೇ ಹಾಕಿಸಿದ್ದ ಚಪ್ಪರಗಳ ಬಳಿ ವಸತಿ ಹೂಡಿದರು. ಅಲ್ಲಿಗೆ ತಲುಪಿದ ಸ್ವಲ್ಪಹೊತ್ತಿಗೆ, ಉದ್ಧವನು, ತಾನು ತಪಸ್ಸನ್ನಾಚರಿಸಲು ತೆರಳುತ್ತಿರುವುದಾಗಿ ತಿಳಿಸಿದನು. ಬಲರಾಮನು, ತಾನು ಉದ್ಧವನನ್ನು ಬಿಟ್ಟುಬರಲು ಹೋಗುವುದಾಗಿಯೂ, ಜೊತೆಗೆ, ತಾನೂ ಕೂಡ ಎಲ್ಲಾದರೂ ಏಕಾಂಗಿಯಾಗಿ ತಪಸ್ಸನ್ನಾಚರಿಸುತ್ತೇನೆಂದೂ ತಿಳಿಸಿ ಹೊರಟ.
ಇತ್ತ, ಯಾದವರು ಮೊದಮೊದಲು ತಾವು ತಂದ ಭಕ್ಷ್ಯಗಳನ್ನೆಲ್ಲ ತಾವೂ ಸೇವಿಸಿ, ಅಲ್ಲಿದ್ದ ಕೋತಿಗಳಿಗೆಲ್ಲ ಬೇಕಾಬಿಟ್ಟಿ ಹಂಚಿದರು. ಆ ನಂತರ ಗಾನ, ನೃತ್ಯಾದಿ ವಿನೋದಗಳಲ್ಲಿ ತೊಡಗಿ, ನಂತರ, ವಿಹ್ವಲಕಾರಿಯಾದ ಮದ್ಯವನ್ನು ಬಂಗಾರದ ಪಾತ್ರೆಗಳಲ್ಲಿ ಬಗ್ಗಿಸಿಕೊಂಡು ಮನಸಾರೆ ಕುಡಿದರು. ಹೀಗೆ ಮದ್ಯಪಾನಮತ್ತರಾಗಿ ಸಲ್ಲಾಪಗಳಲ್ಲಿ ತೊಡಗಿರುವಾಗ, ಸಾತ್ಯಕಿಗೆ ಕೃತವರ್ಮನನ್ನು ಕಂಡು ರೋಷವುಕ್ಕಿ “ಇವನೆಂಥಾ ನೀಚನೆಂದರೆ, ಆ ದ್ರೋಣನ ಮಗನ ಜೊತೆ ಸೇರಿಕೊಂಡು ಮಲಗಿದ್ದ ವೀರರನ್ನೂ ಕೊಲ್ಲಲು ಹೋಗಿದ್ದ ಇವನು..” ಎಂದು ಮೂದಲಿಸಿದ. ಪ್ರದ್ಯುಮ್ನನು ಸಾತ್ಯಕಿಯನ್ನು ಸಮಾಧಾನಗೊಳಿಸುತ್ತಿರುವಾಗ, ಕೃತವರ್ಮನು ಸಾತ್ಯಕಿಗೆ “ನೀನೇನು ಕಡಿಮೆಯೇ? ಅರ್ಜುನನಿಂದ ಈಗಾಗಲೆ ಮಡಿದಿದ್ದ ಸೋಮದತ್ತನ ತಲೆಯನ್ನು ನೀನು ಕಡಿಯಲಿಲ್ಲವೇ?” ಎಂದು ಮಾರ್ನುಡಿದ. ಹೀಗೆ, ಯಾದವಕುಲದವರ ನಡುವೆ ಕಾದಾಟದ ಕಿಚ್ಚು ಹೊತ್ತಿಕೊಂಡಿತು.
ಸಾತ್ಯಕಿಯು “ಈ ಕೃತವರ್ಮನ ತಮ್ಮನು ಶಮಂತಕಮಣಿಗಾಗಿ ಸತ್ರಾಜಿತನನ್ನು ಕೊಂದನಲ್ಲ” ಎಂದು ಕೂಗಾಡಿದಾಗ, ಅಲ್ಲೆ ಇದ್ದ ಸತ್ಯಭಾಮೆಗೆ ತನ್ನ ತಂದೆಯ ನೆನಪಾಗಿ, ಅವಳು ಶೋಕಾಕುಲಳಾಗಿ ಕೃಷ್ಣನ ಬಳಿಗೆ ಬಂದಳು. ಸಾತ್ಯಕಿಯು ಅದನ್ನು ಕಂಡು ಉತ್ತೇಜಿತನಾಗಿ, (ಸತ್ಯಭಾಮೆಯನ್ನು ಸಮಾಧಾನಪಡಿಸಲೊ ಎಂಬಂತೆ) ತನ್ನ ಖಡ್ಗವನ್ನು ಹಿರಿದು ಕೃತವರ್ಮನ ತಲೆಯನ್ನು ತರಿದುಹಾಕಿದ. ವೃಷ್ಣಿವಂಶದ ಸಾತ್ಯಕಿಯು ಕೃತವರ್ಮನನ್ನು ಕೊಂದುದ್ದನ್ನು ಕಂಡ ಭೋಜ, ಅಂಧಕ ವಂಶದ ಯಾದವರೆಲ್ಲ ಕೂಡಿ ಸಾತ್ಯಕಿಯ ಮೇಲೆರಗಿದರು.
ಪ್ರದ್ಯುಮ್ನನು ಸಾತ್ಯಕಿಯ ಸಹಾಯಕ್ಕೆ ನಿಂತು, ಅವರನ್ನೆಲ್ಲ ಹಿಮ್ಮೆಟ್ಟಿಸಿದ. ಹೀಗೆ ಒಬ್ಬರಿಗೊಬ್ಬರು ಕಾದಾಡುವಾಗ, ಹತ್ತಿರದಲ್ಲಿ ಯಾವುದೇ ಆಯುಧಗಳು ಸಿಗದಿದ್ದುದರಿಂದ, ತೀರದಲ್ಲಿ ಹುಲುಸಾಗಿ ಬೆಳೆದಿದ್ದ ಜೊಂಡುಹುಲ್ಲನ್ನೇ ಕಿತ್ತುಕೊಂಡು, ಅದರಿಂದಲೆ ಒಬ್ಬರೊಡನೊಬ್ಬರು ಬಡಿದಾಡಿದರು. ಮುನಿಗಳ ಶಾಪದ ಫಲವೊ ಏನೊ, ಒಂದೊಂದು ಹುಲ್ಲುಕಡ್ಡಿಯೂ ಒಂದೊಂದು ಮುಸಲಾಯುಧದಂತೆ ಶಕ್ತವಾಗಿ, ಎದುರಿದ್ದವರನ್ನು ಕೊಂದಿಕ್ಕಿತು.
ಹೀಗೆ ಸಾಂಬ, ಅನಿರುದ್ಧ, ಪ್ರದ್ಯುಮ್ನ ಮುಂತಾದವರೆಲ್ಲ ಸತ್ತು ಬಿದ್ದರು. ಈವರೆಗೆ ನಿರ್ಲಿಪ್ತನಾಗಿದ್ದ ಕೃಷ್ಣನು, ತಾನೂ ಕೋಪೋದ್ರಿಕ್ತನಾಗಿ, ಅದೇ ಜೊಂಡುಹುಲ್ಲನ್ನು ತೆಗೆದುಕೊಂಡು, ಮಿಕ್ಕ ಯಾದವರನ್ನೆಲ್ಲ ಕೊಂದುಹಾಕಿದ. ಯಾದವರ ಹೆಂಗಸರು, ಕೃಷ್ಣ, ದಾರುಕ ಹಾಗೂ ಬಭ್ರು — ಇವರಷ್ಟೆ ಉಳಿದರು, ಅಲ್ಲಿ.
ಮುಂದೆ, ಕೃಷ್ಣನು ದಾರುಕ ಹಾಗೂ ಬಭ್ರುವನ್ನು ಕರೆದುಕೊಂಡು ಬಲರಾಮನನ್ನು ಹುಡುಕುತ್ತ ಅಡವಿಯ ಮಧ್ಯದಲ್ಲಿದ್ದ ಮರವೊಂದರ ಬಳಿಗೆ ಬಂದ. ಅಲ್ಲಿ ಬಲರಾಮನನ್ನು ಕಂಡು, ಕೃಷ್ಣನು ತಾನೂ ತಪೋನಿರತನಾಗಲು ಬಯಸಿದ.
ತಕ್ಷಣ ದಾರುಕನನ್ನು ಕರೆದು “ನೀನು ವೇಗವಾಗಿ ಪಾಂಡವರಲ್ಲಿಗೆ ಹೋಗಿ, ನಡೆದುದೆಲ್ಲವನ್ನೂ ತಿಳಿಸಿ, ಅರ್ಜುನನ್ನು ದ್ವಾರಕೆಗೆ ಕರೆದುಕೊಂಡು ಹೋಗು. ಮುಂದಿನ ಕೆಲಸವೆಲ್ಲ ಅರ್ಜುನನ ಮೇಲ್ವಿಚಾರಣೆಯಲ್ಲೆ ನಡೆಯಲಿ” ಎಂದು ಆದೇಶಿಸಿದ. ದಾರುಕನು ಕೂಡಲೆ ಹಸ್ತಿನಾವತಿಯ ಕಡೆಗೆ ಹೊರಟ.
ಆ ನಂತರ, ಕೃಷ್ಣನು ಬಭ್ರುವನ್ನು ಕರೆದು “ನೀನು ಹೆಂಗಸರನ್ನೂ, ರಥ, ಆನೆ ಕುದುರೆ ಮುಂತಾದುವೆಲ್ಲವನ್ನೂ ಹಿಂದಿಟ್ಟುಕೊಂಡು ಹೋಗಿ, ನನ್ನ ತಂದೆ ವಸುದೇವನಿಗೆ ನಡೆದದ್ದನ್ನೆಲ್ಲ ತಿಳಿಸು” ಎಂದು ಸೂಚಿಸಿದ. ಇನ್ನೇನು ಬಭ್ರುವು ಅಲ್ಲಿಂದ ಹೊರಡಬೇಕು, ಅಷ್ಟರಲ್ಲಿ ಬೇಡನೊಬ್ಬನು ಆ ಹುಲ್ಲನ್ನೇ ಬಾಣವಾಗಿ ಪ್ರಯೋಗಿಸಿದ; ಆ ಬಾಣವು ಬಂದು ಬಭ್ರುವಿಗೆ ನಾಟಿ, ಬಭ್ರುವು ಅಲ್ಲೇ ಮಡಿದು ಬಿದ್ದ.
ಹೀಗೆ, ಬಭ್ರುವೂ ಮಡಿದುದನ್ನು ಕಂಡು ಕೃಷ್ಣನು, ಬಲರಾಮನಿಗೆ, “ಅಣ್ಣಾ! ನಾನು ಉಳಿದವರೆಲ್ಲರನ್ನೂ ಕರೆದುಕೊಂಡುಹೋಗಿ ದ್ವಾರಕೆಗೆ ಬಿಟ್ಟುಬರುತ್ತೇನೆ. ನಾನು ಮರಳಿಬರುವವರೆಗೆ ನೀನು ಇಲ್ಲಿಯೇ ಇರು” ಎಂದು ಸೂಚಿಸಿ, ಎಲ್ಲರನ್ನೂ ಕರೆದುಕೊಂಡು ದ್ವಾರಕೆಗೆ ಬಂದ. ಬಂದು ವಸುದೇವನನ್ನು ಕಂಡು, ಅವನಿಗೆ ಎಲ್ಲವನ್ನೂ ತಿಳಿಸಿ, “ಬಲರಾಮನೂ, ಇತರೆ ಯಾದವವೀರರೂ ಇಲ್ಲದ ದ್ವಾರಕೆಯಲ್ಲಿ ನಾನಿರಲಾರೆ. ನಾನೂ ಬಲರಾಮನೊಟ್ಟಿಗೆ ತಪೋನಿರತನಾಗುತ್ತೇನೆ. ಇವತ್ತೊ ನಾಳೆಯೊ ಅರ್ಜುನನು ಇಲ್ಲಿಗೆ ಬರುತ್ತಾನೆ. ಮುಂದಿನ ವಿಚಾರವನ್ನು ಅವನೊಡನೆ ಚರ್ಚಿಸಿ, ನಿಮಗೆ ಸರಿ ಕಂಡ ರೀತಿಯಲ್ಲಿ ನಡೆಸಿ” ಎಂದ.
ಬಲರಾಮನೂ ಇಲ್ಲ, ಈಗ ಕೃಷ್ಣನೂ ದೂರಾಗುತ್ತಾನೆಂದು ತಿಳಿದ ವಸುದೇವನು ಕುಗ್ಗಿಹೋದ. ಅದನ್ನರಿತ ಕೃಷ್ಣನು, ವಸುದೇವನ ಕಾಲೊತ್ತುತ್ತ, ಅವನನ್ನು ತನ್ನ ಮಧುರವಾದ ಮಾತುಗಳಿಂದ ಸಮಾಧಾನಗೊಳಿಸಿ, ಮತ್ತೆಮತ್ತೆ ‘ನಾಳೆಯಷ್ಟರಲ್ಲಿ ಅರ್ಜುನನು ಬರುತ್ತಾನೆ. ಅವನು ಎಲ್ಲವನ್ನೂ ಸರಿಪಡಿಸುತ್ತಾನೆ’ ಎಂದು ಒತ್ತಿಹೇಳಿ, ವಸುದೇವನನ್ನು ಒಪ್ಪಿಸಿದ. ಆನಂತರ ಕೃಷ್ಣನು ಮರಳಿ ಬಲರಾಮನಿದ್ದ ಮರದ ಬಳಿಗೆ ಬಂದ.
(ಮುಂದುವರೆಯುವುದು..)