ಮೊರೆ ಕೇಳಿ ಬಂದವನು

ಅವರಿಬ್ಬರೂ ಏಕಾಂತದಲ್ಲಿದ್ದರು; ಅವನು ಅವಳನ್ನು ತನ್ನತ್ತ ಸೆಳೆದುಕೊಂಡು ಏನನ್ನೊ ಪಿಸುಗುಟ್ಟಿದ. ಆಕೆಯು, ನಾಚಿಕೆಯಿಂದಲೊ ಅಥವಾ ಹುಸಿಮುನಿಸಿನಿಂದಲೋ — ಅವನಿಂದ ಕೊಸರಿಕೊಂಡು ಅಲ್ಲಿಂದ ಹೊರಡಲನುವಾದಳು. ಅಷ್ಟರಲ್ಲಿ…

ಅವನಿಗೆ, ತನ್ನನ್ನು ಯಾರೊ ಕರೆಯುತ್ತಿರುವುದು ಕೇಳಿಸಿತು. ಆ ಕಡೆಗೆ ಗಮನವಿತ್ತರೆ, ಅದೋ ಅಲ್ಲಿ — ಭೂಲೋಕದಲ್ಲಿ, ತನ್ನ ಭಕ್ತನಾದ ಗಜೇಂದ್ರನು ಸಹಾಯವನ್ನು ಬೇಡಿ ತನಗೆ ಮೊರೆಯಿಡುತ್ತಿದ್ದಾನೆ.! ಅಷ್ಟೇ, ಈತ ಒಂದರೆಕ್ಷಣವೂ ತಡ ಮಾಡಲಿಲ್ಲ; ಆಗಿಂದಾಗಲೆ ಹೊರಟುಬಿಟ್ಟ.

ಹಾಗೆ, ಗಜೇಂದ್ರನನ್ನು ರಕ್ಷಿಸುವ ತವಕದಿಂದ ಹೊರಟ ಶ್ರೀಹರಿಯು, ತಾನು ಹೊರಟ ಕಾರ್ಯದ ಬಗ್ಗೆ ಲಕ್ಷ್ಮಿಗೂ ಹೇಳಲಿಲ್ಲವಂತೆ. ಶಂಖಚಕ್ರಾದಿ ಆಯುಧಗಳನ್ನೂ ತೆಗೆದುಕೊಳ್ಳಲಿಲ್ಲವಂತೆ. ಅತ್ತ ತನ್ನ ಪರಿವಾರದವರನ್ನೂ ಕರೆಯಲಿಲ್ಲ. ಇತ್ತ, ತನ್ನ ವಾಹನನಾದ ಗರುಡನನ್ನೂ ಅಣಿಗೊಳಿಸಲಿಲ್ಲ. ಆ ವಿಷಯ ಹಾಗಿರಲಿ; ತಾನು ಅಲಂಕಾರಕ್ಕೆಂದು ಧರಿಸಿದ್ದ ಹೂವು ಜಾರುತ್ತಿದ್ದರೂ ಗಮನಿಸಲಿಲ್ಲ. ಕೆದರಿದಂತೆ ಹಾರಾಡುತ್ತಿದ್ದ ಮುಂಗುರುಳನ್ನೂ ಸರಿಪಡಿಸಿಕೊಳ್ಳಲಿಲ್ಲ, ಆತ.

ಈ ಮುಂಚೆ ಲಕ್ಷ್ಮಿಯನ್ನು ಅಪ್ಪಿಹಿಡಿದಿದ್ದಾಗ ಅವಳ ಸೆರಗು ಇವನ ಆಭರಣಕ್ಕೆ ಸಿಕ್ಕುಹಾಕಿಕೊಂಡಿತ್ತೋ ಏನೊ, ಅಥವಾ ತಾನೇ ಆಕೆಯ ಸೆರಗನ್ನು ಕೈಯಲ್ಲಿ ಹಿಡಿದಿದ್ದನೇನೊ! ಅದನ್ನು ಬಿಡುವ ಗೋಜಿಗೂ ಹೋಗಲಿಲ್ಲವಂತೆ, ಅವನು. ಹಾಗೆ, ಶ್ರೀಹರಿಯು -ಗಜೇಂದ್ರನ ಸಹಾಯಕ್ಕೆಂದು- ಇದ್ದವನು ಇದ್ದಂತೆಯೇ ಹೊರಟು ಬಂದ.

ಸರಿಹೋಯಿತು! ಈಯಪ್ಪ ಹಾಗೆ ಹಠಾತ್ತಾಗಿ ಹೊರಟರೆ ಉಳಿದವರಿಗೆ ಗಾಬರಿಯಾಗಲ್ವೇ? ಅವನ ಹಿಂದೆ ಲಕ್ಷ್ಮಿಯೂ ಹೊರಟಳಂತೆ (ಆಕೆಯ ಸೆರಗಿನ್ನೂ ರಾಯರ ಕೈಲೇ ಸಿಕ್ಕಿಕೊಂಡಿದೆಯಲ್ಲ!). ಲಕ್ಷ್ಮಮ್ಮನ ಹಿಂದೆ, ಅವರ ಅಂತಃಪುರದವರೂ, ಅವರ ಹಿಂದೆಯೇ ಗರುಡನೂ ಹೊರಟ. ಇವರೆಲ್ಲರ ಹಿಂದೆ ಆಯುಧಗಳೂ ಹೊರಟುಬಂದುವು. ಅವರ ಬೆನ್ನಲ್ಲೇ ನಾರದನೂ, ಧ್ವಜಧಾರಿಯೂ, ವೈಕುಂಠಪುರದ ಸಕಲ ನಿವಾಸಿಗಳೂ ಹೊರಟುಬಂದರಂತೆ.

ಹಾಗೆ, ಗಡಿಬಿಡಿಯಿಂದ ಬಂದು, ತನ್ನ ಪ್ರಿಯಭಕ್ತನಾದ ಗಜೇಂದ್ರನ ಪ್ರಾಣವನ್ನು ರಕ್ಷಿಸಿದನಂತೆ — ಆ ಮಹಾ ವಿಷ್ಣು. ಎಂತಹ ಸುಂದರ ಕಲ್ಪನೆ, ಅಲ್ಲವೇ?

ಭಕ್ತವತ್ಸಲನಾದ ಶ್ರೀಹರಿಗೆ, ತನ್ನನ್ನು ನಂಬಿ ಕರೆದವರನ್ನು ಕಾಪಾಡಲು “ಸಮಯಾಸಮಯವುಂಟೇ …?” ಎಂದು ಕನಕದಾಸರು ಕೂಡ ಹಾಡಿ ಹೊಗಳಿಲ್ಲವೆ? ಆ ಹೆಸರನ್ನು ಉಳಿಸಿಕೊಳ್ಳಲು ಆತ ಅಷ್ಟನ್ನೂ ಮಾಡದಿದ್ದರೆ ಹೇಗೆ!?

సిరికిం జెప్పఁడు శంఖచక్రయుగముం జేదోయి సంధింపఁడే

పరివారంబును జీరఁడభ్రగపతిం బన్నింపఁడాకర్ణికాం

తర ధమ్మిల్లముఁ జక్కనొత్తఁడు వివాదప్రోత్థిత శ్రీకుచో

పరివేలాంచలమైన వీడఁడు గజప్రాణావనోత్సాహియై ||

.

తన వెంటన్ సిరి లచ్చివెంటనవరోధవ్రాతమున్ దాని వె

న్కను బక్షీంద్రుఁడు వాని పొంతను ధనుఃకౌమోదకీ శంఖ చ

క్ర నికాయంబును నారదుండు ధ్వజినీకాంతుండు రా వచ్చిరొ

య్యన వైకుంఠపురంబునం గలుగువారాబాలగోపాలమున్ ||

(ಪೋತನ ಭಾಗವತದಲ್ಲಿಯ ಪದ್ಯಗಳು)

ತೆಲುಗು ಭಾಷೆಯ ಕವಿಪುಂಗವರ ಪೈಕಿ ಬಮ್ಮೆರ ಪೋತನನ ಹೆಸರು ಪ್ರಮುಖವಾದುದು. ಆತನು ಸಂಸ್ಕೃತದ ಶ್ರೀಮದ್ಭಾಗವತವನ್ನು ತೆಲುಗಿನಲ್ಲಿ ರಚಿಸಿದ್ದಾನೆ (ಅನುವಾದಿಸಿದ್ದಾನೆ). ಅದರಲ್ಲಿಯ ’ಗಜೇಂದ್ರಮೋಕ್ಷ’ ಸಂದರ್ಭದಲ್ಲಿಯ ಈ ಎರಡು ಪದ್ಯಗಳು ಬಹಳ ಪ್ರಖ್ಯಾತಿಯನ್ನು ಪಡೆದಿವೆ. ಪೋತನನ ಭಕ್ತಿ, ಕಾವ್ಯ ಸನ್ನಿವೇಶ ಸೃಷ್ಟಿಯ ಉತ್ತುಂಗ ಸ್ವರೂಪವನ್ನು ಇಂತಹ ಹಲವಾರು ಪದ್ಯಗಳಲ್ಲಿ ಕಾಣಬಹುದು.

ತೆಲುಗಿನ ಕವಿಸಾರ್ವಭೌಮನೆನಿಸಿದ ಶ್ರೀನಾಥನು, ಒಮ್ಮೆ ಪೋತನನನ್ನು -ತಮಾಷೆಗೆಂದು- ಕೆಣಕುತ್ತ ಕೇಳಿದನಂತೆ “ಏನಯ್ಯಾ, ಹೀಗೆಲ್ಲಾ ಬರೆದುಬಿಟ್ಟಿದ್ದೀ. ಅಲ್ಲ, ಶಂಖಚಕ್ರಾದಿ ಆಯುಧಗಳನ್ನೂ ಹೊಂಚಿಕೊಳ್ಳದೆ ಎದ್ದುಬರುವಷ್ಟು ಪೆದ್ದನೇ ಆ ಶ್ರೀಹರಿ? ಅದು ಹೇಗಯ್ಯಾ ಸಾಧ್ಯ?…”

ಅದಕ್ಕೆ ಆ ಕ್ಷಣದಲ್ಲಿ ಪೋತನನ ಮೌನವೇ ಉತ್ತರವಾಯಿತು. ಆಗ ಪೋತನನ ಮಗನೂ (ಮಲ್ಲಯ?) ಸಹ ಅಲ್ಲಿಯೇ ಇದ್ದನಂತೆ.

ಸರಿ, ನಂತರ ಅವರಿಬ್ಬರೂ ಊಟಕ್ಕೆ ಕುಳಿತಿರುವಾಗ, ಹೊರಗೆ — ನೀರಿನಲ್ಲಿ ಏನೊ ಬಿದ್ದಂತೆ ಸದ್ದಾಯಿತಂತೆ. ಅಷ್ಟರಲ್ಲೇ “ಅಯ್ಯೋ ಮಾವಾ! ಸರಸ್ವತಿ ಬಾವಿಗೆ ಬಿದ್ಳು..” ಅಂತ ಯಾರೊ ಬೊಬ್ಬೆ ಹೊಡೆಯುತ್ತಿದ್ದುದು ಕೇಳಿಸಿತು; ಶ್ರೀನಾಥನು, ಊಟ ಮಾಡುವುದನ್ನು ಬಿಟ್ಟು ಹಾಗೆಯೇ ಬಾವಿಯ ಬಳಿಗೆ ಒಡಿಹೋದನಂತೆ.

ಆಗ ಮಲ್ಲಯನು, ಶ್ರೀನಾಥನಿಗೆ “ಇದೇನು, ಮಾವಾ! ಮಗಳನ್ನು ಕಾಪಾಡೋಕೆ ಬಂದವರು ಒಂದು ಹಗ್ಗವನ್ನಾದರೂ ತರದೆ ಹಾಗೇ ಬಂದಿದ್ದೀರಲ್ಲ. ಅಲ್ನೋಡಿ, ಊಟ ಮಾಡ್ತಿದ್ದೋರು ಕೈಯನ್ನಾದರೂ ತೊಳ್ಕೊಂಡು ಬರಬಹುದಿತ್ತಲ್ಲಾ?” ಎಂದು ಕಿಚಾಯಿಸಿದನಂತೆ.

“ಸರಸ್ವತಿ ಬಾವಿಗೇನೂ ಹಾರಲಿಲ್ಲ. ನಾನೇ ಸುಮ್ಮನೆ ಒಂದು ದೊಡ್ಡ ಕಲ್ಲನ್ನು ಬಾವಿಗೆಸೆದು, ಹಾಗೆ ಕೂಗಿದೆ. ಇದೊ, ಅವಳ ರಕ್ಷಣೆಗೆಂದು ನೀವು ಹೀಗೆ ಓಡಿಬಂದಿರಿ” ಎಂದನಂತೆ. ಆಗ ಶ್ರೀನಾಥನಿಗೆ, ಪೋತನನ ಪದ್ಯಗಳ ಮಹತ್ತಿನ ಅರಿವಾಯಿತಂತೆ.

ಸಾಮಾನ್ಯವಾಗಿ, ಇತಿಹಾಸದಲ್ಲಿಯ ಪ್ರಮುಖ ವ್ಯಕ್ತಿಗಳ ಬಗ್ಗೆ ಇಂತಹ ದಂತಕಥೆಗಳಿದ್ದಿರುತ್ತವೆ. ಹರಿಹರನೂ ಕುಮಾರವ್ಯಾಸನೂ ಸಮಕಾಲೀನರೆಂದೂ, ಅವರಿಬ್ಬರ ನಡುವೆ ಕಾವ್ಯ ವಿಷಯವಾಗಿ ದೊಡ್ಡ ಸ್ಪರ್ಧೆ ಏರ್ಪಟ್ಟಿತ್ತೆಂದೊ, ಧಾರಾನಗರದ ಭೋಜರಾಜನೂ ಕಾಳಿದಾಸನೂ ಪರಮಾಪ್ತ ಗೆಳೆಯರೆಂದೊ, ಹೀಗೆ…

ಶ್ರೀನಾಥ ಹಾಗೂ ಪೋತನರ ಬಗ್ಗೆಯೂ ಇಂಥದ್ದೊಂದು ಕಥೆಯಿದೆ — ಅವರಿಬ್ಬರೂ ಭಾವ ಭಾಮೈದರೆಂದು. ಈ ಹೇಳಿಕೆಗೆ — ಬೇರೆಬೇರೆ ಕಾಲದ ಯಾವುಯಾವುದೊ ಪದ್ಯಗಳನ್ನು ತೋರಿಸಿ ವಾದಿಸುವುದುಂಟಾದರೂ, ಬಹುಮಟ್ಟಿಗೆ ಅವರಿಬ್ಬರೂ ಸಮಕಾಲೀನರಾಗಿರಲಿಲ್ಲವೆಂಬುದೇ ಸಾಧಿತವಾಗಿದೆ. ಪೋತನನು ಹುಟ್ಟುವ ವೇಳೆಗಾಗಲೇ ಶ್ರೀನಾಥನು ಗತಿಸಿದ್ದಿರಬೇಕು. ಹಾಗಿದ್ದಮೇಲೆ ಇವನ ತಂಗಿಯನ್ನು ಅವನು ಕೈಹಿಡಿದನೆಂಬ ಮಾತು ಸತ್ಯಕ್ಕೆ ದೂರವೆಂದಾಗುತ್ತದೆ, ಅಲ್ಲವೇ?

ಏನೆ ಇರಲಿ, ಶ್ರೀನಾಥ-ಪೋತನರ ಕಥೆ/ದಂತಕಥೆಗಳ ಪೈಕಿ, ಈ ಹಿಂದೆ ಗಮನಿಸಿದ ಸಂದರ್ಭದ ವಿಚಾರವೂ ಬರುತ್ತದೆ. ಅದು ನಿಜವೊ ಸುಳ್ಳೊ, ಒಟ್ಟಿನಲ್ಲಿ — ಪೋತನನ ಪದ್ಯದಲ್ಲಿ ಶ್ರೀಹರಿಯು ಹಾಗೆ ಓಡೋಡಿ ಬರಲು ಇದ್ದ ಕಾರಣವೇನು ಎಂಬುದನ್ನು ಈ ಕಥೆಯು ತನ್ನದೇ ಶೈಲಿಯಲ್ಲಿ ನಿರೂಪಿಸುತ್ತದೆ.

A screenshot from a Telugu movie — illustrating the second verse.

--

--

No responses yet