ಧೃತರಾಷ್ಟ್ರನ ವಾನಪ್ರಸ್ಥ
ಅಶ್ವಮೇಧ ಯಾಗವನ್ನೂ ಮಾಡಿ ಮುಗಿಸಿಯಾಗಿತ್ತು; ಆ ನಂತರದ ದಿನಗಳಲ್ಲಿ, ಧರ್ಮರಾಯನು ಸಕಲ ಪ್ರಜೆಗಳಿಗೂ ಪ್ರೀತಿಯುಂಟಾಗುವ ರೀತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ.
ಜೊತೆಗೆ, ಪಾಂಡವರೆಲ್ಲ ಧೃತರಾಷ್ಟ್ರ ಗಾಂಧಾರಿಯರ ಸೇವೆಯಲ್ಲಿ ಯಾವ ಕೊರತೆಯೂ ಬಾರದಂತೆ ವಿನಯದಿಂದ ವರ್ತಿಸುತ್ತಿದ್ದರು. ಕುಂತಿ, ದ್ರೌಪದಿ, ಸುಭದ್ರೆ, ಚಿತ್ರಾಂಗದೆ ಉಲೂಪಿ ಮುಂತಾದವರೆಲ್ಲ ಗಾಂಧಾರಿಯ ಯೋಗಕ್ಷೇಮ ವಿಚಾರಣೆಯಲ್ಲಿ, ಅವಳಿಗೆ ಬೇಕಾದ ಆರೈಕೆ, ಸೇವೆಗಳನ್ನು ಸಲ್ಲಿಸುವುದರಲ್ಲಿ ತೊಡಗಿದ್ದರು. ವಿದುರ, ಯುಯುತ್ಸು, ಸಂಜಯ — ಮುಂತಾದವರೆಲ್ಲ ದಿನನಿತ್ಯವೂ ಧೃತರಾಷ್ಟ್ರನನ್ನು ಕಂಡು, ಅವನ ಕುಶಲವನ್ನು ನೋಡಿಕೊಳ್ಳುತ್ತಿದ್ದರು. ಧರ್ಮರಾಯನೂ ಎಲ್ಲ ಪ್ರಮುಖ ನಿರ್ಧಾರಗಳಲ್ಲೂ ಧೃತರಾಷ್ಟ್ರನೊಡನೆ ಚರ್ಚಿಸಿ, ಅವನ ಅಭಿಪ್ರಾಯದಂತೆಯೇ ನಡೆಸುತ್ತಿದ್ದ.
ಧರ್ಮರಾಯನ ಅನುಮೋದನೆಯೊಂದಿಗೆ ಧೃತರಾಷ್ಟ್ರನೂ ಗಾಂಧಾರಿಯೂ — ಅನೇಕ ಗುಡಿಗಳನ್ನೂ, ಕೆರೆಗಳನ್ನೂ ಕಟ್ಟಿಸುವುದು, ಅಗ್ರಹಾರ ನಿರ್ಮಾಣದಂತಹ ಕೆಲಸಗಳನ್ನೂ, ಅನೇಕ ವ್ರತ ನಿಯಮ, ದಾನಾದಿಗಳನ್ನೂ — ಯಾವ ತೊಡಕೂ ಇಲ್ಲದಂತೆ ನೆರವೇರಿಸುತ್ತಿದ್ದರು. ಪ್ರತಿವರ್ಷವೂ ಬಂಧುಗಳೆಲ್ಲರ ಶ್ರಾದ್ಧಕರ್ಮಗಳನ್ನೂ ಸಾಂಗವಾಗಿ ಮಾಡಿಸುತ್ತಿದ್ದರು.
ಧರ್ಮರಾಯನಂತೂ “ಇವರಿಬ್ಬರೂ ವಂಶವೃದ್ಧರು; (ನಮ್ಮಿಂದ) ತಮ್ಮ ಮಕ್ಕಳನ್ನೆಲ್ಲ ಕಳೆದುಕೊಂಡವರು. ನಮ್ಮ ಯಾವ ವರ್ತನೆಯಿಂದ ಅವರಿಗೆ ದುಃಖವುಂಟಾದೀತೋ!” ಎಂಬ ಭಯ ಸಂಕೋಚದಿಂದ, ಅವರೊಡನೆ ಅತ್ಯಂತ ಭಕ್ತಿ, ಪ್ರೀತಿಗಳನ್ನು ತೋರಿ ನಡೆದುಕೊಳ್ಳುತ್ತಿದ್ದನು. ಅಂತೆಯೇ, ತನ್ನ ತಮ್ಮಂದಿರಿಗೂ, ಪರಿವಾರದವರಿಗೂ ‘ಯಾವ ವಿಧದಲ್ಲೂ ಅವರಿಗೆ ನೋವುಂಟಾಗದಂತೆ ನೋಡಿಕೊಳ್ಳಿ’ ಎಂದು ಅನುದಿನವೂ ಸೂಚಿಸುವನು. ಎಲ್ಲರೂ ಅಂತೆಯೇ ನಡೆದುಕೊಳ್ಳುವರು ಕೂಡ.
ಅಂತೂ, ಪಾಂಡವರು — ಧೃತರಾಷ್ಟ್ರ ಗಾಂಧಾರಿಯರಿಗೆ — ಸ್ವಂತ ಮಕ್ಕಳಿಗಿಂತ ಹೆಚ್ಚಿನ ಪ್ರೀತಿ ಗೌರವಗಳನ್ನು ತೋರಿಸುತ್ತಿದ್ದರು. ಅವರಿಬ್ಬರೂ ಕೂಡ ಪಾಂಡವರ ಬಗ್ಗೆ ಪ್ರಸನ್ನರಾಗೇ ಇದ್ದರು.
ಭೀಮನಂಥವನೂ ಸಹ, ತನ್ನ ಮನಸಿಗೆ ಸರಿಬರದಿದ್ದರೂ ಕೂಡ — ಅವರಿಬ್ಬರ ಬಗ್ಗೆ ಗೌರವ ತೋರಿಯೇ ನಡೆದುಕೊಳ್ಳುತ್ತಿದ್ದನು. ಆದರೂ, ಒಮ್ಮೊಮ್ಮೆ — ಕಪಟದ್ಯೂತದಲ್ಲಿ ದುರ್ಯೋಧನನಿಂದ ತಮಗೆ ಉಂಟಾದ ಪರಿಪಾಟಲುಗಳನ್ನು ನೆನೆದು, ಧೃತರಾಷ್ಟ್ರನನ್ನು ಕಂಡರೆ ಅವನ ಮನಸು ಕುದಿಯುವುದು.
ಧೃತರಾಷ್ಟ್ರನಾದರೂ ಏನು, ಧರ್ಮರಾಯನು ಇಷ್ಟೆಲ್ಲ ಪ್ರೀತಿಯಿಂದ ನಡೆದುಕೊಂಡರೂ, ಒಮ್ಮೊಮ್ಮೆ ಕಳೆದುಹೋದ ತನ್ನ ಮಕ್ಕಳನ್ನು ನೆನೆದು ಸಂತಾಪ ತಾಳುವನು. ಅದನ್ನೆಲ್ಲ ಕಂಡಾಗ ಭೀಮನ ಸಿಟ್ಟು ಮತ್ತೂ ಹೆಚ್ಚಾಗುವುದು.
ಭೀಮ-ಧೃತರಾಷ್ಟ್ರರಿಗೆ ಪರಸ್ಪರರ ಬಗ್ಗೆ ಮನಸ್ಸಿನಲ್ಲಿ ಅದೆಷ್ಟೇ ಕೋಪ ದ್ವೇಷಗಳಿದ್ದರೂ, ಬಂಧುಗಳೆದುರಿದ್ದಾಗ ಅದು ಕಾಣಿಸದಂತೆ, ಒಬ್ಬರೊಡನೆ ಒಬ್ಬರು ಮೃದು ಮಾತುಗಳನ್ನಾಡುತ್ತ ನಡೆದುಕೊಳ್ಳುವರು. ಇವರ ಅನ್ಯೋನ್ಯತೆಯನ್ನು ಕಂಡು ಬಂಧುಗಳು ಮೆಚ್ಚಬೇಡವೇ?
ಆದರೂ, ಅವರು ಏಕಾಂತದಲ್ಲಿರುವಾಗ ಭೀಮನು, ಧೃತರಾಷ್ಟ್ರನಿಗೂ ಗಾಂಧಾರಿಗೂ ಕೇಳಿಸುವಂತೆ ಹೇಳುವನು : “ಕುರುಡನ ಮಕ್ಕಳಲ್ಲಿ ಒಬ್ಬರನ್ನೂ ಉಳಿಯದಂತೆ ಎಲ್ಲರನ್ನೂ ಕೊಂದಿಕ್ಕಿದೆ, ನಾನು. ನನ್ನ ಬಾಹುಗಳೆಂಬ ಪಂಜರದಲ್ಲಿ ಸಿಲುಕಿದ ಮೇಲೆ ಅದೆಂತಹ ರಾಜಸಿಂಹವಾದರೂ ತಪ್ಪಿಸಿಕೊಳ್ಳಲಾರದು! ಅವರು ಮೂರ್ಖರಾಗಿದ್ದಕ್ಕೆ ನಮ್ಮೊಡನೆ ಸೆಣೆಸಿದರು. ಅಲ್ಲದೆ, ನನ್ನ ಬಗ್ಗೆ ತಿಳಿದಿದ್ದರೆ ಅವರು ಯುದ್ಧಕ್ಕೇ ಬರುತ್ತಿರಲಿಲ್ಲ. ಆಹಾ! ಯುದ್ಧದಲ್ಲಿ ದುರ್ಯೋಧನಾದಿಗಳನ್ನು ಕೊಲ್ಲಲು ನನಗೆ ಅನುವಾದ ನನ್ನ ಈ ಬಾಹುದಂಡಗಳಿಗೆ ನಮಸ್ಕರಿಸುತ್ತೇನೆ! ದೇವತೆಗಳ ಅನುಗ್ರಹದಿಂದ ನಮಗೆ ಜಯವೂ ಪ್ರಾಪ್ತಿಯಾಯ್ತು”
ಭೀಮನ ಇಂತಹ ಕುಹಕದ ಮಾತುಗಳ ಬಗ್ಗೆ ಯುಧಿಷ್ಠಿರ, ಅರ್ಜುನ ಕುಂತಿ ಮೊದಲಾದವರಿಗೆ ತಿಳಿಯದು. ಆಗೊಮ್ಮೆ ಈಗೊಮ್ಮೆ ನಕುಲ-ಸಹದೇವರಿಗೆ ಈ ವಿಷಯ ಗೋಚರಿಸುವುದಾದರೂ ಅವರು ಸುಮ್ಮನೇ ಇದ್ದರು. ಬಹುಶಃ ಭೀಮನು ತಮ್ಮ ಅಣ್ಣನೆಂಬ ಎಂಬ ಗೌರವದಿಂದಲೊ ಅಥವಾ ಭೀಮನ ಕೆಣಕುನುಡಿಗಳನ್ನು ಅವರೂ ಅನುಮೋದಿಸುತ್ತಿದ್ದರೊ ಏನೊ!
ಹೀಗೇ ಹದಿನೈದು ವರ್ಷಗಳು ಕಳೆದುಹೋದುವು. ಅಲ್ಲಿಯವರೆಗೆ ಭೀಮನ ಮಾತುಗಳನ್ನು ಕೇಳಿ ನೊಂದಿದ್ದ ವೃದ್ಧದಂಪತಿಗೆ, ಇನ್ನು ಉಳಿದ ದಿನಗಳನ್ನು ತಾವು ವಾನಪ್ರಸ್ಥದಲ್ಲಿ ಕಳೆಯಬೇಕೆಂಬ ಮನಸ್ಸಾಯ್ತು. ಸರ್ವಭೋಗಗಳನ್ನೂ ತ್ಯಜಿಸಿ, ಕಾಡಿನಲ್ಲಿ ತಪೋನಿರತರಾಗಿ ಜೀವನ ಸಾಗಿಸಬೇಕೆಂಬ ಹಂಬಲವು ಹೆಚ್ಚಾಯ್ತು. ಅದನ್ನೇ ಅವರು ಧರ್ಮರಾಯನ ಬಳಿ ನಿವೇದಿಸಿಕೊಂಡರು.
ಧರ್ಮರಾಯನು ಅವರ ಮಾತಿಗೆ ಖಂಡಿತ ಒಪ್ಪಲಿಲ್ಲ. ಆದರೆ ಆಗ ವೇದವ್ಯಾಸರು ಅಲ್ಲಿಗೆ ಬಂದು, “ರಾಜನ್ಯರಿಗೆ ಯುದ್ಧದಲ್ಲಿ ಪ್ರಾಣತ್ಯಾಗ ಮಾಡುವುದೂ ಅಥವಾ ತಪಶ್ಚರ್ಯೆಯಲ್ಲಿ ಪ್ರಾಣತ್ಯಾಗ ಮಾಡುವುದೂ ಶ್ರೇಯಸ್ಕರವೆಂದು ಹೇಳುತ್ತಾರೆ; ಅವರೂ ಸಹ ಈವರೆಗೆ ಸಾಕಷ್ಟು ದುಃಖಗಳನ್ನು ಅನುಭವಿಸಿ ನೊಂದಿದ್ದಾರೆ. ಇನ್ನು ಮುಂದೆ ಅವರ ಇಷ್ಟದಂತೆ ಅವರನ್ನು ಅರಣ್ಯವಾಸಕ್ಕೆ ತೆರಳಲು ಸಮ್ಮತಿಸು. ಅದೇ ಒಳ್ಳೆಯದು” ಎಂದು ತಿಳಿಹೇಳಿದರು. ಕೊನೆಗೆ ಧರ್ಮಜನೂ ಒಪ್ಪಬೇಕಾಯ್ತು. ತಾನು ಗಾಂಧಾರಿಯೊಡನೆ ಅರಣ್ಯವಾಸಕ್ಕೆ ಹೊರಡಲಿರುವುದಾಗಿ -ಧೃತರಾಷ್ಟ್ರನು- ಪ್ರಜೆಗಳಿಗೂ ತಿಳಿಸಿದನು.
ಮುಂದೆ, ಧೃತರಾಷ್ಟ್ರನು ತಾನು ಹೊರಡುವ ಮುನ್ನ ತನ್ನ ಮಕ್ಕಳೆಲ್ಲರಿಗೂ, ಯುದ್ಧದಲ್ಲಿ ಮಡಿದ ಭೀಷ್ಮಾದಿ ಮಹಾವೀರರಿಗೂ ಸದ್ಗತಿ ಪ್ರಾಪ್ತಿಯಾಗಲೆಂದು ಕೋರಿ — ಅವರ ಶ್ರಾದ್ಧಕರ್ಮಗಳನ್ನು ನೆರವೇರಿಸಲು ಬಯಸಿದನು. ಅದಕ್ಕೆ ಧರ್ಮರಾಯನ ಅನುಜ್ಞೆಯನ್ನು ಕೇಳಿಬರಲೆಂದು ವಿದುರನನ್ನು ಅವನ ಬಳಿಗೆ ಕಳುಹಿಸಿದನು.
ವಿದುರನು ಬಂದಾಗ ಧರ್ಮರಾಯನೊಡನೆ ಭೀಮಾರ್ಜುನರೂ ಇದ್ದರು; ವಿದುರನು ಅಲ್ಲಿಗೆ ಬಂದು, ಧೃತರಾಷ್ಟ್ರನು ಯುದ್ಧದಲ್ಲಿ ಮಡಿದ ಭೀಷ್ಮ, ಬಾಹ್ಲಿಕ, ಸೋಮದತ್ತ ಮುಂತಾದವರಿಗೂ, ದುರ್ಯೋಧನಾದಿ ತನ್ನ ಮಕ್ಕಳಿಗೂ ಶ್ರಾದ್ಧವನ್ನು ನೆರವೇರಿಸಲು ಬಯಸುತ್ತಿರುವನೆಂದು ತಿಳಿಸಿದನು. ಆ ಮಾತು ಕೇಳಿ ಭೀಮನು ಏನಾದರೂ ಅನರ್ಥವನ್ನು ಆಡಿಯಾನು ಎಂದು ಊಹಿಸಿದ ಅರ್ಜುನನು, ಮೊದಲೇ ಭೀಮನನ್ನು ಒಪ್ಪಿಸಲು ಪ್ರಯತ್ನಿಸಿದ.
ಅದಕ್ಕೆ ಭೀಮನು, “ಇಷ್ಟು ವರ್ಷಗಳಿಂದ ಅವರ ಶ್ರಾದ್ಧ ಮಾಡಿದ್ದು ಸಾಲಲಿಲ್ಲವೇನು. ಈಗ ಯಾಕಂತೆ, ಮತ್ತೆ? ಭೀಷ್ಮಾದಿ ಬಂಧುಗಳ ಶ್ರಾದ್ಧ ಮಾಡೋಕೆ ನಾವೇನು ತಕ್ಕವರಲ್ಲವೆ? ಅದಕ್ಕೆ ಆ ದುಷ್ಟಬುದ್ದಿಯ ಧೃತರಾಷ್ಟ್ರನೇ ಆಗಬೇಕೆ?
ಅಷ್ಟಕ್ಕೂ, ಕೌರವರ ಕಾರಣವಾಗಿ ನಾವು ಅಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದಾಗ ಏನು ಮಾಡಿದರು — ಆ ಭೀಷ್ಮ ಬಾಹ್ಲಿಕ ಮುಂತಾದವರು? ಅವರ ಬಗ್ಗೆ ನಮಗೇನು ಗೊತ್ತಿಲ್ಲವೆ. ನಮಗೆ ಅಂತಹ ಬಂಧುಗಳಾದರೂ ಯಾಕೆ ಬೇಕು ಹೇಳು. ಅವರ ಶ್ರಾದ್ಧವನ್ನು ವಿರೋಧಿಸಿದರೆ ತಪ್ಪೇನೂ ಇಲ್ಲ.
ಇನ್ನು ಕರ್ಣನ ಶ್ರಾದ್ಧವೊ; ಮಗನ ಮೇಲಿನ ವಾತ್ಸಲ್ಯದಿಂದ ನಮ್ಮ ತಾಯಿ ಕುಂತೀದೇವಿಯೇ ಅದನ್ನು ನೆರವೇರಿಸಲಿ. ಅದನ್ನು ವಿರೋಧಿಸಲಾಗದು ಕೂಡ; ಆದರೆ ಬೇರೆಯವರಿಗೆಲ್ಲ ಶ್ರಾದ್ಧ ಮಾಡಬೇಕಾದದ್ದಿಲ್ಲ.”
“ಅಲ್ಲ, ಅವರು ಸಭೆಯಲ್ಲಿ ಪಾಂಚಾಲಿಯನ್ನು ಅವಮಾನಿಸಿದ ಸಂಗತಿಯನ್ನು ಹೇಗೆ ಮರೆತೆ, ಅರ್ಜುನ? ಅವಳೂ ನಮ್ಮೊಟ್ಟಿಗೆ ಅರಣ್ಯವಾಸಕ್ಕೆಗೆ ಬರುವಂತೆ ಮಾಡಿದ ವಿಷಯ ಹೇಗೆ ಮರೆತುಹೋಯಿತು, ನಿನಗೆ? ಆಗೆಲ್ಲ ಈ ಭೀಷ್ಮ ಮುಂತಾದ ಹಿರಿಯರ ಬಂಧುತ್ವ ಎಲ್ಲಿ ಹೋಗಿತ್ತು? ಅವೆಲ್ಲ ಈ ವಿದುರನಿಗಾದರೂ ಗೊತ್ತಿಲ್ಲದ ಸಂಗತಿಯೆ…?” ಎಂದು ಮುಂತಾಗಿ ವಾದಿಸಿದ.
ಅರ್ಜುನನಿಗೆ ಏನು ಹೇಳಲೂ ತೋಚದೆ, ‘ನಮ್ಮ ಅಣ್ಣನ ಮಾತು ಮೀರದಂತೆ ನಡೆಯೋದು ನಮ್ಮ ವ್ರತವಲ್ಲವೆ, ಭೀಮ. ಈಗ ಧೃತರಾಷ್ಟ್ರನ ಮಾತಿಗೆ ಒಪ್ಪಿ ನಡೆಯದಿದ್ದರೆ ನಮಗೆ ಅಪಕೀರ್ತಿ ಬರುವುದಿಲ್ಲವೆ?’ ಎಂದು ನಾನಾ ಮಾತುಗಳಿಂದ ಅವನನ್ನು ಅನುನಯಿಸಿ, ಕೊನೆಗೂ ಒಪ್ಪಿಸಿದ.
ಶ್ರಾದ್ಧಕಾರ್ಯಗಳೆಲ್ಲ ಮುಗಿದ ನಂತರ ಧೃತರಾಷ್ಟ್ರನೂ ಗಾಂಧಾರಿಯೂ ಕಾಡಿಗೆ ಹೊರಟರು. ಹಸ್ತಿನಾಪುರವೆಲ್ಲ, ಅವರನ್ನು ಅಗಲಬೇಕಾಯಿತಲ್ಲ ಎಂಬ ದುಖದಲ್ಲಿ ಮುಳುಗಿತು. ಧರ್ಮರಾಯನೂ, ಭೀಮಾದಿಗಳೂ ಶೋಕಾಕುಲಿತರಾಗಿ, ಅವರನ್ನು ಬೀಳ್ಕೊಡಲು ಧೃತರಾಷ್ಟ್ರನ ಹಿಂದೆಯೇ ನಡೆದರು.
ಕುಲವೃದ್ಧರೊಡನೆ ವಿದುರ ಸಂಜಯ ಮೊದಲಾದ ಆಪ್ತರೂ ಅರಣ್ಯವಾಸಕ್ಕೆಂದು ಹೊರಟರು. ಕೊನೆಗೆ, ಕುಂತಿಯೂ — ಅವರಿಬ್ಬರ ಸೇವೆ ಮಾಡುತ್ತ ತನ್ನ ಶೇಷಜೀವನವನ್ನು ಕಳೆಯುತ್ತೇನೆಂದು ನಿರ್ಧರಿಸಿ, ಹೊರಟಳು. ಯುಧಿಷ್ಠಿರ ಹಾಗೂ ಭೀಮ ಅತ್ತೂ ಕರೆದು ಗೋಗರೆದರೂ ಕುಂತಿಯು ತನ್ನ ನಿರ್ಧಾರವನ್ನು ಬದಲಿಸದೆ, ವಾನಪ್ರಸ್ಥಕ್ಕೆ ಹೊರಟುಬಿಟ್ಟಳು. ಊರ ಹೊರಗಿನವರೆಗೂ ಅವರಿಗೆ ಜೊತೆಯಾಗಿ ನಡೆದು, ಪಾಂಡವರೂ ಅವರ ಪರಿವಾರವೂ ಧೃತರಾಷ್ಟ್ರಾದಿಗಳನ್ನು ಬೀಳ್ಕೊಟ್ಟರು.
ಮುಂದೆ ಧೃತರಾಷ್ಟ್ರ ಮುಂತಾದವರು ಶತಯೂಪನೆಂಬ ರಾಜರ್ಷಿಯ ಆಶ್ರಮಕ್ಕೆ ಹತ್ತಿರದಲ್ಲೇ ಪರ್ಣಕುಟೀರಗಳನ್ನು ಅನುಗೊಳಿಸಿಕೊಂಡು, ಅಲ್ಲಿಯೆ ತಮ್ಮ ಜೀವನವನ್ನು ಕಳೆದರು.