ಜೀವೇಮ ಶರದಃ ಶತಂ

“ಒಂದೈದಾರ್ ಲಕ್ಷ ದುಡ್ಡು ಕಳ್ಕೊಂಡಿದ್ರೂ ಒಂದೆರಡ್ ದಿನ ಅತ್ತು ಸುಮ್ನಿರ‍್ಬೋದು; ಆದರೆ ಈ ನೋವು ಯಾತನೆಯಿದೆಯಲ್ಲ, ಇದೊಂದ್ ದೊಡ್ಡ್ ಶಿಕ್ಷೆ ಥರ ಆಗೋಗಿದೆ.”

ಈಚೆಗೆ ಮಂಡ್ಯದ ಬಳಿ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು, ಚೇತರಿಸಿಕೊಳ್ಳುತ್ತಿರುವ ಮಿತ್ರರೊಬ್ಬರಿಗೆ ಮೊನ್ನೆ ನಾನು ಫೋನ್ ಮಾಡಿದ್ದೆ; ಆಗ, ಅವರು ತಮ್ಮ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಿದ್ದರು. ನಮ್ಮ ಗುಂಪಿನಲ್ಲಿ ಆತ ಬಹಳ ಬಲಿಷ್ಠನಾಗಿದ್ದ ವ್ಯಕ್ತಿ; ಆದರೆ ಅವರನ್ನೂ ಆ ಪಾಟಿ ಸೋಲಿಸಿಬಿಟ್ಟಿತ್ತು — ಈ ಅಪಘಾತದಲ್ಲಾದ ಗಾಯಗಳು ಹಾಗೂ ಅದರ ಚಿಕಿತ್ಸೆಗೆಂದು ಮಾಡಿದ್ದ ಮೂರ್ನಾಲ್ಕು ಸರ್ಜರಿಗಳು. ‘ಬರೋ ಮಂಗಳವಾರ ಇನ್ನೂ ಒಂದು ಸರ್ಜರಿ ಮಾಡಲಿದ್ದಾರೆ’ ಎಂದು ತಿಳಿಸಿ, ಫೋನ್ ಇಟ್ಟರು, ಅವರು.

ಅವರನ್ನು ಕಾಣಲು ಹೋಗಿದ್ದ (ಭಾರತದಲ್ಲಿರುವ) ಇನ್ನೊಬ್ಬ ಸ್ನೇಹಿತರೂ ನನಗೆ, “ಅಷ್ಟು ಬಲವಂತನಾದವನು ಕೂಡ ಈ ರೀತಿ ನೋವು ತಡೆಯೋಕಾಗದೆ ನರಳೋದನ್ನ ನೋಡಿ ತುಂಬ ಸಂಕಟವಾಗುತ್ತೆ” ಎಂದು ತಿಳಿಸಿದ್ದರು.

ಮನಸ್ಸು ಈ ಮಾತುಗಳನ್ನೇ ಮೆಲುಕುಹಾಕುತ್ತಿತ್ತು. ನಿಜ, ಇಂಥ ಸಂದರ್ಭಗಳು ಒಂದು ಬಗೆಯ ಶಿಕ್ಷೆಯಿದ್ದಂತೆ; ಅನುಭವಿಸದೆ ವಿಧಿಯಿಲ್ಲ. ಆದರೆ, ನಾವು ಯಾವ ತಪ್ಪನ್ನು ಮಾಡಿರದಿದ್ದರೂ ಕೆಲವೊಮ್ಮೆ ಇಂತಹ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅದೇ ವಿಪರ್ಯಾಸ!

ನಮ್ಮ ಅನುಭವಕ್ಕೂ ಬಂದಿರುವ ವಿಚಾರಗಳು, ಸಂದರ್ಭಗಳ ಬಗ್ಗೆ ನಾವು ಯಾರಿಂದಲಾದರೂ ಕೇಳಿದಾಗ, ಅವು ನಮ್ಮನ್ನು ಬಹುಬೇಗ ಆವರಿಸಿಕೊಂಡುಬಿಡುತ್ತವೆ…

ಎರಡೂವರೆ ವರ್ಷಗಳ ಹಿಂದೆ, ಒಮ್ಮೆ ನಾನು ನನ್ನ ಅಕ್ಕನನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದೆ. ಬೆಂಗಳೂರಿನ ಜನನಿಬಿಡ ಪ್ರದೇಶವದು; ಆ ದಾರಿಯಿಂದಲೆ ಹಾದುಹೋಗಬೇಕಿತ್ತು.

ನಾನು ವೇಗವಾಗೇನೂ ಹೋಗುತ್ತಿರಲಿಲ್ಲ. ಅಷ್ಟರಲ್ಲಿ ಅದಾರೊ ಒಬ್ಬಾತ ಇದ್ದಕ್ಕಿದ್ದಂತೆ ನನ್ನ ಬೈಕಿಗೆ ಅಡ್ಡವಾಗಿ ಬಂದುಬಿಟ್ಟ. ಅದಾವ ಮೂಲೆಯಿಂದ ತಟ್ಟನೆ ಪ್ರತ್ಯಕ್ಷವಾದನೊ, ಆಸಾಮಿ! ಯಾವುದಕ್ಕೂ ಸಮಯವೇ ಇರಲಿಲ್ಲ. ಇದೆಲ್ಲ ಕಣ್ರೆಪ್ಪೆ ಬಡಿಯುವಷ್ಟು ಕಾಲದಷ್ಟರಲ್ಲಿ ನಡೆದದ್ದು: ನಾನು ಆತನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬೈಕನ್ನು ತುಸುವೆ ಪಕ್ಕಕ್ಕೆ ಹಾಯಿಸಿದೆ. ಸದ್ಯಕ್ಕೆ ಅವನಿಗೆ ತಾಕಲಿಲ್ಲ.

ಆದರೆ ದುರ್ದೈವ! ಅದುಹೇಗೊ ಆಯತಪ್ಪಿ ನನ್ನ ಬೈಕು ವಾಲಿಕೊಂಡು ಬಿದ್ದೇಬಿಟ್ಟಿತು. ನಾನು ಬಲಗೈಯಿ ಚಾಚಿಕೊಂಡಂತೆ, ನೆಲಮುಖವಾಗಿ ಬಿದ್ದೆ.

ಆ ಸಮಯಕ್ಕೆ ಸರಿಯಾಗಿ ಹಿಂದಿನಿಂದ ತುಂಬಿದ್ದ ಲಗೇಜ್ ಆಟೊವೊಂದು ಬರುತ್ತಿತ್ತು. ಚಾಚಿಕೊಂಡಿದ್ದ ನನ್ನ ಬಲಗೈ ಸರಿಯಾಗಿ ಆ ಆಟೊವಿನ ಮುಂದಿನ ಚಕ್ರದಡಿಯಿತ್ತು. ಆದರೆ, ನನ್ನ ಪುಣ್ಯವೊ ಅಥವಾ ದೇವರ ದಯೆಯೊ — ಆಟೊದವನು ಅಷ್ಟರಲ್ಲಿ ಬ್ರೇಕ್ ಹಾಕಿದ್ದ. ಇಲ್ಲವಾಗಿದ್ದರೆ — ಮೊಳಕೈಯ ಮೇಲೆ ಆ ಆಟೊ ಹತ್ತಿಬಿಟ್ಟಿದ್ದರೆ!!!

ಬಿಸಿಲಿಗೊ ಅಥವಾ ಟೈರಿನ ಬಿಸಿಗೊ — ಸುಟ್ಟುಹೋದಂತಾಗಿದ್ದ ನನ್ನ ಹಿಂಗೈಯ ಮೇಲೆ ಆ ಆಟೋವಿನ ಟೈರಿನ ಗುರುತು ಮೂಡಿತ್ತು. ಒಂದೇ ಒಂದು ಕ್ಷಣ ತಡವಾಗಿ, ಆ ಚಕ್ರವು ಮುಂದುವರೆದಿದ್ದರೆ, ಕೈಯೇ ಹೋಗುತ್ತಿತ್ತೇನೊ.! ಸದ್ಯ, ಈ ಘಟನೆಯಲ್ಲಿ ನನ್ನ ಅಕ್ಕನಿಗೆ ಯಾವ ಅಪಾಯವೂ ಆಗಲಿಲ್ಲವೆಂಬುದು ನನಗೆ ಅತಿಹೆಚ್ಚು ಸಮಾಧಾನ ತಂದ ವಿಷಯ.

ನಾನು ಈಗಲೂ ಭಾರತಕ್ಕೆ ಬಂದಾಗ — ಬೈಕ್ ನಡೆಸುವಾಗ, ಆ ಘಟನೆಯ ಪ್ರತಿಯೊಂದು ಚಿತ್ರವೂ ನನ್ನ ಕಣ್ಣ ಮುಂದೆ ಮೂಡಿ — ಮನಸ್ಸು ಒಂದು ಕ್ಷಣದ ಮಟ್ಟಿಗಾದರೂ ಭಯದಿಂದ ತುಂಬಿಹೋಗುತ್ತದೆ.

ಅದು ನಡೆದ ಹೊಸತರಲ್ಲಿ ನನ್ನನ್ನು ಕಂಡವರಲ್ಲಿ ಕೆಲವರು, “ಸದ್ಯ, ಹೆಚ್ಚೇನೂ ಏಟಾಗಲಿಲ್ಲವಲ್ಲ. ಸಣ್ಣ ಆಕ್ಸಿಡೆಂಟ್ ಅಷ್ಟೆ ಅಲ್ವಾ” ಎಂದಿದ್ದರು. ನಿಜ, ಮೊಳಕೈಯ ಬಳಿ ಸಣ್ಣದೊಂದು ಆಳವಾದ ಗಾಯವಾಗಿತ್ತು, ಅಷ್ಟೆ. ‘ಹೆಚ್ಚೇನೂ’ ಆಗಿರಲಿಲ್ಲ. ಆದರೆ, ಆಗಿಬಿಟ್ಟಿದ್ದರೆ? ಬಹುಶಃ ಈ ದಿನ ನನ್ನ ಅರ್ಧ ಬಲಗೈ ಇದ್ದಿರುತ್ತಿರಲಿಲ್ಲವೇನೊ. ಇಷ್ಟಕ್ಕೂ, ಅಪಘಾತಗಳಲ್ಲಿ ಸಣ್ಣದ್ದಾವುದು ದೊಡ್ಡದಾವುದು ಎಂದು ಹೇಗೆ ವಿಂಗಡಿಸುವುದು?

ಗಾಯ ಸಣ್ಣದೇ ಇತ್ತು; ಆದರೆ, ಆಗಬಾರದ ಸಮಯದಲ್ಲಿ ಗಾಯವಾಗಿತ್ತು. ಅಂದು ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದ ಆ ಅಜ್ಞಾತವ್ಯಕ್ತಿಯ ದಯೆಯಿಂದ — ನಾನು ನನ್ನ ಕುಂಟುಕೈಯಿಟ್ಟುಕೊಂಡೇ ನನ್ನ ತಾಯಿಯವರ ಅಪರಕರ್ಮಗಳನ್ನೂ, ಶ್ರಾದ್ಧವನ್ನೂ ಮಾಡಬೇಕಾಯಿತು. ನಿಜ, ಎರಡು-ಮೂರು ತಿಂಗಳಷ್ಟರಲ್ಲಿ ಗಾಯವೇನೊ ವಾಸಿಯಾಯಿತು. ಆದರೆ, ಅದರ ಕುರುಹು ನನ್ನ ಬಲಗೈಯ ಮೇಲೆ ಉಳಿದುಹೋಯಿತು. ಜೊತೆಗೆ, ಅದು ನಡೆದಾಗಿನ ಕಾಲದ ಎಲ್ಲ ಕಹಿಘಟನೆಗಳ ನೆನಪೂ ಸಹ…..

ಸರಿ, Accident ಎಂದರೆ ಅಚಾನಕ್ಕಾಗಿ ಏನೊ ನಡೆಯಬಾರದ ಘಟನೆ ನಡೆದುಹೋಗುವುದು — ಅಲ್ಲವೆ. ನಿಜಕ್ಕೂ ಆಕಸ್ಮಿಕವಾಗಿ ಆಗುವ ಅಪಘಾತಗಳ ಬಗ್ಗೆ ಯಾರೂ ಏನೂ ಮಾಡಲಾಗದು. ಯಾರೂ ಯಾರನ್ನೂ ದೂರಲೂ ಆಗದು.

ಆದರೆ, ಇನ್ನೂ ಕೆಲವು ಅಪಘಾತಗಳು ನಡೆಯುತ್ತವೆ; ಅವಕ್ಕೆಲ್ಲ ಜನರು ಸ್ವತಃ ತಮ್ಮ ಯೋಗಕ್ಷೇಮದ ಬಗ್ಗೆ ತಾವೇ ಅತಿಯಾದ ಅಸಡ್ಡೆ ತೋರಿ ವರ್ತಿಸುವ ರೀತಿಯೆ ಕಾರಣವೇನೊ ಎನಿಸುತ್ತದೆ. ಅವುಗಳ ಬಗ್ಗೆ ಓದಿದಾಗ, ನೋಡಿದಾಗ ಬಹಳ ಬೇಸರವಾಗುತ್ತದೆ.

ಹೆಬ್ಬಾಳದ ಕಡೆಯಿಂದ ಮೈಸೂರು ರಸ್ತೆಗೆ ಹೋಗುವ ಮಾರ್ಗವೊಂದಿದೆಯಲ್ಲ (ನನಗೆ ಅದರ ಹೆಸರು, ವಿವರಗಳ ನೆನಪಿಲ್ಲ), ಅಲ್ಲೊಂದು ಕಡೆ ರೈಲ್ವೇ ಹಳಿಯನ್ನು ದಾಟಿ ಹೋಗಬೇಕು. ಆ ಕಡೆಯ ರಸ್ತೆ ಏನೆಂದರೇನೂ ಚೆನ್ನಾಗಿರಲಿಲ್ಲ (ಈಚಿನ ವರ್ಷಗಳಲ್ಲಿ ಅದು ಸುಧಾರಿಸಿದೆಯೇನೊ ತಿಳಿಯದು!).

ದೊಡ್ಡದೊಡ್ಡ ಲಾರಿಗಳು, ಟ್ರಕ್ಕುಗಳ ಸಾಲುಸಾಲು — ಆ ದಾರಿಯಲ್ಲಿ. ಆ ಕಡೆ ಬೈಕು, ಆಕ್ಟಿವಾ ಮುಂತಾದ ದ್ವಿಚಕ್ರ ಸವಾರರು ಹೋಗುವ ಪರಿಯನ್ನು ನೋಡಬೇಕು. ಫುಟ್ ಪಾತ್ ಎಂದೂ ಕರೆಯಲಾಗದ, ಮಣ್ಣುರಸ್ತೆಯ ಮೇಲೆ, ಒಂದು ವಾಹನಕ್ಕೂ ಇನ್ನೊಂದು ವಾಹನಕ್ಕೂ ಅಂತರವೇ ಇರದಹಾಗೆ — ಎಲ್ಲೆಂದರಲ್ಲಿ ನುಗ್ಗಿಸಿ ಗಾಡಿ ನಡೆಸುತ್ತಾರೆ. ಆಗೊಮ್ಮೆ ಈಗೊಮ್ಮೆ ರಸ್ತೆಯ ಮೇಲೆ ಬರುವುದು, ಮತ್ತೆ ಆ ಮಣ್ಣು ಹಾದಿಗಿಳಿಯುವುದು — ಹೀಗೆ ಏನೇನೊ ಸರ್ಕಸ್ ಮಾಡುತ್ತ ವಾಹನವನ್ನೋಡಿಸುತ್ತಾರೆ. ಸ್ವಲ್ಪೇ ಸ್ವಲ್ಪ ಸ್ಕಿಡ್ ಆದರೂ — ರಸ್ತೆಯ ಮೇಲಿರುವ ದೊಡ್ಡ ಬಂಡಿಗಳ ಚಕ್ರಕ್ಕೆ ಇವರ ವಾಹನವೂ, ಇವರೂ ನಿಂಬೆಹಣ್ಣಿನಂತೆ ಸಿಕ್ಕಿಹೋಗುವುದೇ ಗತಿ! ಇದು ಅವರಿಗೂ ತಿಳಿಯದ್ದೇನಲ್ಲ. ಆದರೂ, ಅಂತಹ ಅಪಾಯಕರ ರೀತಿಯಲ್ಲಿ ಹೋಗುವುದರಲ್ಲೇ ಆನಂದವೊ ಏನೊ — ಕೆಲವು ಜನಕ್ಕೆ.

ಹೀಗೊಮ್ಮೆ ಆ ದಾರಿಯಲ್ಲಿ ಹೋಗುವಾಗ ಒಬ್ಬರಾರೊ ಬೈಕಿನಿಂದ ಬಿದ್ದು ವಿಪರೀತ ಗಾಯ ಮಾಡಿಕೊಂಡದ್ದನ್ನು ನೋಡಿದ್ದೆ. ಹತ್ತಿರದಿಂದ ಅಂತಹ ಘಟನೆಯನ್ನೂ, ಆ ಪಾಟಿ ರಕ್ತಧಾರೆಯನ್ನೂ ಕಂಡವರಿಗೆ ಅವುಗಳನ್ನು ಮರೆಯುವುದು ಬಲುಕಷ್ಟ.

ಇದನ್ನು ನಾನು ಬರಿ ಉದಾಹರಣೆಯಾಗಿ ಹೇಳಿದ್ದಷ್ಟೆ. ಆದರೆ, ಇದಕ್ಕಿಂತ ಹೆಚ್ಚಿನ ಅಪಾಯಕರ ಸನ್ನಿವೇಶಗಳಲ್ಲಿ — ತಮ್ಮ ಬಗ್ಗೆ ತಮಗೇ ಗಮನವಿರದೆ, ಕಾಳಜಿಯಿರದೆ ವಾಹನ ಚಲಾಯಿಸುವುದನ್ನು ನೂರಾರು ಕಡೆ ನಾವು ಕಾಣುತ್ತೇವೆ.

ನಮ್ಮ ಊರಿನ ಕಡೆ ಕೆಲವರಿಗೆ ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸುವುದೆಂದರೆ ಅದೇನೊ ಮಾಡಬಾರದ ಕೆಲಸದಂತೆ ಕಾಣಿಸುತ್ತದೆ. ತೀರ ಟ್ರಾಫಿಕ್ ಪೋಲಿಸರು ಇರುವ ದಾರಿಯಲ್ಲಿ ಹೋಗುವಾಗ ಮಾತ್ರ ಹೆಲ್ಮೆಟನ್ನು ಹಾಕಿಕೊಳ್ಳುತ್ತಾರೆ — ಅದೂ ಸಹ ತಮ್ಮ ರಕ್ಷಣೆಗೆಂದಲ್ಲ, ಟ್ರಾಫಿಕ್ ಪೋಲಿಸರ ಕೈಗೆ ಸಿಕ್ಕಿಕೊಳ್ಳಬಾರದೆಂಬ ಮುಂಜಾಗ್ರತೆಗೆ!

“ಅವನು ಊರಿನ ಸುತ್ತಮುತ್ತ ಗಾಡಿ ಓಡಿಸುವಾಗಲೂ ಹೆಲ್ಮೆಟ್ ಹಾಕ್ಕೊಂಡಿರ್ತಾನೆ” ಅಂತ ಕಿಸಿದು, ಆಡಿಕೊಳ್ಳುವವರನ್ನು ಕಂಡಿದ್ದೇನೆ. ಅವರ ಮೌಢ್ಯವನ್ನೂ, ಹುಚ್ಚುತನವನ್ನೂ ನೋಡಿ ಜುಗುಪ್ಸೆಯಾಗುತ್ತದೆ, ನನಗೆ. ಊರಿನ ಸುತ್ತಮುತ್ತಲಾದರೇನು, ಊರಿನಲ್ಲೇ ಆದರೂ ಏನು — ಆ ಪ್ರದೇಶದಲ್ಲಿ ಯಾವ ದುರ್ಘಟನೆಯೂ ನಡೆಯುವುದಿಲ್ಲವೆಂದಿದೆಯೇ?

ದುರದೃಷ್ಟವಶಾತ್, ಊರಿನ ಪೇಟೆಬೀದಿಯಲ್ಲೇ ಒಂದೆರಡು ಸಾರಿ ಅಪಘಾತಗಳಾದದ್ದುಂಟು.

ಇನ್ನು, ಕೆಲವು ರೈಲ್ವೇಸ್ಟೇಶನ್ನುಗಳಲ್ಲಿ — ಜನರ ತರಾತುರಿ ಹೇಳತೀರದು. ತೀರ ರೈಲು ನಿಲ್ಲುವ ಮುಂಚೆಯೆ ಅದರೊಳಕ್ಕೆ ಹತ್ತುವುದೊ ಅಥವಾ ಚಲಿಸುತ್ತಿರುವ ರೈಲಿನಿಂದ ಇಳಿಯುವುದೊ ಮಾಡುತ್ತಾರೆ. ಆಗೆಲ್ಲ, “ಒಂದಿಂಚು ಆಚೀಚೆ ಆಯಿತೆಂದರೂ ಆಗುವ ಅನಾಹುತ ಎಂಥದ್ದಿರಬಹುದು ಎಂಬ ಊಹೆಯೇ ಇಲ್ಲವೆ ಇವರಿಗೆ?” ಎನಿಸುತ್ತದೆ. ಅಂತಹ ಅನಾಹುತಗಳು ಆಗುವುದೇ ಇಲ್ಲವೆಂದೇನಿಲ್ಲ; ಸುಮಾರು ಸಾರಿ ಆಗುವುದುಂಟು. ಆದರೂ ಎಂಥದ್ದೊ ಮೊಂಡು ಧೈರ್ಯ, ಕೆಲವರಿಗೆ!

ನಾನು ಶಾಲೆಯಲ್ಲಿದ್ದಾಗ ಸಂಜೆಯಹೊತ್ತು ನಮ್ಮೂರಿನ ರೈಲ್ವೇಸ್ಟೇಶನ್ನಿಗೆ ಹೋಗಿ, ಅಲ್ಲಿ ಕುಳಿತು ಓದಿಕೊಳ್ಳುತ್ತಿದ್ದೆ. ಆಗೊಮ್ಮೆ, ಪ್ಲಾಟ್ಫಾರ್ಮ್ ಮೇಲೆ ನಡೆಯುತ್ತಿದ್ದಾಗ — ಪ್ಲಾಟ್ಫಾರ್ಮಿನ ಅಂಚಿಗೆ — ಸುಮಾರು ದೂರದವರೆಗೆ ರಕ್ತದ ಕಲೆ ಧಾರೆಧಾರೆಯಾಗಿ ಅಂಟಿ, ಒಣಗಿ ಕಂದುಗಟ್ಟಿದ್ದುದನ್ನ ನೋಡಿ ನನಗೆ ಭಯಾಶ್ಚರ್ಯವಾಯಿತು. ಕೂಡಲೆ ಸ್ಟೇಶನ್ ಮಾಸ್ಟರರ ಬಳಿಗೆ ಹೋಗಿ ಆ ಬಗ್ಗೆ ವಿಚಾರಿಸಿದಾಗ ತಿಳಿದದ್ದಿಷ್ಟು:

ಆ ದಿನ ಬೆಳಿಗ್ಗೆ ರೈಲು ಹೊರಟಾದ ನಂತರ, ಅದನ್ನು ಏರಲೆಂದು ಯಾರೊ ಓಡಿಬಂದು ಟ್ರೈನಿನಲ್ಲಿ ಹತ್ತಲು ಪ್ರಯತ್ನಿಸಿದರಂತೆ. ಆಗ, ರೈಲಿನ ವೇಗಕ್ಕೆ ಸಮನಾಗಿ ಓಡಲಾಗದೆ, ಆಯತಪ್ಪಿ, ಅವರ ಒಂದು ಕಾಲು ಪ್ಲಾಟ್ಫಾರ್ಮಿಗೂ ರೈಲಿಗೂ ನಡುವೆಯಿದ್ದ ಸಂದಿಯಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿತಂತೆ. ರೈಲು -ಇದರ ಪರಿವೆಯಿರದೆ- ತನ್ನ ಪಾಡಿಗೆ ತಾನು ಮುಂದೆಹೋಗಿದೆ; ಆ ವ್ಯಕ್ತಿಯ ಕಾಲು ಆ ಸಂದಿಯಲ್ಲಿ ಸಿಲುಕಿ — ರೈಲು ಮುಂದೆ ಸಾಗಿದಂತೆಲ್ಲ ಜಜ್ಜಿಹೋಗಿ ತುಂಡಾಗಿದೆ. ರೈಲಿನಲ್ಲಿದ್ದವರಾರೊ ನೋಡಿ ಚೈನ್ ಎಳೆದರೂ, ರೈಲು ನಿಲ್ಲುವಷ್ಟರಲ್ಲಿ ಅನಾಹುತವಾಗಿಹೋಗಿತ್ತು.

ಇಂತಹ ಘಟನೆಗಳು ನೂರಾರು ನಡೆದಿವೆ, ನಡೆಯುತ್ತಿವೆ, ಮುಂದೆಯೂ ನಡೆಯುತ್ತವೆ(?). ಕೆಲವಕ್ಕೆ ಸ್ವತಃ ಜನರ ನಿರ್ಲಕ್ಷ್ಯವೇ ಮೂಲವಾದರೆ, ಇನ್ನೂ ಸಾಕಷ್ಟು ಕಡೆ — ಅತಿ ಕೆಟ್ಟದಾಗಿರುವ ರಸ್ತೆಗಳು, ಭಯಾನಕವಾದ ರಸ್ತೆಗುಂಡಿಗಳು, ಸರಿಯಾದ ಸೌಕರ್ಯಗಳಿಲ್ಲದ ವ್ಯವಸ್ಥೆಯೂ ಕಾರಣವಾಗುತ್ತವೆ.

ಆದರೆ, ಹೀಗೆಲ್ಲ ಏಕಾಗಬೇಕು? ನಿಜ, ಕೆಲಸಕ್ಕೆ ಹೋಗುವ ಅರ್ಜೆಂಟಿರಬಹುದು, ಅಥವಾ ಇನ್ನೇನೊ ಕಾರಣವಿರಬಹುದು. ಅವುಗಳ ನಿಮಿತ್ತ ಜನರು ಒಂದೊಮ್ಮೆ ಇಂತಹ ಅಪಾಯಕರ ಸ್ಥಿತಿಯಲ್ಲೂ, ಏನೊ ಮಾಡಲು ಹೋಗಿ ತಮಗೆ ತಾವೆ ಕುತ್ತು ತಂದುಕೊಳ್ಳುವ ಸಂಗತಿ ಶೋಚನೀಯ. ಆದರೂ, ತಮ್ಮ ಜೀವಕ್ಕಿಂತಲೂ, ತಮ್ಮ ಸ್ವಾಸ್ಥ್ಯಕ್ಕಿಂತಲೂ ಹೆಚ್ಚೆ — ಈ ಎಲ್ಲ ಕಾರಣಗಳು?

ನಾವು ನಮ್ಮ ಸುರಕ್ಷತೆಯ ಬಗ್ಗೆ ಅಷ್ಟೇಕೆ ಗಮನ ಹರಿಸುವುದಿಲ್ಲ? ನಮಗೆ ನಾವೇ ಅಷ್ಟು ಬೇಡದವರಾಗಿಬಿಡುತ್ತೇವೆಯೇ?

ಇಂತಹ ವಿಷಯದ ಬಗ್ಗೆ ಯೋಚಿಸುವಾಗೆಲ್ಲ, ಅಗ್ನಿಹೋತ್ರ ಮುಂತಾದ ಕೆಲವು ಕಾರ್ಯಗಳ ಸಂದರ್ಭಗಳಲ್ಲಿ ಪಠಿಸುವ ಶಾಂತಿಮಂತ್ರಗಳು ನನ್ನ ಮನಸ್ಸಿನಲ್ಲಿ ಅನುರಣಿಸುತ್ತವೆ.

೧.

ಓಂ ವಾಂಙ್ಮೇ ಆಸ್ಯೇಽಸ್ತು || ಓಂ ನಸೋರ್ಮೇ ಪ್ರಾಣೋऽಸ್ತು ||
ಓಂ ಅಕ್ಷ್ಣೋರ್ಮೇ ಚಕ್ಷುರಸ್ತು || ಓಂ ಕರ್ಣಯೋರ್ಮೇ ಶ್ರೋತ್ರಮಸ್ತು ||

ಓಂ ಬಾಹ್ವೋರ್ಮೇ ಬಲಮಸ್ತು || ಓಂ ಊರ್ವೋರ್ಮೇ ಓಜೋಸ್ತು ||

ಓಂ ಅರಿಷ್ಟಾನಿ ಮೇऽಂಗಾನಿ ತನೂಸ್ತನ್ವಾ ಮೇ ಸಹಸಂತು ||

ಓಂ! ನನ್ನ ಮುಖದಲ್ಲಿ ವಾಕ್ಕು (ಮಾತನಾಡುವ ಶಕ್ತಿ) ಇರಲಿ. ಮೂಗಿನಲ್ಲಿ ಪ್ರಾಣವಾಯುವಿರಲಿ -ಪ್ರಾಣಪ್ರದವಾದ ವಾಯುವು ಸಂಚರಿಸುತ್ತಿರಲಿ. ಕಣ್ಣುಗಳಲ್ಲಿ ದೃಷ್ಟಿಶಕ್ತಿಯು ಇರಲಿ, ಕಿವಿಗಳಲ್ಲಿ ಶ್ರವಣಶಕ್ತಿಯು ಚೆನ್ನಾಗಿರಲಿ. ನನ್ನ ಬಾಹುಗಳಲ್ಲಿ ಬಲವಿರಲಿ, ನನ್ನ ತೊಡೆಗಳಲ್ಲಿ ಶಕ್ತಿ, ಓಜಸ್ಸು ಇರಲಿ. ಓಂ! ಯಾವುದೇ ಅರಿಷ್ಟವನ್ನೂ ತಡೆದುಕೊಳ್ಳುವ (ಎದುರಿಸುವ) ಶಕ್ತಿಯು ನನ್ನ ಸರ್ವಾಂಗಗಳಲ್ಲಿಯೂ ತುಂಬಿರಲಿ.

೨.

ತಚ್ಚಕ್ಷುರ್ದೇವಹಿತಂ ಪುರಸ್ತಾತ್ ಶುಕ್ರಮುಚ್ಚರತು |

ಪಶ್ಯೇಮ ಶರದಃ ಶತಂ ಜೀವೇಮ ಶರದಃ ಶತಂ ||

ಶೃಣ್ವ್ಯಾಮ ಶರದಃ ಶತಂ ಪ್ರಬ್ರುವಾಮ ಶರದಃ ಶತಂ |

ಅದೀನಾಃ ಶರದಃ ಶತಂ ಭೂಯಾಶ್ಚ ಶರದಃ ಶತಂ ||

ಅದೋ, ಜಗಚ್ಚಕ್ಷುವಾದ, ದೇವತೆಗಳಿಗೆ ಪ್ರಿಯನಾದ ಸೂರ್ಯನು ಮೂಡಲದಲ್ಲಿ ಉದಿಸುತ್ತಿರುವನು. (ನಾವು) ನೂರು ವರುಶಗಳ ಕಾಲ ಅವನನ್ನು ಕಾಣುವಂತಾಗಲಿ, ನೂರು ವರ್ಷಗಳ ಕಾಲ ಜೀವಿಸುವಂತಾಗಲಿ. ನಾವು ನೂರು ವರ್ಷಗಳ ಕಾಲ (ಒಳ್ಳೆಯದನ್ನು) ಕೇಳುವಂತಾಗಲಿ, ಮಾತಾಡುವಂತಾಗಲಿ. (ನಾವು) ನೂರು ವರ್ಷಗಳ ಕಾಲ — ಅಥವಾ ಅದಕ್ಕೂ ತುಸು ಹೆಚ್ಚಿನ ಕಾಲ — ಗೌರವದಿಂದ ಬಾಳೋಣ.

ಎಂತಹ ಉತ್ತಮವಾದ ಆಶಯಗಳನ್ನು ಧ್ವನಿಸುತ್ತವೆ — ಈ ಮಂತ್ರಗಳು. ನಮ್ಮ ಸರ್ವಾಂಗಗಳೂ ಸುಸ್ಥಿತಿಯಲ್ಲಿದ್ದು, ನಾವು ದೀರ್ಘಕಾಲ ಸುಖದಿಂದ, ಗೌರವದಿಂದ ಬಾಳಬೇಕೆಂಬ ಭಾವವು ಪ್ರತಿಯೊಬ್ಬರಲ್ಲೂ ಇರಬೇಕಲ್ಲವೆ? ನಾವು ಕೂಡ ಅದಕ್ಕೆ ತಕ್ಕಂತೆಯೆ ನಡೆದುಕೊಳ್ಳಬೇಕಲ್ಲವೆ?

ನಮ್ಮ ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ನಮ್ಮ ಕೈಗೊ ಕಾಲಿಗೊ ತುಂಬ ಪೆಟ್ಟು ಮಾಡಿಕೊಂಡು, ಅವನ್ನು ಕಳೆದುಕೊಳ್ಳುವಂತಾಗಬಾರದಲ್ಲ. ಅಂತಹ ಅನಾಹುತಗಳಿಂದ — ನಮ್ಮ ಮೇಲೂ, ನಮ್ಮನ್ನು ನಂಬಿರುವ ಕುಟುಂಬ, ಸಂಬಂಧಗಳ ಮೇಲೂ ಆಗುವ ಪರಿಣಾಮವನ್ನು ನಾವು ಮರೆಯದೆ ವರ್ತಿಸಬೇಕಲ್ಲವೆ?

ಬರಿ ತಮ್ಮತಮ್ಮ ಯೋಗಕ್ಷೇಮವನ್ನಷ್ಟೆ ಬಯಸುವ ಸಂಕುಚಿತತೆಯನ್ನೂ ನಮಗೆ ನಮ್ಮ ಪೂರ್ವಿಕರು ಬೋಧಿಸಿಲ್ಲ. ಬದಲಿಗೆ, “ಸರ್ವೇ ಭವಂತು ಸುಖಿನಃ.. ಸರ್ವೇ ಸಂತು ನಿರಾಮಯಃ..” ಎಂಬಂತಹ, ಉದಾತ್ತವಾದ ಆಶಯವನ್ನೂ ವಿಚಾರಗಳನ್ನೂ ಬಾರಿಬಾರಿಯೂ ಹೇಳಿದ್ದಾರೆ. ಅಂತಹ ಉನ್ನತವಾದ ವಿಚಾರಗಳನ್ನು ಸದಾ ಮನನ ಮಾಡುತ್ತ, ಅವನ್ನು ಸಾರ್ಥಕಗೊಳಿಸುವ ರೀತಿ ನಾವು ನಡೆದುಕೊಂಡರೆ ನಮಗೂ ಹಿತ, ನಮ್ಮ ಸಮಾಜಕ್ಕೂ ಹಿತ, ಅಲ್ಲವೆ?

ಸರ್ವೇಷಾಂ ಸ್ವಸ್ತಿರ್ಭವತು ಸರ್ವೇಷಾಂ ಶಾಂತಿರ್ಭವತು |

ಸರ್ವೇಷಾಂ ಪೂರ್ಣಂ ಭವತು ಸರ್ವೇಷಾಂ ಮಂಗಲಂ ಭವತು ||

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಃ |

ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿದ್ದುಃಖಭಾಗ್ಭವೇತ್ ||

--

--

No responses yet