ಓಹಿಲಯ್ಯನ ಕಥೆ

“ಸೇವೆಗಾಗಿ ಕಾದ ಹೂವು ಕಸವ ಸೇರಿತೇ… ಬಾಳಿನಾಸೆ ಚಿಗುರಿನಲ್ಲೆ ಬಾಡಿಹೋಯಿತೆ….”

ಸುಮಾರು ಇಪ್ಪತ್ತು ವರುಶಗಳ ಹಿಂದಿನ ಮಾತು; ಆಗೊಮ್ಮೆ ನಾನು ನನ್ನ ತಾಯಿ ಹಾಗೂ ದೊಡ್ಡಮ್ಮನವರೊಡನೆ — ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಹೋಗಿದ್ದಾಗ, ಅಲ್ಲಿ ಆಲಯದ ಎದುರಿದ್ದ ರಸ್ತೆಯಲ್ಲಿ ನಿಂತು ಒಬ್ಬಾಕೆ ಈ ಸಾಲನ್ನು ಹಾಡುತ್ತಿದ್ದಳು. ಬಣ್ಣ ಗುರುತಿಸಲಾಗದಷ್ಟು ಮಾಸಿದ -ಅಲ್ಲಲ್ಲಿ ಹರಿದುಹೋದ- ಸೀರೆ, ಕೆದರಿದ ತಲೆ, ಸ್ನಾನಗಾಣದ ಮೈಯ್ಯಿ, ಅಲ್ಲಲ್ಲಿ ಕಾಣುತ್ತಿದ್ದ ಹುಣ್ಣು, ಗಾಯಗಳ ಗುರುತು… ಅದೇಕೊ ಆ ದಿನದ ಆಕೆಯ ರೂಪ, ಆಕೆ ಹಾಡುತ್ತಿದ್ದ ಈ ಸಾಲು ನನ್ನ ಮನಸ್ಸಿನಲ್ಲಿ ಇಂದಿನವರೆಗೂ ಅಚ್ಚಳಿಯದಂತೆ ಉಳಿದುಬಿಟ್ಟಿದೆ. ಈಗಲೂ ಎಂದಾದರೊಮ್ಮೆ ‘ಓಹಿಲೇಶ್ವರ’ ಚಿತ್ರದಲ್ಲಿಯ ಈ ಹಾಡನ್ನು ಕೇಳಿದಾಗ ಆ ದೃಶ್ಯ ನನ್ನ ಕಣ್ಣ ಮುಂದೆ ಸುಳಿಯುತ್ತದೆ.

ಆಗಿನ್ನೂ ನನಗೆ ಎಂಟೊ ಒಂಬತ್ತೊ ವಯಸ್ಸು; ನನಗೆ ಕಂಡಿದ್ದನ್ನೂ ಕೇಳಿದ್ದೆಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಬಲ್ಲ ಶಕ್ಯತೆಯಿದ್ದಿರಲಿಲ್ಲ. ಅದಾಗ್ಯೂ, ಅಂದು ಅಮ್ಮ ಹಾಗೂ ದೊಡ್ಡಮ್ಮ ಆ ಹೆಂಗಸಿನ ಬಗ್ಗೆ ಒಂದೆರಡು ಮರುಕದ ಮಾತುಗಳನ್ನಾಡಿಕೊಂಡದ್ದು ಅಸ್ಪಷ್ಟವಾಗಿ ನೆನಪಿದೆ. ಬಹುಶಃ ಆಕೆಯು ಆ ಮುಂಚೆ ಎಲ್ಲರಂತೆಯೆ ಚೆನ್ನಾಗಿಯೆ ಬಾಳಿ ಬದುಕಿದ್ದವಳು, ಆಗ ಅಂತಹ ದೀನಸ್ಥಿತಿಗೆ ತಲುಪಿದ್ದಳೆನಿಸುತ್ತದೆ. ಅಮ್ಮ ಹಾಗೂ ದೊಡ್ಡಮ್ಮನವರು ಆ ಹೆಂಗಸಿನ ಬದುಕು ಹಿಂದೆ ಹೇಗಿದ್ದಿತು ಎಂದು ಕಂಡಿದ್ದವರೊ ಏನೊ ನನಗೆ ತಿಳಿಯದು.

ಬದುಕೆಂದರೆ ಹೀಗೆಯೇ, ಯಾರದೊ ಬಾಳಿನ ಅಪೂರ್ಣ ಚಿತ್ರಗಳು ನಮ್ಮ ಸ್ಮೃತಿಯಲ್ಲಿ ಅದುಹೇಗೊ ಬಂದು ಸೇರಿಕೊಂಡುಬಿಡುತ್ತವೆ. ಅದರಲ್ಲಿ ಅವೆಷ್ಟೊ ಎಂದಿಗೂ ಪೂರ್ತಿಯಾಗುವುದೂ ಇಲ್ಲ, ಅವುಗಳ ಗೋಜಲು ಬಗೆಹರಿಯುವುದೂ ಇಲ್ಲ; ಕೊನೆಯವರೆಗೂ ಅವು ಹಾಗೆ ಅಸ್ಪಷ್ಟವಾಗಿಯೆ ಉಳಿದುಬಿಡುತ್ತವೆ, ಅಷ್ಟೆ! ಇದೂ ಅಂಥದ್ದೇ ಕಥೆ.

ಓಹಿಲೇಶ್ವರ ಚಿತ್ರವನ್ನು ನಾನು ಇದುವರೆಗೆ ನೋಡಿರಲಿಲ್ಲ. ಈಗ್ಗೆ ಮೂರು-ನಾಲ್ಕು ವರ್ಷಗಳ ಹಿಂದೆ ಓಹಿಲಯ್ಯನೆಂಬ ಶಿವಭಕ್ತನ ಕುರಿತಾದ ಕನ್ನಡ ರಚನೆಗಳನ್ನು ಓದಿದ್ದೆನಷ್ಟೆ.

ಅದೇಕೊ ನೆನ್ನೆ ಸಂಜೆ ಈ ‘ಓಹಿಲೇಶ್ವರ’ ಚಲನಚಿತ್ರವನ್ನು ನೋಡುವ ಮನಸ್ಸಾಯಿತು; ನೋಡಿದೆ. ಅಂದೆಂದೋ ನಾನು ಕಂಡ ದೃಶ್ಯ, ಈ ಮುಂಚೆ ಓದಿದ್ದ ಓಹಿಲನ ಕಥೆಗಳ ನೆನಪು ಮತ್ತೆ ಮರುಕಳಿಸಿತು; ಅದಕ್ಕೇ ಈ ಮೆಲುಕು:

ಕನ್ನಡದ ಕವಿ ಹರಿಹರನು ತನಗಿಂತ ಪುರಾತನರಾದ, ಹಾಗೂ ತನ್ನ ಸಮಕಾಲೀನರಾದ ಅನೇಕ ಶಿವಭಕ್ತರ ಕಥೆಗಳನ್ನು ‘ರಗಳೆ’ಗಳ ರೂಪದಲ್ಲಿ ರಚಿಸಿದ್ದಾನೆ. ಅವುಗಳಲ್ಲಿ “ಓಹಿಲಯ್ಯನ ರಗಳೆ”ಯೂ ಒಂದು.

‘ಓಹಿಲಯ್ಯನ ರಗಳೆ’ಯ ಕಥೆಯ ಸಾರಾಂಶವಿಷ್ಟು:

ಉತ್ತರ ದಿಗ್ಭಾಗದಲ್ಲಿ ವಿಲಾಸವತಿಯೆಂಬುದೊಂದು ನಗರ. ನಿ:ಕುಂಭನೆಂಬವವನು ಅಲ್ಲಿಯ ಅರಸು; ಆತನಿಗೆ ಅನೇಕ ವರ್ಷಗಳವರೆಗೆ ಮಕ್ಕಳಿರಲಿಲ್ಲವಾದ್ದರಿಂದ, ಮಹಾಶಿವನನ್ನು ಅನೇಕ ಪ್ರಕಾರಗಳಿಂದ ಉಪಾಸಿಸಿ, ಅವನ ಕೃಪಾಕಟಾಕ್ಷವನ್ನು ಪಡೆದ. ಅದರ ಫಲವಾಗಿ ಅವನು ತನ್ನ ರಾಣಿಯಲ್ಲಿ ಅನಂತ ಸೌಂದರ್ಯದಾಗರವೆನಿಸುವಂತಹ, ಮುದ್ದಾದ ಮಗುವೊಂದನ್ನು ಪಡೆದ. ಆ ಮಗುವಿಗೆ ಓಹಿಲನೆಂಬ ಹೆಸರಿಟ್ಟ.

ಓಹಿಲಯ್ಯನ ವ್ಯಕ್ತಿತ್ವವು ಬಹು ವಿಶೇಷವಾಗಿತ್ತು. ಅತಿ ಮುಗ್ಧನಾದ ಅವನಿಗೆ ಯಾವುದೇ ಲೌಕಿಕ ವಿಚಾರಗಳ ಬಗ್ಗೆ ಬೋಧೆಯಿರಲಿಲ್ಲ. ತಾಯಿಯು ಅವನನ್ನು ಕರೆದು ತಿನ್ನಿಸದ ಹೊರತು, ತನಗೆ ಹಸಿವಾಗಿದೆಯೆಂದು ಅವನಿಗೇ ಹೊಳೆಯದು; ಆ ಪರಿಯ ನಿರ್ಲಿಪ್ತತೆ, ಅವನದ್ದು. ಅಂತೂ, ಯಾವ ಕಷ್ಟಕಾರ್ಪಣ್ಯಗಳನ್ನೂ ಕಂಡರಿಯದಹಾಗೆ ಓಹಿಲನ ತಂದೆತಾಯಂದಿರು ಅವನನ್ನು ಬೆಳೆಸಿದರು.

ಹೀಗಿರಲು, ಅವನಿಗೆ ೧೬ ವರ್ಷವಾಗುವ ವೇಳೆಗೆ ಅವನ ತಂದೆಯು ರೋಗಕ್ಕೆ ತುತ್ತಾಗಿ ಅಸುನೀಗಿದ. ಅರಮನೆಯ ಮನ್ನೆಯರೂ ಸಚಿವರೂ ಸೇರಿ ಓಹಿಲನ ಕೈಯಿಂದ ಅವನ ತಂದೆಯ ಚಿತೆಗೆ ಬೆಂಕಿಯಿರಿಸಿದರು.

ಓಹಿಲನ ತಂದೆಯ ಶವವು ಉರಿದು ಬೂದಿಯಾಯಿತು. ಓಹಿಲನು ಇದರ ಬಗ್ಗೆಯೇನೂ ತಿಳಿಯದೆ ‘ನನ್ನ ತಂದೆ ಯಾವಾಗ ತಿರುಗಿಬರುತ್ತಾನೆ?’ ಎಂದು ತನ್ನ ಸಚಿವರನ್ನು ಕೇಳಿದನು. ಅವನ ಮುಗ್ಧತೆಯನ್ನು ಕಂಡು ಮರುಗಿದ ಅವರು, ಅವನ ತಂದೆ ಸತ್ತುಹೋದನೆಂದೂ ಮತ್ತೆಂದೂ ತಿರುಗಿ ಬಾರನೆಂದೂ ತಿಳಿಸಿದರು. ಮೊದಲ ಬಾರಿಗೆ ಸಾವಿನ ಬಗ್ಗೆ ಕೇಳಿ ತಿಳಿದ ಓಹಿಲನು, “ಎಲ್ಲರಿಗೂ ಹೀಗೇ ಆಗುತ್ತದೆಯೆ? ಎಲ್ಲರೂ ಸಾಯುತ್ತಾರೆಯೆ? ಮುಂದೊಮ್ಮೆ ನಾನೂ ಸಾಯುತ್ತೇನೆಯೆ? …” ಎಂದು ಮುಂತಾಗಿ ಪ್ರಶ್ನಿಸಿದನು. ಆ ನಂತರ, ಹುಟ್ಟಿದ ಎಲ್ಲರಿಗೂ ಸಾವು ನಿಶ್ಚಿತವೆಂದು ಕೇಳಿ ತಿಳಿದ ಬಳಿಕ “ಸಾವನ್ನು ಜಯಿಸುವುದು ಹೇಗೆ?” ಎಂದು ಕಂಡಕಂಡವರನ್ನೆಲ್ಲ ಕೇಳುತ್ತಿದ್ದನು. ಆಗೊಮ್ಮೆ, ಒಬ್ಬ ಭಕ್ತನು, “ಶಿವನನ್ನು ಮೆಚ್ಚಿಸಿ ಒಲಿಸಿಕೊಂಡರೆ ಸಾವನ್ನು ಜಯಿಸಬಹುದು” ಎಂದು ಹೇಳಿದನು. ಓಹಿಲನು ಅದನ್ನು ನಂಬಿ, ತನ್ನ ರಾಜ್ಯವನ್ನೂ ಪರಿವಾರವನ್ನೂ ತೊರೆದು ಶಿವನನ್ನು ಹುಡುಕುತ್ತ ಹೊರಟು, ಕೊನೆಗೆ ಸೌರಾಷ್ಟ್ರದ ಸೋಮನಾಥನ ಆಲಯಕ್ಕೆ ಬಂದು ತಲುಪುತ್ತಾನೆ.

ಅಲ್ಲಿ ನೇರ ಗರ್ಭಗುಡಿಗೆ ಹೋಗಿ ಶಿವಲಿಂಗವನ್ನಪ್ಪಿಕೊಂಡು, ತನ್ನನ್ನು ಸಲಹಬೇಕಾಗಿ ನಾನಾ ಬಗೆಯಿಂದ ಬೇಡಿಕೊಳ್ಳುತ್ತ, ಶಿವನನ್ನು ಮಾತನಾಡಿಸಲು ಪ್ರಯತ್ನಿಸುತ್ತಾನೆ. ಆ ಹೊತ್ತಿಗೆ, ಆಲಯದ ಬಾಗಿಲನ್ನು ಹಾಕಲೆಂದು ಬಂದ ಧರ್ಮಾಧಿಕಾರಿಯು ಅವನನ್ನು ಹೊರಕ್ಕೆಳೆಸಿ, ಆಲಯದ ಬಾಗಿಲು ಹಾಕಿಕೊಂಡು ಹೊರಟುಹೋಗುತ್ತಾನೆ. ಇತ್ತ ಓಹಿಲಯ್ಯನು ಬಗೆಬಗೆಯಾಗಿ ವಿಲಪಿಸುತ್ತ, ಶಿವನನ್ನು ಪ್ರಾರ್ಥಿಸುತ್ತಿರುತ್ತಾನೆ.

ಶಿವನು ಆಲಯ ನಿರ್ವಾಹಕನ ಕನಸಿನಲ್ಲಿ ಬಂದು, ತನ್ನ ಭಕ್ತನಾದ ಓಹಿಲಯ್ಯನನ್ನು ದೇವಾಲಯದೊಳಕ್ಕೆ ಬಿಡುವಂತೆ ಆಜ್ಞಾಪಿಸುತ್ತಾನೆ. ಅವನು ತಕ್ಷಣ ಓಡಿಬಂದು, ಆಲಯದ ಬಾಗಿಲು ತೆಗೆಸಿ, ಓಹಿಲಯ್ಯನನ್ನು ಆಲಯದೊಳಕ್ಕೆ ಕಳುಹಿಸಿ, ಕದವಿಕ್ಕುತ್ತಾನೆ. ಆಲಯ ನಿರ್ವಾಹಕನೂ ಅರ್ಚಕರೂ ಅಲ್ಲೆ ಅಡಗಿ ಕುಳಿತು, ಕಿಟಕಿಯೊಂದರ ಮೂಲಕ — ಒಳಗೆ ಏನು ನಡೆಯುವುದೋ ಎಂದು ನೋಡಿದರೆ, ಓಹಿಲಯ್ಯನು ಸೋಮನಾಥನೊಡನೆ ಮಾತಾಡುತ್ತಿದ್ದಾನೆ.! ಅಲ್ಲಿದ್ದವರಿಗೆಲ್ಲ ಅರಿವಾಯಿತು — ಓಹಿಲನು ಒಬ್ಬ ಮಹಾಶಿವಭಕ್ತನೆಂದು. ಅವರೆಲ್ಲ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

ಇತ್ತ, ಆಲಯದಲ್ಲಿ — ಓಹಿಲಯ್ಯನು ಶಿವನ ಬಳಿ, ತನಗೆ ಸಾವನ್ನು ಜಯಿಸುವ ಬಗೆಯನ್ನು ತಿಳಿಸುವಂತೆ ಬೇಡುತ್ತಾನೆ. ಶಿವನು “ಓಹಿಲ, ಹನ್ನೆರಡು ವರ್ಷಗಳಷ್ಟು ಕಾಲ ಪ್ರತಿದಿನವೂ ತಪ್ಪದೆ ನನಗೆ ಧೂಪದ ಸೇವೆಯನ್ನು ಸಲ್ಲಿಸು; ನಿನ್ನನ್ನು ಕೈಲಾಸಕ್ಕೆ ಕರೆಸಿಕೊಳ್ಳುತ್ತೇನೆ” ಎನ್ನುತ್ತಾನೆ.

ಸರಿ, ಮಾರನೆ ದಿನದಿಂದ ಓಹಿಲನು ಧೂಪವನ್ನು ಕೊಂಡು ತರಿಸಿ (ಹಾಗೇ ಬೇರೆಯವರಿಂದ ಸಂಗ್ರಹಿಸಿ, ಹೊರಿಸಿ ತಂದು) ಸೋಮನಾಥನಿಗೆ ಧೂಪದ ಸೇವೆಯನ್ನು ಮಾಡುತ್ತಾನೆ. ಮುಂದೆ ಓಹಿಲನ ಸಚಿವರ ಮೇಲ್ವಿಚಾರಣೆಯಲ್ಲಿ ಅವನ ರಾಜ್ಯವೂ ವಿಸ್ತರಿಸಿ, ಸಂಪದ್ಭರಿತವಾಗುತ್ತದೆ. ಅವರೆಲ್ಲ ಓಹಿಲಯ್ಯನ ಸೇವೆಗೆ ಸಹಕಾರ ನೀಡುತ್ತಾರೆ.

ಹಾಗೆ ಹನ್ನೆರಡು ವರ್ಷಗಳು ಕಳೆಯುತ್ತವೆ. ಆ ನಂತರ ಓಹಿಲಯ್ಯನು ಶಿವನಿಗೆ, ತನ್ನನ್ನು ಕೈಲಾಸಕ್ಕೆ ಕರೆಸಿಕೊಳ್ಳುವಂತೆ ಕೇಳುತ್ತಾನೆ. ಅದಕ್ಕೆ ಶಿವನು “ನಿನ್ನ ರಾಜ್ಯವು ಮುಂಚೆಗಿಂತ ವಿಸ್ತಾರವಾಯಿತು, ಸಂಪದ್ಭರಿತವಾಯಿತು. ನೀನು ಹೆಚ್ಚಿನ ಸುಖವಂತನಾದೆ. ಹೊನ್ನು ಕೊಟ್ಟು ಅನ್ಯರಿಂದ ಹೊರಿಸಿ ತಂದ ಧೂಪವನ್ನು ಹಾಕಿ ಸೇವೆ ಮಾಡಿದರೆ ನಿನ್ನ ಪುಣ್ಯಾರ್ಜನೆ ಹೇಗಾದೀತು? ಆ ಪುಣ್ಯವೆಲ್ಲ ಆಯಾ ವ್ಯಕ್ತಿಗಳಿಗೆ ಸೇರಿಹೋಯಿತು. ಇನ್ನು ಮುಂದಾದರೂ ನೀನೇ ಹೋಗಿ ಗುಗ್ಗುಳವನ್ನು ಕಡಿದು ತಂದು, ಮತ್ತೆ ಹನ್ನೆರಡು ವರ್ಷ ನನಗೆ ಧೂಪವನ್ನರ್ಪಿಸು.” ಎನ್ನುತ್ತಾನೆ.

ಮುಂದೆ, ಓಹಿಲಯ್ಯನು — ಕಲ್ಲುಮುಳ್ಳುಗಳನ್ನು ಲೆಕ್ಕಿಸದೆ ಕಾಲ್ನಡಿಗೆಯಲ್ಲಿ ಸಾಗಿ, ದಾರಿಯಲ್ಲಿ ಎದುರಾದ ಹಲವಾರು ಕ್ರೂರಮೃಗಗಳನ್ನು ಕಾಣುತ್ತ ಕಾಣುತ್ತ ಮಲಯಾಚಲವನ್ನು ತಲುಪಿ, ಅಲ್ಲಿ ತನ್ನ ಸರಿತೂಕದಷ್ಟು ಗುಗ್ಗುಳವನ್ನು ಕಡಿದು, ಅದನ್ನು ಕಾವಡಿಯೊಂದರಲ್ಲಿ ಹೊತ್ತುಕೊಂಡು ಸೌರಾಷ್ಟ್ರಕ್ಕೆ ಬಂದು, ಸೋಮನಾಥನಿಗೆ ಧೂಪದ ಸೇವೆಯನ್ನು ಸಲ್ಲಿಸಿದ.

ಹೀಗೆ ಓಹಿಲಯ್ಯನು ಪ್ರತಿನಿತ್ಯವೂ ಮಲಯಾಚಲದಿಂದ ತಂದ ಧೂಪದಿಂದ ಶಿವನನ್ನರ್ಚಿಸಿದ. ಕೊನೆಗೆ ಶಿವನು ನಂದಿಯನ್ನೂ ಇನ್ನಿತರ ಪ್ರಮಥರನ್ನೂ ಕಳಿಸಿ ಓಹಿಲಯ್ಯನನ್ನು ಕೈಲಾಸಕ್ಕೆ ಕರೆಸಿಕೊಂಡ; ಅವನಿಗೆ ಶಿವಗಣದ ಪದವಿಯನ್ನಿತ್ತ.

ಸೋಮದೇವನ ‘ಉದ್ಭಟಕಾವ್ಯ’ದಲ್ಲಿ

೧೩ನೇ ಶತಮಾನದಲ್ಲಿದ್ದ ಸೋಮದೇವನೆಂಬ ಅರಸನು ರಚಿಸಿರುವ ‘ಉದ್ಭಟಕಾವ್ಯ’ವೆಂಬ ಕೃತಿಯಲ್ಲಿಯೂ ಓಹಿಲಯ್ಯನ ಕಥೆಯಿದೆ.

ಭಲ್ಲಕೀ ನಗರದ ಅರಸು ಉದ್ಭಟದೇವ ಕೂಡ ಮಹಾ ಶಿವಭಕ್ತ. ಒಮ್ಮೆ ಅವನೂ ಅವನ ಹೆಂಡತಿಯೂ (ಸೌಂದರವತಿ) ಪಗಡೆಯಾಡುತ್ತಿದ್ದಾಗ, ಉದ್ಭಟನು ಅಕಾರಣವಾಗಿ ನಗುತ್ತಾನೆ. ಅದನ್ನು ಕಂಡು ಮುನಿದ ಸೌಂದರವತಿಯು, ನೀವು ನಕ್ಕ ಕಾರಣವೇನು ಎಂದು ಕೇಳಿದ್ದಕ್ಕೆ ಉದ್ಭಟನು, “ಓಹಿಲಯ್ಯನು ಹನ್ನೆರಡು ವರ್ಷ ಪರ್ಯಂತ ಶಿವನಿಗೆ ಧೂಪಾರಾಧನೆಯನ್ನು ಸಲ್ಲಿಸಿ, (ಈಗ) ಒಬ್ಬನೇ ಕೈಲಾಸಕ್ಕೆ ಹೋಗುತ್ತಿದ್ದಾನೆ. ಅದನ್ನು ನೆನೆದು ನಗು ಬಂತು. ತನ್ನನ್ನು ನಂಬಿದವರನ್ನೂ ಪರಿವಾರದವರನ್ನೂ ಜೊತೆಗೆ ಕರೆದೊಯ್ಯದೆ ತಾನೊಬ್ಬನೆ ಹೋಗುವುದು ಅದೇನು ಹೆಚ್ಚೆ? ಅದಕ್ಕೆ ನಗು ಬಂತು” ಎನ್ನುತ್ತಾನೆ.

ಆಗ ಸೌಂದರವತಿಯು ಓಹಿಲಯ್ಯನ ಕಥೆಯನ್ನು ತನಗೆ ತಿಳಿಸಬೇಕೆಂದು ಉದ್ಭಟನನ್ನು ಕೇಳಿದಾಗ, ಅವನು ಓಹಿಲಯ್ಯನ ಚರಿತ್ರೆಯನ್ನು ಸೌಂದರವತಿಗೆ ನಿರೂಪಿಸುತ್ತಾನೆ.

ಈ ಭಾಗದಲ್ಲಿ ಓಹಿಲಯ್ಯನ ಕಥೆಯನ್ನು ಸೋಮದೇವನು ‘ಉದ್ಭಟಕಾವ್ಯ’ದಲ್ಲಿ ವರ್ಣಿಸಿದ್ದಾನೆ (ಹರಿಹರನ ‘ಉದ್ಭಟಯ್ಯನ ರಗಳೆ’ಯಲ್ಲಿಯೂ ಭಾಗಶಃ ಹೀಗೆಯೇ ಇದೆ).

ಇಲ್ಲಿ ಬರುವ ಕಥೆ ಬಹುಪಾಲು ಹರಿಹರನ ರಗಳೆಯ ಕಥೆಯನ್ನೇ ಅನುಸರಿಸುತ್ತದೆ. ವಿಲಾಸನಗರದ ಅರಸ ನಿಷ್ಕುಂಭರಾಜನ ಮಗ ಓಹಿಲ. ಅವನು ಜನ್ಮತಃ ಮಹಾಮುಗ್ಧ. ತನ್ನ ತಂದೆಯ ಸಾವಿನ ದಿನ ಅವನಿಗೆ ಸಾವು ಎಂದರೇನು ಎಂದು ತಿಳಿಯುತ್ತದೆ. ಇಲ್ಲಿ ಕೂಡ ಓಹಿಲನು ‘ಸಾವನ್ನು ಜಯಿಸುವ ಬಗೆ ಹೇಗೆ?’ ಎಂದು ಹಲವರನ್ನು ಕೇಳಿ, ಕೊನೆಗೆ ಶಿವನನ್ನು ಶರಣುಹೊಕ್ಕು ಸೌರಾಷ್ಟ್ರಕ್ಕೆ ಬರುತ್ತಾನೆ. ಅಲ್ಲಿ ಗರ್ಭಗೃಹವನ್ನು ಹೊಕ್ಕಿದ್ದ ಓಹಿಲನನ್ನು ಅರ್ಚಕನು ಹೊರಹಾಕಿಸುತ್ತಾನೆ. ಆನಂತರ, ಅರ್ಚಕನ ಕನಸಿನಲ್ಲಿ ಶಿವನು ಕಾಣಿಸಿ, ಓಹಿಲಯ್ಯನನ್ನು ಆಲಯದೊಳಕ್ಕೆ ಬಿಡುವಂತೆ ಆಗ್ರಹಿಸುತ್ತಾನೆ. ಮುಂದಿನ ಕಥೆಯೂ ಬಹುತೇಕ ‘ಓಹಿಲಯ್ಯನ ರಗಳೆ’ಯಲ್ಲಿದ್ದಂತೆಯೇ ಇದೆ.

ಆದರೆ ಸ್ವತಃ ಓಹಿಲನೇ ಮಲಯಪರ್ವತಕ್ಕೆ ಹೋಗಿ, ತನ್ನ ಸರಿಭಾರದಷ್ಟು ಗುಗ್ಗುಳವನ್ನು ಹೊತ್ತು ತರಲು ಮೊದಲು ಮಾಡಿದ ಮೇಲೆ, ಆಲಯದ ಅರ್ಚಕರೂ ನಿರ್ವಾಹಕರೂ ಕೂಡಿ ಓಹಿಲಯ್ಯನಿಗೆ ನಾನಾ ರೀತಿಯ ಉಪದ್ರವಗಳನ್ನು ತಂದೊಡ್ಡುತ್ತಾರೆ. ಓಹಿಲನಿಗೆ ಸೌರಾಷ್ಟ್ರದಲ್ಲಿ ಎಲ್ಲಿಯೂ ತಿನ್ನಲು ಏನೂ ಸಿಗದಹಾಗೆ ಮಾಡುತ್ತಾರೆ. ಆನಂತರದ ದಿನಗಳಲ್ಲಿ, ಆಲಯದ ಪೂಜೆಗೆ ಉಪಯೋಗಿಸಿ ಎಸೆದ ನಿರ್ಮಾಲ್ಯ ಪತ್ರಗಳನ್ನೇ ತಿಂದು ಓಹಿಲನು ಹೊಟ್ಟೆಹೊರೆಯಬೇಕಾಗುತ್ತದೆ. ಹೀಗೆ ಕೆಲವು ದಿನಗಳು ಕಳೆದುವು. ಓಹಿಲನು ನಿರ್ಮಾಲ್ಯ ಪತ್ರಗಳನ್ನೂ ಸೇವಿಸದ ಹಾಗೆ ಮಾಡಲು ಸಂಚು ರೂಪಿಸಿದ ಅರ್ಚಕರು, ಪ್ರತಿದಿನವೂ ನಿರ್ಮಾಲ್ಯವನ್ನೆಲ್ಲ ಸುಟ್ಟುಹಾಕುತ್ತಿದ್ದರು. ಮುಂದೆ ಓಹಿಲನು ಆ ಬೂದಿಯನ್ನೇ ತಿಂದು ಬದುಕಬೇಕಾಗುತ್ತದೆ.

ಹೀಗೆ ಹನ್ನೆರಡು ವರ್ಷ ಕಳೆಯುತ್ತವೆ; ಒಂದು ದಿನ ಓಹಿಲನು ಮಲಯಾಚಲಕ್ಕೆ ಹೋಗಿ, ತನ್ನ ಸರಿಭಾರದ ಗುಗ್ಗುಳವನ್ನು ಹೊತ್ತುತರುತ್ತಿದ್ದಾಗ ಅವನ ಎಡಗಾಲಿಗೊಂದು ಮುಳ್ಳು ತಾಕುತ್ತದೆ. ಹಾಗಿದ್ದೂ ಅವನು ನಡೆಯಲು ಪ್ರಯತ್ನಿಸುತ್ತಾನಾದರೂ ಅತೀವ ನೋವಿನಿಂದ ನರಳುವಂತಾಗುತ್ತದೆ. ಹೋಗಲಿ, ತನ್ನ ಕಾಲಿಗಂಟಿದ ಮುಳ್ಳನ್ನು ಕೈಯಿಂದ ಕಿತ್ತುಹಾಕುವಂತೆಯೂ ಇಲ್ಲ. ಕಾಲನ್ನು ಮುಟ್ಟಿದರೆ ಶಿವನಿಗೆ ಅರ್ಪಿಸಬೇಕಾದ ಧೂಪವನ್ನು ಹೊರುವಂತಿಲ್ಲ, ಅದು ಅಪಚಾರವಾಗುತ್ತದೆ! ಮುಂದೆ ಹೇಗೆಂದು ಬಗೆಗಾಣದೆ ನಿಲ್ಲುತ್ತಾನೆ, ಓಹಿಲಯ್ಯ. ಆಗ ಶಿವನು ಒಬ್ಬ ಬೇಡನ ರೂಪದಲ್ಲಿ ಬಂದು, ತಾನು ಓಹಿಲನ ಕಾಲಿಗಂಟಿದ ಮುಳ್ಳನ್ನು ತೆಗೆಯುತ್ತೇನೆ ಎನ್ನುತ್ತಾನೆ. ಒಂದು ಚಿಮ್ಮಟದಿಂದ ಓಹಿಲನ ಕಾಲಿನ ಮುಳ್ಳನ್ನು ತೆಗೆದು, ಬೇಡನು ಅದೃಶ್ಯನಾಗುತ್ತಾನೆ. ನಡೆದ ಸಂಗತಿಯಿಂದ ವಿಸ್ಮಯಗೊಂಡ ಓಹಿಲನು, ಪೂಜೆಗೆ ತಡವಾದೀತೆಂಬ ಭಯದಿಂದ ಬೇಗಬೇಗ ನಡೆದು ಸೋಮನಾಥನ ಆಲಯವನ್ನು ತಲುಪುತ್ತಾನೆ.

ಅವನು ತಾನು ಹೊತ್ತು ತಂದ ಗುಗ್ಗುಳವನ್ನು ಪಕ್ಕದಲ್ಲಿರಿಸಿ, ಧೂಪವನ್ನು ಹಾಕಲು ಕೆಂಡವನ್ನು ಸಿದ್ಧಪಡಿಸಲು ತೊಡಗುತ್ತಾನೆ. ಈ ಸಮಯಕ್ಕೆ ಕಾದು ಅಡಗಿ ಕುಳಿತಿದ್ದ ಆಲಯ ನಿರ್ವಾಹಕರು ಗುಗ್ಗುಳವನ್ನು ಅಪಹರಿಸಿ ಬಚ್ಚಿಡುತ್ತಾರೆ. ಓಹಿಲನು ಬಂದು ನೋಡುತ್ತಾನೆ, ತಾನು ಹೊತ್ತು ತಂದ ಗುಗ್ಗುಳವು ಕಾಣಿಸುವುದಿಲ್ಲ! ಇನ್ನು ಈಗ ಮತ್ತೆ ಮಲಯಾಚಲಕ್ಕೆ ಹೋಗಿ ತರೋಣವೆಂದರೆ ಅಷ್ಟು ಸಮಯವಿಲ್ಲ… ಏನು ಮಾಡುವುದೆಂದು ತೋಚದೆ, ಕೊನೆಗೆ ಧೂಪದ ಬದಲಿಗೆ ತಾನೇ ಬೆಂಕಿಗೆ ಆಹುತಿಯಾಗುವುದಾಗಿ ನಿಶ್ಚಯಿಸುತ್ತಾನೆ, ಓಹಿಲಯ್ಯ. ಹಾಗೆ ನಿರ್ಧರಿಸಿ, ಹಚ್ಚಿದ್ದ ಬೆಂಕಿಯೊಳಗೆ ಪ್ರವೇಶಿಸಿ ಕುಳಿತುಬಿಡುತ್ತಾನೆ, ಅವನು. ಓಹಿಲಯ್ಯನ ಈ ಪರಿಯ ಭಕ್ತಿಯನ್ನೂ ನಿಷ್ಠೆಯನ್ನೂ ಕಂಡು ಮೆಚ್ಚಿದ ಶಿವನು ಅವನನ್ನು ಕೈಲಾಸಕ್ಕೆ ಕರೆಸಿಕೊಳ್ಳುತ್ತಾನೆ.

ಹಾಗೆ ಓಹಿಲನು ಒಂದು ಮಂಟಪದಲ್ಲಿ ಕುಳಿತು ಕೈಲಾಸದ ಕಡೆಗೆ ಹೊರಟಿರುವುದನ್ನು ಉದ್ಭಟದೇವನು ತನ್ನ ಹೆಂಡತಿ ಸೌಂದರವತಿಗೆ ತೋರಿಸುತ್ತಾನೆ.

ಸಿನಿಮಾದಲ್ಲಿ ಹೇಗಿದೆ?

ಡಾ|| ರಾಜ್ ಕುಮಾರ್ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ಓಹಿಲೇಶ್ವರ ಸಿನಿಮಾದಲ್ಲಿಯ ಕಥೆ ಸಾಕಷ್ಟು ಭಿನ್ನವಾಗಿದೆ. ಬಹುಶಃ ಸಿನಿಮಾ ಮಾಡಲು ಹೊಂದುವಂತೆ ಹಲವಾರು ಪಾತ್ರಗಳನ್ನೂ ಸನ್ನಿವೇಶಗಳನ್ನೂ ಜೋಡಿಸಿ ಹೆಣೆದಿದ್ದಾರೆನಿಸುತ್ತದೆ.

ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ (ಹಾಗೂ ಮತ್ತೊಮ್ಮೆ ಉದ್ಭಟಕಾವ್ಯದ ಕಡೆ ಕಣ್ಣಾಡಿಸಿದ ಮೇಲೆ) ಸಿನಿಮಾದ ಬಹುಪಾಲನ್ನು ಸೋಮದೇವನ “ಉದ್ಭಟಕಾವ್ಯ”ದ ಕಥೆಯನ್ನು ಅನುಸರಿಸಿ, ಅದೇ ಕೃತಿಯಲ್ಲಿಯ ಬೇರೆ ಕೆಲವು ವಿವರಗಳನ್ನು ತಕ್ಕಂತೆ ಮಾರ್ಪಡಿಸಿ ಈ ಚಿತ್ರವನ್ನು ನಿರ್ಮಿಸಿರುವಂತೆ ತೋರುತ್ತದೆ.

ಹರಿಹರನ ‘ಉದ್ಭಟಯ್ಯನ ರಗಳೆ’ಪ್ರಕಾರ ಓಹಿಲನು ಉದ್ಭಟನಿಗಿಂತ ಹಿಂದಿನ ಕಾಲದವನಂತೆ ಭಾಸವಾಗುತ್ತದೆ. ಆದರೆ ‘ಉದ್ಭಟಕಾವ್ಯ’ ಹಾಗೂ ‘ಓಹಿಲೇಶ್ವರ’ ಚಿತ್ರದಲ್ಲಿ ಅವರಿಬ್ಬರೂ ಸಮಕಾಲೀನರೆಂಬಂತೆ ಚಿತ್ರಿಸಲಾಗಿದೆ. ಸಿನಿಮಾದಲ್ಲಾದರೆ ಉದ್ಭಟನ ಪಾತ್ರವು ಮುಖ್ಯವಾಹಿನಿಗೆ ಅನುಕೂಲವಾಗುವಂತೆಯೇ ಚಿತ್ರಿತವಾಗಿದೆ.

--

--

No responses yet