ಐದು ಮಾತುಗಳು — ೬
ಶೃಂಗಾರ ನೈಷಧವೆಂಬ ಪ್ರೇಮಕಾವ್ಯ
ತೆಲುಗು ಭಾಷಿಕರು ಕವಿ ಶ್ರೀನಾಥನನ್ನು “ಕವಿಸಾರ್ವಭೌಮ”ನೆಂದೇ ಕರೆಯುತ್ತಾರೆ. ಶ್ರೀನಾಥನು, ತನ್ನ ಜೀವಿತಾವಧಿಯಲ್ಲಿ ಹಲವು ಅರಸರು ಹಾಗೂ ರಾಜಪ್ರಮುಖರ ಆಶ್ರಯದಲ್ಲಿ ನಾನಾ ಕೃತಿರತ್ನಗಳನ್ನು ರಚಿಸಿದ್ದಾನೆ. ಪಂಡಿತಾರಾಧ್ಯಚರಿತಮು, ಶಿವರಾತ್ರೀಮಹಾತ್ಮ್ಯಮು, ಭೀಮಖಂಡಮು/ ಭೀಮೇಶ್ವರಪುರಾಣಮು, ಕಾಶೀಖಂಡಮು, ಹರವಿಲಾಸಮು, ಪಲ್ನಾಟಿ ವೀರಚರಿತ್ರಮು, ಶೃಂಗಾರನೈಷಧಮು — ಹೀಗೆ, ಈತನಿಂದ ರಚಿತವಾದ ಕೃತಿಗಳ ಪಟ್ಟಿ ಹಿರಿದಾಗಿಯೆ ಇದೆ. ಜೊತೆಗೆ, ಶ್ರೀನಾಥನು ಗಾಥಾಸಪ್ತಶತಿಯನ್ನು ತೆಲುಗಿಗೆ ಅನುವಾದಿಸಿದ್ದನಂತೆ. ಇವಲ್ಲದೆ, ಶ್ರೀನಾಥನ ರಚನೆಗಳು ಎನ್ನಲಾದ ನೂರಾರು ಚಾಟುಪದ್ಯಗಳು ಲಭ್ಯವಾಗಿವೆ. ಅವನಿಗಿದ್ದ ಪಾಂಡಿತ್ಯವನ್ನೂ ಪ್ರೌಢಿಮೆಯನ್ನೂ, ಸರಸವಾದ ರೀತಿಯಲ್ಲಿ — ಚಮತ್ಕಾರಯುತವಾಗಿ ಕಾವ್ಯರಚನೆ ಮಾಡಿರುವುದನ್ನೂ ನೋಡಿದರೆ ‘ಕವಿಸಾರ್ವಭೌಮ’ನೆಂಬ ಬಿರುದು ಅವನಿಗೆ ತಕ್ಕದ್ದೇ ಆಗಿದೆ.
ಸದ್ಯಕ್ಕೆ, ಶ್ರೀನಾಥ ಕವಿಯ “ಶೃಂಗಾರ ನೈಷಧಮು” ಕೃತಿಯನ್ನು ಓದುತ್ತಿದ್ದೇನೆ. ಇದನ್ನು ಆತ ಶ್ರೀಹರ್ಷನ ‘ನೈಷಧಕಾವ್ಯ’ವನ್ನು (ಸಂಸ್ಕೃತ) ಅನುಸರಿಸಿ ತೆಲುಗಿನಲ್ಲಿ ರಚಿಸಿರುವನೆಂದು ತಿಳಿದುಬರುತ್ತದೆ. ಇದು ಮೂಲತಃ ನಲ-ದಮಯಂತಿಯರ ಕಥೆ.
ಮಹಾಭಾರತದಲ್ಲಿ ಬರುವ ನಲ-ದಮಯಂತಿಯರ ಕಥೆಯು ಆ ನಂತರದಲ್ಲಿ ನಾನಾ ಕವಿಗಳಿಗೆ ಸ್ಫೂರ್ತಿ ನೀಡಿ, ಹತ್ತಾರು ಕಾವ್ಯ-ನಾಟಕಗಳ ರಚನೆಗೆ ನಾಂದಿ ಹಾಡಿದೆ. ಮುಖ್ಯ ಆ ಕಥೆಯಲ್ಲಿಯ ವೈವಿಧ್ಯತೆ ಅಂಥದ್ದು; ಹಂಸದ ದೂತ್ಯದ ಹಿನ್ನೆಲೆಯಲ್ಲಿ ನಲ ಹಾಗೂ ದಮಯಂತಿಯರ ನಡುವೆ ಪ್ರೇಮಾಂಕುರವಾಗುವುದು, ಆನಂತರ — ದೇವತೆಗಳ ಮಾಯವನ್ನೂ ಜಯಿಸಿ ದಮಯಂತಿಯು ನಲನನ್ನೇ ವರಿಸುವುದು. ಆ ನಂತರ ನಲನು ಜೂಜಿನಾಟದಲ್ಲಿ ಸರ್ವಸ್ವವನ್ನೂ ಸೋಲುವುದು, ಆಮೇಲಿನ ಕಷ್ಟಕೋಟಲೆಗಳು — ಹೀಗೆ, ಬಹಳ ತಿರುವುಗಳನ್ನೂ ಏಳುಬೀಳುಗಳನ್ನೂ ಒಳಗೊಂಡ ಕಥೆ, ಅವರದ್ದು.
ಶೃಂಗಾರನೈಷಧ ಕಾವ್ಯದ ವಿಶೇಷವೆಂದರೆ, ಇಲ್ಲಿಯ ಕಥೆ ನಲ-ದಮಯಂತಿಯರ ಮದುವೆಯೊಂದಿಗೆ ಮುಕ್ತಾಯವಾಗುತ್ತದೆ. ಮುಂದಿನ ರೋದನೆ, ಕೋಟಲೆಗಳು ಇಲ್ಲಿ ಕಾಣಿಸುವುದಿಲ್ಲ. ಏನಿದ್ದರೂ, ಹೆಸರಿಗೆ ತಕ್ಕಂತೆ — ನಲ-ದಮಯಂತಿಯರ ನಡುವಿನ ನವುರಾದ ಪ್ರೇಮಕಥೆಯನ್ನೂ, ಅದರ ಸಾರ್ಥಕತೆಯನ್ನೂ ಈ ಕೃತಿಯಲ್ಲಿ ಕಾಣಬಹುದು. ಕಾವ್ಯದಲ್ಲಿ ಕಾಣಿಸುವ ಶೃಂಗಾರ ರಸಪೂರ್ಣ ವರ್ಣನೆಗಳು ಇದರ ಜೀವಾಳ. ಅದರಲ್ಲಿಯೂ, ನಲನು ಅದೃಶ್ಯರೂಪದಲ್ಲಿ ದಮಯಂತಿಯನ್ನು ಕಾಣಲು ಬಂದಾಗಿನ ಘಟನೆಗಳು ತುಂಬಾ ರಮ್ಯವಾಗಿವೆ. ಆ ಬಗ್ಗೆ ಇನ್ನೆಂದಾದರೂ ಹೇಳುತ್ತೇನೆ (ಈಗಿನ್ನೂ ಅದೇ ಅಧ್ಯಾಯವನ್ನು ಓದುತ್ತಿದ್ದೇನೆ!).
ವಿರಹತಪ್ತರಾದ ಪ್ರೇಮಿಗಳಿಗೆ ಚಂದಿರನನ್ನು ಕಂಡರೆ ಭಾರೀ ಸಿಟ್ಟು. ಬಹುತೇಕ ಎಲ್ಲ ಪ್ರೇಮಕಾವ್ಯಗಳಲ್ಲಿಯೂ ವಿರಹಾಕುಲರಾದ ಪ್ರೇಮಿಗಳು ಚಂದಿರನನ್ನು ಬೈಯುವುದೂ, ಶಪಿಸುವುದೂ ಸಾಮಾನ್ಯ. ‘ಕರ್ಣಾಟಕ ಕಾದಂಬರಿ’ಯಲ್ಲಾದರೆ, ವಿರಹತಪ್ತನಾದ ಪುಂಡರೀಕನು, ಹುಣ್ಣಿಮೆಯ ಚಂದ್ರನನ್ನು ಕಂಡು ಸಿಟ್ಟಾಗಿ “ಎರಡು ಸಾರಿ ಭೂಮಿಯ ಮೇಲೆ ಮಾನವನಾಗಿ ಹುಟ್ಟು” ಎಂದು ಶಪಿಸಿಬಿಡುತ್ತಾನೆ. ಚಂದ್ರನೂ, ತನ್ನ ತಪ್ಪೇನೂ ಇರದಿದ್ದರೂ ಹೀಗಾದುದನ್ನು ಕಂಡು, ಪುಂಡರಿಕನಿಗೂ ಶಾಪ ಕೊಡುತ್ತಾನೆ. ಪಾಪ! ಹೀಗೆಲ್ಲ ಬೈದಾಟ ರಂಪಾಟಗಳಿಗೆ ಗುರಿಯಾಗಲು ಚಂದಿರನು ಅದಾವ ತಪ್ಪು ಮಾಡಿದ್ದನೊ ಏನೊ.
ನನಗೆ “ಶೃಂಗಾರನೈಷಧ”ದಲ್ಲಿಯ ಕೆಲವು ಪದ್ಯಗಳು ತುಂಬಾ ಚೋದ್ಯವೆನಿಸಿದುವು:
ಆಗಷ್ಟೇ ಹಂಸವು ದಮಯಂತಿಯನ್ನು ಕಂಡು, ಅವಳಿಗೆ ನಲನ ಗುಣಗಣಗಳನ್ನೆಲ್ಲಾ ವರ್ಣಿಸಿ, ಅವಳೂ ನಲನನ್ನೇ ಪ್ರೇಮಿಸುವಂತೆ ದೂತ್ಯವನ್ನು ಸಾಧಿಸಿತು. ಆನಂತರ, ತಾನು ದಮಯಂತಿಯ ಪರವಾಗಿ ನಲನ ಬಳಿಗೆ ಹೋಗಿ, ಅವಳನ್ನು ವರಿಸುವಂತೆ ನಲನನ್ನು ಒಪ್ಪಿಸುತ್ತೇನೆಂದು ಹೇಳಿ, ಹಂಸವು ನಿಷಧನಗರಕ್ಕೆ ಹೋಯಿತು.
ಇತ್ತ, ದಮಯಂತಿಗೆ ವಿರಹದ ತಾಪವು ಹೆಚ್ಚಿತು. ಸಖಿಯರು ಏನೇನು ಉಪಚಾರ ಮಾಡಿದರೂ ಸರಿಹೋಗುತ್ತಿಲ್ಲ. ಹಾಗಿರುವಾಗ, ದಮಯಂತಿಯ ಕಣ್ಣಿಗೆ ಆಗಸದಲ್ಲಿಯ ಚಂದ್ರನು ಕಂಡ. ಇವಳಿಗೆ ಸಿಟ್ಟೋ ಸಿಟ್ಟು, ಚಂದಿರನ ಬಗ್ಗೆ. ಕಾಲಾನುಕಾಲದಿಂದಲೂ ಪ್ರೇಮಿಗಳನ್ನು ಅಗಲಿಸುವುದೇ ಈ ಚಂದ್ರನ ಕೆಲಸವಾಗಿಬಿಟ್ಟಿದೆ ಎಂದು ಅವಳು ಕೋಪೋದ್ರಿಕ್ತಳಾದಳು. ಆಗೊಮ್ಮೆ ದಮಯಂತಿಯು, ತನ್ನ ಸಖಿಯರಿಗೆ:
“ಅಂದು ಹಾಲ್ಗಡಲನ್ನು ಮಥಿಸಿದಾಗ ಎರಡು ಬಗೆಯ ವಿಷವು ಉದಿಸಿತು. ಒಂದು ಕಪ್ಪನೆಯದು (ಹಾಲಾಹಲ); ಇನ್ನೊಂದು ಬಿಳಿಯ ಜ್ವಾಲೆಗಳನ್ನು ಹೊಮ್ಮಿಸುವಂತಹ ಪ್ರಚಂಡವಾದ ವಿಷ (ಚಂದ್ರ). ಮಹಾದೇವನೇನೊ ಆ ಮೊದಲ ವಿಷವನ್ನು ಧರಿಸಿ ‘ವಿಷಕಂಠ’ನೆನಿಸಿದ. ಆದರೆ ಈ ಎರಡನೇ ವಿಷವಿದೆಯಲ್ಲ, ಕಾಲಕಾಲಕ್ಕೂ ದೇವತೆಗಳೆಲ್ಲ ಅದನ್ನು ಕುಡಿಯುತ್ತಲೇ ಬಂದರೂ ಆ ಬಟ್ಟಲು ಮತ್ತೆಮತ್ತೆ ತುಂಬುತ್ತಲೇ ಇದೆ. ಹಾಳಾದ್ದು, ಇದರ ದೆಸೆಯಿಂದ ಪ್ರೇಮಿಗಳು ನಾನಾ ಕಷ್ಟಗಳನ್ನು ಅನುಭವಿಸುತ್ತಲೇ ಇದ್ದಾರೆ. (ನನ್ನಂತಹ) ವಿರಹಿಗಳ ದೌರ್ಭಾಗ್ಯವೆಂಥದ್ದಿದೆಯೋ ನೋಡು” ಎಂದು ತನ್ನ ಮನದ ನೋವನ್ನು ತೋಡಿಕೊಂಡಳು.
ಅಲ್ಲಿಗೆ ನಿಲ್ಲದೆ, “ವಿರಹಿಣಿಯರ ಸಾವಿಗೆ ಕಾರಣನಾದನೆಂಬ ಕಳಂಕವನ್ನು ಹೊತ್ತ ಖಲನು ಈ ಚಂದ್ರನೇ. ಕಾಲಕೂಟಕ್ಕೂ, ಕಲ್ಪಾಂತದ ವಡಬಾಗ್ನಿಗೂ ಸಹೋದರನಾದ ಘಾತುಕನು ಈ ಚಂದ್ರನೇ..” ಎಂದು ನಾನಾ ರೀತಿಯಲ್ಲಿ ಚಂದ್ರನನ್ನು ನಿಂದಿಸುತ್ತ, ಚಂದ್ರನನ್ನು “ಗಗನವೆಂಬ ಸುಡುಗಾಡಿನಲ್ಲಿ ಒಂಟಿಯಾಗಿ ಅಲೆದಾಡುವ ಕೊಳ್ಳಿದೆವ್ವವು ಈ ಚಂದ್ರನೇ” ಎಂದು ಬೈಯುತ್ತಾಳೆ, ದಮಯಂತಿ. ಇದೊಳ್ಳೆ ತಮಾಷೆಯಾಗಿದೆ. ಇವಳು ನಲನ ಪ್ರೇಮಪಾಶಕ್ಕೆ ಸಿಕ್ಕು, ವಿರಹಾಗ್ನಿಯ ನಡುವೆ ಬೇಯುವಂತಾದರೆ ಅದರಲ್ಲಿ ಚಂದ್ರನ ತಪ್ಪೇನು? ಪಾಪ!
ಇಷ್ಟಾದರೂ ದಮಯಂತಿಯ ಸಿಟ್ಟು ತೀರದು. ಅವಳು :
“ಇವನು ಹುಟ್ಟೋ ಕಾಲಕ್ಕೆ (ಅಮೃತಮಥನ ನಡೆದಾಗ) ಆ ಮಂದರಪರ್ವತವು ಇವನನ್ನು ಹೊಸಕಿಹಾಕಬಾರದಿತ್ತೇ… ಗ್ರಹಣ ಕಾಲದಲ್ಲಿ ಇವನನ್ನು ನುಂಗಿದ ರಾಹುವು ತೃಪ್ತಿಯಿಂದ ಗರ‍್ರಂತ ತೇಗಬಾರದೆ… ವಿಷವನ್ನು ಕುಡಿದ ಶಂಕರನು, ಆ ಕಹಿಯನ್ನು ಹೋಗಲಾಡಿಸಲು — ಪ್ರತಿಪಾಕವಾಗಿ ಈ ಚಂದ್ರನನ್ನೇ ನುಂಗಬಾರದಿತ್ತೇ… ಮೃತ್ಯುವು ಆ ಕೃಷ್ಣಪಕ್ಷದ ಜೊತೆಸೇರಿ ಇವನ ಹೆಸರಿಲ್ಲದಂತೆ ಮಾಡಬಾರದೇ… ಅಗಸ್ತ್ಯಮುನಿಯು -ಅಂದು ಸಮುದ್ರದ ನೀರನ್ನಷ್ಟೂ ಕುಡಿದಾಗ- ಜೊತೆಗೆ ಇವನನ್ನೂ ಕುಡಿದುಬಿಡಬಾರದಿತ್ತೇ…ಇವನಿಂದ ವಿರಹಿಗಳು ಏನೆಲ್ಲಾ ಅನುಭವಿಸಬೇಕಲ್ಲ! ಅಕಟಾ! ಆ ವಿಧಿಯು ಇವನಿಗೇನೂ ಮಾಡದೇಹೋಯಿತೇಕೆ” ಎಂದು ಮತ್ತೆ ಮತ್ತೆ ಹಲುಬುತ್ತಾಳೆ. ಮುಂದೆ, ಆಗಾಗ ಗ್ರಹಣದ ಕಾಲದಲ್ಲಿ ಚಂದ್ರನನ್ನು ನುಂಗಿಬಿಡುವನಲ್ಲಾ ಎಂಬ ಕಾರಣಕ್ಕೆ, ದಮಯಂತಿಯು, ರಾಹುವನ್ನು ಹಾಡಿಹೊಗಳುತ್ತಾಳೆ.
ಒಟ್ಟಿನಲ್ಲಿ, ಈ ಪ್ರೇಮಿಗಳ ಹಾವಳಿಯಿಂದ ಆ ಚಂದಿರನಿಗಂತೂ ಉಳಿಗಾಲವಿಲ್ಲ.
ಮುದ್ದೆ ಮಸ್ಸೊಪ್ಸಾರು
ನಾನು ಭಾರತದಲ್ಲಿದ್ದಾಗ ಅಷ್ಟೇನೂ ನಿಯಮಿತವಾಗಿ ರಾಗಿಮುದ್ದೆಯನ್ನು ತಿನ್ನುತ್ತಿದ್ದವನಲ್ಲ. ಯಾವಾಗಲೊ ಆರುತಿಂಗಳಿಗೊ ಮೂರುತಿಂಗಳಿಗೊ ಒಂದೆರಡು ಮುದ್ದೆ ತಿನ್ನುತ್ತಿದ್ದುದಷ್ಟೇ. ಅದರಲ್ಲೂ, ಮಸ್ಸೊಪ್ಪು ಸಾರನ್ನು ಮಾಡಿದ ದಿನವಾದರೆ ತಪ್ಪದೆ ಎರಡಾದರೂ ರಾಗಿಮುದ್ದೆಯನ್ನಿಳಿಸುತ್ತಿದ್ದೆ. ಮುದ್ದೆ-ಮಸ್ಸೊಪ್ಪಿನ ಜೋಡಿಯ ಮಹಿಮೆಯೆ ಅಂಥದ್ದು ಎನಿಸುತ್ತದೆ. ಬಸ್ಸಾರು, ಕಾಳುಹುಳಿ, ಸೊಪ್ಪಿನ ಸಾರು, ಹಿದುಕಿದಬೇಳೆ ಸಾರು ಮೊದಲಾಗಿ ನಾನಾ ಬಗೆಯ ಸಾರುಗಳೊಂದಿಗೆ ಹೊಂದುತ್ತದೆಯಾದರೂ, ನನಗೆ ಮುದ್ದೆ-ಮಸ್ಸೊಪ್ಪು ಸಾರು ಎಂದರೆ ಅಚ್ಚುಮೆಚ್ಚು.
ಈಗ, ದೇಶವಲ್ಲದ ದೇಶಕ್ಕೆ ಬಂದು, ಇಲ್ಲಿ ಪ್ರತಿನಿತ್ಯವೂ ರಾಗಿಮುದ್ದೆಯನ್ನು ತಿನ್ನುವಹಾಗಾಗಿದೆ — ನನ್ನ ಪರಿಸ್ಥಿತಿ. ಇದೊಂಥರ ಒಳ್ಳೆಯದೇ ಆಯ್ತು ಬಿಡಿ. ಈ ಹಿನ್ನೆಲೆಯಲ್ಲಿ, ಆಗಾಗ ಮನೆಯಲ್ಲಿ ಕರ್ನಾಟಕ ಶೈಲಿಯ ವಿವಿಧ ಸಾರು ಪಲ್ಯಗಳನ್ನು ಮಾಡುವಂತಾಗುತ್ತದೆ.
ಮಸ್ಸೊಪ್ಪನ್ನು ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ತಯಾರಿಸುತ್ತಾರೆಂದು ತೋರುತ್ತದೆ. ನನ್ನ ಕೆಲವು ಗೆಳೆಯರಿಗೆ ಇದರ ಪರಿಚಯವೇ ಇದ್ದಿರಲಿಲ್ಲವೆಂದು ಕೇಳಿದಾಗ ಹಾಗೆನಿಸಿತು. ಬಹುತೇಕ ಎಲ್ಲ ಅಡುಗೆಗಳಲ್ಲಿಯಂತೆ, ಮಸ್ಸೊಪ್ಪನ್ನು ಮಾಡುವ ವಿಧಾನದಲ್ಲೂ, ಬಳಸುವ ಪದಾರ್ಥಗಳಲ್ಲೂ ಸ್ವಲ್ಪ ವ್ಯತ್ಯಾಸಗಳಿವೆ.
ನಾನು ಮಸ್ಸೊಪ್ಪನ್ನು ತಯಾರಿಸುವುದು ಹೀಗೆ: ಒಂದಷ್ಟು ಬೇಳೆಯನ್ನೂ, ತರತರದ ಸೊಪ್ಪುಗಳನ್ನೂ (ಪಾಲಾಕ್ಸೊಪ್ಪು, ದಂಟಿನ್ಸೊಪ್ಪು, ಸಬ್ಸಿಗೆ ಸೊಪ್ಪು), ಒಂದು ಈರುಳ್ಳಿ, ದೊಡ್ಡದಾಗಿ ಹೆಚ್ಚಿದ ಟೊಮೇಟೊ, ಹತ್ತೊ ಹದಿನೈದೋ ಹಸಿಮೆಣಸಿನಕಾಯಿ (ಖಾರಕ್ಕೆ ತಕ್ಕಷ್ಟು), ಜೀರಿಗೆ, ಮೆಣಸು — ಇವಿಷ್ಟನ್ನೂ ಕುಕ್ಕರಿನಲ್ಲಿಟ್ಟು ನುಣ್ಣಗೆ ಬೇಯಿಸಿಕೊಳ್ಳಬೇಕು. ಬೆಳ್ಳುಳ್ಳಿಯನ್ನು ಬಳಸುವವರು ಒಂದು ನಾಲ್ಕೈದು ಪಾಯಿ ಬೆಳ್ಳುಳ್ಳಿಯನ್ನೂ ಸೇರಿಸಬಹುದು.
ಇದೆಲ್ಲ ಬೆಂದ ನಂತರ, ಸೊಪ್ಪು ಬೆಂದ ನೀರನ್ನು ಬೇರೊಂದು ಪಾತ್ರೆಗೆ ಬರುವಂತೆ ಅವನ್ನು ಶೋಧಿಸಿಕೊಂಡು, ಸೊಪ್ಪನ್ನೂ ಬೇಳೆಯನ್ನೂ ಆರಲು ಬಿಡಿ. ಇದು ಆರಿದ ನಂತರ, ಮಸೆಗೋಲಿನಿಂದ ಅದನ್ನು ಚೆನ್ನಾಗಿ ಮಸೆಯಬಹುದು. ಅಥವಾ ಒರಳಿನಲ್ಲೊ ಮಿಕ್ಸಿಯಲ್ಲೊ ಹಾಕಿ ಒಂದೆರಡು ಸುತ್ತು ರುಬ್ಬಿಕೊಳ್ಳಬಹುದು. ತೀರ ನುಣ್ಣಗಾಗಬೇಕೆಂದೇನಿಲ್ಲ.
ರುಬ್ಬಿಕೊಂಡ/ ಮಸೆದ ಮಿಶ್ರಣಕ್ಕೆ ಸೊಪ್ಪಿನಿಂದ ಸೋಸಿದ ನೀರನ್ನೂ ಬೆರೆಸಿ, ಒಲೆಯ ಮೇಲಿಡಿ. ಅದು ಕುದಿ ಬರುವ ವೇಳೆಗೆ — ಬೇರೆಯಾಗಿ ಬೇಯಿಸಿಟ್ಟುಕೊಂಡ ಅವರೆಕಾಳನ್ನೊ ತೊಗರಿಕಾಳನ್ನೊ ಸೇರಿಸಿ, ಕುದಿಯಲು ಬಿಡಿ. ಆನಂತರ, ಸಾರಿನ ಹದವನ್ನು, ಉಪ್ಪು ಖಾರವನ್ನೆಲ್ಲ ಒಮ್ಮೆ ಸರಿನೋಡಿಕೊಂಡು, ಅದಕ್ಕೆ ತಕ್ಕ ಒಗ್ಗರಣೆ ಕೊಟ್ಟರೆ ಮಸ್ಸೊಪ್ಪು ಸಿದ್ಧವಾಗುತ್ತದೆ.
ರೂಪವೊಂದು ನಾಮ ಹಲವು
ನನ್ನ ರೂಮ್ ಮೇಟ್ ಒಬ್ಬರು ಮಂಗಳೂರಿನವರು. ಅಡುಗೆ ಮಾಡುವಾಗ, ಅವರೊಟ್ಟಿಗೆ ಮಾತಾಡುವಾಗ — ಕೆಲವೊಮ್ಮೆ ನನಗೆ ಹೊಸ ಪದಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಆಗೆಲ್ಲ, ಹೇಗೆ ಒಂದೇ ಪದಾರ್ಥಕ್ಕೆ ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಹೆಸರುಗಳು ಇದ್ದೀತೆಂಬ ಸಂಗತಿಯು ಸ್ಪಷ್ಟವಾಗಿ ಬೋಧೆಯಾಗುತ್ತದೆ, ನನಗೆ. ಹೀಗೊಮ್ಮೆ, ಮೊನ್ನೆ ಚಪಾತಿ ಸುಡುವಾಗ, “ಆ ಸೆಡೆ ಕೊಡಿ ಇಲ್ಲಿ” ಎಂದೆ. ಪಾಪ! ಅವರಿಗೇನೂ ಅರ್ಥವಾಗಲಿಲ್ಲ. ಆಮೇಲೆ ಆ ವಸ್ತುವನ್ನು ತೋರಿಸಿ ಕೇಳಿದ ಮೇಲೆ ಕೊಟ್ಟರು.
ನಮ್ಮ ಕಡೆ ದೋಸೆ/ ಚಪಾತಿ ಮಗುಚುವ ಕೈಯನ್ನು ‘ಸೆಡೆ’ ಎನ್ನುವುದುಂಟು. (ಈ ಪದಕ್ಕೂ, ‘ಸಡೆ’ ಎಂಬ ಪದಕ್ಕೂ ಯಾವ ಸಂಬಂಧವೂ ಇದ್ದಂತಿಲ್ಲ. ಸಡೆ ಎಂದರೆ, ಏನಕ್ಕೂ ಕೆಲಸಕ್ಕೆ ಬಾರದವನು ಎಂಬ ಅರ್ಥದಲ್ಲಿ, ಬಹಳಷ್ಟು ಕಡೆ ಬಳಕೆಯಲ್ಲಿದೆ). ನನಗೆ, ಕರ್ನಾಟಕದ ಬೇರೆಬೇರೆ ಕಡೆ ಈ ಪರಿಕರವನ್ನು ಏನೆಂದು ಕರೆಯುತ್ತಾರೊ ಎಂದು ತಿಳಿಯುವ ಕುತೂಹಲವಾಯಿತು. ಅದಕ್ಕಾಗಿ ಮೊನ್ನೆ ಒಮ್ಮೆ ಟ್ವಿಟ್ಟರಿನಲ್ಲಿ ಈ ಬಗ್ಗೆ ಕೇಳಿದ್ದೆ. ನಾನು ನಿರೀಕ್ಷಿಸಿರದ ಮಟ್ಟಿಗೆ, ಹೆಚ್ಚು ಹೆಚ್ಚು ಜನರಿಂದ ವೈವಿಧ್ಯಮಯವಾದ ಹೆಸರುಗಳು ಉತ್ತರವಾಗಿ ಬಂದುವು. ನನ್ನ ಮಟ್ಟಿಗೆ, ಅದೊಂದು ಅದ್ಭುತವಾದ ಕಲಿಕೆ. ಒಂದೇ ವಸ್ತುವಿಗೆ ಅದೆಷ್ಟು ಹೆಸರುಗಳು (ಹಾಗೂ ಆ ಹೆಸರಿನಲ್ಲೂ ಕಾಣಿಸುವ ಸಾಮ್ಯತೆ, ಭಿನ್ನತೆಗಳು)!.
ಅವುಗಳಲ್ಲಿ ಕಂಡ ಕೆಲವು ಹೆಸರುಗಳನ್ನು ಇಲ್ಲಿ ಪಟ್ಟಿಮಾಡಿದ್ದೇನೆ:
ಕಂಬದ ಮೇಲಿನ ಬೊಂಬೆಯ ಹಾಡು
ನಾಗಮಂಡಲ ಚಿತ್ರದ ಈ ಹಾಡಿನ ಬಗ್ಗೆ ಕಳೆದು ತಿಂಗಳು ಟ್ವಿಟ್ಟರಿನಲ್ಲಿ ಚರ್ಚೆಯಾಗಿತ್ತು. ಅದಕ್ಕಾಗಿ, ಆ ಹಾಡಿನ ಬಗ್ಗೆ ನನ್ನ ವಿಶ್ಲೇಷಣೆಯನ್ನು — ಸಂಕ್ಷಿಪ್ತವಾಗಿ ಬರೆಯುವುದಾಯ್ತು.
ಸದ್ಯದ ಓದು — “Drawing on the Right Side of the Brain”
ಬೆಟ್ಟಿ ಎಡ್ವರ್ಡ್ಸ್ ಎಂಬಾಕೆ ರಚಿಸಿರುವ “Drawing on the Right Side of the Brain” ಎಂಬ ಶೀರ್ಷಿಕೆಯ ಪುಸ್ತಕವು, ಚಿತ್ರರಚನೆಯನ್ನು ಕಲಿಸುವ ಪುಸ್ತಕಗಳ ಪೈಕಿ ಅತ್ಯಂತ ಜನಪ್ರಿಯವಾಗಿದೆ.
೨೦೧೨ರಲ್ಲಿ ನನ್ನ ಸ್ನೇಹಿತರೊಬ್ಬರು (ಕಲಾವಿದರು) ನನಗೆ ‘ಇದನ್ನು ತಪ್ಪದೇ ಓದು’ ಎಂದು ಸೂಚಿಸಿದ್ದರು. ಅದಾಗಿ ಕೆಲವು ದಿನಗಳಲ್ಲೇ ನಾನಿದನ್ನು ಕೊಂಡುಕೊಂಡದ್ದೂ ಆಗಿತ್ತು. ಆಗಿನಿಂದ ಹಲವಾರು ಸಾರಿ ಇದನ್ನೋದಲು ಪ್ರಯತ್ನಿಸಿದ್ದೇನೆ. ಆದರೆ, ಒಂದಲ್ಲಾ ಒಂದು ಕಾರಣಕ್ಕೆ ಆ ಓದು ಸ್ವಲ್ಪಕ್ಕೇ ನಿಂತುಹೋಗುತ್ತಿತ್ತು. ಮತ್ತೆ ಇನ್ನೆಂದೊ — ಮತ್ತೊಮ್ಮೆ ಅದನ್ನು ಮೊದಲಿನಿಂದ ಓದಲು ಶುರುಮಾಡಬೇಖಾಗುತ್ತಿತ್ತು. ಈ ಬಾರಿ ಮತ್ತೆ ಇದನ್ನು ಓದಲು ತೊಡಗಿದ್ದೇನೆ.
ಪುಸ್ತಕದ ಉದ್ದೇಶವು ಯಾರೇ ಆದರೂ ಸುಂದರವಾದ ಚಿತ್ರಗಳನ್ನು ರಚಿಸಲು ಕಲಿಯಬಲ್ಲರು ಎಂಬುದನ್ನು ನಿರೂಪಿಸುವುದೇ ಆಗಿದೆ. ಚಿತ್ರರಚನೆಗೆ ಬೇಕಾದ ಮೂಲಭೂತ ಅಂಶಗಳನ್ನೂ, ಅವನ್ನು ಪ್ರತಿಯೊಬ್ಬರೂ -ಸತತವಾದ, ಸರಿಯಾದ ಅಭ್ಯಾಸದಿಂದ- ಹೇಗೆ ಸಾಧಿಸಬಹುದು ಎಂಬುದನ್ನು ಪುಸ್ತಕವು ಅಚ್ಚುಕಟ್ಟಾಗಿ ತಿಳಿಸುತ್ತದೆ. ಅದಕ್ಕೆ ಪೂರಕವಾದ ಹಲವಾರು ಅಧ್ಯಯನ/ ಅಭ್ಯಾಸದ ವಿಷಯಗಳೂ ಇದರಲ್ಲಿವೆ. ನೋಡೋಣ! ಈ ಸಾರಿಯಾದರೂ ನಾನಿದರ ಆಚೆಗಿನ ದಡವನ್ನು ತಲುಪುತ್ತೇನೆಯೋ ಎಂದು.