ಐದು ಮಾತುಗಳು — ೪
ಮಂಗರಸನ ಅಡುಗೆಮನೆಯಿಂದ…
ಲಡ್ಡು ಅಥವಾ ಲಾಡು ಭಾರತೀಯರಿಗೆ ಪ್ರಿಯವಾದ ಸಿಹಿತಿನಿಸುಗಳಲ್ಲೊಂದು. ಬಹುತೇಕ ಶುಭಕಾರ್ಯಗಳಲ್ಲಿ ಅದು ಇಲ್ಲದೆ ಕಳೆಕಟ್ಟುವುದೆ ಇಲ್ಲ. ನನ್ನ ಚಿಕ್ಕಂದಿನಲ್ಲಿ, ಎಂದಾದರೊಮ್ಮೆ ಯಾವುದಾದರೂ ಸಮಾರಂಭದಲ್ಲೊ ಸ್ವೀಟ್ ಸ್ಟಾಲಿನಲ್ಲೊ ಅಥವಾ ದೇವಸ್ಥಾನಗಳಲ್ಲಿ ಕೊಟ್ಟ ಪ್ರಸಾದದಲ್ಲೊ ಕೊಟ್ಟ ಲಾಡುವನ್ನು ಸವಿದು ಸಂತಸಪಟ್ಟದ್ದೇ ಹೆಚ್ಚು.
ಹತ್ತು ಹದಿನೈದು ವರ್ಷಗಳ ಹಿಂದೆ ಒಮ್ಮೆ ನನ್ನ ಅಣ್ಣನು ಮನೆಯಲ್ಲಿಯೆ ಲಾಡುವನ್ನು ತಯಾರಿಸಲು ಪ್ರಯತ್ನಿಸಿದ್ದ. ಆ ಪ್ರಯತ್ನದ ಫಲವಾಗಿ ಸಿದ್ಧವಾದ ವಸ್ತುವನ್ನು ರುಚಿ ನೋಡಿದವರು ‘ಇದು ಲಾಡು ಎಂಬ ಹೆಸರಿಗೆ ಯಾವ ರೀತಿಯೂ ಹೊಂದುವುದಿಲ್ಲ’ವೆಂದು ಷರಾ ಬರೆದರು. ಅದನ್ನು ಕಂಡ ನಾನು, ಆ ವಸ್ತುವನ್ನು ತಿನ್ನುವ ಧೈರ್ಯ ಮಾಡಲಿಲ್ಲ. ಅಷ್ಟೆ ಅಲ್ಲ, ಅದರೊಟ್ಟಿಗೆ ‘ಮನೆಯಲ್ಲಿ ಲಾಡು ತಯಾರಿಸಲು ಯಾರಿಗೂ ಸಾಧ್ಯವಿಲ್ಲ’ ಎಂಬ ಬೋಧೆಯು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿತು.
ಈಚೆಗೆ ಮಂಗರಸನ ‘ಸೂಪಶಾಸ್ತ್ರ’ದಲ್ಲಿಯ ಹಲವು ಅಡುಗೆ ವಿಧಾನಗಳು ನನ್ನ ಆಸಕ್ತಿಯನ್ನು ಕೆರಳಿಸಿವೆ. “ಆದದ್ದಾಗಲಿ, ಅದರಲ್ಲಿಯ ಕೆಲವಾದರೂ ಅಡುಗೆಗಳನ್ನು ಮಾಡಿಯೇ ನೋಡಬೇಕೆ”ನ್ನುವ ಛಲ ಮೂಡಿದೆ. ಅದರಿಂದಲೆ, ಅಮೃತವಲ್ಲರಿ, ಫೇಣಿ (ಈಗಿನ ಚಿರೋಟಿ) ಮುಂತಾದ ಅಡುಗೆಗಳನ್ನು ಮಾಡಲು ಸಾಧ್ಯವಾಯಿತು. ಆ ಪಟ್ಟಿಗೆ ಕಳೆದ ವಾರ ಈ ಲಡ್ಡುಗೆ ಅಥವಾ ಲಾಡು ಕೂಡ ಸೇರಿಕೊಂಡಿತು.
ಹಾಗೆ ನೋಡಿದರೆ, ನಾನೇನು ಮಂಗರಸನು ನಿರೂಪಿಸುವ ವಿಧಾನವನ್ನು ಯಥಾವತ್ತಾಗಿ ಅನುಸರಿಸುವುದಿಲ್ಲ. ಅದಕ್ಕೆ ತಕ್ಕ ಕಾರಣಗಳೂ ಇಲ್ಲದಿಲ್ಲ, ಬಿಡಿ. ಸಾಧ್ಯವೆನಿಸಿದ ಮಟ್ಟಿಗೆ, ಇರುವ ಪರಿಕರಗಳನ್ನೂ, ಕೆಲವೊಮ್ಮೆ ಹೆಚ್ಚಿನ ಪದಾರ್ಥಗಳನ್ನೂ ಉಪಯೋಗಿಸಿ ಆಯಾ ಅಡುಗೆಗಳನ್ನು ತಯಾರಿಸುತ್ತೇನೆ.
ಈ ಪೀಠಿಕೆಯೆಲ್ಲ ಸಾಕು; ವಿಷಯ ಏನು ಅಂದ್ರೆ, ಮಂಗರಸನು ತನ್ನ ಕೃತಿಯಲ್ಲಿ ಹಲವಾರು ಸಿಹಿತಿಂಡಿಗಳನ್ನು ತಯಾರಿಸುವ ವಿಧಾನವನ್ನು ನಿರೂಪಿಸಿದ್ದಾನೆ. ಅವುಗಳಲ್ಲಿ ಈ ಪೊರೆಯಲಡ್ಡುಗೆ ಎಂಬುದೂ ಒಂದು:
ಬಿಳಿಯ ಕಡಲೆಯ ಸಣ್ಣಹಿಟ್ಟ ಸೋದಿಸಿ ಹಾಲಿ
ನೊಳಗಿಕ್ಕಿ ಸಂಪಳವ ಮಾಡಿ ತೆಂಗಿನ ಕರಟ
ದೊಳಗೆ ಕಿಱುವೆರಲಗಾತ್ರದ ವೆಜ್ಜವಂ ಮಾಡಿ ತುಂಬಿ ತುಪ್ಪವನು ಕಾಸಿ
ಇಳಿಯಬಿಡೆ ಬುರುಬುರನೆ ಬೆಂದು ಹದನಾದುಂಡೆ
ಗಳಿಗೆ ಸಕ್ಕರೆಯ ಪಾಕವ ಹೊಯ್ದು ನವ್ಯಪರಿ
ಮಳವನಿಕ್ಕಿ ಕಟ್ಟಿ ಪೊರೆಯಲಡ್ಡುಗೆಗಳೆಂದು ಹೆಸರನೊಲವಿಂ ಕರೆವುದು
ಇಂದು ನಮಗೆ ಅಂಗಡಿಗಳಲ್ಲಿ ದೊರೆಯುವ ಲಡ್ಡು/ಲಾಡು ತಯಾರಿಸಲು ಅನುಸರಿಸುವ ವಿಧಾನ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಮಂಗರಸನು, ಕಿರುಬೆರಳಗಾತ್ರದ ತೂತಿರುವ ತೆಂಗಿನ ಕರಟವನ್ನು ಬಳಸಿ (ಬಹುಶಃ ತುಸುವೆ ತೋರಗಾತ್ರದ) ಬೂಂದಿಯನ್ನು ತಯಾರಿಸಿಕೊಳ್ಳಲು ಹೇಳುತ್ತಾನೆ. ಈಗ ಅದಕ್ಕೆ — ಸಣ್ಣಸಣ್ಣ ತೂತುಗಳಿರುವ ಜಾಲರಿಯಂತಹ ತಟ್ಟೆಯನ್ನು ಬಳಸುತ್ತಾರೆ.
ಕಡಲೇಹಿಟ್ಟನ್ನು ಗಂಟಿಲ್ಲದಂತೆ ಜರಡಿ ಹಿಡಿದುಕೊಂಡು, ಅದಕ್ಕೆ ಹಾಲನ್ನು ಬೆರೆಸಿ ದೋಸೆಹಿಟ್ಟಿನಂತೆ ಕಲಸಿಕೊಳ್ಳಬೇಕು. ಯಾವುದಾದರೂ ಜಾಲರದಂತಹ ವಸ್ತುವನ್ನು ಬಳಸಿ, ಆ ಹಿಟ್ಟಿನಿಂದ ಬೂಂದಿಯನ್ನು ತಯಾರಿಸಿಕೊಳ್ಳಬೇಕು. ಹೀಗೆ ಬೂಂದಿಯನ್ನು ಮಾಡಿಕೊಂಡಾದ ನಂತರ ತುಸು ಬನಿಯಾದ ಸಕ್ಕರೆಪಾಕಕ್ಕೆ ಆ ಬೂಂದಿಯನ್ನು ಹಾಕಿ, ಒಲೆಯಮೇಲೆ ಸ್ವಲ್ಪ ಹೊತ್ತು ಇರಿಸಬೇಕು. ಬೂಂದಿಗೆ ಸಕ್ಕರೆಪಾಕವು ಹಿಡಿಸಿ, ಉಂಡೆ ಕಟ್ಟಲು ಅನುವಾಗುವಷ್ಟು ಗಟ್ಟಿಯಾಗುವ ಹೊತ್ತಿಗೆ ಆ ಪಾತ್ರೆಯನ್ನು ಕೆಳಗಿಳಿಸಿಕೊಳ್ಳಿ. ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ-ಗೋಡಂಬಿ, ಏಲಕ್ಕಿ ಪುಡಿ, ಒಂದ್ನಾಲ್ಕು ಲವಂಗವನ್ನು ಹಾಕಿ ಬೆರೆಸಿಕೊಂಡು ಉಂಡೆಯಾಕಾರಕ್ಕೆ ಕಟ್ಟಿಕೊಂಡರೆ ರುಚಿಯಾದ ಲಡ್ಡುಗೆ ಸಿದ್ಧ.!
ಇದನ್ನು ಮೊನ್ನೆ ಲೋಕಸಭಾ ಚುನಾವಣಾ ಫಲಿತಾಂಶ ಬಂದ ದಿನ ಸಂಜೆ ತಯಾರಿಸಿದ್ದು ಕಾಕತಾಳೀಯವಲ್ಲ.
ಈಚೆಗೆ ನೋಡಿದ ಸಿನಿಮಾ: ಓಹಿಲೇಶ್ವರ
ಕೊನೆಗೂ “ಓಹಿಲೇಶ್ವರ” ಚಿತ್ರವನ್ನು ನೋಡಿದೆ. ೧೩ನೇ ಶತಮಾನದ ಕವಿ ಸೋಮರಾಜನ ಕೃತಿ ‘ಉದ್ಭಟಕಾವ್ಯ’ವನ್ನು ಭಾಗಶಃ ಅನುಸರಿಸಿ ಈ ಚಿತ್ರದ ಕಥೆಯನ್ನು ಹೆಣೆದಿರುವಂತೆ ತೋರುತ್ತದೆ. ಅದಲ್ಲದೆ, ಬಸವಣ್ಣ, ಅಲ್ಲಮ ಮುಂತಾದವರ ಕೆಲವು ವಚನಗಳನ್ನು ’ಸೋಮನಾಥ’ ಎಂಬ ಅಂಕಿತದೊಡನೆ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಹಾಗೂ, ಚಿತ್ರದ ಒಂದು ದೃಶ್ಯದಲ್ಲಿ ದಂಪತಿಗಳನ್ನು ಆಶೀರ್ವದಿಸುತ್ತ, ಓಹಿಲನು ಹೀಗೆ ಹೇಳುತ್ತಾನೆ:
ಹುಲ್ಲಾಗಿ ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗಿ,
ಕಲ್ಲಾಗಿ ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗಿ ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗಿ ಬಾಳಿ ನೀವು
ಇದು ಯಾವ ಸಾಹಿತಿಯ ಸಾಲುಗಳೆಂದು ನೀವೇ ಊಹಿಸಬಲ್ಲಿರಿ.
ಅಂತೂ, ಬರಿ ಓದಿ ತಿಳಿದಿದ್ದ ಓಹಿಲನ ಕಥೆಯನ್ನು ಚಿತ್ರರೂಪದಲ್ಲಿ ಕಂಡು ಸಂತಸವಾಯಿತು. ಅದಲ್ಲದೆ, ಹಳೆಯ ಕನ್ನಡ ಸಿನಿಮಾಗಳಲ್ಲಿ ಕನ್ನಡ ಸಾಹಿತ್ಯವನ್ನು ಯಾವ ಮಟ್ಟಿಗೆ ಪ್ರಾಶಸ್ತ್ಯವಿತ್ತು, ಹೇಗೆ ನಾನಾ ಮೂಲಗಳಿಂದ ಹಿತನುಡಿಗಳನ್ನು ಹೆಕ್ಕಿ ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು ಎಂಬುದನ್ನು ಕಂಡು ಅಚ್ಚರಿಯೂ ಆಯಿತು. ಈಗಿನ ಕೆಲವು ಚಿತ್ರಗಳಲ್ಲಿಯೂ ಇಂತಹ ಪ್ರಯತ್ನಗಳು ಅಲ್ಲಲ್ಲಿ ಕಾಣಿಸುತ್ತವೆ.
ಸದ್ಯದ ಓದು — ಕಶೀರ
ಗಂಭೀರವಾದ ವಸ್ತುವೊಂದರ ಹಿನ್ನೆಲೆಯಲ್ಲಿ ಮೂಡಿರುವ ಕಾದಂಬರಿ, ಕಶೀರ. ಕಳೆದ ವರ್ಷವೇ ಇದನ್ನು ಓದಬೇಕೆಂದುಕೊಂಡರೂ ಅದೇಕೊ ಸಾಧ್ಯವಾಗಿರಲಿಲ್ಲ. ಈಗ್ಗೆ ಎರಡು ದಿನಗಳ ಹಿಂದೆ ಅದನ್ನೋದಲು ಪ್ರಾರಂಭಿಸಿದ್ದೇನೆ. ಈ ಕಾದಂಬರಿಯ ಬಗ್ಗೆ ನನ್ನ ಹಲವಾರು ಮಿತ್ರರು ಈಗಾಗಲೆ ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ; ಟ್ವಿಟರ್, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕೃತಿಯ ವಿಮರ್ಶೆಯನ್ನು ಗಮನಿಸಿದ್ದೇನೆ. ಕೊನೆಗೂ ಇದನ್ನು ಓದುವ ಅವಕಾಶ ಸಿಕ್ಕಿದ್ದು ಖುಶಿ ತಂದಿದೆ.
ಕಗ್ಗದ ರಸಾನುಭವವನ್ನು ಒದಗಿಸುವ ವೇದಿಕೆ, ಕಗ್ಗಾನುಭವ
“ಕಗ್ಗಾನುಭವ” ಸರಣಿಯ ಈಚಿನ ಎರಡು ಸಂಚಿಕೆಗಳು ಬಹಳ ಹಿಡಿಸಿದುವು. ಅರುಣ್ ಹಾಗೂ ವಿಜಯ್ ಭಾರದ್ವಾಜ್ ಅವರ ಕಗ್ಗ ವಿಶ್ಲೇಷಣೆ ಹಾಗೂ ಅದಕ್ಕೆ ಪೂರಕವಾಗಿ ಬಂದ ಜೀವನಾನುಭವದ ಮಾತುಗಳು ಬೆರಗುಗೊಳಿಸುತ್ತವೆ. ವಿಜಯ್ ಭಾರದ್ವಾಜ್ ಅವರು ಕ್ರೀಡಾಕ್ಷೇತ್ರದಲ್ಲಿದ್ದೂ ಇಷ್ಟು ಆಳವಾದ ಸಾಹಿತ್ಯಾಸಕ್ತಿ ಹೊಂದಿರುವುದನ್ನು ಕಂಡು ಅತೀವ ಸಂತಸವೂ ಹೆಮ್ಮೆಯೂ ಆಯಿತು. ಮುಂದಿನ ಕೆಲವು ಸಂಚಿಕೆಗಳಲ್ಲಿ ಮತ್ತೆ ಅವರ ಮಾತು ಕೇಳುವ ಅವಕಾಶ ಸಿಗಬಹುದೇನೊ, ಕಾದುನೋಡಬೇಕಿದೆ.
S3, E5:
S3, E6:
ಒಟ್ಟಾರೆ, “ಟಾಕ್ ಆಫ್ ದಿ ಟೌನ್”ನ ವಿಶೇಷ ಪ್ರಯತ್ನಗಳಲ್ಲಿ ಒಂದಾದ “ಕಗ್ಗಾನುಭವ”ವು ಮತ್ತಷ್ಟು ಯಶಸ್ವಿಯಾಗಲಿ ಎಂಬುದು ನನ್ನ ಹಾರೈಕೆ.
ಜಾರ್ಜಿಯಾದಲ್ಲಿ ಕಂಡ ಸೀತೆ — ಟೊಕೊವಾ ಫಾಲ್ಸ್
ಈ ಸೋಮವಾರ ಇಲ್ಲಿಯ ನಾರ್ಥ್ ಜಾರ್ಜಿಯಾದಲ್ಲಿರುವ ಟೊಕೊವಾ ಜಲಪಾತಕ್ಕೆ ಹೋಗಿದ್ದೆವು. ‘ಟೊಕೊವಾ ಫಾಲ್ಸ್ ಕಾಲೇಜ್’ನ ಕ್ಯಾಂಪಸ್ಸಿನ ಅಂಚಿಗಿರುವ ಈ ಸುಂದರ ಝರಿಯು ಸುಮಾರು ೧೮೬ ಅಡಿ ಎತ್ತರದಿಂದ ಎರಡು ಧಾರೆಯಾಗಿ ಧುಮುಕುತ್ತದೆ, ಇಲ್ಲಿ.
ಈ ಜಲಪಾತದ ಚಿತ್ರವೊಂದನ್ನು ಟ್ವಿಟರಿನಲ್ಲಿ ಹಾಕಿದ್ದಾಗ, ಮಿತ್ರರೊಬ್ಬರು “ಅಮೇರಿಕೆಯಲ್ಲಿಯೂ ಸೀತಾ ಜಲಪಾತವಿದೆಯೇ?” ಎಂದು ತಮಾಷೆಗೆ ಕೇಳಿದ್ದರು. ಆಗ ಈ ಸೀತಾ ಫಾಲ್ಸ್/ಕೂಡ್ಲು ತೀರ್ಥದ ಬಗ್ಗೆ ತಿಳಿಯಿತು, ನನಗೆ. ಹೌದು, ನೋಡಲು ಎರಡೂ ಜಲಪಾತಗಳು ಸ್ವಲ್ಪ ಒಂದೇ ತೆರನಾಗಿ ಕಾಣುತ್ತವೆ.