ಐದು ಮಾತುಗಳು — ೩

ಸಾರ್ಥಕತೆ ಮೂಡಿಸಿದ ‘ಆಂಧ್ರಮಹಾಭಾರತಮು’
“ಒಂದೊಮ್ಮೆ ನಮಗೆ ಪ್ರಪಂಚದ ಎಲ್ಲ ಭಾಷೆಗಳೂ ಜನ್ಮಗತವಾಗಿಯೆ ಬರುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು — ಹೋಮರ್, ವರ್ಜಿಲ್, ಮೋಲಿಯೇರ್, ಟಾಲ್ಸ್ಟಾಯ್ ಮುಂತಾದವರ ಕೃತಿಗಳನ್ನೆಲ್ಲ ಆಯಾ ಭಾಷೆಯಲ್ಲೇ (ಅಂದರೆ, ಮೂಲಕೃತಿಗಳನ್ನೇ) ಓದಿ ಸವಿಯಬಹುದಿತ್ತಲ್ಲ!!” ಎಂಬ ಹಂಬಲ ಅದೆಷ್ಟು ಸಾರಿ ಮೂಡಿದೆಯೊ, ನನಗೆ. ಆದರೆ ನಾವಂದುಕೊಂಡ ಮಾತ್ರಕ್ಕೆ ಹಾಗಾಗಲು ಸಾಧ್ಯವಾದೀತೆ! ಅದೂ ಅಲ್ಲದೆ, ಆಸೆಗೆ ಕೊನೆಯೆಲ್ಲಿ? ಪ್ರಪಂಚದ ನಾನಾ ಭಾಷೆಗಳಲ್ಲಿರುವ ಅಗಾಧ ಸಾಹಿತ್ಯರಾಶಿಯನ್ನೆಲ್ಲ ಓದಿ ಮುಗಿಸುವ ಅವಧಿಯಾದರೂ ಎಲ್ಲಿ ದೊರೆತೀತು — ಇಷ್ಟು ಚಿಕ್ಕ ಜೀವನದಲ್ಲಿ. ಏನೊ, ಸಿಕ್ಕಷ್ಟರ ಮಟ್ಟಿಗೆ ಅನುವಾದವನ್ನೊ, ಮೂಲಸ್ವರೂಪವನ್ನೊ — ನಮಗೆ ಓದಲು, ಬರೆಯಲು ಬರುವ ಭಾಷೆಗಳಲ್ಲಿಯಾದರೂ ಓದಿಕೊಂಡರೆ ಅಷ್ಟೇ ಸಾಕಿದೆ.

ಹಳಗನ್ನಡ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿದ್ದ ವೇಳೆ ನನಗೆ ತೆಲುಗಿನ ಕೆಲವು ಅಭಿಜಾತ ಸಾಹಿತ್ಯಕೃತಿಗಳ ಹೆಸರೂ ಆಗೀಗ ಕೇಳಿಸುತ್ತಿತ್ತು. ಆಗೆಲ್ಲ ಮನಸ್ಸು, ‘ಎಂದಾದರೊಮ್ಮೆ ತೆಲುಗಿನ ಕಾವ್ಯಗಳನ್ನೂ ಒಂದಷ್ಟನ್ನು ಓದಬೇಕು’ ಎಂದು ಬಯಸುತ್ತಿತ್ತು.

ಹಾಗೊಮ್ಮೆ ಕೃಷ್ಣದೇವರಾಯನ ‘ಆಮುಕ್ತಮಾಲ್ಯದ’ವನ್ನು ಓದಲು ತೊಡಗಿ, ಎರಡು ವರ್ಷಗಳ ಸತತ ಪ್ರಯತ್ನ-ಸೋಲುಗಳನ್ನು ದಾಟಿ, ಅದನ್ನು ಓದಿ ಮುಗಿಸುವುದು ಕೊನೆಗೂ ಸಾಧ್ಯವಾಯ್ತು. ಆ ನಂತರ ತೆನಾಲಿ ರಾಮಕೃಷ್ಣ (ರಾಮಲಿಂಗ) ಕವಿಯ ‘ಉದ್ಭಟಾರಾಧ್ಯ ಚರಿತ್ರಮು’ ಕೃತಿಯನ್ನೂ ನೋಡಿದ್ದಾಯ್ತು. ಮುಂದೆ, ಮೂರನೇ ಸಾರಿಗೆ, ತೆಲುಗಿನ ಕವಿತ್ರಯರು ಅನುವಾದಿಸಿ, ಸಂಪಾದಿಸಿರುವ “ಆಂಧ್ರಮಹಾಭಾರತಮು” ಕೃತಿಯನ್ನು ಓದಲು ಕೈಹಾಕಿದೆ. ಮೂಲ ಸಂಸ್ಕೃತ ಭಾರತದಲ್ಲಿರುವ ಒಂದು ಲಕ್ಷದಷ್ಟು ಶ್ಲೋಕಗಳನ್ನು, ಈ ಕವಿಗಳು ಗದ್ಯ-ಪದ್ಯ ಮಿಶ್ರಿತ ರೂಪದಲ್ಲಿ, ಸುಮಾರು ೨೦ ಸಾವಿರದಷ್ಟಕ್ಕಿಳಿಸಿ (ಸಂಗ್ರಹಿಸಿ), ಅನುವಾದಿಸಿದ್ದಾರೆ. ಕೃತಿಯ ಗಾತ್ರವು ಒಂದು ಮಟ್ಟಿಗೆ ಹಿಂಜರಿಕೆಯನ್ನುಂಟು ಮಾಡಿದರೂ, ಅದುಹೇಗೊ ಆ ಹಾದಿಯಲ್ಲಿಟ್ಟ ಹೆಜ್ಜೆಯನ್ನು ನಾನು ಹಿಂತೆಗೆಯಲಿಲ್ಲ.
ಆಂಧ್ರಭಾರತವು ಕೃಷ್ಣರಾಯ, ರಾಮಕೃಷ್ಣರಿಗಿಂತ ಬಹಳ ಹಿಂದಿನ ಕಾಲದ ಕೃತಿಯಾದರೂ, ಅದು ಹೇಗೊ — “ಓದಲು ಸರಳ, ಸುಲಭವಾಗಿದೆ” ಎನಿಸಿ, ಅಂತೂ ಅಷ್ಟು ಸುದೀರ್ಘವಾದ ಪ್ರಯಾಣವನ್ನು ಸಾಗಿಸಿ, ಕೊನೆಗೂ ಇತ್ತೀಚೆಗೆ (ಮೇ ೧, ೨೦೧೯) ಅದನ್ನೋದಿ ಮುಗಿಸಿದೆ. ಆ ಕ್ಷಣಕ್ಕೆ ನನ್ನಲ್ಲಿ ಮೂಡಿದ ಧನ್ಯತೆ ಹಾಗೂ ಸಾರ್ಥಕತೆಯ ಭಾವವನ್ನು ಎಂದಿಗೂ ಮರೆಯಲಾಗದು.

ಹೆಚ್ಚಿನ ಓದಿಗೆ: ಆಂಧ್ರಭಾರತದ ಪರಿಚಯ

ಅಮೃತವಲ್ಲರಿಯ ಸಾಕ್ಷಾತ್ಕಾರ
ಸುಮ್ಮನೆ ಹರಟೆಯ ಮಾತು ಎಲ್ಲಿಂದ ಎಲ್ಲಿಗೊ ಹೊರಟು, ನಮ್ಮ ಪಾಲಿಗೆ ‘ಅಮೃತವಲ್ಲರಿ’ಯೆಂಬ ಸೊಗಸಾದ ವಸ್ತುವೊಂದು ಸಾಕ್ಷಾತ್ಕರಿಸಿದ ಸಂಗತಿ ಈ ನಡುವೆ ನಡೆಯಿತು. ಅದರ ಕುರಿತು ಈ ಲೇಖನದಲ್ಲಿ: ಅಮೃತವಲ್ಲರಿಯ ಕಥೆ

‘ಕವಿಸಮಯ’ದ ಸವಿಮಾತು
ಟಾಕ್ ಆಫ್ ದಿ ಟೌನ್ ವತಿಯಿಂದ ‘ಕಗ್ಗಾನುಭವ’ವೆಂಬ ಅದ್ಭುತವಾದ ಸರಣಿಯ ಜೊತೆಗೆ, ‘ಕವಿಸಮಯ’ವೆಂಬ ಸುಂದರವಾದೊಂದು ಕಾರ್ಯಕ್ರಮವನ್ನೂ ಶುರುಮಾಡಿದ್ದಾರೆ — ಗೆಳೆಯರಾದ ಸಂಜಯ್, ಅರುಣ್ ಹಾಗೂ ಹರೀಶ್ ಕುಮಾರ್ ಅವರು. ಕನ್ನಡ ಕವಿಗಳ ಆಯ್ದ ರಚನೆಗಳನ್ನು ಕುರಿತು ಚರ್ಚಿಸುತ್ತ, ಅದನ್ನು ಅರ್ಥಮಾಡಿಕೊಳ್ಳುವ — ನಮಗೆ ಅದನ್ನು ಅರ್ಥ ಮಾಡಿಸುವ ಕೆಲಸವನ್ನು — ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ, ಇವರೆಲ್ಲ.

ಈ ಹಿಂದಿನ ಸಂಚಿಕೆಯಲ್ಲಿ, ಕೈಯ್ಯಾರ ಕಿಞ್ಞಣ್ಣ ರೈಯವರ “ಶತಮಾನದ ಗಾನ” ಎಂಬ ಕವನ ಸಂಕಲನದಿಂದ ಆಯ್ದ ‘ಏಕೆ’ ಎಂಬ ಹೆಸರಿನ ಕವನವೊಂದರ ಬಗ್ಗೆ ಚರ್ಚಿಸಿದ್ದಾರೆ, ಅರುಣ್ ಹಾಗೂ ಹರೀಶ್ ಅವರು. “ಸರಳತೆಯ ಹಾದಿಯಲಿ ಚಿಂತೆಸಂತೆಯನಿರಿಸಿ ನಿತ್ಯದಾನಂದವನು ಕೆಡಿಸಲೇಕೆ” ಎಂಬ ಸುಲಭ ಸೂತ್ರವನ್ನು ಬೋಧಿಸುತ್ತ, ನಮ್ಮ ಮನಸ್ಸಿನ ತುಮುಲ ತೊಳಲಾಟವನ್ನು ಶಾಂತಗೊಳಿಸಲು ಪ್ರಯತ್ನಿಸುತ್ತದೆ, ಈ ಕವನ. ಅದು ನನಗೆ ಬಹಳ ಇಷ್ಟವಾಯಿತು.

ಕೈಯ್ಯಾರ ಕಿಞ್ಞಣ್ಣ ರೈ ಅವರು ಶತಮಾನವನ್ನು ಕಂಡಿದ್ದ ಕವಿ. ಕವಿಯಾಗಿಯಷ್ಟೆ ಅಲ್ಲದೆ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕದ ಏಕೀಕರಣಕ್ಕೆ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣಕ್ಕೆ ಶ್ರಮಿಸಿದಕ್ಕಾಗಿ ಅವರು ನಮಗೆಲ್ಲ ಸರ್ವಥಾ ಸ್ಮರಣೀಯರು. ಇನ್ನು, ಅವರ ರಚನೆಗಳಲ್ಲಿಯ ಸರಳತೆ, ಅವು ಪ್ರತಿಪಾದಿಸುವ ಉನ್ನತ, ಉದಾತ್ತವಾದ ಆಶಯಗಳು ಎಂದಿಗೂ ನಮಗೆ ಆದರ್ಶಪ್ರಾಯವೇ ಸರಿ.

ಆಸಕ್ತರು ಆ ಸಂಚಿಕೆಯನ್ನು ಇಲ್ಲಿ ಕೇಳಬಹುದು: https://www.youtube.com/watch?v=WlgRRePgPag&feature=youtu.be

ಕ್ಯಾಬ್ ಕಥೆಗಳು
ಇಲ್ಲಿಯ ಓಡಾಟಕ್ಕೆ ನಾನು ಹೆಚ್ಚಾಗಿ ಸಾರ್ವಜನಿಕ ಸಾರಿಗೆಯನ್ನೊ ಅಥವಾ ಊಬರ್/ ಲಿಫ್ಟ್ ಕ್ಯಾಬ್’ಗಳನ್ನೊ ಆಶ್ರಯಿಸಬೇಕಾಗುತ್ತದೆ. ಹಾಗೆ ಕ್ಯಾಬಿನಲ್ಲಿ ಹೋಗುವಾಗ ಕೆಲವೊಮ್ಮೆ ಒಳ್ಳೆಯ ಸ್ನೇಹ, ಪರಿಚಯಗಳಾಗಿ, ಹಿತವಾದ ಮಾತುಕತೆಗಳೂ ನಡೆಯುತ್ತವೆ. ಸಾಮಾನ್ಯವಾಗಿ, ಕ್ಯಾಬ್ ನಡೆಸುವವರು ನಮ್ಮನ್ನು ನಗುಮೊಗದಿಂದ ಸ್ವಾಗತಿಸಿ, ನಮ್ಮ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಆ ಮಾತು ಔಪಚಾರಿಕತೆಯ ಪರಿಧಿಯನ್ನು ದಾಟಿ, ಆತ್ಮೀಯತೆಯನ್ನು ಮೂಡಿಸುವತ್ತ ದಾರಿಗೊಡುತ್ತದೆ.

ಕ್ಯಾಬ್ ನಡೆಸುವ ಹೆಚ್ಚಿನ ಮಂದಿ ಇದರ ಜೊತೆಗೆ ಬೇರೆಬೇರೆ ಕ್ಷೇತ್ರಗಳಲ್ಲೂ ದುಡಿಯುತ್ತಿರುತ್ತಾರೆ. ಕೆಲವರು ಬೇರೆಬೇರೆ ದೇಶಗಳಿಂದ ಬಂದು ಇಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ಸ್ವಂತ ವ್ಯವಹಾರ ವಹಿವಾಟು ಇರುವವರನ್ನೂ, ಶಿಕ್ಷಕ ವೃತ್ತಿಯಲ್ಲಿರುವವರನ್ನೂ, ಕ್ರೀಡೆ ಹಾಗೂ ಸಂಗೀತ ಕ್ಷೇತ್ರದಲ್ಲಿ ದುಡಿಯುವವರನ್ನೂ, ಹಲವಾರು ವಿದ್ಯಾರ್ಥಿಗಳನ್ನೂ, ವೈದ್ಯಕೀಯ ವೃತ್ತಿಯಲ್ಲಿರುವವರನ್ನೂ — ಹೀಗೆ, ಹತ್ತು ಹಲವು ರಂಗದಿಂದ ಬಂದವರನ್ನು ಕಂಡಿದ್ದೇನೆ. ಅವರೊಡನೆ, ಕ್ಯಾಬಿನಲ್ಲಿ ನಾವು ತಲುಪಬೇಕಾದ ಸ್ಥಳವನ್ನು ಸೇರುವ ತನಕವೂ ಒಂದಿಲ್ಲೊಂದು ಮಾತಾಡುತ್ತ ಸಾಗಿ, ಅದೆಷ್ಟೊ ಸಾರಿ ಕಾಲ ಕಳೆದದ್ದೇ ತಿಳಿಯದಂತಾಗುತ್ತೆ, ನನಗೆ.

ಭಾರತದವರೆಂದರೆ ಹೆಚ್ಚಿನ ಆಪ್ಯಾಯತೆಯನ್ನೂ ಸ್ನೇಹವನ್ನೂ ತೋರಿ ನಡೆದುಕೊಳ್ಳುತ್ತಾರೆ, ಕೆಲವರು. ಆಗಾಗ, ‘ನಮಸ್ತೆ’ ಎಂದು ನಮ್ಮನ್ನು ಸ್ವಾಗತಿಸುವವರೂ ಸಿಗುತ್ತಾರೆ. ಒಂದೆರಡು ಸಾರಿ, ಭಾರತೀಯ ಇತಿಹಾಸ, ಸಂಸ್ಕೃತಿಯ ಬಗ್ಗೆ ಆಸಕ್ತಿಯಿರುವವರನ್ನೂ, ಆ ಬಗ್ಗೆ ಸಾಕಷ್ಟು ತಿಳಿದವರನ್ನೂ ಕಂಡಿದ್ದೇನೆ.
ಎರಡು ವರ್ಷಗಳ ಹಿಂದೆ, ಕ್ರಿಸ್ ಎಂಬ ಸಹೃದಯಿ ಕ್ಯಾಬ್ ಡ್ರೈವರ್ ಒಬ್ಬನ ಪರಿಚಯವಾದಾಗ, ಆತ ತಾನು ಗಣಪತಿಯನ್ನು ಆರಾಧಿಸುತ್ತೇನೆಂದು ತಿಳಿಸಿದ. ಶಿವನ ಬಗ್ಗೆ, ಗಣೇಶನ ಬಗ್ಗೆ ಇರುವ ಒಂದೆರಡು ಶ್ಲೋಕಗಳನ್ನೂ ಹೇಳಿದ. ಆಗ ನನಗಾದ ಅಚ್ಚರಿಯೂ, ಮೆಚ್ಚುಗೆಯೂ ಅಷ್ಟಿಷ್ಟಲ್ಲ. ಆ ದಿನದ ಪರಿಚಯವು ಮುಂದುವರೆದು, ಒಮ್ಮೆ ಆತನೂ ಅವನ ಹೆಂಡತಿಯೂ ನಮ್ಮನ್ನು ಮತ್ತೊಮ್ಮೆ ಭೇಟಿ ಮಾಡಿ, ನಾನು ರಚಿಸಿದ್ದ ಗಣೇಶನ ವರ್ಣಚಿತ್ರಗಳನ್ನು ಫೋಟೊ ತೆಗೆದುಕೊಂಡಿದ್ದರು. ಷಿಕಾಗೊದಲ್ಲಿ ಭೆಟ್ಟಿಯಾದ ಕ್ಯಾಬ್ ಡ್ರೈವರ್ ಒಬ್ಬಾಕೆ, ತನಗೆ ಭಾರತೀಯ ಭಾಷೆಗಳನ್ನು ಕಲಿಯುವ ಆಸಕ್ತಿಯಿದೆಯೆಂದೂ, ತೆಲುಗು ಹಾಗೂ ಹಿಂದಿಯನ್ನು ತನ್ನ (ಭಾರತೀಯ) ಸ್ನೇಹಿತರಿಂದ ಅಷ್ಟಿಷ್ಟು ಕಲಿತಿರುವುದಾಗಿ ತಿಳಿಸಿದ್ದಳು.

ಕಳೆದ ವಾರದ ಒಂದು ಸಂಜೆ, ಸಣ್ಣಗೆ ಮಳೆ ಬೀಳುತ್ತಿತ್ತು. ನಾನು ಹೊರಗೆ ಬಂದಿದ್ದವನು ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಿದೆ. ಕ್ಯಾಬಿನವ ಬಂದ; ಎಂದಿನಂತೆ ಮಾತು, ಕುಶಲ ಪ್ರಶ್ನೆ. ಆತ ಬಹಳ ಕುಶಾಲಿನ ಮನುಷ್ಯ. ನಗೆಯ ಮಾತಾಡುತ್ತ ಕ್ಯಾಬ್ ನಡೆಸುತ್ತಿದ್ದ. ಅಲ್ಲಿಯವರೆಗೆ ತಾನು ಕೇಳುತ್ತಿದ್ದ ಸಂಗೀತವನ್ನು ನಿಲ್ಲಿಸಿ, ನನ್ನ ಕೈಗೆ ತನ್ನ ಫೋನನ್ನು ಕೊಟ್ಟು, ನನಗೆ ಇಷ್ಟವಾದ — ಭಾರತೀಯ ಸಿನಿಮಾಗಳ ಹಾಡು ಯಾವುದನ್ನಾದರೂ ಹಾಕಲು ಹೇಳಿದ. ನಾನು ಬಹುವಾಗಿ ಇಷ್ಟಪಡುವ -ಲತಾ ಮಂಗೇಶ್ಕರ್, ಪಿ.ಸುಶೀಲಮ್ಮನವರು ಹಾಡಿದ್ದ- ಒಂದೆರಡು ಹಾಡುಗಳನ್ನು ಹಾಕಿದ್ದೆ. ಅದನ್ನು ಕೇಳುತ್ತ, ಅವುಗಳಲ್ಲಿಯ ಮಾಧುರ್ಯವನ್ನು ಆತ ಮೆಚ್ಚಿ ಹೊಗಳಿದ. ’ಬಹಳ ಸೊಗಸಾಗಿದೆ, ಈ ವಾತಾವರಣಕ್ಕೂ ಈ ಬಗೆಯ ಮೆಲೊಡಿಯಸ್ ಹಾಡುಗಳಿಗೂ ಬಹಳ ಹೊಂದುತ್ತ’ ಎಂದೆಲ್ಲ ಹೇಳಿದ. ಈ ಮಾತುಕತೆಯ ನಡುವೆ, ಅದಾವುದೊ ಮಾಯದಲ್ಲಿ ಮನೆಯ ಬಳಿಗೆ ತಲುಪಿಯಾಗಿತ್ತು.

ಇಂತಹ ಸಂದರ್ಭಗಳು ಬಹಳ ಸಾರಿ ಎದುರಾಗುತ್ತಿರುತ್ತವೆ; ಎಲ್ಲವನ್ನೂ ಪಟ್ಟಿ ಮಾಡುವುದಕ್ಕಾಗದು; ಆದರೆ, ನಮ್ಮನ್ನು ಭೆಟ್ಟಿಯಾಗುವ ಜನರು ನಮ್ಮೆಡೆಗೆ ತೋರುವ ಒಂದೇ ಒಂದು ಸಣ್ಣ ಸ್ನೇಹಭರಿತ ನಡೆಯೂ ನಮ್ಮಲ್ಲಿ ಅದೆಷ್ಟು ಸಂತಸವನ್ನು ಮೂಡಿಸುತ್ತದೆ — ಎಂಬುದನ್ನು ನೆನೆದು ಅಚ್ಚರಿಪಡುತ್ತೇನೆ, ಆಗೆಲ್ಲ.

ಬ್ರಹ್ಮಾನುಭವವನ್ನರಸುವವನಿಗೆ ಕಗ್ಗದ ಕಿವಿಮಾತು
ವೈದಿಕ ವಾಙ್ಮಯವು ಪರಬ್ರಹ್ಮವಸ್ತುವನ್ನು ನಾನಾ ದೃಷ್ಟಿಯಿಂದ ಕಂಡು, ಅದರ ಬಗ್ಗೆ ಹಲವಾರು ಬಗೆಯ ವ್ಯಾಖ್ಯಾನ ಮಾಡಿದೆ. ಒಮ್ಮೆ ಆನಂದವೇ ಬ್ರಹ್ಮವೆನ್ನುತ್ತದೆ; ಒಮ್ಮೆ ವಿಜ್ಞಾನವೇ ಬ್ರಹ್ಮವೆನ್ನುತ್ತದೆ. ಹಾಗೆಯೇ, ಪರಬ್ರಹ್ಮದ ರಸತತ್ತ್ವವು ಎಲ್ಲೆಲ್ಲಿಯೂ ಇದೆ, ಅದನ್ನು ಕಂಡುಕೊಂಡವನು/ ಹೊಂದಿದವನು ಆನಂದಿಯಾಗುತ್ತಾನೆ ಎಂದೆಲ್ಲ ಸಾರುತ್ತದೆ. ಕಾವ್ಯ ಮೀಮಾಂಸಕರೂ ಕೂಡ, ಮೋಕ್ಷಸುಖಸದೃಶವಾದ ಆನಂದವನ್ನು ಉಂಟುಮಾಡುವುದೇ ಕಾವ್ಯಾಧ್ಯಯನದ ಉದ್ದಿಶ್ಯವು ಎಂದಿದ್ದಾರೆ. ಹಾಗೆ ನೋಡಿದರೆ, ಈ ಮಾತು ಎಲ್ಲ ಕಲೆಗಳಿಗೂ, ಎಲ್ಲ ಬಗೆಯ ವಿಸ್ಮಯಗಳಿಗೂ ಅನ್ವಯಿಸುತ್ತದೆಯೇನೊ! ಹೀಗೆ, ಬ್ರಹ್ಮಾನುಭವವನ್ನು ಪಡೆಯಲು ಇರುವ ಮಾರ್ಗಗಳು ಅದೆಷ್ಟೊ….

ಮಾನ್ಯ ಡಿ.ವಿ.ಗುಂಡಪ್ಪನವರು ಈ ಸುಂದರವಾದ ಕಗ್ಗದಲ್ಲಿ, ಆ ಬೃಹದ್ವಾಕ್ಯಗಳ ಸಾರವನ್ನೆಲ್ಲ ಅತಿ ಸರಳಗೊಳಿಸಿ ಹೇಳಿರುವರೇನೊ ಎನಿಸುತ್ತದೆ. ಈಗ್ಗೆ ಎಂದೆರಡು ದಿನಗಳಿಂದ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿರುವ ಸಾಲುಗಳಿವು:

ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ।
ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ॥
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ ।
ಬ್ರಹ್ಮಾನುಭವಿಯಾಗೊ — ಮಂಕುತಿಮ್ಮ ॥

--

--

No responses yet