ಐದು ಮಾತುಗಳು — ೧೦
ಪಡ್ಡಾಯಿ
“Stars, hide your fires; Let not light see my black and deep desires..”
-Macbeth, Act I, Scene IV
ನಾನು ಮೈಸೂರಿನಲ್ಲಿದ್ದಾಗ, ದಿನಸಿ ಅಂಗಡಿಯೊಂದರ ರದ್ದಿ ಕಾಗದಗಳ ನಡುವೆ Macbeth ಪುಸ್ತಕ ಕಂಡಿತ್ತು, ನನಗೆ. ಆಗ 2nd year, B.A ಪಠ್ಯಕ್ರಮದ ಭಾಗವಾಗಿತ್ತು, ಶೇಕ್ಸ್ಪಿಯರ್’ನ ಈ ನಾಟಕ. ಪರೀಕ್ಷೆಗಳೆಲ್ಲ ಮುಗಿದ ಮೇಲೆ ಪಠ್ಯಪುಸ್ತಕಗಳೂ, ನೋಟ್ಸೂ ಹೀಗೆ ದಿನಸಿ ಅಂಗಡಿಯನ್ನು ಸೇರುವುದು ಹೊಸತೇನಲ್ಲವಲ್ಲ!
ನಾನು ಅಂಗಡಿಯವನನ್ನು ಕೇಳಿ, ಆ ಪುಸ್ತಕವನ್ನು ತಂದಿಟ್ಟುಕೊಂಡಿದ್ದೆ.
ಗುಡುಗು ಸಿಡಿಲುಗಳಿಂದ ಕೂಡಿದ ಇಳಿಸಂಜೆಯ ಹೊತ್ತಿಗೆ — ಮೂರು ಜನ ಮಾಟಗಾತಿಯರು ಭೇಟಿಯಾಗಿ, ಮುಂದಿನ ಕೆಲಸಗಳ ಬಗ್ಗೆ ಚರ್ಚಿಸುವುದರೊಂದಿಗೆ ಆ ನಾಟಕವು ಶುರುವಾಗುತ್ತದೆ. ಆರಂಭವೇ ಎಷ್ಟು ವಿಲಕ್ಷಣವಾಗಿದೆಯಲ್ಲವೇ?
ಈಗ್ಗೆ ಎರಡು ವರ್ಷಗಳ ಹಿಂದೆ ಇಲ್ಲಿಯ The Shakespeare Tavernನಲ್ಲಿ ಆ ನಾಟಕವನ್ನು ನೋಡಿದ್ದೂ ಆಯಿತು. ಪುಸ್ತಕದಲ್ಲಿ ಓದಿದಾಗಿಗಿಂತ ಅದರ ಅಭಿನಯವನ್ನು ಕಣ್ಣಾರೆ ಕಂಡ ನಂತರ, ನನ್ನನ್ನು ಆ ನಾಟಕವು ಇನ್ನಷ್ಟು ಕಾಡಿತ್ತು.
ಮೊನ್ನೆ ಮೊನ್ನೆ Amazon Primeನಲ್ಲಿ ತುಳು ಭಾಷೆಯ “ಪಡ್ಡಾಯಿ” ಎಂಬ ಚಿತ್ರವು ಲಭ್ಯವಾಯಿತು. ಅದರ ಬಗ್ಗೆ ಹಲವಾರು ಮಿತ್ರರಿಂದ ಪ್ರಶಂಸೆಯ ಮಾತುಗಳು ಕೇಳಿಬಂದುದರಿಂದ, ಇತ್ತೀಚೆಗಷ್ಟೇ ಅದನ್ನು ನೋಡಿ ಮುಗಿಸಿದೆ.
ಚಿತ್ರವನ್ನು ಶೇಕ್ಸ್ಪಿಯರ್’ನ ಇದೇ Macbeth ನಾಟಕವನ್ನು ಆಧರಿಸಿ ತಯಾರಿಸಲಾಗಿದೆ. ಇದು ಆ ನಾಟಕದ ತುಳು ಅಳವಡಿಕೆಯಾದ್ದರಿಂದ, ಇಲ್ಲಿನ ಕಥೆಯ ಪಾತ್ರಗಳು, ಓಟದ ಧಾಟಿಯೇ ಬೇರೆ. ಆದರೆ, ಇಲ್ಲಿಯೂ ಅದೇ ದುರಾಸೆ, ಅದೇ ದುರಂತ; ಅಲ್ಲಿ ಮಾಟಗಾತಿಯರು ನುಡಿಯುವ ಭವಿಷ್ಯವಾಣಿಯು ಮ್ಯಾಕ್ಬೆತ್’ನ ಅಧೋಗತಿಗೆ ಕಾರಣವಾದರೆ, ಇಲ್ಲಿ ದೈವವೊಂದರ ಮಾತು (ಅಥವಾ ಮಾಧವನ ಭ್ರಮೆ) ಎಲ್ಲ ಅನರ್ಥಗಳಿಗೂ ದಾರಿಯಾಗುತ್ತದೆ.
ಒಂದು ಪಾಪಕಾರ್ಯವನ್ನು ಮುಚ್ಚಿಡಲು, ಸಾಲುಸಾಲಾಗಿ ತಪ್ಪುಗಳನ್ನೆಸಗುತ್ತ — ಕೊನೆಕೊನೆಗೆ ಅವೆಲ್ಲದರ ಭಯದಲ್ಲಿ, ಪಶ್ಚಾತ್ತಾಪದಲ್ಲಿ ನೊಂದು ಬೆಂದು ಪರಿತಪಿಸುವ ಪಾತ್ರಗಳು!
ಚಿತ್ರದ ಹಿನ್ನೆಲೆಯಲ್ಲಿ ಕಾಣುವ ತುಳುನಾಡಿನ ಬದುಕು, ಆಚರಣೆಗಳು, ಯಕ್ಷಗಾನ, ದೈವಾರಾಧನೆಯ ದೃಶ್ಯಗಳು ಪ್ರೇಕ್ಷಕರ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ.
ಚಿತ್ರವನ್ನು ನೋಡಿಯಾದ ಮೇಲೆ, ಅದರಲ್ಲಿಯ ಸಂದರ್ಭ ಸನ್ನಿವೇಶಗಳನ್ನು ಮೆಲುಕುಹಾಕುವಾಗ — ಅಲ್ಲೊಂದು ಇಲ್ಲೊಂದು ಘಟನೆ ತುಸು ಅವಾಸ್ತವಿಕವೇನೊ ಎನಿಸಿದರೂ, ಒಟ್ಟಾರೆಯಾಗಿ ಪಡ್ಡಾಯಿ ನಿಜಕ್ಕೂ ಅದ್ಭುತವಾಗಿದೆ. Subtitles ಇರುವುದರಿಂದ, ತುಳು ಭಾಷೆ ಬಾರದವರೂ ಚಿತ್ರವನ್ನು ನೋಡಲು ತೊಡಕೆನಿಸುವುದಿಲ್ಲ. ಸಮಯ ಸಿಕ್ಕರೆ ಈ ಚಿತ್ರವನ್ನು ತಪ್ಪದೆ ನೋಡಿ.
ಈಚೆಗೆ ಓದಿದ್ದು
ಈ ವಾರ ಗಿರೀಶ ಕಾರ್ನಾಡರ “ಬೆಂದ ಕಾಳು ಆನ್ ಟೋಸ್ಟ್” ನಾಟಕವನ್ನು ಓದಿದೆ. ಅದೇಕೊ, ನಿಜವಾಗಿಯೂ “ಏನೇನೂ ಚೆಂದವಿಲ್ಲ” ಎನಿಸಿತು.
ಮುನ್ನುಡಿಯಲ್ಲಿ, ನಾಟಕಕಾರರು ಶೂದ್ರಕನ ಮೃಚ್ಛಕಟಿಕ ನಾಟಕದ ಬಗೆಗೆ ವಿಸ್ತಾರವಾಗಿ ಪ್ರಸ್ತಾಪಿಸಿ, ಈ ನಾಟಕವು ಮೃಚ್ಛಕಟಿಕಕ್ಕೆ ತಾವು ಅರ್ಪಿಸುವ ಕಿರುಕಾಣಿಕೆ ಎಂದು ಸೂಚಿಸಿದ್ದಾರೆ. ಮುನ್ನುಡಿಯನ್ನು ಓದದಿದ್ದರೆ, ಯಾವ ಓದುಗನಿಗೂ “ಬೆಂದ ಕಾಳು ಆನ್ ಟೋಸ್ಟ್” ಅನ್ನು ಓದಿದಾಗ ಇನಿತಾದರೂ “ಮೃಚ್ಛಕಟಿಕ”ದ ನೆನಪಾಗದೇನೊ ಎನಿಸಿತು, ನನಗೆ.
ಕಾರ್ನಾಡರ ಯಯಾತಿ, ತುಘಲಕ್, ನಾಗಮಂಡಲದಂತಹ ನಾಟಕಗಳನ್ನು ಪದೇಪದೇ ಓದಿ, ಬಹುವಾಗಿ ಮೆಚ್ಚಿದ್ದ ನನಗೆ ಈ ನಾಟಕವೇಕೋ ಅತ್ಯಂತ ಸಾಧಾರಣವಾಗಿದೆಯೆನಿಸಿತು.
ಪದದ ಜಾಡು ಹಿಡಿದು
ಮೊನ್ನೆ ಅದುಹೇಗೊ ಥರಥರದ ಚರ್ಚೆಯೊಂದು ಶುರುವಾಯಿತು; ದಿನನಿತ್ಯದ ಬಳಕೆಯಲ್ಲಿರುವ ಪದ “ಥರ”ವನ್ನು ಬರೆಯುವುದು ಹೇಗೆ? ಅದರ ಸರಿಯಾದ ರೂಪ ಯಾವುದು? ಅದು ಕನ್ನಡ ಮೂಲದ ಪದವೇನಾ ಅಥವಾ ಅನ್ಯದೇಶೀ ಪದವಾ? — ಎಂಬಿವೇ ಮೊದಲಾದ ಪ್ರಶ್ನೆಗಳು ಬಂದುವು.
ತರಹ, ಥರ, ಥರಾ, ತರ, ತೆರ/ತೆರನು — ಇವಿಷ್ಟೂ ರೂಪಗಳು ಬಳಕೆಯಲ್ಲಿವೆ. ಇವೆಲ್ಲವೂ “ರೀತಿ” ಎಂಬ ಅರ್ಥದಲ್ಲಿ ಪ್ರಯೋಗವಾಗುವುದನ್ನು ಕಾಣಬಹುದು.
ಇವುಗಳಲ್ಲಿ, “ತೆಱ/ತೆರ” ಎಂಬ ರೂಪವು ಬಹಳ ಹಿಂದಿನಿಂದಲೂ ಬಳಕೆಯಲ್ಲಿದೆ. ಕನ್ನಡದ ಆದಿಕವಿ ಪಂಪನಿಂದ ಹಿಡಿದು ನಾನಾ ಕವಿಗಳ, ವಚನಕಾರರ ರಚನೆಗಳಲ್ಲಿ “ತೆರನು” ಎಂಬ ಪ್ರಯೋಗವನ್ನು ಕಾಣಬಹುದು. ಈಗ ಗ್ರಾಂಥಿಕ ಬಳಕೆಯಲ್ಲಿ ‘ತೆರನಾದ’ ‘ತೆರದ’ ಎಂಬ ರೂಪವು ಬಳಕೆಯಾಗುತ್ತದೆ.
ತರಹ/ ತರ/ ಥರ — ಇವು ಅನ್ಯದೇಶೀ* ಮೂಲದ್ದೆಂದು ತೋರುತ್ತದೆ. [* ‘ಕನ್ನಡದಲ್ಲಿ ಅನ್ಯಭಾಷಾ ಪದನಿಷ್ಪತ್ತಿ ಕೋಶ’ದಲ್ಲಿ ಅರಬ್ಬಿ, ಪಾರಸಿ ಮೂಲವನ್ನು ಸೂಚಿಸಿದ್ದಾರೆ]
ಹಿಂದಿ ಮೊದಲಾದ ಭಾಷೆಗಳಲ್ಲಿ ತರ್ಹಾ, ತರಹ್ ಮೊದಲಾದ ಬಳಕೆಯಿರುವುದನ್ನು ಇಲ್ಲಿ ನೆನೆಯಬಹುದು. ತರಹ/ತರ್ಹಾ ಎಂಬ ಪದದಲ್ಲಿಯ ವರ್ಣಗಳು ಆಡುವಾಗ ಸ್ಥಾನಪಲ್ಲಟಗೊಂಡು, ಕನ್ನಡದಲ್ಲಿ ಥರ ಎಂದಾಗಿರಲಿಕ್ಕೂ ಸಾಕು!
ಕನ್ನಡದ ಮಟ್ಟಿಗೆ, ತರ/ಥರ ಎಂಬ ರೂಪಗಳು ಆಡುಮಾತಿನಲ್ಲಿ ಹೆಚ್ಚು ಬಳಕೆಯಾದರೆ, ‘ತರಹ’ವು ಗ್ರಾಂಥಿಕ ರಚನೆಗಳಲ್ಲಿ ಹೆಚ್ಚು ಕಾಣಿಸುತ್ತದೆ.
ಟಿಪ್ಪಣಿ:
೧) ತರ/ಥರ — ಎಂಬುದಕ್ಕೆ, ಬರಿ “ರೀತಿ” ಎಂದಲ್ಲದೆ, ಪದರ/ವರ್ಗ ಎಂಬ ಅರ್ಥವೂ ಇದೆ. ಅದು ಸಂಸ್ಕೃತದ “ಸ್ತರ” ಎಂಬ ಪದದ ಅಪಭ್ರಂಶವೆಂದು ತೋರುತ್ತದೆ.
೨) ಅದಲ್ಲದೆ, ಇವೆರಡೂ ಪದಗಳು ಅನುಕರಣಾವ್ಯಯಗಳಾಗಿಯೂ ಬಳಕೆಯಲ್ಲಿವೆ. “ಅವನು ಥರಥರ ನಡುಗುತ್ತಿದ್ದ” , “ತರತರಾಂತ ಸದ್ದು ಮಾಡದೆ ಓಡಾಡೋಕೇ ಬರಲ್ವಾ ನಿಂಗೆ?” — ಹೀಗೆ
೩) ತೆಲುಗಿನಲ್ಲಿ “ತರಂ” “ತರಮು” ಎಂದರೆ, ಪೀಳಿಗೆ, ಶಕ್ತಿ ಎಂಬ ಅರ್ಥಗಳೂ ಇವೆ.
ಗಿರಿಜಾ ಮೀಸೆ
ಈಚೆಗೊಮ್ಮೆ ಟ್ವಿಟ್ಟರಿನಲ್ಲಿ ಈ ಅಪರೂಪದ ಪಕ್ಷಿಯೊಂದರ ಚಿತ್ರವು ಕಂಡಿತು. ನಾನು ಅದರ “ಗಿರಿಜಾ ಮೀಸೆ” ಮೆಚ್ಚುತ್ತ, ಟ್ವೀಟ್ ಮಾಡಿದ್ದೆ. ಅದು ಮತ್ತೊಂದು ಆಸಕ್ತಿಕರ ಚರ್ಚೆಗೆ ಹೇತುವಾಯಿತು.
ಮಾಟವಾಗಿ, ದಪ್ಪನಾದ ಮೀಸೆಯನ್ನು ಗಿರಿಜಾಮೀಸೆ ಎಂದು ಕರೆಯುತ್ತಿದ್ದುದನ್ನು ನಮ್ಮ ಚಿಕ್ಕಂದಿನಲ್ಲಿ ಕಂಡಿದ್ದೆವು. ಆ ಪದದ ಮೂಲವಾಗಲಿ, ಹಾಗೆ ಕರೆಯಲು ಇದ್ದ ಕಾರಣವಾಗಲಿ ಆಗ ನಮಗೇನೂ ತಿಳಿದಿರಲಿಲ್ಲ. ಅಂತೂ, ಚಿಕ್ಕಂದಿನಲ್ಲಿ ‘ಗಿರಿಜಾಮೀಸೆ’ಯೆನಿಸಿದ್ದುದು, ಮುಂದೆ “ಆಹಾ! ಅವ್ನ್ ಮೀಸೆ ನೋಡು; ಒಳ್ಳೆ ವೀರಪ್ಪನ್ ಥರಾ ಇದೆ” ಎಂದಾಗಿಹೋಯಿತು. ಬಹುಶಃ ಆ ಮಧ್ಯಕಾಲದಲ್ಲೆಲ್ಲೋ, ಈ ‘ಗಿರಿಜಾಮೀಸೆ’ ಪದದ ಬಳಕೆ ತಪ್ಪಿಹೋಗಿದ್ದಿರಬೇಕು.
ಇದು “ಪೊದೆಯಂತೆ ಬೆಳೆದಿರುವ ಮೀಸೆ”ಯೆಂದು ಸೂಚಿಸಲು ‘ಗಿರಿಜ’ (ಗಿರಿಜ : ಗಿರಿ+ಜ → ಬೆಟ್ಟದ ಮೇಲೆ ಹುಟ್ಟಿ ಬೆಳೆದ ಪೊದೆಗಳು) ಎಂಬ ಪದ ಬಳಕೆಯಾಗಿದ್ದಿರಬೇಕು ಎಂಬ ವಾದವಿದೆಯಂತೆ. ಇದಂತೂ ಅಷ್ಟೇನೂ ಒಪ್ಪಬಹುದಾದಂತೆ ಕಾಣಿಸದು.
ಇನ್ನು, “ಇಗೋ ಕನ್ನಡ”ದಲ್ಲಿ, ಈ ಪದದ ಬಗ್ಗೆ ವಿವರಿಸುತ್ತ, ಪ್ರೊ.ಜಿ.ವೆಂಕಟಸುಬ್ಬಯ್ಯನವರು, “ಇದೊಂದು ಪ್ರೇತ ಪದ (Ghost Word) ಎಂದಿದ್ದಾರೆ. ‘ಗುಜುರು ಮೀಸೆ’ ಎಂದಿದ್ದ ಪದವು ಅಪಪ್ರಯೋಗದಿಂದ ಗಿರಿಜಾಮೀಸೆ ಎಂದಾಗಿದೆಯೆಂದು ವಿವರಿಸಿದ್ದಾರೆ.
ಅದಾಗ್ಯೂ, ನನಗೇಕೊ ಈ ವಿವರಣೆಯೂ ಅಷ್ಟು ಸಮಾಧಾನಕರವೆನಿಸಲಿಲ್ಲ!
ದೇಶಿಯೊ ವಿದೇಶಿಯೊ?
ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸ್’ಫರ್ಡಿನವರು
ದೇಶಕಾಲವಿಭಾಗ ಮನದ ರಾಜ್ಯದೊಳಿರದು
ಶ್ವಾಸವದು ಬೊಮ್ಮನದು ಮಂಕುತಿಮ್ಮ ||
ಎಲ್ಲೋ ದೇವನಹಳ್ಳಿ ತಾಲೂಕಿನಲ್ಲಿ ಹುಟ್ಟಿದ ಮೊದ್ದು ಮೋಪಿಗೆ, ಅಲ್ಲೆಲ್ಲೊ ಜೀವಿಸಿದ್ದ ಹೋಮರನ ಕಾವ್ಯಾನುವಾದಗಳನ್ನೂ (ಇಲಿಯಡ್, ಒಡಿಸ್ಸಿ), ಶೇಕ್ಸ್ಪಿಯರನ ಸಾನೆಟ್ಟುಗಳನ್ನೂ ಓದುವ ಯೋಗವಿತ್ತು; ಓದಿದ. ಅದು ಅಲ್ಲಿಗೇ ನಿಲ್ಲದೆ, ಡಿವೈನ್ ಕಾಮಿಡಿ, ಗಿಲ್ಗಮೇಶ್, ಪ್ಯಾರಡೈಸ್ ಲಾಸ್ಟ್ ಮೊದಲಾದ ಕಾವ್ಯಗಳನ್ನೂ ತಂದು ಪೇರಿಸಿಟ್ಟುಕೊಂಡು, ಆಗಾಗ ಅವನ್ನೋದುವ ಪ್ರಯತ್ನವನ್ನೂ ಮಾಡಿದ್ದಾನೆ. ಇದಕ್ಕಿಂತ ವಿಚಿತ್ರಗಳು ಇನ್ನೇನಿದ್ದಾವು — ಪ್ರಪಂಚದಲ್ಲಿ?
ಸದ್ಯಕ್ಕೆ, ಓವಿಡ್ಡನ “ದಿ ಆರ್ಟ್ ಆಫ್ ಲವ್” ಅನ್ನು ಓದಿ ಮುಗಿಸಿ, ಅದೇ ಕವಿಯ “ಮೆಟಾಮಾರ್ಫೊಸಿಸ್” ಓದಲು ತೊಡಗಿದ್ದೇನೆ. ಆಗಿಂದಾಗ್ಗೆ, ಅದರಲ್ಲಿ ಬರುವ ಚಿತ್ರವಿಚಿತ್ರ ಕಥೆಗಳನ್ನು ಕಂಡು ಅಚ್ಚರಿವಟ್ಟು, ಪುಸ್ತಕವನ್ನು ಮುಚ್ಚಿಟ್ಟು ಆ ಬಗ್ಗೆ ಚಿಂತಿಸಿದ್ದೇನೆ.
ಈ ಮಧ್ಯದಲ್ಲೇ, ತೆಲುಗಿನ ಕವಿ ಶ್ರೀನಾಥನ “ಶೃಂಗಾರ ನೈಷಧಮು” ಕಾವ್ಯದ ವ್ಯಾಸಂಗವೂ ಸಾಗುತ್ತಿದೆ. ಆದರೇನು, ಅಷ್ಟಕ್ಕೆ ತೃಪ್ತಿಯೆಲ್ಲಿಯದು? ಇವನ್ನಿನ್ನೂ ಓದಿ ಮುಗಿಸಿಲ್ಲ; ಆಗಲೇ ಮನಸ್ಸು, ಬಮ್ಮೆರ ಪೋತನನ “ಆಂಧ್ರ ಭಾಗವತಮು” ಓದಲು ತವಕಿಸುತ್ತಿದೆ. ಇವೆಲ್ಲವುಗಳ ನಡುವೆ ಒಂದೆರಡು ಕನ್ನಡ ಲೇಖನಗಳನ್ನೂ ಓದುವುದೂ ಆಗುತ್ತಿದೆ. ಜೊತೆಗೆ, ಬೇರೆ ಒಂದೆರಡು ಕೆಲಸಗಳಲ್ಲಿ ಕಂಠದ ಮಟ್ಟಿಗೆ ಮುಳುಗಿದ್ದೇನೆ (ಅದಕ್ಕೇ ಈ ಬಾರಿಯ “೫ ಮಾತುಗಳು” ತಡವಾಯಿತು). ಒಟ್ನಲ್ಲಿ, ದಿನಗಳು ಒಂದ್ರೀತಿ ಆಸಕ್ತಿಕರವಾಗಿವೆ, ಈ ನಡುವೆ!