ಈ ವಾರದ ಕತೆ

೧ ಇದನ್ನೇಕೆ ಬರೆಯುತ್ತಿದ್ದೇನೆ?

ನನ್ನ ಸೋಮಾರಿತನದ ಬಗ್ಗೆ ಏನಿಲ್ಲವೆಂದರೂ, ನನ್ನ ಗೆಳೆಯರ ಬಳಗಕ್ಕಾದರೂ ಚೆನ್ನಾಗಿ ಗೊತ್ತಿದೆ. ನನ್ನೊಟ್ಟಿಗೆ ಹೆಚ್ಚಿನ ಸಲುಗೆಯಿರುವವರು ಆಗೊಮ್ಮೆ ಈಗೊಮ್ಮ ನನ್ನನ್ನು ಬಯ್ಯುವುದೂ ಉಂಟು, ’ಏನನ್ನಾದರೂ ಬರೆಯುವುದಿಲ್ಲವೇಕೆ?’ ಎಂದು.

ಬರೆಯಬಾರದೆಂದೇನಲ್ಲ; ಆದರೆ, ಏನನ್ನಾದರೂ ಬರೆಯೋಣವೆಂದು ಕುಳಿತರೆ ಮನಸ್ಸೆಲ್ಲ ಖಾಲಿಖಾಲಿಯಾಗಿಬಿಡುತ್ತೆ. ಏನನ್ನು ಹೇಳಬೇಕೆಂದುಕೊಳ್ಳುತ್ತೇನೊ ಅದೆಲ್ಲ ಒಂದೇ ಏಟಿಗೆ ಮನಸ್ಸಿನಿಂದ ಅಂತರ್ಧಾನವಾಗಿಬಿಡುತ್ತೆ. ಇನ್ನು ಬರೆಯುವುದಿನ್ನೇನನ್ನು?

ವಿಷಯ ಏನಪ್ಪಾ ಅಂದ್ರೆ, ಯಾವುದೊ ಒಂದು ವಿಷಯದ ಕುರಿತು ಸರಣಿಯೊಂದನ್ನು ಶುರು ಮಾಡಬೇಕೆಂದು ಮಿತ್ರರೊಬ್ಬರು ಕೇಳಿದ್ದರು. ನಾನೂ ಉತ್ಸಾಹ ತೋರಿ, ’ಪ್ರಯತ್ನಿಸುತ್ತೇನೆ’ ಎಂದಿದ್ದೆ. ಆದರೆ, ಎಂದಿನಂತೆ, ಬರೆಯಲು ಕುಳಿತರೆ ಮತ್ತದೇ ಖಾಲಿತನ.!

ಹಾಳಾದ್ದು, ಇದನ್ನೇನೊ ರೈಟರ್ಸ್ ಬ್ಲಾಕ್ ಅಂತೇನೊ ಕರೀತಾರಂತೆ. ಸರಿ, ಇದರಿಂದ ಹೊರಬರುವ ದಾರಿ ಏನೆಂದು ಚಿಂತಿಸುತ್ತಿದ್ದಾಗ ನಮ್ಮ ನಿತೀಶನು ಅದ್ಯಾರೊ ಟಿಮ್ ಫ಼ೆರಿಸ್ ಎಂಬ ವ್ಯಕ್ತಿಯ ಬಗ್ಗೆ ತಿಳಿಸಿ, “ಆತ ವಾರಕ್ಕೊಮ್ಮೆ ’ಫೈವ್ ಬುಲ್ಲೆಟ್ ಫ್ರೈಡೇ’ ಅಂತ ಪ್ರಕಟಿಸುತ್ತಾನೆ. ಆ ರೀತಿ ನೀನೂ ಪ್ರಯತ್ನಿಸಬಾರದೇಕೆ?” ಎಂದ.

ಆಯಾ ವಾರದಲ್ಲಿ ತಾನು ಓದಿದ ಪುಸ್ತಕದ ಬಗ್ಗೆ, ನೋಡಿದ ಸ್ಥಳದ ಬಗ್ಗೆ, ತನಗೆ ಇಷ್ಟವಾದ ತಿನಿಸಿನ ಬಗ್ಗೆ — ಹೀಗೆ ಯಾವುದಾದರೂ ಐದು ವಿಷಯಗಳ ಬಗ್ಗೆ ಅತಿ ಸಂಕ್ಷಿಪ್ತವಾಗಿ ಬರೆದು ತನ್ನ ಓದುಗರೊಡನೆ ಹಂಚಿಕೊಳ್ಳುತ್ತಾನಂತೆ, ಆತ.

ಈ ಸಲಹೆ ನನಗೂ ಹಿಡಿಸಿತು. ಹೇಗಿದ್ದರೂ ದಿನಕ್ಕೆ ಐವತ್ತೊ-ನೂರೋ ಲೆಕ್ಕದಲ್ಲಿ ಬೇಕಿದ್ದು, ಬೇಡದ್ದರ ಬಗ್ಗೆಯೆಲ್ಲ ಟ್ವೀಟ್ ಮಾಡ್ತಿರ್ತೇನೆ. ಅದನ್ನೇ ಸ್ವಲ್ಪ ಸರಿಯಾದ ಕ್ರಮದಲ್ಲಿ ಹೊಂದಿಸಿ, ಶೋಧಿಸಿ, ವಾರಕ್ಕೊಮ್ಮೆ ಐದು ಅಂಶಗಳನ್ನು ಪ್ರಕಟಿಸಲು ನಾನೂ ಪ್ರಯತ್ನಿಸಬಾರದೇಕೆ ಎನಿಸಿತು. ಅದರ ಮೊದಲ ಕಂತೇ ಇದು.

ಈ ’ಅತಿ ಸಂಕ್ಷಿಪ್ತವಾಗಿ ಬರೆಯುವ’ ಪದ್ಧತಿ ನನ್ನ ಜಾಯಮಾನಕ್ಕೆ ಅಂಟಿಬಂದಿಲ್ಲವೆನಿಸುತ್ತೆ. ಏನನ್ನೇ ಹೇಳಹೊರಟರೂ ಅದೊಂದು ದೊಡ್ಡ ಪುರಾಣವೇ ಆಗಿ ಹೋಗುತ್ತೆ. ನನ್ನ ಸ್ನೇಹಿತರಲ್ಲೊಬ್ಬರಂತೂ, ನನ್ನ ಬಹುತೇಕ ಲೇಖನಗಳಲ್ಲಿ ಪೀಠಿಕೆಯದ್ದೇ ಸಿಂಹಪಾಲು ಇರುತ್ತದೆ ಎಂದು ಅಣಕವಾಡುತ್ತಿರುತ್ತಾರೆ. ಈ ಸಾರಿಯೂ ಆ ಅಪವಾದಕ್ಕೆ ಹೊರತಾಗಿಲ್ಲ. ಮುಂದಿನ ದಿನಗಳಲ್ಲಾದರೂ ’ಸಂಕ್ಷಿಪ್ತತೆ’ಯನ್ನು ಕಾಯ್ದುಕೊಳ್ಳುವತ್ತ ಹೆಚ್ಚಿನ ಗಮನ ಹರಿಸುವೆನೆಂದು ಮಾತು ಕೊಡುತ್ತೇನೆ.

೨ ಇತ್ತೀಚೆಗೆ ನಾನು ಓದಿದ್ದು

೧೩ನೇ ಶತಮಾನದ ತೆಲುಗು ಕವಿ ತಿಕ್ಕನ ಸೋಮಯಾಜಿಯು ಮೂಲ ಮಹಾಭಾರತದ (ಸಂಸ್ಕೃತ) ಒಟ್ಟು ೧೫ ಪರ್ವಗಳನ್ನು ತೆಲುಗಿಗೆ ಅನುವಾದಿಸಿದ್ದಾನೆ. ಸದ್ಯಕ್ಕೆ ಅದರ ಓದಿನಲ್ಲಿ ತೊಡಗಿದ್ದೇನೆ. ಪ್ರಸ್ತುತ ಪರ್ವವು ಅತಿರಮ್ಯವಾದ ’ಅಶ್ವಮೇಧ ಪರ್ವ’; ಅದರಲ್ಲಿ ಮನೋಜ್ಞವಾಗಿ ಚಿತ್ರಿತವಾಗಿರುವ ಪರೀಕ್ಷಿತನ ಜನನದ ಸಂದರ್ಭವನ್ನು ಈ ವಾರದಲ್ಲಿ ಓದುವುದಾಯಿತು:

ಆಗಿನ್ನೂ ಅಶ್ವಮೇಧ ಯಾಗ ಶುರುವಾಗಿರಲಿಲ್ಲ; ಪಾಂಡವರು ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳಲ್ಲಿ ತೊಡಗಿದ್ದರು, ಅಷ್ಟೆ. ಯಾಗಕ್ಕೆ ಬೇಕಾದ ಹೊನ್ನಿನ ಸಂಗ್ರಹಕ್ಕಾಗಿ ಅವರೆಲ್ಲ ಹಿಮಾಲಯಕ್ಕೆ ಹೋಗಿದ್ದರು (ಅದೊಂದು ದೊಡ್ಡ ಕಥೆ! ಇಲ್ಲಿ ಅಪ್ರಸ್ತುತ ಬಿಡಿ). ಪಾಂಡವರೆಲ್ಲ ಹಿಮಾಚಲಕ್ಕೆ ಹೋಗಿದ್ದರಾದ್ದರಿಂದ, ಇತ್ತ ರಾಜ್ಯರಕ್ಷಣೆಯ ಹೊಣೆ ಯುಯುತ್ಸು ಹಾಗೂ ವಿದುರನದ್ದು. ಆ ಹೊತ್ತಿಗೆ ಕೃಷ್ಣನು ಇನ್ನೂ ದ್ವಾರಕೆಯಲ್ಲಿದ್ದ.!

ಕೆಲವು ದಿನಗಳ ನಂತರ ಕೃಷ್ಣನು ತನ್ನ ಸಕಲ ಪರಿವಾರದವರೊಡನೆ ಹಸ್ತಿನಾಪುರಕ್ಕೆ ಬಂದ. ಬಂದವನು ಧೃತರಾಷ್ಟ್ರ ಗಾಂಧಾರಿ ಹಾಗೂ ಕುಂತಿ ಮುಂತಾದವರನ್ನು ಭೇಟಿ ಮಾಡಿದ.

ಕೃಷ್ಣನು ಬಂದ ಸ್ವಲ್ಪ ಹೊತ್ತಿಗೆ ಅತ್ತ ಸೂತಿಕಾಗೃಹದಲ್ಲಿ ಉತ್ತರೆಯು ಗಂಡುಮಗುವೊಂದಕ್ಕೆ ಜನ್ಮವಿತ್ತಳು. ಆದರೆ, ದುರ್ದೈವ! ಮಗು ಹುಟ್ಟುವ ಮುನ್ನವೆ ಸತ್ತು ಹೋಗಿತ್ತು. ಅದನ್ನು ಕಂಡು ಪಾಂಡವರ ಪರಿವಾರದವರೆಲ್ಲ ಗಟ್ಟಿಯಾಗಿ ರೋದಿಸತೊಡಗಿದರು.

ಸುಭದ್ರೆ ಹಾಗೂ ಕುಂತಿ ಕೃಷ್ಣನ ಬಳಿಗೆ ಓಡಿಬಂದು ಬೇಡಿಕೊಂಡರು — ಹೇಗಾದರೂ ಆ ಮಗುವನ್ನು ಬದುಕಿಸಿ ಕೊಡು ಎಂದು.

’ಆ ಅಶ್ವತ್ಥಾಮನು ಪ್ರಯೋಗಿಸಿದ ಬಾಣದ ಫಲವಾಗಿ ಅಂದು ಪಾಂಡವ ಸ್ತ್ರೀಯರೆಲ್ಲರ ಗರ್ಭಗಳೂ ಗಳಿತವಾದುವು. ಆದರೆ ಅಂದು ನೀನು ಮಾತು ನೀಡಿದ್ದೆ, ಪುಣ್ಯಾತ್ಮನಾದ ಅಭಿಮನ್ಯುವಿನ ಮಗುವನ್ನಾದರೂ ಉಳಿಸಿಯೇ ಉಳಿಸುತ್ತೇನೆ ಎಂದು. ಈಗ ಸಮಯ ಬಂದಿದೆ, ಕೃಷ್ಣ! ಮಗುವನ್ನು ಬದುಕಿಸಿಕೊಡು. ಇಲ್ಲವಾದರೆ ನಾನೂ, ನನ್ನ ಮಕ್ಕಳು, ಈ ಸುಭದ್ರೆ ದ್ರೌಪದಿ ಮುಂತಾದವರೆಲ್ಲ ಜೀವಂತವಿರಲಾರೆವು…’ ಎಂದು ಕುಂತಿಯು ಬೇಡಿಕೊಂಡಳು.

ಸುಭದ್ರೆಯೂ ಅಭಿಮನ್ಯುವನ್ನು ನೆನಪಿಸಿ, “ಅವನನ್ನಂತೂ ಕಳೆದುಕೊಂಡೆವು. ಈಗ ಈ ಮಗುವೂ ಇಲ್ಲವಾದರೆ ಆ ದುಃಖವನ್ನು ತಡೆಯುವ ಶಕ್ತಿ ತಮಗಾರಿಗೂ ಇಲ್ಲವೆಂದು” ಹಲವತ್ತುಕೊಂಡಳು.

ಅಲ್ಲ, ತನ್ನ ಮೊಮ್ಮಗನನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಕೃಷ್ಣನಿಗೇನು ತಿಳಿಯದ ಸಂಗತಿಯೆ? ಅದನ್ನು ಯಾರಾದರೂ ಅವನಿಗೆ ನೆನಪಿಸಬೇಕೆ? ಕುಂತಿ ಹಾಗೂ ಸುಭದ್ರೆಯರಿಗೂ ಈ ಸಂಗತಿ ಹೊಳೆದು, “ಕೃಷ್ಣ! ದುಃಖದ ಭರದಲ್ಲಿ ಹೀಗೆ ಮಾತಾಡಿದೆವು. ನಿನಗೆ ತಿಳಿಯದ್ದೇನಿದೆ; ಮುಂದೆ ಏನು ನಡೆಸಬೇಕೆಂದಿಹೆಯೊ ಹಾಗೆ ನಡೆಸು..” ಎಂದರು.

ಕೃಷ್ಣನು ಅವರೊಡನೆ ಸೂತಿಕಾಗೃಹಕ್ಕೆ ಬಂದ. ದುಃಖಸಾಗರದಲ್ಲಿ ಮುಳುಗಿದ್ದ ಉತ್ತರೆಯ ಆರಯ್ಕೆ ಮಾಡುತ್ತ ದ್ರೌಪದಿಯೂ ಅಲ್ಲಿಯೇ ಇದ್ದಳು. ಕೃಷ್ಣನನ್ನು ಕಂಡದ್ದೇ ತಡ, ಅವರಿಬ್ಬರೂ ಉಕ್ಕಿಬಂದ ದುಃಖದಿಂದ ಅವನ ಬಳಿ ತಮ್ಮ ಸಂಕಟವನ್ನು ತೋಡಿಕೊಂಡರು.

ಉತ್ತರೆಯಂತೂ, ’ಗಂಡನನ್ನು ಕಳೆದುಕೊಂಡ ಈ ಪಾಪಿಷ್ಟೆಯು ಈಗ ಪುತ್ರವಿಹೀನೆಯೂ ಆಗದಂತೆ ನೀನೇ ಕಾಯಬೇಕು, ಕೃಷ್ಣ!’ ಎಂದು ಬೇಡಿದಳು.

ಕೃಷ್ಣನ ಪ್ರಯತ್ನದಿಂದ ಮಗುವು ಕೆಲವೇ ನಿಮಿಷಗಳಲ್ಲಿ ಜೀವಂತವಾಯಿತು. ಮಗುವು ಪ್ರಾಣ ಪಡೆದದ್ದನ್ನು ಕಂಡು ಅಲ್ಲಿದ್ದವರಿಗೆಲ್ಲ ಜೀವ ಬಂದಂತಾಯಿತು.

“ತನ್ನ ಕುಲವು ಪರಿಕ್ಷೀಣವಾಗುತ್ತಿದ್ದಂತಹ ಸಂದರ್ಭದಲ್ಲಿ (ಅದನ್ನುಳಿಸಲು) ಹುಟ್ಟಿದವನಾದ್ದರಿಂದ ಇವನ ಹೆಸರು ಪರೀಕ್ಷಿತ್ ಎಂದಾಗಲಿ” ಎಂದು ಸಾರಿ, ಕೃಷ್ಣನು ಆ ಮಗುವಿಗೆ ಪರೀಕ್ಷಿತನೆಂದು ಹೆಸರಿಟ್ಟ.

೩ ಮೊದಲ ಬಾರಿ ಸವಿದ ಸಿಹಿತಿನಿಸು — ಬಕ್ಲಾವಾ

ಮೊದಲ ಬಾರಿಗೆ ಅದರ ಬಗ್ಗೆ ಕೇಳಿದಾಗ ನನಗೆ ಅದರ ಹೆಸರೇ ವಿಚಿತ್ರವಾಗಿ ಕಂಡಿತ್ತು. ಯೂಟ್ಯೂಬಿನಲ್ಲಿ ಅದನ್ನು ತಯಾರಿಸುವ ವಿಧಾನವನ್ನು ಕಂಡು ’ಆಹಾ! ಇದು ಲಸಾಞ್ಞದ ಸಿಹಿ ಅವತರಣಿಕೆಯಂತೆಯೇ ಇದೆಯಲ್ಲ’ ಎಂದುಕೊಂಡಿದ್ದೆ. ಆದರೆ ಅದೇಕೊ ಈವರೆಗೂ ಅದನ್ನು ತಿನ್ನುವ ಯೋಗವು ಕೂಡಿಬಂದಿರಲಿಲ್ಲ. ಮೊನ್ನೆ ನನ್ನ ಸಹೋದ್ಯೋಗಿಯೊಬ್ಬರು ಇಲ್ಲಿನ ರೆಸ್ಟೊರೆಂಟ್ ಒಂದರಲ್ಲಿ ಬಕ್ಲಾವಾ ಸಿಗುತ್ತೆ ಎಂದಿದ್ದರು. ಈ ವಾರ ನಾನು ಅಲ್ಲಿಗೆ ಊಟಕ್ಕೆ ಹೋಗಿದ್ದಾಗ ಕೊನೆಗೂ ಅದನ್ನು ಖರೀದಿಸಿ ಮನೆಗೆ ತಂದೆ.

ಐದು ಡಾಲರಿಗೆ ನಾಲಕ್ಕು ಬಕ್ಲಾವಾದ ಪೀಸುಗಳು. ರೂಮಿನವರಿಬ್ಬರಿಗೆ ತಲಾ ಒಂದೊಂದನ್ನು ಕೊಟ್ಟು, ಮಿಕ್ಕ ಎರಡು ಪೀಸನ್ನೂ ನಾನೇ ತಿಂದೆ. ಆಹಾ! ಅದೇನು ಮಾಯೆ ಆ ತಿನಿಸಿನದ್ದು. ಮೊದಲ ಸಾರಿಗೇ ಅದರ ಸವಿಗೆ ಸೋತು ಹೋದೆ. ಎಂದಾದರೊಮ್ಮೆ ಅದನ್ನು ಮನೆಯಲ್ಲೇ ತಯಾರಿಸಿ ತೀರುತ್ತೇನೆ ಎಂದು ಶಪಥವನ್ನೂ ಮಾಡಿದೆ. ಹೇಗಿದ್ದರೂ ಅದರ ತಯಾರಿಕೆಗೆ ಬೇಕಾದ ಫೀಲೊ/ಫೈಲೊ ಶೀಟುಗಳು ನಮ್ಮ ಮನೆಯ ಫ್ರೀಝರಿನಲ್ಲಿ ಭದ್ರವಾಗಿದೆಯಲ್ಲ ಎಂಬ ಬಲವಿದ್ದ ಮೇಲೆ ಇನ್ನೇನಿದೆ. ಅದನ್ನು ತಯಾರಿಸಲು ಮುಹೂರ್ತವೊಂದು ಕೂಡಿಬರಬೇಕಷ್ಟೆ.

ಸರಿ, ಇಷ್ಟು ಸವಿಯಾದ ತಿಂಡಿಯ ಪೂರ್ವಾಪರಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿದೆ. ಈಗ ನಮಗೆ ಸಿಗುವ ಈ ಬಕ್ಲಾವಾ ಎಂಬುದು ಟರ್ಕಿಯ ಮೂಲದ ಸಿಹಿತಿನಿಸಂತೆ.

ಒಂದು ಅಗಲವಾದ ಪಾತ್ರೆಯ ತಳಕ್ಕೆ ಮೊದಲು ಸ್ವಲ್ಪ ಬೆಣ್ಣೆಯನ್ನು ಸವರಿ, ಎರಡು ಫೀಲೊ ಶೀಟನ್ನು ಹರಡಿಕೊಳ್ಳಬೇಕು (ಇವು ಬಹಳವೆಂದರೆ ಬಹಳ ತೆಳ್ಳಗಿರುತ್ತವೆ). ಆ ಎರಡು ಶೀಟುಗಳನ್ನಿಟ್ಟ ಬಳಿಕ ಅವುಗಳ ಮೇಲೂ ಮತ್ತೆ ಕರಗಿಸಿದ ಬೆಣ್ಣೆಯನ್ನು ಸವರಿಕೊಂಡು, ಮತ್ತೆ ಇನ್ನೊಂದೆರಡು ಪದರವನ್ನು ಅದರ ಮೇಲೆ ಹರಡಬೇಕು. ಹೀಗೆ ಒಂದು ಎಂಟು-ಹತ್ತು ಫೀಲೊ ಶೀಟುಗಳನ್ನು ಹರಡಿಕೊಂಡ ನಂತರ ತರಿತರಿಯಾಗಿರುವ ಪಿಸ್ತಾ ಮುಂತಾದವುಗಳ ಮಿಶ್ರಣವನ್ನು ಸಮನಾಗಿ ಹರಡಬೇಕು. ಅದರ ಮೇಲೆ ಮತ್ತೆ ಆರೆಂಟು ಪದರ ಫೀಲೊ ಶೀಟುಗಳು. ಮತ್ತೆ ಪಿಸ್ತಾ ಮಿಶ್ರಣ. ಮತ್ತೆ ಎಂಟು-ಹತ್ತು ಪದರದಷ್ಟು ಫೀಲೊ ಶೀಟುಗಳು. ಇಷ್ಟೆಲ್ಲ ಆದಮೇಲೆ, ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಬೇಕು. ಈ ಹಂತಕ್ಕೂ ಮುನ್ನ, ಬೇಕಿದ್ದರೆ ಈ ಪಾತ್ರೆಯನ್ನು ಸ್ವಲ್ಪ ಹೊತ್ತು ಫ್ರಿಜ್ಜಿನಲ್ಲಿರಿಸಬಹುದು (ಕತ್ತರಿಸಲು ಸುಲಭವಾಗುತ್ತೆ). ಹಾಗೆ ಕತ್ತರಿಸಿದ ನಂತರ ಆ ಪಾತ್ರೆಯನ್ನು ಅವೆನ್ನಿನಲ್ಲಿಟ್ಟು ಬೇಯಿಸಬೇಕು.

ಅದು ಸ್ವಲ್ಪ ಆರಿದನಂತರ ಬೆಂದಿರುವ ಬಕ್ಲಾವಾದ ಮೇಲೆ ಸಕ್ಕರೆ ಹಾಗೂ ಜೇನು ಬೆರೆಸಿ ತಯಾರಿಸಿದ ಪಾಕವನ್ನು ಹುಯ್ಯಬೇಕು. ಆ ನಂತರ ಒಂದಷ್ಟು ಹೊತ್ತು ಅದನ್ನು ತಣ್ಣಗಾಗಲು ಬಿಡಿ. ಇಷ್ಟಾದರೆ ಬಕ್ಲಾವಾ ಸವಿಯಲು ಸಿದ್ಧ.

ಅಚ್ಚರಿಯ ಸಂಗತಿಯೆಂದರೆ, ಸಾಮಾನ್ಯ ಯುಗಕ್ಕೂ ಎರಡು ಶತಮಾನಗಳ ಹಿಂದೆ ಜೀವಿಸಿದ್ದ ಕೇಟೊ (ಕೇಟೊ ದಿ ಎಲ್ಡರ್) ಎಂಬ ರೋಮಿನ ಇತಿಹಾಸಕಾರನೊಬ್ಬನು ರಚಿಸಿದ್ದೆನ್ನಲಾದ ’ಡಿ ಅಗ್ರಿ ಕಲ್ಚುರಾ’ ಎಂಬ ಗ್ರಂಥದಲ್ಲಿ ಪ್ಲಸೆಂಟಾ ಎಂಬ ಸಿಹಿತಿನಿಸೊಂದನ್ನು ತಯಾರಿಸುವ ವಿಧಾನವನ್ನು ನಿರೂಪಿಸಲಾಗಿದೆ. ಅದು ಬಹುತೇಕ ಈ ಬಕ್ಲಾವಾವನ್ನು ತಯಾರಿಸುವ ವಿಧಾನವನ್ನೇ ಹೋಲುತ್ತದೆ. ಹೀಗಾಗಿ, ಬಕ್ಲಾವಾದ ಮೂಲ ಯಾವುದು ಎಂಬುದರ ಬಗ್ಗೆ ಅತಿ ಗಹನವಾದ ಚರ್ಚೆಗಳೇ ನಡೆದಿರುವಂತೆ ತೋರುತ್ತದೆ.

ಯಾವ ಮೂಲದ್ದಾದರೂ ಆಗಿರಲಿ, ಅದಂತೂ ತಿನ್ನಲು ಬಲು ರುಚಿಯಾಗಿರುತ್ತದೆ. ಆ ಬಗ್ಗೆಯಂತೂ ಯಾವ ಸಂಶಯವೂ ಬೇಡ.

Snapshot from Cato the Elder’s ‘De Agri Cultura’

೪ ಕೊನೆಗೂ ಕಂಡ ಹ್ಯಾಮ್ಲೆಟ್

ನಾನಿರುವ ನಗರದಲ್ಲಿ ಶೇಕ್ಸ್ಪಿಯರ್ ಟ್ಯಾವೆರ್ನ್ ಎಂಬ ಹಳೆಯ ರಂಗಮಂದಿರವೊಂದಿದೆ. ಬೇರೆ ನಾಟಕಕಾರರ ನಾಟಕಗಳೂ ಅಲ್ಲಿ ಪ್ರದರ್ಶನಗೊಳ್ಳುತ್ತವೆಯಾದರೂ, ಹೆಸರಿಗೆ ತಕ್ಕಂತೆ, ಶೇಕ್ಸ್ಪಿಯರ್’ನ ನಾಟಕಗಳೇ ಹೆಚ್ಚಾಗಿ ನಡೆಯುತ್ತವೆ, ಅಲ್ಲಿ.

ನಾನು ಇಲ್ಲಿಗೆ ಬಂದಾಗಿನಿಂದ ಇದೇ ಮೊದಲ ಬಾರಿಗೆ ’ಹ್ಯಾಮ್ಲೆಟ್’ ನಾಟಕವು ಪ್ರದರ್ಶನಗೊಳ್ಳುತ್ತಿದೆ, ಅಲ್ಲಿ. ಆಪ್ರಿಲ್ ೧೩ರಿಂದ ಮೇ ೫ರವರೆಗೆ ಈ ನಾಟಕದ ಪ್ರದರ್ಶನ. ಆದರೆ ಏಪ್ರಿಲ್ ೧೧ ಹಾಗೂ ೧೨ರಂದು ಪ್ರೀಮಿಯರ್ ಶೋಗಳೂ ಕೂಡ ಇದ್ದುವು.

ನಾನು ಈ ಮುಂಚೆ ಅಲ್ಲಿ ಬಹಳಷ್ಟು ನಾಟಕಗಳನ್ನು ನೋಡಿದ್ದೇನೆ. ಟಿಕೆಟಿನ ಬಗ್ಗೆ ಎಂದೂ ತಲೆಕೆಡಿಸಿಕೊಂಡವನಲ್ಲ. ಹೋಗಬೇಕಾದ ದಿನ ಬೆಳಿಗ್ಗೆ ಬುಕ್ ಮಾಡಿದರೂ ನಡೆಯುತ್ತಿತ್ತು. ಒಮ್ಮೊಮ್ಮೆ ನೇರ ಅಲ್ಲಿಗೆ ಹೋದ ಮೇಲೆಯಷ್ಟೇ ಟಿಕೆಟನ್ನು ಖರೀದಿಸುತ್ತಿದ್ದೆ. ಈ ಬಾರಿಯೂ ಹಾಗೇ ಇರುತ್ತದೆ ಎಂದುಕೊಂಡಿದ್ದೆ.

ಆದರೆ ಆ ರಂಗಮಂದಿರದವರ ಫೇಸ್ಬುಕ್ ಪುಟದಲ್ಲಿ ’ಆದಷ್ಟು ಬೇಗ ಟಿಕೇಟ್ ಕಾಯ್ದಿರಿಸಿಕೊಳ್ಳಿ’ ಎಂದು ಹಾಕಿದ್ದರು, ಅದೂ ಹತ್ತು-ಹದಿನೈದು ದಿನಗಳ ಹಿಂದೆಯೇ! ಅದನ್ನು ಕಂಡು ಹೆದರಿ. ಕಳೆದ ವಾರ ಟಿಕೆಟ್ ಏಪ್ರಿಲ್ ೧೧ರ ದಿನಕ್ಕೆ ಟಿಕೆಟನ್ನು ಕಾಯ್ದಿರಿಸಲು ಪ್ರಯತ್ನಿಸಿದೆ. ನೋಡಿದರೆ ಆ ದಿನದ ಟಿಕೆಟುಗಳಷ್ಟೂ ಮಾರಾಟವಾಗಿದ್ದುವು.! ನನ್ನ ಸುದೈವಕ್ಕೆ, ೧೨ನೇ ತಾರೀಖಿಗೆ ಟಿಕೆಟ್ ಸಿಕ್ಕಿತು.

ಸರಿ, ೧೨ರ ಸಂಜೆ ಅಲ್ಲಿಗೆ ಹೋದೆ. ೭:೩೦ಕ್ಕಿರುವ ನಾಟಕಕ್ಕೆ ತೀರ ೬:೧೦ಕ್ಕೇ ರಂಗಮಂದಿರ ತಲುಪಿಬಿಡ್ತೀನಲ್ಲಾ ಅಂತ ನನ್ನ ಆತುರವನ್ನು ನಾನೇ ಹಳಿದುಕೊಂಡೆ. ಆದರೆ, ತೀರ ಅಲ್ಲಿ ಹೋಗಿ ನೋಡಿದರೆ, ಅಷ್ಟು ಹೊತ್ತಿಗಾಗಲೆ ನೂರಾರು ಜನ ಕಿಕ್ಕಿರಿದು ತುಂಬಿದ್ದರು. ನನಗೆ ಬೇಸರವಾಗುವ ಬದಲು ಸಂತೋಷವೇ ಆಯಿತು. ನಾಟಕಗಳನ್ನು ಈ ಮಟ್ಟಿಗೆ ಇಷ್ಟಪಡುವವರ ಸಂಖ್ಯೆ ಅಷ್ಟು ದೊಡ್ಡದಿದೆಯಲ್ಲಾ ಎಂದು.

ಹ್ಯಾಮ್ಲೆಟ್ ನನಗೆ ಇಷ್ಟವಾದ ನಾಟಕ. ಈ ಮುಂಚೆ ಒಂದೆರಡು ಸಾರಿ ಅದರ ನೇರ ರೂಪವನ್ನೂ, ಅನುವಾದಗಳನ್ನೂ ಓದಿದ್ದೆ. ಅಷ್ಟೇಕೆ, ಅದರ ಸ್ಫೂರ್ತಿಯಿಂದ ನಮ್ಮ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ’ರಕ್ತಾಕ್ಷಿ’ ನಾಟಕವನ್ನೂ ಅಷ್ಟೇ ಪ್ರೀತಿಯಿಂದ ಓದಿದ್ದೆ, ನಾನು. ನಾಟಕದ ಕೆಲವು ಸಾಲುಗಳಂತೂ, ಮತ್ತೆ ಮತ್ತೆ ಓದಬೇಕೆನಿಸುವಷ್ಟು ಕಾಡುತ್ತವೆ.!

ನಾಟಕವೇನೊ ಚೆನ್ನಾಗಿತ್ತು. ಆದರೆ, ಇಲ್ಲಿಯವರೆಗೂ ಈ ನಾಟಕವನ್ನು ಬರೀ ಪುಸ್ತಕದಲ್ಲಿ ಓದುತ್ತ, ನಾನು ಕಲ್ಪಿಸಿಕೊಂಡಿದ್ದ ಪಾತ್ರಗಳು, ಅವುಗಳ ಆಳ, ಗತ್ತು, ವಿಚಾರಗಳೇ ಬೇರೆ, ನೆನ್ನೆ ನಾನು ರಂಗಮಂಚದ ಮೇಲೆ ಕಂಡ ಪಾತ್ರಗಳೇ ಬೇರೆ ಎನಿಸಿತು. ಇಲ್ಲ, ನೆನ್ನೆ ನಟಿಸಿದ ನಟರ ಬಗ್ಗೆ ನನ್ನ ದೂರೇನೂ ಇಲ್ಲ. ಎಲ್ಲರೂ ಅದ್ಭುತವಾಗಿ ನಟಿಸಿದರು. ಆದರೆ, ತೊಡಕು ನನ್ನ ಕಲ್ಪನೆ ಹಾಗೂ ಅಪೇಕ್ಷೆಗಳಲ್ಲಿಯೆ ಇತ್ತೇನೊ ಎನಿಸಿತು.

ಏನಾದರಿರಲಿ, ಅಲ್ಲಿಯವರೆಗೆ ಬರಿ ಪುಸ್ತಕದಲ್ಲಿ, ನನ್ನ ಕಲ್ಪನೆಯಲ್ಲಷ್ಟೆ ಕಂಡಿದ್ದ ಹ್ಯಾಮ್ಲೆಟ್, ಒಫೀಲಿಯಾ, ಗರ್ಟ್ರೂಡ್ ಮುಂತಾದವರು ನೆನ್ನೆ ನನ್ನ ಕಣ್ಣೆದುರಿಗೇ ಕಂಡರು!

Hamlet

೫ ಬೈಕೊ ಸ್ಕೂಟರೊ?

ನಾನು ಎಲ್ಲಿಗಾದರೂ ಹೋಗಬೇಕೆಂದರೆ ಹೆಚ್ಚಾಗಿ ನಡೆದುಕೊಂಡು ಹೋಗುವುದೊ ಅಥವಾ ಊಬರ್/ಲಿಫ್ಟ್ ಕ್ಯಾಬ್’ಗಳನ್ನು ತೆಗೆದುಕೊಳ್ಳುವುದೊ ರೂಢಿ. ಹೋಗಬೇಕಾದಲ್ಲಿಗೆ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯಿದ್ದುದಾದರೆ (ಇಲ್ಲಿ ಅಂತಹ ಸೌಲಭ್ಯ ಸ್ವಲ್ಪ ಕಡಿಮೆಯೇ) ಅದನ್ನೇ ಆಯ್ದುಕೊಳ್ಳುತ್ತೇನೆ.

ಇವಲ್ಲದೆ, ಇಲ್ಲಿ ಕೆಲವು ಮೊಬೈಲ್ ಆಪ್’ಗಳನ್ನು ಬಳಸಿ ಬೈಸಿಕಲ್ ಅಥವಾ ಇನ್ನೊಂದು ಬಗೆಯ ವಾಹನವನ್ನು (ಚಿತ್ರವನ್ನು ಗಮನಿಸಿ) ಬಾಡಿಗೆಗೆ ಪಡೆದು, ಒಂದು ಕಡೆಯಿಂದ ಇನ್ನೊಂದೆಡೆಗೆ ತಲುಪಬಹುದು. ಸುಮಾರು ಕಡೆ ಜನರು ಇದನ್ನು ಬಳಸಿ ಹೋಗುವುದನ್ನು ಕಂಡಿದ್ದೆ. ಆದರೆ ಅದನ್ನು ಉಪಯೋಗಿಸಲು ಒಂದು ರೀತಿ ಅಳುಕು, ಸಂಕೋಚ. ಅದುಹೇಗೊ, ನೆನ್ನೆ ಸಂಜೆ ಇಂಥದೊಂದನ್ನು ಕಂಡಾಗ ಅದನ್ನು ಇಂದಾದರೂ ಬಳಸಲೇಬೇಕೆನಿಸಿತು. ಹಾಗಾಗಿ ಊಬರ್ ಆಪ್’ನ ಮೊರೆ ಹೊಕ್ಕೆ.

ಅಸಲಿಗೆ, ಇವನ್ನು ಏನೆನ್ನುತ್ತಾರೊ ನನಗೆ ತಿಳಿಯದು! ಊಬರ್’ನಲ್ಲಾದರೆ ’ರ‍ೈಡ್ ಎ ಬೈಕ್/ಸ್ಕೂಟರ್’ ಎಂಬ ಆಯ್ಕೆಯೊಂದಿದೆ; ಆ ಆಯ್ಕೆಯಿಂದ ಇದನ್ನು ಬಾಡಿಗೆ ಪಡೆಯಬಹುದು.

ನನ್ನ ಮಟ್ಟಿಗೆ, ಕರೆಯಲು ಸುಲಭವಾಗಲಿ ಎಂದು ಇದನ್ನು ಬೈಕ್ ಎಂದೇ ಅನ್ವಯಿಸಿಕೊಂಡೆ.

ಬೈಕಿನ ಹ್ಯಾಂಡಲನ್ನು ಹಿಡಿದುಕೊಂಡು, ಅದರ ತಲದ ಮೇಲೆ ಒಂದು ಕಾಲನ್ನಿಟ್ಟು, ಇನ್ನೊಂದು ಕಾಲಿನಿಂದ ಸ್ವಲ್ಪ ದೂರದವರೆಗೆ ತಳ್ಳಿ, ಆ ನಂತರ ಎರಡೂ ಕಾಲನ್ನು ಅದರ ತಲದ ಮೇಲಿಟ್ಟುಕೊಂಡರಾಯ್ತು. ವೇಗವನ್ನು ಹೆಚ್ಚಿಸಿಕೊಳ್ಳಲೂ, ಬ್ರೇಕ್ ಹಾಕಲೂ ಅದರಲ್ಲಿಯೇ (ಹ್ಯಾಂಡಲ್’ನಲ್ಲಿ) ವ್ಯವಸ್ಥೆಯಿದೆ.

ಅದನ್ನು ಹತ್ತಿ ಸುತ್ತಾಡಲು ನನಗಂತೂ ಮೊದಮೊದಲು ಸ್ವಲ್ಪ ಭಯವಾದರೂ ಆನಂತರ ಬಹಳ ಮೋಜೆನಿಸಿತು. ಸುಮಾರು ಹದಿನೈದು ಇಪ್ಪತ್ತು ನಿಮಿಷಗಳವರೆಗೆ, ಸಿಕ್ಕಸಿಕ್ಕ ರಸ್ತೆಯನ್ನೆಲ್ಲ (ಸೈಡ್ ವಾಕ್) ಹೊಕ್ಕು ಸುತ್ತಾಡಿದ್ದಾಯಿತು. ಆನಂತರ ಎಲ್ಲಿಗೊ ಹೋಗಬೇಕಿದ್ದುದರಿಂದ ಅದಕ್ಕೆ ವಿದಾಯ ಹೇಳಬೇಕಾಯ್ತು.

Bike or Scooter?

ಕ್ಯಾಬಿಗೆ ಹೋಲಿಸಿದರೆ ಈ ಸೇವೆ ಬಹಳ ಕಡಿಮೆ ಬೆಲೆಯ ಹಾಗೂ ಸುಲಭದ ಮಾರ್ಗ. ಇಲ್ಲಂತೂ ಸುಮಾರು ಕಡೆ ಇಂಥವು ಸಿಗುತ್ತವೆ. ಅಷ್ಟೇನೂ ದೂರವಲ್ಲದ ಕಡೆಗೆ ಹೋಗಬೇಕಿರುವಾಗ, ನಡೆಯಲೂ ಬೇಸರವಾಗಿರುವಾಗ ಇವನ್ನು ಪಡೆದು ಚಲಾಯಿಸಿಕೊಂಡು ಹೋಗಬಹುದು. ಉಪಯೋಗಿಸುವುದಕ್ಕೂ ಬಹಳ ಮಜವಾಗಿರುತ್ತದೆ.

--

--

No responses yet